ಕೆಲಸವಿಲ್ಲದವರು ಆರೋಪ ಮಾಡುತ್ತಾರೆ, ನಾನು ಕೇರ್ ಮಾಡಲ್ಲ..
ಮಾರ್ಚ್ 9, 2016 ನಿಮ್ಮ ಟಿಪ್ಪಣಿ ಬರೆಯಿರಿ
ಸೋನಿಯಾ ನಾರಂಗ್… ಬಹುಶಃ ಈ ಹೆಸರನ್ನು ಕೇಳದವರೇ ಇಲ್ಲ. ಬಳ್ಳಾರಿಯಲ್ಲಿ ಆಡಳಿತ ಪಕ್ಷದ ಶಾಸಕನೇ ಪ್ರತಿಭಟನೆ ನಡೆಸುತ್ತಿದ್ದಾಗ ಮುಲಾಜಿಲ್ಲದೇ ಲಾಠಿ ಚಾರ್ಜ್ ಮಾಡಿ ಕೇಸ್ ಹಾಕಿದಾಗ ಮೊದಲ ಬಾರಿಗೆ ಸೋನಿಯಾ ನಾರಂಗ್ ಹೆಸರು ರಾಜ್ಯದ ಜನರಿಗೆ ಪರಿಚಯವಾಗಿತ್ತು. ಬೆಳಗಾವಿ, ಬೆಂಗಳೂರಿನಲ್ಲಿ ಕೆಲಸ ಮಾಡಿದ್ದ ಸೋನಿಯಾ ನಾರಂಗ್ ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣ ಬಯಲಿಗೆಳೆಯುವ ಮೂಲಕ ಸಂಚಲನ ಸೃಷ್ಟಿಸಿದ ದಿಟ್ಟ ಮಹಿಳೆ. ಪ್ರಭಾವಿ ರಾಜಕಾರಣಿಗಳು, ಅಧಿಕಾರಿಗಳು, ಸ್ವತಃ ಲೋಕಾಯುಕ್ತರ ಮಗನೇ ಭಾಗಿಯಾಗಿದ್ದ ಈ ಪ್ರಕರಣವನ್ನು ಬಯಲಿಗೆಳೆದಿದ್ದು ಸೋನಿಯಾ ನಾರಂಗ್ ಅವರ ಪ್ರಾಮಾಣಿಕತೆಗೆ ಹಿಡಿದ ಕನ್ನಡಿ. ವಿಶ್ವ ಮಹಿಳಾ ದಿನದ ಅಂಗವಾಗಿ ಸೋನಿಯಾ ನಾರಂಗ್ ವಿಶ್ವವಾಣಿಯೊಂದಿಗೆ ಮಾತನಾಡಿದ್ದಾರೆ.
ಪೊಲೀಸ್ ಇಲಾಖೆಗೆ ಬರುವುದಕ್ಕೆ ಸೂರ್ತಿ ಏನು?
ನಮ್ಮ ತಂದೆ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿಯಾಗಿ ಕೆಲಸ ಮಾಡುತ್ತಿದ್ದರು. ಇದರಿಂದಾಗಿ ನನಗೂ ಪೊಲೀಸ್ ಅಧಿಕಾರಿಯಾಗುವ ಆಸೆ ಚಿಗುರೊಡೆದಿತ್ತು. ನಾಗರೀಕ ಸೇವೆ ಪರೀಕ್ಷೆ ಬರೆಯಬೇಕು ಎಂಬ ಆಸೆ ಇತ್ತು. ಸಮಾಜಶಾಸದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾಗ ಯುಪಿಎಸ್ಸಿ ಪರೀಕ್ಷೆಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದೆ. ನಾನು ತುಂಬಾ ಕಷ್ಟಪಟ್ಟು ಓದಿದೆ. ಆದರೆ ಮೊದಲ ಎರಡು ಪ್ರಯತ್ನ ಸ-ಲವಾಗಲಿಲ್ಲ. ಮೂರನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯನ್ನು ಮುಗಿಸಿದೆ. ಪೊಲೀಸ್ ಅಧಿಕಾರಿಯಾಗಬೇಕು ಎಂಬ ಆಸೆಯಿದ್ದಿದ್ದರಿಂದ ನಾನು ಐಪಿಎಸ್ ಆಯ್ಕೆ ಮಾಡಿಕೊಂಡೆ.
- ನಿಮ್ಮ ಮೊದಲ ಪೋಸ್ಟಿಂಗ್ ಎಲ್ಲಿ, ಜರ್ನಿ ಹೇಗಿತ್ತು?
2002ರಲ್ಲಿ ನಾನು ಐಪಿಎಸ್ ಮುಗಿಸಿದೆ. ಎರಡು ವರ್ಷಗಳ ನಂತರ ನನ್ನ ಮೊದಲ ಪೋಸ್ಟಿಂಗ್ ಆಗಿದ್ದು ಪ್ರೊಬೇಷನರಿ ಎಎಸ್ಪಿಯಾಗಿ ಕಲಬುರ್ಗಿಯಲ್ಲಿ. ಆನಂತರ ಬೈಲಹೊಂಗಲದಲ್ಲಿ ಎಎಸ್ಪಿಯಾಗಿ ಕೆಲಸ ಮಾಡಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕೆಲಸ ಆರಂಭಿಸಿದೆ. ಆಗ ಚುನಾವಣಾ ಸಮಯ, ಹೊಸ ಅಧಿಕಾರಿಯಾದ ನನ್ನೊಂದಿಗೆ ಕೆಲ ರಾಜಕಾರಣಿಗಳು ಮಾತನಾಡುವ ಸೌಜನ್ಯವನ್ನೂ ತೋರಿಸುತ್ತಿರಲಿಲ್ಲ. ಆದರೆ ನಾನು ನನ್ನ ಕೆಲಸವನ್ನು ಖುಷಿಯಿಂದ ಮಾಡಿದೆ. ಆನಂತರ ನನ್ನನ್ನು ಎಸ್ಪಿಯಾಗಿ ದಾವಣಗೆರೆಗೆ ಪೋಸ್ಟಿಂಗ್ ಮಾಡಲಾಯಿತು.
- ದಾವಣಗೆರೆ ಎಸ್ಪಿಯಾದ ನಂತರ ನೀವು ಸುದ್ದಿಯಾದಿರಿ?
ನೋಡಿ, ಅದು ಕಾನೂನು ಮತ್ತು ಸುವ್ಯವಸ್ಥೆಯನ್ನುಕಾಪಾಡುವ ಸಂದರ್ಭ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾಗಿದ್ದು ಒಬ್ಬ ಎಸ್ಪಿಯಾಗಿ ನನ್ನ ಕರ್ತವ್ಯ. ನಾನು ಆ ಕೆಲಸವನ್ನು ಮಾಡಿದ್ದೇನೆ, ಕಾನೂನು ಪ್ರಕಾರ ಕ್ರಮ ಜರುಗಿಸಿದ್ದೇನೆ ಅಷ್ಟೇ. ಇದಕ್ಕಿಂತ ಹೆಚ್ಚಿನದೇನನ್ನೂ ನಾನು ಹೇಳುವುದಿಲ್ಲ.
- ಎಂಎಲ್ಎ ರೇಣುಕಾಚಾರ್ಯ ಮಾಡಿದ ಹಲ್ಲೆ ಆರೋಪದ ಬಗ್ಗೆ ಏನು ಹೇಳ್ತೀರಿ?
ಆ ಬಗ್ಗೆಯೂ ನಾನು ಮಾತನಾಡುವುದಿಲ್ಲ. ಅದು ಸುಳ್ಳು ಆರೋಪ ಅನ್ನೋದು ಎಲ್ಲರಿಗೂ ಗೊತ್ತು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ನನ್ನ ಕೆಲಸವಾಗಿತ್ತು. ನಾನು ಆ ಕೆಲಸವನ್ನು ಮಾಡಿದ್ದೇನೆ.
- ಬೆಳಗಾವಿ ಎಸ್ಪಿ ಆಗಿ ಅನುಭವ ಹೇಗಿತ್ತು?
ಬೆಳಗಾವಿ ಅಂದ ಕೂಡಲೇ ಅದು ಭಾಷಾ ವಿವಾದ ಮತ್ತು ಕೋಮು ಸೂಕ್ಷ್ಮ ಪ್ರದೇಶ. ಒಂದಲ್ಲಾ ಒಂದು ಘಟನೆಗಳಿಂದ ಸುದ್ದಿಯಲ್ಲಿರುವ ಜಿಲ್ಲೆ. ನಾನು ಅಲ್ಲಿ ಕೆಲಸ ಮಾಡುವಾಗ ಹಲವು ಸವಾಲುಗಳನ್ನು ಎದುರಿಸಿದ್ದೇನೆ. ಎಸ್ಪಿಯಾಗಿ ಕೆಲಸ ಮಾಡುವವರಿಗೆ ಒಂದು ಜಿಲ್ಲೆಯ ಜವಾಬ್ದಾರಿ ಇರುತ್ತದೆ. ಆ ಜವಾಬ್ದಾರಿಯನ್ನು ನಾನು ಶಕ್ತಿಮೀರಿ ನಿರ್ವಹಿಸಿದ್ದೇನೆ.
- ಬೆಂಗಳೂರಿಗೆ ಡಿಸಿಪಿಯಾಗಿ ಬಂದಾಗ ಅನ್ನಿಸಿದ್ದು ಏನು?
ಬೆಂಗಳೂರಿಗೆ ಬರುವ ಮೊದಲು ನಾಲ್ಕು ಕಡೆ ಕೆಲಸ ಮಾಡಿದ ಅನುಭವವಿತ್ತು. ಬೆಳಗಾವಿ ಮತ್ತು ದಾವಣ ಗೆರೆಯಲ್ಲಿ ಇಡೀ ಜಿಲ್ಲೆಯ ಜವಾಬ್ದಾರಿಯನ್ನು ನಿರ್ವಹಿಸಿದ್ದೆ. ಅಲ್ಲಿನ ಅನುಭವ ನನಗೆ ಉಪಯೋಗಕ್ಕೆ ಬಂತು. ಹಾಗಾಗಿ ನನಗೆ ಇಲ್ಲಿ ಕೆಲಸ ಮಾಡುವುದು ಕಷ್ಟ ಆಗಲಿಲ್ಲ.
- ಮಹಿಳೆಯಾಗಿ ಸವಾಲುಗಳನ್ನು ನಿರ್ವಹಿಸಿದ ರೀತಿ ಬಗ್ಗೆ ಹೇಳಿ?
ಕೆಲಸ ಮಾಡುವವರಿಗೆ ಮಹಿಳೆ ಅಥವಾ ಪುರುಷ ಎಂಬ ವ್ಯತ್ಯಾಸವಿರುವುದಿಲ್ಲ. ನಾನು ಕೆಲಸ ಮಾಡಿದಲ್ಲೆಲ್ಲಾ ನನ್ನೊಂದಿಗೆ ಉತ್ತಮವಾದ ತಂಡ ಇತ್ತು. ನಾವು ವ್ಯವಸ್ಥಿತವಾಗಿ ಕೆಲಸ ಮಾಡುತ್ತಾ ಹೋದರೆ ಏನನ್ನು ಬೇಕಾದರೂ ಸಾಧಿಸಬಹುದು. ನನ್ನೊಂದಿಗಿದ್ದ ಅಧಿಕಾರಿಗಳಿಗೆ ಕೆಲಸ ಮಾಡಲು ಉತ್ತೇಜಿಸುತ್ತಿದ್ದೆ, ಅವರಿಗೆ ಸರಿಯಾಗಿ ಗೈಡ್ ಮಾಡಬೇಕು. ದಕ್ಷತೆಯಿಂದ ಯಾರ ಪರವೂ ಇಲ್ಲದೇ, ಯಾರ ವಿರೋಧವೂ ಇಲ್ಲದೆ ಕೆಲಸ ಮಾಡಬೇಕು. ಹೀಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಎಲ್ಲ ಸವಾಲುಗಳನ್ನೂ ಸುಲಭವಾಗಿ ನಿರ್ವಹಿಸಬಹುದು.
- ಲೋಕಾಯುಕ್ತದಲ್ಲಿ ದೊಡ್ಡ ಹಗರಣ ನಿಮ್ಮಿಂದ ಬಯಲಿಗೆ ಬಂತು?
ನಾನು ಈ ವಿಚಾರವಾಗಿ ಏನನ್ನೂ ಹೇಳುವುದಿಲ್ಲ. ಕಾನೂನು ಪ್ರಕಾರವಾಗಿ ನಾನು ನನ್ನ ಕೆಲಸ ಮಾಡಿದ್ದೇನೆ. ನಾನು ಏನು ಮಾಡಿದ್ದೇನೆ ಎಂಬುದು ಎಲ್ಲರಿಗೂ ಗೊತ್ತಿದೆ.
- ಆರೋಪಗಳು ಬಂದಾಗ ಹೇಗೆ ಎದುರಿಸಿದಿರಿ?
ಉದ್ದೇಶಪೂರ್ವಕವಾಗಿ ಆರೋಪ ಮಾಡುವವರ ಬಗ್ಗೆ ನಾನು ಕೇರ್ ಮಾಡುವುದಿಲ್ಲ. ಇಂತಹ ಪರಿಸ್ಥಿತಿಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನಗೆ ಮಾಡಲು ತುಂಬಾ ಕೆಲಸ ಇದೆ. ಕೆಲಸವಿಲ್ಲದವರು ಆರೋಪ ಮಾಡಲಿ. ಆರೋಪ ಮಾಡುವುದು ಸುಲಭ, ನಾನು ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.
- ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ನಿಮ್ಮ ಪಾತ್ರ ಇದೆ ಎಂದು ಸಿಎಂ ಆರೋಪಿಸಿದರಲ್ಲ?
ಅಕ್ರಮ ಗಣಿಗಾರಿಕೆ ನಡೆದ ಜಿಲ್ಲೆಗಳಲ್ಲಿ ನಾನು ಕೆಲಸವನ್ನೇ ಮಾಡಿಲ್ಲ. ನನ್ನ ಮೇಲೆ ಆರೋಪ ಇರುವುದನ್ನು ತೋರಿಸಿ ಎಂದಿದ್ದೇನೆ. ನನ್ನ ಹೆಸರು ಎಲ್ಲಿದೆ ತೋರಿಸಲಿ. ಸುಮ್ಮನೆ ಇಲ್ಲದ್ದನ್ನು ಸೃಷ್ಟಿಸುವ ಕೆಲಸ ಮಾಡುತ್ತಾರೆ. ನಾನು ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ.
- ಮಹಿಳೆಯರಿಗೆ ಏನು ಹೇಳುವುದಕ್ಕೆ ಬಯಸುತ್ತೀರಿ?
ಏನನ್ನಾದರೂ ಸಾಧಿಸಬೇಕು ಎಂದರೆ ಶಿಸ್ತಿನಿಂದ ಕೆಲಸ ಮಾಡಿ. ನೀವು ಮಾಡುವ ಕೆಲಸದ ಮೇಲೆ ನಿಮಗೆ ಗೌರವವಿರಲಿ. ಎದುರಾಗುವ ಅಡೆತಡೆಗಳನ್ನು ದಿಟ್ಟವಾಗಿ ಎದುರಿಸಿದರೆ ಏನನ್ನು ಬೇಕಾದರೂ ಸಾಧಿಸಬಹುದು.
ಕನ್ನಡ ಕಲಿತಿದ್ದೇನೆ, ವಚನಗಳೆಂದರೆ ಇಷ್ಟ
ಕನ್ನಡ ನಾಡಿನಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಖುಷಿ ಇದೆ. ತರಬೆತಿ ಅವಧಿಯಲ್ಲಿ ಕನ್ನಡ ಕಲಿತಿದ್ದೇನೆ. ಜೊತೆಗೆ ಜನರೊಂದಿಗೆ ಬೆರೆತು ಕೆಲಸ ಮಾಡಿದಾಗ ಭಾಷೆ ತಾನಾಗೇ ಬರುತ್ತದೆ. ಆರಂಭದಲ್ಲಿ ಭಾಷೆ ಕಲಿಯುವುದು ಕಷ್ಟವಿತ್ತು. ಈಗ ಕನ್ನಡ ಚೆನ್ನಾಗಿ ಮಾತನಾಡುತ್ತೇನೆ, ಓದಲೂ ಬರುತ್ತದೆ. ಕನ್ನಡ ಸಾಹಿತ್ಯದಲ್ಲಿ ನನಗೆ ವಚನಗಳು ಅಂದರೆ ಇಷ್ಟ. ಬಿಡುವಿನ ಅವಧಿಯಲ್ಲಿ ವಚನಗಳನ್ನು ಓದುತ್ತೇನೆ.