ಪೊಲೀಸರ ವಿರುದ್ಧ ‘ಎಸ್ಮಾ’ಸ್ತ್ರ ಪ್ರಯೋಗಿಸಿದ ಸರ್ಕಾರ

2016-05-31ಜೂ.4 ರಂದು ಪೊಲೀಸರು ಕರೆನೀಡಿರುವ ಪ್ರತಿಭಟನೆ ಹತ್ತಕ್ಕಲು ಸರಕಾರ ಎಸ್ಮಾ ಅಸ್ತ್ರ ಬಳಸಿದೆ. ಮಂಗಳವಾರ ಸಂಜೆ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿತ್ತು. ಸಭೆಯ ನಿರ್ಧಾರದಂತೆ ಅಂದು ರಜೆ ಸಲ್ಲಿಸುವ ಪೊಲೀಸರ ಮೇಲೆ ಎಸ್ಮಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಸರಕಾರ ಆದೇಶ ಹೊರಡಿಸಿದೆ. ಒಳಾಡಳಿತ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಪದ್ಮಿನಿ ದೇವಿ ಈ ಆದೇಶ ಹೊರಡಿಸಿದ್ದಾರೆ.
ಪೊಲೀಸರು ಅಪರಾಧ ಪತ್ತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆಯೊಂದಿಗೆ ನಾಗರಿಕರ ಆಸ್ತಿ ಮತ್ತು ಜೀವವನ್ನು ರಕ್ಷಿಸುವುದು ರಾಜ್ಯ ಪೊಲೀಸ್ ಸಿಬ್ಬಂದಿಯ ಮೂಲ ಕರ್ತವ್ಯವಾಗಿರುತ್ತದೆ. ಪೊಲೀಸ್ ಇಲಾಖೆಯ ಸಿಬ್ಬಂದಿಯು ಕಾರ್ಯನಿರ್ವಹಿಸಲು ನಿರಾಕರಿಸಿದಲ್ಲಿ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಸುರಕ್ಷತೆ ಧಕ್ಕೆ ಉಂಟಾಗಿ ಸಮಾಜದ ಸ್ವಾಸ್ಥ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದರಿಂದ ಅಪರಾಧ ಚಟುವಟಿಕೆಗಳು ಹೆಚ್ಚಾಗಿ ಸಾರ್ವಜನಿಕ ಜೀವನ ಅಸ್ಥವ್ಯಸ್ಥವಾಗುತ್ತದೆ ಎಂಬುದು ಸರಕಾರದ ಅಭಿಪ್ರಾಯವಾಗಿದೆ. ಆದ್ದರಿಂದ ರಾಜ್ಯದ ಸುರಕ್ಷತೆ ಚದೃಷ್ಠಿಯಿಂದ ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ಅಧಿನಿಯಮ, 2013(ಎಸ್ಮಾ) ಜಾರಿ ಮಾಡಿ ಈ ಕ್ಷಣದಿಂದಲೇ ಘೋಷಿಸಲಾಗಿದೆ. ರಾಜ್ಯ ಪೊಲೀಸ್ ಸೇವೆಗೆ ಸೇರಿದ ಎಲ್ಲಾ ಸೇವೆಗಳು “ಅತ್ಯಾವಶ್ಯಕ ಸೇವೆ” ಎಂದು ಪರಿಗಣಿಸಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ.
ಈ ಮೂಲಕ ಪ್ರತಿಭಟನೆ ನಡೆಸಲು ಮುಂದಾಗಿದ್ದ ಪೊಲೀಸರ ಮೇಲೆ ಎಸ್ಮಾ ಕಾಯ್ದೆ ಜಾರಿ ಮಾಡಿ ಆದೇಶ ಹೊರಡಿಸಿದೆ.
“ಇದು ಸರಕಾರತದ ದೌರ್ಬಲ್ಯವನ್ನು ತೋರಿಸುತ್ತದೆ. ಪೊಲೀಸರ ಒಗ್ಗಟ್ಟಿನಿಂದ ಸರಕಾರ ಹೆದರಿದೆ. ಮುಂದಿನ ಸಾಧ್ಯಾ ಸಾಧ್ಯತೆಗಳ ಬಗ್ಗೆ ವಕೀಲರಿಂದ ಸಲಹೆ ಪಡೆದು ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು. ಇದು ಸರಕಾರದ ಹೇಡಿತನದ ನಿರ್ಧಾರ. ಪೊಲೀಸರೊಂದಿಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಯಾಕೆಂದರೆ ಇದು ಪೊಲೀಸರ ಜೀವನದ ಪ್ರಶ್ನೆ. ಸರಕಾರ ಪೊಲೀಸರ ಜೀವನದೊಂದಿಗೆ ಆಟವಾಡುತ್ತಿದೆ’ ಎಂದು ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ತಿಳಿಸಿದ್ದಾರೆ.

ಎಸ್ಮಾ ಕಾಯ್ದೆ ಹೇಳುವುದೇನು?

ಅಗತ್ಯ ಸೇವೆಗಳಾದ ಆರೋಗ್ಯ ಸೇವೆಗಳು, ಸಾರ್ವಜನಿಕ ಸಾರಿಗೆ, ವಿದ್ಯುತ್‌ ಪೂರೈಕೆ, ಅಗತ್ಯ ವಸ್ತುಗಳ ಮಾರಾಟದಲ್ಲಿ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರ ವರ್ಗದವರು ಮುಷ್ಕರ ನಡೆಸದಂತೆ ನೋಡಿಕೊಳ್ಳುವುದೇ ಎಸ್ಮಾ ಕಾಯ್ದೆ. ಈ ಕಾಯ್ದೆ ಜಾರಿಯಾದ ಇಲಾಖೆಗಳ ನೌಕರರು ಮುಷ್ಕರ ನಡೆಸುವುದು ಅಪರಾಧ. ಕಾಯ್ದೆ ಉಲ್ಲಂ ಸಿ ಮುಷ್ಕರದಲ್ಲಿ ಭಾಗಿಯಾದರೆ ದಂಡ ವಿಧಿಸುವ ಮತ್ತು ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವನ್ನು ಈ ಕಾನೂನು ಕಲ್ಪಿಸುತ್ತದೆ.

ಶಶಿವರ್ಣಂ

ಬೆಂಗಳೂರು ಸರಣಿ ಸ್ಫೋಟದ ಆರೋಪಿ ಪಾಕ್‌ನಲ್ಲಿ..!

bangalore serial blastಬೆಂಗಳೂರು ಸರಣಿ ಸ್ಫೋಟ ನಡೆದು ಎಂಟು ವರ್ಷಗಳ ನಂತರ ಪ್ರಮುಖ ಸಂಚುಕೋರ ಪಾಕಿಸ್ತಾನದ ಪೇಶಾವರ್‌ನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಎನ್‌ಐಎ ಅಧಿಕಾರಿಗಳು ದೃಢಪಡಿಸಿದ್ದಾರೆ.

ಕೇರಳ ಮೂಲದ ಲಷ್ಕರೆ ತಯ್ಬಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಮಹಮದ್ ಸಬೀರ್ 2008ರ ನವೆಂಬರ್ನಲ್ಲಿ ನಕಲಿ ಪಾಸ್‌ಪೋರ್ಟ್ ಬಳಿಸಿಕೊಂಡು ಮುಂಬೈ ಮಾರ್ಗವಾಗಿ ಪಾಕಿಸ್ತಾನ ತಲುಪಿ ದ್ದಾನೆ. ಕಳೆದ ತಿಂಗಳು ದುಬೈ ಪೊಲೀಸರಿಂದ ಭಾರತಕ್ಕೆ ಗಡೀಪಾರಾಗಿದ್ದ ಸಬೀರ್‌ನ ಸಹಚರ ಕೆ.ಎ. ಅನೂಪ್‌ನ ವಿಚಾರಣೆ ವೇಳೆ ಈ ಮಾಹಿತಿ ಹೊರಬಿದ್ದಿದೆ. ಸದ್ಯ ಅನೂಪ್ ಕೇರಳದ ಎರ್ನಾಕುಲಮ್‌ನ ಜೈಲಿನಲ್ಲಿದ್ದಾನೆ.

2008 ರ ಜು.25 ರಂದು ನಗರದ ಏಳು ಕಡೆ ಒಂಬತ್ತು ಬಾಂಬ್‌ಗಳು ಸರಣಿ ಸ್ಫೋಟಗೊಂಡಿದ್ದವು. ಘಟನೆಯಲ್ಲಿ ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿ ದ್ದರು. 2005ರಲ್ಲಿ ಐಐಎಸ್‌ಸಿ ದಾಳಿ ನಂತರ ನಡೆದ ಎರಡನೇ ಭಯೋತ್ಪಾದಕ ಕೃತ್ಯ ಇದಾಗಿತ್ತು. ಕೇರಳದ ಸಿಮಿ ಉಗ್ರ ಸಂಘಟನೆ ಅಧ್ಯಕ್ಷ ಸಬೀರ್ ಮೇಲೆ ಬೆಂಗಳೂರು ಸರಣಿ ಸ್ಫೋಟ, ಉಗ್ರ ಸಂಘಟನೆಗಳಿಗೆ ಯುವಕರ ನೇಮಕ ಮತ್ತು ಕೇರಳದ ಕೊಚ್ಚಿಯಲ್ಲಿ ಬಸ್ ಸುಟ್ಟುಹಾಕಿದ್ದು ಸೇರಿ ಹಲವು ಪ್ರಕರಣಗಳಿವೆ.

ಅನೂಪ್‌ನ ವಿಚಾರಣೆ ವೇಳೆ ಇಬ್ಬರ ನಡುವೆ ನಡೆದ ದೂರವಾಣಿ ಸಂಭಾಷಣೆಗಳ ಪರಿಶೀಲನೆಯಿಂದ ಆತ ಪಾಕಿಸ್ತಾನದ ಪೇಶಾ ವರ್‌ನಲ್ಲಿ ತಲೆಮರೆಸಿಕೊಂಡಿದ್ದಾನೆ. ಸದ್ಯ ಕೇರಳದಲ್ಲಿರುವ ಸಬೀರ್‌ನ ಪತ್ನಿಯನ್ನು ಹೇಗಾದರೂ ಮಾಡಿ ಪಾಕಿಸ್ತಾನಕ್ಕೆ ಕರೆಸಿ ಕೊಳ್ಳುವ ಉದ್ದೇಶದಿಂದ ಆತ ಅನೂಪ್ನೊಂದಿಗೆ ಈ ಬಗ್ಗೆ ಹಲವು ಬಾರಿ ಚರ್ಚೆ ನಡೆಸಿದ್ದ ಎಂದು ಎನ್‌ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2008ರ ಲಷ್ಕರೆ ತಯ್ಬಾ ಸಂಘಟನೆ ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಮಹಮದ್ ಸಬೀರ್ ಉಗ್ರ ಸಂಘಟನೆಗ ಳೊಂದಿಗೆ ಕೈಜೋಡಿಸಿ ಯುವಕರ ಸೆಳೆಯು ತ್ತಿದ್ದ. ಇದೇ ರೀತಿ ಐವರು ಕೇರಳದ ಯುವ ಕರ ತರಬೇತಿಗಾಗಿ ಕಾಶ್ಮೀರದಲ್ಲಿನ ಲಷ್ಕರೆ ತಯ್ಬಾ ಉಗ್ರರ ಬಳಿಗೆ ಕಳಿಸಿ ಕೊಟ್ಟಿದ್ದ. ಆದರೆ ಭದ್ರತಾಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಮೃತಪಟ್ಟು ಅಬ್ದುಲ್ ಜಬ್ಬಾರ್ ಎಂಬಾತ ಬದುಕುಳಿದಿದ್ದ. ನಂತರ ಕೇರಳ ಪೊಲೀಸರು ಬಂಧಿಸಿದ್ದರು.

ಬೆಂಗಳೂರಿನಲ್ಲಿ ಸರಣಿ ಸ್ಫೋಟ ಮತ್ತು ಉಗ್ರ ಸಂಘಟನೆಗಳಿಗೆ ಯುವಕರನ್ನು ಸೆಳೆದ ಆರೋಪದ ಮೇಲೆ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿದ್ದ ಸಬೀರ್ ನಕಲಿ ಪಾಸ್ಪೋರ್ಟ್ ಬಳಿಸಿಕೊಂಡು 2008ರ ನ.21 ರಂದು ಪಾಕಿಸ್ತಾನಕ್ಕೆ ಹಾರಿದ್ದ. ಕೇರಳದ ಶಮೀರ್ ಆಲಿಕುಟ್ಟಿ ಎಂಬಾತನ ಹೆಸರಲ್ಲಿದ್ದ ಪಾಸ್‌ಪೋರ್ಟ್ ನಕಲಿ ಮಾಡಿ ಸಬೀರ್ ತನಿಖಾಧಿಕಾರಿಗಳ ದಾರಿ ತಪ್ಪಿಸಿದ್ದ. ಪಾಕಿಸ್ತಾನದಲ್ಲಿ ಕುಳಿತು ಭಾರತದಲ್ಲಿ ಲಷ್ಕರೆ ಉಗ್ರ ಚಟುವಟಿಕೆಗಳಲ್ಲಿ ನಿರತನಾಗಿದ್ದ ರೆಹಾನ್ ಅಲಿಯಾಸ್ ಆಲಿ ಎಂಬಾತ ಸಬೀರ್ನನ್ನು ಪಾಕಿಸ್ತಾನಕ್ಕೆ ಕರೆಸಿಕೊಂಡಿದ್ದ. ರೆಹಾನ್ ಅಲಿಯಾಸ್ ವಾಲಿ 2008ರ ಮುಂಬೈ ದಾಳಿಯಲ್ಲೂ ಭಾಗಿಯಾಗಿದ್ದ ಎಂದು ಎನ್ಐಎ ಮೂಲಗಳು ತಿಳಿಸಿವೆ.

ABDUL_NASER_MADANIಮದನಿ ಬೆಂಬಲ ಕೋರಿದ್ದ ಎಲ್‌ಇಟಿ: ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಲಷ್ಕರೆ ತಯ್ಬಾ ಉಗ್ರರು 2005ರಲ್ಲಿ ಐಐಎಸ್‌ಸಿ ದಾಳಿ ನಡೆಸಿದ್ದರು. ಆದರೆ ಉಗ್ರರು ರೂಪಿಸಿದ ಯೋಜನೆಯಂತೆ ಆ ದಾಳಿ ನಡೆಯಲಿಲ್ಲ. ಅದಾದ ನಂತರ ನಗರದಲ್ಲಿ ಶಸ ಸಜ್ಜಿತ ದಾಳಿ ನಡೆಸಲು ಸಾಧ್ಯವಾಗದ ಕಾರಣ ಬಾಂಬ್ ಸ್ಫೋಟ ಮಾಡುವ ಸಂಚು ಲಷ್ಕರ್ ಉಗ್ರರು ಮಾಡಿದ್ದರು. ಇದಕ್ಕೆ ಕೇರಳದಲ್ಲಿ ಬೇರೂರಿದ್ದ ಉಗ್ರ ಸಂಘಟನೆಯ ನಾಯಕರ ಸಂಪರ್ಕಿಸಿ ಬೆಂಬಲ ನೀಡುವಂತೆ ಕೋರಲಾಗಿತ್ತು. 1998ರಲ್ಲಿ ಬಿಜೆಪಿ ನಾಯಕ ಎಲ್.ಕೆ ಅಡ್ವಾಣಿ ಅವರ ಗುರಿಯಾಗಿಸಿಕೊಂಡು ಕೋಯಮತ್ತೂರಿನಲ್ಲಿ ನಡೆಸಲಾಗಿದ್ದ ಬಾಂಬ್ ಸ್ಫೋಟದ ಆರೋಪಿ ಅಬ್ದುಲ್ ನಾಸಿರ್ ಮದನಿಯ ಬೆಂಬಲ ಕೇಳಲಾಗಿತ್ತು. ಉಗ್ರರಿಗೆ ಅಗತ್ಯ ಬೆಂಬಲ ನೀಡಲು ಮದನಿ ಒಪ್ಪಿಕೊಂಡಿದ್ದ. ಕೇರಳದ ಕಲ್ಲು ಕ್ವಾರಿಗಳಿಂದ ಅಮೋನಿಯಂ ನೈಟ್ರೇಟ್ ಸಂಗ್ರಹಿಸಿ ಬಾಂಬ್ ತಯಾರಿಸಿ ನಂತರ ದುಷ್ಕೃತ್ಯ ನಡೆಸಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮದನಿ ಸೇರಿದಂತೆ ಮೂವತ್ತಕ್ಕೂ ಹೆಚ್ಚುಮಂದಿಯ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಶಶಿವರ್ಣಂ!

ಪೊಲೀಸರಿಗೆ ವೈದ್ಯ ಪ್ರಮಾಣ ಪತ್ರ ನೀಡಬೇಡಿ-ಸರ್ಕಾರ ಆದೇಶ

police protest (2)ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಪೊಲೀಸರು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಸರಕಾರ ಹಲವು ತಂತ್ರಗಳನ್ನು ಅನುಸರಿಸುತ್ತಿದೆ.ರಜೆ ಮಂಜೂರು ಮಾಡದಂತೆ ಡಿಜಿಪಿ ಮೂಲಕ ಆದೇಶ ಹೊರಡಿಸಿದ್ದ ಸರಕಾರ ನಂತರ ಸಸ್ಪೆಂಡ್ ಮಾಡುವ ಬೆದರಿಕೆಯೊಡ್ಡಿತ್ತು. ಈಗ ಅನಾರೋಗ್ಯದ ನೆಪ ಹೇಳಿ ರಜೆ ಹಾಕುವ ಸಿಬ್ಬಂದಿಗೆ ವೈದ್ಯಕೀಯ ಪ್ರಮಾಣ ಪತ್ರ ನೀಡದಂತೆ ಆರೋಗ್ಯ ಇಲಾಖೆಗೆ ಲಿಖಿತ ಆದೇಶ ನೀಡಿದೆ. ಅಂದು ರಜೆ ಹಾಕುವ ಪೊಲೀಸರಿಗೆ ಅನಾರೋಗ್ಯದ ಕಾರಣದಿಂದಾಗಿ ರಜೆ ಸಲ್ಲಿಸಲೂ ಆಗದಂತೆ ಸರಕಾರ ಹಿಂಬಾಗಿಲ ಮೂಲಕ ಒತ್ತಡ ತಂತ್ರ ಅನುಸರಿಸುತ್ತಿದೆ.ಪ್ರತಿಭಟನೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಪೊಲೀಸರು ಅಂದು ಅನಾರೋಗ್ಯದ ನೆಪದಿಂದ ರಜೆ ಹಾಕಿ ಸಂಭಾವ್ಯ ಶಿಸ್ತು ಕ್ರಮವನ್ನು ತಪ್ಪಿಸಿಕೊಳ್ಳಲು ಯೋಜನೆ ರೂಪಿಸಿದ್ದರು. ಆದರೆ ಈಗ ಪೊಲೀಸರಿಗೆ ಪ್ರಮಾಣ ಪತ್ರ ನೀಡದಂತೆ ಆರೋಗ್ಯ ಇಲಾಖೆಗೆ ಆದೇಶ ನೀಡಿ ಏಟಿಗೆ ಎದಿರೇಟು ಕಾರ್ಯತಂತ್ರಕ್ಕೆ ಸರಕಾರ ಇಳಿದಿದೆ.

ಈ ಕಾರಣದಿಂದ ಜೂ.4 ರಂದು ರಜೆ ಸಲ್ಲಿಸುವ ಪೊಲೀಸರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಪ್ರಮಾಣ ಪತ್ರ ಸಿಗುವುದಿಲ್ಲ.‘ಇದು ಸಂವಿಧಾನ ವಿರೋಧಿ ಸರಕಾರ. ಒಂದು ಪ್ರತಿಭಟನೆಯನ್ನು ಹತ್ತಿಕ್ಕಲು ಸರಕಾರ ತನ್ನ ಅಧಿಕಾರವನ್ನುದುರ್ಬಳಕೆ ಮಾಡಿಕೊಂಡು ಈ ಆದೇಶ ನೀಡಿದೆ. ಈ ರೀತಿಯ ಆದೇಶ ಹೊರಡಿಸಲು ಕಾನೂನಿನ ಪ್ರಕಾರ ಅವಕಾಶವೇ ಇಲ್ಲ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಪ್ರಮಾಣ ಪತ್ರ ನೀಡದಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆ ನಡೆಸಿ ಅಲ್ಲಿ ಪ್ರಮಾಣ ಪತ್ರ ಪಡೆದುಕೊಳ್ಳುವಂತೆ ಎಲ್ಲ ಪೊಲೀಸರಿಗೆ ಸೂಚನೆ ನೀಡಿದ್ದೇನೆ’ ಎಂದು ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ‘ವಿಶ್ವವಾಣಿ’ಗೆ ತಿಳಿಸಿದ್ದಾರೆ

ಫೇಸ್‌ಬುಕ್, ವಾಟ್ಸ್‌ಆಪ್ ಪ್ರಚೋದನೆಗೆ ಕ್ರಮ

ಪೊಲೀಸರು ಉದ್ದೇಶಿಸಿರುವ ಪ್ರತಿಭಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ಮತ್ತು ಪ್ರಚಾರ ಸಿಗುತ್ತಿದೆ. ಇದರಿಂದ ಕಂಗೆಟ್ಟಿರುವ ಗೃಹ ಇಲಾಖೆ ಸಾಮಾಜಿಕ ಜಾಲತಾಣಗಳ ಮೂಲಕ ಪೊಲೀಸರನ್ನು ಪ್ರತಿಭಟನೆಗಿಳಿಯುವಂತೆ ಪ್ರಚೋದನೆ ನೀಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರನ್ನು ಪ್ರತಿಭಟನೆಗೆ ಪ್ರೇರೇಪಿಸುವಂತಹ ಪೋಸ್ಟ್‌ಗಳನ್ನು ಹಾಕಿದವರ ಪತ್ತೆ ಮಾಡುವ ಕೆಲಸ ನಡೆಯುತ್ತಿದೆ.

ಆತ್ಮಹತ್ಯೆಗೆ ಅನುಮತಿ ಕೊಡಿ: ಪತ್ರ

ನಗರ ಪೊಲೀಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ನಾಲ್ವರು ಪೊಲೀಸ್ ಕಾನ್ಸ್‌ಟೇಬಲ್‌ಗಳು ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ನೀಡುವಂತೆ ಕೋರಿ ರಾಜ್ಯಪಾಲರಿಗೆ ಮನವಿ ಪತ್ರ ಬರೆದಿದ್ದಾರೆ. ವೇತಮ ತಾರತಮ್ಯ, ಅವಧಿ ಮೀರಿದ ಕೆಲಸ, ಹಿರಿಯ ಅಧಿಕಾರಿಗಳಿಂದ ಕಿರುಕುಳ ಸೇರಿದಂತೆ ಹಲವು ಸಮಸ್ಯೆಗಳಿವೆ. ನಮ್ಮ ಹಕ್ಕು ಕೇಳುವ ಉದ್ದೇಶಿದಿಂದ ಜೂ.4 ರಂದು ರಜೆಗಾಗಿ ಅರ್ಜಿ ಸಲ್ಲಿಸಿದ್ದೇವೆ. ಹಿರಿಯ ಅಧಿಕಾರಿಗಳು ರಜೆ ಮಂಜೂರು ಮಾಡದಿದ್ದರೆ ಅಥವಾ ಬೇರೆ ಶಿಸ್ತು ಕ್ರಮ ತೆಗೆದುಕೊಂಡರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ದಯವಿಟ್ಟು ಅನುಮತಿ ನೀಡಿ’ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ದಶಕಗಳ ನಮ್ಮ ನಿಕೃಷ್ಠ ಬದುಕನ್ನು ಕೊನೆಗಾಣಿಸಿ ಬೇಡಿಕೆಗಳನ್ನು ಈಡೇರಿಸಿ ಅಂತಾ ಕೇಳಿದರೆ ನಮ್ಮ ಮೆಲೆ ದಬ್ಬಾಳಿಕೆ ಮಾಡುತ್ತಿರುವ ಸರಕಾರಕ್ಕೆ ನನ್ನದೊಂದು ಪ್ರಶ್ನೆ. ನೀವು ನಮ್ಮ ಮೆಲೆ ಇನ್ನೂ ಬ್ರಿಟಿಷ್ ಆಡಳಿತವನ್ನು ಹೇರಿ ನಮ್ಮನ್ನು ಶೋಷಣೆ ಮಾಡುತ್ತಿದ್ದೀರಲ್ಲಾ. ಇದು ಯಾವ ನ್ಯಾಯ ಸ್ವಾಮಿ..?- ರಮೇಶ್, ಪೇದೆ

ಶಶಿವರ್ಣಂ

ಮು೦ದುವರಿದ ಪೊಲೀಸರ ಸಾಮೂಹಿಕ ರಜೆ ಪವ೯

112D036ರಾಜ್ಯವ್ಯಾಪಿ ಜೂ.4 ರ೦ದು ಪ್ರತಿಭಟನೆಗೆ ಮು೦ದಾಗಿರುವ ಪೊಲೀಸರ ಸಾಮೂಹಿಕ ರಜೆ ಸಲ್ಲಿಕೆ ಪವ೯ ಮು೦ದುವರಿದಿದೆ. ರಾಜ್ಯ ಪೊಲೀಸ್ ಪಡೆಯ ಅಧ೯ದಷ್ಟು ಮ೦ದಿ ಈಗಾಲೇ ರಜೆ ನೀಡುವ೦ತೆ ಅಜಿ೯ ಸಲ್ಲಿಸಿದ್ದಾರೆ.
ಪ್ರತಿಭಟನೆ ಕೈ ಬಿಡುವ೦ತೆ ರಾಜ್ಯದ ಮುಖ್ಯಮ೦ತ್ರಿ ಮತ್ತು ಗೃಹ ಸಚಿವರ ಮನವಿಗೆ ಪೊಲೀಸರು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಈಗಾಗಲೇ ರಾಜ್ಯಾದ್ಯ೦ತ 35 ಸಾವಿರಕ್ಕೂ ಹೆಚ್ಚು ಪೊಲೀಸರು ಪ್ರತಿಭಟನೆಯಲ್ಲಿ ಭಾಗಿಯಾಗಲು ರಜೆ ನೀಡುವ೦ತೆ ಅಜಿ೯ ಸಲ್ಲಿಸಿದ್ದಾರೆ. ಅ೦ದು ಯಾರಿಗೂ ರಜೆ ಮ೦ಜೂರು ಮಾಡದ೦ತೆ ಡಿಜಿಪಿ ಓ೦ ಪ್ರಕಾಶ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಕ್ಯಾರೆ ಅನ್ನದ ಪೊಲೀಸರು ಸಾಮೂಹಿಕವಾಗಿ ರಜೆಗೆ ಅಜಿ೯ ಸಲ್ಲಿಸುತ್ತಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆಯ ಬಲ 73 ಸಾವಿರ. ಇದರಲ್ಲಿ ಸುಮಾರು 60 ಸಾವಿರದಷ್ಟು ಮ೦ದಿ ಕಾನ್ಸ್ ಟೇಬಲ್‍ಗಳೇ ಇದ್ದಾರೆ. ರಜೆ ಸಲ್ಲಿಸಿರುವ ಬಹುತೇಕ ಮ೦ದಿ ಕಾನ್ಸ್‍ಟೇಬಲ್ ಮತ್ತು ಎಎಸ್‍ಐ ದಜೆ೯ಯ ಸಿಬ್ಬ೦ದಿ. ಅಧ೯ಕ್ಕೂ ಅ˜ಕ ಮ೦ದಿ ಈಗಾಗಲೇ ರಜೆ ಅಜಿ೯ ಸಲ್ಲಿಸಿದ್ದು ಈ ಸ೦ಖ್ಯೆ ಜೂ.4 ರ ವೇಳೆಗೆ ಐವತ್ತು ಸಾವಿರಕ್ಕೆ ದಾಟಿದರೂ ಅಚ್ಚರಿಯಿಲ್ಲ. ಒ೦ದು ವೇಳೆ ಇಷ್ಟು ದೊಡ್ಡ ಸ೦ಖ್ಯೆಯಲ್ಲಿ ಪೊಲೀಸರು ರಜೆ ಹಾಕಿ ಪ್ರತಿಭಟನೆ ನಡೆಸಿದ್ದೇ ಆದರೆ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಇ೦ತದ್ದೊ೦ದು ಬೆಳವಣಿಗೆಗೆ ಕಾರಣವಾಗಲಿದೆ.

“ಮೂವತ್ತು ವಷ೯ ಪೊಲೀಸ್ ಇಲಾಖೆಯಲ್ಲಿ ಜೀತದಾಳುಗಳ ರೀತಿ ಕೆಲಸ ಮಾಡುವುದಕ್ಕಿ೦ತ ಜೂ.4 ರ೦ದು ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ. ನನ್ನನ್ನು ಕೆಲಸದಿ೦ದ ತೆಗೆದರೆ ಕಾನೂನು ರೀತಿ ಹೋರಾಟ ಮಾಡುತ್ತೇನೆ. ನನ್ನ ಹಕ್ಕಿನ ರಜೆಯನ್ನು ಕಿತ್ತುಕೊಳ್ಳಲು ಯಾರಿ೦ದಲೂ ಸಾಧ್ಯವಿಲ್ಲ. ಇಷ್ಟು ದಿನ ನಮ್ಮ ಸಮಸ್ಯೆಗಳನ್ನು ಕಿವಿಗೆ ಹಾಕಿಕೊಳ್ಳದವರು ಈಗ ನಮ್ಮ ಒಗ್ಗಟ್ಟು ನೋಡಿ ಸಮಸ್ಯೆ ಬಗೆಹರಿಸುವ ಮಾತು ಗಳನ್ನಾಡುತ್ತಿದ್ದಾರೆ. ಇ೦ತಹ ಓಲ್ಯೆಕೆಗಳಿಗೆ ನಾವು ಬಲಿಯಾಗುವುದಿಲ್ಲ’ ಎ೦ದು ಪೊಲೀಸ್ ಪೇದೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮಾನತು ಬೆದರಿಕೆಗೆ ಜಗ್ಗದ ಪೊಲೀಸರು
ಪ್ರತಿಭಟನೆ ನಡೆಸುವ ಉದ್ದೇಶದಿ೦ದ ಜೂ.4 ರ೦ದು ರಜೆಗೆ ಅಜಿ೯ ಸಲ್ಲಿಸಿರುವ ಪೊಲೀಸರನ್ನು ಸಸ್ಪೆ ೦ಡ್ ಮಾಡಲಾಗುವುದು ಎ೦ಬ ಹಿರಿಯ ಅಕಾರಿಗಳ ಬೆದರಿಕೆಗೆ ಪೇದೆಗಳು ಜಗ್ಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಐಪಿಎಸ್ ಅಕಾರಿಗಳ ಈ ಷಡ್ಯ೦ತ್ರದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. “ಕತ೯ವ್ಯ ನಿರತ ಅಕಾರಿಯನ್ನು ಸಸ್ಪೆ ೦ಡ್ ಮಾಡಲಾಗುತ್ತದೆ ಎ೦ಬ ಬೆದರಿಕೆಯೇ ಕಾನೂನು ಬಾಹಿರ. ಆದರೂ ಈ ರೀತಿ ಸಿಬ್ಬ೦ದಿಯಲ್ಲಿ ಭಯ ಸೃಷ್ಟಿಸಲು ಹಿರಿಯ ಅಕಾರಿಗಳು ಷಡ್ಯ೦ತ್ರ ರೂಪಿಸುತ್ತಿದ್ದಾರೆ. ನಮ್ಮ ಒಗ್ಗಟ್ಟನ್ನು ಒಡೆಯಲು ಈ ರೀತಿ ಮಾಡಲಾಗುತ್ತಿದೆ’ ಎ೦ದು ಪೊಲೀಸರಲ್ಲಿ ಧೈಯ೯ ತು೦ಬುವ ಕೆಲಸ ನಡೆಯುತ್ತಿದೆ.

ದಬ್ಬಾಳಿಕೆಯ ಮೂಲಕ ಕೆಲ ಪೊಲೀಸರಿ೦ದ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ. ರಜೆ ಅಜಿ೯ ಹಾಕಿ ತಪ್ಪು ಮಾಡಿದ್ದೇನೆ ಎ೦ದು ಕೆಲವು ಹಿರಿಯ ಅಕಾರಿಗಳು ಮುಚ್ಚಳಿಕೆ ಬರೆಸಿಕೊಳ್ಳುತ್ತಿ ದ್ದಾರೆ. ಈ ಗೊಡ್ಡು ಬೆದರಿಕೆಗಳಿಗೆ ನಾವು ಜಗ್ಗುವುದಿಲ್ಲ. –ಶಶಿಧರ್, ಕನಾ೯ಟಕ ಪೊಲೀಸ್ ಮಹಾಸ೦ಘದ ಅಧ್ಯಕ್ಷ

ವೇತನ ತಾರತಮ್ಯವೇ ದೊಡ್ಡ ಸಮಸ್ಯೆ

ಕನಾ೯ಟಕ ಪೊಲೀಸ್ ಸಿಬ್ಬ೦ದಿಗಳ ಮೂಲ ವೇತನ 11,600 ಮತ್ತು ಡಿಎ, ಇತರೆ ಭತ್ಯೆಗಳು ಸೇರಿ 17000 ಆಗುತ್ತದೆ. ಅದೇ ರೀತಿ ಹೊರ ರಾಜ್ಯದ ಪೊಲೀಸ್ ಸಿಬ್ಬ೦ದಿಗಳ ಮೂಲ ವೇತನ 23,200 ಮತ್ತು ಡಿಎ, ಇತರೆ ಭತ್ಯೆ ಗಳು ಸೇರಿ ಸುಮಾರು 32,000 ದಿ೦ದ 35000 ಆಗುತ್ತದೆ. ಅ೦ದರೆ ಕನಾ೯ಟಕ ರಾಜ್ಯ ಪೊಲೀಸರಿಗೂ ಹೊರ ರಾಜ್ಯದ ಪೊಲೀಸರಿಗೂ ವೇತನದಲ್ಲಿ ಇರುವ ವ್ಯತ್ಯಾಸ ಸುಮಾರು 15ರಿ೦ದ 18 ಸಾವಿರ.

ಶಶಿವರ್ಣಂ

ಪೊಲೀಸ್ ಪ್ರತಿಭಟನೆಗೆ ಸಸ್ಪೆಂಡ್ ಗುಮ್ಮ .. !

456ಜೂ.4 ರಂದು ರಾಜ್ಯವ್ಯಾಪಿ ಪ್ರತಿಭಟನೆ ಮಾಡಲು ಮುಂದಾಗಿರುವ ಪೊಲೀಸರಿಗೆ ‘ಸಸ್ಪೆಂಡ್’ ಗುಮ್ಮ ಕಾಡುತ್ತಿದೆ. ಕೆಳ ಹಂತದ ಪೊಲೀಸರಲ್ಲಿನ ಒಗ್ಗಟ್ಟಿನಿಂದ ಕಂಗೆಟ್ಟಿರುವ ಹಿರಿಯ ಪೊಲೀಸ್ ಅಧಿಕಾರಿಗಳು ಈಗ ಒತ್ತಡ ತಂತ್ರ ಅನುಸರಿಸಲು ಮುಂದಾಗಿ­ದ್ದಾರೆ.ಹಲವು ಬೇಡಿಕೆ ಮುಂದಿಟ್ಟುಕೊಂಡು ‘ಅಖಿಲ ಕರ್ನಾಟಕ ಪೊಲೀಸ್ ಮಹಾ­ಸಂಘ’ದ ರಾಜ್ಯಾಧ್ಯಕ್ಷ ಶಶಿಧರ್ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಪ್ರಚಾರ ಮಾಡಲಾಗುತ್ತಿದ್ದು, ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅನೇಕ ವರ್ಷಗಳಿಂದ ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಕೆಳ ಹಂತದ ಪೊಲೀಸ್ ವಲಯ ಸಹನೆಯ ಕಟ್ಟೆ­ಯೊಡೆದು ಹೋರಾಟಕ್ಕೆ ಮುಂದಾಗಿದೆ

.ಹೇಗಾದರೂ ಮಾಡಿ ಪ್ರತಿಭಟನೆಯನ್ನು ಹತ್ತಿಕ್ಕಲೇ ಬೇಕು ಎಂಬ ನಿರ್ಧಾರಕ್ಕೆ ಬಂದಿ­ರುವ ಐಪಿಎಸ್ ಅಧಿಕಾರಿಗಳ ಬಳಗ ಪ್ರತಿಭಟನೆಯಲ್ಲಿ ಭಾಗಿಯಾಗುವ ಪೊಲೀ­ಸರನ್ನು ಸಸ್ಪೆಂಡ್ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ರಜೆಗೆ ಅರ್ಜಿ ಸಲ್ಲಿಸುತ್ತಿರುವ ಪೊಲೀಸರಿಗೆ ರಜೆ ಮಂಜೂರು ಮಾಡಿ ಎಂದು ಡಿಜಿಪಿ ಓಂ ಪ್ರಕಾಶ್ ಕಟ್ಟು ನಿಟ್ಟಿನ ಸೂಚನೆ ನೀಡಿದ ಬೆನ್ನಲ್ಲೇ ಸಸ್ಪೆಂಡ್ ಮಾಡುವ ಬೆದರಿಕೆ ಒಡ್ಡಲಾಗುತ್ತಿದೆ. ಇದು ಪೊಲೀಸ್ ಕಾನ್ಸ್‌ಟೇಬಲ್‌ಗಳ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿ ಗುಂಪು ಗುಂಪಾಗಿ ರಜೆ ಪತ್ರ ನೀಡಿ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣ­ಗಳಲ್ಲಿ ಹರಿಬಿಡುತ್ತಿದ್ದಾರೆ. ಇದರಿಂದ ಸೂರ್ತಿಗೊಂಡಿರುವ ಮತ್ತಷ್ಟು ಪೊಲೀಸರು ರಜೆಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಅಧಿಕಾರ ದುರುಪಯೋಗ ಮಾಡಿ­ಕೊಂಡು, ಒತ್ತಡ ಪ್ರಯೋಗಿಸಲಾಗುತ್ತಿದೆ. ತಪ್ಪು ಮಾಡಿದರೆ ನೋಟಿಸ್ ಕೊಡಲಿ. ಪೊಲೀಸರಿಗೆ ಭಯ ಉಂಟು ಮಾಡಿ ಬೆದರಿಕೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಸಸ್ಪೆಂಡ್ ಮಾಡುವುದನ್ನು ಪೂರ್ವ ನಿರ್ಧಾರ ಮಾಡಲು ಸಾಧ್ಯವಿಲ್ಲ. ಸಾಮೂಹಿಕ ರಜೆ ಹಾಕುವ ಮೂಲಕ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ‘ವಿಶ್ವವಾಣಿ’ಗೆ ತಿಳಿಸಿದ್ದಾರೆ.

ಹಲವು ವರ್ಷಗಳಿಂದ ನಮ್ಮ ಪೊಲೀಸರು ಬಿಡುವಿಲ್ಲದೇ ಕೆಲಸ ನಿರ್ವಹಿಸಿದ್ದಾರೆ. ಜೂ.4 ರಂದು ಒಂದು ದಿನ ಸರಕಾರ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಿ. ನಾವು ಶಿಸ್ತಿನ ಸಿಪಾಯಿಗಳು. ಶಾಂತಿಯುತವಾಗಿ ಹೋರಾಟ ನಡೆಸುತ್ತೇವೆ. ನಮ್ಮ ಪೊಲೀಸರು ಅಂದು ರಜೆ ಹಾಕಿ ಮನೆಗಳಲ್ಲಿ ಇರುತ್ತಾರೆ. ಅವರ ಪರವಾಗಿ ಕುಟುಂಬಗಳು ಬೀದಿಗಿಳಿಯಲಿವೆ. ನಮಗೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಯಾವ ಶಕ್ತಿಗಳೂ ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ– ಶಶಿಧರ್ , ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ.

15 ಸಾವಿರ ಮಂದಿಯಿಂದ ರಜೆ ಅರ್ಜಿ

ರಾಜ್ಯದ ಪೊಲೀಸ್ ಬಲ ಇರುವುದು 73 ಸಾವಿರ. ಇಲಾಖೆಗೆ ಕಾನ್ಸ್‌ಟೇಬಲ್ ಮಟ್ಟದ ಸಿಬ್ಬಂದಿಯೇ ಶಕ್ತಿ. ಸುಮಾರು 60 ಸಾವಿರದಷ್ಟು ಕಾನ್ಸ್‌ಟೇಬಲ್‌ಗಳು ರಾಜ್ಯದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಜತೆಗೆ ಎಸ್‌ಐ ಮಟ್ಟದ ಅಧಿಕಾರಿಗಳಿಂದಲೂ ಹೋರಾಟಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಈಗಾಗಲೇ ಸುಮಾರು 15 ಸಾವಿರ ಪೊಲೀಸರು ಒಂದು ದಿನದ ಕಿರುಕುಳ ರಜೆ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಫೇಸ್‌ಬುಕ್, ಟ್ವೀಟರ್ ಮತ್ತು ವಾಟ್ಸ್ ಆಪ್ ಮೂಲಕ ಹೋರಾಟದಲ್ಲಿ ಭಾಗವಹಿಸುವಂತೆ ಪೊಲೀಸರಲ್ಲಿ ಜಾಗೃತಿ ಮೂಡಿ ಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ರಜೆ ಅರ್ಜಿ ಸಲ್ಲಿಸಲು ಮುಂದಾಗಲಿದ್ದಾರೆ.

ಪುಂಡ ಪೋಕರಿಗಳು ಪ್ರತಿಭಟನೆ ಮಾಡ್ತೀವಿ ಅಂತಿದ್ದಾರೆ: ಡಿಜಿಪಿ

om prakashಯಾರೂ ಪ್ರತಿಭಟನೆ ಮಾಡುತ್ತಿಲ್ಲ. ಕೆಲವು ಪುಂಡ ಪೋಕರಿಗಳು ಪ್ರತಿಭಟನೆ ಮಾಡುತ್ತೇವೆ ಎನ್ನುತ್ತಿದ್ದಾರೆ. ನಾವು ಇಲಾಖಾ ಮಟ್ಟದಲ್ಲಿ ಬಗೆಹರಿಸಿಕೊಳ್ಳುತ್ತೇವೆ. ಹೊರಗಿನವರು ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮದು ಶಿಸ್ತಿನ ಇಲಾಖೆ. ಪೊಲೀಸರನ್ನು ಪ್ರತಿಭಟನೆ ಮಾಡಲು ಕುಮ್ಮಕ್ಕು ನೀಡಿದರೆ ಅದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ.

ಪೊಲೀಸ್ ವಲಯದಲ್ಲಿ ಸಮಸ್ಯೆಗಳಿರುವುದು ನಿಜ. ಅವುಗಳನ್ನು ಸರಿಪಡಿಸಲು ನಾವು ಪ್ರಯತ್ನ ಮಾಡುತ್ತಿ ದ್ದೇವೆ. ಈ ಬಗ್ಗೆ ಸರಕಾರದೊಂದಿಗೆ ಮಾತನಾಡುತ್ತಿದ್ದೇವೆ. ಸಾಮೂಹಿಕ ರಜೆ ಹಾಕುತ್ತಿದ್ದಾರೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಪ್ರತಿಭಟನೆಯಲ್ಲಿ ಭಾಗಿಯಾಗುವವರ ವಿರುದ್ಧ ಕಾನೂನಿನ ಆಯ್ಕೆಗಳಿವೆ. ಆ ಪ್ರಕಾರ ಕ್ರಮ ಕೈಗೊಳ್ಳಲು ಚರ್ಚೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ವಿಶ್ವವಾಣಿಗೆ ತಿಳಿಸಿದ್ದಾರೆ.

ಶಶಿವರ್ಣಂ!

ಜೂನ್.4 ರ೦ದು ಪೊಲೀಸ್ ಕಹಳೆ ಮೊಳಗುತ್ತಾ..?

police protestಪೊಲೀಸರು ಜೂ.4 ರ೦ದು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಿದ್ದಾರೆ ಎ೦ಬ ವಿಚಾರ ಭಾರಿ ಸ೦ಚಲನ ಸೃಷ್ಟಿಸಿದೆ. ಈಗಾಗಲೇ ಪೊಲೀಸರು ಸಾಮೂಹಿಕ ರಜೆ ಹಾಕಿ ಪ್ರತಿ ಭಟನೆಯಲ್ಲಿ ಭಾಗವಹಿಸಲು ಸಜ್ಜಾದರೆ, ರಜೆ ಮ೦ಜೂರು ಮಾಡದ೦ತೆ ಪೊಲೀಸ್ ಮಹಾನಿದೇ೯ಶಕ ಓ೦ ಪ್ರಕಾಶ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿ ರುವ ರಾಜಕೀಯ ಹಸ್ತಕ್ಷೇಪ, ವೇತನ ತಾರತಮ್ಯ, ದೌಜ೯ನ್ಯ ಸೇರಿದ೦ತೆ ಹಲವು ಬೇಡಿಕೆಗಳ ಮು೦ದಿಟ್ಟು ಪ್ರತಿಭಟನೆ ನಡೆಸುವ೦ತೆ ರಾಜ್ಯ ಪೊಲೀಸ್ ಸ೦ಘದ ಅಧ್ಯಕ್ಷ ಶಶಿಧರ್ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣ, ಸ೦ಘಟನೆಗಳಿ೦ದ ಈ ಹೋರಾಟಕ್ಕೆ ಬೆ೦ಬಲ ವ್ಯಕ್ತವಾಗಿದೆ.

ರಾಜ್ಯದ ಪೊಲೀಸರ ಸ೦ಖ್ಯೆ 73 ಸಾವಿರ. ಇದರಲ್ಲಿ 60 ಸಾವಿರಕ್ಕೂ ಹೆಚ್ಚು ಮ೦ದಿ ಕಾನ್‍ಸ್ಟೇಬಲ್‍ಗಳೇ ಇದ್ದಾರೆ. ಅ೦ದಾಜಿನ ಪ್ರಕಾರ ಈಗಾಗಲೇ ಹತ್ತು ಸಾವಿರಕ್ಕೂ ಹೆಚ್ಚು ಮ೦ದಿ ಜೂ.4ರ೦ದು ರಜೆ ನೀಡುವ೦ತೆ ಕೋರಿ ಅಜಿ೯ ಸಲ್ಲಿಸಿದ್ದಾರೆ. ಇನ್ನಷ್ಟು ಮ೦ದಿ ರಜೆಗೆ ಅಜಿ೯ ಸಲ್ಲಿಸಲು ಮು೦ದಾಗಿದ್ದಾರೆ. ಕೆಲಸ ಕಳೆದುಕೊಳ್ಳುವ ಭೀತಿಯಿ೦ದ ಕೆಲವರು ರಜೆ ಹಾಕಲು ಹಿ೦ಜರಿಯುತ್ತಿದ್ದಾರೆ.

ಪ್ರತಿಭಟನೆಗೆ ಇಲಾಖೆಯ ಒಳಗೇ ಇಷ್ಟು ದೊಡ್ಡ ಮಟ್ಟದ ಬೆ೦ಬಲ ವ್ಯಕ್ತವಾಗಿರೋದು ಗೃಹ ಸಚಿವ ಜಿ. ಪರಮೇಶ್ವರ್ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಒ೦ದು ವೇಳೆ ಜೂ.4 ರ೦ದು ಪೊಲೀಸರು ಸಾಮೂಹಿಕವಾಗಿ ರಜೆ ಹಾಕಿ ಪ್ರತಿಭಟನೆ ನಡೆಸಿದ್ದೇ ಆದಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಪೊಲೀಸರು ಬೀದಿಗಿಳಿದ೦ತಾಗು ತ್ತದೆ. ಆ ಮೂಲಕ ರಾಜ್ಯ ಸರಕಾರಕ್ಕೆ ದೊಡ್ಡ ಮುಖಭ೦ಗವಾಗಲಿದೆ.

ಈ ಮುಖಭ೦ಗ ತಪ್ಪಿಸಿಕೊಳ್ಳಲು ಪೊಲೀಸ್ ಮಹಾನಿದೇ೯ಶಕ ಓ೦ ಪ್ರಕಾಶ್ ಅ೦ದು ಯಾರಿಗೂ ರಜೆ ಮ೦ಜೂರು ಮಾಡದ೦ತೆ ಎಲ್ಲ ವಲಯಗಳ ಎಡಿಜಿಪಿ, ಎಸ್‍ಪಿಗಳು ಮತ್ತು ಕಮಿಷನರ್‍ಗಳಿಗೆ ಲಿಖಿತ ಸೂಚನೆ ನೀಡಿದ್ದಾರೆ. ಇದಷ್ಟೇ ಅಲ್ಲದೇ ರಜೆ ಹಾಕಿ ಪ್ರತಿಭಟನೆಯಲ್ಲಿ ಭಾಗಿಯಾದರೆ ಅ೦ಥವರನ್ನು ಅಮಾನತು ಗೊಳಿಸಲಾಗುವುದು ಎ೦ಬ ಸ೦ದೇಶವನ್ನೂ ನೀಡಲಾಗಿದೆ.

ಅ ನಿಯಮಗಳ ಪ್ರಕಾರ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬ೦ದಿ ಪ್ರತಿಭಟನೆಯಲ್ಲಿ ಭಾಗವಹಿಸುವ೦ತಿಲ್ಲ. ಎಸ್ಮಾ ಕಾಯ್ದೆಯ ಅಡಿಯಲ್ಲಿ ಬರುವುದ ರಿ೦ದ ಪ್ರತಿಭಟನೆ ನಡೆಸುವ ಹಕ್ಕು ಪೊಲೀಸರಿಗಿಲ್ಲ. ಇದನ್ನು ಮೀರಿಯೂ ಪ್ರತಿಭಟನೆ ನಡೆಸಲು ಮು೦ದಾಗಿರೋದು ಮತ್ತು ಅದಕ್ಕೆ ವ್ಯಾಪಕ ಬೆ೦ಬಲ ವ್ಯಕ್ತವಾಗುತ್ತಿರುವುದು ಆಶ್ಚಯ೯ಕ್ಕೆ ಕಾರಣವಾಗಿದೆ.

 ಜೂ.4 ರ೦ದು ಸಾಮೂಹಿ ರಜೆ ಹಾಕಿ ಎಲ್ಲ ಪೊಲೀಸರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಪೊಲೀಸ್ ಕುಟು೦ಬಗಳೂ, ಸ೦ಘ ಸ೦ಸ್ಥೆಗಳು ಕೂಡ ಹೋರಾಟಕ್ಕೆ ಕೈ ಜೋಡಿಸಿವೆ. ಆ ಮೂಲಕ ಪೊಲೀಸ್ ಶಕ್ತಿಯನ್ನು ನಾವು ಸರಕಾರಕ್ಕೆ ಮನವರಿಕೆ ಮಾಡಿಕೊಡಲಿದ್ದೇವೆ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ಉಗ್ರ ಸ್ವರೂಪಕ್ಕೆ ತಿರುಗಲಿದೆ. – ಶಶಿಧರ್ ಪೊಲೀಸ್ ಸ೦ಘದ ಅಧ್ಯಕ್ಷ 

ಬೇಡಿಕೆಗಳೇನು? 

 • ಪ್ರತ್ಯೇಕ ವೇತನ ಆಯೋಗ ರಚಿಸಬೇಕು.
 •  ಶಿಸ್ತೀನ ಹೆಸರಲ್ಲಿ ನಡೆಯುತ್ತಿರುವ ದೌಜ೯ನ್ಯ ನಿಲ್ಲಬೇಕು.
 •  ಕೆಲಸದ ಸಮಯ ನಿಗದಿಪಡಿಸಬೇಕು.
 •  ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ ಕೊನೆಗಾಣಬೇಕು.
 •  ಹಿರಿಯ ಅಧಿಕಾರಿಗಳ ಕಿರುಕುಳ ನಿಲ್ಲಬೇಕು.
 •   ಎರಡನೇ ದಜೆ೯ಯ ಪ್ರಜೆಗಳ೦ತೆ ಕಾಣಬಾರದು
 •  ಇಲಾಖೆ ಸುಧಾರಣೆಯ ಮಾತು ಗಳು ಕಾಯ೯ರೂಪಕ್ಕೆ ಬರಬೇಕು

 ನಾವೇಕೆ ಪ್ರತಿಭಟನೆ ಮಾಡಬಾರದು? 

 •  ನಮ್ಮ ಹಕ್ಕುಗಳನ್ನು ಕೇಳಬಾರದು ಎ೦ದರೆ ನಾವೇನು ಜೀತದಾಳುಗಳೇ?
 •  ನಾವು ಭಾರತೀಯರು ಪ್ರತಿಭಟಿಸುವ, ಹೋರಾಟ ಮಾಡುವ ಹಕ್ಕು ನಮಗಿದೆ
 •  ನೆರೆಯ ರಾಜ್ಯಗಳಲ್ಲಿ ನಮಗಿ೦ತ ದುಪ್ಪಟ್ಟು ಸ೦ಬಳ ಅಲ್ಲಿನ ಪೊಲೀಸರು ಪಡೆಯುತ್ತಿದ್ದಾರೆ.
 •  ಈ ಅನ್ಯಾಯ ಕೇಳುವ೦ತಿಲ್ಲವೇ?
 •  ನಾವು ಶಿಸ್ತೀನ ಇಲಾಖೆಯ ಸಿಬ್ಬ೦ದಿ, ಶಿಸ್ತೀನಿ೦ದಲೇ ಪ್ರತಿಭಟಿಸುತ್ತೇವೆ.

ಶಶಿವರ್ಣಂ!

ಐಐಎಸ್‌ಸಿ ದಾಳಿ:ಮಾರಣ ಹೋಮ ತಪ್ಪಿಸಿದ್ದ ಟ್ರಾಫಿಕ್

PHOTO CAPTION

ಭಯೋತ್ಪಾದಕ ದಾಳಿ ನಡೆದ ಐಐಎಸ್‌ಸಿ ಆವರಣ.

ನಗರದ ಭಾರತೀಯ ವಿಜ್ಞಾನ ಸ೦ಸ್ಥೆ (ಐಐಎಸ್ ಸಿ) ಆವರಣದಲ್ಲಿ 2005ರಲ್ಲಿ ನಡೆದಿದ್ದ ಗು೦ಡಿನ ದಾಳಿ ಮತ್ತು ವಿಜ್ಞಾನಿ ಹತ್ಯೆ ಪ್ರಕರಣ ಸ೦ಬ೦ಧ ಸೆಷನ್ಸ್ ಕೋಟ್‍೯ ನೀಡಿದ್ದ ತೀಪು೯ ಎತ್ತಿ ಹಿಡಿದಿರುವ ಹ್ಯೆಕೋಟ್‍೯, ಐವರಿಗೆ ಜೀವಾವಧಿ ಶಿಕ್ಷೆ ಕಾಯ೦ಗೊಳಿಸಿದೆ.
ಪಾಕ್ ಮೂಲದ ಉಗ್ರ ಸ೦ಘಟನೆ ಲಷ್ಕರೆ ತಯ್ಯಬಾ ಸದಸ್ಯರಾದ ಮುಹಮ್ಮದ್ ಲಷ್ಠ್ರೆತಯ್ಯಬಾ ಸದಸ್ಯರಾದ ಮುಹಮ್ಮದ್ ರಝಾವುಲ್ ರೆಹಮಾನ್ , ಅಫ್ಸರ್ ಪಾಷಾ, ನೂರುಲ್ಲಾ ಖಾನ್, ಮೊಹಮ ದ್ ಇಫಾ ೯ನ್ ಮತ್ತು ನಜ್ಮುದ್ದೀನ್ ಅಲಿ ಯಾಸ್ ಮುನ್ನಾ ಅವರ ಜೀವಾವಧಿ ಶಿಕ್ಷೆ ಕಾಯ೦ ಗೊಳಿಸಲಾಗಿದೆ. ಮೆಹಬೂ ಬ್ ಇಬ್ರಾಹಿ೦ಗೆ ವಿಧಿಸ ಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಏಳು ವಷ೯ಕ್ಕೆ ಇಳಿಸಿ ಆತ ಶಿಕ್ಷೆ ಪೂರೈಸಿರುವುದರಿ೦ದ ಬಿಡುಗಡೆ ಮಾಡುವ೦ತೆ ಆದೇಶಿಸಲಾಗಿದೆ.

ಅದು ನಗರದಲ್ಲಿ ನಡೆದ ಮೊದಲ ಭಯೋತ್ಪಾದಕ ದಾಳಿ. ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಆವರಣದಲ್ಲಿ ನಡೆ ಯುತ್ತಿದ್ದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ವಿಜ್ಞಾನಿಗಳ ಗುರಿಯಾಗಿಸಿ ಕೊಂಡು ಈ ದಾಳಿ ನಡೆಸಲಾಗಿತ್ತು.

2005ರ ಡಿಸೆಂಬರ್ 28ರಂದು ಏಕಾಏಕಿ ಐಐಎಸ್‌ಸಿ ಆವರಣಕ್ಕೆ ನುಗ್ಗಿದ ಇಬ್ಬರು ಶಸ ಸಜ್ಜಿತ ಉಗ್ರರು ಸಮ್ಮೇಳನ ಮುಗಿಸಿ ಹೊರಗೆ ಬರುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ದೆಹಲಿ ಐಐಟಿಯ ಪ್ರೊ.ಮನೀಷ್ ಚಂದ್ರಪುರಿ ಸ್ಥಳ ದಲ್ಲೇ ಮೃತಪಟ್ಟಿದ್ದರೆ, ಗರ್ಭಿಣಿ ಸಹಿತ ನಾಲ್ವರು ಗಾಯಗೊಂಡಿದ್ದರು.

ವಿಜ್ಞಾನಿಗಳು ಮತ್ತು ಪ್ರೊಫೆಸರ್‌ಗಳು ಉಳಿದುಕೊಂಡಿದ್ದ ಲಿ ಮೆರಿಡಿಯನ್ ಹೋಟೆಲ್ ಮತ್ತು ಐಐಎಸ್‌ಸಿ ಮೇಲೆ ದಾಳಿ ಮಾಡಲು ಉಗ್ರರು ಸಂಚು ರೂಪಿಸಿದ್ದರು. ಹೊಟೇಲ್ ಮೇಲೆ ದಾಳಿ ಮಾಡಲು ಸಾಧ್ಯ ವಾಗದ ಹಿನ್ನೆಲೆಯಲ್ಲಿ ದಾಳಿಗೆ ಐಐಎಸ್‌ಸಿ ಆವರಣವನ್ನು ಆಯ್ದುಕೊಂಡಿದ್ದರು.

ನಗರದ ಟ್ರಾಫಿಕ್‌ನಿಂದ ಉಪಕಾರ: ಅಂತಾ ರಾಷ್ಟ್ರೀಯ ಸಮ್ಮೇಳನ ನಡೆಯುತ್ತಿದ್ದ ಟಾಟಾ ಆಡಿಟೋರಿಯಂಗೆ ನುಗ್ಗಿ ಗ್ರೆನೇಡ್ ಎಸೆದನಂತರ ಗುಂಡಿನ ದಾಳಿ ನಡೆಸುವುದು ಉಗ್ರರ ಯೋಜನೆಯಾಗಿತ್ತು. ಅದಕ್ಕೆ ಸರಿ ಯಾಗಿ ಉಗ್ರ ಅಬು ಹಮ್ಜಾ ನಿಗದಿತ ಸಮ ಯಕ್ಕೆ ಐಐಎಸ್‌ಸಿ ಕ್ಯಾಂಪಸ್ ಸೇರಿಕೊಂ ಡಿದ್ದ. ಮತ್ತೊಬ್ಬ ಉಗ್ರ ಸಬಾಹುದ್ದೀನ್ ಅಹಮದ್ ಎಂಬಾತ ಅಂಬಾಸಿಡರ್ ಕಾರಿ ನಲ್ಲಿ ಎಕೆ 47 ಬಂದೂಕುಗಳೊಂದಿಗೆ ಕ್ಯಾಂಪಸ್‌ಗೆ ಬರು ತ್ತಿದ್ದ. ಆತ ಬರುತ್ತಿದ್ದ ಕಾರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿತ್ತು.

ಯೋಜಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಸಬಾವುದ್ದೀನ್ ಐಐಎಸ್‌ಸಿ ಆವರಣಕ್ಕೆ ಬಂದಿದ್ದ. ಅಷ್ಟರಲ್ಲಿ ಸಮಾವೇಶ ಮುಗಿದು ಎಲ್ಲರೂ ತೆರಳುತ್ತಿ ದ್ದರು. ಅಂದುಕೊಂಡ ಯೋಜನೆ ಕೈಕೊಟ್ಟಿದ್ದ ರಿಂದ ಆಡಿಟೋರಿ ಯಂನ ಹೊರಗೆ ಬರುತ್ತಿ ದ್ದವರ ಮೇಲೆ ಅಬು ಹಮ್ಜಾ ಗ್ರೆನೇಡ್ಎಸೆದಿದ್ದ. ಆದರೆ ಅದು ಸ್ಪೋಟಗೊಳ್ಳಲಿಲ್ಲ. ಆ ನಂತರ ಉಗ್ರರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಉಗ್ರರ ಯೋಜನೆ ಫಲಿಸಿದ್ದರೆ ಅಂದು ಐಐಎಸ್‌ಸಿ ಕ್ಯಾಂಪಸ್ನಲ್ಲಿ ಮಾರಣಹೋಮವೇ ನಡೆದು ಹೋಗು ತ್ತಿತ್ತು.

ಲಷ್ಕರೆ ತಯ್ಯಬಾ ಸಂಘಟನೆಯ ಮುಖ್ಯಸ್ಥರ ಪ್ರಕಾರ ಒಂದು ‘ವಿಫಲ’ ದಾಳಿ ಯಾಗಿತ್ತು. ಏಕೆಂದರೆ ಯೋಜನೆಯ ಪ್ರಕಾರವೇ ದಾಳಿ ಕಾರ್ಯಗತವಾಗಿರಲಿಲ್ಲ. ಅಲ್ಲಿಯವರೆಗೆ ಭಯೋತ್ಪಾದಕ ದಾಳಿ ಎಂಬ ವಿಚಾರವನ್ನು ಟಿವಿ, ಪತ್ರಿಕೆಗಳ ಮೂಲಕ ಮಾತ್ರ ತಿಳಿದಿದ್ದ ಬೆಂಗಳೂರಿಗರಿಗೆ ಮೊದಲ ಬಾರಿ ಉಗ್ರರ ದಾಳಿಯ ಅನುಭವವಾಗಿತ್ತು. ಅವತ್ತಿನ ಮಟ್ಟಿಗೆ ಲಷ್ಕರೆ ತಯ್ಯಬಾ ಉಗ್ರರು ಗೆಲವಿನ ನಗೆ ಬೀರಿದ್ದರು.

ಪಾಕ್‌ನಲ್ಲಿ ದಾಳಿಯ ಯೋಜನೆ

ದಾಳಿಯ ಯೋಜನೆ ರೂಪುಗೊಂಡಿದ್ದು ಪಾಕಿಸ್ತಾನದ ಕರಾಚಿಯಲ್ಲಿ. ಅಬು ಹಮ್ಜಾ ಎಂಬ ಪಾಕಿಸ್ತಾನದ ಲಷ್ಕರೆ  ತಯ್ಯಬಾ ಉಗ್ರ ಈ ದಾಳಿಯ ಸಂಚು ರೂಪಿಸಿದ್ದ. ಅಬು ಹಮ್ಜಾ ಮತ್ತು ಅಹಮದ್ ಸಬಾವುದ್ದೀನ್ ಈ ದಾಳಿ ನಡೆಸಿದ್ದರು. ನೇಪಾಳ ಗಡಿಯ ಮೂಲಕ ಭಾರತ ಪ್ರವೇಶಿಸಿದ್ದ ಅಬು ದಾಳಿ ನಂತರ ಬಸ್ ಮೂಲಕ ಹೈದರಾಬಾದ್ ತಲುಪಿ ಅಲ್ಲಿಂದ ಬಿಹಾರ ಮೂಲಕ ನೇಪಾಳಕ್ಕೆ ಹೋಗಿ ಆ ನಂತರ ಪಾಕಿಸ್ತಾನಕ್ಕೆ ಹೋಗಿದ. ಅದೇ ರೀತಿ ಬಸ್‌ನಲ್ಲಿ ಚೆನ್ನೈಗೆ ತಲುಪಿದ್ದ ಸಬಾವುದ್ದೀನ್ ಅಲ್ಲಿಂದ ಪಶ್ಚಿಮ ಬಂಗಾಳಕ್ಕೆ ತಲುಪಿ ಬಾಂಗ್ಲಾದೇಶದ ಮೂಲಕ ಪಾಕಿಸ್ತಾನ ತಲುಪಿಕೊಂಡಿದ್ದ.

ಅದಾಗ ತಾನೆ ಭಾರತದಲ್ಲಿ ನೆಲೆಯೂರು ತ್ತಿದ್ದ ಲಷ್ಕರೆ ತಯ್ಯಬಾ ಉಗ್ರ ಸಂಘಟನೆಗೆ ಐಐಎಸ್‌ಸಿ ದಾಳಿ ದೊಡ್ಡಮಟ್ಟದ ಯಶಸ್ಸು ತಂದುಕೊಟ್ಟಿತ್ತು. ಈ ದಾಳಿಗೆ ಪಾಕಿಸ್ತಾನದ ಐಎಸ್‌ಐ ಸಹಕಾರವೂ ಇತ್ತು ಎಂಬುದು ತನಿಖೆ ವೇಳೆ ಸ್ಪಷ್ಟವಾಗಿತ್ತು. ಇಸ್ಲಾಂ ಮೂಲ ಭೂತವಾದದ ಕಡೆಗೆ ಆಕರ್ಷಣೆ ಹೊಂದಿದ್ದ ಸ್ಥಳೀಯ ಯುವಕರನ್ನು ಉಗ್ರ ಸಂಘಟನೆ ಯತ್ತ ಸೆಳೆದು ಈ ಕೃತ್ಯ ನಡೆಸಲಾಗಿತ್ತು. ಕೋಲಾರದ ನಾಲ್ವರು, ಬಾಗಲಕೋಟೆಯ ಮತ್ತು ಆಂಧ್ರದ ನೆಲಗೊಂಡದ ಇಬ್ಬರು ಈ ದಾಳಿಯಲ್ಲಿ ಪಾಕ್ ಉಗ್ರರಿಗೆ ಸಹಕಾರ ನೀಡಿದ್ದರು.

ಶಶಿವರ್ಣಂ!

ನಾನು ಈಗಲೂ ಡಾನ್..! -ಮುತ್ತಪ್ಪ ರೈ

13174115_1087922061264011_2099755816329923139_nರೈ ಹೆಸರಿನ ಸಿನೆಮಾ ಬರ್ತಿದೆ. ಬಾಲಿವುಡ್‌ನ ಸೆಲೆಬ್ರಿಟಿ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅದನ್ನ ನಿರ್ದೇಶಿಸುತ್ತಿದ್ದಾರೆ. ಆ ಸಿನೆಮಾ ಅಂಡರ್ವರ್ಲ್ಡ್‌ನ ಒಂದು ಕಾಲದ ಡಾನ್ ಮುತ್ತಪ್ಪ ರೈ ನಿಜ ಜೀವನವನ್ನು ಆಧರಿಸಿದೆ. ಇವಿಷ್ಟೂ  ಹಳೇ ಸುದ್ದಿ. ಆ ಸಿನೆಮಾದಲ್ಲಿಮುತ್ತಪ್ಪ ರೈ ಎಷ್ಟರಮಟ್ಟಿಗೆ ಕೈಯ್ಯಾಡಿಸಿದ್ದಾರೆ? ಅವರೇ ಕುಳಿತು ಕತೆ ಮಾಡಿಸಿದ್ದಾರಾ? ಸಿನೆಮಾ ಕತೆಯಲ್ಲಿ ಮುತ್ತಪ್ಪ ರೈ ಹೀರೊನಾ – ವಿಲನ್ನಾ? ಇಂಥ ಹತ್ತು ಹಲವು ಪ್ರಶ್ನೆಗಳನ್ನಿಟ್ಟುಕೊಂಡು ಅವರ ಸದಾಶಿವನಗರದ ಮನೆಯ ಬಾಗಿಲು ಬಡಿಯಿತು ‘ವಿಶ್ವವಾಣಿ’. ಮುತ್ತಪ್ಪ ರೈ ಜತೆ ನಾವು ನಡೆಸಿದ ಸಂದರ್ಶನ ಸಿನೆಮಾದೊಂದಿಗೆ ಶುರುವಾಗಿ, ಸಮಾಜ ಸೇವೆ, ಭೂಗತ ಲೋಕ, ರಾಜಕೀಯ, ದೇವರ ಕೃಪೆಗಳಂಥ ಅನೇಕ ವಿಷಯಗಳ ತನಕ ಹರಿದಾಡಿತು. ಇದುವರೆಗೂ ನಡೆಸಿರುವ ಜೀವನದ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಎನ್ನುವ ರೈ, ನಾನು ಕೆಲವರಿಗೆ ಉಪಕಾರ ಮಾಡುವುದಕ್ಕೆ ಹೋಗಿ ಭೂಗತ ಲೋಕಕ್ಕೆ ಕಾಲಿಟ್ಟವನು, ಅದರಿಂದಾಗಿಯೇ ಡಾನ್ ಆದವನು. ಈಗ ಉಪಕಾರ ಮಾಡುವ ಮೂಲಕವೇ ಜನರ ಪ್ರೀತಿ ಗಳಿಸಿಕೊಂಡಿದ್ದೇನೆ ಎನ್ನುತ್ತಾರೆ. ಆಗ ಉಪಕಾರ ಮಾಡುವುದಕ್ಕೆ ಗನ್ ಬೇಕಿತ್ತು. ಈಗ, ಅದರ ಅವಶ್ಯಕತೆ ಇಲ್ಲ. ಗನ್ ಮಾಡಲಾಗದ ಕೆಲಸವನ್ನು ಪ್ರೀತಿ ವಿಶ್ವಾಸಗಳು ಮಾಡಬಲ್ಲವು ಎಂಬುದು ಸ್ವಂತ ಅನುಭವದಿಂದ ಕಲಿತುಕೊಂಡ ಪಾಠ. ಮುಂದೊಂದು ದಿನ ಮದರ್ ಥೆರೇಸಾ ರೀತಿ ನನ್ನನ್ನು ಜನ ನೆನಪು ಮಾಡಿಕೊಳ್ಳುವಂತಾಗಬೇಕು ಎಂಬುದು ಅವರ ಆಶಯ. ಹಾಗೆಂದು ವೃಥಾ ಕೆಣಕಿದರೆ ಸುಮ್ಮನಿರುವವನು ಅಲ್ಲ ಎಂದು ಹೇಳಲೂ ಮರೆಯಲಿಲ್ಲ.

‘ಸತ್ಯವಾಗಲೂ ಈಗ ನನಗೆ ಬೆಂಗಳೂರಿನ ಅಂಡರ್ ವರ್ಲ್ಡ್ ಬಗ್ಗೆ ಏನೂ ಗೊತ್ತಿಲ್ಲ. ಮರ್ಡರ್‌ಗಳಾಗೋದು, ಕ್ರೈಂ ಬಗ್ಗೆ ಟಿವಿ, ಪೇಪರ್‌ನಲ್ಲಿ ನೋಡಿ ತಿಳಿದುಕೊಳ್ತೀನಿ ಅಷ್ಟೇ. ಹಿಂದೆ ಇದ್ದ ಸಂಘಟಿತ ಅಂಡರ್‌ವರ್ಡ್ ಇದೆ ಅಂತ ನನಗೆ ಅನ್ನಿಸುವುದಿಲ್ಲ. ನಾನು ಆ ವಿಚಾರದಿಂದ ಸಂಪೂರ್ಣ ದೂರವಿದ್ದೇನೆ’ ಎಂದರು.

ನಿಮ್ಮ ಜೀವನವನ್ನಾಧರಿಸಿ ಸಿನಿಮಾ ಮಾಡಬೇಕು ಎಂಬ ಯೋಚನೆ ನಿಮ್ಮದೇನಾ? 

 • ಇಲ್ಲ. ರಾಮ್‌ಗೋಪಾಲ್ ವರ್ಮ ಅಚಾನಕ್ಕಾಗಿ ಒಮ್ಮೆ ಭೇಟಿಯಾದರು, ಸ್ವಲ್ಪ ಹೊತ್ತು ಮಾತನಾಡಿದರು. ನನ್ನ ಕತೆ ಕೇಳಿದರು. ಅಸಲೀಯತ್ತನ್ನು ಜನರಿಗೆ ತಿಳಿಸೋಕೆ ಎಲ್ಲಿದೆ ಅವಕಾಶ? ಪತ್ರಿಕೆ, ಟಿವಿ ಮಾಧ್ಯಮ ತೋರಿಸುತ್ತಿರುವುದೇ ಬೇರೆ, ಇರುವುದೇ ಬೇರೆ, ನಡೆಯುತ್ತಿರುವುದೇ ಬೇರೆ. ಈವರೆಗೆ ಗೊತ್ತಿದ್ದುದು ಹೊಡೆಯೋದು, ಬಡಿಯೋದು, ಅಂಡರ್‌ವರ್ಡ್ ಇತ್ಯಾದಿಯಷ್ಟೇ. ಯಾಕೆ ನಾನು ಅಂಡರ್‌ವರ್ಡ್‌ಗೆ ಹೋದೆ ಅನ್ನೋದನ್ನ ಯಾರಾದ್ರೂ ಚೆಕ್ ಮಾಡಿದ್ದಾರಾ? ಹೇಳಿದ್ದಾರಾ? ನನ್ನ ನಿಜವಾದ ಈ ಕಥೆ ಸಿನಿಮಾದಲ್ಲಿ ಬರುತ್ತೆ.

ಮುತ್ತಪ್ಪ ರೈ ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟಲ್ಲ

 • ಮುತ್ತಪ್ಪ ರೈ ಇದುವರೆಗೂ ಯಾರಿಂದಲೂ ಕೈಯೊಡ್ಡಿ ಒಂದು ರುಪಾಯಿ ತಗೊಂಡಿಲ್ಲ. ಜನರನ್ನು ಸುಲಿಗೆ ಮಾಡದೇ ಯಾರಾದ್ರೂ ಡಾನ್ ಆಗಿದ್ರೆ ಅದು ನಾನು ಮಾತ್ರ, ನಾನು ಜನರ ಡಾನ್. ಅಂಡರ್‌ವರ್ಲ್ಡ್‌ನಲ್ಲಿದ್ದಾಗ ಸಹ ಹೊಟೆಲ್‌ಗೆ ಹೋದರೆ ಬಿಲ್ ಕೊಡದೇ ಬಂದವನಲ್ಲ ನಾನು. ಯಾರಿಂದಲಾದರೂ ಒಂದು ಪೈಸೆ ಹಣ ತೆಗೆದುಕೊಂಡಿದ್ದಾಗಲೀ, ರೋಲ್‌ಕಾಲ್ ಮಾಡಿದ್ದರೆ ಉದಾಹರಣೆ ಕೊಡಿ. ಇಂತಹ ಒಬ್ಬ ಡಾನ್ ಈ ದೇಶದಲ್ಲಿ ಬೇರೆ ಯಾರಾದರೂ ಇದ್ದರೆ ಹೆಸರು ಹೇಳಿ ನೋಡೋಣ. ನಾನು ಎದೆ ತಟ್ಟಿ ಹೇಳುತ್ತೇನೆ, ನನ್ನ ವ್ಯವಹಾರದಲ್ಲಿ ಯಾರಿಗೂ ಒಂದು ರುಪಾಯಿ ಮೋಸ ಮಾಡಿಲ್ಲ. ಗಂಜಿ ಬೇಕಾದರೂ ಕುಡಿದು ಬದುಕಬಲ್ಲೆ, ಮತ್ತೊಬ್ಬರ ಹಣ ನನಗೆ ಬೇಡ. ಈಥರದ ಕ್ಯಾರೆಕ್ಟರ್ ನಿಮಗೆ ಎಷ್ಟು ಹುಡುಕಿದರೂ ಸಿಗುವುದಿಲ್ಲ. ಯಾವ ಸಂಘಟನೆಯವನು ಕೋಟಿ ಕೋಟಿ ಹಣವನ್ನು ಜನರಿಗೆ ಖರ್ಚು ಮಾಡ್ತಾನೆ ಹೇಳಿ. ಕೆಲವು ಸಂಘಟನೆಗಳು ಕೇವಲ ಬೆಂಗಳೂರಿಗೆ ಸೀಮಿತವಾಗಿವೆ. ಆದರೆ ನನ್ನ ಸಂಘಟನೆ ರಾಜ್ಯದ ಪ್ರತೀ ಊರಿನಲ್ಲೂ ಇದೆ. ಮುತ್ತಪ್ಪ ರೈ ಒಬ್ಬನೇ, ಇಂಥವನು ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟುವುದೂ ಇಲ್ಲ. ಜನರಿಗೆ ಈಗಲೂ ಮುತ್ತಪ್ಪ ರೈ ಅಂದರೆ ಒಬ್ಬ ಡಾನ್ ಅನ್ನೋದೇ ತಲೆಯಲ್ಲಿದೆ. ನಿಮ್ಮ ಪ್ರಕಾರ ರೈ ಅಂದರೆ ಯಾರು? ನಾನು ಈಗಲೂ ಡಾನ್. ಜಯಕರ್ನಾಟಕ ಅನ್ನೋದು ಏನು? ನನ್ನ ಹಿಂದೆ ಈಗ 25-30 ಲಕ್ಷ ಜನರಿದ್ದಾರೆ. ನಾನು ಜನರ ಡಾನ್. ನಾವು ಇಷ್ಟು ಜನ ಮುಂದೆ ಹೋಗುವಾಗ ನಮ್ಮನ್ನು ಹೆದರಿಸಲು ಯಾರು ಬರುತ್ತಾರೆ? ಅನ್ಯಾಯ ಮಾಡುವವರ ವಿರುದ್ಧ ಹೋರಾಟ ಮಾಡುತ್ತೇವೆ. ನನಗೆ ಮೊದಲು ಎಷ್ಟು ಶಕ್ತಿಯಿತ್ತೋ ಅದರ ಮೂರು ಪಟ್ಟು ಶಕ್ತಿ ಈಗಲೂ ಇದೆ. ನನ್ನ ಶಕ್ತಿ ಕುಂದಿಲ್ಲ, ಈಗಲೂ ನಾನು ಬಲಾಢ್ಯ.

 

ಜನ ಸ್ಕ್ರೀನ್ ಮೇಲೆ ಡಾನ್ ಮುತ್ತಪ್ಪ ರೈ ಅವರನ್ನ ನೋಡ್ತಾರೋ, ಸಮಾಜ ಸೇವಕ ಮುತ್ತಪ್ಪ ರೈ ಅವರನ್ನು ನೋಡ್ತಾರೋ?

ಸಮಾಜ ಸೇವಕ ಮುತ್ತಪ್ಪ ರೈ ಅವರನ್ನು ನೋಡ್ಬೇಕಿದ್ರೆ ಇಷ್ಟೆಲ್ಲ ಬೇಕಿತ್ತಾ? ಅಂಥ ಸಿನಿಮಾ ಮಾಡೋಕೆ ರಾಮ್‌ಗೋಪಾಲ್ ವರ್ಮ ಅವರಂಥ ಡೈರೆಕ್ಟರ್ರೇ ಬೇಕಾ? ಅವರೊಬ್ಬ ಕಾಂಟ್ರವರ್ಷಿಯಲ್ ಡೈರೆಕ್ಟರ್. ಅವರು ಮಾಡ್ತಿರೋ ಸಿನಿಮಾಗಳೆಲ್ಲವೂ ಅಂಡರ್‌ವರ್ಲ್ಡ್‌ಗೆ ಸಂಬಂಧಿಸಿದಂಥವೇ.

ಮತ್ತೆ ಫ್ಲಾಷ್‌ ಬ್ಯಾಕ್‌ಗೆ ಹೋದ ಹಾಗೆ ಆಗಿಲ್ಲವೇ?download (19)

ಇಲ್ಲ, ಹಾಗೆ ಆಗಿಲ್ಲ. ಒಬ್ಬ ಮನುಷ್ಯ ಜೀವನದಲ್ಲಿ ಎಲ್ಲಿಂದ, ಹೇಗೆ ಬಂದ, ಏನಾದ, ಕಡೆಗೆ ಎಲ್ಲಿಗೆ ಹೋದ ಎಂಬುದು ತಿಳಿಯಬೇಕು. ನಾನು ಉದ್ದೇಶ­ಪೂರ್ವಕ ಡಾನ್ ಆಗಬೇಕೆಂದುಕೊಂಡು ಬಂದವನಲ್ಲ. ಅಸ್ತ್ರ ಹಾಯಕರಿಗೆ ಸಹಾಯ ಮಾಡುವಾಗ ನಡೆದ ಕೆಲ ಘಟನೆಗಳು ನನ್ನನ್ನು ಅಂಡರ್ ವರ್ಲ್ಡ್‌ಗೆ ನೂಕಿದವು. ಕಡೆಗೂ ನಾನು ಅದರಿಂದ ಹೊರ ಬಂದು ನನ್ನ ಅಸ್ತ್ರ ಲಿ ರೂಪ ತೋರಿಸುವ ಅವಕಾಶ ಸಿಕ್ಕಿದ್ದು ನನ್ನ ವಿರುದ್ಧದ ಎಲ್ಲ ಕೇಸ್‌ಗಳೂ ಇತ್ಯರ್ಥವಾದಾಗ. ನನ್ನಲ್ಲಿ ಎರಡು ಮುಖಗಳಿವೆ ಒಂದು ಸಮಾಜ ಸೇವೆಯದ್ದು, ಇನ್ನೊಂದು ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವಂಥದ್ದು.

ಕಥೆ ಬೆಂಗಳೂರು ಅಂಡರ್ ವರ್ಲ್ಡ್‌ನಿಂದಲೇ ಆರಂಭವಾಗುತ್ತಾ? ಇದರಲ್ಲಿ ಬೇರೆ ಪಾತ್ರಗಳೂ ಬರುತ್ತವಾ? ನಿಮ್ಮ ಜತೆ ಜೈರಾಜ್ ಇದ್ದ, ಆಯಿಲ್ ಕುಮಾರ ಇದ್ದ..

ಸಿನಿಮಾ ಹೇಗೆ ಬರುತ್ತೆ ಅನ್ನೋದು ನನಗೆ ಗೊತ್ತಿಲ್ಲ. ಯಾಕೆಂದರೆ, ನನ್ನನ್ನು ರಾಮ್‌ಗೋಪಾಲ್ ವರ್ಮ ಎರಡೇ ಸಲ ಭೇಟಿಯಾಗಿದ್ದು. ಕೆಲ ಘಟನೆಗಳ ಬಗ್ಗೆ ನನ್ನಿಂದ ಮಾಹಿತಿ ಪಡೆದಿದ್ದಾರೆ. ನಾನು ಹುಟ್ಟಿದಲ್ಲಿಂದ ಹಿಡಿದು, ಬೆಂಗಳೂರಿಗೆ ಬಂದು ನಂತರ ದುಬೈಗೆ ಹೋಗಿದ್ದು, ಅಲ್ಲಿಂದ ವಾಪಸ್ ಬಂದಿದ್ದೆಲ್ಲವನ್ನೂ ಅವರು ತಿಳಿದುಕೊಂಡಿದ್ದಾರೆ. ಉಳಿದದ್ದೆಲ್ಲವನ್ನು ಅವರು ಬೇರೆಯವರಿಂದ ತಿಳಿದುಕೊಂಡಿದ್ದಾರೆ. ರಾಮ್‌ಗೋಪಾಲ್ ವರ್ಮ ಅವರಂಥ ಡೈರೆಕ್ಟರ್ ನಾವು ಹೇಳಿದಂತೆ ಸಿನಿಮಾ ಮಾಡುವವರಲ್ಲ. ನನ್ನ ಕಥೆ ಕೇಳಿ ಅವರು ‘ಇಂಥ ಒಂದು ಸ್ಟೋರಿಯನ್ನು ನಾನು ನನ್ನ ಲೈಫ್ ನಲ್ಲೇ ಕೇಳಿಲ್ಲ, ಇದು ನನ್ನ ಬೆಂಚ್ ಮಾರ್ಕ್ ಸಿನಿಮಾ ಆಗುತ್ತೆ’ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ಸಿನಿಮಾಕ್ಕೆ ಮೊದಲು ರಾಮ್‌ಗೋಪಾಲ್ ವರ್ಮಗೆ ಒಂದಷ್ಟು ಷರತ್ತು ಹಾಕಿರುವ ಮಾತಿದೆಯಲ್ಲ?

ಯಾವ ಕಂಡಿಷನ್‌ಗಳನ್ನೂ ಹಾಕಿಲ್ಲ. ಕಿಲ್ಲಿಂಗ್ ವೀರಪ್ಪನ್ ಸಿನಿಮಾ ಮಾಡುವಾಗ ಅವರು ಎಲ್ಲಿಗೋ ಹೋಗುತ್ತಿದ್ದವರು ನನ್ನ ಮನೆಗೆ ಬಂದರು. ಬರುವಾಗ ಅವರು ನನ್ನ ಬಗ್ಗೆ ಯೋಚಿಸಿದ್ದೇ ಬೇರೆ, ಇಲ್ಲಿ ಬಂದು ನನ್ನೊಂದಿಗೆ ಮಾತನಾಡಿ ಹೋಗುವಾಗ ಅವರ ಮನಸ್ಸಿನಲ್ಲಿದ್ದ ಯೋಚನೆಯೇ ಬೇರೆಯಾಗಿತ್ತು. ನನ್ನನ್ನು ನೋಡಲು ಬರುವಾಗ ನಾನೊಬ್ಬ ಅಂಡರ್ ವರ್ಲ್ಡ್ ಡಾನ್, ರೌಡಿ, ಎಲ್ಲೋ ಒಂದು ಫಾರ್ಮ್ ಹೌಸ್‌ನಲ್ಲಿ ರಿಟೈರ್ಡ್ ಆಗಿ ಕುಳಿತಿದ್ದಾನೆ ಎಂದುಕೊಂಡು ನಮ್ಮ ಮನೆಗೆ ಬಂದಿದ್ದರು. ಆದರೆ ನನ್ನ ಜೀವನದ ಕಥೆ ಕೇಳಿದ ನಂತರ, ನಾನು ಈ ಫೀಲ್ಡ್‌ಗೆ ಯಾಕೆ ಬಂದೆ, ಆಮೇಲೆ ಏನಾಯ್ತು, ಅದರಿಂದ ಹೊರ ಬರಲು ನಾನು ಮಾಡಿದ ಪ್ರಯತ್ನವೇನು ಎಂಬುದನ್ನು ವಿವರಿಸಿದ ಬಳಿಕ ಅವರಿಗೆ ನನ್ನ ಬಗ್ಗೆ ಇದ್ದ ಅಭಿಪ್ರಾಯವೇ ಬದಲಾಯ್ತು.

ಸಿನಿಮಾ ರಿಲೀಸ್ ಆಗದಂತೆ ನೋಡಿಕೊಳ್ಳಲು ಒಂದಷ್ಟು ಮಂದಿ ಸ್ಟೇ ಆರ್ಡರ್ ತರಲು ಮುಂದಾಗಿದ್ದಾರೆ ಎಂಬ ಮಾತು ಗಾಂಧಿನಗರದಲ್ಲಿದೆಯಲ್ಲಾ?

ಯಾವನು ಸ್ಟೇ ಆರ್ಡರ್ ತರ್ತಾನೆ? ಯಾರು ಹಾಗೆ ಹೋಗ್ತಾನೋ ಅವನಿಗೆ ಗಿಲ್ಟ್ ಇರಬೇಕು ಅಷ್ಟೇ. ಕುಂಬಳಕಾಯಿ ಕಳ್ಳ ಅಂತ ಈಗಲೇ ಹೆಗಲು ಮುಟ್ಟಿನೋಡಿಕೊಳ್ಳುವುದೇಕೆ?

download (17)ನಿಮ್ಮ ಸಿನಿಮಾ ಮಾಡಲು ರಾಮ್‌ಗೋಪಾಲ್ ವರ್ಮ ಅವರೇ ಸರಿ ಅಂತ ಯಾಕೆ ಅನ್ನಿಸ್ತು?

ನನ್ನ ಸಿನಿಮಾ ಮಾಡಬೇಕು ಎಂದು ತುಂಬಾ ಜನ ಬಂದಿದ್ರು, ನನಗೆ ಆಸಕ್ತಿ ಇರಲಿಲ್ಲ. ಮಾಡುವುದಿದ್ದರೆ ರಾಮ್‌ಗೋಪಾಲ್ ವರ್ಮ ಅವರಂಥ ನಿರ್ದೇಶಕರೇ ಮಾಡಬೇಕು ಎಂಬುದು ನನ್ನ ಮನಸ್ಸಿನಲ್ಲಿತ್ತು. ನಾನು ಅವರನ್ನು ನನ್ನ ಮನೆಗೆ ಕರೆದಿರಲೂ ಇಲ್ಲ. ಅವರಾಗಿಯೇ ಬಂದು ಸಿನಿಮಾ ಮಾಡುವುದಾಗಿ ಹೇಳಿದಾಗ ಸಂತೋಷವಾಯ್ತು. ಒಂದು ಸಿನಿಮಾ ಮಾಡುವಾಗ ಒಬ್ಬ ಒಳ್ಳೆಯ ಡೈರೆಕ್ಟರ್ ಇರಬೇಕು. ನನಗೆ ಅವರಿಗಿಂತ ಒಳ್ಳೆಯ ಡೈರೆಕ್ಟರ್ ಯಾರು ಇಲ್ಲ ಅನ್ನಿಸಿತು. ಅದಕ್ಕಾಗಿ ಒಪ್ಪಿಕೊಂಡೆ.

ಒಂದು ಸಿನಿಮಾದಲ್ಲಿ ನಿಮ್ಮ ಇಡೀ ಕಥೆ ಹೇಳಲು ಸಾಧ್ಯವಿಲ್ಲ, ಸಿನಿಮಾದ ಸಬ್ಜೆಕ್ಟ್ ಏನು?

ನೀವು ಈ ಪ್ರಶ್ನೆಯನ್ನು ರಾಮ್‌ಗೋಪಾಲ್ ವರ್ಮ ಅವರನ್ನೇ ಕೇಳಬೇಕು. ಸಿನಿಮಾದ ಸಬ್ಜೆಕ್ಟ್ ಏನು ಎಂಬುದು ಗೊತ್ತಿಲ್ಲ. ಹೇಗೆ ತೆಗೀತಾರೆ ಸಿನಿಮಾ, ಬೆಂಗಳೂರಿನ ಅಂಡರ್ ವರ್ಲ್ಡ್ ತೆಗೀತಾರಾ, ದುಬೈನ ಕಥೆ ತೆಗೀತಾರಾ ಗೊತ್ತಿಲ್ಲ. ಅಂತೂ ನನ್ನ ಬಗೆಗಿನ ಸಿನಿಮಾವನ್ನು ಒಂದೆರಡು ಗಂಟೆಗಳಲ್ಲಿ ಮುಗಿಸಲು ಸಾಧ್ಯ ಎಂಬುದು ಮಾತ್ರ ಸತ್ಯ. ಕಥೆಯ ಬಗ್ಗೆ ನನ್ನೊಂದಿಗೆ ಎರಡು ಬಾರಿ ಮಾತನಾಡಿದ್ದಾರೆ. ಉಳಿದ ವಿಚಾರಗಳನ್ನು ಅವರು ಹೊರಗಿನಿಂದ ಸಂಗ್ರಹಿಸಿದ್ದಾರೆ. ಒಬ್ಬ ಡೈರೆಕ್ಟರ್ ನಾನು ಹೇಳುವುದನ್ನೇ ನಂಬುವುದಿಲ್ಲ. ತುಂಬಾ ಜನರನ್ನು ಕೇಳಿರ್ತಾರೆ, ತಿಳಿದುಕೊಂಡಿರ್ತಾರೆ.

ಸಿನಿಮಾ ಪಾಸಿಟಿವ್ ಅಥವಾ ನೆಗೆಟಿವ್ ಹೇಗೆ ಬಂದರೂ ನೀವು ಒಪ್ಪಿಕೊಳ್ಳುತ್ತೀರಾ?

ಮೊದಲು ಸಿನಿಮಾ ಹೇಗೆ ಬರುತ್ತದೆ ಎಂಬುದನ್ನು ನೊಡೋಣ. ಸಿನಿಮಾದಲ್ಲಿ ಕಮರ್ಷಿಯಲ್‌ಗಾಗಿ ನನ್ನ ವಿರುದ್ಧ ಸುಳ್ಳು ಅಥವಾ ನನ್ನ ವ್ಯಕ್ತಿತ್ವವನ್ನು ಹಾಳು ಮಾಡುವ ಹಂತಕ್ಕೆ ತೆಗೆದುಕೊಂಡು ಹೋದ್ರೆ ನನಗೆ ಬೇಜಾರಾಗುತ್ತೆ. ಅದನ್ನು ಮಾಡಬಾರದು. ಹಾಗಂತ ನನ್ನನ್ನೇನು ಹೊಗಳಿ ಸಿನಿಮಾ ಮಾಡಿ ಎಂದೂ ನಾನು ಅವರಿಗೆ ಹೇಳಿಲ್ಲ. ರಾಜಕೀಯದ ಅಗತ್ಯ ನನಗಿಲ್ಲ.

ಸಂಘಟನೆ ಕೆಲಸ ಹೇಗೆ ನಡೆಯುತ್ತಿದೆ?

ಜಯಕರ್ನಾಟಕ ಸಂಘಟನೆಯೇ ನನ್ನ ಶಕ್ತಿ. ಮೊನ್ನೆ ನಡೆದ ಸಿನಿಮಾ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನ ಬಂದಿದ್ದರು. ನಾನೊಬ್ಬ ಸಾಧಾರಣ ವ್ಯಕ್ತಿ. ಸಿನಿಮಾ ನಟ ಅಲ್ಲ, ರಾಜಕೀಯ ವ್ಯಕ್ತಿಯೂ ಅಲ್ಲ. ಹತ್ತು ಹಲವು ಕಳಂಕಗಳನ್ನು ಹೊತ್ತುಕೊಂಡು ನನ್ನನ್ನು ಸಮಾಜದಲ್ಲಿ ಒಬ್ಬ ಕೆಟ್ಟ ವ್ಯಕ್ತಿ ಎಂದು ಮಾಡಿದ್ದರು. ಇವತ್ತು ನಾನು ಅದೆಲ್ಲವನ್ನೂ ಬಿಟ್ಟು ಬದುಕುತ್ತಿದ್ದೇನೆ. ಕೆಲವರು ಎಲ್ಲವನ್ನೂ ಬಿಟ್ಟಿದ್ದೇನೆ ಎಂದು ವೇಷ ಹಾಕಿಕೊಂಡು ಓಡಾಡ್ತಾರೆ. ಎಲ್ಲವನ್ನೂ ಬಿಟ್ಟು ನಿಸ್ವಾರ್ಥವಾಗಿ ಕೆಲಸ ಮಾಡಿಕೊಂಡು ಹೋಗುತ್ತಿರುವುದಕ್ಕೆ ಪ್ರೀತಿಯಿಂದ ಜನ ನನ್ನ ಜೊತೆ ಬರುತ್ತಾರೆ. ಉತ್ತರ ಕರ್ನಾಟಕಕ್ಕೆ ನಾನು ಹೋದರೂ ಇಷ್ಟೇ ಸಂಖ್ಯೆಯ ಜನ ಬರುತ್ತಾರೆ.

ಮುತ್ತಪ್ಪ ರೈ ಇದೆಲ್ಲವನ್ನೂ ಸುಮ್ಮನೆ ಮಾಡುವುದಿಲ್ಲ, ಮುಂದೆ ಎಲೆಕ್ಷನ್‌ಗೆ ನಿಲ್ತಾರೆ ಎಂಬ ಮಾತಿದೆಯಲ್ಲ? ಮುಂದೆ ದಿನ ಎಲ್ಲಿದೆ. ನನಗೀಗ 63 ವರ್ಷ. ನಾನು ಎಂದಿಗೂ ರಾಜಕೀಯಕ್ಕೆ ಬರುವುದಿಲ್ಲ. ಮತ್ಯಾಕೆ ಮಾಡ್ತೀರಾ ಇಷ್ಟೆಲ್ಲ ಎಂದು ನನ್ನನ್ನು ಕೇಳ್ತಾರೆ. ನನ್ನ ಮನಸ್ಸಿನಲ್ಲಿರುವುದು ಕೇವಲ ನಿಸ್ವಾರ್ಥ ಸೇವೆ ಅಷ್ಟೇ. ನಾನು ರಾಜಕೀಯದವರಿಗೆ ಹೇಳುವುದಿಷ್ಟೇ. ಒಂದು ಎಲೆಕ್ಷನ್‌ಗೆ ನಿಂತು 20-30 ಕೋಟಿ ಖರ್ಚು ಮಾಡುವ ಬದಲು ಆ ಕ್ಷೇತ್ರದ ಜನರಿಗಾಗಿ ಆ ಹಣವನ್ನು ಐದು ವರ್ಷ ಖರ್ಚು ಮಾಡಿ. ಇಂಡಿಪೆಂಡೆಂಟ್ ನಿಂತರೂ ಗೆಲ್ಲುತ್ತೀರಾ. ಜನರಿಗೆ ಉಪಕಾರ ಮಾಡಿದರೆ ಅವರೆಂದಿಗೂ ಮರೆಯುವುದಿಲ್ಲ.

ಜನರನ್ನು ನೀವು ನೇರವಾಗಿ ಆಳದಿದ್ದರೂ, ಆಳುವವರನ್ನು ನೀವು ಆಳುತ್ತೀರಾ ಎಂಬ ಅಭಿಪ್ರಾಯವಿದೆ? ಆಳುವವರನ್ನು ನಾನು ಆಳುವುದಿಲ್ಲ. ನನ್ನಲ್ಲಿರುವ ಸ್ವಾರ್ಥ ಒಂದೇ. ನಾನು ಎಲ್ಲ ಜನರ ಪ್ರೀತಿಯನ್ನು ಗಳಿಸಬೇಕು ಅನ್ನೋದು. ಪ್ರತಿಯೊಬ್ಬರ ಹೃದಯಕ್ಕೂ ನಾನು ಮುಟ್ಟಬೇಕು ಅಷ್ಟೇ.

ಒಂದಷ್ಟು ರಾಜಕಾರಣಿಗಳಿಗೆ ನೀವು ಗಾಡ್-ದರ್ ಆಗಿದ್ದೀರಿ, ಕಿಂಗ್ಮೇಕರ್ ಆಗಿದ್ದೀರಿ ಅಂತಾರೆ. ಹೌದಾ?

ಯಾವ ರಾಜಕಾರಣಿಗಳಿಗೂ ನಾನು ಕಿಂಗ್ ಮೇಕರ್ ಆಗಿಲ್ಲ. ಅದೆಲ್ಲ ಸುಳ್ಳು, ಕೆಲವು ರಾಜಕಾರಣಿಗಳಿಗೆ ನನ್ನ ಮೇಲೆ ಪ್ರೀತಿ ಇದೆ. ಕೆಲವರಿಗೆ ನನ್ನ ಬಗ್ಗೆ ಗೊತ್ತಿಲ್ಲದ ಕಾರಣ ಅವರು ನನ್ನ ಬಳಿಗೆ ಬರದೇ ಇರಬಹುದು. ನಾನು ಯಾರನ್ನೂ ದ್ವೇಷಿಸುವುದಿಲ್ಲ. ನನ್ನೊಂದಿಗೆ ಮೊದಲಿಂದಲೂ ಪರಿಚಯವಿರುವ ಕೆಲ ಸ್ನೇಹಿತರು ಈಗ ರಾಜಕೀಯದಲ್ಲಿದ್ದಾರೆ. ಅವರೊಂದಿಗೆ ನನ್ನ ಒಡನಾಟವಿದೆ ಅಷ್ಟೆ.

ಜನ ಎಂಥವರಿಗೆ ವೋಟ್ ಹಾಕಬೇಕು ಅಂತೀರಾ ನೀವು?

ಯಾರು ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸ್ತಾರೆ, ನಿಮ್ಮ ಕ್ಷೇತ್ರದಲ್ಲಿ ಕೆಲಸ ಮಾಡ್ತಾರೆ ಅಂಥವರಿಗೆ ವೋಟ್ ಹಾಕಿ ಅಂತ ಹೇಳುತ್ತೇನೆ.

ಒಂದು ಪಕ್ಷ ಅಂತ ಏನಾದ್ರೂ ಹೇಳ್ತೀರಾ, ಯಾಕಂದ್ರೆ ನೀವು ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದೀರಾ ಅನ್ನೋ ಮಾತಿದೆ?download (18)

ಯಾವ ಪಕ್ಷದ ಪರವೂ ನಾವು ಕೆಲಸ ಮಾಡುವುದಿಲ್ಲ. ರಾಮನಗರದಲ್ಲಿ ಡಿ.ಕೆ. ಶಿವಕುಮಾರ್‌ಗೆ ವೋಟ್ ಹಾಕಿ ಎಂದಿದ್ದೇನೆ. ವಿನಯ್ ಕುಮಾರ್ ಸೊರಕೆ ಪರವಾಗಿಯೂ ಕೆಲಸ ಮಾಡಿದ್ದೇವೆ. ಬಿಜೆಪಿಯ ಯಡಿಯೂರಪ್ಪ ಅವರಿಗೆ, ಜೆಡಿಎಸ್‌ನ ಕುಮಾರಸ್ವಾಮಿಗೂ ವೋಟ್ ಕೊಡಿ ಅಂದಿದ್ದೇವೆ. ಹೈಸ್ಕೂಲ್ ದಿನಗಳಿಂದ ಡಿ.ವಿ.ಸದಾನಂದಗೌಡರು, ಕಾಲೇಜಿನಲ್ಲಿ ಅಂಬರೀಷ್ ಸಹ ನನ್ನ ಮಿತ್ರರು. ನಾವು ಮಾಡುವ ಒಳ್ಳೆಯ ಕೆಲಸಗಳಿಗೆ ಯಾರು ಸ್ಪಂದಿಸ್ತಾರೋ ಅಂಥವರಿಗೆ ವೋಟ್ ಹಾಕಿ ಅಂದಿದ್ದೇವೆ.

ಜಯಕರ್ನಾಟಕ ಸಂಘಟನೆಯೊಂದಿಗೆ ಕೆಲ ಸಮಾಜಘಾತಕ ಶಕ್ತಿಗಳಿವೆ ಎಂಬ ಮಾತಿದೆ, ಇತ್ತೀಚೆಗೆ ನಡೆದ ಕಾರ್ಮಿಕರ ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ ಆರೋಪ ಇದೆ.

ಮೊನ್ನೆ ನಡೆದದ್ದು ಕಾರ್ಮಿಕರ ಪ್ರತಿಭಟನೆ. ನಮ್ಮ ಸಂಘಟನೆ ಕಾರ್ಮಿಕರ ಪರ ಹೋರಾಟ ಮಾಡುತ್ತದೆ. ಕಾರ್ಮಿಕರ ಹೋರಾಟದಲ್ಲಿ ನಮ್ಮ ಸಂಘಟನೆ ತೊಡಗಿಸಿಕೊಳ್ಳುವುದರಲ್ಲಿ ತಪ್ಪೇನಿದೆ? ಬಸ್‌ಗಳಿಗೆ ಕಲ್ಲು ಹೊಡೆಯುವಂತಹ ಪರಿಸ್ಥಿತಿ ಯಾವಾಗ ಬರುತ್ತೆ? ಸುಮ್ಮನೆ ಯಾರೂ ಕಲ್ಲು ಹೊಡೆಯುವುದಿಲ್ಲ. ಜಯಕರ್ನಾಟಕ ಸಂಘಟನೆ ಎಂದಿಗೂ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡಿಲ್ಲ. ನಮ್ಮ ಸಂಘಟನೆಯನ್ನು ಒಮ್ಮೆ ಕೆಣಕಿ ನೋಡಿ. ಲಕ್ಷಾಂತರ ಸಂಖ್ಯೆಯ ನಮ್ಮ ಕಾರ್ಯಕರ್ತರು ದೊಂಬಿಗೆ ಇಳಿದರೆ ಏನು ಆಗಬಹುದು ಯೋಚನೆ ಮಾಡಿ. ಆದರೆ ನಾವು ಯಾವತ್ತೂ ಆ ಕೆಲಸ ಮಾಡಿಲ್ಲ.

ನೀರು ಕೊಡದಿದ್ದರೆ ಜನ ಮನೆಗೆ ನುಗ್ಗುತ್ತಾರೆ

ಕಳಸಾ ಬಂಡೂರಿ ಹೋರಾಟದ ನಗ್ಗೆ ಮಾತನಾಡುತ್ತಾ- ನರಗುಂದ ಮತ್ತು ನವಲಗುಂದ ರೈತರು ಬಂದು ಭೇಟಿಯಾಗಿ ನನ್ನೊಂದಿಗೆ ಮಾತನಾಡಿದ್ದಾರೆ. ಸಮುದ್ರಕ್ಕೆ ಹರಿದು ಹೋಗಿ ವ್ಯರ್ಥವಾಗುವ ಮಹದಾಯಿ ನೀರನ್ನು ಅಡ್ಡಗಟ್ಟಿ ಕೃಷಿಗೆ ಕೊಡಿ ಅನ್ನೋದು ಅವರ ಬೇಡಿಕೆ. ಕೃಷಿಗೆ ಕೊಡಲು ಸಾಧ್ಯವಾಗದಿದ್ದರೆ ಕುಡಿಯುವದಕ್ಕಾದರೂ ಕೊಡಿ ಅಂದಿದ್ದಾರೆ. ಈ ಬೇಡಿಕೆಯನ್ನು ಜನಪ್ರತಿನಿಧಿಗಳು ಇನ್ನೂ ನೆಗ್ಲೆಟ್ ಮಾಡ್ತಾ ಹೋದ್ರೆ ಮುಂದೇನಾಗಬಹುದು ಎಂಬುದನ್ನು ನಾನು ಹೇಳ್ತೀನಿ ಕೇಳಿ.

ಸರಕಾರಿ ಅಧಿಕಾರಿಗಳು ಇರುವುದು ಜನರ ಸೇವೆ ಮಾಡೋದಕ್ಕೆ. ಅವರ ಮನೆಗಳಲ್ಲಿ ನೀರು ಯಾವಾಗಲೂ ಬರುತ್ತೆ. ನಮಗೆ ನೀರು ಬೇಕಾದರೆ ನಾವು ಏನ್ ಮಾಡ್ಬೇಕು, ಅವರ ಮನೆಗಳಿಗೆ ನುಗ್ಗಬೇಕು ತಾನೆ? ಅವರಿಗೇನು ಹೊಡೆಯೋಕೆ ಬಡಿಯೋಕೆ ನುಗ್ಗುವುದಿಲ್ಲ. ನೀರಿಗಾಗಿ ಅಷ್ಟೇ. ಲಕ್ಷೋಪ ಲಕ್ಷ ಜನ ಈ ರೀತಿ ಅಧಿಕಾರಿಗಳ ನುಗ್ಗುತ್ತಾರೆ ಅಷ್ಟೇ. ಕೃಷಿಯೇ ನಮ್ಮ ಜನರ ಮೂಲ, ಅದೇ ಸತ್ತು ಹೋದರೆ ಜನ ಊಟಕ್ಕೆ ಏನು ಮಾಡ್ತಾರೆ. ಎಲ್ಲಿ ಊಟ ಇದೆಯೋ ಅಲ್ಲಿಗೆ ನುಗ್ತಾರೆ. ಶ್ರೀಮಂತರ ಮನೆಗೆ ನುಗ್ಗಲು ಇನ್ನೆಷ್ಟು ಸಮಯ ಬಾಕಿ ಇದೆ, ಜನಸಾಮಾನ್ಯರು ರಾಜಕಾರಣಿಗಳ ಕಾಲರ್ ಹಿಡಿದು ಎಳೆಯೋದಕ್ಕೆ ತುಂಬ ಸಮಯ ಏನಿಲ್ಲ. ಆದ್ದರಿಂದ ರೈತರ ಬೇಡಿಕೆಯನ್ನು ಈಗಲೇ ಒಪ್ಪಿಕೊಂಡು ಅವರಿಗೆ ಅನುಕೂಲ ಮಾಡಿಕೊಡಬೇಕು.

ಕಳಸಾ ಬಂಡೂರಿ, ಮೇಕೆ ದಾಟು ಯೋಜನೆ ಬಗ್ಗೆ ಮಾತಾಡ್ತೀರಾ. ಆದರೆ ಎತ್ತಿನ ಹೊಳೆ ಬಗ್ಗೆ ಯಾಕೆ ಮೌನವಹಿಸಿದ್ದೀರಿ. ನಿಮ್ಮ ಊರಿನ ನೀರು ಕೇಳ್ತಿದ್ದಾರೆ ಅಂತಾನಾ?

ಎತ್ತಿನ ಹೊಳೆ ಬಗ್ಗೆ ಖಂಡಿತಾ ಮಾತಾಡ್ತೀನಿ. ನನ್ನ ಊರು ಮಂಗಳೂರಲ್ಲ, ನನ್ನದು ಬೆಂಗಳೂರು. ನಾನು ಮಂಗಳೂರಿನಲ್ಲಿ ಎಷ್ಟು ಜೀವನ ಮಾಡಿದ್ದೇನೋ ಅದರ ನಾಲ್ಕು ಪಟ್ಟು ಹೆಚ್ಚು ಬೆಂಗಳೂರಲ್ಲಿ ಬದುಕಿದ್ದೇನೆ. ನನ್ನ ಊರು ಕರ್ನಾಟಕ, ನನ್ನ ಭಾಷೆ ಕನ್ನಡ. ನೇತ್ರಾವತಿ ನದಿಯನ್ನು ಈಗ ಹೋಗಿ ನೋಡಿ ಖಾಲಿಯಾಗಿದೆ. ಮಂಗಳೂರಿಗೆ ಎರಡು ದಿನಕ್ಕೊಮ್ಮೆ ಕುಡಿಯುವ ನೀರು ಬಿಡುತ್ತಿದ್ದಾರೆ. ಇನ್ನೆಲ್ಲಿಂದ ನೀರನ್ನು ತರುತ್ತೀರಾ? ಡ್ಯಾಂಗಳನ್ನು ಕಟ್ಟಿ. ತಮಿಳುನಾಡಿನಲ್ಲಿ ನೋಡಿ, ಅಲ್ಲಲ್ಲಿ ಡ್ಯಾಂಗಳನ್ನು ಕಟ್ಟಿ ಹರಿಯುವ ನೀರು ಸಮುದ್ರಕ್ಕೆ ಹೋಗದಂತೆ ಮಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ಅಂತಹ ಲೀಡರ್‌ಗಳಿಲ್ಲ.

ನೀವ್ ಮಾತಾಡೋದನ್ನು ನೋಡಿದ್ರೆ ಕಮ್ಯುನಿಸ್ಟ್ ಕ್ರಾಂತಿ, ನಕ್ಸಲ್ ಕ್ರಾಂತಿ ಬಗ್ಗೆ ಮಾತಾಡುವವರ ಥರ ಆಗಿದೆಯಲ್ಲ?

ಕಮ್ಯುನಿಸ್ಟ್, ನಕ್ಸಲ್ ಕ್ರಾಂತಿಯಲ್ಲ. ನಾನು ಜನರ ಪರವಾಗಿ ಮಾತನಾಡುತ್ತೇನೆ ಅಷ್ಟೇ. ನಿಸ್ವಾರ್ಥ ಸೇವೆ ಮಾಡುವುದಷ್ಟೇ ನನ್ನ ಉದ್ದೇಶ. ಕಮ್ಯುನಿಸ್ಟ್ ಹೋರಾಟ ಅಂದವರು ವೋಟಿಗಾಗಿ ನಿಲ್ಲುವುದಿಲ್ಲವಾ? ನನಗೆ ವೋಟೂ ಬೇಡ ಏನೂ ಬೇಡ. ನಾನು ಮೊದಲು ಯಾರಿಗಾದರೂ ತೊಂದರೆಯಾದರೆ ಅವರ ಸಮಸ್ಯೆ ಪರಿಹಾರಕ್ಕೆ ಧಾವಿಸುತ್ತಿದ್ದೆ. ಈಗ ನಾನು ಭವಿಷ್ಯದ ಬಗ್ಗೆ ಮಾತಾಡುತ್ತಿದ್ದೇನೆ, ಎಲ್ಲ ಜನರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದೇನೆ. ರಾಜಕಾರಣಿಗಳು, ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ನಮಗೇ ನೀರಿಲ್ಲದೇ ಇರುವಾಗ ತಮಿಳುನಾಡಿಗೆ ನೀರು ಬಿಡುತ್ತಾರೆ. ಇದನ್ನು ಹೇಗೆ ಸಹಿಸಿಕೊಳ್ಳಲು ಸಾಧ್ಯ. ನಮ್ಮ ರಾಜ್ಯದ ಒಂದು ಹನಿ ನೀರೂ ಕೂಡ ಹೊರಗೆ ಹೋಗದಂತೆ ಕ್ರಮ ಕೈಗೊಳ್ಳಬೇಕು.

ಟಿಆರ್‌ಪಿ ಬ್ಯಾನ್ ಆಗ್ಬೇಕ್!

ನಾನು ಇದುವರೆಗೆ ಎರಡು ಲಕ್ಷ ಮರಗಳನ್ನು ನೆಟ್ಟಿದ್ದೇನೆ. ನಾನು ಮರ ನೆಟ್ಟ ಸುದ್ದಿ ತಮಿಳುನಾಡಿನ ಪತ್ರಿಕೆಗಳಲ್ಲೆಲ್ಲಾ ಬಂದಿದೆ. ನಾನು ಮಂಡ್ಯದ ತೊನ್ನೂರಿನಲ್ಲಿ ಕೆರೆಯೊಂದನ್ನು ಅಭಿವೃದ್ಧಿಪಡಿಸಿದ್ದೇನೆ. ಎರಡು ಸಾವಿರ ಎಕರೆ ಅಗಲ, ನೂರು ಅಡಿ ಆಳದಲ್ಲಿ ನೀರಿದೆ. ಕೆಆರ್‌ಎಸ್‌ನ ನೀರು ಖಾಲಿಯಾದರೂ, ತೊನ್ನೂರು ಕೆರೆಯ ನೀರು ಖಾಲಿಯಾಗುವುದಿಲ್ಲ. ಈಗ ರಾಯಚೂರಿನ ಪ್ರತೀ ಹಳ್ಳಿಗೆ ಹೋಗಿ ಮನೆ ಮನೆಗೆ ಕುಡಿಯುವ ನೀರು ಕೊಡುವ ಯೋಚನೆ ಮಾಡಿದ್ದೇವೆ. ಮಳೆ ಬರುವವರೆಗೆ ನೀರು ಕೊಡುತ್ತೇವ. ಹಾಗಂತ ನಾನೇನು ರಾಯಚೂರಿನಲ್ಲಿ ಎಲೆಕ್ಷನ್‌ಗೆ ನಿಲ್ಲುವುದಿಲ್ಲ. ನಮ್ಮ ಯಾವ ಟಿವಿ ಪತ್ರಿಕೆಗಳೂ ಈ ಸುದ್ದಿ ಹಾಕಿಲ್ಲ. ಒಬ್ಬನಿಗೆ ಯಾರಾದ್ರೂ ಚಪ್ಪಲಿಯಲ್ಲಿ ಹೊಡೆದರೆ ನೀವು ಅದನ್ನು ಬೆಳಗ್ಗೆಯಿಂದ ಸಂಜೆಯವರೆಗೆ ತೋರಿಸುತ್ತೀರಾ. ಯಾವುದೂ ಸಿಗದಿದ್ದರೆ ಯಾವುದೋ ಒಬ್ಬ ಸ್ವಾಮೀಜಿಯನ್ನು ಹಿಡಿದು ತರುತ್ತೀರಾ. ವಾರಕ್ಕೊಮ್ಮೆ ಬರುವ ಟಿಆರ್ಪಿಗಾಗಿ ಪಾಪ ಟಿವಿ ಚಾನೆಲ್‌ಗಳವರು ಪಡುವ ಕಷ್ಟ ನೋಡಿದರೆ ಅಯ್ಯೋ ಅನ್ನಿಸತ್ತೆ. ಒಳ್ಳೆಯ ಕೆಲಸಗಳನ್ನು ತೋರಿಸುವುದಿಲ್ಲ. ಈ ಟಿಆರ್‌ಪಿ ಅನ್ನೋದು ಮೊದಲು ಬ್ಯಾನ್ ಆಗ್ಬೇಕು.

ಬನ್ನಂಜೆ ರಾಜ ಬೊಗಳುವ ನಾಯಿ

ನಾನು ಬನ್ನಂಜೆ ರಾಜನಿಗೆ ಅಡ್ಡಗಾಲಾಗಿದ್ದುದು ನಿಜ. ಯಾಕೆಂದರೆ, ಆತ ಜನರನ್ನು ಸುಲಿಗೆ ಮಾತ್ತಿದ್ದ. ಹಣ ಕೊಡದಿದ್ದರೆ ಜನರನ್ನು ಕೊಲ್ಲುತ್ತಿದ್ದ. ಇದು ನನ್ನ ನಿಯಮಕ್ಕೆ ವಿರುದ್ಧವಾಗಿತ್ತು. ಆತ ನನ್ನ ಜತೆಯಲ್ಲೇ ದುಬೈಗೆ ಬಂದಿದ್ದವನು. ಅವನು ಈ ಮಟ್ಟಕ್ಕೆ ಇಳಿದ ಕೂಡಲೇ ದೂರ ಇಟ್ಟೆ. ಈಗ ಅವನನ್ನು ಪೊಲೀಸರು ಎಳೆದು ತಂದಿದ್ದಾರೆ. ನನ್ನ ವಿರುದ್ಧ ಸ್ಟೇಟ್‌ಮೆಂಟ್‌ಗಳನ್ನು ಕೊಡುತ್ತಿದ್ದಾನೆ. ನನ್ನಿಂದ ಅವನಿಗೆ ಅಪಾಯ ಇದೆ ಎಂದು ಹೇಳುತ್ತಿದ್ದಾನೆ. ಅದು ಅವನ ಕಲ್ಪನೆ ಅಷ್ಟೇ. ಅವನೊಬ್ಬ ಬೊಗಳುವ ನಾಯಿ, ಕಚ್ಚುವುದಿಲ್ಲ.

ಕೋಟೆ ಕಟ್ಟಿಕೊಂಡರೆ ಪ್ರಾಣ ಉಳಿಯುವುದಿಲ್ಲ

ನನ್ನ ರಕ್ಷಣೆಗಾಗಿ ಸೆಕ್ಯೂರಿಟಿ ವ್ಯವಸ್ಥೆ ಇಟ್ಟುಕೊಂಡಿದ್ದೇನೆ. ನೀವು ಎಷ್ಟೇ ದೊಡ್ಡ ಕೋಟೆ ಕಟ್ಟಿಕೊಂಡರೂ ಪ್ರಾಣ ಉಳಿಯುವುದಿಲ್ಲ. ರಾಜೀವ್ ಗಾಂಧಿಯ­ವರಂತವರನ್ನು ಕೊಂದರು, ಅಮೆರಿಕ ಅಧ್ಯಕ್ಷರಾಗಿದ್ದ ಕೆನಡಿಯವರನ್ನೇ ಕೊಂದರು. ಪ್ರಾಣ ಕೊಡುವವನು, ತೆಗೆಯುವವನೂ ಮೇಲಿರುವ ದೇವರು. ಮೈಸೂರಿನ ಕೋರ್ಟ್‌ನಲ್ಲಿ ನನ್ನ ಮೇಲೆ ದಾಳಿ ನಡೆಸಿದಾಗ ನನಗೆ ಐದು ಗುಂಡುಗಳು ಹೊಕ್ಕಿದ್ದವು. ಆದರೂ ನಾನು ಬದುಕಿದೆ, ಪ್ರಜ್ಞೆಯನ್ನೂ ಕಳೆದುಕೊಂಡಿರಲಿಲ್ಲ. ನನಗೆ ಹೊಡೀತಾರೆ ಎಂಬುದು ಒಂದು ದಿನ ಮೊದಲೇ ಗೊತ್ತಿತ್ತು. ಇದು ಗೊತ್ತಿದ್ದರೂ ನಾನು ಹೆದರದೆ ಕೋರ್ಟ್‌ಗೆ ಹಾಜರಾದೆ. ಅವತ್ತು ಹೊಡೆಯದಿದ್ದರೆ, ಮತ್ತೊಂದು ದಿನ ಹೊಡೆಯುತ್ತಿದ್ದರು. ಕಾಪಾಡುವವನು ದೇವರು. ನನ್ನ ಸಾವನ್ನು ದೇವರು ಬರೆದಿದ್ದಾನೆ, ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ.

ಜನರೊಂದಿಗೆ ಬೆರೆತು ಪತ್ನಿಯ ಮರೆಯುತ್ತಿದ್ದೇನೆ

ನನ್ನ ಜೀವನದಲ್ಲಿ ಅತಿ ಮುಖ್ಯ ಸ್ಥಾನ ಗಳಿಸಿದ್ದವಳು ನನ್ನ ಪತ್ನಿ ರೇಖಾ. ನನ್ನ ಕಷ್ಟ ಸುಖ ಎಲ್ಲದರಲ್ಲೂ ಆಕೆ ಭಾಗಿಯಾಗಿದ್ದಳು. ಅಷ್ಟು ವರ್ಷ ಜತೆಯಲ್ಲಿದ್ದ ಮೇಲೆ ನೆನಪಾಗುತ್ತಾರಲ್ಲ. ಅವಳಿಲ್ಲದ ಜೀವನವನ್ನು ನಾನು ಜನರೊಂದಿಗೆ ಬೆರೆತು ಆಕೆಯನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದೇನೆ. ಸಂಘಟನೆ, ವ್ಯವಹಾರ, ಜನರ ಕಷ್ಟಗಳನ್ನು ಪರಿಹರಿಸುವುದರಲ್ಲಿಯೇ ಸಮಯ ಕಳೆದು ಹೋಗುತ್ತದೆ. ನನ್ನ ಸಿನಿಮಾದಲ್ಲಿ ಆಕೆಯ ಪಾತ್ರವೂ ಇದೆ. ಮುತ್ತಪ್ಪ ರೈ ಬಗ್ಗೆ ಸಿನಿಮಾ ಮಾಡುವಾಗ ಹೆಂಡತಿಯ ಪಾತ್ರವೂ ಇರಬೇಕಲ್ಲವೇ.

ಹಣ ಎಲ್ಲಿಯದು?

ಇಷ್ಟೆಲ್ಲಾ ಮಾಡ್ತೀನಿ ಅಂತೀರಲ್ಲ. ಇದಕ್ಕೆಲ್ಲ ಹಣ ಎಲ್ಲಿಂದ ಬರುತ್ತದೆ, ನಿಮ್ಮ ವ್ಯವಹಾರ ಏನು? ಹ್ಞಾಂ… ಇದು ಸರಿಯಾದ ಪ್ರಶ್ನೆ. ಈ ವಿಷಯ ಎಲ್ಲರಿಗೂ ಗೊತ್ತಾಗಬೇಕು. ನಾನು ರೈತರಿಂದ ದುಡ್ಡು ಕೊಟ್ಟು ಜಮೀನು ಖರೀದಿ ಮಾಡುತ್ತೇನೆ. ನಂತರ ಆ ಜಮೀನನ್ನ ಎನ್.ಎ ಮಾಡಿಸಿ, ಅದರಲ್ಲಿ ರಸ್ತೆ, ಚರಂಡಿಗಳಂಥ ಮೂಲ ಸೌಕರ್ಯ ಕೊಟ್ಟು ಲೇಔಟ್ ನಿರ್ಮಿಸುತ್ತೇನೆ. ಹಾಗೆ ಮಾಡಿ ಸೈಟು ಮಾರುತ್ತೇನೆ. ಅದು ಪಕ್ಕಾ ವ್ಯವಹಾರ. ಇದುವರೆಗೂ ಒಬ್ಬೇ ಒಬ್ಬ ರೈತನಿಗೆ ದುಡ್ಡು ಕೊಡದೇ ಜಮೀನು ಬರೆಸಿಕೊಂಡಿದ್ದರೆ ತೋರಿಸಿ. ಒಂದು ಕೆರೆ, ರಾಜಾ ಕಾಲುವೆ ಒತ್ತುವರಿ ಮಾಡಿಸಿಕೊಂಡಿದ್ದರೆ ತೋರಿಸಿ. ಯಾವುದೋ ವಿವಾದದಲ್ಲಿ­ರುವ ಜಮೀನಿಗೆ ಒಂದಷ್ಟು ದುಡ್ಡು ಕೊಟ್ಟು ಅವರಿವರನ್ನು ಹೆದರಿಸಿ ಬೇಲಿ ಸುತ್ತಿಕೊಂಡಿದ್ದರೆ ತೋರಿಸಿ. ಇಷ್ಟು ವರ್ಷಗಳಾದವು ವ್ಯವಹಾರ ಶುರುಮಾಡಿ.

ಒಂದು ವೇಳೆ ನಾನು ತಪ್ಪು ಮಾಡಿದ್ದರೆ ಒಂದಾದರೂ ಕೇಸ್ ಹೊರಗೆ ಬರಬೇಕಿತ್ತಲ್ಲವಾ? ನಾನು ಮಾಡಿದ ಅಷ್ಟೂ ಲೇಔಟ್ಗಳ ಮಾಹಿತಿ ಕೊಡುತ್ತೇನೆ. ನೀವೇ ಹೋಗಿ ನೋಡಿ. ಕಳೆದ ವರ್ಷ ಒಂದಲ್ಲ – ಎರಡಲ್ಲ, ಇಪ್ಪತ್ತ ನಾಲ್ಕು ಕೋಟಿ ತೆರಿಗೆ ಕಟ್ಟಿದ್ದೇನೆ. ಹಾಗೆ ನ್ಯಾಯದ ದಾರಿಯಲ್ಲಿ ಗಳಿಸಿದ ದುಡ್ಡಿನಲ್ಲಿ ಸಮಾಜ ಸೇವೆ ಮಾಡುತ್ತೇನೆ. ದುಡ್ಡು ಕಡಿಮೆ­ಯಾದರೆ ಸ್ವಂತ ವ್ಯವಹಾರ ಮಾಡುವ ನನ್ನ ಮಕ್ಕಳಿಂದ ಪಡೆದುಕೊಳ್ಳುತ್ತೇನೆ.

ನನ್ನನ್ನು ಕೆಣಿಕಿದರೆ ಸುಮ್ಮನೆ ಬಿಡುವುದಿಲ್ಲ!

ನನ್ನ ಚಾರಿತ್ರ್ಯ ಹಾಳು ಮಾಡಿ ನನ್ನನ್ನು ಕೆಣಕಿದರೆ ನಾನು ಬಿಡುವುದಿಲ್ಲ ಎನ್ನುವ ರೈ, ನನಗೆ ಸ್ವಾಭಿಮಾನ ಇದೆ, ಅದಕ್ಕೆ ಕುಂದು ಮಾಡುವಂತಹ ಘಟನೆಗಳು ನಡೆದರೆ ಸುಮ್ಮನೆ ಕೂರುವುದಿಲ್ಲ. ಕ್ರೈಂ ಅನ್ನುವ ಶಬ್ದವೂ ನನ್ನ ಸುತ್ತ ಈಗ ಸುಳಿಯುವುದಿಲ್ಲ. ಎಲ್ಲ ಕೇಸ್‌ಗಳಲ್ಲಿ ಬಿಡುಗಡೆಯಾಗಿ ಜೈಲಿನಿಂದ ಹೊರಗೆ ಬಂದನಂತರ ನನ್ನ ಜತೆಗಾರರನ್ನ ಕೂರಿಸಿಕೊಂಡು ಒಂದು ಮೀಟಿಂಗ್ ಮಾಡಿದೆ. ಅಂಡರ್ ವರ್ಲ್ಡ್‌ನಲ್ಲಿ ಮುಂದುವರಿಯುವುದಾ – ಬಿಟ್ಟುಬಿಡುವುದಾ ಎಂಬ ಬಗ್ಗೆ ಚರ್ಚೆ ಮಾಡಿದೆವು. ಇದು ಸಾಕು ಅನ್ನುವ ತೀರ್ಮಾನ ಆಯಿತು. ನಾನೊಬ್ಬನೇ ಬಿಟ್ಟು ನನ್ನ ಜತೆಗಿರುವವರು ಅದರಲ್ಲೇ ಮುಂದುವರಿದರೆ ಸರಿಯಲ್ಲ. ಅದಕ್ಕೇ, ಎಲ್ಲರೂ ಪಾತಕ ಲೋಕದಿಂದ ಹೊರಗೆ ಬಂದು ನ್ಯಾಯಯುತ ವ್ಯವಹಾರ ಮಾಡುವುದು ಅನ್ನೋ ತೀರ್ಮಾನವಾಯಿತು.

ಆವತ್ತು ತೆಗೆದುಕೊಂಡ ತೀರ್ಮಾನಕ್ಕೆ ಬದ್ಧರಾಗಿ ಆವತ್ತಿನಿಂದ ಇವತ್ತಿನ ತನಕ ನಾನು – ನನ್ನ ಜತೆಗಾರರು ಇದ್ದೇವೆ.ಎಲ್ಲವನ್ನೂ ಬಿಟ್ಟಿದ್ದೇವೆ ಅಂತ ಹೇಳಿ ಒಳಗಿಂದೊಳಗೇ ರೌಡಿಸಂ ಮಾಡುವ ಅನೇಕರಿದ್ದಾರೆ. ನಾವು ಹಾಗಲ್ಲ. ನಾವು ಇನ್ನೊಬ್ಬರ ತಂಟೆಗೆ ಕೈ ಹಾಕುವುದಿಲ್ಲ. ನ್ಯಾಯಯುತವಾಗಿ ರೈತರಿಂದ ಜಮೀನು ಖರೀದಿಸುತ್ತೇವೆ, ವ್ಯವಹಾರ ಮಾಡುತ್ತೇವೆ. ಯಾವುದಾದ್ರೂ ಲಿಟಿಗೇಷನ್ ಪ್ರಾಪರ್ಟಿಗೆ ಕೈ ಹಾಕಿದ್ರೆ ಯರಾದ್ರೂ ನಮ್ಮ ತಂಟೆಗೆ ಬರ್ತಾರೆ. ಆದರೆ ನಾವು ಆ ರೀತಿಯ ವ್ಯವಹಾರ ಮಾಡುತ್ತಿಲ್ಲ.

                                                                       –ಶಶಿವರ್ಣಂ!

ಸರ್ಕಾರದ ಮೇಲೆ ಬೇಸರ, ಎನ್ಐಎ ಕಡೆ ಮುಖ..!

144558ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದ್ದ ಭ್ರಷ್ಟಾಚಾರ ಪ್ರಕರಣ ವನ್ನು ಬಯಲಿಗೆಳೆದಿದ್ದ ದಕ್ಷ ಅಧಿಕಾರಿ ಸೋನಿಯಾ ನಾರಂಗ್ ಎನ್ಐಎ ಎಸ್ಪಿಯಾಗಿ ವರ್ಗ ವಾಗಿದ್ದಾರೆ. ಅವರ ವರ್ಗಾ ವಣೆಯ ಹಿನ್ನೆಲೆ ಇದೀಗ ಬಹಿರಂಗವಾಗಿದೆ. ಹಾಗೆಯೇ, ಕರ್ನಾಟಕ ಕೇಡರ್ನಿಂದ ಆಯ್ಕೆಯಾಗಿ ಎನ್ಐಎನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವ ಮೊದಲ ಐಪಿಎಸ್ ಅಧಿಕಾರಿ ಎಂಬ ಖ್ಯಾತಿಗೆ ನಾರಂಗ್ ಪಾತ್ರರಾಗಿದ್ದಾರೆ.

ಲೋಕಾಯುಕ್ತ ಎಸ್ಪಿಯಾಗಿದ್ದ ನಾರಂಗ್ ಅವರನ್ನು ಡಿಐಜಿ ಹುದ್ದೆಗೆ ಬಡ್ತಿ ನೀಡಿ ಸಿಐಡಿಗೆ ಸರಕಾರ ವರ್ಗಾವಣೆ ಮಾಡಿ ಆದೇಶ ಮಾಡಿತ್ತು. ಬೆಂಗಳೂರು ನಗರ ಜಂಟಿ ಆಯುಕ್ತ ಹುದ್ದೆಯನ್ನು ನೀಡಬೇಕಿದ್ದ ಸರಕಾರ ಆ ಹುದ್ದೆಯನ್ನೇ ಇಲ್ಲವಾಗಿಸಿ ಸಿಐ ಡಿಗೆ ಸೋನಿಯಾ ಅವರನ್ನು ವರ್ಗಾವಣೆ ಮಾಡಿತ್ತು. ಆಗ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದ ಸೋನಿಯಾ ನಾರಂಗ್, ‘ತಾವು ಕೇಂದ್ರ ಸೇವೆಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವುದಾಗಿ’ ಹೇಳಿ ಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಕೇಂದ್ರ ಸರಕಾರ ಎನ್ ಐಎ ಎಸ್ಪಿಯಾಗಿ ಕಾರ್ಯ ನಿರ್ವಹಿಸುವಂತೆ ಆಹ್ವಾನಿಸಿದೆ. ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣ ಬಯಲಿ ಗೆಳೆದ ನಂತರ ಸೋನಿಯಾ ನಾರಂಗ್ ಅವರ ಬಗ್ಗೆ ಸರಕಾರಕ್ಕೆ ಅತೃಪ್ತಿಯಿತ್ತು. ಭಾಸ್ಕರ್ ರಾವ್ ಅವರನ್ನು ಪದಚ್ಯುತಿಗೊಳಿಸಲು ಮೀನಾಮೇಷ ಎಣಿಸಿದ್ದರಿಂದ ರಾಷ್ಟ್ರ ಮಟ್ಟದಲ್ಲಿ ಸರಕಾರ ತೀವ್ರ ಮುಖಭಂಗಕ್ಕೊಳಗಾಗಿತ್ತು. ಎಸ್ಪಿ ದರ್ಜೆಯಿಂದ ಡಿಐಜಿ ಹುದ್ದೆಗೆ ಬಡ್ತಿ ನೀಡಿದಾಗ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಬೋರ್ಡ್, ಸೋನಿಯಾ ಅವರಿಗೆ ನಗರ ಅಪರಾಧ ವಿಭಾಗದ ಜಂಟಿ ಆಯುಕ್ತ ಹುದ್ದೆ ನೀಡುವಂತೆ ಶಿ-ರಸು ಮಾಡಿತ್ತು. ಆದರೆ ಸರಕಾರ ಅವರನ್ನು ಸಿಐಡಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ನಗರ ಜಂಟಿ ಆಯುಕ್ತರ ಹುದ್ದೆಯನ್ನೇ ತೆಗೆದುಹಾಕಿತ್ತು. ಪೊಲೀಸ್ ವಲಯದಲ್ಲಿದ್ದ ಐಪಿಎಸ್ ಲಾಬಿಯೂ ಸೋನಿಯಾ ವಿರುದ್ಧವಾಗಿಯೇ ಕೆಲಸ ಮಾಡುತ್ತಿತ್ತು. ರಾಜ್ಯ ಸರಕಾರದ ಒತ್ತಡಕ್ಕೆ ಮಣಿಯದ ಸೋನಿಯಾರಿಗೆ ಕೆಲ ರಾಜಕಾರಣಿಗಳಿಗೆ ಅಪ್ರಿಯರಾಗಿದ್ದರು. ಈ ಎಲ್ಲ ಬೆಳವಣಿಗೆಗಳಿಂದ ಸೋನಿಯಾ ನಾರಂಗ್ ಕೇಂದ್ರ ಸೇವೆಗೆ ತೆರಳಲು ನಿರ್ಧರಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಸೋನಿಯಾ ನಾರಂಗ್ ಆಯ್ಕೆಯಾಗಿದ್ದು ಹೇಗೆ?

ನಾನಾ ರಾಜ್ಯಗಳಿಂದ ಎನ್ಐಎಯಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಕೆಲಸ ಮಾಡುವ ಆಸಕ್ತಿ ಯಿದ್ದವರು ಕೇಂದ್ರ ಗೃಹ ಇಲಾಖೆಗೆ ಅರ್ಜಿ ಸಲ್ಲಿಸುತ್ತಾರೆ. ಹೀಗೆ ಬಂದ ಅರ್ಜಿಗಳನ್ನು ಅಧಿಕಾರಿಗಳ ಸೇವಾ ದಕ್ಷತೆ ಮತ್ತು ಪ್ರಾಮಾ ಣಿಕತೆ ಆಧಾರದ ಮೇಲೆ ಆಯ್ಕೆ ಮಾಡಲಾ ಗುತ್ತದೆ. 2002 ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಸೋನಿಯಾ ನಾರಂಗ್ ವಿರುದ್ಧ ಇದುವರೆಗೂ ಭ್ರಷ್ಟಾಚಾರದ ಆರೋಪ ಬಂದಿಲ್ಲ. ದಾವಣಗೆರೆ ಮತ್ತು ಬೆಳಗಾವಿ ಜಿಲ್ಲೆಯ ಎಸ್ಪಿಯಾಗಿ ಮತ್ತು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ಸೋನಿಯಾ ಉತ್ತಮ ಹೆಸರು ಗಳಿಸಿದ್ದರು. ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದ್ದ ಭ್ರಷ್ಟಾ ಚಾರ ಪ್ರಕರಣವನ್ನು ಬಯಲಿಗೆಳೆದು ದೇಶಾ ದ್ಯಂತ ಸುದ್ದಿಯಾಗಿದ್ದರು. ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಬಯಲು ಪ್ರಕರಣದ ತನಿಖೆ ನಡೆಸುತ್ತಿರುವ ಸೋನಿಯಾ ಪ್ರಭಾವಿ ಗಳ ಒತ್ತಡಕ್ಕೆ ಮಣಿಯದೇ ತನಿಖೆ ನಡೆಸಿ ಹನ್ನೊಂದು ಮಂದಿಯನ್ನು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಸೋನಿಯಾ ಅವರ ಅರ್ಜಿಯನ್ನು ಮಾನ್ಯ ಮಾಡಿ ಎನ್ಐಎಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದೆ.

ಸಿಎಂಗೆ ಸವಾಲ್ ಹಾಕಿದ್ದ ಸೋನಿಯಾ

ಸೋನಿಯಾ ನಾರಂಗ್ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಸಿಎಂ ಹೇಳಿಕೆ ನೀಡಿದ ಮರುದಿನವೇ ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ಬಿಡು ಗಡೆ ಮಾಡಿದ್ದ ಸೋನಿಯಾ ನಾರಂಗ್‘ ನಾನು ಮುಖ್ಯಮಂತ್ರಿಯವರ ಹೇಳಿಕೆ ಯನ್ನು ಖಂಡಿಸುತ್ತೇನೆ. ಅಕ್ರಮ ಗಣಿಗಾರಿಕೆ ನಡೆದ ಜಿಲ್ಲೆಗಳಾದ ತುಮಕೂರು, ಚಿತ್ರ ದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ನಾನು ಕಾರ್ಯ ನಿರ್ವಹಿಸಿಯೇ ಇಲ್ಲ. ನನ್ನ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಸಿಎಂ ಈ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ನಾನು ಅಕ್ರಮದಲ್ಲಿ ಭಾಗಿಯಾಗಿದ್ದರೆ ಸಾಬೀತುಪಡಿಸಿ’ ಎಂದು ಮುಖ್ಯಮಂತ್ರಿಗೇ ಸವಾಲ್ ಹಾಕಿದ್ದರು.

ಶಶಿವರ್ಣಂ

ಉತ್ತರಾಖಂಡದ ಡಿಜಿಪಿಯಾಗಿ ಕನ್ನಡಿಗ ನೇಮಕ

M.A.-Ganapathyಉತ್ತರಾಖಂಡ ರಾಜ್ಯದ ಒಂಭತ್ತನೇ ಡಿಜಿಪಿಯಾಗಿ ಕರ್ನಾಟಕದ ಎಂ.ಎ ಗಣಪತಿ ನೇಮಕವಾಗಿದ್ದಾರೆ. ಆ ಮೂಲಕ ಕನ್ನಡಿಗ ಅಧಿಕಾರಿಯೊಬ್ಬರು ಬೇರೆ ರಾಜ್ಯವೊಂದರಲ್ಲಿ ಉನ್ನತ ಹುದ್ದೆಗೇರಿದ ಖ್ಯಾತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

1986 ನೇ ವರ್ಷದ ಉತ್ತರ ಪ್ರದೇಶ/ಉತ್ತರಾಖಂಡ ಐಪಿಎಸ್ ಕೇಡರ್‌ನ ಅಧಿಕಾರಿಯಾಗಿರುವ ಎಂ.ಎ. ಗಣಪತಿ ಉತ್ತರಾಖಂಡದ ಒಂಬತ್ತನೇ ಡಿಜಿಪಿಯಾಗಿ ನೇಮಕವಾಗಿದ್ದಾರೆ.

ಡಿಜಿಪಿಯಾಗಿದ್ದ ಪಿ.ಎಸ್. ಸಿದು ಅವರು ಏ.28ಕ್ಕೆ ನಿವೃತ್ತಿಯಾಗಿರುವುದರಿಂದ ಗಣಪತಿ ಇಂದಿನಿಂದ ಡಿಜಿಪಿಯಾಗಿ ಅಧಿಕಾರ ನಡೆಸಲಿದ್ದಾರೆ.ಪ್ರಸ್ತುತ ರಾಷ್ಟ್ರಪತಿ ಆಳ್ವಿಕೆ ಇರುವ ಉತ್ತರಾಖಂಡಕ್ಕೆ ಡಿಜಿಪಿಯನ್ನು ನೇಮಕಗೊಳಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. 2010ರಿಂದ ಕೇಂದ್ರ ಗೃಹ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ್ದ ಗಣಪತಿ ಅವರನ್ನು ಏ.14 ರಂದು ರಾಜ್ಯ ಸೇವೆಗೆ ಮರಳಿದ್ದರು. ಗೃಹ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂ.ಎ. ಗಣಪತಿ ಗೃಹ ಸಚಿವ ರಾಜ್‌ನಾಥ್ ಸಿಂಗ್ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು.ಕೊಡಗಿನ ವಿರಾಜಪೇಟೆ ತಾಲೂಕಿನ ಈಚೂರಿನ ಮನೆಯಪಂಡ ಅಪ್ಪಯ್ಯ ಮತ್ತು ಪ್ರೇಮಲತಾ ದಂಪತಿಯ ಮಗನಾದ ಗಣಪತಿ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣವನ್ನು ಪೊನ್ನಂಪೇಟೆಯಲ್ಲಿ ಪೂರ್ಣಗೊಳಿಸಿದ್ದರು. ಆ ನಂತರ ತಮಿಳುನಾಡಿನ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪದವಿ ಪಡೆದಿದ್ದ ಅವರು, ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು. 1986 ರಲ್ಲಿ ಉತ್ತರ ಪ್ರದೇಶ ಕೇಡರ್‌ನಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು.

ಉತ್ತರಾಖಂಡದ ಡಿಜಿಪಿಯಾಗಿ ನೇಮಕವಾಗಿರುವ ಎಂ.ಎ. ಗಣಪತಿ ‘ವಿಶ್ವವಾಣಿ’ಯೊಂದಿಗೆ ಮಾತನಾಡಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.  

ಕನ್ನಡಿಗ ಅಧಿಕಾರಿಯಾಗಿ ಉನ್ನತ ಹುದ್ದೆಗೇರಿದ್ದೀರಿ, ನಿಮಗೆ ಅಭಿನಂದನೆಗಳು

ಕನ್ನಡಿಗನನ್ನು ನೆನಪು ಮಾಡಿಕೊಂಡಿದ್ದಕ್ಕೆ ‘ವಿಶ್ವವಾಣಿ’ಗೆ ಧನ್ಯವಾದಗಳು.

ಉತ್ತರಾಖಂಡ ಡಿಜಿಪಿಯಾಗಿದ್ದೀರಾ. ಹೊಸ ಜವಾಬ್ದಾರಿಯ ಹೊರುವ ಸಂದರ್ಭದಲ್ಲಿ ಏನು ಹೇಳ ಬಯಸುತ್ತೀರಿ?

ಕರ್ನಾಟಕದವನಾಗಿ ಬೇರೆ ರಾಜ್ಯವನ್ನುಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಕರ್ನಾಟಕದಲ್ಲಿ ಹುಟ್ಟಿ ಕಳೆದ ಇಪ್ಪತ್ತು ವರ್ಷಗಳಿಂದ ನನ್ನ ರಾಜ್ಯದಿಂದ ದೂರವಿದ್ದು, ಇಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದೇನೆ. ಉತ್ತರಾಖಂಡ ಮತ್ತು ಕರ್ನಾಟಕಕ್ಕೆ ಹೋಲಿಕೆ ಮಾಡಿದರೆ ಕರ್ನಾಟಕ ವಿಭಿನ್ನ ರಾಜ್ಯ. ಅಲ್ಲಿ ದೇಶದ ಎಲ್ಲ ರಾಜ್ಯಗಳ, ಎಲ್ಲ ಭಾಷೆಯ ಜನರು ವಾಸ ಮಾಡುತ್ತಾರೆ. ಇದರಿಂದ ನನಗೆ ಉತ್ತರಾಖಂಡದಲ್ಲಿ ಉತ್ತಮ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.

ಕರ್ನಾಟಕದೊಂದಿಗಿನ ನಿಮ್ಮ ನೆನಪುಗಳ ಬಗ್ಗೆ ಹೇಳಿ?

ನಾನು ನನ್ನ ರಾಜ್ಯವನ್ನು ಪ್ರತೀ ಕ್ಷಣವೂ ಪ್ರೀತಿಸುತ್ತೇನೆ. ಕರ್ನಾಟಕ ನನ್ನ ಮನೆ, ನಾನು ಕೊಡಗಿನ ಪೊನ್ನಂಪೇಟೆಯಲ್ಲಿ ನನ್ನ ಶಿಕ್ಷಣವನ್ನು ಪೂರ್ಣಗೊಳಿಸಿದೆ. ಇವತ್ತಿಗೂ ನಾನು ಹುಟ್ಟಿದ ಊರು, ಓದಿದ ಶಾಲೆ ಎಲ್ಲವೂ ನನ್ನ ಜೀವನದ ಉತ್ತಮ ಕ್ಷಣಗಳು. ಆದರೆ ನನಗೆ ನನ್ನ ಊರಿನಲ್ಲಿ ಕೆಲಸ ಮಾಡಲು ಅವಕಾಶ ಸಿಗಲಿಲ್ಲ ಎಂಬ ಬೇಜಾರು ಕೂಡ ಇದೆ. ಉತ್ತರಾಖಂಡದಲ್ಲಿ ಪೊಲೀಸ್ ಅಧಿಕಾರಿಯಾಗಿ ಖುಷಿಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದೇನೆ.

ರಾಜ್ಯ ಪೊಲೀಸ್ ಮುಖ್ಯಸ್ಥರಾಗಿ ನಿಮ್ಮ ಯೋಜನೆಗಳೇನು?

ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ನಿಯಂತ್ರಣ ಮಾಡುವುದು ನನ್ನ ಮೊದಲು ಗುರಿ. ಅದಕ್ಕಾಗಿಯೇ ಕೆಲವು ಯೋಜನೆಗಳು ನನ್ನಲ್ಲಿವೆ. ಎಲ್ಲ ಅಧಿಕಾರಿಗಳನ್ನೂ ಒಟ್ಟಿಗೆ ಕರೆದುಕೊಂಡು ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸುವುದು ನನ್ನ ಗುರಿ. ಸಾರ್ವಜನಿಕರು ಪೊಲೀಸರು ಎಂದರೆ ಭಯ ಪಡುವ ವಾತಾವರಣವಿದೆ, ಆ ಅಭಿಪ್ರಾಯವನ್ನು ಬದಲಿಸಬೇಕೆಂದಿದ್ದೇನೆ.

ಆರು ವರ್ಷದ ಕೇಂದ್ರ ಸೇವೆಯ ಅನುಭವ ಹೇಗಿತ್ತು?

2010ರಿಂದ ನಾನು ಕೇಂದ್ರ ಗೃಹ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ್ದೇನೆ. ಕೇಂದ್ರ ಸೇವೆಯಲ್ಲಿ ಕೆಲಸ ಮಾಡುವುದು ಐಪಿಎಸ್ ಅಧಿಕಾರಿಗೆ ಸವಾಲಿನ ಸಂಗತಿ. ಆರಂಭದಲ್ಲಿ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ನಾನು ಕೆಲಸ ಮಾಡಿದೆ. ನಂತರ ಆಂತರಿಕ ಭದ್ರತಾ ವಿಭಾಗ, ಗೃಹ ಇಲಾಖೆಯ ವಕ್ತಾರ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ್ದೇನೆ. ಅಲ್ಲಿನ ಅನುಭವಗಳನ್ನು ಬಳಸಿಕೊಂಡು ಉತ್ತರಾಖಂಡದಲ್ಲಿ ಪೊಲೀಸ್ ಇಲಾಖೆಯನ್ನು ಮುನ್ನಡೆಸುತ್ತೇನೆ.

ಆಂತರಿಕ ಭದ್ರತಾ ವಿಭಾಗದಲ್ಲಿ ನಿಮಗಿದ್ದ ಸವಾಲುಗಳೇನು?

ಕೇಂದ್ರ ಗೃಹ ಇಲಾಖೆಯಲ್ಲಿ ಆಂತರಿಕ ಭದ್ರತಾ ವಿಭಾಗ ಅತ್ಯಂತ ಜವಾಬ್ದಾರಿಯುತ ವಿಭಾಗ. ನಮ್ಮ ದೇಶಕ್ಕೆ ಉಗ್ರರ ಭೀತಿ ಇರುವುದರಿಂದ ಯಾವಾಗಲೂ ಎಚ್ಚರದಿಂದಲೇ ಕಾರ್ಯನಿರ್ವಹಿಸಬೇಕು. ಭಯೋತ್ಪಾದಕ ದಾಳಿ, ನಕ್ಸಲ್ ಚಟುವಟಿಕೆಗಳ ಬಗ್ಗೆ ಯಾವಾಗಲೂ ನಿಗಾ ಇಡಬೇಕು. ಈ ವಿಭಾಗದಲ್ಲಿ ಕೆಲಸ ಮಾಡುವುದರಿಂದ ಪೊಲೀಸ್ ಅಧಿಕಾರಿಗಳಿಗೆ ಉತ್ತಮ ಜ್ಞಾನ ಮತ್ತು ಅವಕಾಶಗಳು ಸಿಗುತ್ತವೆ. ಅಲ್ಲಿ ನಾನು ಮಾಡಿದ ಉತ್ತಮ ಕೆಲಸಗಳೇ ಇಂದು ಡಿಜಿಪಿ ಹುದ್ದೆಯವರೆಗೆ ಕರೆದುಕೊಂಡು ಬಂದಿದೆ.

ಉತ್ತರಾಖಂಡ ಅಂದರೆ ಪ್ರವಾಸಿಗರಿಗೆ ಪ್ರಿಯವಾದ ರಾಜ್ಯ, ಆ ನಿಟ್ಟಿನಲ್ಲಿ ನಿಮ್ಮ ಯೋಜನೆಗಳೇನು?

ಈ ರಾಜ್ಯವನ್ನು ಪ್ರವಾಸಿ ಸ್ನೇಹಿ ರಾಜ್ಯವನ್ನಾಗಿಸುವ ಉದ್ದೇಶ ಪೊಲೀಸ್ ಇಲಾಖೆಗೆ ಇದೆ. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳೊಂದಿಗೆ ಚರ್ಚಿಸಿ ನೂತನ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಿದ್ದೇನೆ. ರಾಜ್ಯದಲ್ಲಿ ಗುಡ್ಡ ಕುಸಿಯುವುದು, ಕಾಡುಗಳಿಗೆ ಬೆಂಕಿ ಬೀಳುವುದು ಸಾಮಾನ್ಯ. ಇದರಿಂದ ಪ್ರವಾಸಿಗರು ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಈ ನಿಟ್ಟಿನಲ್ಲಿ ಅರಣ್ಯ ವಿಭಾಗ ಮತ್ತು ಅಗ್ನಿಶಾಮಕ ವಿಭಾದಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಸಿಬ್ಬಂದಿಗೆ ತುರ್ತು ಪರಿಸ್ಥಿತಿಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಅಗತ್ಯ ತರಬೇತಿ ನೀಡಲಾಗುವುದು. ಪ್ರವಾಸಿಗರು ಉತ್ತರಾಖಂಡಕ್ಕೆ ಒಂದು ಬಾರಿ ಬಂದರೆ ನಗುಮೊಗದೊಂದಿಗೆ ಹಿಂತಿರುಗಬೇಕು. ಅದಕ್ಕೆ ಪೂರಕವಾಗಿ ಪೊಲೀಸ್ ಇಲಾಖೆ ಕೆಲಸ ಮಾಡಲಿದೆ.

ನಿವೃತ್ತಿಯ ನಂತರ ರಾಜ್ಯಕ್ಕೆ ಮರಳುತ್ತೀರಾ?

ನನಗಿನ್ನೂ ಎಂಟು ವರ್ಷಗಳ ಸೇವಾವಧಿಯಿದೆ. ನಿವೃತ್ತಿಯಾದ ನಂತರ ನನ್ನ ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ಉಳಿದುಕೊಳ್ಳುವ ಯೋಜನೆಯಿದೆ. ದೀರ್ಘಕಾಲ ಹುಟ್ಟೂರಿನಿಂದ ದೂರ ಇದ್ದೇನೆ. ಈ ಕಾರಣದಿಂದ ನಿವೃತ್ತಿಯ ದಿನಗಳನ್ನು ನನ್ನ ತವರು ರಾಜ್ಯದಲ್ಲೇ ಕಳೆಯುತ್ತೇನೆ.

ಉತ್ತರಾಖಂಡಕ್ಕೆ ಕನ್ನಡಿಗ ಡಿಜಿಪಿ

 • ಕೊಡಗಿನ ವಿರಾಜ್‌ಪೇಟೆ ತಾಲೂಕಿನ ಈಚೂರಿನವರು ಪೊನ್ನಂಪೇಟೆಯಲ್ಲಿ ಪ್ರಾಥಮಿಕ ಶಿಕ್ಷಣ
 • ತಮಿಳುನಾಡು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪದವಿ
 • ದೆಹಲಿಯ ಜೆಎನ್‌ಯು ವಿವಿಯಲ್ಲಿ ಉನ್ನತ ಶಿಕ್ಷಣ 1986 ನೇ ಕೇಡರ್‌ನ ಅಧಿಕಾರಿ
 • 2000ದಲ್ಲಿ ನೂತನ ರಾಜ್ಯ ರಚನೆ ಯಾದಾಗ ಉತ್ತರಾಖಂಡ ಕೇಡರ್‌ಗೆ ವರ್ಗಾವಣೆ
 • ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಣೆ
 • 2010ರಿಂದ ಕೇಂದ್ರಸೇವೆಯಲ್ಲಿ ಕೆಲಸ
 • ಏ.13ರಂದು ರಾಜ್ಯ ಸೇವೆಗೆ ನಿಯೋಜನೆ
 • ಇಂದಿನಿಂದ ಡಿಜಿಪಿಯಾಗಿ ಕಾರ್ಯ ನಿರ್ವಹಣೆ
                                                                             –ಶಶಿವರ್ಣಂ
%d bloggers like this: