ಕಾಶ್ಮೀರದಲ್ಲಿ ಕೂಲಿಗಾಗಿ ಕಲ್ಲು ಯೋಜನೆ..! ಹುರಿಯತ್ ಮುಖಂಡ ಕೋರ್ಟ್ನಲ್ಲಿ ಹೇಳಿದ ಸ್ಫೋಟಕ ಸತ್ಯ..!
ಸೆಪ್ಟೆಂಬರ್ 9, 2017 ನಿಮ್ಮ ಟಿಪ್ಪಣಿ ಬರೆಯಿರಿ
ಕಾಶ್ಮೀರದಲ್ಲಿ ನಡೆಯುತ್ತಿರುವ ದಿನ ನಿತ್ಯದ ದಳ್ಳುರಿಗೆ ಪಾಕಿಸ್ತಾನದ ಎಂಜಲು ಕಾಸು ಬಳಕೆಯಾಗುತ್ತಿದೆ ಎಂಬ ಹಲವು ವರ್ಷಗಳ ಅನುಮಾನಕ್ಕೆ ಈಗ ಅಧಿಕೃತ ಮುದ್ರೆ ಸಿಕ್ಕಿದೆ. ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳು ಎಂಬ ಸೋಗು ಹಾಕಿಕೊಂಡು ಸ್ವಾತಂತ್ರ್ಯ ಹೋರಾಟಗಾರರ ಪೋಸು ಕೊಡುತ್ತಿರುವ ಹುರಿಯತ್ ಕಾಂಗ್ರೆಸ್ ಮುಖಂಡರು ತಿನ್ನುತ್ತಿರುವುದು ಪಾಕಿಸ್ತಾನದ ಎಂಜಲು. ಪಾಕ್ನಿಂದ ಪಡೆದ ಚಿಲ್ಲರೆ ಕಾಸು ಪಡೆದು ಕಾಶ್ಮೀರಿ ಯುವಕರನ್ನು ದೇಶ ವಿರೋಧಿ ಕೃತ್ಯಕ್ಕೆ ಎತ್ತಿ ಕಟ್ಟುತ್ತಿದ್ದಾರೆ. ಪಾಕಿಸ್ತಾನಿ ಪ್ರಾಯೋಜಿತ ಕಾಶ್ಮೀರಿ ಹಿಂಸಾಚಾರಕ್ಕೆ ಹುರಿಯತ್ ಕಾನ್ಫರೆನ್ಸ್ನ ಸಹಕಾರ ಇದೆ ಅನ್ನೋದು ಹೊಸ ಸುದ್ದಿಯೇನಲ್ಲ. ದೇಶದ ಬೇಹುಪಡೆ, ಭದ್ರತಾ ಸಂಸ್ಥೆಗಳು ಎಷ್ಟೋ ವರ್ಷಗಳಿಂದ ಈ ಮಾತುಗಳನ್ನು ಹೇಳಿ ಎಚ್ಚರಿಸುತ್ತಲೇ ಇವೆ. ಅಲ್ಪ ಸಂಖ್ಯಾತರ ವೋಟಿಗಾಗಿ ಕಾಯುವ ಕಾಂಗ್ರೆಸ್, ತಾನು ಆಡಳಿತದಲ್ಲಿದ್ಧಾಗ ಪ್ರತ್ಯೇಕತಾವಾದಿಗಳಿಗೆ ರಾಜ ಮರ್ಯಾದೆ ಕೊಟ್ಟು ಕಾಶ್ಮೀರಿ ಪ್ರತ್ಯೇಕತಾ ಹೋರಾಟ ಜೀವಂತವಾಗಿರುವಂತೆ ನೋಡಿಕೊಂಡಿತ್ತು. ಯಾವಾಗ ಮೋದಿ ಅಧಿಕಾರದ ದಂಡ ಹಿಡಿದರೋ ಹುರಿಯತ್ ಮುಖಂಡರು ಬಾಲ ಸುಟ್ಟ ಬೆಕ್ಕಿನಂತಾಗಿದ್ದಾರೆ. ಕಾಶ್ಮೀರದಲ್ಲಿನ ಹಿಂಸಾಚಾರಕ್ಕೆ ಪಾಕ್ ಕುಮ್ಮಕ್ಕಿದೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದಿದ್ದ ಎನ್ಐಎ ಅಧಿಕಾರಿಗಳ ತಂಡ ಇದುವರೆಗೂ 8 ಹುರಿಯತ್ ಕಾನ್ಫರೆನ್ಸ್ ಮುಖಂಡರನ್ನ ಬಂಧಿಸಿದೆ. ಬಂಧಿತ ಹುರಿಯತ್ ಮುಖಂಡನೊಬ್ಬ ಮ್ಯಾಜಿಸ್ಟ್ರೇಟ್ ಎದುರು ಕಾಶ್ಮೀರಿ ಹಿಂಸಾಚಾರಕ್ಕೆ ಪಾಕಿಸ್ತಾನ ನಿರಂತರವಾಗಿ ಹಣ ನೀಡುತ್ತಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಮ್ಯಾಜಿಸ್ಟ್ರೇಟ್ ಮುಂದೆ ನೀಡುವ ಹೇಳಿಕೆ ಅತ್ಯಂತ ಪ್ರಮುಖ ಸಾಕ್ಷಿಯಾಗುತ್ತದೆ.
ಹುರಿಯತ್ ಮುಖಂಡನ ತಪ್ಪೊಪ್ಪಿಗೆ ಏನು..?
ಪಾಕ್ ಸೂಚನೆಯಂತೆ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹೋರಾಟ
ಹಿಂಸಾಚಾರ ನಡೆಸಲು ಹುರಿಯತ್ ಮುಖಂಡರಿಗೆ ಪಾಕಿಸ್ತಾನದಿಂದ ಹಣ
ಪಾಕಿಸ್ತಾನದಿಂದ ಬಂದ ಹಣ ಕಾಶ್ಮೀರಿ ಹಿಂಸಾಚಾರಕ್ಕೆ ಬಳಕೆ
ಗಲ್ಫ್ನಲ್ಲಿರುವ ಕಾಶ್ಮೀರಿ ಉದ್ಯಮಿಗಳ ಮೂಲಕ ಹುರಿಯತ್ ಮುಖಂಡರ ಖಾತೆಗೆ ಹಣ
ಉದ್ಯಮಿಗಳ ಮೂಲಕ ಹುರಿಯತ್ ಮುಖಂಡರ ಜೇಬು ಸೇರುತ್ತಿದೆ ಪಾಕ್ ಹಣ
ಹವಾಲಾ/ ಬ್ಯಾಂಕ್ ವ್ಯವಸ್ಥೆ ಮೂಲಕ ಹುರಿಯತ್ ಮುಖಂಡರಿಗೆ ಹಣ
ಟೆರರ್ ಕಮಾಂಡರ್ಗಳಿಗೆ ಹಣ ಕೊಡುವ ಹುರಿಯತ್ ಮುಖಂಡರು
ಪಾಕ್ ಕೈವಾಡದ ಸಾಕ್ಷ್ಯ ನಾಶಕ್ಕೆ ಹುರಿಯತ್ ಮುಖಂಡರ ನಿರಂತರ ಯತ್ನ
ಹುರಿಯತ್ ಕಾನ್ಫರೆನ್ಸ್ ಮುಖಂಡ ಕೋರ್ಟ್ ಮುಂದೆ ಅಧಿಕೃತವಾಗಿ ತಪ್ಪೊಪ್ಪಿಕೊಳ್ಳುತ್ತಿದ್ದಂತೆ ಕಾರ್ಯಾಚರಣೆಗಿಳಿದ ಎನ್ಐಎ ಅಧಿಕಾರಿಗಳ ತಂಡ ಹುರಿಯತ್ ಮುಖಂಡರ ಮನೆಗಳ ಮೇಲೆ ಮುರುಕೊಂಡು ಬಿದ್ದಿದೆ. 27ಕ್ಕೂ ಹೆಚ್ಚು ಹುರಿಯತ್ ಮುಖಂಡರ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು 2.2 ಕೋಟಿ ಹಣ ವಶಪಡಿಸಿಕೊಂಡಿದ್ದಾರೆ. ಎನ್ಐಎ ಅಧಿಕಾರಿಗಳ ಕಾರ್ಯಾಚರಣೆಯಿಂದ ಬೆಚ್ಚಿ ಬಿದ್ದಿರುವ ಹುರಿಯತ್ ಮುಖಂಡರು ಜೈಲ್ ಬರೋ ಚಳುವಳಿ ಮೂಲಕ ದೆಹಲಿಗೆ ಮುತ್ತಿಗೆ ಹಾಕ್ತೀವಿ ಅಂತ ಅರಚಾಡುತ್ತಿದ್ದಾರೆ.
ಕಾಶ್ಮೀರಕ್ಕೆ ಸ್ವಾತಂತ್ರ್ಯ ಕಲ್ಪಿಸಿ ಇಡೀ ಕಾಶ್ಮೀರವನ್ನು ಪಾಕಿಸ್ತಾನದೊಳಕ್ಕೆ ಬಸಿದುಬಿಡುತ್ತೇವೆ ಎಂದು ಹೊರಟಿದ್ದ ಹುರಿಯತ್ ಕಾನ್ಫರೆನ್ಸ್ ಮುಖಂಡರಾದ ಸೈಯದ್ ಆಲಿ ಶಾ ಗಿಲಾನಿ, ಯಾಸಿರ್ ಮಲಿಕ್, ಉಮರ್ ಫಾರೂಕ್ ಸೇರಿದಂತೆ ಹಲವರನ್ನು ಎನ್ಐಎ ಮುಂಜಾಗ್ರತಾ ಕ್ರಮವಾಗಿ ಬಂಧಿಸಿದೆ. ಸುಮಾರು 24 ವರ್ಷಗಳಿಂದ ಪಾಕಿಸ್ತಾನದ ಎಂಜಲು ತಿನ್ನುತ್ತಿದ್ದ ಹುರಿಯತ್ ಮುಖಂಡರು ಮೋದಿ ಸರ್ಕಾರ ಬಂದ ಮೇಲೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಶ್ಮೀರದಲ್ಲಿ ಶಾಂರಿ ನೆಲೆಸಲು ಈ ಪ್ರತ್ಯೇಕವಾದಿಗಳನ್ನು ಮಟ್ಟ ಹಾಕಲೇಬೇಕು ಅನ್ನೋ ಅಭಿಪ್ರಾಯಕ್ಕೆ ಮನ್ನಣೆ ಬಂದಿದೆ. ಇಷ್ಟು ವರ್ಷ ಇಂತವರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಯಾಕೆ ಮುಂದಾಗಲಿಲ್ಲ ಅನ್ನೋದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ. ಪ್ರತ್ಯೇಕವಾದಿಗಳ ಕಲ್ಲು ತೂರಾಟ ಮತ್ತು ಭಯೋತ್ಪಾದನೆಯನ್ನ ಕಾಶ್ಮೀರದ ಸ್ವಾತಂತ್ರ್ಯ ಹೋರಾಟ ಎಂದು ಬಿಂಬಿಸುವ, ಭಾಷಣ ಬಿಗಿಯುವ ಬುದ್ದಿಜೀವಿಗಳು ನಮ್ಮ ದೇಶದ ತುಂಬಾ ಇದ್ದಾರೆ. ಅಲ್ಲಿ ನಡೆಯುತ್ತಿರುವುದು ಕೂಲಿಗಾಗಿ ಕಲ್ಲು ಯೋಜನೆ ಎಂಬ ಸತ್ಯ ಬಹಿರಂಗವಾದ ನಂತರವಾದರೂ ಈ ಆರಾಮ ಕುರ್ಚಿಯ ಚಿಂತಕರು ತಮ್ಮ ಅಭಿಪ್ರಾಯ ಬದಲಿಸಿಕೊಳ್ಳುತ್ತಾರಾ..?
– – ಶಶಿವರ್ಣಂ!