ರೈ ಹೆಸರಿನ ಸಿನೆಮಾ ಬರ್ತಿದೆ. ಬಾಲಿವುಡ್ನ ಸೆಲೆಬ್ರಿಟಿ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅದನ್ನ ನಿರ್ದೇಶಿಸುತ್ತಿದ್ದಾರೆ. ಆ ಸಿನೆಮಾ ಅಂಡರ್ವರ್ಲ್ಡ್ನ ಒಂದು ಕಾಲದ ಡಾನ್ ಮುತ್ತಪ್ಪ ರೈ ನಿಜ ಜೀವನವನ್ನು ಆಧರಿಸಿದೆ. ಇವಿಷ್ಟೂ ಹಳೇ ಸುದ್ದಿ. ಆ ಸಿನೆಮಾದಲ್ಲಿಮುತ್ತಪ್ಪ ರೈ ಎಷ್ಟರಮಟ್ಟಿಗೆ ಕೈಯ್ಯಾಡಿಸಿದ್ದಾರೆ? ಅವರೇ ಕುಳಿತು ಕತೆ ಮಾಡಿಸಿದ್ದಾರಾ? ಸಿನೆಮಾ ಕತೆಯಲ್ಲಿ ಮುತ್ತಪ್ಪ ರೈ ಹೀರೊನಾ – ವಿಲನ್ನಾ? ಇಂಥ ಹತ್ತು ಹಲವು ಪ್ರಶ್ನೆಗಳನ್ನಿಟ್ಟುಕೊಂಡು ಅವರ ಸದಾಶಿವನಗರದ ಮನೆಯ ಬಾಗಿಲು ಬಡಿಯಿತು ‘ವಿಶ್ವವಾಣಿ’. ಮುತ್ತಪ್ಪ ರೈ ಜತೆ ನಾವು ನಡೆಸಿದ ಸಂದರ್ಶನ ಸಿನೆಮಾದೊಂದಿಗೆ ಶುರುವಾಗಿ, ಸಮಾಜ ಸೇವೆ, ಭೂಗತ ಲೋಕ, ರಾಜಕೀಯ, ದೇವರ ಕೃಪೆಗಳಂಥ ಅನೇಕ ವಿಷಯಗಳ ತನಕ ಹರಿದಾಡಿತು. ಇದುವರೆಗೂ ನಡೆಸಿರುವ ಜೀವನದ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಎನ್ನುವ ರೈ, ನಾನು ಕೆಲವರಿಗೆ ಉಪಕಾರ ಮಾಡುವುದಕ್ಕೆ ಹೋಗಿ ಭೂಗತ ಲೋಕಕ್ಕೆ ಕಾಲಿಟ್ಟವನು, ಅದರಿಂದಾಗಿಯೇ ಡಾನ್ ಆದವನು. ಈಗ ಉಪಕಾರ ಮಾಡುವ ಮೂಲಕವೇ ಜನರ ಪ್ರೀತಿ ಗಳಿಸಿಕೊಂಡಿದ್ದೇನೆ ಎನ್ನುತ್ತಾರೆ. ಆಗ ಉಪಕಾರ ಮಾಡುವುದಕ್ಕೆ ಗನ್ ಬೇಕಿತ್ತು. ಈಗ, ಅದರ ಅವಶ್ಯಕತೆ ಇಲ್ಲ. ಗನ್ ಮಾಡಲಾಗದ ಕೆಲಸವನ್ನು ಪ್ರೀತಿ ವಿಶ್ವಾಸಗಳು ಮಾಡಬಲ್ಲವು ಎಂಬುದು ಸ್ವಂತ ಅನುಭವದಿಂದ ಕಲಿತುಕೊಂಡ ಪಾಠ. ಮುಂದೊಂದು ದಿನ ಮದರ್ ಥೆರೇಸಾ ರೀತಿ ನನ್ನನ್ನು ಜನ ನೆನಪು ಮಾಡಿಕೊಳ್ಳುವಂತಾಗಬೇಕು ಎಂಬುದು ಅವರ ಆಶಯ. ಹಾಗೆಂದು ವೃಥಾ ಕೆಣಕಿದರೆ ಸುಮ್ಮನಿರುವವನು ಅಲ್ಲ ಎಂದು ಹೇಳಲೂ ಮರೆಯಲಿಲ್ಲ.
‘ಸತ್ಯವಾಗಲೂ ಈಗ ನನಗೆ ಬೆಂಗಳೂರಿನ ಅಂಡರ್ ವರ್ಲ್ಡ್ ಬಗ್ಗೆ ಏನೂ ಗೊತ್ತಿಲ್ಲ. ಮರ್ಡರ್ಗಳಾಗೋದು, ಕ್ರೈಂ ಬಗ್ಗೆ ಟಿವಿ, ಪೇಪರ್ನಲ್ಲಿ ನೋಡಿ ತಿಳಿದುಕೊಳ್ತೀನಿ ಅಷ್ಟೇ. ಹಿಂದೆ ಇದ್ದ ಸಂಘಟಿತ ಅಂಡರ್ವರ್ಡ್ ಇದೆ ಅಂತ ನನಗೆ ಅನ್ನಿಸುವುದಿಲ್ಲ. ನಾನು ಆ ವಿಚಾರದಿಂದ ಸಂಪೂರ್ಣ ದೂರವಿದ್ದೇನೆ’ ಎಂದರು.
ನಿಮ್ಮ ಜೀವನವನ್ನಾಧರಿಸಿ ಸಿನಿಮಾ ಮಾಡಬೇಕು ಎಂಬ ಯೋಚನೆ ನಿಮ್ಮದೇನಾ?
- ಇಲ್ಲ. ರಾಮ್ಗೋಪಾಲ್ ವರ್ಮ ಅಚಾನಕ್ಕಾಗಿ ಒಮ್ಮೆ ಭೇಟಿಯಾದರು, ಸ್ವಲ್ಪ ಹೊತ್ತು ಮಾತನಾಡಿದರು. ನನ್ನ ಕತೆ ಕೇಳಿದರು. ಅಸಲೀಯತ್ತನ್ನು ಜನರಿಗೆ ತಿಳಿಸೋಕೆ ಎಲ್ಲಿದೆ ಅವಕಾಶ? ಪತ್ರಿಕೆ, ಟಿವಿ ಮಾಧ್ಯಮ ತೋರಿಸುತ್ತಿರುವುದೇ ಬೇರೆ, ಇರುವುದೇ ಬೇರೆ, ನಡೆಯುತ್ತಿರುವುದೇ ಬೇರೆ. ಈವರೆಗೆ ಗೊತ್ತಿದ್ದುದು ಹೊಡೆಯೋದು, ಬಡಿಯೋದು, ಅಂಡರ್ವರ್ಡ್ ಇತ್ಯಾದಿಯಷ್ಟೇ. ಯಾಕೆ ನಾನು ಅಂಡರ್ವರ್ಡ್ಗೆ ಹೋದೆ ಅನ್ನೋದನ್ನ ಯಾರಾದ್ರೂ ಚೆಕ್ ಮಾಡಿದ್ದಾರಾ? ಹೇಳಿದ್ದಾರಾ? ನನ್ನ ನಿಜವಾದ ಈ ಕಥೆ ಸಿನಿಮಾದಲ್ಲಿ ಬರುತ್ತೆ.
ಮುತ್ತಪ್ಪ ರೈ ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟಲ್ಲ
- ಮುತ್ತಪ್ಪ ರೈ ಇದುವರೆಗೂ ಯಾರಿಂದಲೂ ಕೈಯೊಡ್ಡಿ ಒಂದು ರುಪಾಯಿ ತಗೊಂಡಿಲ್ಲ. ಜನರನ್ನು ಸುಲಿಗೆ ಮಾಡದೇ ಯಾರಾದ್ರೂ ಡಾನ್ ಆಗಿದ್ರೆ ಅದು ನಾನು ಮಾತ್ರ, ನಾನು ಜನರ ಡಾನ್. ಅಂಡರ್ವರ್ಲ್ಡ್ನಲ್ಲಿದ್ದಾಗ ಸಹ ಹೊಟೆಲ್ಗೆ ಹೋದರೆ ಬಿಲ್ ಕೊಡದೇ ಬಂದವನಲ್ಲ ನಾನು. ಯಾರಿಂದಲಾದರೂ ಒಂದು ಪೈಸೆ ಹಣ ತೆಗೆದುಕೊಂಡಿದ್ದಾಗಲೀ, ರೋಲ್ಕಾಲ್ ಮಾಡಿದ್ದರೆ ಉದಾಹರಣೆ ಕೊಡಿ. ಇಂತಹ ಒಬ್ಬ ಡಾನ್ ಈ ದೇಶದಲ್ಲಿ ಬೇರೆ ಯಾರಾದರೂ ಇದ್ದರೆ ಹೆಸರು ಹೇಳಿ ನೋಡೋಣ. ನಾನು ಎದೆ ತಟ್ಟಿ ಹೇಳುತ್ತೇನೆ, ನನ್ನ ವ್ಯವಹಾರದಲ್ಲಿ ಯಾರಿಗೂ ಒಂದು ರುಪಾಯಿ ಮೋಸ ಮಾಡಿಲ್ಲ. ಗಂಜಿ ಬೇಕಾದರೂ ಕುಡಿದು ಬದುಕಬಲ್ಲೆ, ಮತ್ತೊಬ್ಬರ ಹಣ ನನಗೆ ಬೇಡ. ಈಥರದ ಕ್ಯಾರೆಕ್ಟರ್ ನಿಮಗೆ ಎಷ್ಟು ಹುಡುಕಿದರೂ ಸಿಗುವುದಿಲ್ಲ. ಯಾವ ಸಂಘಟನೆಯವನು ಕೋಟಿ ಕೋಟಿ ಹಣವನ್ನು ಜನರಿಗೆ ಖರ್ಚು ಮಾಡ್ತಾನೆ ಹೇಳಿ. ಕೆಲವು ಸಂಘಟನೆಗಳು ಕೇವಲ ಬೆಂಗಳೂರಿಗೆ ಸೀಮಿತವಾಗಿವೆ. ಆದರೆ ನನ್ನ ಸಂಘಟನೆ ರಾಜ್ಯದ ಪ್ರತೀ ಊರಿನಲ್ಲೂ ಇದೆ. ಮುತ್ತಪ್ಪ ರೈ ಒಬ್ಬನೇ, ಇಂಥವನು ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟುವುದೂ ಇಲ್ಲ. ಜನರಿಗೆ ಈಗಲೂ ಮುತ್ತಪ್ಪ ರೈ ಅಂದರೆ ಒಬ್ಬ ಡಾನ್ ಅನ್ನೋದೇ ತಲೆಯಲ್ಲಿದೆ. ನಿಮ್ಮ ಪ್ರಕಾರ ರೈ ಅಂದರೆ ಯಾರು? ನಾನು ಈಗಲೂ ಡಾನ್. ಜಯಕರ್ನಾಟಕ ಅನ್ನೋದು ಏನು? ನನ್ನ ಹಿಂದೆ ಈಗ 25-30 ಲಕ್ಷ ಜನರಿದ್ದಾರೆ. ನಾನು ಜನರ ಡಾನ್. ನಾವು ಇಷ್ಟು ಜನ ಮುಂದೆ ಹೋಗುವಾಗ ನಮ್ಮನ್ನು ಹೆದರಿಸಲು ಯಾರು ಬರುತ್ತಾರೆ? ಅನ್ಯಾಯ ಮಾಡುವವರ ವಿರುದ್ಧ ಹೋರಾಟ ಮಾಡುತ್ತೇವೆ. ನನಗೆ ಮೊದಲು ಎಷ್ಟು ಶಕ್ತಿಯಿತ್ತೋ ಅದರ ಮೂರು ಪಟ್ಟು ಶಕ್ತಿ ಈಗಲೂ ಇದೆ. ನನ್ನ ಶಕ್ತಿ ಕುಂದಿಲ್ಲ, ಈಗಲೂ ನಾನು ಬಲಾಢ್ಯ.
ಜನ ಸ್ಕ್ರೀನ್ ಮೇಲೆ ಡಾನ್ ಮುತ್ತಪ್ಪ ರೈ ಅವರನ್ನ ನೋಡ್ತಾರೋ, ಸಮಾಜ ಸೇವಕ ಮುತ್ತಪ್ಪ ರೈ ಅವರನ್ನು ನೋಡ್ತಾರೋ?
ಸಮಾಜ ಸೇವಕ ಮುತ್ತಪ್ಪ ರೈ ಅವರನ್ನು ನೋಡ್ಬೇಕಿದ್ರೆ ಇಷ್ಟೆಲ್ಲ ಬೇಕಿತ್ತಾ? ಅಂಥ ಸಿನಿಮಾ ಮಾಡೋಕೆ ರಾಮ್ಗೋಪಾಲ್ ವರ್ಮ ಅವರಂಥ ಡೈರೆಕ್ಟರ್ರೇ ಬೇಕಾ? ಅವರೊಬ್ಬ ಕಾಂಟ್ರವರ್ಷಿಯಲ್ ಡೈರೆಕ್ಟರ್. ಅವರು ಮಾಡ್ತಿರೋ ಸಿನಿಮಾಗಳೆಲ್ಲವೂ ಅಂಡರ್ವರ್ಲ್ಡ್ಗೆ ಸಂಬಂಧಿಸಿದಂಥವೇ.
ಮತ್ತೆ ಫ್ಲಾಷ್ ಬ್ಯಾಕ್ಗೆ ಹೋದ ಹಾಗೆ ಆಗಿಲ್ಲವೇ?
ಇಲ್ಲ, ಹಾಗೆ ಆಗಿಲ್ಲ. ಒಬ್ಬ ಮನುಷ್ಯ ಜೀವನದಲ್ಲಿ ಎಲ್ಲಿಂದ, ಹೇಗೆ ಬಂದ, ಏನಾದ, ಕಡೆಗೆ ಎಲ್ಲಿಗೆ ಹೋದ ಎಂಬುದು ತಿಳಿಯಬೇಕು. ನಾನು ಉದ್ದೇಶಪೂರ್ವಕ ಡಾನ್ ಆಗಬೇಕೆಂದುಕೊಂಡು ಬಂದವನಲ್ಲ. ಅಸ್ತ್ರ ಹಾಯಕರಿಗೆ ಸಹಾಯ ಮಾಡುವಾಗ ನಡೆದ ಕೆಲ ಘಟನೆಗಳು ನನ್ನನ್ನು ಅಂಡರ್ ವರ್ಲ್ಡ್ಗೆ ನೂಕಿದವು. ಕಡೆಗೂ ನಾನು ಅದರಿಂದ ಹೊರ ಬಂದು ನನ್ನ ಅಸ್ತ್ರ ಲಿ ರೂಪ ತೋರಿಸುವ ಅವಕಾಶ ಸಿಕ್ಕಿದ್ದು ನನ್ನ ವಿರುದ್ಧದ ಎಲ್ಲ ಕೇಸ್ಗಳೂ ಇತ್ಯರ್ಥವಾದಾಗ. ನನ್ನಲ್ಲಿ ಎರಡು ಮುಖಗಳಿವೆ ಒಂದು ಸಮಾಜ ಸೇವೆಯದ್ದು, ಇನ್ನೊಂದು ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವಂಥದ್ದು.
ಕಥೆ ಬೆಂಗಳೂರು ಅಂಡರ್ ವರ್ಲ್ಡ್ನಿಂದಲೇ ಆರಂಭವಾಗುತ್ತಾ? ಇದರಲ್ಲಿ ಬೇರೆ ಪಾತ್ರಗಳೂ ಬರುತ್ತವಾ? ನಿಮ್ಮ ಜತೆ ಜೈರಾಜ್ ಇದ್ದ, ಆಯಿಲ್ ಕುಮಾರ ಇದ್ದ..
ಸಿನಿಮಾ ಹೇಗೆ ಬರುತ್ತೆ ಅನ್ನೋದು ನನಗೆ ಗೊತ್ತಿಲ್ಲ. ಯಾಕೆಂದರೆ, ನನ್ನನ್ನು ರಾಮ್ಗೋಪಾಲ್ ವರ್ಮ ಎರಡೇ ಸಲ ಭೇಟಿಯಾಗಿದ್ದು. ಕೆಲ ಘಟನೆಗಳ ಬಗ್ಗೆ ನನ್ನಿಂದ ಮಾಹಿತಿ ಪಡೆದಿದ್ದಾರೆ. ನಾನು ಹುಟ್ಟಿದಲ್ಲಿಂದ ಹಿಡಿದು, ಬೆಂಗಳೂರಿಗೆ ಬಂದು ನಂತರ ದುಬೈಗೆ ಹೋಗಿದ್ದು, ಅಲ್ಲಿಂದ ವಾಪಸ್ ಬಂದಿದ್ದೆಲ್ಲವನ್ನೂ ಅವರು ತಿಳಿದುಕೊಂಡಿದ್ದಾರೆ. ಉಳಿದದ್ದೆಲ್ಲವನ್ನು ಅವರು ಬೇರೆಯವರಿಂದ ತಿಳಿದುಕೊಂಡಿದ್ದಾರೆ. ರಾಮ್ಗೋಪಾಲ್ ವರ್ಮ ಅವರಂಥ ಡೈರೆಕ್ಟರ್ ನಾವು ಹೇಳಿದಂತೆ ಸಿನಿಮಾ ಮಾಡುವವರಲ್ಲ. ನನ್ನ ಕಥೆ ಕೇಳಿ ಅವರು ‘ಇಂಥ ಒಂದು ಸ್ಟೋರಿಯನ್ನು ನಾನು ನನ್ನ ಲೈಫ್ ನಲ್ಲೇ ಕೇಳಿಲ್ಲ, ಇದು ನನ್ನ ಬೆಂಚ್ ಮಾರ್ಕ್ ಸಿನಿಮಾ ಆಗುತ್ತೆ’ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಸಿನಿಮಾಕ್ಕೆ ಮೊದಲು ರಾಮ್ಗೋಪಾಲ್ ವರ್ಮಗೆ ಒಂದಷ್ಟು ಷರತ್ತು ಹಾಕಿರುವ ಮಾತಿದೆಯಲ್ಲ?
ಯಾವ ಕಂಡಿಷನ್ಗಳನ್ನೂ ಹಾಕಿಲ್ಲ. ಕಿಲ್ಲಿಂಗ್ ವೀರಪ್ಪನ್ ಸಿನಿಮಾ ಮಾಡುವಾಗ ಅವರು ಎಲ್ಲಿಗೋ ಹೋಗುತ್ತಿದ್ದವರು ನನ್ನ ಮನೆಗೆ ಬಂದರು. ಬರುವಾಗ ಅವರು ನನ್ನ ಬಗ್ಗೆ ಯೋಚಿಸಿದ್ದೇ ಬೇರೆ, ಇಲ್ಲಿ ಬಂದು ನನ್ನೊಂದಿಗೆ ಮಾತನಾಡಿ ಹೋಗುವಾಗ ಅವರ ಮನಸ್ಸಿನಲ್ಲಿದ್ದ ಯೋಚನೆಯೇ ಬೇರೆಯಾಗಿತ್ತು. ನನ್ನನ್ನು ನೋಡಲು ಬರುವಾಗ ನಾನೊಬ್ಬ ಅಂಡರ್ ವರ್ಲ್ಡ್ ಡಾನ್, ರೌಡಿ, ಎಲ್ಲೋ ಒಂದು ಫಾರ್ಮ್ ಹೌಸ್ನಲ್ಲಿ ರಿಟೈರ್ಡ್ ಆಗಿ ಕುಳಿತಿದ್ದಾನೆ ಎಂದುಕೊಂಡು ನಮ್ಮ ಮನೆಗೆ ಬಂದಿದ್ದರು. ಆದರೆ ನನ್ನ ಜೀವನದ ಕಥೆ ಕೇಳಿದ ನಂತರ, ನಾನು ಈ ಫೀಲ್ಡ್ಗೆ ಯಾಕೆ ಬಂದೆ, ಆಮೇಲೆ ಏನಾಯ್ತು, ಅದರಿಂದ ಹೊರ ಬರಲು ನಾನು ಮಾಡಿದ ಪ್ರಯತ್ನವೇನು ಎಂಬುದನ್ನು ವಿವರಿಸಿದ ಬಳಿಕ ಅವರಿಗೆ ನನ್ನ ಬಗ್ಗೆ ಇದ್ದ ಅಭಿಪ್ರಾಯವೇ ಬದಲಾಯ್ತು.
ಸಿನಿಮಾ ರಿಲೀಸ್ ಆಗದಂತೆ ನೋಡಿಕೊಳ್ಳಲು ಒಂದಷ್ಟು ಮಂದಿ ಸ್ಟೇ ಆರ್ಡರ್ ತರಲು ಮುಂದಾಗಿದ್ದಾರೆ ಎಂಬ ಮಾತು ಗಾಂಧಿನಗರದಲ್ಲಿದೆಯಲ್ಲಾ?
ಯಾವನು ಸ್ಟೇ ಆರ್ಡರ್ ತರ್ತಾನೆ? ಯಾರು ಹಾಗೆ ಹೋಗ್ತಾನೋ ಅವನಿಗೆ ಗಿಲ್ಟ್ ಇರಬೇಕು ಅಷ್ಟೇ. ಕುಂಬಳಕಾಯಿ ಕಳ್ಳ ಅಂತ ಈಗಲೇ ಹೆಗಲು ಮುಟ್ಟಿನೋಡಿಕೊಳ್ಳುವುದೇಕೆ?
ನಿಮ್ಮ ಸಿನಿಮಾ ಮಾಡಲು ರಾಮ್ಗೋಪಾಲ್ ವರ್ಮ ಅವರೇ ಸರಿ ಅಂತ ಯಾಕೆ ಅನ್ನಿಸ್ತು?
ನನ್ನ ಸಿನಿಮಾ ಮಾಡಬೇಕು ಎಂದು ತುಂಬಾ ಜನ ಬಂದಿದ್ರು, ನನಗೆ ಆಸಕ್ತಿ ಇರಲಿಲ್ಲ. ಮಾಡುವುದಿದ್ದರೆ ರಾಮ್ಗೋಪಾಲ್ ವರ್ಮ ಅವರಂಥ ನಿರ್ದೇಶಕರೇ ಮಾಡಬೇಕು ಎಂಬುದು ನನ್ನ ಮನಸ್ಸಿನಲ್ಲಿತ್ತು. ನಾನು ಅವರನ್ನು ನನ್ನ ಮನೆಗೆ ಕರೆದಿರಲೂ ಇಲ್ಲ. ಅವರಾಗಿಯೇ ಬಂದು ಸಿನಿಮಾ ಮಾಡುವುದಾಗಿ ಹೇಳಿದಾಗ ಸಂತೋಷವಾಯ್ತು. ಒಂದು ಸಿನಿಮಾ ಮಾಡುವಾಗ ಒಬ್ಬ ಒಳ್ಳೆಯ ಡೈರೆಕ್ಟರ್ ಇರಬೇಕು. ನನಗೆ ಅವರಿಗಿಂತ ಒಳ್ಳೆಯ ಡೈರೆಕ್ಟರ್ ಯಾರು ಇಲ್ಲ ಅನ್ನಿಸಿತು. ಅದಕ್ಕಾಗಿ ಒಪ್ಪಿಕೊಂಡೆ.
ಒಂದು ಸಿನಿಮಾದಲ್ಲಿ ನಿಮ್ಮ ಇಡೀ ಕಥೆ ಹೇಳಲು ಸಾಧ್ಯವಿಲ್ಲ, ಸಿನಿಮಾದ ಸಬ್ಜೆಕ್ಟ್ ಏನು?
ನೀವು ಈ ಪ್ರಶ್ನೆಯನ್ನು ರಾಮ್ಗೋಪಾಲ್ ವರ್ಮ ಅವರನ್ನೇ ಕೇಳಬೇಕು. ಸಿನಿಮಾದ ಸಬ್ಜೆಕ್ಟ್ ಏನು ಎಂಬುದು ಗೊತ್ತಿಲ್ಲ. ಹೇಗೆ ತೆಗೀತಾರೆ ಸಿನಿಮಾ, ಬೆಂಗಳೂರಿನ ಅಂಡರ್ ವರ್ಲ್ಡ್ ತೆಗೀತಾರಾ, ದುಬೈನ ಕಥೆ ತೆಗೀತಾರಾ ಗೊತ್ತಿಲ್ಲ. ಅಂತೂ ನನ್ನ ಬಗೆಗಿನ ಸಿನಿಮಾವನ್ನು ಒಂದೆರಡು ಗಂಟೆಗಳಲ್ಲಿ ಮುಗಿಸಲು ಸಾಧ್ಯ ಎಂಬುದು ಮಾತ್ರ ಸತ್ಯ. ಕಥೆಯ ಬಗ್ಗೆ ನನ್ನೊಂದಿಗೆ ಎರಡು ಬಾರಿ ಮಾತನಾಡಿದ್ದಾರೆ. ಉಳಿದ ವಿಚಾರಗಳನ್ನು ಅವರು ಹೊರಗಿನಿಂದ ಸಂಗ್ರಹಿಸಿದ್ದಾರೆ. ಒಬ್ಬ ಡೈರೆಕ್ಟರ್ ನಾನು ಹೇಳುವುದನ್ನೇ ನಂಬುವುದಿಲ್ಲ. ತುಂಬಾ ಜನರನ್ನು ಕೇಳಿರ್ತಾರೆ, ತಿಳಿದುಕೊಂಡಿರ್ತಾರೆ.
ಸಿನಿಮಾ ಪಾಸಿಟಿವ್ ಅಥವಾ ನೆಗೆಟಿವ್ ಹೇಗೆ ಬಂದರೂ ನೀವು ಒಪ್ಪಿಕೊಳ್ಳುತ್ತೀರಾ?
ಮೊದಲು ಸಿನಿಮಾ ಹೇಗೆ ಬರುತ್ತದೆ ಎಂಬುದನ್ನು ನೊಡೋಣ. ಸಿನಿಮಾದಲ್ಲಿ ಕಮರ್ಷಿಯಲ್ಗಾಗಿ ನನ್ನ ವಿರುದ್ಧ ಸುಳ್ಳು ಅಥವಾ ನನ್ನ ವ್ಯಕ್ತಿತ್ವವನ್ನು ಹಾಳು ಮಾಡುವ ಹಂತಕ್ಕೆ ತೆಗೆದುಕೊಂಡು ಹೋದ್ರೆ ನನಗೆ ಬೇಜಾರಾಗುತ್ತೆ. ಅದನ್ನು ಮಾಡಬಾರದು. ಹಾಗಂತ ನನ್ನನ್ನೇನು ಹೊಗಳಿ ಸಿನಿಮಾ ಮಾಡಿ ಎಂದೂ ನಾನು ಅವರಿಗೆ ಹೇಳಿಲ್ಲ. ರಾಜಕೀಯದ ಅಗತ್ಯ ನನಗಿಲ್ಲ.
ಸಂಘಟನೆ ಕೆಲಸ ಹೇಗೆ ನಡೆಯುತ್ತಿದೆ?
ಜಯಕರ್ನಾಟಕ ಸಂಘಟನೆಯೇ ನನ್ನ ಶಕ್ತಿ. ಮೊನ್ನೆ ನಡೆದ ಸಿನಿಮಾ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನ ಬಂದಿದ್ದರು. ನಾನೊಬ್ಬ ಸಾಧಾರಣ ವ್ಯಕ್ತಿ. ಸಿನಿಮಾ ನಟ ಅಲ್ಲ, ರಾಜಕೀಯ ವ್ಯಕ್ತಿಯೂ ಅಲ್ಲ. ಹತ್ತು ಹಲವು ಕಳಂಕಗಳನ್ನು ಹೊತ್ತುಕೊಂಡು ನನ್ನನ್ನು ಸಮಾಜದಲ್ಲಿ ಒಬ್ಬ ಕೆಟ್ಟ ವ್ಯಕ್ತಿ ಎಂದು ಮಾಡಿದ್ದರು. ಇವತ್ತು ನಾನು ಅದೆಲ್ಲವನ್ನೂ ಬಿಟ್ಟು ಬದುಕುತ್ತಿದ್ದೇನೆ. ಕೆಲವರು ಎಲ್ಲವನ್ನೂ ಬಿಟ್ಟಿದ್ದೇನೆ ಎಂದು ವೇಷ ಹಾಕಿಕೊಂಡು ಓಡಾಡ್ತಾರೆ. ಎಲ್ಲವನ್ನೂ ಬಿಟ್ಟು ನಿಸ್ವಾರ್ಥವಾಗಿ ಕೆಲಸ ಮಾಡಿಕೊಂಡು ಹೋಗುತ್ತಿರುವುದಕ್ಕೆ ಪ್ರೀತಿಯಿಂದ ಜನ ನನ್ನ ಜೊತೆ ಬರುತ್ತಾರೆ. ಉತ್ತರ ಕರ್ನಾಟಕಕ್ಕೆ ನಾನು ಹೋದರೂ ಇಷ್ಟೇ ಸಂಖ್ಯೆಯ ಜನ ಬರುತ್ತಾರೆ.
ಮುತ್ತಪ್ಪ ರೈ ಇದೆಲ್ಲವನ್ನೂ ಸುಮ್ಮನೆ ಮಾಡುವುದಿಲ್ಲ, ಮುಂದೆ ಎಲೆಕ್ಷನ್ಗೆ ನಿಲ್ತಾರೆ ಎಂಬ ಮಾತಿದೆಯಲ್ಲ? ಮುಂದೆ ದಿನ ಎಲ್ಲಿದೆ. ನನಗೀಗ 63 ವರ್ಷ. ನಾನು ಎಂದಿಗೂ ರಾಜಕೀಯಕ್ಕೆ ಬರುವುದಿಲ್ಲ. ಮತ್ಯಾಕೆ ಮಾಡ್ತೀರಾ ಇಷ್ಟೆಲ್ಲ ಎಂದು ನನ್ನನ್ನು ಕೇಳ್ತಾರೆ. ನನ್ನ ಮನಸ್ಸಿನಲ್ಲಿರುವುದು ಕೇವಲ ನಿಸ್ವಾರ್ಥ ಸೇವೆ ಅಷ್ಟೇ. ನಾನು ರಾಜಕೀಯದವರಿಗೆ ಹೇಳುವುದಿಷ್ಟೇ. ಒಂದು ಎಲೆಕ್ಷನ್ಗೆ ನಿಂತು 20-30 ಕೋಟಿ ಖರ್ಚು ಮಾಡುವ ಬದಲು ಆ ಕ್ಷೇತ್ರದ ಜನರಿಗಾಗಿ ಆ ಹಣವನ್ನು ಐದು ವರ್ಷ ಖರ್ಚು ಮಾಡಿ. ಇಂಡಿಪೆಂಡೆಂಟ್ ನಿಂತರೂ ಗೆಲ್ಲುತ್ತೀರಾ. ಜನರಿಗೆ ಉಪಕಾರ ಮಾಡಿದರೆ ಅವರೆಂದಿಗೂ ಮರೆಯುವುದಿಲ್ಲ.
ಜನರನ್ನು ನೀವು ನೇರವಾಗಿ ಆಳದಿದ್ದರೂ, ಆಳುವವರನ್ನು ನೀವು ಆಳುತ್ತೀರಾ ಎಂಬ ಅಭಿಪ್ರಾಯವಿದೆ? ಆಳುವವರನ್ನು ನಾನು ಆಳುವುದಿಲ್ಲ. ನನ್ನಲ್ಲಿರುವ ಸ್ವಾರ್ಥ ಒಂದೇ. ನಾನು ಎಲ್ಲ ಜನರ ಪ್ರೀತಿಯನ್ನು ಗಳಿಸಬೇಕು ಅನ್ನೋದು. ಪ್ರತಿಯೊಬ್ಬರ ಹೃದಯಕ್ಕೂ ನಾನು ಮುಟ್ಟಬೇಕು ಅಷ್ಟೇ.
ಒಂದಷ್ಟು ರಾಜಕಾರಣಿಗಳಿಗೆ ನೀವು ಗಾಡ್-ದರ್ ಆಗಿದ್ದೀರಿ, ಕಿಂಗ್ಮೇಕರ್ ಆಗಿದ್ದೀರಿ ಅಂತಾರೆ. ಹೌದಾ?
ಯಾವ ರಾಜಕಾರಣಿಗಳಿಗೂ ನಾನು ಕಿಂಗ್ ಮೇಕರ್ ಆಗಿಲ್ಲ. ಅದೆಲ್ಲ ಸುಳ್ಳು, ಕೆಲವು ರಾಜಕಾರಣಿಗಳಿಗೆ ನನ್ನ ಮೇಲೆ ಪ್ರೀತಿ ಇದೆ. ಕೆಲವರಿಗೆ ನನ್ನ ಬಗ್ಗೆ ಗೊತ್ತಿಲ್ಲದ ಕಾರಣ ಅವರು ನನ್ನ ಬಳಿಗೆ ಬರದೇ ಇರಬಹುದು. ನಾನು ಯಾರನ್ನೂ ದ್ವೇಷಿಸುವುದಿಲ್ಲ. ನನ್ನೊಂದಿಗೆ ಮೊದಲಿಂದಲೂ ಪರಿಚಯವಿರುವ ಕೆಲ ಸ್ನೇಹಿತರು ಈಗ ರಾಜಕೀಯದಲ್ಲಿದ್ದಾರೆ. ಅವರೊಂದಿಗೆ ನನ್ನ ಒಡನಾಟವಿದೆ ಅಷ್ಟೆ.
ಜನ ಎಂಥವರಿಗೆ ವೋಟ್ ಹಾಕಬೇಕು ಅಂತೀರಾ ನೀವು?
ಯಾರು ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸ್ತಾರೆ, ನಿಮ್ಮ ಕ್ಷೇತ್ರದಲ್ಲಿ ಕೆಲಸ ಮಾಡ್ತಾರೆ ಅಂಥವರಿಗೆ ವೋಟ್ ಹಾಕಿ ಅಂತ ಹೇಳುತ್ತೇನೆ.
ಒಂದು ಪಕ್ಷ ಅಂತ ಏನಾದ್ರೂ ಹೇಳ್ತೀರಾ, ಯಾಕಂದ್ರೆ ನೀವು ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದೀರಾ ಅನ್ನೋ ಮಾತಿದೆ?
ಯಾವ ಪಕ್ಷದ ಪರವೂ ನಾವು ಕೆಲಸ ಮಾಡುವುದಿಲ್ಲ. ರಾಮನಗರದಲ್ಲಿ ಡಿ.ಕೆ. ಶಿವಕುಮಾರ್ಗೆ ವೋಟ್ ಹಾಕಿ ಎಂದಿದ್ದೇನೆ. ವಿನಯ್ ಕುಮಾರ್ ಸೊರಕೆ ಪರವಾಗಿಯೂ ಕೆಲಸ ಮಾಡಿದ್ದೇವೆ. ಬಿಜೆಪಿಯ ಯಡಿಯೂರಪ್ಪ ಅವರಿಗೆ, ಜೆಡಿಎಸ್ನ ಕುಮಾರಸ್ವಾಮಿಗೂ ವೋಟ್ ಕೊಡಿ ಅಂದಿದ್ದೇವೆ. ಹೈಸ್ಕೂಲ್ ದಿನಗಳಿಂದ ಡಿ.ವಿ.ಸದಾನಂದಗೌಡರು, ಕಾಲೇಜಿನಲ್ಲಿ ಅಂಬರೀಷ್ ಸಹ ನನ್ನ ಮಿತ್ರರು. ನಾವು ಮಾಡುವ ಒಳ್ಳೆಯ ಕೆಲಸಗಳಿಗೆ ಯಾರು ಸ್ಪಂದಿಸ್ತಾರೋ ಅಂಥವರಿಗೆ ವೋಟ್ ಹಾಕಿ ಅಂದಿದ್ದೇವೆ.
ಜಯಕರ್ನಾಟಕ ಸಂಘಟನೆಯೊಂದಿಗೆ ಕೆಲ ಸಮಾಜಘಾತಕ ಶಕ್ತಿಗಳಿವೆ ಎಂಬ ಮಾತಿದೆ, ಇತ್ತೀಚೆಗೆ ನಡೆದ ಕಾರ್ಮಿಕರ ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ ಆರೋಪ ಇದೆ.
ಮೊನ್ನೆ ನಡೆದದ್ದು ಕಾರ್ಮಿಕರ ಪ್ರತಿಭಟನೆ. ನಮ್ಮ ಸಂಘಟನೆ ಕಾರ್ಮಿಕರ ಪರ ಹೋರಾಟ ಮಾಡುತ್ತದೆ. ಕಾರ್ಮಿಕರ ಹೋರಾಟದಲ್ಲಿ ನಮ್ಮ ಸಂಘಟನೆ ತೊಡಗಿಸಿಕೊಳ್ಳುವುದರಲ್ಲಿ ತಪ್ಪೇನಿದೆ? ಬಸ್ಗಳಿಗೆ ಕಲ್ಲು ಹೊಡೆಯುವಂತಹ ಪರಿಸ್ಥಿತಿ ಯಾವಾಗ ಬರುತ್ತೆ? ಸುಮ್ಮನೆ ಯಾರೂ ಕಲ್ಲು ಹೊಡೆಯುವುದಿಲ್ಲ. ಜಯಕರ್ನಾಟಕ ಸಂಘಟನೆ ಎಂದಿಗೂ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡಿಲ್ಲ. ನಮ್ಮ ಸಂಘಟನೆಯನ್ನು ಒಮ್ಮೆ ಕೆಣಕಿ ನೋಡಿ. ಲಕ್ಷಾಂತರ ಸಂಖ್ಯೆಯ ನಮ್ಮ ಕಾರ್ಯಕರ್ತರು ದೊಂಬಿಗೆ ಇಳಿದರೆ ಏನು ಆಗಬಹುದು ಯೋಚನೆ ಮಾಡಿ. ಆದರೆ ನಾವು ಯಾವತ್ತೂ ಆ ಕೆಲಸ ಮಾಡಿಲ್ಲ.
ನೀರು ಕೊಡದಿದ್ದರೆ ಜನ ಮನೆಗೆ ನುಗ್ಗುತ್ತಾರೆ
ಕಳಸಾ ಬಂಡೂರಿ ಹೋರಾಟದ ನಗ್ಗೆ ಮಾತನಾಡುತ್ತಾ- ನರಗುಂದ ಮತ್ತು ನವಲಗುಂದ ರೈತರು ಬಂದು ಭೇಟಿಯಾಗಿ ನನ್ನೊಂದಿಗೆ ಮಾತನಾಡಿದ್ದಾರೆ. ಸಮುದ್ರಕ್ಕೆ ಹರಿದು ಹೋಗಿ ವ್ಯರ್ಥವಾಗುವ ಮಹದಾಯಿ ನೀರನ್ನು ಅಡ್ಡಗಟ್ಟಿ ಕೃಷಿಗೆ ಕೊಡಿ ಅನ್ನೋದು ಅವರ ಬೇಡಿಕೆ. ಕೃಷಿಗೆ ಕೊಡಲು ಸಾಧ್ಯವಾಗದಿದ್ದರೆ ಕುಡಿಯುವದಕ್ಕಾದರೂ ಕೊಡಿ ಅಂದಿದ್ದಾರೆ. ಈ ಬೇಡಿಕೆಯನ್ನು ಜನಪ್ರತಿನಿಧಿಗಳು ಇನ್ನೂ ನೆಗ್ಲೆಟ್ ಮಾಡ್ತಾ ಹೋದ್ರೆ ಮುಂದೇನಾಗಬಹುದು ಎಂಬುದನ್ನು ನಾನು ಹೇಳ್ತೀನಿ ಕೇಳಿ.
ಸರಕಾರಿ ಅಧಿಕಾರಿಗಳು ಇರುವುದು ಜನರ ಸೇವೆ ಮಾಡೋದಕ್ಕೆ. ಅವರ ಮನೆಗಳಲ್ಲಿ ನೀರು ಯಾವಾಗಲೂ ಬರುತ್ತೆ. ನಮಗೆ ನೀರು ಬೇಕಾದರೆ ನಾವು ಏನ್ ಮಾಡ್ಬೇಕು, ಅವರ ಮನೆಗಳಿಗೆ ನುಗ್ಗಬೇಕು ತಾನೆ? ಅವರಿಗೇನು ಹೊಡೆಯೋಕೆ ಬಡಿಯೋಕೆ ನುಗ್ಗುವುದಿಲ್ಲ. ನೀರಿಗಾಗಿ ಅಷ್ಟೇ. ಲಕ್ಷೋಪ ಲಕ್ಷ ಜನ ಈ ರೀತಿ ಅಧಿಕಾರಿಗಳ ನುಗ್ಗುತ್ತಾರೆ ಅಷ್ಟೇ. ಕೃಷಿಯೇ ನಮ್ಮ ಜನರ ಮೂಲ, ಅದೇ ಸತ್ತು ಹೋದರೆ ಜನ ಊಟಕ್ಕೆ ಏನು ಮಾಡ್ತಾರೆ. ಎಲ್ಲಿ ಊಟ ಇದೆಯೋ ಅಲ್ಲಿಗೆ ನುಗ್ತಾರೆ. ಶ್ರೀಮಂತರ ಮನೆಗೆ ನುಗ್ಗಲು ಇನ್ನೆಷ್ಟು ಸಮಯ ಬಾಕಿ ಇದೆ, ಜನಸಾಮಾನ್ಯರು ರಾಜಕಾರಣಿಗಳ ಕಾಲರ್ ಹಿಡಿದು ಎಳೆಯೋದಕ್ಕೆ ತುಂಬ ಸಮಯ ಏನಿಲ್ಲ. ಆದ್ದರಿಂದ ರೈತರ ಬೇಡಿಕೆಯನ್ನು ಈಗಲೇ ಒಪ್ಪಿಕೊಂಡು ಅವರಿಗೆ ಅನುಕೂಲ ಮಾಡಿಕೊಡಬೇಕು.
ಕಳಸಾ ಬಂಡೂರಿ, ಮೇಕೆ ದಾಟು ಯೋಜನೆ ಬಗ್ಗೆ ಮಾತಾಡ್ತೀರಾ. ಆದರೆ ಎತ್ತಿನ ಹೊಳೆ ಬಗ್ಗೆ ಯಾಕೆ ಮೌನವಹಿಸಿದ್ದೀರಿ. ನಿಮ್ಮ ಊರಿನ ನೀರು ಕೇಳ್ತಿದ್ದಾರೆ ಅಂತಾನಾ?
ಎತ್ತಿನ ಹೊಳೆ ಬಗ್ಗೆ ಖಂಡಿತಾ ಮಾತಾಡ್ತೀನಿ. ನನ್ನ ಊರು ಮಂಗಳೂರಲ್ಲ, ನನ್ನದು ಬೆಂಗಳೂರು. ನಾನು ಮಂಗಳೂರಿನಲ್ಲಿ ಎಷ್ಟು ಜೀವನ ಮಾಡಿದ್ದೇನೋ ಅದರ ನಾಲ್ಕು ಪಟ್ಟು ಹೆಚ್ಚು ಬೆಂಗಳೂರಲ್ಲಿ ಬದುಕಿದ್ದೇನೆ. ನನ್ನ ಊರು ಕರ್ನಾಟಕ, ನನ್ನ ಭಾಷೆ ಕನ್ನಡ. ನೇತ್ರಾವತಿ ನದಿಯನ್ನು ಈಗ ಹೋಗಿ ನೋಡಿ ಖಾಲಿಯಾಗಿದೆ. ಮಂಗಳೂರಿಗೆ ಎರಡು ದಿನಕ್ಕೊಮ್ಮೆ ಕುಡಿಯುವ ನೀರು ಬಿಡುತ್ತಿದ್ದಾರೆ. ಇನ್ನೆಲ್ಲಿಂದ ನೀರನ್ನು ತರುತ್ತೀರಾ? ಡ್ಯಾಂಗಳನ್ನು ಕಟ್ಟಿ. ತಮಿಳುನಾಡಿನಲ್ಲಿ ನೋಡಿ, ಅಲ್ಲಲ್ಲಿ ಡ್ಯಾಂಗಳನ್ನು ಕಟ್ಟಿ ಹರಿಯುವ ನೀರು ಸಮುದ್ರಕ್ಕೆ ಹೋಗದಂತೆ ಮಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ಅಂತಹ ಲೀಡರ್ಗಳಿಲ್ಲ.
ನೀವ್ ಮಾತಾಡೋದನ್ನು ನೋಡಿದ್ರೆ ಕಮ್ಯುನಿಸ್ಟ್ ಕ್ರಾಂತಿ, ನಕ್ಸಲ್ ಕ್ರಾಂತಿ ಬಗ್ಗೆ ಮಾತಾಡುವವರ ಥರ ಆಗಿದೆಯಲ್ಲ?
ಕಮ್ಯುನಿಸ್ಟ್, ನಕ್ಸಲ್ ಕ್ರಾಂತಿಯಲ್ಲ. ನಾನು ಜನರ ಪರವಾಗಿ ಮಾತನಾಡುತ್ತೇನೆ ಅಷ್ಟೇ. ನಿಸ್ವಾರ್ಥ ಸೇವೆ ಮಾಡುವುದಷ್ಟೇ ನನ್ನ ಉದ್ದೇಶ. ಕಮ್ಯುನಿಸ್ಟ್ ಹೋರಾಟ ಅಂದವರು ವೋಟಿಗಾಗಿ ನಿಲ್ಲುವುದಿಲ್ಲವಾ? ನನಗೆ ವೋಟೂ ಬೇಡ ಏನೂ ಬೇಡ. ನಾನು ಮೊದಲು ಯಾರಿಗಾದರೂ ತೊಂದರೆಯಾದರೆ ಅವರ ಸಮಸ್ಯೆ ಪರಿಹಾರಕ್ಕೆ ಧಾವಿಸುತ್ತಿದ್ದೆ. ಈಗ ನಾನು ಭವಿಷ್ಯದ ಬಗ್ಗೆ ಮಾತಾಡುತ್ತಿದ್ದೇನೆ, ಎಲ್ಲ ಜನರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದೇನೆ. ರಾಜಕಾರಣಿಗಳು, ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ನಮಗೇ ನೀರಿಲ್ಲದೇ ಇರುವಾಗ ತಮಿಳುನಾಡಿಗೆ ನೀರು ಬಿಡುತ್ತಾರೆ. ಇದನ್ನು ಹೇಗೆ ಸಹಿಸಿಕೊಳ್ಳಲು ಸಾಧ್ಯ. ನಮ್ಮ ರಾಜ್ಯದ ಒಂದು ಹನಿ ನೀರೂ ಕೂಡ ಹೊರಗೆ ಹೋಗದಂತೆ ಕ್ರಮ ಕೈಗೊಳ್ಳಬೇಕು.
ಟಿಆರ್ಪಿ ಬ್ಯಾನ್ ಆಗ್ಬೇಕ್!
ನಾನು ಇದುವರೆಗೆ ಎರಡು ಲಕ್ಷ ಮರಗಳನ್ನು ನೆಟ್ಟಿದ್ದೇನೆ. ನಾನು ಮರ ನೆಟ್ಟ ಸುದ್ದಿ ತಮಿಳುನಾಡಿನ ಪತ್ರಿಕೆಗಳಲ್ಲೆಲ್ಲಾ ಬಂದಿದೆ. ನಾನು ಮಂಡ್ಯದ ತೊನ್ನೂರಿನಲ್ಲಿ ಕೆರೆಯೊಂದನ್ನು ಅಭಿವೃದ್ಧಿಪಡಿಸಿದ್ದೇನೆ. ಎರಡು ಸಾವಿರ ಎಕರೆ ಅಗಲ, ನೂರು ಅಡಿ ಆಳದಲ್ಲಿ ನೀರಿದೆ. ಕೆಆರ್ಎಸ್ನ ನೀರು ಖಾಲಿಯಾದರೂ, ತೊನ್ನೂರು ಕೆರೆಯ ನೀರು ಖಾಲಿಯಾಗುವುದಿಲ್ಲ. ಈಗ ರಾಯಚೂರಿನ ಪ್ರತೀ ಹಳ್ಳಿಗೆ ಹೋಗಿ ಮನೆ ಮನೆಗೆ ಕುಡಿಯುವ ನೀರು ಕೊಡುವ ಯೋಚನೆ ಮಾಡಿದ್ದೇವೆ. ಮಳೆ ಬರುವವರೆಗೆ ನೀರು ಕೊಡುತ್ತೇವ. ಹಾಗಂತ ನಾನೇನು ರಾಯಚೂರಿನಲ್ಲಿ ಎಲೆಕ್ಷನ್ಗೆ ನಿಲ್ಲುವುದಿಲ್ಲ. ನಮ್ಮ ಯಾವ ಟಿವಿ ಪತ್ರಿಕೆಗಳೂ ಈ ಸುದ್ದಿ ಹಾಕಿಲ್ಲ. ಒಬ್ಬನಿಗೆ ಯಾರಾದ್ರೂ ಚಪ್ಪಲಿಯಲ್ಲಿ ಹೊಡೆದರೆ ನೀವು ಅದನ್ನು ಬೆಳಗ್ಗೆಯಿಂದ ಸಂಜೆಯವರೆಗೆ ತೋರಿಸುತ್ತೀರಾ. ಯಾವುದೂ ಸಿಗದಿದ್ದರೆ ಯಾವುದೋ ಒಬ್ಬ ಸ್ವಾಮೀಜಿಯನ್ನು ಹಿಡಿದು ತರುತ್ತೀರಾ. ವಾರಕ್ಕೊಮ್ಮೆ ಬರುವ ಟಿಆರ್ಪಿಗಾಗಿ ಪಾಪ ಟಿವಿ ಚಾನೆಲ್ಗಳವರು ಪಡುವ ಕಷ್ಟ ನೋಡಿದರೆ ಅಯ್ಯೋ ಅನ್ನಿಸತ್ತೆ. ಒಳ್ಳೆಯ ಕೆಲಸಗಳನ್ನು ತೋರಿಸುವುದಿಲ್ಲ. ಈ ಟಿಆರ್ಪಿ ಅನ್ನೋದು ಮೊದಲು ಬ್ಯಾನ್ ಆಗ್ಬೇಕು.
ಬನ್ನಂಜೆ ರಾಜ ಬೊಗಳುವ ನಾಯಿ
ನಾನು ಬನ್ನಂಜೆ ರಾಜನಿಗೆ ಅಡ್ಡಗಾಲಾಗಿದ್ದುದು ನಿಜ. ಯಾಕೆಂದರೆ, ಆತ ಜನರನ್ನು ಸುಲಿಗೆ ಮಾತ್ತಿದ್ದ. ಹಣ ಕೊಡದಿದ್ದರೆ ಜನರನ್ನು ಕೊಲ್ಲುತ್ತಿದ್ದ. ಇದು ನನ್ನ ನಿಯಮಕ್ಕೆ ವಿರುದ್ಧವಾಗಿತ್ತು. ಆತ ನನ್ನ ಜತೆಯಲ್ಲೇ ದುಬೈಗೆ ಬಂದಿದ್ದವನು. ಅವನು ಈ ಮಟ್ಟಕ್ಕೆ ಇಳಿದ ಕೂಡಲೇ ದೂರ ಇಟ್ಟೆ. ಈಗ ಅವನನ್ನು ಪೊಲೀಸರು ಎಳೆದು ತಂದಿದ್ದಾರೆ. ನನ್ನ ವಿರುದ್ಧ ಸ್ಟೇಟ್ಮೆಂಟ್ಗಳನ್ನು ಕೊಡುತ್ತಿದ್ದಾನೆ. ನನ್ನಿಂದ ಅವನಿಗೆ ಅಪಾಯ ಇದೆ ಎಂದು ಹೇಳುತ್ತಿದ್ದಾನೆ. ಅದು ಅವನ ಕಲ್ಪನೆ ಅಷ್ಟೇ. ಅವನೊಬ್ಬ ಬೊಗಳುವ ನಾಯಿ, ಕಚ್ಚುವುದಿಲ್ಲ.
ಕೋಟೆ ಕಟ್ಟಿಕೊಂಡರೆ ಪ್ರಾಣ ಉಳಿಯುವುದಿಲ್ಲ
ನನ್ನ ರಕ್ಷಣೆಗಾಗಿ ಸೆಕ್ಯೂರಿಟಿ ವ್ಯವಸ್ಥೆ ಇಟ್ಟುಕೊಂಡಿದ್ದೇನೆ. ನೀವು ಎಷ್ಟೇ ದೊಡ್ಡ ಕೋಟೆ ಕಟ್ಟಿಕೊಂಡರೂ ಪ್ರಾಣ ಉಳಿಯುವುದಿಲ್ಲ. ರಾಜೀವ್ ಗಾಂಧಿಯವರಂತವರನ್ನು ಕೊಂದರು, ಅಮೆರಿಕ ಅಧ್ಯಕ್ಷರಾಗಿದ್ದ ಕೆನಡಿಯವರನ್ನೇ ಕೊಂದರು. ಪ್ರಾಣ ಕೊಡುವವನು, ತೆಗೆಯುವವನೂ ಮೇಲಿರುವ ದೇವರು. ಮೈಸೂರಿನ ಕೋರ್ಟ್ನಲ್ಲಿ ನನ್ನ ಮೇಲೆ ದಾಳಿ ನಡೆಸಿದಾಗ ನನಗೆ ಐದು ಗುಂಡುಗಳು ಹೊಕ್ಕಿದ್ದವು. ಆದರೂ ನಾನು ಬದುಕಿದೆ, ಪ್ರಜ್ಞೆಯನ್ನೂ ಕಳೆದುಕೊಂಡಿರಲಿಲ್ಲ. ನನಗೆ ಹೊಡೀತಾರೆ ಎಂಬುದು ಒಂದು ದಿನ ಮೊದಲೇ ಗೊತ್ತಿತ್ತು. ಇದು ಗೊತ್ತಿದ್ದರೂ ನಾನು ಹೆದರದೆ ಕೋರ್ಟ್ಗೆ ಹಾಜರಾದೆ. ಅವತ್ತು ಹೊಡೆಯದಿದ್ದರೆ, ಮತ್ತೊಂದು ದಿನ ಹೊಡೆಯುತ್ತಿದ್ದರು. ಕಾಪಾಡುವವನು ದೇವರು. ನನ್ನ ಸಾವನ್ನು ದೇವರು ಬರೆದಿದ್ದಾನೆ, ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ.
ಜನರೊಂದಿಗೆ ಬೆರೆತು ಪತ್ನಿಯ ಮರೆಯುತ್ತಿದ್ದೇನೆ
ನನ್ನ ಜೀವನದಲ್ಲಿ ಅತಿ ಮುಖ್ಯ ಸ್ಥಾನ ಗಳಿಸಿದ್ದವಳು ನನ್ನ ಪತ್ನಿ ರೇಖಾ. ನನ್ನ ಕಷ್ಟ ಸುಖ ಎಲ್ಲದರಲ್ಲೂ ಆಕೆ ಭಾಗಿಯಾಗಿದ್ದಳು. ಅಷ್ಟು ವರ್ಷ ಜತೆಯಲ್ಲಿದ್ದ ಮೇಲೆ ನೆನಪಾಗುತ್ತಾರಲ್ಲ. ಅವಳಿಲ್ಲದ ಜೀವನವನ್ನು ನಾನು ಜನರೊಂದಿಗೆ ಬೆರೆತು ಆಕೆಯನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದೇನೆ. ಸಂಘಟನೆ, ವ್ಯವಹಾರ, ಜನರ ಕಷ್ಟಗಳನ್ನು ಪರಿಹರಿಸುವುದರಲ್ಲಿಯೇ ಸಮಯ ಕಳೆದು ಹೋಗುತ್ತದೆ. ನನ್ನ ಸಿನಿಮಾದಲ್ಲಿ ಆಕೆಯ ಪಾತ್ರವೂ ಇದೆ. ಮುತ್ತಪ್ಪ ರೈ ಬಗ್ಗೆ ಸಿನಿಮಾ ಮಾಡುವಾಗ ಹೆಂಡತಿಯ ಪಾತ್ರವೂ ಇರಬೇಕಲ್ಲವೇ.
ಹಣ ಎಲ್ಲಿಯದು?
ಇಷ್ಟೆಲ್ಲಾ ಮಾಡ್ತೀನಿ ಅಂತೀರಲ್ಲ. ಇದಕ್ಕೆಲ್ಲ ಹಣ ಎಲ್ಲಿಂದ ಬರುತ್ತದೆ, ನಿಮ್ಮ ವ್ಯವಹಾರ ಏನು? ಹ್ಞಾಂ… ಇದು ಸರಿಯಾದ ಪ್ರಶ್ನೆ. ಈ ವಿಷಯ ಎಲ್ಲರಿಗೂ ಗೊತ್ತಾಗಬೇಕು. ನಾನು ರೈತರಿಂದ ದುಡ್ಡು ಕೊಟ್ಟು ಜಮೀನು ಖರೀದಿ ಮಾಡುತ್ತೇನೆ. ನಂತರ ಆ ಜಮೀನನ್ನ ಎನ್.ಎ ಮಾಡಿಸಿ, ಅದರಲ್ಲಿ ರಸ್ತೆ, ಚರಂಡಿಗಳಂಥ ಮೂಲ ಸೌಕರ್ಯ ಕೊಟ್ಟು ಲೇಔಟ್ ನಿರ್ಮಿಸುತ್ತೇನೆ. ಹಾಗೆ ಮಾಡಿ ಸೈಟು ಮಾರುತ್ತೇನೆ. ಅದು ಪಕ್ಕಾ ವ್ಯವಹಾರ. ಇದುವರೆಗೂ ಒಬ್ಬೇ ಒಬ್ಬ ರೈತನಿಗೆ ದುಡ್ಡು ಕೊಡದೇ ಜಮೀನು ಬರೆಸಿಕೊಂಡಿದ್ದರೆ ತೋರಿಸಿ. ಒಂದು ಕೆರೆ, ರಾಜಾ ಕಾಲುವೆ ಒತ್ತುವರಿ ಮಾಡಿಸಿಕೊಂಡಿದ್ದರೆ ತೋರಿಸಿ. ಯಾವುದೋ ವಿವಾದದಲ್ಲಿರುವ ಜಮೀನಿಗೆ ಒಂದಷ್ಟು ದುಡ್ಡು ಕೊಟ್ಟು ಅವರಿವರನ್ನು ಹೆದರಿಸಿ ಬೇಲಿ ಸುತ್ತಿಕೊಂಡಿದ್ದರೆ ತೋರಿಸಿ. ಇಷ್ಟು ವರ್ಷಗಳಾದವು ವ್ಯವಹಾರ ಶುರುಮಾಡಿ.
ಒಂದು ವೇಳೆ ನಾನು ತಪ್ಪು ಮಾಡಿದ್ದರೆ ಒಂದಾದರೂ ಕೇಸ್ ಹೊರಗೆ ಬರಬೇಕಿತ್ತಲ್ಲವಾ? ನಾನು ಮಾಡಿದ ಅಷ್ಟೂ ಲೇಔಟ್ಗಳ ಮಾಹಿತಿ ಕೊಡುತ್ತೇನೆ. ನೀವೇ ಹೋಗಿ ನೋಡಿ. ಕಳೆದ ವರ್ಷ ಒಂದಲ್ಲ – ಎರಡಲ್ಲ, ಇಪ್ಪತ್ತ ನಾಲ್ಕು ಕೋಟಿ ತೆರಿಗೆ ಕಟ್ಟಿದ್ದೇನೆ. ಹಾಗೆ ನ್ಯಾಯದ ದಾರಿಯಲ್ಲಿ ಗಳಿಸಿದ ದುಡ್ಡಿನಲ್ಲಿ ಸಮಾಜ ಸೇವೆ ಮಾಡುತ್ತೇನೆ. ದುಡ್ಡು ಕಡಿಮೆಯಾದರೆ ಸ್ವಂತ ವ್ಯವಹಾರ ಮಾಡುವ ನನ್ನ ಮಕ್ಕಳಿಂದ ಪಡೆದುಕೊಳ್ಳುತ್ತೇನೆ.
ನನ್ನನ್ನು ಕೆಣಿಕಿದರೆ ಸುಮ್ಮನೆ ಬಿಡುವುದಿಲ್ಲ!
ನನ್ನ ಚಾರಿತ್ರ್ಯ ಹಾಳು ಮಾಡಿ ನನ್ನನ್ನು ಕೆಣಕಿದರೆ ನಾನು ಬಿಡುವುದಿಲ್ಲ ಎನ್ನುವ ರೈ, ನನಗೆ ಸ್ವಾಭಿಮಾನ ಇದೆ, ಅದಕ್ಕೆ ಕುಂದು ಮಾಡುವಂತಹ ಘಟನೆಗಳು ನಡೆದರೆ ಸುಮ್ಮನೆ ಕೂರುವುದಿಲ್ಲ. ಕ್ರೈಂ ಅನ್ನುವ ಶಬ್ದವೂ ನನ್ನ ಸುತ್ತ ಈಗ ಸುಳಿಯುವುದಿಲ್ಲ. ಎಲ್ಲ ಕೇಸ್ಗಳಲ್ಲಿ ಬಿಡುಗಡೆಯಾಗಿ ಜೈಲಿನಿಂದ ಹೊರಗೆ ಬಂದನಂತರ ನನ್ನ ಜತೆಗಾರರನ್ನ ಕೂರಿಸಿಕೊಂಡು ಒಂದು ಮೀಟಿಂಗ್ ಮಾಡಿದೆ. ಅಂಡರ್ ವರ್ಲ್ಡ್ನಲ್ಲಿ ಮುಂದುವರಿಯುವುದಾ – ಬಿಟ್ಟುಬಿಡುವುದಾ ಎಂಬ ಬಗ್ಗೆ ಚರ್ಚೆ ಮಾಡಿದೆವು. ಇದು ಸಾಕು ಅನ್ನುವ ತೀರ್ಮಾನ ಆಯಿತು. ನಾನೊಬ್ಬನೇ ಬಿಟ್ಟು ನನ್ನ ಜತೆಗಿರುವವರು ಅದರಲ್ಲೇ ಮುಂದುವರಿದರೆ ಸರಿಯಲ್ಲ. ಅದಕ್ಕೇ, ಎಲ್ಲರೂ ಪಾತಕ ಲೋಕದಿಂದ ಹೊರಗೆ ಬಂದು ನ್ಯಾಯಯುತ ವ್ಯವಹಾರ ಮಾಡುವುದು ಅನ್ನೋ ತೀರ್ಮಾನವಾಯಿತು.
ಆವತ್ತು ತೆಗೆದುಕೊಂಡ ತೀರ್ಮಾನಕ್ಕೆ ಬದ್ಧರಾಗಿ ಆವತ್ತಿನಿಂದ ಇವತ್ತಿನ ತನಕ ನಾನು – ನನ್ನ ಜತೆಗಾರರು ಇದ್ದೇವೆ.ಎಲ್ಲವನ್ನೂ ಬಿಟ್ಟಿದ್ದೇವೆ ಅಂತ ಹೇಳಿ ಒಳಗಿಂದೊಳಗೇ ರೌಡಿಸಂ ಮಾಡುವ ಅನೇಕರಿದ್ದಾರೆ. ನಾವು ಹಾಗಲ್ಲ. ನಾವು ಇನ್ನೊಬ್ಬರ ತಂಟೆಗೆ ಕೈ ಹಾಕುವುದಿಲ್ಲ. ನ್ಯಾಯಯುತವಾಗಿ ರೈತರಿಂದ ಜಮೀನು ಖರೀದಿಸುತ್ತೇವೆ, ವ್ಯವಹಾರ ಮಾಡುತ್ತೇವೆ. ಯಾವುದಾದ್ರೂ ಲಿಟಿಗೇಷನ್ ಪ್ರಾಪರ್ಟಿಗೆ ಕೈ ಹಾಕಿದ್ರೆ ಯರಾದ್ರೂ ನಮ್ಮ ತಂಟೆಗೆ ಬರ್ತಾರೆ. ಆದರೆ ನಾವು ಆ ರೀತಿಯ ವ್ಯವಹಾರ ಮಾಡುತ್ತಿಲ್ಲ.
Like this:
Like ಲೋಡ್ ಆಗುತ್ತಿದೆ...