ಮೋದಿ 20 ಲಕ್ಷ ಕೋಟಿ ಪ್ಯಾಕೇಜ್, ಅಂಗೈಯಲ್ಲಿ ಆಕಾಶ..?

1111111ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಿದಾಗ ಲಾಕ್​ಡೌನ್​ನಿಂದಾಗಿ ಸಂಕಷ್ಟದಲ್ಲಿದ್ದ ಬಡವರು ನಿಟ್ಟುಸಿರು ಬಿಟ್ಟಿದ್ದರು. ಕೆಲಸವಿಲ್ಲದೇ ಬರಿಗೈ ಆಗಿದ್ದವರು ಸರ್ಕಾರದಿಂದ ಧನ ಸಹಾಯ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿದ್ದರು. ಅವತ್ತು ಪ್ರಧಾನಿ ಮಾತನಾಡಿದ ರೀತಿಯೂ ಈ ನಿರೀಕ್ಷೆ ಹೆಚ್ಚು ಮಾಡೋದಕ್ಕೆ ಕಾರಣವಾಗಿತ್ತು. ಆತ್ಮ ನಿರ್ಬರ ಭಾರತ ಅಂತ ಅರ್ಥವಾಗದ ಭಾಷೆಯಲ್ಲಿ ಹೇಳಿದಾಗಲೂ ಇನ್ನು ಮುಂದೆ ನಮ್ಮ ಹಸಿವು ನೀಗಲಿದೆ ಅಂತಲೇ ಅಂದುಕೊಂಡಿತ್ತು ದೇಶ. ಆದ್ರೆ ಐದು ಹಂತಗಳಲ್ಲಿ ನಿರ್ಮಲಾ ಸೀತಾರಾಮನ್ 20.97 ಲಕ್ಷ ಕೋಟಿ ಪ್ಯಾಕೇಜ್​ನ ವಿವರಗಳನ್ನ ದೇಶದ ಮುಂದಿಟ್ಟಾಗ ಅದು ಜನ ಸಾಮಾನ್ಯರಿಗೆ ಅರ್ಥವಾಗಲೇ ಇಲ್ಲ. ಬಡವರು ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಬರಬಹುದು ಅಂತ ಕಾದಿದ್ದೇ ಆಯ್ತು. ನಿರ್ಮಲಾ ಸೀತಾರಾಮನ್ ಆ ಬಗ್ಗೆ ಮಾತನಾಡಲೇ ಇಲ್ಲ. ಇಂಥಾ ಸಂದರ್ಭದಲ್ಲಿ ಬಡವನ ಬೆನ್ನಿಗೆ ನಿಲ್ಲದೆ ಇನ್ಯಾವ ಸಂದರ್ಭದಲ್ಲಿ ನಿಲ್ಲೋದಕ್ಕೆ ಸಾಧ್ಯ..? ಲಾಕ್​ಡೌನ್ ಮಾಡಿ ಇಡೀ ದೇಶಕ್ಕೆ ದೇಶವನ್ನೇ ಬಂದ್ ಮಾಡಿದಾಗ ಅದನ್ನ ಒಪ್ಪಿಕೊಂಡು ಪಾಲಿಸಿದರಲ್ಲ ಅವರಿಗೆ ಸಹಾಯ ಮಾಡಬೇಕಿದ್ದದ್ದು ಸರ್ಕಾರದ ಕರ್ತವ್ಯ.
 
ಪ್ಯಾಕೇಜ್​ನ ಅರ್ಧ ಭಾಗ ಸಾಲದ ರೂಪದಲ್ಲಿ..!
 
ನರೇಂದ್ರ ಮೋದಿ ಸರ್ಕಾರ ಘೋಷಿಸಿದ 20.97 ಲಕ್ಷ ಕೋಟಿ ಪ್ಯಾಕೇಜ್​ನಲ್ಲಿ ಶೇ 50% ಗಿಂತಲೂ ಹೆಚ್ಚು ಮೊತ್ತ ಸಾಲ ಮತ್ತು ಸಾಲದ ಗ್ಯಾರಂಟಿ ರೂಪದಲ್ಲೇ ಇದೆ. ಉಳಿದದ್ದು ಹೂಡಿಕೆ ಘೋಷಣೆಗಳು ಮತ್ತೊಂದಿಷ್ಟು ಸುಧಾರಣಾ ಕ್ರಮಗಳು. ನಿರ್ಮಲಾ ಸೀತಾರಾಮನ್ ಐದು ದಿನಗಳ ಕಾಲ ಭೂಮಿಯಾಳದಿಂದ ಹಿಡಿದು ಬಾಹ್ಯಾಕಾಶದವರೆಗೂ ಘೋಷಣೆಗಳನ್ನ ಮಾಡಿಬಿಟ್ಟರು. ಆದ್ರೆ ತುತ್ತು ಅನ್ನಕ್ಕಾಗಿ, ದಿನ ನಿತ್ಯದ ಅಗತ್ಯಗಳಿಗಾಗಿ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದವರಿಗೆ ಏನೆಂದರೆ ಏನೂ ಸಿಗಲೇ ಇಲ್ಲ. ನಿರ್ಮಲಾ ಭಾಷಣ, ಬಜೆಟ್ ಭಾಷಣದ ಮುಂದಿನ ಭಾಗದಂತಿತ್ತೇ ಹೊರತು ಲಾಕ್​ಡೌನ್​ನಿಂದ ಕುಸಿದುಬಿದ್ದವರನ್ನ ಮೇಲೆತ್ತುವ ಘೋಷಣೆಗಳೇ ಬರಲಿಲ್ಲ. 20 ಲಕ್ಷ ಕೋಟಿ ಪ್ಯಾಕೇಜ್​ನಲ್ಲಿ ಆರ್ಥಿಕ ಚೇತರಿಕೆಗಾಗಿ ಹಲವು ಘೋಷಣೆಗಳನ್ನ ಮಾಡಿದ್ದು ಒಳ್ಳೆಯದೇ. ಇದರಿಂದ ಉದ್ಯೋಗ ಸೃಷ್ಟಿ ಗಣನೀಯ ಪ್ರಮಾಣದಲ್ಲಿ ಆಗಲಿದೆ ಅನ್ನೋದು ನಿಜವೇ. ಆದ್ರೆ ಇವತ್ತಿನ ಹಸಿವು ನೀಗಿಸುವ ಕೆಲಸ ಸರ್ಕಾರದ ಮೊದಲ ಆಧ್ಯತೆಯಾಗಬೇಕಿತ್ತು.
 
20 ಲಕ್ಷ ಕೋಟಿ ಪ್ಯಾಕೇಜ್​ನಲ್ಲಿ ಬಡವನಿಗೆಷ್ಟು..?
 
ಒಟ್ಟಾರೆ 30 ಸಾವಿರ ಕೋಟಿಯಷ್ಟು ದುಡ್ಡನ್ನ ನೇರ ನಗದು ಪಾವತಿ ಮೂಲಕ ಬಡವರ ಖಾತೆಗೆ ಹಾಕಿದ್ದೇವೆ ಅಂತ ಹೇಳುತ್ತೆ ಸರ್ಕಾರ. 20 ಲಕ್ಷ ಕೋಟಿ ಪ್ಯಾಕೇಜ್​ನಲ್ಲಿ ಬಡವರಿಗೆ ಉಚಿತ ಪಡಿತರ ನೀಡುವ ಘೋಷಣೆ ಮಾಡಲಾಯ್ತು. ಲಾಕ್​ಡೌನ್ ಸಂದರ್ಭದಲ್ಲಿ ಹಸಿದವರ ಹೊಟ್ಟೆ ತುಂಬಿಸೋ ಕೆಲಸವನ್ನ ಸರ್ಕಾರಕ್ಕಿಂತಲೂ ಈ ದೇಶದ ಜನರೇ ಹೆಚ್ಚು ಮಾಡಿದ್ದಾರೆ. ವಿಧವಾ ವೇತನ, ವೃದ್ಧಾಪ್ಯ ವೇತನವನ್ನೂ ಮೂರು ತಿಂಗಳು ಹೆಚ್ಚುವರಿಯಾಗಿ ನೀಡುವ ಘೋಷಣೆ ಮಾಡಿತು. ಇದಕ್ಕಾಗಿ ಸರ್ಕಾರ 1,400 ಕೋಟಿ ಖರ್ಚು ಮಾಡಿದೆ. 7.47 ಕೋಟಿ ರೈತರ ಖಾತೆಗಳಿಗೆ 14,946 ಕೋಟಿ ಹಣವನ್ನ ಸರ್ಕಾರ ಹಾಕಿದೆ. ಆದ್ರೆ ಈ ಯೋಜನೆ ಮೊದಲೇ ಇತ್ತು, ಈ ಸಂದರ್ಭದಲ್ಲೂ ಮುಂದುವರಿಸಿದೆಯಷ್ಟೆ. 2.17 ಕೋಟಿ ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ 3,071 ಕೋಟಿ ಖರ್ಚು ಮಾಡಿದ್ದೇವೆ ಅನ್ನುತ್ತೆ ಸರ್ಕಾರ. ಮಹಿಳೆಯರ ಜನ್ ಧನ್ ಬ್ಯಾಂಕ್ ಖಾತೆಗಳಿಗೆ ಮೂರು ತಿಂಗಳ ಕಾಲ 500 ರೂ ನೀಡುತ್ತೇವೆ ಅಂದಿತು ಸರ್ಕಾರ. ಸರ್ಕಾರದ ಅಂಕಿ ಅಂಶಗಳ ಪ್ರಕಾರ 19.86 ಕೋಟಿ ಮಹಿಳೆಯರ ಖಾತೆಗೆ 9,930 ಕೋಟಿಯಷ್ಟು ಹಣ ಹಾಕಲಾಗಿದೆ. ದುಡಿಯುತ್ತಿದ್ದ ಕೈಗಳೆಲ್ಲ ಮನೆಯಲ್ಲೇ ಕುಳಿತಿರುವಾಗ ಮಹಿಳೆಯ ಖಾತೆಗೆ ತಿಂಗಳಿಗೆ 500 ರೂ ಕೊಟ್ಟರೆ ಜೀವನ ನಡೆಸೋದಕ್ಕೆ ಸಾಧ್ಯವಾಗುತ್ತಾ..? ಆದ್ರೆ ಬೇಡಿಕೆ ಇದ್ದದ್ದು ಬಡವರ ಖಾತೆಗೆ ತಿಂಗಳಿಗೆ ಕನಿಷ್ಟ 5 ಸಾವಿರ ಹಣ ಹಾಕಬೇಕು ಅನ್ನೋದು. ಆದ್ರೆ ಸರ್ಕಾರ ಈ ಬಗ್ಗೆ ತುಟಿಬಿಚ್ಚಲೇ ಇಲ್ಲ. ಸರ್ಕಾರ ಬಡವರಿಗಾಗಿ ಅಕ್ಕಿ, ಗೋದಿ, ಬೇಳೆ ಕೊಟ್ಟಿತೇನೋ ನಿಜ. ಇದರಾಚೆಗೂ ಜೀವನ ನಡೆಸಬೇಕಲ್ಲ. ಅವತ್ತಿನ ದುಡಿಮೆಯಿಂದ ಅವತ್ತಿನ ಬದುಕು ದೂಡುವವರ ಸಂಖ್ಯೆಯೇ ದೇಶದಲ್ಲಿ 25 ಕೋಟಿಗೂ ಹೆಚ್ಚಿದೆ. ಅಂಥವರು ಸರ್ಕಾರ ಕೊಟ್ಟ ಪಡಿತರವನ್ನಷ್ಟೇ ತಿಂದು ಜೀವನ ಮಾಡೋದಕ್ಕೆ ಸಾಧ್ಯವಾ..? ಮೋದಿ ಸರ್ಕಾರ ಮಾಡಿದ್ದ ಇಷ್ಟೆಲ್ಲ ಯೋಜನೆಗಳಿಗೆ ಖರ್ಚಾಗಿದ್ದು ಕೇವಲ 1.92 ಲಕ್ಷ ಕೋಟಿಯಷ್ಟೇ.. ಉಳಿದದ್ದು ಈ ದೇಶದ ಬಡವರಿಗೆ ಮುಟ್ಟೋ ಲಕ್ಷಣಗಳೂ ಇಲ್ಲ.
 
20 ಲಕ್ಷ ಕೋಟಿಯಲ್ಲಿ ಬಡವರಿಗೆ 2 ಲಕ್ಷ ಕೋಟಿ ಸಾಕಿತ್ತು.
 
ಲಾಕ್​ಡೌನ್​ನಿಂದ ಸಂಕಷ್ಟದಲ್ಲಿದ್ದವರಿಗೆ ಒಂದು ಬಾರಿಯ ಪರಿಹಾರವಾಗಿ 5 ಸಾವಿರ ರೂಪಾಯಿ ಹಣವನ್ನ ಬಡವರ ಖಾತೆಗೆ ಹಾಕಬೇಕು ಅನ್ನೋ ಸಲಹೆ ಕೊಟ್ಟಿತ್ತು ಭಾರತೀಯ ಕೈಗಾರಿಕಾ ಒಕ್ಕೂಟ. ಈ ಸಲಹೆಯ ಪ್ರಕಾರ ಲಾಕ್​ಡೌನ್ ನಿಂದ ಹಣವಿಲ್ಲದೇ ಬರಿಗೈ ಆಗಿದ್ದ ಬಡವರು, ಕಾರ್ಮಿಕರಿಗೆ ನೇರ ನಗದು ವರ್ಗಾವಣೆ ಮೂಲಕ ಹಣ ಕೊಡಬೇಕು. 40 ಕೋಟಿ ಬಡ ಜನರ ಬ್ಯಾಂಕ್ ಖಾತೆಗೆ ಒಂದು ಬಾರಿಯ ಪರಿಹಾರವಾಗಿ 5 ಸಾವಿರ ಜಮಾ ಮಾಡಬೇಕು, ಅಥವಾ ಹತ್ತು ಸಾವಿರ ಪರಿಹಾರದಂತೆ 20 ಕೋಟಿ ಬಡವರ ಖಾತೆಗೆ ಹಣ ಹಾಕಬೇಕು ಅಂತ ಸಲಹೆ ನೀಡಿತ್ತು. ಈ ಯೋಜನೆಯನ್ನ ಜಾರಿಗೆ ತರೋದಕ್ಕೆ ಸರ್ಕಾರಕ್ಕೆ ಬೇಕಾಗಿರೋ ಹಣ 2 ಲಕ್ಷ ಕೋಟಿಯಷ್ಟೇ. 20 ಲಕ್ಷ ಕೋಟಿಯ ಪ್ಯಾಕೇಜ್​ ನಲ್ಲಿ 2 ಲಕ್ಷ ಕೋಟಿಯನ್ನ ಬಡವರ ಖಾತೆಗೆ ಹಾಕಿದ್ದರೆ, ಈ ದೇಶದ ಬಡವ ಮೋದಿ ಸರ್ಕಾರವನ್ನ ಅದೆಷ್ಟು ವರ್ಷ ನೆನೆಯುತ್ತಿದ್ದನೋ… 13 ಕೋಟಿ ಬಡವರಿಗೆ ಒಂದು ಬಾರಿಯ ಪರಿಹಾರ ಅಂತ 5 ಸಾವಿರ ಹಣವನ್ನ ಬಡವರ ಖಾತೆಗೆ ಹಾಕಿದ್ದರೂ ಅದರಿಂದ ಸರ್ಕಾರಕ್ಕೆ ಹೊರೆಯಾಗುತ್ತಿದ್ದದ್ದು 65 ಸಾವಿರ ಕೋಟಿ.
 
ಕೇಂದ್ರದ ಪ್ಯಾಕೇಜ್ 10% ಜಿಡಿಪಿಯಷ್ಟಲ್ಲ ಕೇವಲ 1%..?
 
ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಿಸಿದಾಗ ಜಿಡಿಪಿಯ ಶೇ.10 ರಷ್ಟು ಪ್ಯಾಕೇಜ್ ಘೋಷಿಸಿದ್ದೇವೆ ಅಂತ ಹೇಳಿತ್ತು. ಜಗತ್ತಿನಲ್ಲೇ ಮೂರನೇ ಅತಿದೊಡ್ಡ ಆರ್ಥಿಕ ಪ್ಯಾಕೇಜ್ ಅಂದಿತ್ತು ಸರ್ಕಾರ. ದಿನ ಕಳೆದಂತೆ ಪ್ಯಾಕೇಜ್​ನ ಅಸಲಿಯತ್ತು ಬಯಲಾಗುತ್ತಿದೆ. ಪ್ಯಾಕೇಜ್​ನ ಬಹುಪಾಲು ಮೊತ್ತ ಆರ್​ಬಿಐ ನೀತಿ, ಸಾಲ, ಸಾಲದ ಗ್ಯಾರಂಟಿ, ಹೂಡಿಕೆ ರೀತಿಯಲ್ಲೇ ಇದೆ. ಹೀಗಾಗಿ ಪ್ಯಾಕೇಜ್ ಜಿಡಿಪಿಯ ಹತ್ತರಷ್ಟಲ್ಲ, ಕೇವಲ ಒಂದು ಪರ್ಸೆಂಟ್ ಅಷ್ಟೆ ಅನ್ನೋ ಅಭಿಪ್ರಾಯ ರೇಟಿಂಗ್ ಏಜೆನ್ಸಿಗಳು ಮತ್ತು ಆರ್ಥಿಕ ತಜ್ಞರದ್ದು. ಒಂದು ಪರ್ಸೆಂಟ್ ಅಂದ್ರೆ ಕೊರೊನಾ ಪ್ಯಾಕೇಜ್ 2 ಲಕ್ಷ ಕೋಟಿಯಷ್ಟೇ ಆಗಲಿದೆ. ಇದರ ಜತೆಗೆ ಕೊರೊನಾ ಲಾಕ್​ ಡೌನ್​ ನಿಂದ ನಷ್ಟ ಅನುಭವಿಸಿರುವವರಿಗೆ, ತೀವ್ರ ಸಂಕಷ್ಟದಲ್ಲಿದ್ದವರಿಗೆ ಈ ಪ್ಯಾಕೇಜ್​ನಿಂದ ಪರಿಹಾರ ಸಿಕ್ಕಿಲ್ಲ ಅನ್ನೋ ಆತಂಕವನ್ನೂ ರೇಟಿಂಗ್ ಏಜೆನ್ಸಿಗಳು ವ್ಯಕ್ತಪಡಿಸಿವೆ.
 
 
ಬಡವರ ಡೇಟಾ ಮೋದಿ ಸರ್ಕಾರದ ಬಳಿಯಿದೆ..!
ಸ್ವಾತಂತ್ರ್ಯಾ ನಂತರ ದೇಶದ ಯಾವ ಸರ್ಕಾರಗಳೂ ಬಡವರ ಸಂಖ್ಯೆಯನ್ನ ದಾಖಲು ಮಾಡುವ ವ್ಯವಸ್ಥೆಯನ್ನೇ ಮಾಡಲಿಲ್ಲ. ಬಡವರು ಅನ್ನೋ ಸಾಕ್ಷಿಗೆ ರೇಷನ್ ಕಾರ್ಡ್​ ಗಳನ್ನ ಕೊಟ್ಟಿದ್ದು ಬಿಟ್ಟರೆ ಯಾವ ಸರ್ಕಾರಗಳೂ ಬಡವರ ಡೇಟಾ ಸಂಗ್ರಹಿಸಲಿಲ್ಲ. ಆದ್ರೆ ಈಗ ಪರಿಸ್ಥಿತಿ ಹಾಗಿಲ್ಲ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 40 ಕೋಟಿ ಬಡವರಿಗಾಗಿ ಜನ್​ ಧನ್ ಖಾತೆ ತೆರೆದಿದೆ. ಆಧಾರ್ ಕಾರ್ಡ್​ಗಳನ್ನ ಬ್ಯಾಂಕ್​ಗಳಿಗೆ ಲಿಂಕ್ ಮಾಡಲಾಗಿದೆ. ರೈತರ ಖಾತೆಗಳಿಗೆ ನೇರವಾಗಿ ಸಹಾಯ ಧನ ಹಾಕಿ ಸರ್ಕಾರ ಯಶಸ್ವಿಯೂ ಆಗಿದೆ. ಬಡವರ ಡೇಟಾ ಇಟ್ಟುಕೊಂಡು ಸುಮ್ಮನೆ ಕೂರುವ ಬದಲು 20 ಲಕ್ಷ ಕೋಟಿ ಪ್ಯಾಕೇಜ್​ನಲ್ಲಿ ಬಡವರ ಜೇಬಿಗೆ ಹಣ ಹಾಕಬಹುದಿತ್ತಲ್ಲವಾ..?
 
ಸಿಎಂ ಕೊಟ್ಟ ಪ್ಯಾಕೇಜ್ ಯಾವಾಗ ಸಿಗುತ್ತೆ..?
 
ಬಿಎಸ್​ ಯಡಿಯೂರಪ್ಪ ಮೂರು ಹಂತಗಳಲ್ಲಿ 2,272 ಕೋಟಿ ಮೊತ್ತದ ಪ್ಯಾಕೇಜ್ ಘೋಷಿಸಿದ್ದಾರೆ. ದೇಶದ ಯಾವ ರಾಜ್ಯವೂ ಈ ಬಗ್ಗೆ ಯೋಚನೆ ಮಾಡದೇ ಇರೋ ಸಮಯದಲ್ಲಿ ಬಿಎಸ್​ವೈ ಬಡವರ ಬ್ಯಾಂಕ್ ಖಾತೆಗಳಿಗೆ ಹಣ ಹಾಕುವ ಘೋಷಣೆ ಮಾಡಿದರು. ಹೂ, ಹಣ್ಣು-ತರಕಾರಿ, ಮೆಕ್ಕೆ ಜೋಳ ಬೆಳೆಯುವ ರೈತರಿಗೆ ಬೆಳೆ ನಷ್ಟ ಪರಿಹಾರ, ಕ್ಷೌರಿಕರಿಗೆ, ಡೋಬಿಗಳಿಗೆ. ಆಟೋ-ಕ್ಯಾಬ್ ಚಾಲಕರಿಗೆ ಒಂದು ಬಾರಿಯ 5 ಸಾವಿರ ಪರಿಹಾರ ಘೋಷಿಸಿದ್ದಾರೆ. ರೈತರಿಗೆ ಪರಿಹಾರವನ್ನ ಸರ್ಕಾರ ಹೇಗೋ ಕೊಟ್ಟುಬಿಡುತ್ತೆ. ಆದ್ರೆ ಕ್ಷೌರಿಕರು ಮತ್ತು ಡೋಬಿಗಳು ಪರಿಹಾರ ಹೇಗೆ ಕೊಡುತ್ತೆ. ಜಾತಿಯ ಆಧಾರದ ಮೇಲೆ ಪರಿಹಾರ ಕೊಡುವ ಸರ್ಕಾರದ ಬಳಿ ಜಾತಿಯ ಆಧಾರದಲ್ಲಿ ಬಡವರ ಬ್ಯಾಂಕ್ ಖಾತೆಯ ವಿವರ ಇರಬೇಕಲ್ಲ. ಆಟೋ-ಕ್ಯಾಬ್ ಚಾಲಕರ ಪಟ್ಟಿ ಆರ್ ಟಿ ಓ ಹತ್ತಿರ ಇದೆಯಾದರೂ ಅವರ ಬ್ಯಾಂಕ್ ಖಾತೆಗಳ ವಿವರ ಇಲ್ಲ. ಸಿಎಂ ಬಿಎಸ್​ವೈ ಪ್ಯಾಕೇಜ್​ ಘೋಷಣೆ ಮಾಡಿ ದಿನಗಳು ಕಳೆಯುತ್ತಲೇ ಇವೆ. ಆದ್ರೆ ಪ್ಯಾಕೇಜ್​ನ ಹಣ ಫಲಾನುಭವಿಗಳಿಗೆ ತಲುಪೋದಕ್ಕೆ ಇನ್ನು ಎಷ್ಟು ದಿನ ಬೇಕಾಗುತ್ತೋ..? ಈ ಪ್ರಶ್ನೆಗೆ ಸರ್ಕಾರದ ಬಳಿಯೂ ಉತ್ತರವಿದ್ದಂತಿಲ್ಲ.
 
ಭಾರತ ಕೊರೊನಾ ಯುದ್ಧ ಗೆದ್ದಿಲ್ಲ..!
 
ಜಗತ್ತಿನ ಬೇರೆಲ್ಲ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಕೊರೊನಾ ವೈರಸ್​ನ ಆರ್ಭಟ ಅಷ್ಟಾಗಿಲ್ಲ. ಹಾಗಂತ ನಾವೇನು ಕೊರೊನಾ ವಿರುದ್ಧದ ಯುದ್ಧವನ್ನ ಗೆದ್ದಿಲ್ಲ. ಯೂರೋಪ್, ಅಮೆರಿಕ, ರಷ್ಯಾದಲ್ಲಿ ವ್ಯಾಪಕವಾಗಿ ಹರಡುತ್ತಿರೋ ಕೊರೊನಾ ವೈರಸ್ ನಿಧಾನಗತಿಯಲ್ಲಿದೆ ಅಷ್ಟೆ. ವಿಶ್ವದ ಇತರ ದೇಶಗಳಿಗಿಂತ ನಾವೇ ಬೆಸ್ಟ್ ಅಂತ ಹೆಮ್ಮೆ ಪಟ್ಟುಕೊಳ್ಳುತ್ತಿರುವಾಗಲೇ ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿಬಿಟ್ಟಿದೆ. ಸಾವಿನ ಸಂಖ್ಯೆ 3 ಸಾವಿರ ದಾಟಿದೆ. ಇನ್ನೂ ನಾವು ಬೆಸ್ಟ್ ಅಂತ ಸಂಭ್ರಮಿಸೋ ವಾತಾವರಣ ಈಗಿಲ್ಲ. ಮೊದಲ 60 ದಿನದಲ್ಲಿ ದೇಶದಲ್ಲಿ 1635 ಸೋಂಕಿತರಿದ್ದರು. ಆ ನಂತರದ 45 ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿದೆ. ದೇಶದ ಜನಸಂಖ್ಯೆಗೆ ಹೋಲಿಸಿದರೆ ಸೋಂಕಿತರ ಸಂಖ್ಯೆ ಕಡಿಮೆ ಇದೆ ನಿಜ. ಹಾಗಂತ ಕೊರೊನಾ ವಿರುದ್ಧ ಗೆದ್ದೇ ಬಿಟ್ಟೆವು ಎಂದು ಸಂಭ್ರಮಿಸೋ ಸ್ಥಿತಿಯಲ್ಲಿಲ್ಲ.
 
ವಲಸೆ ಕಾರ್ಮಿಕರ ನಿಭಾಯಿಸುವಲ್ಲಿ ಸೋತ ಸರ್ಕಾರ..!
 
20 ಲಕ್ಷ ಕೋಟಿ ಪ್ಯಾಕೇಜ್​ನಲ್ಲಿ ವಲಸೆ ಕಾರ್ಮಿಕರಿಗೆ ಉಚಿತ ಪಡಿತರ ಕೊಡುವ ಘೋಷಣೆಯನ್ನೇನೋ ಸರ್ಕಾರ ಮಾಡಿದೆ. ಆದ್ರೆ ಲಾಕ್ ಡೌನ್ ಘೋಷಣೆಯಾದ ನಂತರ ವಲಸೆ ಕಾರ್ಮಿಕರ ಸಮಸ್ಯೆಯನ್ನ ನಿಭಾಯಿಸೋದ್ರಲ್ಲಿ ಮೋದಿ ಸರ್ಕಾರ ಸೋತಿದೆ ಅನ್ನೋದು ವಾಸ್ತವ. ಲಾಕ್​ಡೌನ್ ಘೋಷಣೆಯಾದ ಕೆಲವೇ ದಿನಕ್ಕೆ ವಲಸೆ ಕಾರ್ಮಿಕರು ದೆಹಲಿಯಲ್ಲಿ ಬೀದಿಗೆ ಬಂದರಲ್ಲ ಆಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಇದ್ದ ಕೆಲಸ ಕಳೆದುಕೊಂಡು ಬರಿಗೈಯಾಗಿದ್ದ ಕಾರ್ಮಿಕರು, ಮಕ್ಕಳು, ಮಹಿಳೆಯರನ್ನ ಕಟ್ಟಿಕೊಂಡು ಸಾವಿರಾರು ಕಿಲೋಮೀಟರ್ ದೂರ ನಡೆಯುವ ಕರುಣಾಜನಕ ದೃಶ್ಯಗಳು ಕಣ್ಣಿಗೆ ರಾಚುವಂತೆ ಓಡಾಡಿದರೂ ಕಾರ್ಮಿಕರಿಗಾಗಿ ಸರ್ಕಾರ ಮಿಡಿಯಲಿಲ್ಲ. ವಲಸೆ ಕಾರ್ಮಿಕರಿಗಾಗಿ ವಿಶೇಷ ರೈಲುಗಳನ್ನ ಓಡಿಸುವ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು.
 
.

ಬೆಂಗಳೂರು ಭೂಗತ ಲೋಕದ ರೋಚಕ ಕಥೆ..! ಜಯರಾಜ್​ ನನ್ನು ಮುತ್ತಪ್ಪ ರೈ ಕೊಂದಿದ್ಯಾಕೆ..?

ಜಯರಾಜ್​ ನನ್ನ ಮುತ್ತಪ್ಪ ರೈ ಕೊಂದಿದ್ಯಾಕೆ..?ಬೆಂಗಳೂರಿನಲ್ಲಿ ಬಂದೂಕಿಗೆ ಬಲಿಯಾದ ಮೊದಲ ಭೂಗತ ಪಾತಕಿ ಎಂ.ಪಿ ಜಯರಾಜ್. ರಾಜ್ಯದಲ್ಲೇ ಮೊದಲಿಗೆ ಪಾತಕಲೋಕದಲ್ಲಿ ಡಾನ್ ಪಟ್ಟವನ್ನ ಗಿಟ್ಟಿಸಿಕೊಂಡವನೂ ಇದೇ ಜಯರಾಜ್. ಇಂಥಾ ಜಯರಾಜ್ ನನ್ನ ಗುಂಡಿಕ್ಕಿ ಕೊಲ್ಲಿಸಿ ನಂತರ ಡಾನ್ ಪಟ್ಟಕ್ಕೇರಿದ್ದು ಮುತ್ತಪ್ಪ ರೈ. ಮಚ್ಚು, ಲಾಂಗುಗಳೇ ಅಬ್ಬರಿಸಿಸುತ್ತಿದ್ದ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಗುಂಡಿನ ಶಬ್ಧ ಕೇಳಿಸಿತ್ತು. ಅದರ ಹಿಂದೆಯೇ ಕೇಳಿಸಿದ್ದು ಮುತ್ತಪ್ಪ ರೈ ಅನ್ನೋ ಹೆಸರು. ಹಾಗೆ ಭೂಗತ ಲೋಕಕ್ಕೆ ಎಂಟ್ರಿಯಾಗಿದ್ದರು ಮುತ್ತಪ್ಪ ರೈ.

ಪುತ್ತೂರಿನಿಂದ ಬೆಂಗಳೂರಿಗೆ ಬಂದು ವಿಜಯಾಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಮುತ್ತಪ್ಪ ರೈ ಆ ಕೆಲಸ ಬಿಟ್ಟು ಬ್ರಿಗೇಡ್ ರಸ್ತೆಯಲ್ಲಿ ಉಮರ್ ಖಯ್ಯಾಂ ಹೆಸರಿನ ಡ್ಯಾನ್ಸ್ ಬಾರ್ ನಡೆಸ್ತಿದ್ರು. 80-90 ರ ದಶಕದಲ್ಲಿ ಹಫ್ತಾ ವಸೂಲಿ, ಡ್ಯಾನ್ಸ್ ಬಾರ್ ದಂಧೆ, ಆಯಿಲ್ ಮಾಫಿಯಾ ಅಂದ್ರೆ ಕಲಬೆರಕೆ ದಂಧೆ, ಸುಫಾರಿ ಕೊಲೆಗಳಿಗೆ ಸೀಮಿತವಾಗಿತ್ತು ಬೆಂಗಳೂರಿನ ಭೂಗತ ಜಗತ್ತು. ರಾಜಧಾನಿಯ ರೌಡಿಸಂಗೆ ಮುಂಬೈನಿಂದ ಹಿಡಿದು ದುಬೈ ವರೆಗೆ ಲಿಂಕ್ ಬೆಳೆಸಿದ್ದು ಮುತ್ತಪ್ಪ ರೈ. ರೈ ನಡೆಸುತ್ತಿದ್ದ ಉಮರ್ ಖಯ್ಯಾಂ ಡ್ಯಾನ್ಸ್ ಬಾರ್ ಗೆ ಹಫ್ತಾ ಕೇಳಲು ಜಯರಾಜ್ ನ ಕಡೆಯ ಹುಡುಗರು ಬರುತ್ತಿದ್ದರು. ಅವತ್ತಿನ ಕಾಲಕ್ಕೆ ಅದು ಮಾಮೂಲಿಯಾಗಿತ್ತು, ರೈ ಕೂಡ ದುಡ್ಡು ಕೊಟ್ಟು ಕಳಿಸಿ ಸುಮ್ಮನಾಗ್ತಿದ್ರು. ಅಲ್ಲಿಯವರೆಗೆ ಜಯರಾಜ್ ಮತ್ತು ಮುತ್ತಪ್ಪ ರೈ ಮಧ್ಯೆ ಯಾವ ದ್ವೇಷವೂ ಇರಲಿಲ್ಲ. ಆ ನಂತರವೂ ಇರಲಿಲ್ಲವಾದರೂ ಜಯರಾಜ್ ನನ್ನ ಕೊಲ್ಲುವ ಹೊಣೆಯನ್ನ ಹೆಗಲೇರಿಸಿಕೊಂಡು ಅದನ್ನ ಡೀಲ್ ಮಾಡಿದ್ದು ಇದೇ ಮುತ್ತಪ್ಪ ರೈ.

ಅವತ್ತಿನ ಕಾಲಕ್ಕೆ ಬೆಂಗಳೂರನ್ನ ಮತ್ತು ಬೆಂಗಳೂರಿನ ಪೊಲೀಸರನ್ನ ನಡುಗಿಸುತ್ತಿದ್ದವನು ರೌಡಿ ಜಯರಾಜ್. ಬೆಂಗಳೂರಿನ ಇಡೀ ಭೂಗತ ಲೋಕವನ್ನ ತನ್ನ ಬೆರಳ ತುದಿಯಲ್ಲಿ ಆಡಿಸಿದವನು ಜಯರಾಜ್. ಇಂಥಾ ಜಯರಾಜ್ ಗೆ ಪೊಲೀಸರ ಮೇಲೆ ಮೂರು ಜನ್ಮಕ್ಕೂ ಮೀರಿದ ದ್ವೇಷವಿತ್ತು. ಪೊಲೀಸರನ್ನ ನಾಯಿಗಳೂ ಅಂತಲೇ ಕರೆಯುತ್ತಿದ್ದ. ಇಂಥಾ ಸಮಯದಲ್ಲೇ ಬೆಂಗಳೂರಿನಲ್ಲಿ ಆಯಿಲ್ ಕುಮಾರ್ ಇಡೀ ಆಯಿಲ್ ದಂಧೆಯನ್ನ ನಿಯಂತ್ರಿಸುತ್ತಿದ್ದ. ಇವತ್ತು ಬಡವರ ಜಮೀನಿಗೆ ಬೇಲಿ ಸುತ್ತಿ ರಿಯಲ್ ಎಸ್ಟೇಟ್ ದಂಧೆ ಮಾಡಿ ದುಡ್ಡು ಮಾಡುವಂತೆ, ಅವತ್ತು ಆಯಿಲ್ ಕಲಬೆರೆಕೆ ದಂಧೆಯಿಂದ ಕೈ ತುಂಬಾ ದುಡ್ಡು ಮಾಡುತ್ತಿದ್ದವನು ಆಯಿಲ್ ಕುಮಾರ್. ಈ ದಂಧೆಯನ್ನ ಹಿಡಿತಕ್ಕೆ ತೆಗೆದುಕೊಳ್ಳೋದಕ್ಕೆ ಜಯರಾಜ್ ಯತ್ನಿಸುತ್ತಿದ್ದ. ಹಫ್ತಾ ವಸೂಲಿ, ಸೇಟು ಮಾರ್ವಾಡಿಗಳಿಂದ ಬರ್ತಿದ್ದ ದುಡ್ಡಿನ ಜತೆಗೆ ಆಯಿಲ್ ಮಾಫಿಯಾವನ್ನೂ ಆಳಲು ಮುಂದಾಗಿದ್ದ ಜಯರಾಜ್. ಆಯಿಲ್ ಮಾಫಿಯಾ ತನ್ನ ಕೈತಪ್ಪಿಬಿಡುತ್ತೆ ಅಂತ ಆಯಿಲ್ ಕುಮಾರ್ ಚಡಪಡಿಸುತ್ತಿದ್ದಾಗಲೇ ಅವನ ಕಣ್ಣಿಗೆ ಬಿದ್ದಿದ್ದು ಇದೇ ಮುತ್ತಪ್ಪ ರೈ. ಜಯರಾಜ್ ಬದುಕಿಗೆ ಫುಲ್ ಸ್ಟಾಪ್ ಹಾಕೋ ನಿರ್ಧಾರಕ್ಕೆ ಬಂದಿದ್ದ ಆಯಿಲ್ ಕುಮಾರ. ಆ ಕಾಲದ ಸ್ಟೂಡೆಂಟ್‌ ಲೀಡರ್‌ ಮತ್ತು ಅಬಕಾರಿ ಕಂಟ್ರಾಕ್ಟರ್‌ ಆಗಿದ್ದ ಅಮರ್‌ ಆಳ್ವಗೆ ಮುಂಬಯಿ ಭೂಗತ ಜಗತ್ತಿನ ಪರಿಚಯವಿತ್ತು. ಅವನೇ ಮುತ್ತಪ್ಪ ರೈಗೆ ಮುಂಬೈ ಭೂಗತ ಜಗತ್ತನ್ನು ಪರಿಚಯಿಸಿದ್ದು. ಮುತ್ತಪ್ಪ ರೈ ಮೂಲಕ ಮುಂಬಯಿ ಶೂಟರ್‌ಗಳನ್ನು ಕರೆಸಿ ಜಯರಾಜ್ ನನ್ನ ಮುಗಿಸಬಹುದು ಅನ್ನೋ ಲೆಕ್ಕಾಚಾರ ಆಯಿಲ್‌ ಕುಮಾರ್‌ದಾಗಿತ್ತು.

ಆಯಿಲ್ ಕುಮಾರನೊಬ್ಬನಿಂದಲೇ ಜಯರಾಜ್ ನನ್ನ ಮುಗಿಸೋದಕ್ಕೆ ಸಾಧ್ಯವೇ ಇರಲಿಲ್ಲ. ಯಾಕಂದ್ರೆ ಅವತ್ತಿಗೆ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಜಯರಾಜ್ ನ ಬೆಂಬಲಿಗರಿದ್ದರು. ಮುತ್ತಪ್ಪ ರೈ ಬಂದೂಕಿನ ಗುಂಡಿನಿಂದ ಜಯರಾಜ್ ಹೆಣವಾಗೋದಕ್ಕೆ ಕಾರಣವಾಗಿದ್ದು ಅದೊಂದು ಮರ್ಡರ್ ಕೇಸ್. ಹೌದು 1987 ರಲ್ಲಿ ಕೇರಳದ ವಕೀಲ ರಶೀದ್ ಎಂಬಾತನನ್ನ ತಮಿಳುನಾಡಿನಲ್ಲಿ ಕೊಲೆ ಮಾಡಲಾಗಿತ್ತು. ಆ ಕೊಲೆ ಕೇಸ್ ನಲ್ಲಿ ಅವತ್ತಿನ ಗೃಹ ಸಚಿವ ಆರ್ ಎಲ್ ಜಾಲಪ್ಪ ಮತ್ತು ಪೊಲೀಸ್ ಅಧಿಕಾರಿಗಳೇ ಭಾಗಿಯಾಗಿದ್ದರು ಅನ್ನೋ ಆರೋಪವಿತ್ತು. ಸಿಬಿಐ ತನಿಖೆಗೆ ಕೋರ್ಟ್ ಆದೇಶ ನೀಡಿತ್ತು. ಪೊಲೀಸರೆಂದರೆ ಕೆಂಡಾಮಂಡಲನಾಗ್ತಿದ್ದ ಜಯರಾಜ್ ಈ ಕೇಸ್ ಅನ್ನ ಬಳಸಿಕೊಂಡು ಪೊಲೀಸರನ್ನ ಹೆಣೆಯಲು ನಿಂತುಬಿಟ್ಟ. ರಶೀದ್ ಕೊಲೆ ಕೇಸ್ ನಲ್ಲಿ ಜಾಲಪ್ಪ, ಡಿಸಿಪಿ ನಾರಾಯಣ್ ಸೇರಿ ಹಲವರು ಅರೆಸ್ಟ್ ಆದ್ರು. ಈ ಕೇಸ್ ನಲ್ಲಿ ಸಾಕ್ಷಿಧಾರರ ಬೆನ್ನಿಗೆ ನಿಂತು ಸಿಬಿಐ ಕೋರ್ಟ್ ನಲ್ಲಿ ಸಾಕ್ಷಿ ಹೇಳಿಸುವ ಜವಾಬ್ದಾರಿ ಹೊತ್ತುಕೊಂಡಿದ್ದ ಜಯರಾಜ್. ಯಾವಾಗ ಪೊಲೀಸರ ವಿರುದ್ಧವೇ ಜಯರಾಜ್ ನಿಂತನೋ ಆಗಲೇ ಅವನ ಕೊನೆಯ ದಿನಗಳೂ ಹತ್ತಿರವಾದವು.

ಜಯರಾಜ್ ನನ್ನ ವಿರೋಧಿಸುತ್ತಿದ್ದ ಆಯಿಲ್ ಕುಮಾರನ ಗ್ಯಾಂಗು ಮತ್ತು ಜಯರಾಜ್ ನನ್ನ ವಿರೋಧಿಸುತ್ತಿದ್ದ ಪೊಲೀಸ್ ಟೀಂ ಒಂದಾಯ್ತು. ಈ ಎರಡೂ ಟೀಂಗೆ ಕೊಂಡಿಯಾಗಿದ್ದು ಮುತ್ತಪ್ಪ ರೈ. ಜಯರಾಜ್ ನನ್ನ ಕೊಲ್ಲುವ ಗಂಡು ಬೆಂಗಳೂರಲ್ಲೇ ಇಲ್ಲ ಅಂತ ಪೊಲೀಸ್ ಅಧಿಕಾರಿಯೊಬ್ಬ ಹೇಳಿದಾಗ, ಯಾಕೆ ಅವನ ಮೈಯಲ್ಲಿ ಗುಂಡು ಇಳಿಯುವುದಿಲ್ಲವಾ ಎಂದು ಗುಂಡು ಹೊಡೆದಂತೆ ಮಾತನಾಡಿದ್ದು ಇದೇ ಮುತ್ತಪ್ಪ ರೈ. ಆ ನಂತರವೇ ನಡೆದದ್ದು ಜಯರಾಜ್ ಮೇಲಿನ ಎರಡು ಹತ್ಯಾ ಪ್ರಯತ್ನಗಳು, ಮತ್ತು ಮೂರನೇ ಸಕ್ಸಸ್ ಫುಲ್ ಆಪರೇಷನ್.

1989ರ ಸೆಪ್ಟೆಂಬರ್‌ ಕೊನೆಯಲ್ಲಿ ಈಗಿನ ಫ್ರೀಡಂ ಪಾರ್ಕ್ ಬಳಿಯಿದ್ದ ಅವತ್ತಿನ ಸೆಂಟ್ರಲ್ ಜೈಲಿನ ಮುಂದೆ ಜಯರಾಜ್‌ ಮೇಲೆ ಮೊದಲ ದಾಳಿ ನಡೆದಿತ್ತು. ಕಾಟನ್‌ಪೇಟೆ ಪುಷ್ಪ, ಬೆಕ್ಕಿನಕಣ್ಣು ರಾಜೇಂದ್ರ, ಚಕ್ರೆ ಟೀಂ ನಡೆಸಿದ್ದ ದಾಳಿಯನ್ನು ಹಿಮ್ಮೆಟ್ಟಿಸಿ ಜಯರಾಜ್‌ ಬಚಾವಾಗಿದ್ದ. ಮಚ್ಚು ಲಾಂಗ್ ಗಳಿಂದ ಜಯರಾಜ್ ನನ್ನ ಕೊಲ್ಲೋದು ಸಾಧ್ಯವೇ ಇಲ್ಲ ಅಂತ ರೈ ಗೆ ಅರ್ಥವಾಗಿತ್ತು. ಮೊದಲ ದಾಳಿ ಬಳಿಕ ಜಯರಾಜ್ ಬೆಂಗಳೂರು ಸೆಂಟ್ರಲ್ ಜೈಲಿನಿಂದ ಮೈಸೂರು ಜೈಲಿಗೆ ಶಿಫ್ಟ್ ಆಗಿದ್ದ. ಮೈಸೂರಿನ ಕೆಆರ್ ಆಸ್ಪತ್ರೆಯ ಜೈಲ್ ವಾರ್ಡ್ ನಲ್ಲಿದ್ದ ಜಯರಾಜ್ ಮೇಲೆ ಮುಂಬೈನಿಂದ ಬಂದಿದ್ದ ಶೂಟರ್ ಗಳು ಗುಂಡಿನ ದಾಳಿ ನಡೆಸಿದ್ರು. ಅವತ್ತಿನ ಮಟ್ಟಿಗೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಬಂದೂಕುಗಳು ಅಬ್ಬರಿಸಿದ್ದವು. ಜೈಲ್‌ ವಾರ್ಡ್‌ನಲ್ಲೇ ಕೈ ಬಾಂಬ್‌ಗಳನ್ನು ಇಟ್ಟುಕೊಂಡಿದ್ದ ಜಯರಾಜ್‌ ಅವುಗಳನ್ನೆಸೆದಯ ಬಚಾವ್ ಆಗಿಬಿಟ್ಟ. ಈ ದಾಳಿಯಲ್ಲಿ ಬೆಂಗಳೂರಿನ ಯಾವ ರೌಡಿಗಳೂ ಭಾಗಿಯಾಗಿರಲಿಲ್ಲ. ಮುಂಬೈ ಶೂಟರ್ ಗಳು ಜಯರಾಜ್ ನನ್ನ ಮುಗಿಸಲು ಬಂದಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಾಗ ಅದರ ಬೆನ್ನ ಹಿಂದೆ ಕೇಳಿಸಿದ್ದ ಮುತ್ತಪ್ಪ ರೈ ಹೆಸರು.

ತನ್ನ ಮೇಲೆ ಎರಡು ದಾಳಿಯಾದರೂ ಜಯರಾಜ್ ಎಂಎಲ್ ಎ ಆಗುವ ಉಮೇದಿಯಲ್ಲಿದ್ದ. ಎಂಎಲ್ ಎ ಆಗಿಬಿಡುವ ತನ್ನನ್ನ ಮುಟ್ಟೋರು ಯಾರಿದ್ದಾರೆ ಅನ್ನೋ ಹುಂಬತನ. ಈ ಹುಂಬತನವೇ ಜಯರಾಜ್ ಗೆ ಮುಳುವಾಗಿತ್ತು. ಎಲೆಕ್ಷನ್ ಗೆ ನಿಲ್ಲೋದಕ್ಕೆ ಅಂತ ಜಾಮೀನಿನ ಮೇಲೆ ಜಯರಾಜ್ ಹೊರಗೆ ಬಂದ. ಜಾಮೀನಿನ ಷರತ್ತಿನಂತೆ ಜಯರಾಜ್‌ ಪ್ರತೀ ದಿನ ಸಿದ್ದಾಪುರ ಪೊಲೀಸ್ ಠಾಣೆಗೆ ಬಂದು ಸಹಿ ಮಾಡಿ ಹೋಗಬೇಕಿತ್ತು. ಅವತ್ತಿಗೆ ಜಯರಾಜ್ ಗೆ ನೀಡಲಾಗಿದ್ದ ಜಾಮೀನಿನ ಅವಧಿ ಮುಗಿದಿತ್ತು. ಮಾರನೆಯ ದಿನ ಜೈಲಿಗೆ ಹೋಗಬೇಕಾಗಿತ್ತು. 1989ರ ನ.21 ನೇ ತಾರೀಕು ಪೊಲೀಸ್ ಸ್ಟೇಷನ್ ಗೆ ಬಂದು ಸಹಿ ಮಾಡಿ ವಾಪಸಾಗುವಾಗ ಲಾಲ್‌ಬಾಗ್‌ನ ಸಿದ್ದಾಪುರ ಗೇಟ್‌ ಎದುರಿಗೇ ಜಯರಾಜ್‌ ಮೇಲೆ ಮೂರನೇ ದಾಳಿ ನಡೆಯಿತು. ವಕೀಲ ವರ್ಧಮಾನಯ್ಯ ಮತ್ತು ಜಯರಾಜ್‌ ಗುಂಡಿಗೆ ಬಲಿಯಾದರು. ಈ ಬಾರಿ ಬಂದಿದ್ದವರು ಮುಂಬೈನ ಮಾಮೂಲಿ ಶೂಟರ್‌ಗಳಲ್ಲ, ಶಾರ್ಪ್‌ ಶೂಟರ್‌ಗಳು. ಅಲ್ಲಿಗೆ ಬೆಂಗಳೂರನ್ನ ನಡುಗಿಸಿದ್ದ ಮೊದಲ ಡಾನ್ ಜಯರಾಜ್ ನ ಹೆಣ ಉರುಳಿತ್ತು. ಅಲ್ಲಿ ಮತ್ತೊಬ್ಬ ಡಾನ್ ಉದಯಿಸಿದ್ದ ಆತನೇ ಮುತ್ತಪ್ಪ ರೈ. ಜಯರಾಜ್‌ ಕೊಲೆ, ಮುತ್ತಪ್ಪ ರೈ ಹೆಸರನ್ನು ಇಡೀ ಕರ್ನಾಟಕ ಮತ್ತು ಮುಂಬೈ ವರೆಗೂ ಕರೆದುಕೊಂಡು ಹೋಯ್ತು. ಅದುವರೆಗೂ ರೌಡಿ ಜಗತ್ತಿಗೆ ಮಾತ್ರ ಗೊತ್ತಿದ್ದ ರೈ ಹೆಸರು ಇಲ್ಲಿಂದ ಮುಂದಕ್ಕೆ ದಾವೂದ್‌ ಇಬ್ರಾಹಿಂವರೆಗೂ ತಲುಪಿಬಿಟ್ಟಿತು.

ಮುತ್ತಪ್ಪ ರೈ ಇನ್ನಿಲ್ಲ..! ಹೇಗಿದ್ದವು ಗೊತ್ತಾ ಮುತ್ತಪ್ಪ ರೈ ಕೊನೆಯ ದಿನಗಳು..?

ಮುತ್ತಪ್ಪ ರೈ ಕಡೆಯ ದಿನಗಳುಮಾಜಿ ಡಾನ್, ಸಮಾಜ ಸೇವಕ, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಅನ್ನ ನಾಳದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮುತ್ತಪ್ಪ ರೈ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮುತ್ತಪ್ಪ ರೈಗೆ ಅಂಟಿದ್ದ ಕ್ಯಾನ್ಸರ್ ಅಂತಿಮ ಹಂತ ತಲುಪಿದ್ದರಿಂದಾಗಿ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ರು. ಚಿಕಿತ್ಸೆ ಫಲಕಾರಿಯಾಗದೇ ರೈ ಕೊನೆಯುಸಿರೆಳೆದಿದ್ದಾರೆ. ಮೂರು ತಿಂಗಳ ಹಿಂದೆ ಮಾಧ್ಯಮಗಳ ಮುಂದೆ ಬಂದು ತಮಗೆ ಕ್ಯಾನ್ಸರ್ ಬಂದಿದೆ ಅನ್ನೋ ವಿಚಾರವನ್ನ ಬಹಿರಂಗಪಡಿಸಿದ್ದರು. ವೈದ್ಯರು ಸಾಯುತ್ತೇನೆ ಎಂದು ಹೇಳಿದ್ದಾರೆ.. ಆದರೆ ನಾನು ಸಾವಿಗೆ ಹೆದರೋದಿಲ್ಲ ಎಂದು ಹೇಳಿದ್ದರು. ಆದ್ರೀಗ ಕ್ಯಾನ್ಸರ್ ಮುತ್ತಪ್ಪ ರೈ ಅವರ ಜೀವವನ್ನ ಬಲಿ ಪಡೆದುಬಿಟ್ಟಿದೆ. ಕ್ಯಾನ್ಸರ್ ವಿರುದ್ಧ ಕೊನೇ ಕ್ಷಣದವರೆಗೂ ಹೋರಾಡಿದ ಮುತ್ತಪ್ಪ ರೈ ಇನ್ನು ನೆನಪು ಮಾತ್ರ.

ಅಪಾರ ಅಭಿಮಾನಿಗಳು, ದೊಡ್ಡ ಕುಟುಂಬದವನ್ನ ಬಿಟ್ಟು ಮುತ್ತಪ್ಪ ರೈ ಹೊರಟು ಹೋಗಿದ್ದಾರೆ. ಮುತ್ತಪ್ಪ ರೈ ಅನ್ನೋ ವರ್ಣರಂಜಿತ ಬದುಕಿನ ಕಥೆ ಇಲ್ಲಿಗೆ ಮುಕ್ತಾಯವಾಗಿದೆ. ಮುತ್ತಪ್ಪ ರೈ ಅನ್ನೋ ಕಲರ್ ಫುಲ್ ಪರ್ಸನಾಲಿಟಿ ಇನ್ನು ನೆನಪು ಮಾತ್ರ. ತಾವು ಆಪ್ತವಾಗಿ ಪ್ರೀತಿಸ್ತಿದ್ದ ಬಿಡದಿಯ ಮನೆ, ಸಕಲೇಶಪುರದ ತೋಟ, ಬೆಂಗಳೂರಿನ ಸದಾಶಿವನಗರದ ಅಪಾರ್ಟ್ ಮೆಂಟು, ಸಾವಿರಾರು ಕೋಟಿ ಆಸ್ತಿ ಎಲ್ಲವನ್ನೂ ಬಿಟ್ಟು ಹೋಗಿದ್ದಾರೆ ಮುತ್ತಪ್ಪ ರೈ. ಕಳೆದ ಐದಾರು ತಿಂಗಳಿಂದ ಮುತ್ತಪ್ಪ ರೈ ಹೆಚ್ಚು ಕಾಲ ಆಸ್ಪತ್ರೆಯಲ್ಲೇ ದಿನ ಕಳೆದಿದ್ರು. ಅಂಡರ್ ವರ್ಲ್ಡ್ ನ ಕಠೋರ ದಿನಗಳಿಗಿಂತ ಕ್ಯಾನ್ಸರ್ ನೊಂದಿಗಿನ ಹೋರಾಟವೇ ಅವರನ್ನ ಹೈರಣಾಗಿಸಿತ್ತು.

ದಶಕಗಳ ಕಾಲ ವಿದೇಶದಲ್ಲೇ ಇದ್ದು ಭಾರತದ ಭೂಗತ ಲೋಕವನ್ನ ನಿಯಂತ್ರಿಸಿದ್ದ ಡಾನ್ ನಂತ್ರ ತಮ್ಮ ರೌಡಿಸಂ ಚಟುವಟಿಕೆಯಿಂದ ವಿಆರ್ ಎಸ್ ಪಡೆದಿದ್ರು. ಕ್ಯಾನ್ಸರ್ ವಿರುದ್ಧ ಹೋರಾಡ್ತಿದ್ದ ಮುತ್ತಪ್ಪ ರೈ ಕೊನೆ ದಿನಗಳಲ್ಲಿ ಸಾವಿನ ದಿನವನ್ನ ಮುಂದೆ ಹಾಕೋದಕ್ಕೆ ಇನ್ನಿಲ್ಲದ ಪ್ರಯತ್ನ ನಡೆಸಿದ್ರು. ಆದ್ರೆ ಸಾವು ಅವರ ಬದುಕಿನಲ್ಲಿ ತುಂಬಾ ದಿನಗಳ ಕಾಲ ಅಂದರ್ ಬಾಹರ್ ಆಟವಾಡಿತ್ತು. ಮುತ್ತಪ್ಪ ರೈಗೆ ಕೂಡಾ ಸಾವಿನ ದಿನಗಳು ಸಮೀಪಿಸುತ್ತಿದ್ದ ಸಮಯದಲ್ಲಿ ವಿಧಿ ಯಾಕೆ ನನ್ನನ್ನ ಹೀಗೆಲ್ಲಾ ಆಡಿಸುತ್ತಿದೆ ಅಂತ ಅಂದುಕೊಂಡಿದ್ರು. ಮುತ್ತಪ್ಪ ರೈ ಅಂದ್ರೇನೆ ಗಟ್ಟಿಮುಟ್ಟಿನ ದೇಹ, ತಮ್ಮದೇ ಖದರ್, ತಮ್ಮದೇ ಸ್ಟೈಲ್, ಆತ್ಮ ವಿಶ್ವಾಸದ ನಡೆ, ಅವರ ಹಿಂದೆ ಹುಡುಗರ ದಂಡು. ಆದ್ರೆ ಅವತ್ತು ಪ್ರೆಸ್ ಮೀಟ್ ನಲ್ಲಿ ಮುತ್ತಪ್ಪ ರೈ ಅವರನ್ನ ನೋಡಿದವರಿಗೆ ತುಂಬಾ ದಿನ ಇವರು ಬದುಕೋದಿಲ್ಲ ಅನ್ನಿಸಿತ್ತು. ಮುತ್ತಪ್ಪ ರೈ ಕೂಡ ಅದನ್ನೇ ಹೇಳಿದ್ರು.

ಮುತ್ತಪ್ಪ ರೈ ಇದ್ದಕ್ಕಿದ್ದ ಹಾಗೆ ಕಳೆದ ವರ್ಷ ನಾಪತ್ತೆಯಾಗಿದ್ರು. ಎಲ್ಲಿದ್ದಾರೆ ಏನು ಮಾಡ್ತಿದ್ದಾರೆ ಅನ್ನೋದು ಯಾರಿಗೂ ಗೊತ್ತೇ ಇರಲಿಲ್ಲ. ನಂತ್ರ ವಿಷಯ ಗೊತ್ತಾದಾಗ ಕ್ಯಾನ್ಸರ್ ಅನ್ನೋ ಮಾರಕ ಖಾಯಿಲೆ ಗಟ್ಟಿಗುಂಡಿಗೆಯ ರೈ ಅನ್ನ ಕರಗಿಸ್ತಿದೆ ಅನ್ನೋದು ಗೊತ್ತಾಗಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬರ್ತಿದ್ದ ಹಾಗೆ ರೈ ಮಾಧ್ಯಮಗಳನ್ನ ಕರೆದು ಸುದ್ದಿಗೋಷ್ಠಿ ನಡೆಸಿದ್ರು. ಸಾವು, ಬದುಕು, ಪ್ರೀತಿಯ ಬಗ್ಗೆ ಮಾಜಿ ಡಾನ್ ಸಂತನಂತೆ ಮಾತನಾಡಿದ್ರು. ಇವ್ರೇನಾ ಅಂಡರ್ ವರ್ಲ್ಡ್ ನ ಡಾನ್ ಅಂತ ಅನುಮಾನ ಮೂಡಿಸುವಷ್ಟು ಅಧ್ಯಾತ್ಮದ ಬಗ್ಗೆ ಮಾತನಾಡಿದ್ರು.

ಆಸ್ತಿ,ಹಣ ಇವೆಲ್ಲಾ ಇವತ್ತಿಗೆ ಯಾವುದು ನನ್ನದಲ್ಲ ಅನ್ನೋದನ್ನ ಕೊನೆ ಕ್ಷಣದಲ್ಲಿ ಅವರೇ ಒಪ್ಪಿಕೊಂಡಿದ್ರು.  ಸಾವಿರಾರು ಕೋಟಿ ರೂಪಾಯಿ ಆಸ್ತಿಯ ಒಡೆಯ ಒಮ್ಮೆಲೇ ಬುದ್ಧನಂತಾಗಿ ಹೋಗಿದ್ದ. ಅವತ್ತಿನ ಪ್ರೆಸ್ ಮೀಟ್ ಆದ ನಂತರ ಟಿವಿ ಚಾನಲ್ಲುಗಳಿಗೆ ಸಂದರ್ಶನ ಕೊಟ್ಟ ಮುತ್ತಪ್ಪ ರೈ ಆಮೇಲೆ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳಲೇ ಇಲ್ಲ. ರೈ ಅನಾರೋಗ್ಯದ ಬೆನ್ನಲ್ಲೆ, ಸಾವಿನ ದಾರಿಯಲ್ಲಿ ನಡೆಯುವಾಗ್ಲೇ ಆಸ್ತಿ ವಿಚಾರವಾಗಿ ಎಲ್ಲಾ ಪ್ರೋಸೆಸ್ ನಡೆಸೋದಕ್ಕೆ ಶುರುಮಾಡಿದ್ರು. ಆಗ್ಲೇ ಅವರೊಳಗೆ ಬುದ್ಧನ ಜೊತೆ ಇನ್ನೊಬ್ಬ ರೌಡಿ ಇದ್ದಾನೆ ಅನ್ನೋದು ಗೊತ್ತಾಗಿತ್ತು. ಜೊತೆಗಿದ್ದವರ ಮರ್ಡರ್ ಸುಪಾರಿ ಕೇಸ್ ಜೀವನದ ಕೊನೇ ಹಂತದಲ್ಲಿ ಅವರನ್ನ ಇನ್ನಷ್ಟು ಹಿಂಡಿ ಹಿಪ್ಪೆ ಮಾಡಿ ಹಾಕಿತ್ತು. ಅದರ ನಡುವಲ್ಲೇ ರೈ ಅವರನ್ನ ಸಿಸಿಬಿ ಪೊಲೀಸ್ರು ವಿಚಾರಣೆ ನಡೆಸಿದ್ರು.  ಅದಾದ ಕೆಲ ದಿನಗಳಿಗೆ ರೈ ಮೃತಪಟ್ಟಿದ್ದಾರೆ ಅನ್ನೋ ಸುಳ್ಳುಸುದ್ದಿ ಹರಡೋದಕ್ಕೆ ಶುರುವಾಗಿತ್ತು. ಆಗ ರೈ ತಮ್ಮ ಸೋದರಿ ಜತೆ ಚೆಸ್ ಆಡ್ತಿದ್ದ ಪೋಟೋವೊಂದನ್ನ ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟು ರೈ ಸಾವಿನ ಸುದ್ದಿಗಳಿಗೆ ಫುಲ್ ಸ್ಟಾಪ್ ಹಾಕಿದ್ರು.  ಕೊನೆಯ ದಿನಗಳಲ್ಲಾದರೂ ಎಲ್ಲ ಜಂಜಾಟಗಳಿಂದ ದೂರವಿದ್ದು ನೆಮ್ಮದಿಯಾಗಿ ಕಳೆಯಬೇಕು ಅಂದುಕೊಂಡಿದ್ದ ಮುತ್ತಪ್ಪ ರೈಗೆ ಅದು ಸಾಧ್ಯವಾಗಲೇ ಇಲ್ಲ.

ಕಡೆಯ ದಿನಗಳಲ್ಲಿ ಸಾವಿಗೆ ನಾನು ಹೆದರೋದಿಲ್ಲ ಅಂದಿದ್ದ ಮುತ್ತಪ್ಪ ರೈ ಸಾವನ್ನ ತಪ್ಪಿಸಿಕೊಳ್ಳೋದಕ್ಕೆ ಏನೆಲ್ಲಾ ಮಾಡಬೇಕೋ ಎಲ್ಲ ಪ್ರಯತ್ನಗಳನ್ನೂ ಮಾಡಿಬಿಟ್ಟರು. ಯುವರಾಜ್ ಸಿಂಗ್ ಗೆ ಕ್ಯಾನ್ಸರ್ ಚಿಕಿತ್ಸೆ ನೀಡಿದ ವೈದ್ಯರಿಂದ ಹಿಡಿದು, ಪ್ರಖ್ಯಾತ ವೈದ್ಯರ ಬಳಿಗೆಲ್ಲಾ ಹೋಗಿಬಂದ್ರು. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲೂ ಏರ್ ಆ್ಯಂಬ್ಯುಲೆನ್ಸ್ ಮಾಡಿಕೊಂಡು ಗುಜರಾತ್ ನ ಅಹಮದಾಬಾದ್ ಗೆ ಹೋಗಿಬಂದ್ರು. ಆದ್ರೆ ಅಲ್ಲಿ ಟ್ರೀಟ್ ಮೆಂಟ್ ಸಿಗದೇ ಬೆಂಗಳೂರಿಗೆ ವಾಪಸ್ ಆಗಿ ಮಣಿಪಾಲ್ ಆಸ್ಪತ್ರೆಗೆ ಅಡ್ಮಿಟ್ ಆಗಿದ್ರು.

ಮುತ್ತಪ್ಪ ರೈ ಹುಟ್ಟು ಹೋರಾಟಗಾರ. ಮೂರು ಗುಂಡುಗಳು ಎದೆಯನ್ನ ಸೀಳಿದ್ರು ಸಾವನ್ನ ಗೆದ್ದು ಬಂದಿದ್ರು. ಬದುಕಿರೋ ವೇಳೆ ಎಲ್ಲವನ್ನ ಕಂಡಿದ್ದ ಅವರನ್ನ ಕ್ಯಾನ್ಸರ್ ಹೆಚ್ಚು ಹೆದರಿಸಿತ್ತು. ಬಹಿರಂಗವಾಗಿ ತಾನು ಎದೆಗುಂದಿದ್ದೇನೆ ಅನ್ನೋದನ್ನ ರೈ ತೋರಿಸಿಕೊಳ್ಳದೇ ದೈರ್ಯವಾಗಿಯೇ ಇದ್ದರು. ದಿನದಿಂದ ದಿನಕ್ಕೆ ಕುಗ್ಗಿಹೋಗುತ್ತಿದ್ದ ದೇಹ, ಮಾನಸಿಕ ಜರ್ಜರಿತ ಎಲ್ಲವೂ ಅವರನ್ನ ಇನ್ನಿಲ್ಲದಂತೆ ಕಾಡಿತ್ತು. ಸಾಮಾಜಿಕವಾಗಿ ತಮ್ಮದೇ ಆತ ವರ್ಚಸ್ಸನ್ನ ಬೆಳೆಸಿಕೊಂಡಿದ್ದ ಮುತ್ತಪ್ಪ ರೈ ಅವರಿಗೆ ಸಾವಿನ ಸಮಯದಲ್ಲಿನ ಸನ್ನಿವೇಶಗಳು ಬದುಕಿನ ನಿಜ ದರ್ಶನವನ್ನ ಮಾಡಿಸಿತ್ತು. ಆದ್ರೆ ಎಲ್ಲೂ ರೈ ತಮ್ಮ ಆತ್ಮವಿಶ್ವಾಸವನ್ನ ಬಿಟ್ಟುಕೊಡಲಿಲ್ಲ. ಕಣ್ಣು ಮುಂದಿರೋ ಸಾವು, ದಕ್ಕಿದ್ದಷ್ಟೇ ಪ್ರೀತಿ, ಬದುಕಿದ್ದಷ್ಟೇ ಜೀವನ ಅನ್ನೋ ಬ್ರಹ್ಮಾಂಡ ಸತ್ಯವನ್ನ ಅರ್ಥ ಮಾಡಿಸಿತ್ತು. ಕೊನೆಗೆ ಕ್ಯಾನ್ಸರ್ ರೋಗ ಮುತ್ತಪ್ಪ ರೈ ಅವರನ್ನ ಇನ್ನೊಂದು ಪ್ರಪಂಚಕ್ಕೆ ಕರ್ಕೊಂಡು ಹೋಗಿದೆ.

ಭೂಗತ ಲೋಕದಿಂದ ಹೊರಬಂದು ಸಮಾಜ ಸೇವಕನ ಇಮೇಜ್ ಕಟ್ಟಿಕೊಳ್ಳೋದು ಅಸಾಧ್ಯ. ಆದ್ರೆ ಈ ಅಸಾಧ್ಯವಾದುದನ್ನ ರೈ ಸಾಧಿಸಿ ತೋರಿಸಿದರು. ಸಾಯೋ ಕೊನೆಕ್ಷಣದವರೆಗೂ ದಾನ ಧರ್ಮಗಳಲ್ಲಿ ನಿರತರಾಗಿದ್ದ ರೈ, ಕರಾಳ ಜಗತ್ತಿನ ವ್ಯಕ್ತಿಯೊಬ್ಬ ವ್ಯಕ್ತಿತ್ವವನ್ನ ಬದಲಿಸಿಕೊಂಡು ಬದುಕಬಹುದು ಅನ್ನೋದನ್ನ ತೋರಿಸಿ ಹೋಗಿದ್ದಾರೆ.

 

%d bloggers like this: