ಮುತ್ತಪ್ಪ ರೈ ಇನ್ನಿಲ್ಲ..! ಹೇಗಿದ್ದವು ಗೊತ್ತಾ ಮುತ್ತಪ್ಪ ರೈ ಕೊನೆಯ ದಿನಗಳು..?

ಮುತ್ತಪ್ಪ ರೈ ಕಡೆಯ ದಿನಗಳುಮಾಜಿ ಡಾನ್, ಸಮಾಜ ಸೇವಕ, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಅನ್ನ ನಾಳದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮುತ್ತಪ್ಪ ರೈ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮುತ್ತಪ್ಪ ರೈಗೆ ಅಂಟಿದ್ದ ಕ್ಯಾನ್ಸರ್ ಅಂತಿಮ ಹಂತ ತಲುಪಿದ್ದರಿಂದಾಗಿ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ರು. ಚಿಕಿತ್ಸೆ ಫಲಕಾರಿಯಾಗದೇ ರೈ ಕೊನೆಯುಸಿರೆಳೆದಿದ್ದಾರೆ. ಮೂರು ತಿಂಗಳ ಹಿಂದೆ ಮಾಧ್ಯಮಗಳ ಮುಂದೆ ಬಂದು ತಮಗೆ ಕ್ಯಾನ್ಸರ್ ಬಂದಿದೆ ಅನ್ನೋ ವಿಚಾರವನ್ನ ಬಹಿರಂಗಪಡಿಸಿದ್ದರು. ವೈದ್ಯರು ಸಾಯುತ್ತೇನೆ ಎಂದು ಹೇಳಿದ್ದಾರೆ.. ಆದರೆ ನಾನು ಸಾವಿಗೆ ಹೆದರೋದಿಲ್ಲ ಎಂದು ಹೇಳಿದ್ದರು. ಆದ್ರೀಗ ಕ್ಯಾನ್ಸರ್ ಮುತ್ತಪ್ಪ ರೈ ಅವರ ಜೀವವನ್ನ ಬಲಿ ಪಡೆದುಬಿಟ್ಟಿದೆ. ಕ್ಯಾನ್ಸರ್ ವಿರುದ್ಧ ಕೊನೇ ಕ್ಷಣದವರೆಗೂ ಹೋರಾಡಿದ ಮುತ್ತಪ್ಪ ರೈ ಇನ್ನು ನೆನಪು ಮಾತ್ರ.

ಅಪಾರ ಅಭಿಮಾನಿಗಳು, ದೊಡ್ಡ ಕುಟುಂಬದವನ್ನ ಬಿಟ್ಟು ಮುತ್ತಪ್ಪ ರೈ ಹೊರಟು ಹೋಗಿದ್ದಾರೆ. ಮುತ್ತಪ್ಪ ರೈ ಅನ್ನೋ ವರ್ಣರಂಜಿತ ಬದುಕಿನ ಕಥೆ ಇಲ್ಲಿಗೆ ಮುಕ್ತಾಯವಾಗಿದೆ. ಮುತ್ತಪ್ಪ ರೈ ಅನ್ನೋ ಕಲರ್ ಫುಲ್ ಪರ್ಸನಾಲಿಟಿ ಇನ್ನು ನೆನಪು ಮಾತ್ರ. ತಾವು ಆಪ್ತವಾಗಿ ಪ್ರೀತಿಸ್ತಿದ್ದ ಬಿಡದಿಯ ಮನೆ, ಸಕಲೇಶಪುರದ ತೋಟ, ಬೆಂಗಳೂರಿನ ಸದಾಶಿವನಗರದ ಅಪಾರ್ಟ್ ಮೆಂಟು, ಸಾವಿರಾರು ಕೋಟಿ ಆಸ್ತಿ ಎಲ್ಲವನ್ನೂ ಬಿಟ್ಟು ಹೋಗಿದ್ದಾರೆ ಮುತ್ತಪ್ಪ ರೈ. ಕಳೆದ ಐದಾರು ತಿಂಗಳಿಂದ ಮುತ್ತಪ್ಪ ರೈ ಹೆಚ್ಚು ಕಾಲ ಆಸ್ಪತ್ರೆಯಲ್ಲೇ ದಿನ ಕಳೆದಿದ್ರು. ಅಂಡರ್ ವರ್ಲ್ಡ್ ನ ಕಠೋರ ದಿನಗಳಿಗಿಂತ ಕ್ಯಾನ್ಸರ್ ನೊಂದಿಗಿನ ಹೋರಾಟವೇ ಅವರನ್ನ ಹೈರಣಾಗಿಸಿತ್ತು.

ದಶಕಗಳ ಕಾಲ ವಿದೇಶದಲ್ಲೇ ಇದ್ದು ಭಾರತದ ಭೂಗತ ಲೋಕವನ್ನ ನಿಯಂತ್ರಿಸಿದ್ದ ಡಾನ್ ನಂತ್ರ ತಮ್ಮ ರೌಡಿಸಂ ಚಟುವಟಿಕೆಯಿಂದ ವಿಆರ್ ಎಸ್ ಪಡೆದಿದ್ರು. ಕ್ಯಾನ್ಸರ್ ವಿರುದ್ಧ ಹೋರಾಡ್ತಿದ್ದ ಮುತ್ತಪ್ಪ ರೈ ಕೊನೆ ದಿನಗಳಲ್ಲಿ ಸಾವಿನ ದಿನವನ್ನ ಮುಂದೆ ಹಾಕೋದಕ್ಕೆ ಇನ್ನಿಲ್ಲದ ಪ್ರಯತ್ನ ನಡೆಸಿದ್ರು. ಆದ್ರೆ ಸಾವು ಅವರ ಬದುಕಿನಲ್ಲಿ ತುಂಬಾ ದಿನಗಳ ಕಾಲ ಅಂದರ್ ಬಾಹರ್ ಆಟವಾಡಿತ್ತು. ಮುತ್ತಪ್ಪ ರೈಗೆ ಕೂಡಾ ಸಾವಿನ ದಿನಗಳು ಸಮೀಪಿಸುತ್ತಿದ್ದ ಸಮಯದಲ್ಲಿ ವಿಧಿ ಯಾಕೆ ನನ್ನನ್ನ ಹೀಗೆಲ್ಲಾ ಆಡಿಸುತ್ತಿದೆ ಅಂತ ಅಂದುಕೊಂಡಿದ್ರು. ಮುತ್ತಪ್ಪ ರೈ ಅಂದ್ರೇನೆ ಗಟ್ಟಿಮುಟ್ಟಿನ ದೇಹ, ತಮ್ಮದೇ ಖದರ್, ತಮ್ಮದೇ ಸ್ಟೈಲ್, ಆತ್ಮ ವಿಶ್ವಾಸದ ನಡೆ, ಅವರ ಹಿಂದೆ ಹುಡುಗರ ದಂಡು. ಆದ್ರೆ ಅವತ್ತು ಪ್ರೆಸ್ ಮೀಟ್ ನಲ್ಲಿ ಮುತ್ತಪ್ಪ ರೈ ಅವರನ್ನ ನೋಡಿದವರಿಗೆ ತುಂಬಾ ದಿನ ಇವರು ಬದುಕೋದಿಲ್ಲ ಅನ್ನಿಸಿತ್ತು. ಮುತ್ತಪ್ಪ ರೈ ಕೂಡ ಅದನ್ನೇ ಹೇಳಿದ್ರು.

ಮುತ್ತಪ್ಪ ರೈ ಇದ್ದಕ್ಕಿದ್ದ ಹಾಗೆ ಕಳೆದ ವರ್ಷ ನಾಪತ್ತೆಯಾಗಿದ್ರು. ಎಲ್ಲಿದ್ದಾರೆ ಏನು ಮಾಡ್ತಿದ್ದಾರೆ ಅನ್ನೋದು ಯಾರಿಗೂ ಗೊತ್ತೇ ಇರಲಿಲ್ಲ. ನಂತ್ರ ವಿಷಯ ಗೊತ್ತಾದಾಗ ಕ್ಯಾನ್ಸರ್ ಅನ್ನೋ ಮಾರಕ ಖಾಯಿಲೆ ಗಟ್ಟಿಗುಂಡಿಗೆಯ ರೈ ಅನ್ನ ಕರಗಿಸ್ತಿದೆ ಅನ್ನೋದು ಗೊತ್ತಾಗಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬರ್ತಿದ್ದ ಹಾಗೆ ರೈ ಮಾಧ್ಯಮಗಳನ್ನ ಕರೆದು ಸುದ್ದಿಗೋಷ್ಠಿ ನಡೆಸಿದ್ರು. ಸಾವು, ಬದುಕು, ಪ್ರೀತಿಯ ಬಗ್ಗೆ ಮಾಜಿ ಡಾನ್ ಸಂತನಂತೆ ಮಾತನಾಡಿದ್ರು. ಇವ್ರೇನಾ ಅಂಡರ್ ವರ್ಲ್ಡ್ ನ ಡಾನ್ ಅಂತ ಅನುಮಾನ ಮೂಡಿಸುವಷ್ಟು ಅಧ್ಯಾತ್ಮದ ಬಗ್ಗೆ ಮಾತನಾಡಿದ್ರು.

ಆಸ್ತಿ,ಹಣ ಇವೆಲ್ಲಾ ಇವತ್ತಿಗೆ ಯಾವುದು ನನ್ನದಲ್ಲ ಅನ್ನೋದನ್ನ ಕೊನೆ ಕ್ಷಣದಲ್ಲಿ ಅವರೇ ಒಪ್ಪಿಕೊಂಡಿದ್ರು.  ಸಾವಿರಾರು ಕೋಟಿ ರೂಪಾಯಿ ಆಸ್ತಿಯ ಒಡೆಯ ಒಮ್ಮೆಲೇ ಬುದ್ಧನಂತಾಗಿ ಹೋಗಿದ್ದ. ಅವತ್ತಿನ ಪ್ರೆಸ್ ಮೀಟ್ ಆದ ನಂತರ ಟಿವಿ ಚಾನಲ್ಲುಗಳಿಗೆ ಸಂದರ್ಶನ ಕೊಟ್ಟ ಮುತ್ತಪ್ಪ ರೈ ಆಮೇಲೆ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳಲೇ ಇಲ್ಲ. ರೈ ಅನಾರೋಗ್ಯದ ಬೆನ್ನಲ್ಲೆ, ಸಾವಿನ ದಾರಿಯಲ್ಲಿ ನಡೆಯುವಾಗ್ಲೇ ಆಸ್ತಿ ವಿಚಾರವಾಗಿ ಎಲ್ಲಾ ಪ್ರೋಸೆಸ್ ನಡೆಸೋದಕ್ಕೆ ಶುರುಮಾಡಿದ್ರು. ಆಗ್ಲೇ ಅವರೊಳಗೆ ಬುದ್ಧನ ಜೊತೆ ಇನ್ನೊಬ್ಬ ರೌಡಿ ಇದ್ದಾನೆ ಅನ್ನೋದು ಗೊತ್ತಾಗಿತ್ತು. ಜೊತೆಗಿದ್ದವರ ಮರ್ಡರ್ ಸುಪಾರಿ ಕೇಸ್ ಜೀವನದ ಕೊನೇ ಹಂತದಲ್ಲಿ ಅವರನ್ನ ಇನ್ನಷ್ಟು ಹಿಂಡಿ ಹಿಪ್ಪೆ ಮಾಡಿ ಹಾಕಿತ್ತು. ಅದರ ನಡುವಲ್ಲೇ ರೈ ಅವರನ್ನ ಸಿಸಿಬಿ ಪೊಲೀಸ್ರು ವಿಚಾರಣೆ ನಡೆಸಿದ್ರು.  ಅದಾದ ಕೆಲ ದಿನಗಳಿಗೆ ರೈ ಮೃತಪಟ್ಟಿದ್ದಾರೆ ಅನ್ನೋ ಸುಳ್ಳುಸುದ್ದಿ ಹರಡೋದಕ್ಕೆ ಶುರುವಾಗಿತ್ತು. ಆಗ ರೈ ತಮ್ಮ ಸೋದರಿ ಜತೆ ಚೆಸ್ ಆಡ್ತಿದ್ದ ಪೋಟೋವೊಂದನ್ನ ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟು ರೈ ಸಾವಿನ ಸುದ್ದಿಗಳಿಗೆ ಫುಲ್ ಸ್ಟಾಪ್ ಹಾಕಿದ್ರು.  ಕೊನೆಯ ದಿನಗಳಲ್ಲಾದರೂ ಎಲ್ಲ ಜಂಜಾಟಗಳಿಂದ ದೂರವಿದ್ದು ನೆಮ್ಮದಿಯಾಗಿ ಕಳೆಯಬೇಕು ಅಂದುಕೊಂಡಿದ್ದ ಮುತ್ತಪ್ಪ ರೈಗೆ ಅದು ಸಾಧ್ಯವಾಗಲೇ ಇಲ್ಲ.

ಕಡೆಯ ದಿನಗಳಲ್ಲಿ ಸಾವಿಗೆ ನಾನು ಹೆದರೋದಿಲ್ಲ ಅಂದಿದ್ದ ಮುತ್ತಪ್ಪ ರೈ ಸಾವನ್ನ ತಪ್ಪಿಸಿಕೊಳ್ಳೋದಕ್ಕೆ ಏನೆಲ್ಲಾ ಮಾಡಬೇಕೋ ಎಲ್ಲ ಪ್ರಯತ್ನಗಳನ್ನೂ ಮಾಡಿಬಿಟ್ಟರು. ಯುವರಾಜ್ ಸಿಂಗ್ ಗೆ ಕ್ಯಾನ್ಸರ್ ಚಿಕಿತ್ಸೆ ನೀಡಿದ ವೈದ್ಯರಿಂದ ಹಿಡಿದು, ಪ್ರಖ್ಯಾತ ವೈದ್ಯರ ಬಳಿಗೆಲ್ಲಾ ಹೋಗಿಬಂದ್ರು. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲೂ ಏರ್ ಆ್ಯಂಬ್ಯುಲೆನ್ಸ್ ಮಾಡಿಕೊಂಡು ಗುಜರಾತ್ ನ ಅಹಮದಾಬಾದ್ ಗೆ ಹೋಗಿಬಂದ್ರು. ಆದ್ರೆ ಅಲ್ಲಿ ಟ್ರೀಟ್ ಮೆಂಟ್ ಸಿಗದೇ ಬೆಂಗಳೂರಿಗೆ ವಾಪಸ್ ಆಗಿ ಮಣಿಪಾಲ್ ಆಸ್ಪತ್ರೆಗೆ ಅಡ್ಮಿಟ್ ಆಗಿದ್ರು.

ಮುತ್ತಪ್ಪ ರೈ ಹುಟ್ಟು ಹೋರಾಟಗಾರ. ಮೂರು ಗುಂಡುಗಳು ಎದೆಯನ್ನ ಸೀಳಿದ್ರು ಸಾವನ್ನ ಗೆದ್ದು ಬಂದಿದ್ರು. ಬದುಕಿರೋ ವೇಳೆ ಎಲ್ಲವನ್ನ ಕಂಡಿದ್ದ ಅವರನ್ನ ಕ್ಯಾನ್ಸರ್ ಹೆಚ್ಚು ಹೆದರಿಸಿತ್ತು. ಬಹಿರಂಗವಾಗಿ ತಾನು ಎದೆಗುಂದಿದ್ದೇನೆ ಅನ್ನೋದನ್ನ ರೈ ತೋರಿಸಿಕೊಳ್ಳದೇ ದೈರ್ಯವಾಗಿಯೇ ಇದ್ದರು. ದಿನದಿಂದ ದಿನಕ್ಕೆ ಕುಗ್ಗಿಹೋಗುತ್ತಿದ್ದ ದೇಹ, ಮಾನಸಿಕ ಜರ್ಜರಿತ ಎಲ್ಲವೂ ಅವರನ್ನ ಇನ್ನಿಲ್ಲದಂತೆ ಕಾಡಿತ್ತು. ಸಾಮಾಜಿಕವಾಗಿ ತಮ್ಮದೇ ಆತ ವರ್ಚಸ್ಸನ್ನ ಬೆಳೆಸಿಕೊಂಡಿದ್ದ ಮುತ್ತಪ್ಪ ರೈ ಅವರಿಗೆ ಸಾವಿನ ಸಮಯದಲ್ಲಿನ ಸನ್ನಿವೇಶಗಳು ಬದುಕಿನ ನಿಜ ದರ್ಶನವನ್ನ ಮಾಡಿಸಿತ್ತು. ಆದ್ರೆ ಎಲ್ಲೂ ರೈ ತಮ್ಮ ಆತ್ಮವಿಶ್ವಾಸವನ್ನ ಬಿಟ್ಟುಕೊಡಲಿಲ್ಲ. ಕಣ್ಣು ಮುಂದಿರೋ ಸಾವು, ದಕ್ಕಿದ್ದಷ್ಟೇ ಪ್ರೀತಿ, ಬದುಕಿದ್ದಷ್ಟೇ ಜೀವನ ಅನ್ನೋ ಬ್ರಹ್ಮಾಂಡ ಸತ್ಯವನ್ನ ಅರ್ಥ ಮಾಡಿಸಿತ್ತು. ಕೊನೆಗೆ ಕ್ಯಾನ್ಸರ್ ರೋಗ ಮುತ್ತಪ್ಪ ರೈ ಅವರನ್ನ ಇನ್ನೊಂದು ಪ್ರಪಂಚಕ್ಕೆ ಕರ್ಕೊಂಡು ಹೋಗಿದೆ.

ಭೂಗತ ಲೋಕದಿಂದ ಹೊರಬಂದು ಸಮಾಜ ಸೇವಕನ ಇಮೇಜ್ ಕಟ್ಟಿಕೊಳ್ಳೋದು ಅಸಾಧ್ಯ. ಆದ್ರೆ ಈ ಅಸಾಧ್ಯವಾದುದನ್ನ ರೈ ಸಾಧಿಸಿ ತೋರಿಸಿದರು. ಸಾಯೋ ಕೊನೆಕ್ಷಣದವರೆಗೂ ದಾನ ಧರ್ಮಗಳಲ್ಲಿ ನಿರತರಾಗಿದ್ದ ರೈ, ಕರಾಳ ಜಗತ್ತಿನ ವ್ಯಕ್ತಿಯೊಬ್ಬ ವ್ಯಕ್ತಿತ್ವವನ್ನ ಬದಲಿಸಿಕೊಂಡು ಬದುಕಬಹುದು ಅನ್ನೋದನ್ನ ತೋರಿಸಿ ಹೋಗಿದ್ದಾರೆ.

 

About SHASHI SHEKARA
I am a simple boy with great ambitions.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: