ಜಾತಿ ಆಧಾರಿತ ಮೀಸಲು ವ್ಯವಸ್ಥೆಗೆ ಅಂತ್ಯ ಯಾವಾಗ?

37507

ಜಾತಿಯನ್ನೇ ನೀತಿ ಮಾಡಿಕೊಂಡ ಜಾತ್ಯತೀತ ದೇಶ ಇದು!

ಆಂಧ್ರದ ಕಾಪು ಜನಾಂಗ ತಮ್ಮ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಿ ಮೀಸಲು ವ್ಯವಸ್ಥೆ ಕಲ್ಪಿಸಬೇಕು ಎಂದು ನಡೆಸಿದ ಹಿಂಸಾತ್ಮಕ ಪ್ರತಿಭಟನೆ ಈ ನಿಟ್ಟಿನಲ್ಲಿ ಚರ್ಚೆ ಮತ್ತೆ ಆರಂಭವಾಗುವಂತೆ ಮಾಡಿದೆ. ಒಬ್ಬ ವ್ಯಕ್ತಿ ಮೀಸಲು ವ್ಯವಸ್ಥೆಯನ್ನು ವಿರೋಧಿಸಿದರೆ ಆತನಿಗೆ ಹಿಂದುಳಿದವರ, ದಲಿತರ ವಿರೋಧಿ ಎಂಬ ಪಟ್ಟ. ಒಂದು ವೇಳೆ ಮೀಸಲು ಸೌಲಭ್ಯದ ಪರ ಮಾತನಾಡಿದರೆ ಆತನಿಗೆ ಅಸಮರ್ಥ ಎಂಬ ವಿಶೇಷಣ. ನಮ್ಮ ದೇಶದಲ್ಲಿ ಮೀಸಲು ವ್ಯವಸ್ಥೆಯನ್ನು ಎಷ್ಟರ ಮಟ್ಟಿಗೆ ಅನುಷ್ಠಾನ ಮಾಡಲಾಗಿದೆ, ಅದರ ಲಾಭ ಎಷ್ಟು ತುಳಿತಕ್ಕೊಳಗಾದವರಿಗೆ ಸಿಕ್ಕಿದೆ ಎಂದು ವಿವೇಚನೆಯಿಂದ ಯೋಚಿಸಿದರೆ ಮೀಸಲು ಸೌಲಭ್ಯದ ಕರಾಳ ಮುಖದರ್ಶನವಾಗುತ್ತದೆ. ಯಾವುದೋ ಸಿದ್ಧಾಂತಕ್ಕೆ ಕಟ್ಟುಬಿದ್ದು ಕುರುಡರಂತೆ ವಾದ ಮಾಡುವವರ ಮಧ್ಯೆ ಒಂದು ಅವೈಜ್ಞಾನಿಕ ಮೀಸಲು ವ್ಯವಸ್ಥೆಯನ್ನೂ ಸಾಮಾಜಿಕ ಸಮಾನತೆಯ ಊರುಗೋಲು ಎಂದು ಬಿಂಬಿಸಲಾಗುತ್ತದೆ.

ಒಂದು ವರ್ಗ ಶತಮಾನಗಳಿಂದ ತುಳಿತಕ್ಕೆ ಒಳಗಾದಾಗ, ಅಂಥವರನ್ನು ಮುಟ್ಟಿದರೆ ಮೈಲಿಗೆ ಎಂಬ ಸ್ಥಿತಿಯಿದ್ದಾಗ ಅಂಥ ವರ್ಗವನ್ನು ಸಮಾನತೆಯ ಹಾದಿಗೆ ತರುವ, ಅವಕಾಶ ವಂಚಿತರಿಗೆ ವಿಶೇಷ ಅವಕಾಶ ನೀಡುವ, ಅಸಮಾನತೆಯನ್ನು ಹೋಗಲಾಡಿಸಿ ಕೆಳವರ್ಗದ ಜನರ ಸಬಲೀಕರಣದ ಉದ್ದೇಶದಿಂದ ಮೀಸಲು ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಸ್ವಾತಂತ್ರಾ ನಂತರ ಮೊದಲ ಹತ್ತು ವರ್ಷಗಳ ಅವಧಿಗೆ ಮೀಸಲು ವ್ಯವಸ್ಥೆ ಕಲ್ಪಿಸಿ ಆ ನಂತರ ಈ ಪ್ರಕ್ರಿಯೆಯನ್ನು ಕೈಬಿಡಬೇಕು ಎಂಬುದು ಸಾಂವಿಧಾನಿಕ ಶಾಸನ ಸಭೆಯ ನಿರ್ಧಾರವಾಗಿತ್ತು. ಆದರೆ ಈ ಅವಧಿಯನ್ನು ವಿಸ್ತರಿಸಿಕೊಂಡೇ ಬರಲಾಗುತ್ತಿದೆ. ಮೀಸಲು ವ್ಯವಸ್ಥೆಯ ಲಾಭ ಪಡೆದು ಸಧೃಡರಾಗಿರುವವರೂ ಇದ್ದಾರೆ. ಆದರೆ ಅದರ ಪ್ರಮಾಣ ಬಹಳ ಕಡಿಮೆ. ದಲಿತ, ಹಿಂದುಳಿದ ವರ್ಗಗಳಲ್ಲಿ ಸ್ವಲ್ಪ ಮಟ್ಟಿಗೆ ಪ್ರಬಲರಾಗಿರುವವರೇ ಬಹುಪಾಲು ಮೀಸಲು ಸೌಲಭ್ಯವನ್ನ ಬಳಸಿಕೊಳ್ಳುತ್ತಿದ್ದಾರೆ. ಸ್ವಾತಂತ್ರಾ ನಂತರದಲ್ಲಿ ಜಾತಿಯಾಧಾರಿತ ಮೀಸಲು ವ್ಯವಸ್ಥೆ ಅವಶ್ಯಕತೆ ಇತ್ತು. ಆದರೆ ಈ ವ್ಯವಸ್ಥೆ ಜಾರಿಯಾಗಿ ಏಳು ದಶಕ ಕಳೆದರೂ ಎಲ್ಲರೂ ಈ ವ್ಯವಸ್ಥೆಯ ಲಾಭ ಪಡೆದು ಸಬಲರಾಗಿದ್ದಾರೆ ಎಂದೇನೂ ಇಲ್ಲ. ಮೂಲ ಉದ್ದೇಶವೇ ವಿಫಲವಾಗಿ ಮೀಸಲು ಎಂಬ ಪದ ವೋಟ್ ಬ್ಯಾಂಕ್ ಸರಕಾಗಿರುವುದು ವಿಪರ್ಯಾಸ. ಈಗ ದೇಶಕ್ಕೆ ಬೇಕಿರುವುದು ಜಾತಿಯಾಧಾರದ ಮೀಸಲು ವ್ಯವಸ್ಥೆ ಅಲ್ಲ ಬದಲಾಗಿ ಆರ್ಥಿಕತೆ ಆಧಾರಿತ ಮೀಸಲು ವ್ಯವಸ್ಥೆ. ತುಳಿತಕ್ಕೊಳಗಾದವರು, ಬಡವರು ಯಾವ ಜಾತಿಯಲ್ಲಿದ್ದರೂ ಅವರನ್ನು ಗುರುತಿಸಿ ಅಂಥವರಿಗೆ ಉತ್ತಮ ಶಿಕ್ಷಣ, ಪ್ರೋತ್ಸಾಹ, ತರಬೇತಿ ನೀಡುವ ವ್ಯವಸ್ಥೆ ಮಾಡಿ ಮೇಲೆತ್ತುವ ಕೆಲಸ ನಡೆಯಬೇಕಿದೆ. ಮೀಸಲು ವ್ಯವಸ್ಥೆಯಿಂದ ಉಳ್ಳವರನ್ನು ಕೈಬಿಟ್ಟು ಬರಿಗೈಲಿರುವವರಿಗೆ ಶಿಕ್ಷಣ ಕೊಟ್ಟು ಮುನ್ನೆಲೆಗೆ ತರಬೇಕಿದೆ.
ಮೀಸಲಿನಿಂದಲೇ ತುಳಿತಕ್ಕೊಳಗಾದವರು ಉದ್ಧಾರವಾಗಿಬಿಡುತ್ತಾರೆ ಎಂಬುದು ಸಿನಿಕತನ. ಅವಕಾಶ, ಬಡ್ತಿ, ಸ್ಥಾನಮಾನ, ಅನುಕೂಲಗಳನ್ನು ಸಮರ್ಥನಾದ ವ್ಯಕ್ತಿ ತಾನಾಗಿಯೇ ಗಳಿಸಿಕೊಳ್ಳುತ್ತಾನೆ.  ಮೀಸಲು ಸೌಲಭ್ಯಕ್ಕಿಂತಲೂ ದಲಿತರಿಗೆ, ಹಿಂದುಳಿದವರಿಗೆ ಮತ್ತು ಅಲ್ಪಸಂಖ್ಯಾತರಿಗೆ ಬೇಕಿರುವುದು ಆತ್ಮಸ್ಥೈರ್ಯ ಮತ್ತು ಉತ್ತಮ ಶಿಕ್ಷಣ. ಇವೆರಡೂ ಸಿಕ್ಕರೆ ತುಳಿತಕ್ಕೊಳಗಾದ ವ್ಯಕ್ತಿ ತಾನಾಗಿಯೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾನೆ. ಆಗ ಮೀಸಲು ವ್ಯವಸ್ಥೆಯೇ ಅಪ್ರಸ್ತುತವಾಗುತ್ತದೆ. ಒಬ್ಬ ಅಸಮರ್ಥನನ್ನು ಮೀಸಲಿನ ಕಾರಣಕ್ಕಾಗಿ ಒಂದು ಹುದ್ದೆಯಲ್ಲಿ ಪ್ರತಿಷ್ಠಾಪಿಸಿದರೆ ಅದು ವ್ಯವಸ್ಥೆಗೆ ಮಾರಕವಾಗುತ್ತದೆ. ಅದರ ಪರಿಣಾಮ ಈಗಿನ ಆಡಳಿತ ವ್ಯವಸ್ಥೆಯಲ್ಲಿ ಅದಾಗಲೇ ಕಣ್ಣಿಗೆ ರಾಚುತ್ತಿದೆ. ಒಂಭತ್ತು ಗಂಟೆಯಿಂದ ಐದು ಗಂಟೆಯವರೆಗೆ ಕಚೇರಿಯಲ್ಲಿ ಕಾಲ ಕಳೆದು ಹೋಗುವ ಅದೆಷ್ಟೋ ‘ಮೀಸಲು ಅಧಿಕಾರಿಗಳು’ ದೇಶದ ಭವಿಷ್ಯವನ್ನು ನಿರ್ಧರಿಸುವ ಮುಖ್ಯ ಹುದ್ದೆಗಳಲ್ಲಿ ಆಸ್ಥಾನ ವಿದೂಷಕರಂತೆ ಕಾಲ ಕಳೆದು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಈ ರೀತಿಯಾಗಿ ಮೀಸಲನ್ನೇ ಬಂಡವಾಳ ಮಾಡಿಕೊಂಡು ಕುರ್ಚಿ ಆಕ್ರಮಿಸಿಕೊಂಡವರಿಂದ ಈ ದೇಶ ಏನನ್ನು ನಿರೀಕ್ಷಿಸಲು ಸಾಧ್ಯ. ಒಬ್ಬ ದಲಿತನಿಗೆ ಅವಕಾಶ ನೀಡಬೇಕು ಎನ್ನುವುದು ಎಷ್ಟು ಮುಖ್ಯವೋ ಅದೇ ರೀತಿ ಒಂದು ಹುದ್ದೆ ಸಮಥ ವ್ಯಕ್ತಿಗೆ ಸಿಗಬೇಕು ಎಂಬುದೂ ಅಷ್ಟೇ ಮುಖ್ಯ. ಅಲ್ಲಿ ಜಾತಿ ಅಡ್ಡಗಾಲಾಗಬಾರದು.

ಈ ನಿಟ್ಟಿನಲ್ಲಿ ಕಡ್ಡಾಯ ಶಿಕ್ಷಣ ಮತ್ತು ಸಮಾನ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಬೇಕಿದೆ. ತುಳಿತಕ್ಕೊಳಗಾಗಿರುವವರಿಗೆ ಕೆಳಹಂತದಲ್ಲಿ ಸೂಕ್ತ ಶಿಕ್ಷಣ, ತರಬೇತಿ, ಪ್ರೋತ್ಸಾಹ ನೀಡಿ ಪ್ರಬಲ ಸಮುದಾಯದವರೊಂದಿಗೆ ಸ್ಪರ್ಧಿಸುವ ಹಂತಕ್ಕೆ ತರಬೇಕೆ ಹೊರತು ಮೀಸಲಾತಿ ಎಂಬ ಏಣಿಯಿಂದ ಸ್ಥಾನಗಳು ಸುಲಭವಾಗಿ ದಕ್ಕುವಂತೆ ಮಾಡಬಾರದು. ಮೀಸಲು ವ್ಯವಸ್ಥೆ ಕೆಳಗೆ ಬಿದ್ದವರನ್ನು ಮೇಲೆತ್ತುವ ಊರುಗೋಲಾಗಬೇಕೆ ವಿನಃ ಅದು ಅಂಗವೈಕಲ್ಯದ ಸಂಕೇತವಾಗಬಾರದು. ಒಬ್ಬ ಪ್ರತಿಬಾವಂತನಿಗೆ ಸಿಗಬೇಕಾದ ಅವಕಾಶ ಜಾತಿಯ ಕಾರಣದಿಂದ ಅರ್ಹತೆಯಿಲ್ಲದವನಿಗೆ ಸಿಕ್ಕಾಗ ಈ ಊರುಗೋಲು ಪ್ರತಿಭಾವಂತನಿಗೆ ಉರುಳಾಗುತ್ತದೆ.

ಪ್ರತಿಯೊಬ್ಬರಿಗೂ ಸಮಾನ ಶಿಕ್ಷಣ, ಸಮಾನ ಅವಕಾಶ, ಸಮಾನ ಪ್ರೋತ್ಸಾಹ ಸಿಕ್ಕರೆ ಮೀಸಲಾತಿಯ ರಗಳೆಯೇ ಇರುವುದಿಲ್ಲ. ಅದನ್ನು ಬಿಟ್ಟು ಜಾತಿ ಆಧಾರದ ಮೇಲೆ ಮೀಸಲು ಸೌಲಭ್ಯ ಕಲ್ಪಿಸಿದರೆ 90ರಷ್ಟು ಅಂಕ ಪಡೆದವನ ಅವಕಾಶವನ್ನು 60 ರಷ್ಟು ಅಂಕ ಪಡೆದವನು ಮೀಸಲು ಎಂಬ ಅಸದ ಮೂಲಕ ಕಿತ್ತುಕೊಳ್ಳುತ್ತಾನೆ. ಇದು ಯಾವ ಪರಿಯ ಸಮಾನತೆ? ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ನಮ್ಮ ದೇಶ ಶತಕೋಟಿ ಡಾಲರ್ ಗಳಷ್ಟು ಹಣವನ್ನು ಪ್ರತಿ ವರ್ಷ ವ್ಯಯಿಸುತ್ತದೆ. ಇದು ಅವಶ್ಯವೂ ಹೌದು. ಆದರೆ ಇದರಷ್ಟೇ ಮುಖ್ಯವಾದದ್ದು ಶೈಕ್ಷಣಿಕ ವ್ಯವಸ್ಥೆ. ಎಲ್ಲ ಜಾತಿ, ಧರ್ಮಗಳಲ್ಲಿನ ಬಡವರು, ಕೆಳಸ್ತರದಲ್ಲಿರುವವರನ್ನು ಗುರುತಿಸಿ ಅವರಿಗೆ ಉಚಿತ ಶಿಕ್ಷಣ ನೀಡುವ ಕೆಲಸ ಆಗಬೇಕಿದೆ. ವಿಶ್ವದ ಪ್ರಮುಖ ದೇಶಗಳಲ್ಲಿ ಉಚಿತ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿದೆ. ಇದಕ್ಕಾಗಿ ಸರ್ಕಾರಗಳು ಕೋಟ್ಯಂತರ ರೂಪಾಯಿ ವ್ಯಯಿಸಿದರೆ ಅದು ದೇಶಕ್ಕೆ ಬಂಡವಾಳವಾಗುತ್ತದೆಯೇ ಹೊರತು ವ್ಯರ್ಥವಾಗುವುದಿಲ್ಲ.

ಒಂದು ವರ್ಗ ಮೀಸಲು ವ್ಯವಸ್ಥೆಯನ್ನು ತಮ್ಮ ಹಕ್ಕು ಎಂದು ಭಾವಿಸಿದರೆ ಮತ್ತೊಂದು ವರ್ಗಕ್ಕೆ ತಮ್ಮ ಅವಕಾಶವನ್ನು ಜಾತಿಯ ಕಾರಣಕ್ಕೆ ಮತ್ಯಾರೋ ಕಿತ್ತುಕೊಂಡ ಭಾವ ಕಾಡುತ್ತದೆ. ಆಗ ಸಮಾಜದಲ್ಲಿ ಸಮುದಾಯಗಳ ನಡುವೆ ಕಂದಕ ಬೆಳೆಯುತ್ತದೆ. ಈ ಕಂದಕದ ಪರಿಣಾಮದಿಂದಲೇ ಪ್ರಬಲ ಸಮುದಾಯಗಳೂ ತಮಗೂ ಮೀಸಲಾತಿ ಕಲ್ಪಿಸುವಂತೆ ಹೋರಾಟ ನಡೆಸಲು ಆರಂಭಿಸಿವೆ. ನಮ್ಮ ರಾಜಕಾರಣಿಗಳಿಗೆ ಬೇಕಿರುವುದೂ ಈ ಕಂದಕವೇ. ಒಡೆದು ಆಳುವ ನೀತಿಯನ್ನು ಬ್ರಿಟೀಷರು ತೋರಿಸಿ ಹೋಗಿದ್ದಾರೆ. ಅದನ್ನು ನಮ್ಮ ರಾಜಕೀಯ ಪಕ್ಷಗಳು ಯತಾವತ್ತಾಗಿ ಪಾಲಿಸಿಕೊಂಡು ಬರುತ್ತಿವೆ. ಬಿಹಾರ ಚುನಾವಣೆ ಸಮಯದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮೀಸಲು ವ್ಯವಸ್ಥೆಯನ್ನು ಪರಾಮರ್ಷೆಗೊಳಪಡಿಸಬೇಕು ಎಂದಿದ್ದರು. ಆ ಹೇಳಿಕೆ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಮಾಡಿ ಕೊನೆಗೆ ಬಿಹಾರದಲ್ಲಿ ಬಿಜೆಪಿ ಸೋಲಿಗೆ ಕೊಡುಗೆ ನೀಡಿತ್ತು. ಅಂದರೆ ಮೀಸಲು ವ್ಯವಸ್ಥೆಯ ಬಗ್ಗೆ ಮಾತನಾಡುವುದು ರಾಜಕೀಯ ಅಸ್ತಿತ್ವದ ಪ್ರಶ್ನೆ. ಮತಗಳ ಮೇಲೆ ಕಣ್ಣಿಟ್ಟಿರುವ ರಾಜಕೀಯ ಪಕ್ಷಗಳಿಗೆ ಮೀಸಲು ವಿಚಾರ ಯಾವಾಗಲೂ ಓಟ್ ಬ್ಯಾಂಕ್ ಪ್ರಶ್ನೆಯೇ. ಈ ವ್ಯವಸ್ಥೆಯಿಂದ ತುಳಿತಕ್ಕೊಳಗಾಗಿರುವ ವರ್ಗವನ್ನು ಮೇಲೆತ್ತುವ ಉದ್ದೇಶ ಯಾವ ರಾಜಕೀಯ ಪಕ್ಷಗಳಿಗೂ ಇಲ್ಲ. ಈ ಬಗ್ಗೆ ಗಟ್ಟಿ ದನಿಯಿಂದ ಮಾತನಾಡುವ ಯಾವ ನಾಯಕರೂ ಇಲ್ಲದೇ ಇರುವುದು ಕೂಡ ವಿಪರ್ಯಾಸ.
ಮೀಸಲು ವ್ಯವಸ್ಥೆ ಪಾರದರ್ಶಕವಾಗಿರಬೇಕು ಎಂದರೆ ಕೆನೆ ಪದರ ನೀತಿ ಜಾರಿಯಾಗಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ನೀತಿ ಕೇವಲ ಹಿಂದುಳಿದ ವರ್ಗಗಳಿಗೆ ಮಾತ್ರ ಅನ್ವಯವಾಗುತ್ತದೆ. ದಲಿತರಿಗೆ ಇದು ಅನ್ವಯವಾಗುವುದಿಲ್ಲ. ವಾರ್ಷಿಕ ಆದಾಯ ಮಿತಿ ಹಿಂದುಳಿದ ವರ್ಗಗಳಿಗೆ ನಿಗದಿಗೊಳಿಸಿ ಕೆನೆಪದರದ ವ್ಯಾಪ್ತಿ ನಿರ್ಧಾರ ಮಾಡಲಾಗುತ್ತಿದೆ. ಆದರೆ ಈ ಆದಾಯದ ಮಿತಿಯ ಲೆಕ್ಕವನ್ನೇ ತಪ್ಪು ನೀಡಿ ಮೀಸಲು ಸೌಲಭ್ಯ ಪಡೆಯುತ್ತಾ ಕಾನೂನಿನ ಕಣ್ಣಿಗೆ ಮಣ್ಣೆರಚುವ ಕೆಲಸ ನಡೆಯುತ್ತಲೇ ಇದೆ.
ಆಗಬೇಕಿರುವುದು ಏನು?
* ಮೀಸಲು ಜಾತಿಯಾಧಾರಿತವಾಗದೇ ಆರ್ಥಿಕ ದೌರ್ಬಲ್ಯ ಆಧಾರಿತ ವ್ಯವಸ್ಥೆ ಜಾರಿಯಾಗಬೇಕು.
* ಎಲ್ಲ ಜಾತಿಗಳಲ್ಲಿರುವ ಆರ್ಥಿಕವಾಗಿ ದುರ್ಬಲರಾಗಿರುವವರನ್ನು ಗುರುತಿಸಬೇಕಿದೆ.
* ಅಂಥವರಿಗೆ ಅತ್ಯುತ್ತಮ ಶಿಕ್ಷಣ ಸಿಗುವ ವ್ಯವಸ್ಥೆಯಾಗಬೇಕು.
* ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಸೌಲಭ್ಯ ನೀಡುವುದರ ಮೂಲಕ ಸಮಾನತೆ ಸಾಧಿಸಬಹುದು.
* ಉದ್ಯೋಗವಕಾಶಗಳನ್ನು ಪಡೆಯಲು ತರಬೇತಿ ನೀಡಬೇಕು.
* ಈ ಮೂಲಕ ಪ್ರಬಲರೊಂದಿಗೆ ಸ್ಪಧಿಸುವ ಆತ್ಮಸ್ಥೈರ್ಯ ಸಿಗಬೇಕು.
* ಆರ್ಥಿಕ ಹಿಂದುಳಿಯುವಿಕೆ ಯಾವುದೇ ಜಾತಿಯಿಂದ ನಿರ್ಧರಿಸಬಾರದು.
* ಮೀಸಲು ವ್ಯವಸ್ಥೆ ಕುಟುಂಬವೊಂದರ ಪಿತ್ರಾರ್ಜಿತ ಆಸ್ತಿಯಂತಾಗಬಾರದು.
* ಆರ್ಥಿಕ ಆಧಾರಿತ ಮೀಸಲು ವ್ಯವಸ್ಥೆ ನಿಯಮಿತವಾಗಿ ಪರಾಮರ್ಶೆಗೊಳಗಾಗುತ್ತಿರಬೇಕು.
* ಈ ವ್ಯವಸ್ಥೆ ಜಾರಿಗೆ ತರಲು ಸಾಂವಿಧಾನಿಕ ಸ್ವತಂತ್ರ ಸಂಸ್ಥೆ ರಚನೆಯಾಗಬೇಕು

ಜಾತಿಯಾಧಾರಿತ ಮೀಸಲು ವ್ಯವಸ್ಥೆ ಅಂತ್ಯವಾಗಿ ಆರ್ಥಿಕವಾಗಿ ದುರ್ಬಲರಾದವರನ್ನು ಗುರುತಿಸಿ ಅವರನ್ನು ಮೇಲಕ್ಕೆತ್ತುವ ಕೆಲಸ ನಡೆದರೆ ಮೀಸಲು ವ್ಯವಸ್ಥೆಯನ್ನು ಜಾರಿ ಮಾಡಿದ ಸಾಂವಿಧಾನಿಕ ಆಶಯ ಸಾರ್ಥಕ ಆಗುತ್ತದೆ. ಇಲ್ಲದಿದ್ದರೆ ಮುಂದೊಂದು ದಿನ ಸೈನ್ಯದಲ್ಲಿ, ಕ್ರೀಡೆಗಳಲ್ಲಿ, ಖಾಸಗಿ ಕ್ಷೇತ್ರಗಳಲ್ಲಿ, ತನಿಖಾ ಏಜೆನ್ಸಿಗಳಲ್ಲಿ ಸೇರಿದಂತೆ ಎಲ್ಲ ಕಡೆಯೂ ಮೀಸಲು ಬೇಡಿಕೆ ಬಂದರೆ ಆಶ್ಚರ್ಯವೇನಿಲ್ಲ..!

ಶಶಿವರ್ಣಂ

 

 

 

ಹಲ್ಲೆ ಖಂಡನೀಯ ಆದರೆ…

32502ಆ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆದಿರುವುದು ನಿಜ. ಅವತ್ತು ಆ ಕ್ಷಣದಲ್ಲಿ ಜನರ ಸಿಟ್ಟು ಆಕೆಯ ಮೇಲೆ ಹಲ್ಲೆ ನಡೆಸುವಂತೆ ಮಾಡಿದೆ. ಆ ಗಲಾಟೆಯಲ್ಲಿ ಆಕೆ ಹಾಕಿದ್ದ ಬಟ್ಟೆ ಹರಿದಿರುವುದು ನಿಜ. ಆದರೆ ಆಕೆಯನ್ನು ನಗ್ನಗೊಳಿಸಿ ಮೆರವಣಿಗೆ ಮಾಡಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ಬೊಬ್ಬೆ ಹಾಕುತ್ತಿವೆ.ಇದು ಜನಾಂಗೀಯ ನಿಂದನೆಯಂತೆ! ವಿದ್ಯಾರ್ಥಿಗಳು ಕಪ್ಪು ಬಣ್ಣದವರು ಎಂಬ ಕಾರಣಕ್ಕೆ ಅವರ ಮೇಲೆ ಹಲ್ಲೆ ನಡೆದಿಲ್ಲ. ಆಫ್ರಿಕಾ ಮೂಲದವರು ಎಂಬ ಕಾರಣಕ್ಕೂ ಹಲ್ಲೆ ನಡೆಸಿಲ್ಲ. ಮಹಿಳೆಯ ಪ್ರಾಣ ತೆಗೆದು ಪರಾರಿಯಾಗುತ್ತಿದ್ದ ತಪ್ಪಿಗೆ ಉದ್ರಿಕ್ತ ಜನರ ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ. ಆದರೆ ಇದನ್ನು ಜನಾಂಗೀಯ ನಿಂದನೆ ಎಂದರೆ ಹೇಗೆ. ಹಾಗಂತ ಆಕೆಯ ಮೇಲೆ ಹಲ್ಲೆ ನಡೆದಿರುವುದು ಸಮರ್ಥನೀಯವೂ ಅಲ್ಲ. ಹಲ್ಲೆ ನಡೆಸಿರುವವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ. ರಾಜ್ಯದ ಇತಿಹಾಸದಲ್ಲಿ ಯಾವೊಬ್ಬ ಹೆಣ್ಣುಮಗಳನ್ನೂ ಸಾರ್ವಜನಿಕವಾಗಿ ನಗ್ನಗೊಳಿಸಿ ಮೆರವಣಿಗೆ ಮಾಡಿದ ಉದಾಹರಣೆಯಿಲ್ಲ. ಅಷ್ಟಕ್ಕೂ ಹಾಗೆ ಮೆರವಣಿಗೆ ಮಾಡುವುದಿದ್ದರೆ ಮಹಿಳೆಯ ಪ್ರಾಣ ತೆಗೆದು ಪರಾರಿಯಾಗುತ್ತಿದ್ದ ಸೂಡಾನ್ ವಿದ್ಯಾರ್ಥಿಯನ್ನು ಮೆರವಣಿಗೆ ಮಾಡಬೇಕಿತ್ತು. ಅದನ್ನು ಬಿಟ್ಟು ಆತನ ಜೊತೆಗಿದ್ದ ಯುವತಿಯ ನಗ್ನಗೊಳಿಸಿ ಮೆರವಣಿಗೆ ಮಾಡಲಾಗಿದೆ ಎಂದು ವರದಿ ಮಾಡುವ ರಾಷ್ಟ್ರೀಯ ಮಾಧ್ಯಮಗಳು ಘಟನೆಗೆ ಸಂಬಂಧಿಸಿದಂತೆ ಇದೂವರೆಗೂ ಸ್ಥಳೀಯರನ್ನು ಮಾತನಾಡಿಸಿಲ್ಲ. ಪ್ರಾಣ ಕಳೆದುಕೊಂಡ ಮಹಿಳೆಯ ಕುಟುಂಬದವರನ್ನು ಮಾತನಾಡಿಸಿಲ್ಲ. ತಾಂಜೇನಿಯಾ ಯುವತಿ ದೂರಿನಲ್ಲಿ ಏನು ಹೇಳಿದ್ದಾಳೋ ಅದನ್ನೇ ಪರಮ ಸತ್ಯ ಎಂದು ವರದಿ ಮಾಡುತ್ತಿದ್ದಾರೆ. ಘಟನೆ ನಡೆದ ಸ್ಥಳದ ಸಾರ್ವಜನಿಕರು, ಗೃಹಸಚಿವ, ಡಿಜಿಪಿ, ಕಮೀಷನರ್ ಎಲ್ಲರೂ ಯುವತಿಯನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿಲ್ಲ ಎಂದು ಹೇಳುತ್ತಿದ್ದರತೂ ರಾಷ್ಟ್ರೀಯ ಮಾಧ್ಯಮಗಳು ‪#‎BangaloreShamed‬ ಅಂತ ಹ್ಯಾಷ್ ಟ್ಯಾಗ್ ಹಾಕಿಕೊಂಡು ಬೆಂಗಳೂರಿನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಯಾವ ರಾಷ್ಟ್ರೀಯ ಮಾಧ್ಯಮವೂ ಆಫ್ರಿಕನ್ ವಿಧ್ಯಾರ್ಥಿಗಳ ಪುಂಡಾಟಿಕೆಯಿಂದ ಮಹಿಳೆ ಸತ್ತ ಬಗ್ಗೆ ಒಂದೇ ಒಂದು ಅಕ್ಷರವನ್ನೂ ಹೇಳುತ್ತಿಲ್ಲ. ಸ್ಥಳೀಯರನ್ನು ಸಾಯಿಸಿದರೂ ಚಿಂತೆಯಿಲ್ಲ.. ಆದರೆ ವಿದೇಶಿಯರ ಮೇಲೆ ಹಲ್ಲೆ ನಡೆಸುವಂತಿಲ್ಲ! ಮಹಿಳೆಯ ಮೇಲೆ ಕಾರು ಹರಿಸಿ ಪರಾರಿಯಾಗುತ್ತಿದ್ದವನನ್ನು ಸ್ಥಳೀಯರಿಂದ ರಕ್ಷಿಸಲು ತಾಂಜೇನಿಯಾ ಯುವತಿ ತನ್ನ ಕಾರಿನಲ್ಲಿ ಕರೆದೊಯ್ಯುವಾಗ ಕಾರನ್ನು ಸ್ಥಳೀಯರು ಬೆನ್ನಟ್ಟಿ ತಡೆದಿದ್ದಾರೆ. ಆಗ ಕಾರಿನಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದೆ ಎಂಬ ಸತ್ಯವನ್ನು ಯಾವ ರಾಷ್ಟ್ರೀಯ ಮಾಧ್ಯಮವೂ ವರದಿ ಮಾಡುತ್ತಿಲ್ಲ. ಒಂದು ಸುಳ್ಳನ್ನು ಸತ್ಯ ಎಂದು ತೋರಿಸಲು ರಾಷ್ಟ್ರೀಯ ಮಾಧ್ಯಮಗಳು ಹೊರಟಿವೆ ಅಷ್ಟೇ. ವಿದೇಶಿ ವಿದ್ಯಾರ್ಥಿಗಳ ಮೇಲೆ, ಈಶಾನ್ಯ ಭಾರತೀಯರ ಮೇಲೆ ಹಲ್ಲೆ ನಡೆದಾಗ ಯಥಾ ಪ್ರಕಾರ ಜನಾಂಗೀಯ ನಿಂದನೆ ಅಂತಲೇ ವರದಿ ಮಾಡುವುದು ಖಯಾಲಿಯಾಗಿಬಿಟ್ಟಿದೆ. ‪#‎ShameOnNationalMedia‬

%d bloggers like this: