ಶಬರಿಮಲೆಗೆ ಸ್ತ್ರೀ ಪ್ರವೇಶ, ಹಿಂದೂ ಧರ್ಮದ ವಿರುದ್ಧ ಷಡ್ಯಂತ್ರ ಅನ್ನುವವರು ಇಲ್ಲಿ ನೋಡಿ…

ಶಬರಿಮಲೆಯ ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರ ಪ್ರವೇಶದಿಂದ ಹಿಂದೂ ಧರ್ಮಕ್ಕೆ ಅಪಚಾರವಾಯ್ತು, ಅಯ್ಯಪ್ಪನ ಸನ್ನಿಧಿಯ ಪಾವಿತ್ರ್ಯತೆ ಹಾಳಾಯ್ತು, ಇದು ಹಿಂದೂ ಧರ್ಮದ ವಿರುದ್ಧದ ಷಡ್ಯಂತ್ರ ಎಂದೆಲ್ಲ ಕನವರಿಸುತ್ತಿರುವವರಲ್ಲಿ, ನೊಂದುಕೊಳ್ಳಿತ್ತಿರುವವರಿಗೆ ಒಂದು ಮನವಿ. ಅದೇ ದೇಗುಲದಲ್ಲಿ ಈಗಾಗಲೇ ಹಲವು ಮಹಿಳೆಯರು ಅಯ್ಯಪ್ಪನ ದರ್ಶನ ಪಡೆದವರಿದ್ದಾರೆ. ಸ್ವಾತಂತ್ರಾ ಪೂರ್ವದಲ್ಲಿ ಮತ್ತು ನಂತರದಲ್ಲಿ ಟ್ರವಾಂಕೂರು ರಾಜಮನೆತನದ ರಾಣಿಯರು ದೇವಸ್ಥಾನಕ್ಕೆ ಬಂದು ಹೋಗುತ್ತಿದ್ದ ಬಗ್ಗೆ ಇತಿಹಾಸದಲ್ಲಿ ಉಲ್ಲೇಖಗಳಿವೆ. 1986ರಲ್ಲಿ ಬಂದ ನಂಬಿನಾರ್ ಕೆಡುವತ್ತಿಲ್ಲೈ ಅನ್ನೋ ಸಿನಿಮಾದಲ್ಲಿ ನಾಯಕ ನಟಿ ಅಯ್ಯಪ್ಪನ ಸನ್ನಿಧಾನದಲ್ಲಿ ದೇವರ ದರ್ಶನ ಪಡೆದ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. 1820ರ ಕಾಲದ ಕೆಲವು ಬ್ರಿಟಿಷ್ ದಾಖಲೆಗಳಲ್ಲಿ ಈ ದೇವಸ್ಥಾನಕ್ಕೆ ಮಹಿಳೆಯರು ಬರುವುದಿಲ್ಲ ಎಂದು ಉಲ್ಲೇಖಿಸಲಾಗಿದೆ. ಹಾಗಂತ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧವಿದೆ ಅಂತೇನೂ ಅಲ್ಲಿ ಹೇಳಿಲ್ಲ. ರಸ್ತೆ ಸಂಪರ್ಕವಿಲ್ಲದ ಆ ದಟ್ಟ ಕಾಡಿನ ಮಧ್ಯೆ ಇರುವ ದೇವಸ್ಥಾನಕ್ಕೆ ಆ ಕಾಲದಲ್ಲಿ ಮಹಿಳೆಯರು ತಿಂಗಳುಗಟ್ಟಲೆ ನಡೆದು ಹೋಗಲು ಸಾಧ್ಯ ವಿಲ್ಲ ಅನ್ನೋ ಕಾರಣಕ್ಕೆ ಹೋಗುತ್ತಿರಲಿಲ್ಲವೇನೋ.. ಅಥವಾ ಕಾಡಿನ ಮಧ್ಯೆ ಹೋಗುವಾಗ ಮುಟ್ಟಾದರೆ ಕಷ್ಟ ಎಂಬ ಕಾರಣಕ್ಕೋ ಮಹಿಳೆಯರು ಹೋಗದಿರುವ ಸಾಧ್ಯತೆಗಳಿವೆ. ಅದೇ ಕಾರಣಕ್ಕೋ ಏನೋ ಋತು ಚಕ್ರದ ವಿಷಯ ಶಬರಿಮಲೆಯಲ್ಲಿ ಸಂಘರ್ಷ ಸೃಷ್ಟಿಗೆ ಕಾರಣವಾಗಿರಬಹುದು.

1970ರ ನಂತರ ಶಬರಿಮಲೆಗೆ ಉತ್ತಮವಾದ ರಸ್ತೆ ಸಂಪರ್ಕ ನಿರ್ಮಾಣವಾಯಿತು. ಆ ನಂತರ ಮಹಿಳೆಯರು ಬರಲಾರಂಭಿಸಿದಾಗ ಶುರುವಾಗಿದ್ದು ಇಷ್ಟೆಲ್ಲ ಹಗ್ಗ ಜಗ್ಗಾಟ. 1990ರಲ್ಲಿ ಟ್ರವಾಂಕೂರ್ ದೇವಸ್ವಂ ಮಂಡಳಿ ಮಾಜಿ ಕಮಿಷನರ್ ಆಗಿದ್ದ ಚಂದ್ರಿಕಾ ತಮ್ಮ ಮೊಮ್ಮಗುವಿಗೆ ಮೊದಲ ಅನ್ನದ ತುತ್ತು ತಿನ್ನಿಸುವ ಕಾರ್ಯಕ್ರಮ ಮಾಡಿದ್ದು ಅಲ್ಲೇ. ಈ ವೇಳೆ ಚಂದ್ರಿಕಾ ಅವರ ಮಗಳೂ ಕೂಡ ಅಯ್ಯಪ್ಪನ ಸನ್ನಿಧಾನದಲ್ಲೇ ಇದ್ರು. ಇದರ ಫೋಟೋ ಆಗಸ್ಟ್ 19, 1990 ರಲ್ಲಿ ಜನ್ಮಭೂಮಿ ಅನ್ನೋ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಫೋಟೋ ನೋಡಿದ ಮಹೇಂದ್ರನ್ ಅನ್ನೋ ಅಯ್ಯಪ್ಪನ ಭಕ್ತ ಕೇರಳ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದ. ಆಗ ಟ್ರವಾಂಕೂರ್ ದೇವಸ್ವಂ ಬೋರ್ಡ್ ಮತ್ತು ಅಯ್ಯಪ್ಪ ಸೇವಾ ಸಂಘಂ ಹೈಕೋರ್ಟ್ ಗೆ ಒಂದು ಅಫಿಡೆವಿಟ್ ಸಲ್ಲಿಸಿದ್ದವು. ಯುವತಿಯರು, ನವ ದಂಪತಿಗಳು ಸೇರಿದಂತೆ ಎಲ್ಲ ವಯಸ್ಸಿನ ಮಹಿಳೆಯರೂ ಅಯ್ಯಪ್ಪನ ದೇವಸ್ಥಾನಕ್ಕೆ ಬರುತ್ತಾರೆ ಅಂದಿತ್ತು ಆ ಅಫಿಡೆವಿಟ್. 1940ರಲ್ಲಿ ನನ್ನ ತಾಯಿಯ ಮಡಿಲಲ್ಲಿ ಮಲಗಿ ನನ್ನ ಮೊದಲ ತುತ್ತು ತಿನ್ನುವ ಕಾರ್ಯಕ್ರಮ ಅಯ್ಯಪ್ಪನ ಸನ್ನಿಧಿಯಲ್ಲಿ ನಡೆದಿತ್ತು ಅನ್ನೋದನ್ನ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲಹೆಗಾರರಾಗಿದ್ದ ಟಿಕೆಎಸ್ ನೈಯರ್ ಬಹಿರಂಗವಾಗಿ ಹೇಳಿಯೇ ಹಲವು ವರ್ಷಗಳಾಗಿವೆ. ಆದ್ರೆ 1991 ರಲ್ಲಿ ಬಂದ ಕೇರಳ ಹೈಕೋರ್ಟ್ ಆದೇಶ 10 ರಿಂದ 50 ವರ್ಷದ ಮಹಿಳೆಯರ ಪ್ರವೇಶ ನಿರ್ಬಂಧಕ್ಕೆ ಕಾನೂನಿನ ಮಾನ್ಯತೆ ನೀಡಿತ್ತು. ಅದಾದ ಮೇಲೆ ಅಷ್ಟಮಂಗಲ ಪ್ರಶ್ನೆ ಅನ್ನೋ ಪೂಜೆಯಲ್ಲಿ ಮಹಿಳಾ ಪ್ರವೇಶವಾಗಿದೆ ಅನ್ನೋ ಉತ್ತರ ಬಂದಿದ್ದು, ಆ ನಂತರ ನಟಿ ಜಯಮಾಲ ನಾನು ಅಯ್ಯಪ್ಪನ ದರ್ಶನ ಮಾಡಿದ್ದೆ ಅಂದಿದ್ದು ಎಲ್ಲವೂ ಆಗಿತ್ತು.

10 ರಿಂದ 50 ವರ್ಷದ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಅನ್ನೋದಕ್ಕೆ ಯಾವುದೇ ಐತಿಹಾಸಿಕ ಸಾಕ್ಷ್ಯಗಳಾಗಲೀ, ಶಾಸ್ತ್ರೀಯ ಉಲ್ಲೇಖಗಳಾಗಲೀ ಇಲ್ಲ. ಇದನ್ನ ಸಂಪ್ರದಾಯ ಅನ್ನೋಣ ಅಂದರೆ ನೂರಾರು ವರ್ಷ ಈ ರೀತಿಯ ಆಚರಣೆ ನಡೆದುಕೊಂಡು ಬಂದಿಲ್ಲ. ಈಗ ಪ್ರಶ್ನೆ ಇರೋದು ಅಯ್ಯಪ್ಪನ ದೇಗುಲಕ್ಕೆ ಮಹಿಳಾ ಪ್ರವೇಶ ಅಪಚಾರ, ಅಯ್ಯಪ್ಪನ ಪಾವಿತ್ರ್ಯತೆಗೆ ದಕ್ಕೆ, ಹಿಂದೂ ಧರ್ಮದ ವಿರುದ್ಧ ಷಡ್ಯಂತ್ರ, ಅಯ್ಯಪ್ಪನ ಭಕ್ತರ ಭಾವನೆಗಳಿಗೆ ದಕ್ಕೆ ಅನ್ನೂ ವಿಚಾರದಲ್ಲಿ. ತಮ್ಮ ಧರ್ಮ, ಸಂಸ್ಕೃತಿ, ಆಚರಣೆ ವಿರುದ್ಧ ಏನೋ ಮಸಲತ್ತು ನಡೆಯುತ್ತಿದೆ ಅಂದಾಗ ಅದನ್ನ ಪ್ರತಿಭಟಿಸೋದು ತಪ್ಪಲ್ಲ. ಧಾರ್ಮಿಕ ನಂಬಿಕೆಗಳಿಗೆ ಘಾಸಿಯಾದಾಗ ದನಿಯೆತ್ತುವುದು ಸಹಜ. ಆದ್ರೆ ನಿಜಕ್ಕೂ ಇಬ್ಬರ ಮಹಿಳೆಯರ ದೇವಸ್ಥಾನದಿಂದ ಹಿಂದೂ ಧರ್ಮಕ್ಕೆ ಅಪಚಾರವಾಯ್ತಾ..? ಹಿಂದೂ ಧರ್ಮವನ್ನ ಮುಗಿಸಿಬಿಡಲು ಮಾಡಿದ ಹುನ್ನಾರವಾ ಇದು ಅಂತ ನೋಡಿದ್ರೆ ಅದರ ಲವಲೇಶವೂ ಕಾಣೋದಿಲ್ಲ. ಯಾಕಂದ್ರೆ ಹಿಂದೂ ಧರ್ಮದ ಯಾವ ಶಾಸ್ತ್ರಗಳಲ್ಲೂ 10 ರಿಂದ 50 ವರ್ಷದ ಮಹಿಳೆಯರಿಗೆ ನಿರ್ಬಂಧ ವಿಧಿಸಬೇಕು ಎಂದಿಲ್ಲ. ಯಾವ ಧರ್ಮ ಗ್ರಂಥಗಳಲ್ಲೂ ಇದರ ಉಲ್ಲೇಖ ಇಲ್ಲ. ಟ್ರವಾಂಕೂರು ರಾಜಮನೆತನದ ದಾಖಲೆಗಳಲ್ಲೂ ಈ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಇನ್ನು ಇತಿಹಾಸದಲ್ಲಾದರೂ ಈ ಬಗ್ಗೆ ಸ್ಪಷ್ಟವಾಗಿ ದಾಖಲಾಗಿದೆಯಾ ಅಂದರೆ ಅದೂ ಇಲ್ಲ. ಹಾಗಾಗಿ ಮಹಿಳೆಯರಿಗೆ ನಿರ್ಬಂಧ ವಿಧಿಸುವ ಸಂಪ್ರದಾಯಕ್ಕೆ ಧರ್ಮದ ಬೆಂಬಲವೇ ಇಲ್ಲ ಅಂತಾಯ್ತು. ಇದನ್ನೆಲ್ಲ ನೋಡಿದ್ರೆ ಮಹಿಳೆಯರ ಪ್ರವೇಶದಿಂದ ಧರ್ಮಕ್ಕೆ ಅಪಚಾರ, ಪಾವಿತ್ರ್ಯತೆಗೆ ದಕ್ಕೆ ಎಂಬ ವಾದಗಳಲ್ಲಿ ಹುರುಳಿಲ್ಲ ಅನ್ನೋದು ಸ್ಪಷ್ಟವಾಗುತ್ತೆ.

ಇನ್ನು ಮಹಿಳೆಯರ ಪ್ರವೇಶಕ್ಕೆ ಒತ್ತಾಯಿಸುವ ಹೋರಾಟ ಹಿಂದೂ ಧರ್ಮದ ವಿರುದ್ಧದ ಷಡ್ಯಂತ್ರವಾ…? ಅಥವಾ ಹಿಂದೂ ಧರ್ಮವನ್ನು ಮುಗಿಸಿಬಿಡುವ ಮಸಲತ್ತಾ ಅಂತ ನೋಡಿದರೆ ಅದೂ ಅಲ್ಲ. ಯಾಕಂದ್ರೆ ಹಿಂದೂ ಧರ್ಮ ಇಂತಹ ನೂರಾರು ಆಚರಣೆ. ಮೂಢ ನಂಬಿಕೆ ಮತ್ತು ಕಂದಾಚಾರಗಳನ್ನು ಮೆಟ್ಟಿ ನಿಂತಿರೋದಕ್ಕೆ ಇವತ್ತು ಇಷ್ಟು ಗಟ್ಟಿಯಾಗಿ ನೆಲೆಯೂರಿರೋದು. ಹಿಂದೂ ಧರ್ಮ ಯಾವುದೇ ರಚಿತ ಪುಸ್ತಕದ (scripted) ಆಧಾರದ ಮೇಲೆ ನಿಂತಿಲ್ಲ. ಹಿಂದೂ ಧರ್ಮ ಅನ್ನೋದು ಜೀವನ ಕ್ರಮ, ನಂಬಿಕೆಯ ನೆಲೆಗಟ್ಟು. scripted ಧರ್ಮಗಳು ಕಣ್ಣು ಬಿಡುವ ಸಾವಿರಾರು ವರ್ಷಗಳ ಹಿಂದೆಯೇ ಬೇರೂರಿರುವಂತಹ ಧರ್ಮ. ಮಹಾ ಭಾರತ, ರಾಮಾಯಣ, ಭಗವದ್ಗೀತೆ, ವೇದಗಳು ಇವೆಯಾದರೂ ಅವು ಹಿಂದೂಗಳ ಪಾಲಿಗೆ ಬರೆದಿಟ್ಟ ಶಾಸನಗಳೇನೂ ಅಲ್ಲ. ಅಲ್ಲಿ ಬರೆದಿದ್ದನ್ನೇ ಪಾಲಿಸಬೇಕು ಅನ್ನುವ ಕಟ್ಟಳೆಗಳೇನು ಇಲ್ಲ. ಹಾಗಂತ ಧರ್ಮ ಗ್ರಂಥಗಳನ್ನ ಅಗೌರವ ತೋರಿಸಬೇಕು ಅಂತಲ್ಲ. ಈ ಕಾಲಘಟ್ಟಕ್ಕೆ ಯಾವುದು ಸರಿಯೋ, ಯಾವುದು ಧರ್ಮ ಸಮ್ಮತವೋ..? ಯಾವುದಕ್ಕೆ ಕಾನೂನಿನ ಸಮ್ಮತಿಯಿದೆಯೋ ಅದನ್ನ ಅನುಸರಿಸಿದರೆ ಸಾಕು. 300 ವರ್ಷಗಳ ಮುಸ್ಲಿಂ ದೊರೆಗಳ ಆಡಳಿತ, 200 ವರ್ಷಗಳ ಕ್ರಿಶ್ಚಿಯನ್ ಬ್ರಿಟಿಷ್ ಆಡಳಿತದ ಕಾಲದಲ್ಲೇ ಹಿಂದೂ ಧರ್ಮವನ್ನ ಮುಗಿಸಿಬಿಡಲು ಸಾಧ್ಯವಾಗಲಿಲ್ಲ. ತನ್ನನ್ನು ತಾನು ರಕ್ಷಿಸಿಕೊಳ್ಳುವ ತಾಕತ್ತು ಈ ಧರ್ಮಕ್ಕಿದೆ. ಹಾಗಂತ ಏನೇ ಆದರೂ ಧರ್ಮವೇ ಕಾಪಾಡಿಕೊಳ್ಳುತ್ತದೆ ಅಂತ ಕೈಕಟ್ಟಿ ಕೂರಬೇಕು ಅಂತೇನೂ ಅಲ್ಲ. ಅಂತಹ ಸಂದರ್ಭಗಳು ಬಂದಾಗ ಹಿಂದೂಗಳು ತಿರುಗಿಬಿದ್ದ ಘಟನೆಗಳು ಇತಿಹಾಸದಲ್ಲಿವೆ. ಇಬ್ಬರು ಹೆಣ್ಣು ಮಕ್ಕಳ ಅಯ್ಯಪ್ಪನ ದೇಗುಲ ಪ್ರವೇಶದಿಂದ ಹಿಂದೂ ಧರ್ಮದ ಅಸ್ಥಿತ್ವಕ್ಕೆ ಯಾವ ಅಪಾಯವೂ ಆಗೋದಿಲ್ಲ. ಹಾಗಾಗಿ ಇದನ್ನು ಧರ್ಮದ ವಿರುದ್ಧದ ಷಡ್ಯಂತ್ರ ಎಂದು ಭಾವಿಸಿ ಯಾರೂ ಮನಸ್ಸಿಗೆ ನೋವು ಮಾಡಿಕೊಳ್ಳಬೇಕಾಗಿಲ್ಲ. ಹಿಂದೂ ಧರ್ಮದಲ್ಲಾದ ನೂರಾರು ಸುಧಾರಣೆಗಳಲ್ಲಿ ಇದೂ ಒಂದಾಗಲಿದೆ ಅಷ್ಟೇ. ಇಲ್ಲವಾದ್ರೆ ಸತಿ ಸಹಗಮನ ಪದ್ದತಿ, ದಲಿತರಿಗೆ ದೇಗುಲ ಪ್ರವೇಶಕ್ಕೆ ನಿರ್ಬಂಧ, ದೇವದಾಸಿ ಪದ್ದತಿ ಸೇರಿದಂತೆ ಹಲವು ಕರ್ಮಟ ಪದ್ದತಿಗಳು ಇವತ್ತಿಗೂ ಇರುತ್ತಿದ್ದವು.

ಯಾವ ಧರ್ಮ ಬದಲಾವಣೆಗಳಿಗೆ ತೆರೆದುಕೊಳ್ಳದೇ ನಿಂತ ನೀರಾಗುತ್ತದೋ ಅಲ್ಲಿ ಮೂಲಭೂತವಾದ ಸೃಷ್ಟಿಯಾಗಯತ್ತೆ. ಕರ್ಮಟತನ ಉಲ್ಬಣವಾಗುತ್ತೆ. ಪ್ರತೀ ಬದಲಾವಣೆಗಳನ್ನೂ ವಿರೋಧಿಸುತ್ತಾ ಮೂಲಭೂತವಾದಿಗಳ ಮಾದರಿಯನ್ನು ಅನುಸರಿಸುವ ದರ್ದು ಈ ಧರ್ಮಕ್ಕೆ ಬೇಕಾಗಿಲ್ಲ. ಹಿಂದೂ ಧರ್ಮ ಸಾವಿರಾರು ವರ್ಷಗಳಿಂದ ನಿರಂತರವಾಗಿ ಕಾಲಕ್ಕನುಗುಣವಾಗಿ ಬದಲಾಗುತ್ತಲೇ ಇದೆ. ನಿರಂತರ ಬದಲಾವಣೆಗೆ ತೆರೆದುಕೊಂಡಿರುವುದರಿಂದಲೇ ಭಾರತದಲ್ಲಿ ಗಟ್ಟಿಯಾಗಿ ನೆಲೆಯೂರಿರೋದು. ಆತ್ಮ ವಿಮರ್ಷೆಗೆ ಒಳಗಾದರೆ ಮನುಷ್ಯ ಹೇಗೆ ಅಂತರ್ ಶುದ್ಧನಾಗುತ್ತಾನೋ ಹಾಗೆ ಒಂದು ಧರ್ಮವೂ ವಿಮರ್ಷೆಗೊಳಪಡುತ್ತಿದ್ದರೆ ಅದು ಶುದ್ಧವಾಗುತ್ತಲೇ ಇರುತ್ತದೆ. ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರ ಪ್ರವೇಶವನ್ನು ಹಿಂದೂಗಳು ಒಪ್ಪಿಕೊಂಡರೆ ಈ ಧರ್ಮ ನಿಂತ ನೀರಲ್ಲ ಅಂತ ಮತ್ತೊಮ್ಮೆ ಸಾರಿದಂತಾಗುತ್ತದೆ.

ಕೆಲವು ಬದಲಾವಣೆಗಳು ತನ್ನಿಂದ ತಾನೇ ಘಟಿಸುತ್ತಿರುತ್ತವೆ.. ಆದ್ರೆ ಕೆಲ ಬದಲಾವಣೆಗಳಿಗೆ ಹೋರಾಟ ಅಗತ್ಯ. ಹಾಗಂತ ಮಹಿಳಾ ಹಕ್ಕುಗಳ ಹೋರಾಟಕ್ಕೆ, ಚಳವಳಿಗೆ ಧಾರ್ಮಿಕ ಕ್ಷೇತ್ರಗಳು ವೇದಿಕೆಯಾಗಬಾರದು. ಎಲ್ಲ ಮಹಿಳೆಯರಿಗೂ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಿ ಸುಪ್ರೀಂ ಕೋರ್ಟ್ ನ ಆದೇಶ ಮಾಡಿರೋದೇ ಮಹಿಳಾ ಹೋರಾಟಕ್ಕೆ ಸಿಕ್ಕ ದೊಡ್ಡ ಜಯ. ತೀರ್ಪು ಬಂದ ನಂತರ ದೇಗುಲ ಪ್ರವೇಶಿಸಿ ಅದೇನನ್ನೋ ಸಾಧಿಸಿಬಿಡ್ತೀವಿ ಅಂತ ಹಠಕ್ಕೆ ಬಿದ್ದು ಅಯ್ಯಪ್ಪನ ಗುಡಿಗೆ ನುಗ್ಗಲೆತ್ನಿಸಿದರಲ್ಲ.. ಅದು ಅಕ್ಷಮ್ಯ. ಸುಪ್ರೀಂ ಕೋರ್ಟ್ ಅಯ್ಯಪ್ಪ ದೇವಸ್ಥಾನದ ಧಾರ್ಮಿಕ ವಿಧಿ ವಿಧಾನಗಳನ್ನೆಲ್ಲಾ ಮುರಿದು ದೇಗುಲ ಪ್ರವೇಶಿಸಿ ಅಂತೇನು ತೀರ್ಪು ಕೊಟ್ಟಿಲ್ಲವಲ್ಲ. ಅಲ್ಲಿನ ವ್ರತ ನಿಯಮಗಳ ಪ್ರಕಾರ ನಡೆದು ಅಯ್ಯಪ್ಪನ ದರ್ಶನ ಮಾಡಿದರೆ ಅದು ಸುಪ್ರೀಂ ಕೋರ್ಟ್ ತೀರ್ಪನ್ನ ಗೌರವಿಸಿದಂತಾಗುತ್ತದೆ. ಸುಪ್ರೀಂ ತೀರ್ಪಿನ ನಂತರ ಈಗಾಗಲೇ ಘಾಸಿಯಾಗಿರುವ ಭಾವನೆಗಳಿಗೆ ಬೆಂಕಿ ಹಚ್ಚಬಾರದು. ರೆಹನಾ ಫಾತಿಮಾ, ಮೇರಿ ಸ್ವೀಟಿ, ಕವಿತಾ ಜಕ್ಕಲ್ ಅಂತವರು ದೇವಸ್ಥಾನದೊಳಗೆ ನುಗ್ಗುವವರಂತೆ ಬಂದು ಸಾಧಿಸಿದ್ದೇನು..? ಮಹಿಳಾ ಸಮಾನತೆಯ ಹೋರಾಟದ ಹೆಸರಲ್ಲಿ ಹುಚ್ಚು ಪ್ರಚಾರದ ಹಿಂದೆ ಬಿದ್ದಿರುವ ಇಂತವರದ್ದು ಕಿಡಿಗೇಡಿತನವಷ್ಟೇ. ಈಗ ದೇವಸ್ಥಾನ ಪ್ರವೇಶಿಸಿರುವ ಬಿಂದು ಮತ್ತು ಕನಕ ದುರ್ಗಾಪ್ರಚಾರದ ಹಿಂದೆ ಬಿದ್ದು ದೇವರ ಪ್ರವೇಶ ಮಾಡಿದಂತೆ ಕಾಣುತ್ತಿಲ್ಲ. ದೇಗುಲ ಪ್ರವೇಶದ ವೇಳೆ ಸಾಮಾನ್ಯ ಭಕ್ತರ ಜತೆ ದೇವರ ದರ್ಶನ ಪಡೆದಿದ್ದಾರೆ. ಈ ಬೆಳವಣಿಗೆ ಹಲವು ಮಹಿಳಾ ಭಕ್ತರಿಗೆ ಸ್ಪೂರ್ತಿಯಾದರೆ ಅದೂ ಆಗಿಬಿಡಲಿ. ಸುಪ್ರೀಂ ಕೋರ್ಟ್ ಎಲ್ಲ ವಯಸ್ಸಿನ ಮಹಿಳೆಯರು ಹೋಗಲೇಬೇಕು ಅಂತೇನೂ ಹೇಳಿಲ್ಲ, Ready to Wait ಅನ್ನುವವರು ಅವರಿಚ್ಛೆಗನುಗುಣವಾಗಿ ನಡೆಯಲಿ.. ಹೋಗ ಬಯಸುವವರು ಹೋಗಲಿ ಅಷ್ಟೇ…

ಇಲ್ಲಿ ಕಮ್ಯುನಿಸ್ಟ್ ಆಡಳಿತ ಮತ್ತು ಬಿಜೆಪಿ ಮಧ್ಯದ ರಾಜಕೀಯ ಜಿದ್ದಾಜಿದ್ದಿಯಲ್ಲಿ ಧರ್ಮವನ್ನು ಎಳೆದು ತರಲಾಗಿದೆ ಅಷ್ಟೇ. ಭಾರತದಂತಹ ರಾಷ್ಟ್ರದಲ್ಲಿ ಜಾತಿ, ಧರ್ಮ ಇಲ್ಲದ ರಾಜಕಾರಣ ಊಹಿಸಲೂ ಸಾಧ್ಯವಿಲ್ಲ. ಈ ವಿಚಾರವಾಗಿ ಅಯ್ಯಪ್ಪ ಭಕ್ತರ ಮನವೊಲಿಸುವಂತಹ ಒಂದೇ ಒಂದು ಸಣ್ಣ ಪ್ರಯತ್ನವನ್ನೂ ಕೇರಳದ ಕಮ್ಯುನಿಸ್ಟ್ ಸರ್ಕಾರ ಮಾಡಲಿಲ್ಲ. ಕಮ್ಯುನಿಸ್ಟ್ ನೆಲೆ ಭದ್ರ ಮಾಡಿಕೊಳ್ಳೋದಷ್ಟೇ ಅವರ ಅಜೆಂಡಾ. ಬಿಜೆಪಿ ಈ ವಿಚಾರ ಮುಂದಿಟ್ಟುಕೊಂಡು ಹಿಂದೂಗಳ ಭಾವನೆಗಳನ್ನ ಮತಗಳನ್ನಾಗಿ ಪರಿವರ್ತಿಸಲು ಯತ್ನಿಸುತ್ತಿದೆಯಷ್ಟೇ. ಇದರಲ್ಲಿ ತನಗೂ ಲಾಭವಾಗಲಿ ಅಂತ ಕಾಂಗ್ರೆಸ್ ಕೇರಳದಲ್ಲಿ ಬಿಜೆಪಿಯ ನಿಲುವು ತೆಗೆದುಕೊಂಡಿದೆ..! ಅಯ್ಯಪ್ಪ ದೇವಸ್ಥಾನದ ವಿಷಯದಲ್ಲಿ ಕಾಂಗ್ರೆಸ್ ನ ರಾಷ್ಟ್ರಮಟ್ಟದ ನಿಲುವು ಸ್ತ್ರೀ ಪ್ರವೇಶದ ಪರವಾಗಿದ್ರೆ, ಕೇರಳದಲ್ಲಿ ಮಾತ್ರ ತದ್ವಿರುದ್ಧ. ಈ ರಾಜಕೀಯದ ಮಧ್ಯೆ ಸಿಲುಕಿ ಅಯ್ಯಪ್ಪನ ಸನ್ನಿಧಿಯ ಪಾವಿತ್ರ್ಯತೆ ಹಾಳಾಯಿತು, ಧರ್ಮಕ್ಕೆ ಅಪಚಾರವಾಯಿತು, ಹಿಂದೂ ಧರ್ಮ ಮುಗಿಸಿಬಿಡುವ ಮಸಲತ್ತು ಅಂತ ನೊಂದುಕೊಂಡರೆ ನೋವುಣ್ಣುವವರು ನಾವೇ.. ನಮ್ಮ ನೋವಿನಲ್ಲಿ ನಲಿಯುವವುವರಿದ್ದಾರೆ ಎಚ್ಚರಿಕೆ…

– ಶಶಿವರ್ಣಂ

#Shabarimala #RightToPray #WomenEntry #Ayyappa #Hindutva

About SHASHI SHEKARA
I am a simple boy with great ambitions.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: