ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಪ್ರಗತಿಪರರ ಪೌರೋಹಿತ್ಯ ಯಾಕೆ..?

CM_PRAGATHI_02ರಾಜ್ಯ ವಿಧಾನಸಭಾ ಚುನಾವಣೆಗೆ ಮಹೂರ್ತ ಫಿಕ್ಸ್ ಆಗುತ್ತಿದ್ದಂತೆ ಈ ರಾಜ್ಯದ ಪ್ರಗತಿಪರರು, ಬುದ್ಧಿಜೀವಿಗಳು ಎನಿಸಿಕೊಂಡವರು ಈಗ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ರಾಜ್ಯದ ಮೂರೂ ರಾಜಕೀಯ ಪಕ್ಷಗಳು ಮೈತ್ರಿ ಬಗ್ಗೆ ಇನ್ನೂ ಚಕಾರವೆತ್ತದೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ಚಿತ್ತ ಹರಿಸಿವೆ. ಆದ್ರೆ ಪ್ರಗತಿಪರರು ಈಗಾಗಲೆ ಮೈತ್ರಿ ರಾಜಕಾರಣಕ್ಕೆ ಪೌರೋಹಿತ್ಯ ಆರಂಭಿಸಿದ್ದಾರೆ. ಬಿಜೆಪಿ ವಿರೋಧಿಗಳನ್ನೆಲ್ಲಾ ಒಟ್ಟುಗೂಡಿಸುವ ಕಾರ್ಯಕ್ಕೆ ಪ್ರಗತಿಪರರ ಗುಂಪು ಮುಂದಾಗಿದೆ. ರಾಜ್ಯದ ರಾಜಕೀಯ ಪಕ್ಷಗಳಿಗೇ ಇಲ್ಲದ ಉಸಾಬರಿಯನ್ನು ಈ ಪ್ರಗತಿಪರರು ದುಂಬಾಲು ಬಿದ್ದು ಮಾಡುತ್ತಿರುವುದೇಕೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪ್ರಗತಿಪರರ ನಿಯೋಗ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಮತ್ತು ಸಿಎಂ ಸಿದ್ದರಾಮಯ್ಯನವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಜೆಡಿಎಸ್ ಮತ್ತು ಕಾಂಗ್ರೆಸ್​ ಮೈತ್ರಿ ಮಾಡಿಕೊಳ್ಳುವಂತೆ ಪೌರೋಹಿತ್ಯ ನಡೆಸಿವೆ. ಕಾಂಗ್ರೆಸ್ ಮತ್ತು ಜೆಡಿಎಸ್​ ಎರಡೂ ಪಕ್ಷಗಳಿಗೂ ಮೈತ್ರಿ ಬಗ್ಗೆ ಯಾವುದೇ ಮನಸ್ಸಿಲ್ಲದಿದ್ದರೂ ಪ್ರಗತಿಪರರು/ಬುದ್ಧಿಜೀವಿಗಳು ಎಂದು ಹೇಳಿಕೊಳ್ಳುವವರ ಗುಂಪು ರಾಜಕೀಯ ಪಕ್ಷಗಳ ಮಧ್ಯೆ ಮೈತ್ರಿ ಕುದುರಿಸಲು ದಳ್ಳಾಳಿಗಳಂತೆ ಕೆಲಸ ಮಾಡುತ್ತಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಗೆ ಮಹೂರ್ತ ಫಿಕ್ಸ್ ಆಗುತ್ತಿದ್ದಂತೆ ಈ ರಾಜ್ಯದ ಪ್ರಗತಿಪರರು, ಬುದ್ಧಿಜೀವಿಗಳು ಎನಿಸಿಕೊಂಡವರು ಈಗ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ರಾಜ್ಯದ ಮೂರೂ ರಾಜಕೀಯ ಪಕ್ಷಗಳು ಮೈತ್ರಿ ಬಗ್ಗೆ ಇನ್ನೂ ಚಕಾರವೆತ್ತದೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ಚಿತ್ತ ಹರಿಸಿವೆ. ಆದ್ರೆ ಪ್ರಗತಿಪರರು ಈಗಾಗಲೆ ಮೈತ್ರಿ ರಾಜಕಾರಣಕ್ಕೆ ಪೌರೋಹಿತ್ಯ ಆರಂಭಿಸಿದ್ದಾರೆ. ಬಿಜೆಪಿ ವಿರೋಧಿಗಳನ್ನೆಲ್ಲಾ ಒಟ್ಟುಗೂಡಿಸುವ ಕಾರ್ಯಕ್ಕೆ ಪ್ರಗತಿಪರರ ಗುಂಪು ಮುಂದಾಗಿದೆ. ರಾಜ್ಯದ ರಾಜಕೀಯ ಪಕ್ಷಗಳಿಗೇ ಇಲ್ಲದ ಉಸಾಬರಿಯನ್ನು ಈ ಪ್ರಗತಿಪರರು ದುಂಬಾಲು ಬಿದ್ದು ಮಾಡುತ್ತಿರುವುದೇಕೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪ್ರಗತಿಪರರ ನಿಯೋಗ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಮತ್ತು ಸಿಎಂ ಸಿದ್ದರಾಮಯ್ಯನವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಜೆಡಿಎಸ್ ಮತ್ತು ಕಾಂಗ್ರೆಸ್​ ಮೈತ್ರಿ ಮಾಡಿಕೊಳ್ಳುವಂತೆ ಪೌರೋಹಿತ್ಯ ನಡೆಸಿವೆ. ಕಾಂಗ್ರೆಸ್ ಮತ್ತು ಜೆಡಿಎಸ್​ ಎರಡೂ ಪಕ್ಷಗಳಿಗೂ ಮೈತ್ರಿ ಬಗ್ಗೆ ಯಾವುದೇ ಮನಸ್ಸಿಲ್ಲದಿದ್ದರೂ ಪ್ರಗತಿಪರರು/ಬುದ್ಧಿಜೀವಿಗಳು ಎಂದು ಹೇಳಿಕೊಳ್ಳುವವರ ಗುಂಪು ರಾಜಕೀಯ ಪಕ್ಷಗಳ ಮಧ್ಯೆ ಮೈತ್ರಿ ಕುದುರಿಸಲು ದಳ್ಳಾಳಿಗಳಂತೆ ಕೆಲಸ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಮತ್ತು ಸಂವಿಧಾನ ರಕ್ಷಿಸಲು ಈ ಪ್ರಯತ್ನ ನಡೆಸಿರುವುದಾಗಿ ಪ್ರಗತಿಪರರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಎಚ್​ಡಿ ದೇವೇಗೌಡರ ಮನೆಯಲ್ಲಿ ನಡೆದ ಪೌರೋಹಿತ್ಯ ಸಭೆ ನಂತರ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡರು, ‘ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ದವಿದ್ದರೆ ಅವರೇ ಸೀಟು ಹಂಚಿಕೆಯನ್ನು ಘೋಷಣೆ ಮಾಡಲಿ’ ಎಂದು ವ್ಯಂಗ್ಯವಾಡಿದ್ದರು. ಇದನ್ನೇ ಆಸೆಗಣ್ಣಿನಿಂದ ನೋಡುತ್ತಿದ್ದ ಪ್ರಗತಿಪರರು ತಾವು ಬಂದ ಕೆಲಸ ಸಾಧಿಸಿಯೇಬಿಟ್ಟೆವು, ಕಾಂಗ್ರೆಸ್​ ಜೊತಿಗಿನ ಮೈತ್ರಿಗೆ ಗೌಡರು ಒಪ್ಪಿಯೇಬಿಟ್ಟರು ಎಂದು ಯುದ್ಧ ಗೆದ್ದ ಸಂತಸದಿಂದ ಅಲ್ಲಿಂದ ತೆರಳಿದರು. ಅಷ್ಟರಲ್ಲಾಗಲೇ ಕಾಂಗ್ರೆಸ್​ ಜೊತೆ ಮೈತ್ರಿಗೆ ದೊಡ್ಡ ಗೌಡರು ಸಿದ್ದ ಅನ್ನೋ ಸುದ್ದಿ ಸುದ್ದಿ ವಾಹಿನಿಗಳಲ್ಲಿ ರಾರಾಜಿಸುತ್ತಿತ್ತು. ತಕ್ಷಣ ಎಚ್ಚೆತ್ತ ದೊಡ್ಡಗೌಡರು ಪತ್ರಿಕಾಗೋಷ್ಠಿ ಕರೆದು ಮತ್ತೊಂದು ದಾಳ ಉರುಳಿಸಿಬಿಟ್ಟರು. ‘ಒಳ್ಳೆಯ ಸದುದ್ದೇಶದಿಂದ ಪ್ರಗತಿಪರರು ತಮ್ಮನ್ನು ಭೇಟಿಯಾಗಿದ್ದರು. ಮೈತ್ರಿ ಮಾಡಿಕೊಳ್ಳುವ ಉದ್ದೇಶ ಕಾಂಗ್ರೆಸ್​ಗೆ ಇದ್ದರೆ ಸೀಟು ಹಂಚಿಕೆಯನ್ನು ಬಹಿರಂಗವಾಗಿ ಘೋಷಿಸುವಂತೆ ಸಾಂಧರ್ಬಿಕವಾಗಿ ಹೇಳಿದ್ದೆ ಅಷ್ಟೇ. ವ್ಯಂಗ್ಯವಾಗಿ ಹೇಳಿದ್ದನ್ನೇ ಮೈತ್ರಿಗೆ ಸಿದ್ದ ಎಂದು ಬಿಂಬಿಸಲಾಗುತ್ತಿದೆ. ಈಗ ಮೈತ್ರಿ ಮಾಡಿಕೊಳ್ಳುವುದಕ್ಕೆ ಸಮಯ ಎಲ್ಲಿದೆ, ಮೈತ್ರಿಗೆ ನಾಯಕತ್ವ ವಹಿಸುವವರಾರು’ ಎಂದು ಹೇಳಿ ಕಾಂಗ್ರೆಸ್ ಜೊತೆಗಿನ ಮೈತ್ರಿ ಬಗ್ಗೆ ತಮಗೆ ಮನಸ್ಸಿಲ್ಲ ಎಂದುಬಿಟ್ಟರು. ಅಲ್ಲಿಗೆ ಯುದ್ಧ ಗೆದ್ದ ಸಂತಸದಲ್ಲಿದ್ದ ಪ್ರಗತಿಪರರ ಸಂಭ್ರಮವೂ ಮುಗಿದಿತ್ತು.

ರಾಜ್ಯದಲ್ಲಿ ಸಿದ್ದರಾಮಯ್ಯನವರನ್ನು ಮತ್ತೆ ಮುಖ್ಯಮಂತ್ರಿಯಾಗದಂತೆ ತಡೆಯಲು ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಮತ್ತು ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಹೋರಾಟಕ್ಕಿಳಿದಿದ್ದಾರೆ. ಈ ಮಧ್ಯೆ ಕಾಂಗ್ರೆಸ್​ ಜೊತೆ ಮೈತ್ರಿಗೆ ಬನ್ನಿ ಎಂದು ಆಹ್ವಾನಿಸಲು ಹೋದ ಪ್ರಗತಿಪರರನ್ನು ದೇವೇಗೌಡರು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಅನ್ನೋದು ಇಂಟರ್ನಲ್ ಮಾಹಿತಿ. ಕಾಂಗ್ರೆಸ್ ರೈತರು ಮತ್ತು ಅಲ್ಪಸಂಖ್ಯಾತರ ವಿಚಾರದಲ್ಲಿ ಹೇಗೆ ನಡೆದುಕೊಂಡಿದೆ ಅನ್ನೋದನ್ನ ಪ್ರಗತಿಪರರಿಗೆ ಮುಖಕ್ಕೆ ಹೊಡೆದಂತೆ ದೊಡ್ಡಗೌಡರು ಹೇಳಿ ಬಿಸಿ ಮುಟ್ಟಿಸಿದ್ದಾರೆ. ಆದರೂ ಬಿಜೆಪಿಯನ್ನು ಮಣಿಸಲು ತಾವು ಪ್ರಯತ್ನಿಸುವುದಾಗಿ ಹೇಳಿ ಮನೆಯವರೆಗೂ ಬಂದಿದ್ದವರನ್ನು ಸಾಗಹಾಕಿದ್ದಾರೆ..

ದೇವೇಗೌಡರ ಮನೆಯಲ್ಲಿ ನಡೆದ ಪೌರೋಹಿತ್ಯಕ್ಕೆ ಬೆಲೆ ಸಿಗಲಿಲ್ಲ ಅನ್ನೋದು ಗೊತ್ತಾಗುತ್ತಿದ್ದಂತೆ ಈ ಪ್ರಗತಿಪರರ ಗುಂಪು ಛಲಬಿಡದಂತೆ ತಮ್ಮ ಪ್ರಯತ್ನವನ್ನು ಮುಂದುವರಿಸಿ ಸಿಎಂ ಸಿದ್ದರಾಮಯ್ಯನವರನ್ನೂ ಭೇಟಿ ಮಾಡಿ ಜೆಡಿಎಸ್​ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಮನವೊಲಿಸುವ ಮಾತನ್ನಾಡಿದ್ದಾರೆ. ಈ ರಾಜ್ಯದಲ್ಲಿ ಪ್ರಗತಿಪರರು ಮತ್ತು ಬುದ್ಧಿಜೀವಿಗಳು ಕಾಂಗ್ರೆಸ್​ನ ಬಿ ಟೀಂ ನಂತೆಯೇ ಕೆಲಸ ಮಾಡುವುದರಿಂದ ಸಿಎಂ ಸಿದ್ದರಾಮಯ್ಯ ತಮ್ಮನ್ನು ಭೇಟಿ ಮಾಡಿದವರ ಜೊತೆ ಸಂತಸದಿಂದಲೇ ಮಾತನಾಡಿದ್ದಾರೆ. ಚುನಾವಣಾ ಪೂರ್ವವಾಗಿ ಜೆಡಿಎಸ್​ ಜೊತೆ ಮೈತ್ರಿ ಮಾಡಿಕೊಳ್ಳುವ ಅಗತ್ಯ ಕಾಂಗ್ರೆಸ್​ಗೆ ಇಲ್ಲ. ಕಾಂಗ್ರೆಸ್​ ಸ್ವಂತಬಲದಿಂದಲೇ ಅಧಿಕಾರ ಹಿಡಿಯಲಿದೆ. ಒಂದು ವೇಳೆ ಅತಂತ್ರದ ಪರಿಸ್ಥಿತಿ ಬಂದರೆ ನಿಮ್ಮ ಮನವಿಯನ್ನು ಪರಿಗಣಿಸಲಾಗುವುದು ಎಂದು ಹೇಳಿ ತಮ್ಮನ್ನು ಭೇಟಿ ಮಾಡಿದವರ ನಿರೀಕ್ಷೆ ಹುಸಿಯಾಗದಂತೆ ಮಾಡಿ ಕಳಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ‘ತಾನು ಬಿಜೆಪಿ ಪಕ್ಕ ನಿಂತು ಕೆಮ್ಮಿದರೆ ಸಾಕು ಕಾಂಗ್ರೆಸ್ ದೂಳಿಪಟವಾಗಿಬಿಡುತ್ತದೆ’ ಎಂದು ಎಚ್​ಡಿ ಕುಮಾರಸ್ವಾಮಿ ಹೇಳಿಕೆ ನೀಡುತ್ತಿದ್ದಂತೆ ಪ್ರಗತಿಪರರ ಪೌರೋಹಿತ್ಯ ಆರಂಭವಾಗಿದೆ. ಜೆಡಿಎಸ್ ಬಿಜೆಪಿಯತ್ತ ಸರಿಯುತ್ತಿರೋ ಸೂಚನೆ ಅರಿತು ಪ್ರಗತಿಪರರ ಗುಂಪು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ.

ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಮೋದಿ ವಿರೋಧಿ ಕಾರ್ಯತಂತ್ರವನ್ನೇ ಅನುಸರಿಸುತ್ತಿರುವ ಪ್ರಗತಿಪರರ ಗುಂಪು ಒಂದೇ ಒಂದು ದಿನವೂ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಮಾತನಾಡಿಯೇ ಇಲ್ಲ. ಮಾತನಾಡುವ ಸಂದರ್ಭಗಳು ಬಂದಾಗಲೂ ಈ ಗುಂಪು ಜಾಣ ಮೌನಕ್ಕೇ ಶರಣಾಗಿತ್ತು. ರಾಜ್ಯದಲ್ಲಿ ಸಾಲು ಸಾಲು ರೈತರು ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಾಗ ಯಾವ ಬುದ್ಧಿಜೀವಿ, ಪ್ರಗತಿಪರರೂ ಸರ್ಕಾರದ ವಿರುದ್ಧ ಮಾತನಾಡಲಿಲ್ಲ, ಸರ್ಕಾರವನ್ನು ಎಚ್ಚರಿಸಲೂ ಇಲ್ಲ. ಟಿಪ್ಪು ಜಯಂತಿ ವಿಚಾರವಾಗಿ ಆಕ್ರೋಶ ವ್ಯಕ್ತವಾದಾಗಲೂ ಈ ಸಮುದಾಯ ಸಿಎಂ ಸಿದ್ದರಾಮಯ್ಯನವರ ಬೆನ್ನಿಗೇ ನಿಂತಿತ್ತು. ಬೆಂಗಳೂರಿನಲ್ಲಿ ಆರೂವರೆ ಕಿಲೋಮೀಟರ್ ರಸ್ತೆಗೆ ಸ್ಟೀಲ್​ ಬ್ರಿಡ್ಜ್​ ನಿರ್ಮಿಸಲು ಸರ್ಕಾರ 1800 ಕೋಟಿ ಸುರಿಯಲು ಮುಂದಾದಾಗ ಬೆಂಗಳೂರಿಗೆ ಬೆಂಗಳೂರೇ ಬೀದಿಗೆ ಬಂದು ಸರ್ಕಾರದ ವಿರುದ್ಧ ನಿಂತಿತ್ತು. ಇಂತಹ ಸಂದರ್ಭದಲ್ಲಿಯೂ ಈ ಪ್ರಗತಿಪರರ ಗುಂಪು ಮಾತಾಡಲಿಲ್ಲ. ರೈತರ ಸಾವಿರಾರು ಎಕರೆ ಜಮೀನು ಕೊಳ್ಳೆ ಹೊಡೆದ ಆರೋಪ ಹೊತ್ತ ಅಶೋಕ್​ ಖೇಣಿಯನ್ನು ಸಿಎಂ ಸಿದ್ದರಾಮಯ್ಯನವರೇ ಅಪ್ಪಿಕೊಂಡು ಕಾಂಗ್ರೆಸ್​ಗೆ ಸೇರಿಸಿಕೊಂಡಾಗಲೂ ಇವರದ್ದು ಅದೇ ದಿವ್ಯ ಮೌನ. ಬಂಡವಾಳಶಾಹಿಗಳ ಬಗ್ಗೆ ಮಾತನಾಡುವ ಪ್ರಗತಿಪರರಿಗೆ ಅಶೋಕ್​ ಖೇಣಿ ಬಡವರ ಬಂಧುವಂತೆ ಕಾಣಿಸಿದರಾ..? ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆಯಾದಾಗ ಸಿಎಂ ಸಿದ್ದರಾಮಯ್ಯನವರ ಆಡಳಿತವನ್ನು ಪ್ರಶ್ನಿಸದೇ ತಮ್ಮ ಬಾಣವನ್ನು ಮೋದಿ ಕಡೆಗೆ ಹೂಡಿದ್ದು ಇದೇ ಪ್ರಗತಿಪರರು. ಗೌರಿ ಹಂತಕರನ್ನು ಆರು ತಿಂಗಳಾದರೂ ಬಂಧಿಸದ ಕಾಂಗ್ರೆಸ್​ ಸರ್ಕಾರದ ವಿರುದ್ಧ ಚಕಾರವನ್ನೂ ಎತ್ತುತ್ತಿಲ್ಲ. ರಾಜ್ಯಾದ್ಯಂತ ಕಾಂಗ್ರೆಸ್​ ಆಡಳಿತದ ಅವಧಿಯಲ್ಲಿ ರಾಜಕೀಯ ಹತ್ಯೆಗಳಾದಾಗ, ಲೋಕಾಯುಕ್ತರ ಕಚೇರಿಗೇ ನುಗ್ಗಿ ಲೋಕಾಯುಕ್ತರ ಹತ್ಯೆಗೆ ಯತ್ನಿಸಿದ ಘಟನೆ ನಡೆದಾಗ, ನಲಪಾಡ್ ಎಂಬ ಕಾಂಗ್ರೆಸ್​ನ ಪುಂಡ ಗೂಂಡಾಗಿರಿ ನಡೆಸಿದಾಗ, ಈ ಯಾವ ಸನ್ನಿವೇಶಗಳಲ್ಲೂ ಪ್ರಗತಿಪರ/ಬುದ್ಧಿಜೀವಿಗಳ ವಲಯ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಒಂದೇ ಒಂದು ಮಾತನ್ನೂ ಆಡಲಿಲ್ಲ. ಬಿಜೆಪಿ ಮತ್ತು ಮೋದಿ ವಿರುದ್ಧ ಕೆಂಡಕಾರುವವರು ಇಂತಹ ಯಾವುದಾದರೂ ಒಂದು ಸನ್ನಿವೇಶದಲ್ಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪ್ರಶ್ನಿಸಬಹುದಿತ್ತು ಅಲ್ಲವಾ..? ಇಂತವರು ಈಗ ಕಾಂಗ್ರೆಸ್ ಪರ ಬ್ಯಾಟಿಂಗ್​ಗೆ ಇಳಿದಿದ್ದಾರೆ. ಈ ಗುಂಪು ತಮ್ಮನ್ನು ತಾವು ಪ್ರಗತಿಪರರು, ಬುದ್ಧಿಜೀವಿಗಳು ಎಂದು ಕರೆದುಕೊಳ್ಳುವುದನ್ನು ಬಿಟ್ಟು ಕಾಂಗ್ರೆಸ್​ ವಕ್ತಾರರು, ಕಾರ್ಯಕರ್ತರು, ಅವಕಾಶವಾದಿಗಳು ಎಂದು ಕರೆದುಕೊಂಡರೆ ಅರ್ಥಪೂರ್ಣವಾಗಿರುತ್ತದೆ. ಆ ಮೂಲಕವಾದರೂ ತಮ್ಮ ಮುಖವಾಡವನ್ನು ಕಳಚಿಕೊಂಡು ಅಸಲೀ ಮುಖವನ್ನು ಪ್ರದರ್ಶಿಸಿದಂತಾಗುತ್ತದೆ. ಇವರಿಗೂ ಮೋದಿ ಭಕ್ತರಿಗೂ ಯಾವ ವ್ಯತ್ಯಾಸವಿದೆ ಹೇಳಿ..

ಬಿಜೆಪಿ ಅಧಿಕಾರದಲ್ಲಿದ್ದರೆ ಸಂವಿಧಾನಕ್ಕೆ ದಕ್ಕೆಯಾಗುತ್ತದೆ ಅನ್ನೋದು ಈ ಅವಕಾಶವಾದಿಗಳ ವಾದ. ಕೇಂದ್ರದಲ್ಲಿ ಮತ್ತು 22 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ಸಂವಿಧಾನಕ್ಕೆ ಯಾವ ಅಪಾಯವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಇದ್ದರೆ ಮಾತ್ರ ಸಂವಿಧಾನ ರಕ್ಷಣೆಯಾಗುತ್ತಾ..? ಇದೇ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯಿಂದಲೇ ಅಲ್ಲವಾ ಮೋದಿ ಪ್ರಧಾನಿಯಾಗಿರೋದು, ಬಿಜೆಪಿ 22 ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವುದು. ರಾಜಕೀಯ ಪಕ್ಷವಾಗಿ ಬಿಜೆಪಿಯನ್ನು ರಾಜಕೀಯವಾಗಿ ಎದುರಿಸುವುದನ್ನು ಬಿಟ್ಟು ಕಾಂಗ್ರೆಸ್ ಈ ಪ್ರಗತಿಪರರನ್ನು ಅಸ್ತ್ರದಂತೆ ಬಚ್ಚಿಟ್ಟುಕೊಂಡು ಚುನಾವಣೆ ಸಂದರ್ಭದಲ್ಲಿ ಹೊರಬಿಡುತ್ತದೆಯಾ..? ಸಂವಿಧಾನ ರಕ್ಷಣೆ ಮಾಡೋದಕ್ಕೆ ಪ್ರಗತಿಪರರೇನು ಗುತ್ತಿಗೆ ಪಡೆದುಕೊಂಡಿದ್ದಾರಾ…? ಈ ಹಿಂದೆ ಇದೇ ರೀತಿ ಅವಾರ್ಡ್​ ವಾಪ್ಸಿ ಅಭಿಯಾನ ಮಾಡಿ ನಗೆಪಾಟಲಿಗೀಡಾಗಿದ್ದ ಈ ಬುದ್ಧಿಜೀವಿಗಳ ವಲಯ ಈಗ ಸಂವಿಧಾನದ ರಕ್ಷಣೆಯ ಸೋಗಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕವನ್ನು ಜಯಿಸಿದರೆ ಮೋದಿ 2019ರಲ್ಲಿ ಮತ್ತೆ ಪ್ರಧಾನಿಯಾಗೋದಕ್ಕೆ ಹಾದಿ ಸುಗಮವಾಗುತ್ತದೆ. ಇದೇ ಕಾರಣದಿಂದಲೇ ಮತ್ತೆ ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಜಾತ್ಯಾತೀತ ಶಕ್ತಿಯ ಹೆಸರಿನಲ್ಲಿ ಎಲ್ಲ ಪ್ರಗತಿಪರರು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಹೊರಗುತ್ತಿಗೆ ಪಡೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಮೋದಿ ವಿರುದ್ಧವಾಗಿ ಪರ್ಯಾಯ ಶಕ್ತಿ ರೂಪಿಸಲು ಪ್ರಾದೇಶಿಕ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸುತ್ತಿವೆ. ಅದು ರಾಜಕೀಯ ಪಕ್ಷಗಳು ತಮ್ಮ ಅಸ್ಥಿತ್ವ ಸೃಷ್ಟಿಸಿಕೊಳ್ಳಲು ಮಾಡಲೇಬೇಕಾದ ಅನಿವಾರ್ಯ ಹೋರಾಟ. ಆದ್ರೆ ಈ ರಾಜ್ಯದ ಪ್ರಗತಿಪರರೇಕೆ ರಾಜಕೀಯ ಪಕ್ಷಗಳಂತೆ ವರ್ತಿಸುತ್ತಿವೆ. ಮೈತ್ರಿ ವಿಚಾರ ನಿರ್ಧರಿಸಬೇಕಾದವರು ರಾಜಕೀಯ ಪಕ್ಷಗಳು. ಅವರೇ ಸುಮ್ಮನಿರುವಾಗ ಇಲ್ಲದ ಉಸಾಬರಿ ಇವರಿಗೇಕೆ. ಈ ಪ್ರಗತಿಪರ, ಬುದ್ಧಿಜೀವಿಗಳ ಸಮುದಾಯ ಕಾಂಗ್ರೆಸ್​ ಪರ ಬ್ಯಾಟಿಂಗ್​ಗೆ ಇಳಿದಿರುವುದು ಯಾಕೆ..? ಒಂದು ರಾಜಕೀಯ ಪಕ್ಷವಾಗಿ ಬಿಜೆಪಿಯನ್ನು ವಿರೋಧಿಸಲು ಪ್ರಗತಿಪರರಿಗೆ ತಮ್ಮದೇ ಆದ ಕಾರಣಗಳಿರಬಹುದು. ಆದ್ರೆ ಕಾಂಗ್ರೆಸ್​ ಅನ್ನು ಮೋಹಿಸಲು ಇರುವ ಕಾರಣಗಳೇನು. ಬಿಜೆಪಿಯನ್ನು ವಿರೋಧಿಸಿ ಕಾಂಗ್ರೆಸ್​ ಅನ್ನು ಅಪ್ಪಿಕೊಳ್ಳುವುದು ಎಷ್ಟು ಸಮಂಜಸ.? ಕಾಂಗ್ರೆಸ್​ ಅಧಿಕಾರದಲ್ಲಿರುವಾಗ ಇದೇ ಬುದ್ಧಿಜೀವಿಗಳ ವಲಯ ಆಸ್ಥಾನ ಕಲಾವಿದರಂತೆ ಕಾಣಿಸಿಕೊಂಡು ಅನುಕೂಲಗಳನ್ನು ಆಸ್ವಾದಿಸಿಕೊಳ್ಳೋದು ಬಹಿರಂಗ ರಹಸ್ವವೇನಲ್ಲ. ಇಂತವರುಗಳನ್ನು ಮುಂದಿಟ್ಟುಕೊಂಡೇ ಕಾಂಗ್ರೆಸ್ ತಾನು ಜಾತ್ಯಾತೀತವಾದಿ ಅನ್ನೋ ಪೋಸ್​ ಕೊಡುತ್ತಿದೆ. ಈ ದೇಶದಲ್ಲಿ ಧರ್ಮದ ಹೆಸರಿನಲ್ಲಿ ಬಿಜೆಪಿ ರಾಜಕೀಯ ನಡೆಸಿದರೆ, ಜಾತಿಯ ಹೆಸರಿನಲ್ಲಿ ಕಾಂಗ್ರೆಸ್​ ರಾಜಕೀಯ ನಡೆಸುತ್ತದೆ. ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಷ್ಟೇ. ಜಾತ್ಯಾತೀತ ಎಂದು ಕರೆದುಕೊಳ್ಳುವ ಕಾಂಗ್ರೆಸ್​ಗೆ ಜಾತಿ ಬಿಟ್ಟರೆ ಬೇರೆ ರಾಜಕೀಯ ಪಟ್ಟುಗಳೇ ಇಲ್ಲ. ಇಂತಹ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಂದ ಅಂತರ ಕಾಪಾಡಿಕೊಂಡು ಜನರ ಪರವಾಗಿ ಕೆಲಸ ಮಾಡಬೇಕಾದ ಈ ಸ್ವಯಂಘೋಷಿತ ಪ್ರಗತಿಪರರು, ಬುದ್ಧಿಜೀವಿಗಳು ಕಾಂಗ್ರೆಸ್​ನ ಬಾಲಬುಡುಕರಂತೆ ವರ್ತಿಸುತ್ತಿರುವುದು ಮಾತ್ರ ನಾಚಿಕೆಗೇಡು. ಅಧಿಕೃತವಾಗಿ ಈ ಗುಂಪು ತಮ್ಮನ್ನು ತಾವು ಕಾಂಗ್ರೆಸ್ಸಿಗರು ಎಂದು ಒಪ್ಪಿಕೊಂಡು ಕಾಂಗ್ರೆಸ್​ನ ಪ್ರಗತಿಪರ/ಬುದ್ಧಿಜೀವಿಗಳ ಘಟಕ ಎಂದು ಘೋಷಿಸಿಕೊಳ್ಳುವುದು ಒಳಿತು..

%d bloggers like this: