ಹೆಂಡತಿಯನ್ನು ಕೊಂದವರನ್ನು ಕಾನೂನು ಕ್ಷಮಿಸಿದೆ.. ಸಮಾಜ ಕ್ಷಮಿಸುತ್ತಾ..?

24916ಸಿಟ್ಟಿನ ಭರದಲ್ಲಿ ಹೆಂಡತಿಯನ್ನು ಕೊಂದ ಹಲವು ಕೈದಿಗಳನ್ನು ಕಾನೂನು ಹದಿನಾಲ್ಕು ವರ್ಷದ ನಂತರ ಕ್ಷಮಿಸಿ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಿದೆ. ಆದರೆ ಈ ಸಮಾಜ ಅವರನ್ನು ಕ್ಷಮಿಸುತ್ತದಾ..? ಈ ಪ್ರಶ್ನೆ ಇಂದು ಜೈಲಿನಿಂದ ಬಿಡುಗಡೆಯಾದ ಹಲವು ಕೈದಿಗಳಲ್ಲಿ ಮನೆ ಮಾಡಿತ್ತು. ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾದ ಶೇ.30 ರಷ್ಟು ಕೈದಿಗಳು ಹೆಂಡತಿಯನ್ನು ಕೊಲೆ ಮಾಡಿ ಜೈಲು ಸೇರಿದವರೇ ಆಗಿದ್ದಾರೆ. ಇಲ್ಲಿ ತಮ್ಮ ಪತ್ನಿಯರನ್ನು ಕೊಂದವರಾರೂ ಉದ್ದೇಶ ಪೀಊರ್ವಕವಾಗಿ ಕೊಲೆ ಮಾಡಲು ಸಂಚು ರೂಪಿಸಿ ಕೊಲೆ ಮಾಡಿದವರಲ್ಲ. ಬದಲಾಗಿ ಯಾವುದೋ ವಿಷ ಗಳಿಗೆಯಲ್ಲಿ ಆಕಸ್ಮಿಕವಾಗಿ ನಡೆದುಹೋದ ಹತ್ಯೆಗಳೇ ಹೆಚ್ಚು… ಈ ರೀತಿ ಪತ್ನಿಯನ್ನು ಕೊಲೆ ಮಾಡಿ ಹದಿನಾಲ್ಕು ವರ್ಷ ಜೈಲು ಹಕ್ಕಿಗಳಾಗಿ ಇದ್ದವರು ಈಗ ತಮ್ಮ ಕುಟುಂಬದವರು ತಾನೊಬ್ಬ ಕೊಲೆಗಾರ ಎಂದು ಗೊತ್ತಿದ್ದೂ ಹೇಗೆ ಸ್ವೀಕರಿಸುತ್ತಾರೋ ಎಂಬ ತ್ರಿಶಂಕು ಸ್ಥಿತಿಯಲ್ಲಿದ್ದಾರೆ…
ಹೆಂಡತಿ ಕೊಂದ ಪಶ್ಚಾತಾಪಕ್ಕೆ ಪೆರೋಲ್ ಬೇಡ ಅಂದ
2003 ರ ಮೇ ತಿಂಗಳಿನಲ್ಲಿ ಬೈಯಪ್ಪನಹಳ್ಳಿಯಲ್ಲಿ ಆನಂದ್ ಎಂಬಾತ ತನ್ನಪತ್ನಿ ಪೂರ್ಣಿಮಾಳನ್ನ ಕೊಲೆ ಮಾಡಿದ್ದ. ಕುಡಿದು ಮನೆಗೆ ಬಂದ ಗಂಡನನ್ನು ಹೆಂಡತಿ ಪ್ರಶ್ನಿಸಿದ್ದಕ್ಕೆ ದಂಪತಿ ಮಧ್ಯೆ ಜಗಳ ನಡೆದಿತ್ತು. ಸಿಟ್ಟಿನ ಭರದಲ್ಲಿ ಆನಂದ್ ತನ್ನ ಪತ್ನಿಯನ್ನುತಳ್ಳಿದ್ದ. ಗೋಡೆಗೆ ತಲೆ ಹೊಡೆದುಕೊಂಡು ಪೂರ್ಣಿಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಲಕಾರಿಯಾಗದೇ ಸಾವನ್ನಪ್ಪಿದ್ದಳು. ಆಗ ಆನಂದ್ ಮೇಲೆ ಕೊಲೆ ಕೇಸು ಬಿದ್ದಿತ್ತು. ಹೆಂಡತಿಯನ್ನು ಕೊಂದ ತಪ್ಪಿಗೆ ಆನಂದ್ ಗೆ ನ್ಯಾಯಾಲಯ ವಿಧಿಸಿದ್ದು ಜೀವಾವದಿ ಶಿಕ್ಷೆ. ಪರಪ್ಪನ ಅಗ್ರಹಾರ ಜೈಲು ಸೇರಿದ ಆನಂದ್ ಗೆ ತಾನು ಪ್ರಾಣಕ್ಕಿಂತ ಪ್ರೀತಿಸುತ್ತಿದ್ದ ಹೆಂಡತಿಯನ್ನು ಕೊಂದ ಪಾಪ ಪ್ರಜ್ಞೆ ಇನ್ನಿಲ್ಲದಂತೆ ಕಾಡಿತ್ತು. ಹೆಂಡತಿಯನ್ನು ಕೊಂದ ತಪ್ಪಿಗೆ ಪಶ್ಚಾತಾಪ ಮಾಡಿಕೊಳ್ಳಲು ನಿರ್ಧರಿಸಿದ ಆನಂದ್ ಒಂದು ದಿನವೂ ಪೆರೋಲ್ ರಜೆ ತೆಗೆದುಕೊಳ್ಳಲಿಲ್ಲ. ಹೆಂಡತಿ ಕೊಲೆಯಾದಾಗ ಎರೆಡು ವರ್ಷದ ಪುಟ್ಟ ಮಗು ಇತ್ತು. ಆಕೆ ಬೆಳೆದು ದೊಡ್ಡವಳಾಗಿ ತನ್ನ ಅಪ್ಪನನ್ನು ಪೆರೋಲ್ ಮೇಲೆ ಬರುವಂತೆ ಪರಿಪರಿಯಾಗಿ ಕೇಳಿಕೊಂಡರೂ ಆನಂದ್ ಮನೆಗೆ ಹೋಗಲೇ ಇಲ್ಲ. ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತೇನೆ ಎಂದು ಹೇಳುತ್ತಿದ್ದ, ಪೆರೋಲ್ ರಜೆ ಪಡೆಯದೇ ಶಿಕ್ಷೆ ಅನುಭವಿಸಿ ಕಾರಣ ಮತ್ತು ಜೈಲಿನಲ್ಲಿ ಸನ್ನಡತೆಯಿಮದ ಜೀವನ ನಡೆಸಿದ ಕಾರಣಕ್ಕೆ ಆನಂದ್ ಈಗ ಜೈಲಿನಿಂದ ಬಿಡುಗಡೆಯಾಗಿದ್ದಾನೆ..
” ನಾನು ಮಾಡಿದ ತಪ್ಪಿಗೆ ಪಶ್ಚಾತಾಪ ಅನುಭವಿಸಿದ್ದೇನೆ. ಇನ್ನು ಮುಂದೆ ಒಳ್ಳೆಯ ಮನುಷ್ಯನಾಗಿ ಬದುಕುತ್ತೇನೆ. ಮೊದಲು ನಾನು ನನ್ನ ಮಗಳ ಬಳಿ ಕ್ಷಮೆ ಕೇಳುತ್ತೇನೆ. ಅವಳು ಕ್ಷಮಿಸಿದರೆ ಜೀವನದಲ್ಲಿ ಇನ್ನೆಂದಿಗೂ ನಾನು ತಪ್ಪು ಮಾಡುವುದಿಲ್ಲ ಎಂದು ಕಣ್ಣೀರಾಗುತ್ತಾರೆ” ಆನಂದ್
ನನ್ನವರು ಯಾರೂ ಇಲ್ಲ…
ಅದು 2013 ನೆಯ ಫೆಭ್ರವರಿ ತಿಂಗಳು. ಖಾಸಗಿ ಕಂಪನಿಯೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಮುಷ್ತಾಕ್ ಅಹಮದ್ ತಮ್ಮ ಪತ್ನಿ ಪರ್ವೀನ್ ತಾಜ್ ರನ್ನು ಕೊಲೆ ಮಾಡಿದ್ದರು. ಯಾವುದೋ ಸಣ್ಣ ವಿಷಯಕ್ಕೆ ಆರಂಭವಾಗಿದ್ದ ಜಗಳ ಹೆಂಡತಿಯ ಕೊಲೆಯಲ್ಲಿ ಅಂತ್ಯವಾಗಿತ್ತು. ಮನೆಯಲ್ಲಿದ್ದ ಮೂವರು ಮಕ್ಕಳ ಕಣ್ಣ ಮುಂದೆಯೇ ಅಮ್ಮ ಕೊಲೆಯಾಗಿ ಹೋಗಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೀಣ್ಯಾ ಪೊಲೀಸರು ಮುಷ್ತಾಕ್ ಅಹಮದ್ ಮೇಲೆ ಕೊಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದರು. ಹೈಸ್ಕೂಲು ಕಲಿಯುತ್ತಿದ್ದ ಮೂವರು ಮಕ್ಕಳು ಅನಾಥರಾದರು. ಘಟನೆ ನಡೆದ ಎರಡು ವರ್ಷಗಳ ನಂತರ ನ್ಯಾಯಾಲಯ ಮುಷ್ತಾಕ್ ಅಹಮದ್ ಗೆ ಜೀವಾವದಿ ಶಿಕ್ಷೆ ವಿಧಿಸಿತು. ಅಲ್ಲಿಯವರೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮುಷ್ತಾಕ್ ಅಹಮದ್ ಸಜಾ ಕೈದಿಯಾದರು. ಕೊಲೆ ಮಾಡಿ ಜೈಲು ಸೇರಿದ ದಿನದಿಂದ ಇಲ್ಲಿಯವರೆಗೆ ಮನೆಯವರಾಗಲೀ, ಮಕ್ಕಳಾಗಲೀ ಮುಷ್ತಾಕ್ ರನ್ನು ನೋಡಲು ಬಂದಿಲ್ಲ. ಇತ್ತ ಇವರೂ ಪೆರೋಲ್ ತೆಗೆದುಕೊಳ್ಳದೇ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದರು. ಮಂಗಳವಾರ ಸಂಜೆ ಜೈಲಿನಿಂದ ಹೊರಬಂದ ಮುಷ್ತಾಕ್ ರನ್ನು ಕರೆದೊಯ್ಯಲು ಅವರ ಮನೆಯಿಂದ ಕರೆದೊಯ್ಯಲು ಯಾರೂ ಬಂದಿರಲಿಲ್ಲ. ಬಿಡುಗಡೆಯಾದ ಎಲ್ಲ ಕೈದಿಗಳನ್ನು ಮನೆಗೆ ಕರೆದೊಯ್ಯಲು ಅವರ ಕುಟುಂಬದವರು ಬಂದಿದ್ದರೆ ಮುಷ್ತಾಕ್ ಗೆ ಮಾತ್ರ ಆ ಸೌಭಾಗ್ಯವೇ ಇರಲಿಲ್ಲ.
“ನಾನು ಕೊಲೆ ಮಾಡಿ ಜೈಲು ಸೇರಿದಾಗಿನಿಂದ ಯಾರೂ ನನ್ನನ್ನು ನೋಡಲು ಬಂದಿಲ್ಲ. ಜೈಲಿನಿಂದ ಹೊರ ಬಂದಾಗಲೂ ನನ್ನನ್ನು ಕರೆದೊಯ್ಯಲು ಯಾರೂ ಬಂದಿಲ್ಲ. ಹೆಂಡತಿ ಕೊಂದ ನಂತರ ನಾನು ಅನಾಥನಾಗಿದ್ದೇನೆ. ಈಗ ಯಾವುದಾದರೂ ಲಾಡ್ಜ್ ನಲ್ಲಿ ಉಳಿದುಕೊಳ್ಳುತ್ತೇನೆ. ನಾಳೆಯಿಂದ ನನ್ನ ಮಕ್ಕಳು ಎಲ್ಲಿದ್ದಾರೆ ಎಂದು ಹುಡುಕುತ್ತೇನೆ” ಅಂತಾರೆ ಮುಷ್ತಾಕ್ ಅಹಮದ್
ಹೆಂಡತಿ ನೇಣಿಗೆ, ಗಂಡ ಜೈಲಿಗೆ
 
ಇದು ಹೆಂಡತಿಯನ್ನು ಕೊಂದ ಮತ್ತೊಬ್ಬ ನತದೃಷ್ಟನ ಕಥೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪದವರಾದ ಸುಭ್ರಹ್ಮಣ್ಯ ತಮ್ಮ ಹೆಂಡತಿ ಲಕ್ಷ್ಮಿದೇವಿಯನ್ನ ಕೊಲೆ ಮಾಡಿದ ಆರೋಪದ ಮೇಲೆ ಹದಿನಾರು ವರ್ಷ ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಗಂಡ ಹೆಂಡತಿ ಸೇರಿ ಇಬ್ಬರೂ ಹೊಟೆಲ್ ನಡೆಸುತ್ತಿದ್ದರು. ಇಬ್ಬರು ಮಕ್ಕಳಿದ್ದ ಸಂಸಾರದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ 2000 ನೆಯ ಇಸವಿ ಮಾರ್ಚ್ ತಿಂಗಳಿನ ಒಂದು ದಿನ ಕ್ಷುಲ್ಲಕ ವಿಚಾರಕ್ಕಾಗಿ ಗಂಡ ಹೆಂಡತಿ ನಡುವೆ ಜಗಳ ನಡೆದುಹೋಯ್ತು. ಜಗಳ ಮುಗಿದ ನಂತರ ಗಂಡ ಮಕ್ಕಳೆಲ್ಲ ನಿದ್ರೆಗೆ ಜಾರಿದರೆ ಹೆಂಡತಿ ಲಕ್ಷ್ಮಿದೇವಿ ನೇಣಿಗೆ ಶರಣಾಗಿದ್ದಳು. ಹೆಂಡತಿ ಆತ್ಮಹತ್ಯೆ ಮಾಡಿಕೊಂಡ ನಂತರ ಮನೆಗೆ ಬಂದ ಪೊಲೀಸರು ಸುಭ್ರಹ್ಂಣ್ಯನನ್ನು ಬಂಧಿಸಿ ಕೊಲೆ ಕೇಸು ಹಾಕಿದರು. ಅದೆಲ್ಲ ನಡೆದು ಹದಿನಾರು ವರ್ಷಗಳೇ ಕಳೆದುಹೋಗಿವೆ. ಘಟನೆ ನಡೆದಾಗ 40 ವರ್ಷ ವಯಸ್ಸಿನ ಸುಭ್ರಹ್ಮಣ್ಯ ಅವರ ವಯಸ್ಸು ಈಗ 56.
“ಈ ಹಿಂಸೆ ಮತ್ಯಾರಿಗೂ ಬರಬಾರದು ಸಾರ್… ನನ್ನ ಹೆಂಡತಿ ಸಿಟ್ಟಿನಲ್ಲಿ ನೇಣು ಹಾಕಿಕೊಂಡಳು. ನಾನು ಆಕೆ ಸಾವಿಗೆ ಕಾರಣ ಎಂದು ಪೊಲೀಸರು ನನ್ನನ್ನು ಜೈಲಿಗೆ ಹಾಕಿದರು. ನನಗೆ ಕೋರ್ಟೂ, ಕಾನೂನು, ಪೊಲೀಸ್ ಏನೆಂದರೆ ಏನೂ ಗೊತ್ತಿರಲಿಲ್ಲ. ಇಷ್ಟು ವರ್ಷ ವನವಾಸದಂತೆ ಇಲ್ಲಿ ಶಿಕ್ಷೆ ಅನುಭವಿಸಿದ್ದೇನೆ. ಇನ್ನು ಮುಂದೆ ಮಕ್ಕಳೊಂದಿಗೆ ಬದುಕುತ್ತೇನೆ” ಅಂತಾರೆ ಸುಭ್ರಹ್ಮಣ್ಯ
ಈ ಮೂರು ಪ್ರಕರಣಗಳು ಕೇವಲ ಉದಾಹರಣೆಗಳಷ್ಟೇ. ಯಾವುದೋ ಕೆಟ್ಟ ಗಳಿಗೆಯಲ್ಲೋ, ಆಕಸ್ಮಿಕವಾಗಿಯೋ ನಡೆದು ಹೋದ ಕೊಲೆಯಿಂದಾಗಿ ಹದಿನಾಲ್ಕು ವರ್ಷ ಕಂಬಿಯಿಂದೆ ತನ್ನವರನ್ನೆಲ್ಲರನ್ನೂ ಬಿಟ್ಟು ಶಿಕ್ಷೆ ಅನುಭವಿಸಿ ಮಾಡಿದ ತಪ್ಪಿಗೆ ಪಶ್ಚಾತಾಪ ಅನುಭವಿಸಿದ್ದಾರೆ. ಈಗ ದೇಶದ ಕಾನೂನು ಸನ್ನಡತೆ ಆಧಾರದ ಮೇಲೆ ತಪ್ಪು ಮಾಡಿದವರನ್ನು ಕ್ಷಮಿಸಿದೆ. ಆದರೆ ಅವರ ಕುಟುಂಬ, ಸ್ನೇಹಿತರು, ಈ ಸಮಾಜ ಇಂತಹ ಹಲವರನ್ನು ಕ್ಷಮಿಸುತ್ತಾ.. ಆ ಆತಂಕದಲ್ಲೇ ಇದ್ದಾರೆ ತಪ್ಪು ಮಾಡಿ ಬಿಡುಗಡೆಯಾದವರು…
                                                                                       –ಶಶಿವರ್ಣಂ

About SHASHI SHEKARA
I am a simple boy with great ambitions.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: