ಬೆಂಗಳೂರು ಭೂಗತ ಲೋಕದ ರೋಚಕ ಕಥೆ..! ಜಯರಾಜ್​ ನನ್ನು ಮುತ್ತಪ್ಪ ರೈ ಕೊಂದಿದ್ಯಾಕೆ..?

ಜಯರಾಜ್​ ನನ್ನ ಮುತ್ತಪ್ಪ ರೈ ಕೊಂದಿದ್ಯಾಕೆ..?ಬೆಂಗಳೂರಿನಲ್ಲಿ ಬಂದೂಕಿಗೆ ಬಲಿಯಾದ ಮೊದಲ ಭೂಗತ ಪಾತಕಿ ಎಂ.ಪಿ ಜಯರಾಜ್. ರಾಜ್ಯದಲ್ಲೇ ಮೊದಲಿಗೆ ಪಾತಕಲೋಕದಲ್ಲಿ ಡಾನ್ ಪಟ್ಟವನ್ನ ಗಿಟ್ಟಿಸಿಕೊಂಡವನೂ ಇದೇ ಜಯರಾಜ್. ಇಂಥಾ ಜಯರಾಜ್ ನನ್ನ ಗುಂಡಿಕ್ಕಿ ಕೊಲ್ಲಿಸಿ ನಂತರ ಡಾನ್ ಪಟ್ಟಕ್ಕೇರಿದ್ದು ಮುತ್ತಪ್ಪ ರೈ. ಮಚ್ಚು, ಲಾಂಗುಗಳೇ ಅಬ್ಬರಿಸಿಸುತ್ತಿದ್ದ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಗುಂಡಿನ ಶಬ್ಧ ಕೇಳಿಸಿತ್ತು. ಅದರ ಹಿಂದೆಯೇ ಕೇಳಿಸಿದ್ದು ಮುತ್ತಪ್ಪ ರೈ ಅನ್ನೋ ಹೆಸರು. ಹಾಗೆ ಭೂಗತ ಲೋಕಕ್ಕೆ ಎಂಟ್ರಿಯಾಗಿದ್ದರು ಮುತ್ತಪ್ಪ ರೈ.

ಪುತ್ತೂರಿನಿಂದ ಬೆಂಗಳೂರಿಗೆ ಬಂದು ವಿಜಯಾಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಮುತ್ತಪ್ಪ ರೈ ಆ ಕೆಲಸ ಬಿಟ್ಟು ಬ್ರಿಗೇಡ್ ರಸ್ತೆಯಲ್ಲಿ ಉಮರ್ ಖಯ್ಯಾಂ ಹೆಸರಿನ ಡ್ಯಾನ್ಸ್ ಬಾರ್ ನಡೆಸ್ತಿದ್ರು. 80-90 ರ ದಶಕದಲ್ಲಿ ಹಫ್ತಾ ವಸೂಲಿ, ಡ್ಯಾನ್ಸ್ ಬಾರ್ ದಂಧೆ, ಆಯಿಲ್ ಮಾಫಿಯಾ ಅಂದ್ರೆ ಕಲಬೆರಕೆ ದಂಧೆ, ಸುಫಾರಿ ಕೊಲೆಗಳಿಗೆ ಸೀಮಿತವಾಗಿತ್ತು ಬೆಂಗಳೂರಿನ ಭೂಗತ ಜಗತ್ತು. ರಾಜಧಾನಿಯ ರೌಡಿಸಂಗೆ ಮುಂಬೈನಿಂದ ಹಿಡಿದು ದುಬೈ ವರೆಗೆ ಲಿಂಕ್ ಬೆಳೆಸಿದ್ದು ಮುತ್ತಪ್ಪ ರೈ. ರೈ ನಡೆಸುತ್ತಿದ್ದ ಉಮರ್ ಖಯ್ಯಾಂ ಡ್ಯಾನ್ಸ್ ಬಾರ್ ಗೆ ಹಫ್ತಾ ಕೇಳಲು ಜಯರಾಜ್ ನ ಕಡೆಯ ಹುಡುಗರು ಬರುತ್ತಿದ್ದರು. ಅವತ್ತಿನ ಕಾಲಕ್ಕೆ ಅದು ಮಾಮೂಲಿಯಾಗಿತ್ತು, ರೈ ಕೂಡ ದುಡ್ಡು ಕೊಟ್ಟು ಕಳಿಸಿ ಸುಮ್ಮನಾಗ್ತಿದ್ರು. ಅಲ್ಲಿಯವರೆಗೆ ಜಯರಾಜ್ ಮತ್ತು ಮುತ್ತಪ್ಪ ರೈ ಮಧ್ಯೆ ಯಾವ ದ್ವೇಷವೂ ಇರಲಿಲ್ಲ. ಆ ನಂತರವೂ ಇರಲಿಲ್ಲವಾದರೂ ಜಯರಾಜ್ ನನ್ನ ಕೊಲ್ಲುವ ಹೊಣೆಯನ್ನ ಹೆಗಲೇರಿಸಿಕೊಂಡು ಅದನ್ನ ಡೀಲ್ ಮಾಡಿದ್ದು ಇದೇ ಮುತ್ತಪ್ಪ ರೈ.

ಅವತ್ತಿನ ಕಾಲಕ್ಕೆ ಬೆಂಗಳೂರನ್ನ ಮತ್ತು ಬೆಂಗಳೂರಿನ ಪೊಲೀಸರನ್ನ ನಡುಗಿಸುತ್ತಿದ್ದವನು ರೌಡಿ ಜಯರಾಜ್. ಬೆಂಗಳೂರಿನ ಇಡೀ ಭೂಗತ ಲೋಕವನ್ನ ತನ್ನ ಬೆರಳ ತುದಿಯಲ್ಲಿ ಆಡಿಸಿದವನು ಜಯರಾಜ್. ಇಂಥಾ ಜಯರಾಜ್ ಗೆ ಪೊಲೀಸರ ಮೇಲೆ ಮೂರು ಜನ್ಮಕ್ಕೂ ಮೀರಿದ ದ್ವೇಷವಿತ್ತು. ಪೊಲೀಸರನ್ನ ನಾಯಿಗಳೂ ಅಂತಲೇ ಕರೆಯುತ್ತಿದ್ದ. ಇಂಥಾ ಸಮಯದಲ್ಲೇ ಬೆಂಗಳೂರಿನಲ್ಲಿ ಆಯಿಲ್ ಕುಮಾರ್ ಇಡೀ ಆಯಿಲ್ ದಂಧೆಯನ್ನ ನಿಯಂತ್ರಿಸುತ್ತಿದ್ದ. ಇವತ್ತು ಬಡವರ ಜಮೀನಿಗೆ ಬೇಲಿ ಸುತ್ತಿ ರಿಯಲ್ ಎಸ್ಟೇಟ್ ದಂಧೆ ಮಾಡಿ ದುಡ್ಡು ಮಾಡುವಂತೆ, ಅವತ್ತು ಆಯಿಲ್ ಕಲಬೆರೆಕೆ ದಂಧೆಯಿಂದ ಕೈ ತುಂಬಾ ದುಡ್ಡು ಮಾಡುತ್ತಿದ್ದವನು ಆಯಿಲ್ ಕುಮಾರ್. ಈ ದಂಧೆಯನ್ನ ಹಿಡಿತಕ್ಕೆ ತೆಗೆದುಕೊಳ್ಳೋದಕ್ಕೆ ಜಯರಾಜ್ ಯತ್ನಿಸುತ್ತಿದ್ದ. ಹಫ್ತಾ ವಸೂಲಿ, ಸೇಟು ಮಾರ್ವಾಡಿಗಳಿಂದ ಬರ್ತಿದ್ದ ದುಡ್ಡಿನ ಜತೆಗೆ ಆಯಿಲ್ ಮಾಫಿಯಾವನ್ನೂ ಆಳಲು ಮುಂದಾಗಿದ್ದ ಜಯರಾಜ್. ಆಯಿಲ್ ಮಾಫಿಯಾ ತನ್ನ ಕೈತಪ್ಪಿಬಿಡುತ್ತೆ ಅಂತ ಆಯಿಲ್ ಕುಮಾರ್ ಚಡಪಡಿಸುತ್ತಿದ್ದಾಗಲೇ ಅವನ ಕಣ್ಣಿಗೆ ಬಿದ್ದಿದ್ದು ಇದೇ ಮುತ್ತಪ್ಪ ರೈ. ಜಯರಾಜ್ ಬದುಕಿಗೆ ಫುಲ್ ಸ್ಟಾಪ್ ಹಾಕೋ ನಿರ್ಧಾರಕ್ಕೆ ಬಂದಿದ್ದ ಆಯಿಲ್ ಕುಮಾರ. ಆ ಕಾಲದ ಸ್ಟೂಡೆಂಟ್‌ ಲೀಡರ್‌ ಮತ್ತು ಅಬಕಾರಿ ಕಂಟ್ರಾಕ್ಟರ್‌ ಆಗಿದ್ದ ಅಮರ್‌ ಆಳ್ವಗೆ ಮುಂಬಯಿ ಭೂಗತ ಜಗತ್ತಿನ ಪರಿಚಯವಿತ್ತು. ಅವನೇ ಮುತ್ತಪ್ಪ ರೈಗೆ ಮುಂಬೈ ಭೂಗತ ಜಗತ್ತನ್ನು ಪರಿಚಯಿಸಿದ್ದು. ಮುತ್ತಪ್ಪ ರೈ ಮೂಲಕ ಮುಂಬಯಿ ಶೂಟರ್‌ಗಳನ್ನು ಕರೆಸಿ ಜಯರಾಜ್ ನನ್ನ ಮುಗಿಸಬಹುದು ಅನ್ನೋ ಲೆಕ್ಕಾಚಾರ ಆಯಿಲ್‌ ಕುಮಾರ್‌ದಾಗಿತ್ತು.

ಆಯಿಲ್ ಕುಮಾರನೊಬ್ಬನಿಂದಲೇ ಜಯರಾಜ್ ನನ್ನ ಮುಗಿಸೋದಕ್ಕೆ ಸಾಧ್ಯವೇ ಇರಲಿಲ್ಲ. ಯಾಕಂದ್ರೆ ಅವತ್ತಿಗೆ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಜಯರಾಜ್ ನ ಬೆಂಬಲಿಗರಿದ್ದರು. ಮುತ್ತಪ್ಪ ರೈ ಬಂದೂಕಿನ ಗುಂಡಿನಿಂದ ಜಯರಾಜ್ ಹೆಣವಾಗೋದಕ್ಕೆ ಕಾರಣವಾಗಿದ್ದು ಅದೊಂದು ಮರ್ಡರ್ ಕೇಸ್. ಹೌದು 1987 ರಲ್ಲಿ ಕೇರಳದ ವಕೀಲ ರಶೀದ್ ಎಂಬಾತನನ್ನ ತಮಿಳುನಾಡಿನಲ್ಲಿ ಕೊಲೆ ಮಾಡಲಾಗಿತ್ತು. ಆ ಕೊಲೆ ಕೇಸ್ ನಲ್ಲಿ ಅವತ್ತಿನ ಗೃಹ ಸಚಿವ ಆರ್ ಎಲ್ ಜಾಲಪ್ಪ ಮತ್ತು ಪೊಲೀಸ್ ಅಧಿಕಾರಿಗಳೇ ಭಾಗಿಯಾಗಿದ್ದರು ಅನ್ನೋ ಆರೋಪವಿತ್ತು. ಸಿಬಿಐ ತನಿಖೆಗೆ ಕೋರ್ಟ್ ಆದೇಶ ನೀಡಿತ್ತು. ಪೊಲೀಸರೆಂದರೆ ಕೆಂಡಾಮಂಡಲನಾಗ್ತಿದ್ದ ಜಯರಾಜ್ ಈ ಕೇಸ್ ಅನ್ನ ಬಳಸಿಕೊಂಡು ಪೊಲೀಸರನ್ನ ಹೆಣೆಯಲು ನಿಂತುಬಿಟ್ಟ. ರಶೀದ್ ಕೊಲೆ ಕೇಸ್ ನಲ್ಲಿ ಜಾಲಪ್ಪ, ಡಿಸಿಪಿ ನಾರಾಯಣ್ ಸೇರಿ ಹಲವರು ಅರೆಸ್ಟ್ ಆದ್ರು. ಈ ಕೇಸ್ ನಲ್ಲಿ ಸಾಕ್ಷಿಧಾರರ ಬೆನ್ನಿಗೆ ನಿಂತು ಸಿಬಿಐ ಕೋರ್ಟ್ ನಲ್ಲಿ ಸಾಕ್ಷಿ ಹೇಳಿಸುವ ಜವಾಬ್ದಾರಿ ಹೊತ್ತುಕೊಂಡಿದ್ದ ಜಯರಾಜ್. ಯಾವಾಗ ಪೊಲೀಸರ ವಿರುದ್ಧವೇ ಜಯರಾಜ್ ನಿಂತನೋ ಆಗಲೇ ಅವನ ಕೊನೆಯ ದಿನಗಳೂ ಹತ್ತಿರವಾದವು.

ಜಯರಾಜ್ ನನ್ನ ವಿರೋಧಿಸುತ್ತಿದ್ದ ಆಯಿಲ್ ಕುಮಾರನ ಗ್ಯಾಂಗು ಮತ್ತು ಜಯರಾಜ್ ನನ್ನ ವಿರೋಧಿಸುತ್ತಿದ್ದ ಪೊಲೀಸ್ ಟೀಂ ಒಂದಾಯ್ತು. ಈ ಎರಡೂ ಟೀಂಗೆ ಕೊಂಡಿಯಾಗಿದ್ದು ಮುತ್ತಪ್ಪ ರೈ. ಜಯರಾಜ್ ನನ್ನ ಕೊಲ್ಲುವ ಗಂಡು ಬೆಂಗಳೂರಲ್ಲೇ ಇಲ್ಲ ಅಂತ ಪೊಲೀಸ್ ಅಧಿಕಾರಿಯೊಬ್ಬ ಹೇಳಿದಾಗ, ಯಾಕೆ ಅವನ ಮೈಯಲ್ಲಿ ಗುಂಡು ಇಳಿಯುವುದಿಲ್ಲವಾ ಎಂದು ಗುಂಡು ಹೊಡೆದಂತೆ ಮಾತನಾಡಿದ್ದು ಇದೇ ಮುತ್ತಪ್ಪ ರೈ. ಆ ನಂತರವೇ ನಡೆದದ್ದು ಜಯರಾಜ್ ಮೇಲಿನ ಎರಡು ಹತ್ಯಾ ಪ್ರಯತ್ನಗಳು, ಮತ್ತು ಮೂರನೇ ಸಕ್ಸಸ್ ಫುಲ್ ಆಪರೇಷನ್.

1989ರ ಸೆಪ್ಟೆಂಬರ್‌ ಕೊನೆಯಲ್ಲಿ ಈಗಿನ ಫ್ರೀಡಂ ಪಾರ್ಕ್ ಬಳಿಯಿದ್ದ ಅವತ್ತಿನ ಸೆಂಟ್ರಲ್ ಜೈಲಿನ ಮುಂದೆ ಜಯರಾಜ್‌ ಮೇಲೆ ಮೊದಲ ದಾಳಿ ನಡೆದಿತ್ತು. ಕಾಟನ್‌ಪೇಟೆ ಪುಷ್ಪ, ಬೆಕ್ಕಿನಕಣ್ಣು ರಾಜೇಂದ್ರ, ಚಕ್ರೆ ಟೀಂ ನಡೆಸಿದ್ದ ದಾಳಿಯನ್ನು ಹಿಮ್ಮೆಟ್ಟಿಸಿ ಜಯರಾಜ್‌ ಬಚಾವಾಗಿದ್ದ. ಮಚ್ಚು ಲಾಂಗ್ ಗಳಿಂದ ಜಯರಾಜ್ ನನ್ನ ಕೊಲ್ಲೋದು ಸಾಧ್ಯವೇ ಇಲ್ಲ ಅಂತ ರೈ ಗೆ ಅರ್ಥವಾಗಿತ್ತು. ಮೊದಲ ದಾಳಿ ಬಳಿಕ ಜಯರಾಜ್ ಬೆಂಗಳೂರು ಸೆಂಟ್ರಲ್ ಜೈಲಿನಿಂದ ಮೈಸೂರು ಜೈಲಿಗೆ ಶಿಫ್ಟ್ ಆಗಿದ್ದ. ಮೈಸೂರಿನ ಕೆಆರ್ ಆಸ್ಪತ್ರೆಯ ಜೈಲ್ ವಾರ್ಡ್ ನಲ್ಲಿದ್ದ ಜಯರಾಜ್ ಮೇಲೆ ಮುಂಬೈನಿಂದ ಬಂದಿದ್ದ ಶೂಟರ್ ಗಳು ಗುಂಡಿನ ದಾಳಿ ನಡೆಸಿದ್ರು. ಅವತ್ತಿನ ಮಟ್ಟಿಗೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಬಂದೂಕುಗಳು ಅಬ್ಬರಿಸಿದ್ದವು. ಜೈಲ್‌ ವಾರ್ಡ್‌ನಲ್ಲೇ ಕೈ ಬಾಂಬ್‌ಗಳನ್ನು ಇಟ್ಟುಕೊಂಡಿದ್ದ ಜಯರಾಜ್‌ ಅವುಗಳನ್ನೆಸೆದಯ ಬಚಾವ್ ಆಗಿಬಿಟ್ಟ. ಈ ದಾಳಿಯಲ್ಲಿ ಬೆಂಗಳೂರಿನ ಯಾವ ರೌಡಿಗಳೂ ಭಾಗಿಯಾಗಿರಲಿಲ್ಲ. ಮುಂಬೈ ಶೂಟರ್ ಗಳು ಜಯರಾಜ್ ನನ್ನ ಮುಗಿಸಲು ಬಂದಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಾಗ ಅದರ ಬೆನ್ನ ಹಿಂದೆ ಕೇಳಿಸಿದ್ದ ಮುತ್ತಪ್ಪ ರೈ ಹೆಸರು.

ತನ್ನ ಮೇಲೆ ಎರಡು ದಾಳಿಯಾದರೂ ಜಯರಾಜ್ ಎಂಎಲ್ ಎ ಆಗುವ ಉಮೇದಿಯಲ್ಲಿದ್ದ. ಎಂಎಲ್ ಎ ಆಗಿಬಿಡುವ ತನ್ನನ್ನ ಮುಟ್ಟೋರು ಯಾರಿದ್ದಾರೆ ಅನ್ನೋ ಹುಂಬತನ. ಈ ಹುಂಬತನವೇ ಜಯರಾಜ್ ಗೆ ಮುಳುವಾಗಿತ್ತು. ಎಲೆಕ್ಷನ್ ಗೆ ನಿಲ್ಲೋದಕ್ಕೆ ಅಂತ ಜಾಮೀನಿನ ಮೇಲೆ ಜಯರಾಜ್ ಹೊರಗೆ ಬಂದ. ಜಾಮೀನಿನ ಷರತ್ತಿನಂತೆ ಜಯರಾಜ್‌ ಪ್ರತೀ ದಿನ ಸಿದ್ದಾಪುರ ಪೊಲೀಸ್ ಠಾಣೆಗೆ ಬಂದು ಸಹಿ ಮಾಡಿ ಹೋಗಬೇಕಿತ್ತು. ಅವತ್ತಿಗೆ ಜಯರಾಜ್ ಗೆ ನೀಡಲಾಗಿದ್ದ ಜಾಮೀನಿನ ಅವಧಿ ಮುಗಿದಿತ್ತು. ಮಾರನೆಯ ದಿನ ಜೈಲಿಗೆ ಹೋಗಬೇಕಾಗಿತ್ತು. 1989ರ ನ.21 ನೇ ತಾರೀಕು ಪೊಲೀಸ್ ಸ್ಟೇಷನ್ ಗೆ ಬಂದು ಸಹಿ ಮಾಡಿ ವಾಪಸಾಗುವಾಗ ಲಾಲ್‌ಬಾಗ್‌ನ ಸಿದ್ದಾಪುರ ಗೇಟ್‌ ಎದುರಿಗೇ ಜಯರಾಜ್‌ ಮೇಲೆ ಮೂರನೇ ದಾಳಿ ನಡೆಯಿತು. ವಕೀಲ ವರ್ಧಮಾನಯ್ಯ ಮತ್ತು ಜಯರಾಜ್‌ ಗುಂಡಿಗೆ ಬಲಿಯಾದರು. ಈ ಬಾರಿ ಬಂದಿದ್ದವರು ಮುಂಬೈನ ಮಾಮೂಲಿ ಶೂಟರ್‌ಗಳಲ್ಲ, ಶಾರ್ಪ್‌ ಶೂಟರ್‌ಗಳು. ಅಲ್ಲಿಗೆ ಬೆಂಗಳೂರನ್ನ ನಡುಗಿಸಿದ್ದ ಮೊದಲ ಡಾನ್ ಜಯರಾಜ್ ನ ಹೆಣ ಉರುಳಿತ್ತು. ಅಲ್ಲಿ ಮತ್ತೊಬ್ಬ ಡಾನ್ ಉದಯಿಸಿದ್ದ ಆತನೇ ಮುತ್ತಪ್ಪ ರೈ. ಜಯರಾಜ್‌ ಕೊಲೆ, ಮುತ್ತಪ್ಪ ರೈ ಹೆಸರನ್ನು ಇಡೀ ಕರ್ನಾಟಕ ಮತ್ತು ಮುಂಬೈ ವರೆಗೂ ಕರೆದುಕೊಂಡು ಹೋಯ್ತು. ಅದುವರೆಗೂ ರೌಡಿ ಜಗತ್ತಿಗೆ ಮಾತ್ರ ಗೊತ್ತಿದ್ದ ರೈ ಹೆಸರು ಇಲ್ಲಿಂದ ಮುಂದಕ್ಕೆ ದಾವೂದ್‌ ಇಬ್ರಾಹಿಂವರೆಗೂ ತಲುಪಿಬಿಟ್ಟಿತು.

%d bloggers like this: