2008ರ ಬೆಂಗಳೂರು ಸರಣಿ ಸ್ಪೋಟ ಪ್ರಕರಣದಲ್ಲಿ ಶೇ. 80ರಷ್ಟು ಮಂದಿ ಪ್ರತಿಕೂಲ ಸಾಕ್ಷಿದಾರರಾಗಿ ಪರಿಣಮಿಸಿದ್ದು, ಪ್ರಮುಖ ಆರೋಪಿ ಅಬ್ದುಲ್ ನಾಸೀರ್ ಮದನಿ ಪ್ರಕರಣದಿಂದ ಪಾರಾಗುವುದಕ್ಕಾಗಿ ಸಾಕ್ಷಿದಾರರಿಗೆ ನೀಡಿರುವ ಜೀವಬೆದರಿಕೆ ಕರೆಗಳು ಪ್ರಕರಣವನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆ.
ಘಟನೆ ನಡೆದು ಎಂಟು ವರ್ಷ ಕಳೆದರೂ ಈ ಪ್ರಕರಣದ ವಿಚಾರಣೆ ಪೂರ್ಣಗೊಂಡಿಲ್ಲ. ಈ ಮಧ್ಯೆ ಪಠಾಣ್ ಕೋಟ್ ದಾಳಿ ಸೇರಿದಂತೆ ದೇಶದಲ್ಲಿ ಹಲವಾರು ವಿಧ್ವಂಸಕ ಕೃತ್ಯಗಳು ನಡೆದು ಹೋಗಿವೆ. ಎಂಟು ವರ್ಷಗಳ ಹಿಂದಿನ ಘಟನೆ ಜನಮಾನಸದಿಂದ ಮರೆಯಾಗುತ್ತಿರುವಾಗಲೇ ಸಾಕ್ಷಿಗಳಿಗೆ ಬೆದರಿಕೆ ಹಾಕುವುದು ಬೆಳಕಿಗೆ ಬಂದಿದೆ.
ಈ ವರ್ಷ ಕೇರಳ ವಿಧಾನಸಭೆಗೆ ನಡೆಯುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆರೋಪ ಮುಕ್ತನಾಗುವುದಕ್ಕೆ ಮದನಿ ಪ್ರಯತ್ನಿಸುತ್ತಿದ್ದಾನೆ. ಸರಣಿ ಸ್ಪೋಟಕ್ಕೆ ಷಡ್ಯಂತ್ರ ರೂಪಿತವಾಗಿದ್ದು ಕೇರಳದಲ್ಲಿ. ಈ ಬಗ್ಗೆ ಸಾಕ್ಷಿದಾರರು ಎಂದು ಪರಿಗಣಿಸಲ್ಪಟ್ಟಿದ್ದ ಎರ್ನಾಕುಲಂನ ರಾಮಚಂದ್ರ ಮತ್ತು ರೂಪೇಶ್ ಎಂಬುವರಿಗೆ ಸಾಕ್ಷಿ ನುಡಿಯದಂತೆ ಬೆದರಿಕೆ ಹಾಕಲಾಗಿದೆ. ಒಂದು ವೇಳೆ ಕೋರ್ಟ್ನಲ್ಲಿ ಸಾಕ್ಷಿ ಹೇಳಿದ್ದೇ ಆದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮದನಿ ಬೆಂಬಲಿಗರು ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರಣಿ ಸ್ಪೋಟ ಪ್ರಕರಣದಲ್ಲಿ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಸಾಕ್ಷಿಗಳಿಗೆ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಅರ್ಜಿಯ ವಿಚಾರಣೆ ನಡೆಸಿರುವ ಕೋರ್ಟ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸಾಕ್ಷಿಗಳಿಗೆ ಅಗತ್ಯ ಭದ್ರತೆ ನೀಡುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ಕೇರಳದ ಕಣ್ಣೂರು, ಕೊಲ್ಲಂ, ಎರ್ನಾಕುಲಂ ಮತ್ತು ಹೋಸತೋಟ ಜಿಲ್ಲೆಯ ಎಸ್ಪಿಗಳಿಗೆ ಪತ್ರ ಬರೆದು ಸಾಕ್ಷಿಗಳಿಗೆ ಅಗತ್ಯ ಭದ್ರತೆ ನೀಡುವಂತೆ ಕೋರಿದ್ದಾರೆ.
ಎಂಬತ್ತರಷ್ಟು ಪ್ರತಿಕೂಲ ಸಾಕ್ಷಿಗಳಾಗಿದ್ದಾರೆ..!
ಸರಣಿ ಸ್ಪೋಟದ ವಿಚಾರಣೆ ನಗರದ 48ನೇ ಸಿಟಿ ಸೆಷನ್ಸ್ ಕೋರ್ಟ್ನಲ್ಲಿ ನಡೆಯುತ್ತಿದೆ. ಪ್ರಕರಣದ ತನಿಖೆ ನಡೆಸಿದ ನಗರ ಪೊಲೀಸರು 250 ಪ್ರಮುಖ ಸಾಕ್ಷಿಗಳನ್ನು ಉಲ್ಲೇಖಿಸಿದ್ದರು. ಇದರಲ್ಲಿ ಕೇರಳದ ಸಾಕ್ಷಿಗಳ ಸಂಖ್ಯೆಯೇ 150ಕ್ಕೂ ಹೆಚ್ಚಿತ್ತು. ಸ್ಪೋಟದ ಷಡ್ಯಂತ್ರ ನಡೆದ ಬಗೆಗಿನ ಎಲ್ಲ ಸಾಕ್ಷಿಗಳೂ ಕೇರಳದವರೇ ಆಗಿದ್ದಾರೆ. ಕರ್ನಾಟಕದ ಸಾಕ್ಷಿಗಳಿಗೆ ರಾಜ್ಯ ಸರ್ಕಾರ ರಕ್ಷಣೆ ಒದಗಿಸುತ್ತಿದೆ. ಆದರೆ ಕೇರಳ ರಾಜ್ಯದ ಹೆಚ್ಚಿನ ಸಾಕ್ಷಿಗಳಲ್ಲಿ ಈಗಾಗಲೇ 80 ರಷ್ಟು ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿದ್ದಾರೆ. ಹೀಗೆ ಮುಂದುವರೆದರೆ ಈ ಕೇಸ್ ಬಿದ್ದು ಹೋಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಸಾಕ್ಷಿಗಳಿಗೆ ಭದ್ರತೆ ನೀಡಬೇಕು ಎಂದು ಸರ್ಕಾರಿ ವಕೀಲ ಸೀತಾರಾಮ ಕೊಣಾಜೆ ವಿಶ್ವವಾಣಿಗೆ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಸೀತಾರಾಮ ಕೊಣಾಜೆ ಸಾಕ್ಷಿಗಳಿಗೆ ಭದ್ರತೆ ನೀಡುವಂತೆ ಕೇರಳ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರ್ಟ್ಗೆ ಮನವಿ ಮಾಡಿದ್ದಾರೆ.
ಮದನಿಗೆ ಹೆದರಿ ಊರು ಬಿಟ್ಟ ಸಾಕ್ಷಿಗಳು..!
ಈ ಪ್ರಕರಣದಲ್ಲಿ ಹೇಗಾದರೂ ಆರೋಪ ಮುಕ್ತನಾಗಬೇಕು ಎಂದುಕೊಂಡಿರುವ ಮದನಿ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾನೆ. ಪ್ರತಿ ಸಾಕ್ಷಿಗಳ ಮನೆ ಮನೆಗೆ ಹೋಗುವ ಮದನಿ ಬೆಂಬಲಿಗರು ಸಾಕ್ಷಿ ನುಡಿಯದಂತೆ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಹೆದರಿದ ಕೆಲವು ಸಾಕ್ಷಿದಾರರು ಮನೆ ಖಾಲಿ ಮಾಡಿಕೊಂಡು ಬೇರೆಡೆಗೆ ಹೋಗಿದ್ದರೆ, ಇನ್ನೂ ಕೆಲವು ಸಾಕ್ಷಿಗಳು ದೇಶ
ಬಿಟ್ಟೇ ಹೋಗಿದ್ದಾರೆ. ಇದು ಕೇರಳದಲ್ಲಿ ಮದನಿ ಬೆಂಬಲಿಗರ ಪ್ರಭಾವ ಎಷ್ಟರಮಟ್ಟಿಗಿದೆ ಎಂಬುದನ್ನು ತೋರಿಸುತ್ತದೆ. ಕೋರ್ಟ್ ಸಮನ್ಸ್ ನೀಡಲು ಹೋಗುವ ಪೊಲೀಸರಿಗೆ ಸಾಕ್ಷಿಗಳ ಮನೆಗಳೇ ಸಿಕ್ಕುವುದಿಲ್ಲ. ಒಂದುವೇಳೆ ಸಿಕ್ಕರೂ ಮತ್ತೊಮ್ಮೆ ಆ ವಿಳಾಸಕ್ಕೆ ಹೋದರೆ ಮನೆ ಖಾಲಿಯಾಗಿರುತ್ತದೆ.
ಇನ್ನು ಮದನಿ ವಿರುದ್ಧ ಸಾಕ್ಷಿ ಹೇಳಬೇಕಾದ ವ್ಯಕ್ತಿಗಳು ಮದನಿ ಪರ ವಕೀಲರ ಜೊತೆ ಕಾರಿನಲ್ಲಿ ಕೇರಳದಿಂದ ಬೆಂಗಳೂರಿಗೆ ಬಂದು ಹೋಗುತ್ತಿದ್ದಾರೆ ಎಂದರೆ ಆತನ ಪ್ರಭಾವ ಸಾಕ್ಷಿಗಳ ಮೇಲೆ ಎಷ್ಟರ ಮಟ್ಟಿಗೆ ಇದೆ ಎಂಬುದು ಅರ್ಥವಾಗುತ್ತದೆ.
ಕೇರಳದಲ್ಲಿ ನಡೆಯಲಿರುವ ಮುಂದಿನ ಚುನಾವಣೆ ವೇಳೆಗೆ ಹೇಗಾದರೂ ಮದನಿಯನ್ನು ಬಿಡುಗಡೆ ಮಾಡಿಸಲು ಸಾಕ್ಷಿಗಳಿಗೆ ಬೆದರಿಕೆ ಹಾಕಿ ಕೇಸ್ ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಸಾಕ್ಷಿಗಳನ್ನು ರಕ್ಷಿಸಿಕೊಳ್ಳದೇ ಹೋದರೆ ಈ ಪ್ರಕರಣದಲ್ಲಿ ಮದನಿ ನಿರಪರಾಧಿಯಾದರೂ ಆಶ್ಚರ್ಯವಿಲ್ಲ. ಎಂಟು ವರ್ಷಗಳ ಪೊಲೀಸರ ಶ್ರಮ ವ್ಯರ್ಥವಾಗುತ್ತದೆ ಎನ್ನುತ್ತಾರೆ ಸರ್ಕಾರಿ ವಕೀಲ ಸೀತಾರಾಮ ಕೊಣಾಜೆ
ಪರಪ್ಪನ ಅಗ್ರಹಾರದಿಂದಲೇ ಬೆದರಿಕೆ..!
ಬೆಂಗಳೂರು ಸರಣಿ ಸ್ಪೋಟದ 19 ಆರೋಪಿಗಳು ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಅನಾರೋಗ್ಯದ ನೆಪದಲ್ಲಿ ಸುಪ್ರೀಂ ಕೋರ್ಟ್ನಿಂದ ಜಾಮೀನು ಪಡೆದಿರುವ ಮದನಿ ನಗರದ ಸಹಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಗರ ಪೊಲೀಸರ ಸುಪರ್ದಿನಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣದ ಮೊದಲನೇ ಆರೋಪಿಯಾಗಿರುವ ನಾಜೀರ್ ತನ್ನನ್ನು ನೋಡಲು ಜೈಲಿಗೆ ಬರುವವರ ಮೂಲಕ ಸಾಕ್ಷಿದಾರರ ಮಾಹಿತಿ ನೀಡಿ ಮದನಿ ವಿರುದ್ಧ ಸಾಕ್ಷಿ ಹೇಳದಂತೆ ಬೆದರಿಸುತ್ತಿದ್ದಾನೆ. ಇನ್ನು ಪ್ರಮುಖ ಸಾಕ್ಷಿ ರೆಬಿ ಖುರಿಯನ್ಗೆ ನ್ಯಾಯಾಲಯದ ಆವರಣದಲ್ಲೇ ನಾಜೀರ್ ಮದನಿ ವಿರುದ್ಧ ಸಾಕ್ಷಿ ಹೇಳದಂತೆ ಬೆದರಿಕೆ ಹಾಕಿದ್ದ.
ಕೇರಳದಲ್ಲಿ ಮದನಿ ಕಿಂಗ್ ಮೇಕರ್
ಕೇರಳ ರಾಜಕೀಯದಲ್ಲಿ ಮದನಿ ನೇತೃತ್ವದ ಪಿಡಿಪಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕೆಂದರೂ ಮದನಿಯ ಬೆಂಬಲ ಬೇಕು ಎನ್ನುವಷ್ಟರ ಮಟ್ಟಿಗೆ ಆ ಪಕ್ಷ ಅಲ್ಲಿ ತನ್ನ ಪ್ರಭಾವ ಹೊಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳಿಗೂ ಮದನಿ ಈಗ ಬೇಕಾಗಿರುವ ವ್ಯಕ್ತಿ. ನಗರದ ಸಹಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮದನಿಯನ್ನು ಕೇರಳದ ಮುಖ್ಯಮಂತ್ರಿಯಿಂದ ಹಿಡಿದು ಪ್ರಮುಖ ರಾಜಕೀಯ ಮುಖಂಡರು ರಹಸ್ಯವಾಗಿ ಭೇಟಿ ಮಾಡುತ್ತಿರುತ್ತಾರೆ ಎಂದು ಉನ್ನತ ಮೂಲಗಳು ವಿಶ್ವವಾಣಿಗೆ ಖಚಿತಪಡಿಸಿವೆ.
ಹೇಗಾದರೂ ಮಾಡಿ ಮದನಿಯನ್ನು ಈ ಕೇಸ್ನಿಂದ ರೋಪ ಮುಕ್ತನನ್ನಾಗಿ ಮಾಡಲು ಕೇರಳದ ರಾಜಕೀಯ ಪಕ್ಷಗಳು ಹಿಂಬಾಗಿಲಿನಿಂದ ಪ್ರಯತ್ನ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಸಾಕ್ಷಿಗಳಿಗೆ ಮದನಿ ಬೆದರಿಕೆ ಹಾಕುತ್ತಿದ್ದರೂ ಅಲ್ಲಿನ ಸರ್ಕಾರ ಕೈಕಟ್ಟಿ ಕುಳಿತಿದೆ.
ತೆಹೆಲ್ಕಾ ವರದಿಗಾರ್ತಿ ಬೆದರಿಕೆ ಹಾಕಿದ್ದಳು..!
ಕೊಡಗಿನಲ್ಲಿ ಶುಂಠಿ ಖರೀದಿಸುವ ನೆಪದಲ್ಲಿ ಕೇರಳದ ಯುವಕರಿಗೆ ಸರಣಿ ಸ್ಪೋಟ ನಡೆಸಲು ತರಬೇತಿ ನೀಡಲಾಗಿತ್ತು. ಮದನಿ ಅಲ್ಲಿಗೆ ಬಂದು ಯುವಕರಿಗೆ ದೇಶದ ಹಲವು ಭಾಗಗಳಲ್ಲಿ ಭಯೋತ್ಪಾದಕ ದಾಳಿ ನಡೆಸುವ ಬಗ್ಗೆ ತರಬೇತಿ ನೀಡಿದ್ದ. ಈ ಬಗ್ಗೆ ಮಡಿಕೇರಿಯ ಕೆ.ಬಿ.ರಫೀಕ್, ಯೋಗಾನಂದ
ಮತ್ತು ಪ್ರಭಾಕರ್ ಮದನಿ ವಿರುದ್ಧ ಪ್ರಮುಖ ಸಾಕ್ಷಿಗಳಾಗಿದ್ದರು. ತೆಹೆಲ್ಕಾ ಪತ್ರಿಕೆ ವರದಿಗಾರ್ತಿ
ಕೆ.ಕೆ. ಶಾಹಿನಾ ವರದಿ ಮಾಡುವ ನೆಪದಲ್ಲಿ ಸಾಕ್ಷಿಗಳ ಮನೆಗೆ ಹೋಗಿ ಮದನಿ ವಿರುದ್ಧ ಸಾಕ್ಷ್ಯ ನುಡಿಯದಂತೆ ಬೆದರಿಕೆಯೊಡ್ಡಿದ್ದಳು. ಈ ಬಗ್ಗೆ ಕೊಡಗಿನ
ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಷಡ್ಯಂತ್ರ..!
ಬಿಜೆಪಿ ನಾಯಕ ಲಾಲ್ಕೃಷ್ಣ ಅಡ್ವಾಣಿ ಹತ್ಯೆ ಮಾಡುವ ಉದ್ದೇಶದಿಂದ 1998ರ -.14ರಂದು ಕೊಯಿಮತ್ತೂರಿನಲ್ಲಿ ಬಾಂಬ್ ಸ್ಪೋಟ ನಡೆಸಲಾ ಗಿತ್ತು. ಈ ಘಟನೆಯಲ್ಲಿ 58 ಮಂದಿ ಸಾವನ್ನಪ್ಪಿದ್ದರು. ಚುನಾವಣಾ ರ್ಯಾಲಿಗಾಗಿ ಕೇರಳಕ್ಕೆ ಬಂದಿದ್ದ ಅಡ್ವಾಣಿಯವರನ್ನು ಕೊಲ್ಲಲು ಈ ಸ್ಪೋಟ ನಡೆಸಲಾಗಿತ್ತು, ಅದೃಷ್ಟವಶಾತ್ ಅಡ್ವಾಣಿ ಪಾರಾಗಿದ್ದರು. ಈ ಪ್ರಕರಣದ 14 ಆರೋಪಿಗಳ ಪೈಕಿ ಮದನಿ ಪ್ರಮುಖ ಆರೋಪಿಯಾಗಿದ್ದ. ಆದರೆ ಪ್ರಕರಣದ ವಿಚಾರಣೆ ನಡೆಸಿದ ಕೇರಳ ನ್ಯಾಯಾಲಯ 13 ಮಂದಿಯನ್ನು ಅಪಾದಿತರನ್ನಾಗಿ ಮಾಡಿ ಶಿಕ್ಷೆ ವಿಧಿಸಿತ್ತು. ಮದನಿಯನ್ನು ಕೋರ್ಟ್ ಆರೋಪ ಮುಕ್ತಗೊಳಿಸಿತ್ತು.ಈಗ ಬೆಂಗಳೂರು ಸರಣಿ ಸ್ಪೋಟ ಪ್ರಕರಣದಲ್ಲೂ ಇದೇ ತಂತ್ರ ನಡೆಸಲು ಮದನಿ ಸಿದ್ದನಾಗಿದ್ದಾನೆ.
ಮದನಿಗೇಕೆ ಮಹತ್ವ?
- ಕೇರಳದಲ್ಲಿ ಮದನಿ ರಾಜಕೀಯವಾಗಿ ಪ್ರಬಲ.
- ಮುಸ್ಲಿಮರ ವೋಟ್ ಬ್ಯಾಂಕ್ಗಾಗಿ
- ಅಲ್ಲಿನ ರಾಜಕೀಯ ಪಕ್ಷಗಳು ಮದನಿ ಪರ ವಕಾಲತ್ತು ಮಾಡುತ್ತಿವೆ.
- ಮದನಿಯನ್ನು ಸಂತುಷ್ಟಗೊಳಿಸಿದರೆ ಕೇರಳದಲ್ಲಿ ಅಧಿಕಾರ ಹಿಡಿಯುವುದು ಸುಲಭ
- ಕೋರ್ಟ್ ವಿಚಾರಣೆಗೆ ಮದನಿ ಸರಿಯಾಗಿ ಹಾಜರಾಗುವುದಿಲ್ಲ
- ಪ್ರಕರಣದ ಉಳಿದ ಆರೋಪಿಗಳಂತೆ ಮದನಿ ವಿಚಾರಣೆ ನಡೆಸಬಾರದಂತೆ..!
ಉಳಿವಿಗೆಗಾಗಿ ಹೋರಾಟ..!
- ಮದನಿ ಅಮಾಯಕ,ಮಾನವೀಯ ನೆಲೆ ಯಲ್ಲಿ ಆತನನ್ನು ಬಿಡುಗಡೆ ಮಾಡಬೇಕೆಂದು ಕೇರಳ ವಿಧಾನಸಭೆ ನಿರ್ಣಯ ಅಂಗೀಕರಿಸಿತ್ತು.
- ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಹಾಯ ಕೋರಿದ್ದ ಕೇರಳ ಶಾಸಕರು.
- ಮದನಿಯ ಬಿಡುಗಡೆಗಾಗಿ ಕೇರಳದಲ್ಲಿ ಜನಾಭಿಪ್ರಾಯ ರೂಪಿಸಲಾಗುತ್ತಿದೆ.
- ಮದನಿಯನ್ನು ಬಂಧಿಸಲು ಕೇರಳಕ್ಕೆ ಹೋದಾಗ ರಾಜ್ಯ ಪೊಲೀಸರಿಗೆ ದೊಡ್ಡಮಟ್ಟದ ಪ್ರತಿರೋಧ ವ್ಯಕ್ತವಾಗಿತ್ತು.
- ಮದನಿ ವಿರುದ್ಧ ಸಾಕ್ಷ್ಯ ಹೇಳಬೇಕಾದವರು ಮದನಿ ಪರ ವಕೀಲರ ಜೊತೆಯಲ್ಲಿ ಕೋರ್ಟ್ಗೆ ಬರುತ್ತಾರೆ.!
- ಆರೋಪಿಗಳ ಪೈಕಿ 19 ಆರೋಪಿಗಳಿಗೆ ಜಾಮೀನು ಸಿಕ್ಕಿಲ್ಲ. ಅನಾರೋಗ್ಯದ ಕಾರಣ
ಮದನಿ ಬೆಂಬಲಿಗರು ವಕೀಲರು, ಪೊಲೀಸರು, ನ್ಯಾಯಾಧಿಶರಿಗೆ ಬೆದರಿಕೆ ಹಾಕುವುದಿಲ್ಲ.ನೇರವಾಗಿ ಸಾಕ್ಷಿಗಳಿಗೆ ಬೆದರಿಕೆ ಹಾಕಿ ಪ್ರಕರಣದಿಂದ ಆತನನ್ನು ನಿರ್ದೋಷಿಯಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ. – ಸೀತಾರಾಮ ಕೊಣಾಜೆ, ಸರ್ಕಾರಿ ವಕೀಲ
ಈ ಪ್ರಕರಣ ಸದ್ಯ ಕೋರ್ಟ್ನಲ್ಲಿದೆ.ನಾನು ಈ ಬಗ್ಗೆ ಮಾತನಾಡುವಂತಿಲ್ಲ– ಎನ್. ಎಸ್. ಮೇಘರಿಕ್ ನಗರ ಪೊಲೀಸ್ ಆಯುಕ್ತ
ಬೆಂಗಳೂರು ಪೊಲೀಸರು ಬೇಧಿಸಿರುವ ಎರಡು ಭಯೋತ್ಪಾದಕ ದಾಳಿ ಪ್ರಕರಣಗಳಲ್ಲಿ ಇದು ಮುಖ್ಯವಾದದ್ದು. ಆರೋಪಿಗಳಿಗೆ ಶಿಕ್ಷೆಯಾಗಲೇಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸಾಕ್ಷಿಗಳಿಗೆ ರಕ್ಷಣೆ ನೀಡಬೇಕು. –ಶಂಕರ್ ಬಿದರಿ ನಿವೃತ್ತ ಡಿಜಿ-ಐಜಿ
–ಶಶಿವರ್ಣಂ
Like this:
Like ಲೋಡ್ ಆಗುತ್ತಿದೆ...