ಅರುಣಾ ಶಾನ್ ಭಾಗ್ ರನ್ನ 42 ವರ್ಷಗಳ ಕಾಲ ದಾರುಣ ಸ್ಥಿತಿಗೆ ತಳ್ಳಿದವನು ಇನ್ನೂ ಬದುಕಿದ್ದಾನೆ…!!!

image

ಆ ಮನುಷ್ಯ ಸತ್ತೇ ಹೋಗಿದ್ದಾನೆ ಎನ್ನಲಾಗಿತ್ತು. 42 ವರ್ಷಗಳ ಹಿಂದೆ ಆ ಘಟನೆ ನಡೆದ ಮೇಲೆ ಆತ ಮುಂಬೈನ ಯರವಾಡ ಜೈಲಿನಲ್ಲಿ ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಆ ನಂತರ ಅವನು ಎಲ್ಲಿ ಹೋದ, ಏನಾದ ಎಂಬ ಬಗ್ಗೆ ಯಾರಿಗೂ ಮಾಹಿತಿಯಿರಲಿಲ್ಲ. ದೆಹಲಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾನೆ, ಕ್ಷಯರೋಗ ಮತ್ತು ಮಾರಣಾಂತಿಕ ಏಡ್ಸ್ ರೋಗದಿಂದ ಸತ್ತೇ ಹೋಗಿದ್ದಾನೆ ಎಂದು ಪತ್ರಿಕೆಗಳು ಆತನ ಬಗ್ಗೆ ವರದಿ ಮಾಡಿದ್ದವು. ಆದ್ರೆ ಆತ ಇನ್ನೂ ಬದುಕಿದ್ದಾನೆ. ಅವನೇ ಸೋಹನ್ ಲಾಲ್ ಸಿಂಗ್ ವಾಲ್ಮೀಕಿ. 42 ವರ್ಷಗಳ ಹಿಂದೆ ಮುಂಬೈನ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಅರುಣಾ ಶಾನ್ ಬಾಗ್ ಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಅತ್ಯಾಚಾರಕ್ಕೆ ಯತ್ನಿಸಿದ್ದ ಈ ಸೋಹನ್ ಲಾಲ್. ಆ ಘಟನೆ ನಡೆದು 42 ವರ್ಷಗಳ ನಂತರ ಇತ್ತೀಚೆಗಷ್ಟೇ ಅರುಣಾ ಶಾನ್ ಬಾಗ್ ಬದುಕಿನೊಂದಿಗೆ ತನ್ನ ಹೋರಾಟವನ್ನ ನಿಲ್ಲಿಸಿ ಸಾವಿಗೆ ಶರಣಾಗಿದ್ದಳು. ಆದ್ರೆ ಈತನಿಗಿದು ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತದ 42 ನೇ ವರ್ಷ. ಅವತ್ತು ಅಷ್ಟು ದಾರುಣವಾಗಿ ಹೆಣ್ಣುಮಗಳ ಮೇಲೆ ಅಟ್ಟಹಾಸ ನಡೆಸಿದವನು ಇವತ್ತು ಇಳಿವಯಸ್ಸಿನಲ್ಲಿ ಹೊಟ್ಟೆಪಾಡಿಗಾಗಿ ಕೂಲಿ ಕಾರ್ಮಿಕನಾಗಿ ದಿನದೂಡುತ್ತಿದ್ದಾನೆ. ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಬದುಕುತ್ತಿರುವ ಈತನನ್ನ ಮುಂಬೈ ಮೂಲದ ಸಕಾಲ ವಾರ ಪತ್ರಿಕೆ ಸಂದರ್ಶನ ನಡೆಸಿದೆ. ತಾನು ಮಾಡಿದ ಕೃತ್ಯಕ್ಕೆ ಇವತ್ತಿಗೂ ಈ ಸೋಹನ್ ಲಾಲ್ ಪಶ್ಚಾತಾಪ ಪಡುತ್ತಿದ್ದಾನೆ. ಆದ್ರೆ ತಾನು ಅರುಣಾ ಮೇಲೆ ಅತ್ಯಾಚಾರ ನಡೆಸಿಲ್ಲ ಅಂತಲೇ ವಾದಿಸುತ್ತಾನೆ. ಅವತ್ತು ರಜೆ ಕೇಳಲು ಹೋಗಿದ್ದಾಗ ಅರುಣಾ ನನಗೆ ರಜೆ ಕೊಡಲು ನಿರಾಕರಿಸಿದ್ರು. ಈ ವಿಚಾರವಾಗಿ ಇಬ್ಬರ ನಡುವೆ ಅವತ್ತು ಜಗಳ ನಡೆಯಿತು. ಆ ಜಗಳ ವಿಕೋಪಕ್ಕೆ ತಿರುಗಿ ನಾನು ಕೋಪದಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿ ಆಕೆಯೊಂದಿಗಿದ್ದ ಆಭರಣಗಳೊಂದಿಗೆ ನಾನು ಪರಾರಿಯಾದೆ. ಅವತ್ತಿನ ಮಟ್ಟಿಗೆ ನನಗೆ ರಜೆ ಬೇಕಾಗಿತ್ತು. ಆದ್ರೆ ನಡೆಯಬಾರದ್ದು ನಡೆದು ಹೋಗಿತ್ತು. ಆದ್ರೆ ನಾನು ಆಕೆಯ ಮೇಲೆ ಅತ್ಯಾಚಾರ ಮಾಡಿಲ್ಲ ಅಂತ ಸೋಹನ್ ಲಾಲ್ ಪದೇ ಪದೇ ಹೇಳುತ್ತಾನೆ. ಉತ್ತರಪ್ರದೇಶದ ದಾದುಪುರ್ ಎಂಬ ಹಳ್ಳಿಯಲ್ಲಿ ಸೋಹನ್ ಲಾಲ್ ತನ್ನ ಪತ್ನಿ ಇಬ್ಬರು ಗಂಡು ಮಕ್ಕಳು, ಒಬ್ಬ ಹೆಣ್ಣುಮಗಳು ಮತ್ತು ಮೊಮ್ಮೊಕ್ಕಳೊಂದಿಗೆ ಬದುಕುತ್ತಿದ್ದಾನೆ. ಇನ್ನಿಬ್ವರು ಹೆಣ್ಣುಮಕ್ಕಳಿಗೆ ಮದುವೆಯಾಗಿ ಬೇರೆ ಕಡೆ ವಾಸ ಮಾಡುತ್ತಿದ್ದಾರೆ. ತಾನು ಮಾಡಿದ ಕೃತ್ಯದ ಬಗ್ಗೆ ತನ್ನ ಮನೆಯವರಿಗೆಲ್ಲರಿಗೂ ಕೋಪ ಇದೆ. ಹಲವು ಬಾರೀ ಸತ್ತೇ ಹೋಗಬೇಕೆಂದುಕೊಂಡಿದ್ದೇನೆ, ಆದ್ರೆ ಪಶ್ಚಾತಾಪದಲ್ಲೇ ಬದುಕು ಸವೆಸುತ್ತಿದ್ದೇನೆ ಎನ್ನುತ್ತಾನೆ ಸೋಹನ್ ಲಾಲ್. ಆ ಕೃತ್ಯ ಆತನನ್ನ ಅದೆಷ್ಟರ ಮಟ್ಟಿಗೆ ಕಾಡಿತ್ತು ಅಂದ್ರೆ ಜೈಲಿನಿಂದ ಮನೆಗೆ ಬಂದವನು ಹದಿನಾಲ್ಕು ವರ್ಷ ಆತ ತನ್ನ ಹೆಂಡತಿಯನ್ನ ಮುಟ್ಟಲೂ ಹೋಗಿರಲಿಲ್ಲವಂತೆ. ಅಷ್ಟರ ಮಟ್ಟಿಗೆ ಈತನಿಗೆ ತಾನು ಮಾಡಿದ ತಪ್ಪಿನ ಬಗ್ಗೆ ನಿವೇದನೆ ಇದೆ. ಏನೇ ಪ್ರಾಯಶ್ಚಿತ ಪಟ್ಟರೂ ಅರುಣಾ ಶಾನ್ ಬಾಗ್ ಳ 42 ವರ್ಷಗಳ ಧಾರುಣ ಸ್ಥಿತಿಯ ಮುಂದೆ ಇದೆಲ್ಲವೂ ಶೂನ್ಯ. ಸೋಹನ್ ಲಾಲ್ ಮೇಲೆ ಕೊಲೆ ಪ್ರಕರಣ ದಾಖಲಿಸಬಹುದಾ ಎಂಬ ಬಗ್ಗೆ ಪೊಲೀಸ್ರು ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದಾರೆ. ಸೋಹನ್ ಲಾಲ್ ನ ಮೇಲೆ ಅತ್ಯಾಚಾರದ ಕೇಸ್ ದಾಖಲಿಸದೇ ಕೇವಲ ಹಲ್ಲೆ ಮತ್ತು ರಾಬರಿ ಪ್ರಕರಣ ದಾಖಲಿಸಿದ್ದ ಪೊಲೀಸ್ರು ಈಗ ಕೊಲೆ ಆರೋಪ ಹೊರಿಸಲು ಮುಂದಾಗಿದ್ದಾರೆ. 42 ವರ್ಷಗಳ ನಂತ್ರ ಕೊಲೆ ಪ್ರಕರಣ ದಾಖಲಿಸಿ ಈತನನ್ನ ಅಪರಾಧಿ ಅಂತ ಸಾಭೀತು ಪಡಿಸಲಿಕ್ಕೆ ನಮ್ಮ ಕಾನೂನಿಗೆ ಇನ್ನೂ ಅದೆಷ್ಟು ವರ್ಷ ಬೇಕಾಗುತ್ತದೆಯೋ… ಇಲ್ಲಿ ಮೂರು ದುರಂತಗಳಿವೆ. ಒಂದು, ಅರುಷಾ ಶಾನ್ ಬಾಗ್ 42 ವರ್ಷಗಳ ಕಾಲ ಹಾಸಿಗೆ ಮೇಲೆ ಜಗತ್ತಿನ ಅರಿವೇ ಇಲ್ಲದೇ ಬದುಕು ಸವೆಸಿದ್ದು. ಸೋಹನ್ ಲಾಲ್ ಮಾಡಿದ ತಪ್ಪಿಗೆ ಇಡೀ ಸಮಾಜದ ಮುಂದೆ ಪ್ರತೀ ದಿನವೂ ತಲೆ ತಗ್ಗಿಸಿ ಬದುಕುತ್ತಿರುವ ಆತನ ಕುಟುಂಬ ಮತ್ತೊಂದು ಇಡೀ ದೇಶಕ್ಕೆ ಉದಾಹರಣೆಯಾಗಬೇಕಿದ್ದ ಒಂದು ಪ್ರಕರಣವನ್ನ ನಮ್ಮ ನ್ಯಾಯ ವ್ಯವಸ್ಥೆ ನಿಭಾಯಿಸಿದ ರೀತಿ…. ಮೂರೂ ದುರಂತಗಳೇ…

                                                                                           –ಶಶಿವರ್ಣಂ

ಪಾಕಿಸ್ತಾನದಿಂದ ನ್ಯೂಕ್ಲಿಯರ್ ಬಾಂಬ್ ಪಡೆಯುವ ಹವಣಿಕೆಯಲ್ಲಿದೆ ಐಸಿಸ್…!!

image

ಅಣ್ಬಸ್ತ್ರಗಳು ಉಗ್ರರ ಕೈವಶವಾಗುವ ಭೀತಿ ಹಲವು ವರ್ಷಗಳಿಂದಲೂ ಇದೆ. ಆದ್ರೆ ಈಗ ಆ ಭೀತಿ ನಿಜವಾಗುವ ಸಾಧ್ಯತೆ ಹೆಚ್ಚಾಗಿದೆ. ಪಾಕಿಸ್ತಾನದಿಂದ ನ್ಯೂಕ್ಲಿಯರ್ ಬಾಂಬ್ ಗಳನ್ನ ಕೊಂಡುಕೊಳ್ಳುವ ಹವಣಿಕೆಯಲ್ಲಿದೆ. ಈ ಬಗ್ಗೆ ಐಸಿಸ್ ತನ್ನ ನಿಯತಕಾಲಿಕೆಯಲ್ಲಿ ಹೇಳಿಕೊಂಡಿದೆ. ಒಂದು ವರ್ಷದ ಒಳಗೆ ಪಾಕಿಸ್ತಾನದಿಂದ ಅಣ್ವಸ್ತ್ರಗಳನ್ನ ಕೊಂಡುಕೊಳ್ಳುವ ಎಲ್ಲ ಸಿದ್ದತೆಗಳನ್ನೂ ಮಾಡಿಕೊಳ್ಳಲಾಗಿದೆ ಎಂದು ಐಸಿಸ್ ತನ್ನ ನಿಯತಾಲಿಕೆಯಲ್ಲಿ ಘೋಷಿಸಿಕೊಂಡಿದೆ. ಆ ಮೂಲಕ ಅಮೇರಿಕಾದ ನೆಲದಲ್ಲಿ ಅಣ್ವಸ್ತ್ರ ದಾಳಿ ನಡೆಸಲು ಎಲ್ಲ ಸಿದ್ದತೆಗಳನ್ನೂ ಮಾಡಿಕೊಳ್ಳುತ್ತಿದೆ ಐಸಿಸ್. ಇದಕ್ಕಾಗಿ ಬಿಕಿಯನ್ ಗಟ್ಟಲೇ ಡಾಲರ್ ಹಣ ಖರ್ಚು ಮಾಡಲು ಐಸಿಸ್ ಮುಂದಾಗಿದ್ದು, ಪಾಕಿಸ್ತಾನದ ಭ್ರಷ್ಟ ಅಧಿಕಾರಿಗಳ ಮೂಲಕ ಅಣ್ವಸ್ತ್ರಗಳನ್ನ ಪಡೆಯಲು ಸಂಚು ರೂಪಿಸಿದೆ. ಹಾಗೊಂದು ವೇಳೆ ಐಸಿಸ್ ಅಣ್ವಸ್ತ್ರಗಳನ್ನ ಪಡೆದುಕೊಳ್ಳಲು ಯಶಸ್ವಿಯಾಗಿದ್ದೇ ಆದಲ್ಲಿ ಇಡೀ ಜಗತ್ತು ಅಣ್ವಸ್ತ್ರ ದಾಳಿಯ ಭೀತಿಗೊಳಗಾಗಲಿದೆ. ಈಗ ಅಣ್ವಸ್ತ್ರಗಳನ್ನ ಹೊಂದಿರುವ ಯಾವ ರಾಷ್ಟ್ರಗಳೂ ಅವುಗಳನ್ನ ಯುದ್ಧದಲ್ಲಿ ಬಳಸುವ ದುಸ್ಸಾಹಸ ಮಾಡುವ ಸಾಧ್ಯತೆ ಇಲ್ಲ. ಆದ್ರೆ ನರಮೇದಗಳಿಂದಲೇ ಕುಖ್ಯಾತಿಯಾಗಿರೋ ಐಸಿಸ್ ಗೆ ಅಣ್ವಸ್ತ್ರಗಳು ಸಿಕ್ಕರಂತೂ ಅಪಾಯ ಕಟ್ಟಿಟ್ಟಬುತ್ತಿ. ಪಾಕಿಸ್ತಾನ ತಯಾರಿಸುವ ಅಣ್ವಸ್ತ್ರಗಳು ಉಗ್ರರ ಪಾಲಾಗಬಹುದು ಎಂಬ ಆತಂಕವನ್ನ ಭಾರತ ಹಲವು ವರ್ಷಗಳಿಂದಲೂ ಪ್ರತಿಪಾದಿಸಿಸುತ್ತಲೇ ಬಂದಿತ್ತು. ಈಗ ಅದು ನಿಜವಾಗುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಪಾಕಿಸ್ತಾನದಲ್ಲಿನ ಅಣ್ವಸ್ತ್ರಗಳು ಉಗ್ರರ ಪಾಲಾಗುವುದಿಲ್ಲ ಅಂತ ಅಮೇರಿಕಾ ಪಾಕಿಸ್ತಾನ್ನು ಪೋಷಣೆ ಮಾಡುತ್ತಲೇ ಬಂದಿದೆ. ಆದ್ರೆ ಈಗ ಅದು ಅಮೇರಿಕಾಗೇ ಮುಳುವಾಗುವ ಹಂತಕ್ಕೆ ಬಂದು ನಿಂತಿದೆ. ಈ ಹಿಂದೆ ಉತ್ತರ ಕೋರಿಯಾ ಪಾಕಿಸ್ತಾನಕ್ಕೆ ಲಕ್ಷಾಂತರ ಡಾಲರ್ ಹಣ ಲಂಚ ಕೊಟ್ಟು ಅಣ್ವಸ್ತ್ರ ತಂತ್ರಜ್ಞಾನವನ್ನ ಪಡೆದ ಇತಿಹಾಸವಿದೆ. ಇದು ಗೊತ್ತಿದ್ದರೂ ಪಾಕಿಸ್ತಾನವನ್ನ ಪೋಷಿಸಿದ್ದು ಅಮೇರಿಕಾ ಮಾಡಿದ ಜಾಣ ಕೆಲಸ. ಈಗಾಗಲೇ ಅಣ್ವಸ್ತ್ರಗಳ ತಯಾರಿಕೆಯನ್ನ ದಿನದಿಂದ ದಿನಕ್ಕೆ ಹೆಚ್ಚಿಸುತ್ತಿರುವ ಪಾಕಿಸ್ತಾನ ಈಗಾಗಲೇ ಅಣ್ವಸ್ತ್ರಗಳ ಸಂಖ್ಯೆಯಲ್ಲಿ ಭಾರತ, ಬ್ರಿಟನ್ ಗಳನ್ನ ಹಿಂದಿಕ್ಕಿದೆ. ಜಗತ್ತಿನ ನಂಬಿಕೆಗೆ ಅನರ್ಹವಾದ ದೇಶವೊಂದು ಅಣ್ವಸ್ತ್ರಗಳನ್ನ ಉಗ್ರರಿಗೆ ಮಾರಿಕೊಳ್ಳುವುದಿಲ್ಲ ಅನ್ನುವ ಯಾವ ಖಾತರಿಯೂ ಉಳಿದಿಲ್ಲ. ಈ ಹಿಂದೆ ಅಣ್ವಸ್ತ್ರಗಳು ಆಲ್ ಕಾಯಿದಾ ಪಾಲಾಗುವ ಅಪಾಯ ಎದುರಿಸಿತ್ತು. ಆದ್ರೆ ಆ ಅಪಾಯ ಈಗ ಐಸಿಸ್ ಮೂಲಕ ಎದುರಾಗುತ್ತಿದೆ. ಆಲ್‌ ಕಾಯಿದಾಕ್ಕಿಂತಲೂ ಐಸಿಸ್‌ ಹೆಚ್ಚು ಅಪಾಯಕಾರಿಯಾಗುತ್ತಿದೆ. ತೈಲ ಸಮೃದ್ಧ ಇರಾಕ್‌ ಮತ್ತು ಸಿರಿಯಾದ ಪ್ರದೇಶಗಳು ಐಸಿಸ್‌ನ ನಿಯಂತ್ರಣದಲ್ಲಿರುವುದರಿಂದ ಸುಲಭವಾಗಿ ಆದಾಯ ಬರುತ್ತಿದೆ. ಐಸಿಸ್‌ನಿಂದ ಎದುರಾಗಿರುವ ಬೆದರಿಕೆಯಿಂದಾಗಿಯೇ ಅಲ್‌ ಕಾಯಿದಾ ಈಗ ಭಾರತ ಮತ್ತಿತರ ದೇಶಗಳಲ್ಲಿ ಶಾಖೆಗಳನ್ನು ಪ್ರಾರಂಭಿಸಿ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಜಿಹಾದ್‌ ಲೋಕದಲ್ಲೀಗ ಅಲ್‌ ಕಾಯಿದಾಕ್ಕಿಂತ ಐಸಿಸ್‌ ಹೆಚ್ಚು ಬಲಿಷ್ಠ ಮತ್ತು ಆಕರ್ಷಣೀಯವಾಗಿ ಕಾಣುತ್ತಿದೆ. ಯಾಕಂದ್ರೆ ಆಲ್ ಕಾಯಿದಾ ತನ್ನ ಕಾರ್ಯನಿರ್ವಹಣೆಗಾಗಿ ದೇಣಿಗೆಯ ಹಣವನ್ನ ಅವಲಂಬಿಸಿತ್ತು. ಆದ್ರೆ ಐಸಿಸ್ ತೈಲ ಮಾರಾಟ ಮತ್ತು ಒತ್ತೆಯಾಳು ಬಿಡುಗಡೆ ಹಣದಿಂದ ದಿನವೊಂದಕ್ಕೆ 60 ಕೋಟಿಯಷ್ಟು ಹಣ ಗಳಿಸುತ್ತಿದೆ. ತೈಲ ಸಮೃದ್ಧವಾಗಿರುವ ಇರಾಕ್ ಮತ್ತು ಸಿರಿಯಾಗಳಲ್ಲಿ ಐಸಿಸ್ ತೈಲ ಮಾರಾಟದಿಂದಾಗಿ ಕೋಟಿ ಕೋಟಿ ಹಣ ಗಳಿಸುತ್ತಿದೆ. ಹಾಗಾಗಿ ಐಸಿಸ್ ತನ್ನ ಕಾರ್ಯನಿರ್ವಹಣೆಗೆ ಯಾರ ಬಳಿಯೂ ಹಣಕ್ಕಾಗಿ ಅಂಗಲಾಚುವ ಅಗತ್ಯವಿಲ್ಲ. ಇದ್ರಿಂದಾಗಿಯೇ ಜಗತ್ತಿನಲ್ಲಿರುವ ಎಲ್ಲ ಜಿಹಾದಿಗಳೂ ಐಸಿಸ್ ನತ್ತ ಆಕರ್ಷಿತರಾಗುತ್ತಿರೋದು. ಆಲ್ ಕಾಯಿದಾಗೆ ಆಫ್ಘನಿಸ್ತಾನದ ಗಡಿ ಪ್ರದೇಶಗಳು ನೆಲೆಯಾಗಿದ್ರೆ ಐಸಿಸ್ ನೆಲೆ ಇರಾಕ್ ಮತ್ತು ಸಿರಿಯಾಗಳನ್ನೊಳಗೊಂಡು ಬ್ರಿಟನ್ ಗಿಂತಲೂ ಹೆಚ್ಚಿನ ಭೂ ಪ್ರದೇಶವನ್ನ ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಇದ್ರ ಜೊತೆಗೆ ಸಿರಿಯಾದ ವಸ್ತು ಸಂಗ್ರಹಾಲಯಗಳಲ್ಲಿರುವ ಬೆಲೆಬಾಳುವ ಕಲಾಕೃತಿಗಳನ್ನ ಮಾರಿ ಲಕ್ಷಾಂತರ ಡಾಲರ್ ಹಣ ಗಳಿಸುತ್ತಿದೆ. ಕೇವಲ ಒಂದು ವರ್ಷದ ಹಿಂದೆ ಐದು ಸಾವಿರ ಕೋಟಿಯಷ್ಟಿದ್ದ ಐಸಿಸ್ ನ ಆಸ್ತಿ ಈಗ ಹದಿನೈದು ಸಾವಿರ ಕೋಟಿ ರೂ ಗಡಿ ದಾಟಿದೆ. ಇಷ್ಟು ದೊಟ್ಟ ಮಟ್ಟದಲ್ಲಿ ಹಣದ ಆಮದನಿ ಇರುವ ಐಸಿಸ್ ಈಗ ನ್ಯೂಕ್ಲಿಯರ್ ಬಾಂಬ್ ಗಳನ್ನ ಪಡೆಯಲು ಬಿಲಿಯನ್ ಗಟ್ಟಲೆ ಡಾಲರ್ ಹಣವನ್ನ ವ್ಯಯಿಸಲು ಸಿದ್ದವಾಗಿದೆ. ಹಾಗೊಂದು ವೇಳೆ ಐಸಿಸ್ ಉಗ್ರರು ಪಾಕಿಸ್ತಾನದಿಂದ ಅಣ್ವಸ್ತ್ರಗಳನ್ನು ಪಡೆಯುವಲ್ಲಿ ಅಥವಾ ಅಣ್ವಸ್ತ್ರ ತಯಾರಿಕೆಯ ತಂತ್ರಜ್ಞಾನ ಪಡೆಯುವಲ್ಲಿ ಯಶಸ್ವಿಯಾದ್ರೆ ಇಡೀ ಜಗತ್ತು ಅಣ್ವಸ್ತ್ರ ಯುದ್ಧಕ್ಕೆ ಎದುರು ನೋಡಬೇಕಾಗುತ್ತದೆ…

                                                                                               –ಶಶಿವರ್ಣಂ 

ಐಎಸ್ಐ ಎಂಜಲು ತಿನ್ನುವ ಪ್ರತ್ಯೇಕತಾವಾದಿಗಳಿಗೆ ಕಾಶ್ಮೀರವನ್ನ ಪಾಕ್ ಒಡಲಿಗೆ ಬಸಿದುಬಿಡುವ ಉನ್ಮಾದ…!!!

image

ಒಂದು ಕಡೆ ಹಿಂಬಾಗಿಲ ಮೂಲಕ ಉಗ್ರರನ್ನ ನುಗ್ಗಿಸಿ ಕಾಶ್ಮೀರದಲ್ಲಿ ಹಿಂಸೆಯ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿರುವ ಪಾಕಿಸ್ತಾನ ಮತ್ತೊಂದೆಡೆ ಪ್ರತ್ಯೇಕವಾದಿಗಳನ್ನೂ ಇದೇ ಕೃತ್ಯಕ್ಕೆ ಬಳಸಿಕೊಳ್ಳುತ್ತಿದೆ. ಕಾಶ್ಮೀರದಲ್ಲಿ ಯಾವಾಗಲೂ ಅಸ್ಥಿರತೆ, ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣ ಮಾಡಿ ಜಾಗತಿಕವಾಗಿ ಕಾಶ್ಮೀರ ಸಮಸ್ಯೆಯನ್ನ ಜೀವಂತವಾಗಿಡುವುದು ಪಾಕಿಸ್ತಾನದ ಕುತಂತ್ರ. ಉಗ್ರರನ್ನ ಗಡಿ ಮೂಲಕ ನುಸುಳಿಸುವುದು ಒಂದುಕಡೆಯಾದ್ರೆ, ಪ್ರತ್ಯೇಕತಾವಾದಿ ಹೋರಾಟಕ್ಕೆ ತುಪ್ಪ ಸುರಿಯುವುದು ಇನ್ನೊಂದು ಕಡೆ. ಇವತ್ತು ಕಾಶ್ಮೀರದಲ್ಲಿ ದಿನವೂ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣ ಮಾಡುತ್ತಿರುವ ಹಿಂದಿರುವ ಶಕ್ತಿ ಸೈಯದ್ ಆಲಿ ಷಾ ಗಿಲಾನಿ. ಪಾಕಿಸ್ತಾನದ ಅಧಿಕೃತ ಏಜೆಂಟ್. ಭಾರತದಲ್ಲೇ ಹುಟ್ಟಿ ಬೆಳೆದಿದ್ದರೂ ಈತನ ನಿಷ್ಠೆ ಮಾತ್ರ ಶತೃ ರಾಷ್ಟ್ರದ ಮೇಲೆ. ಪಾಕಿಸ್ತಾನ ಗಿಲಾನಿಯನ್ನ ಕಾಶ್ಮೀರದಲ್ಲಿ ಅಸ್ಥಿರತೆ ಸೃಷ್ಟಿಸಲು ಬಳಸಿಕೊಳ್ಳುತ್ತಿದೆ. ಆ ಮೂಲಕ ಕಾಶ್ಮೀರ ವಿವಾದವನ್ನ ಜಾಗತಿಕವಾಗಿ ಜೀವಂತವಾಗಿಡುವ ಪ್ರಯತ್ನ ಪಾಕಿಸ್ತಾನದ್ದು. ಕಾಶ್ಮೀರದ ಈ ಗಿಲಾನಿಗೆ ಪಾಕ್ ಐ ಎಸ್ ಐ ನ ಕುಮ್ಮಕ್ಕು ಎಷ್ಟರ ಮಟ್ಟಿಗೆ ಇದೆ ಅಂದ್ರೆ ಈತ ಬಹಿರಂಗವಾಗಿಯೇ ನಾನು ಭಾರತೀಯನಲ್ಲ ಎಂದು ಹೇಳಿಕೊಳ್ಳುತ್ತಾನೆ. ಕಾಶ್ಮೀರದಲ್ಲಿ ಪಾಕ್ ಪರ ರ್ಯಾಲಿಗಳು, ಸಮಾವೇಶಗಳನ್ನ ನಡೆಸಲು ಲಕ್ಷಾಂತರ ರೂಪಾಯಿ ಹಣವನ್ನ ಪಾಕಿಸ್ತಾನದ ಸರ್ಕಾರ ಈ ಗಿಲಾನಿಗೆ ನೀಡುತ್ತದೆ. ಕಾಶ್ಮೀರದಲ್ಲಿನ ನಿರುದ್ಯೋಗಿ ಯುವಕರಿಗೆ ಹಣ ಮತ್ತು ದರ್ಮಯುದ್ಧದ ಆಮಿಷ ತೋರಿಸಿ ಪಾಕ್ ಪರ ಹೋರಟ, ಘೋಷಣೆಗಳನ್ನ ಕೂಗಲು ಬಳಸಿಕೊಳ್ಳುತ್ತಾನೆ. ಒಂದು ದಿನದ ರ್ಯಾಲಿಗೆ ಈತ ಕಾಶ್ಮೀರದಲ್ಲಿನ ನಿರುದ್ಯೋಗಿ ಯುವಕರುಗಳಿಗೆ ಐನೂರು ರೂಪಾಯಿಯಷ್ಟು ಇನಾಮು ಕೊಡುತ್ತಾನೆ. ಗಿಲಾನಿ ಕೊಡುವ ಐನೂರು ರೂಪಾಯಿಗಳನ್ನ ಪಡೆದ ಯುವಕರು ಪೊಲೀಸರು ಮತ್ತು ಭಾರತೀಯ ಸೇನೆಯ ಮೇಲೆ ಕಲ್ಲು ತೂರಾಟ ನಡೆಸಿ ಅಶಾಂತಿಯ ವಾತಾವರಣವನ್ನ ಸೃಷ್ಟಿಸುತ್ತಾರೆ. ಇಷ್ಟು ಸಾಕು ಪಾಕಿಸ್ತಾನಕ್ಕೆ ಕಾಶ್ಮೀರ ಸಮಸ್ಯೆಯನ್ನ ಜಗತಿಕವಾಗಿ ಜೀವಂತವಾಗಿಡಲು. ಈಗಾಗಲೇ ಪಾಕಿಸ್ತಾನ ಕಾಶ್ಮೀರದ 30 ರಷ್ಟು ಭಾಗವನ್ನ ವಶಪಡಿಸಿಕೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ವಿರೋಧಿ ಭಯೋತ್ಪಾದನಾ ಕೃತ್ಯಗಳಿಗೆ ಅಲ್ಲಿ ಕುಮ್ಮಕ್ಕು ನೀಡಲಾಗುತ್ತಿದೆ. ಇನ್ನು ಕಾಶ್ಮೀರದ ಹತ್ತರಷ್ಟು ಭೂ ಭಾಗ ಚೀನಾದ ಪಾಲಾಗಿದೆ. ಈ ದೇಶ ಕಂಡ ಉತ್ತಮ ಪ್ರಧಾನಿ ನೆಹರು(!?) ಕಾಲದಲ್ಲಿ ಅಂದರೆ 1962 ರ ಯುದ್ಧದಲ್ಲಿ ಚೀನಾ ಕಾಶ್ಮೀರದ ಹತ್ತರಷ್ಟು ಭೂಮಿಯನ್ನ ವಶಪಡಿಸಿಕೊಂಡಿದೆ. ಅವತ್ತಿನ ಯುದ್ಧದಲ್ಲಿ ಭಾರತೀಯ ಯೋಧರಿಗೆ ಚೀನಾ ವಿರುದ್ಧ  ಹೋರಾಡುವ ಶಕ್ತಿಯೂ ಇಲ್ಲದಂತೆ ಮಾಡಿದ ಕೀರ್ತಿ ನೆಹರು ಅವರಿಗೆ ಸಲ್ಲುತ್ತೆ. ಈಗ ಉಳಿದಿರುವ ಅರವತ್ತರಷ್ಟು ಕಾಶ್ಮೀರವನ್ನ ಪಾಕಿಸ್ತಾನದ ಮಡಿಲಿಗೆ ಬಸಿದುಬಿಡಲು ನಿಂತಿದ್ದಾನೆ ಈ ಸೈಯದ್ ಆಲಿ ಷಾ ಗಿಲಾನಿ. ದೇಶವನ್ನಾಳಿದ ಯಾವ ಸರ್ಕಾರಗಳು ಕಾಶ್ಮೀರದ ಪ್ರತ್ಯೇಕತಾವಾದಿಗಳನ್ನ ಮನವೊಲಿಸುವುದಾಗಲೀ, ದಿಟ್ಟತನದಿಂದ ಎದರಿಸುವುದಾಗಲೀ ಎರೆಡನ್ನೂ ಮಾಡಲಿಲ್ಲ. ಬದಲಾಗಿ ಮಾಡಿದ್ದು ಮಾತ್ರ ಓಲೈಕೆ ರಾಜಕಾರಣ. ಮುಸ್ಲೀಮರ ಪ್ರಾಬಲ್ಯವೇ ಹೆಚ್ಚಿರುವ ಕಾಶ್ಮೀರದಲ್ಲಿ ಈಗ ಕಾಶ್ಮೀರೀ ಪಂಡಿತರನ್ನ ಬೂದುಗನ್ನಡಿಯಾಕಿ ಹುಡುಕಬೇಕಾದ ಪರಿಸ್ಥಿತಿ ಇದೆ. ನಿರಂತರ ಹಿಂಸಾಚಾರದಿಂದ ಬೇಸತ್ತ ಕಾಶ್ಮೀರಿ ಪಂಡಿತರೆಲ್ಲರೂ ಜಮ್ಮು ಭಾಗದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಜಮ್ಮು ಹಿಂದೂ ಗಳ ಪ್ರಾಬಲ್ಯವುಳ್ಳ ಪ್ರದೇಶವಾದರೆ, ಕಾಶ್ಮೀರ ಮುಸ್ಲಿಂ ಬಲವುಳ್ಳ ಪ್ರದೇಶ. ಹೇಗಾದರೂ ಮಾಡಿ ಕಾಶ್ಮೀರವನ್ನ ಪಾಕಿಸ್ತಾನ ಪಡೆಯಲೇಬೇಕೆಂಬ ಹಟಕ್ಕೆ ಸ್ವಾತಂತ್ರ್ಯ ಕಾಲದಿಂದಲೂ ಯತ್ನಿಸುತ್ತಲೇ ಇದೆ. ಹಲವು ಭಾರೀ ನೇರವಾಗಿ ಯುದ್ಧಕ್ಕೆ ಬಂದು ಸೋತು ಶರಣಾಗಿದ್ದ ಪಾಕಿಸ್ತಾನ ಹಿಂಬಾಗಿಲ ಮೂಲಕ ಭಯೋತ್ಪಾದಕರನ್ನ ಗಡಿಯಲ್ಲಿ ನುಗ್ಗಿಸಿ ಅಮಾಯಕರ ರಕ್ತ ಹೀರುತ್ತಿದೆ. ಒಂದೆಡೆ ಭಯೋತ್ಪಾದಕರ ಅಟ್ಟಹಾಸ, ಮತ್ತೊಂದೆಡೆ ಪ್ರತ್ಯೇಕತಾವಾದಿಗಳ ಅಬ್ವರದ ನಡುವೆ ಕಾಶ್ಮೀರದ ಜನ ನಲುಗಿರುವುದಂತೂ ನಿಜ. ಕಳೆದ ವರ್ಷ ನಡೆದ ಜಮ್ಮ ಕಾಶ್ಮೀರ ಚುನಾವಣೆಯನ್ನ ಬಹಿಷ್ಕರಿಸಲು ಪ್ರತ್ಯೇಕತಾವಾದಿ ದೇಶ ದ್ರೂಹಿಗಳು ಕರೆ ನೀಡಿದಾಗ ಜಮ್ಮು ಮತ್ತು ಕಾಶ್ನೀರದ ಜನತೆ ಅದನ್ನ ದಿಕ್ಕರಿಸಿ ಮತದಾನವಾಗಿತ್ತು. ಇದು ಕಾಶ್ಮೀರದ ಜನರಿಗೆ ಬೇಕಿರುವುದು ಶಾಂತಿಯೇ ಹೊರತು ಪಾಕಿಸ್ತಾನದ ಮೇಲಿನ ಪ್ರೀತಿಯಲ್ಲ ಅನ್ನೋದು ಸ್ಪಷ್ಟವಾಗಿತ್ತು. ಕಾಶ್ಮೀರದಲ್ಲಿರುವ ಬಹುತೇಕ ಮುಸ್ಲಿಮರಿಗೆ ತಾವು ಭಾರತೀಯರಾಗಿರಲು ಯಾವುದೇ ಅಭ್ಯಂತರವಿಲ್ಲ. ಆದ್ರೆ ಅಲ್ಲಿರುವ ಕೆಲವು ಪ್ರತ್ಯೇಕತಾವಾದಿಗಳು ಕಾಶ್ಮೀರಿ ಜನತೆಯನ್ನ ತಪ್ಪುದಾರಿಗೆಳೆಯುತ್ತಿದ್ದಾರೆ. ಅದ್ರಲ್ಲಿ ಹುರಿಯತ್ ಕಾನ್ಫರೆನ್ಸ್ ಒಕ್ಕೂಟದ ನಾಯಕರದ್ದೇ ಪ್ರಧಾನ ಪಾತ್ರ. ಸೈಯದ್ ಆಲಿ ಷಾ ಗಿಲಾನಿ, ಮಸರತ್ ಆಲಂ, ಅನು ಅಂದರಾಬಿ ಇವರೆಲ್ಲರಿಗೂ ಪಾಕಿಸ್ತಾನದ ಮೇಲೆ ಅದೇನೋ ವ್ಯಾಮೋಹ. ಪಾಕಿಸ್ತಾನ ಇಂತಹ ಪ್ರತ್ಯೇಕತಾವಾದಿ ಮುಖಂಡರನ್ನ ಹಣ, ಆಮಿಷ ತೋರಿಸಿ ಬಳಸಿಕೊಳ್ಳುತ್ತಿದೆ. ತನ್ನ ದೇಶದ ಆಂತರಿಕ ಪರಿಸ್ಥಿತಿಯನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪರದಾಡುತ್ತಿರುವ ವಿಪಲ ದೇಶ ಪಾಕಿಸ್ತಾನಕ್ಕೆ ಕಾಶ್ಮೀರ ಭಾರತದಿಂದ ಸ್ವಾತಂತ್ರ್ಯ ಪಡೆದು ಪಾಕಿಸ್ತಾನಕ್ಕೆ ಸೇರಬೇಕಂತೆ. ಸ್ವಾಂತಂತ್ರ್ಯ, ಪ್ರಜಾಪ್ರಭುತ್ವದ ಅರ್ಥವೇ ಗೊತ್ತಿಲ್ಲದ ಭಯೋತ್ಪಾದಕ ದೇಶವೊಂದು ಕಾಶ್ಮೀರದ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತದೆ. ಹುರಿಯತ್ ಕಾನ್ಫರೆನ್ಸ್ ನ ಮುಖಂಡ ತಾನು ಭಾರತೀಯನಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡು ಈಗ ನಾಚಿಕೆಯಿಲ್ಲದೆ ಭಾರತದ ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಿದ್ದಾನೆ. ಭಾರತೀಯನಲ್ಲದ ಮೇಲೆ ಈತನಿಗೆ ಭಾರತದ ಪಾಸ್ ಪೋರ್ಟ್ ಆದರೂ ಯಾಕೆ ಬೇಕು ಅನ್ನೋದು ಈಗಿನ ಪ್ರಶ್ನೆ. ಈ ಸೈಯದ್ ಆಲಿ ಷಾ ಗಿಲಾನಿಗೆ ಈ ರೀತಿಯ ವಿವಾದಗಳೇನೂ ಹೊಸದೇನಲ್ಲ. ಪದೇ ಪದೇ ಭಾರತದ ನೆಲದಲ್ಲಿ ನಿಂತು ಶತೃ ರಾಷ್ಟ್ರದ ಪರವಾಗಿ ಮಾತನಾಡುವ ಈತ ಬಿನ್ ಲಾಡೆನ್ ನನ್ನ ಅಮೇರಿಕಾ ಬೇಟೆಯಾಡಿದಾಗ ಆತನನ್ನ ಹುತಾತ್ಮ ಎಂದು ಕರೆದಿದ್ದ. ಇನ್ನು ದೇಶದ ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿದ್ದ ಅಫ್ಜಲ್ ಗುರು ಮಹಾನ್ ದೇಶಪ್ರೇಮಿ ಅಂತ ಗಂಟೆಗಟ್ಟಲೆ ಭಾಷಣ ಭಿಗಿಯುತ್ತಿದ್ದ. ತಿಹಾರ್ ಜೈಲಿನಲ್ಲಿ ಮರಣದಂಡನೆಗೆ ಗುರಿಯಾದ ಅಫ್ಜಲ್ ಗುರು ಮೃತದೇಹವನ್ನ ಆತನ ಕುಟುಂಬಕ್ಕೆ ನೀಡಬೇಕು. ಜೈಲಿನ ಆವರಣದಲ್ಲೇ ಆತನ ಅಂತ್ಯ ಸಂಸ್ಕಾರ ಮಾಡಿರೋದು ಮಾನವ ಹಕ್ಕುಗಳ ಉಲ್ಲಂಘನೆ ಅಂತ ವಾದ ಮಂಡಿಸಿದ್ದ. ಪ್ರಜಾಪ್ರಭುತ್ವದ ದೇಗುಲಕ್ಕೆ ನುಗ್ಗಿ ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿದವನಿಗೆ ಮಾನವೀಯತೆಯ ಲವಲೇಷವೂ ಇರಲಿಲ್ಲ. ಆದ್ರೆ ಈ ಗಿಲಾನಿ ಮಾತ್ರ ಮಾನವಹಕ್ಕುಹಳ ಬಗ್ಗೆ ಬನಾಷಣ ಭಿಗಿಯುತ್ತಾನೆ. ಇನ್ನು ಮುಂಬೈ ದಾಳಿಯ ಸಂಚುಕೋರ ಹಫೀಸ್ ಸೈಯದ್ ಪರವಾಗಿ ಬಹಿರಂಗವಾಗಿಯೇ ಮಾತನಾಡುತ್ತಾನೆ. ಅಂತರಾಷ್ಟ್ರೀಯ ಒತ್ತಡದ ಹಿನ್ನೆಲೆಯಲ್ಲಿ ಪಾಕಿಸ್ತಾನ ಹಫೀಸ್ ಸೈಯದ್ ನ ಜಮಾತ್ ಉದ್ ದಾವಾ ಸಂಘಟನೆಯನ್ನ ನಿಷೇಧಿಸುವ ನಿರ್ಧಾರ ಪ್ರಕಟಿಸಿತ್ತು. ಆಗ ಈ ಗಿಲಾನಿ ಹೇಳಿದ್ದೇನು ಗೊತ್ತಾ..? ಜಮಾತ್ ಉದ್ ದಾವಾ ಸಮಾಜಸೇವೆ ಮಾಡುತ್ತಿರುವ ಸಂಘಟನೆ, ಅದನ್ನ ನಿಷೇಧ ಮಾಡಿದ್ದು ತಪ್ಪು ನಿರ್ಧಾರ ಅಂತ. ಲಷ್ಕರ್ ಎ ತೋಯಿಬಾದ ಮತ್ತೊಂದು ಮುಖ ಈ ಜಮಾತ್ ಉದ್ ದವ ಸಂಘಟನೆ. ಈ ಸತ್ಯ ಜಗತ್ತಿಗೇ ಗೊತ್ತಿದ್ದರೂ ಅದು ಗಿಲಾನಿಗೆ ಮಾತ್ರ ಗೊತ್ತಿಲ್ಲವೇನೋ. ಗೊತ್ತಿಲ್ಲದಂತೇನು ಇಲ್ಲ, ಈತ ಭಾರತದ ನೆಲದಲ್ಲಿರುವ ಮತ್ತೋಬ್ಬ ಹಪೀಸ್ ಸೈಯದ್ ಅಷ್ಟೇ. ಈ ಸೈಯದ್ ಆಲಿ ಷಾ ಗಿಲಾನಿ ಮೂರು ಬಾರಿ ಜಮ್ಮು ಮತ್ತು ಕಾಶ್ಮೀರದ ಶಾಸಕನಾಗಿಯೂ ಆಯ್ಕೆಯಾಗಿದ್ದ. ಈಗ ಅಲ್ಲಿನ ಜನರನ್ನ ತಪ್ಪುದಾರಿಗೆಳೆದು ಪಾಕ್ ಪ್ರಾಯೋಜಿತ ಹೋರಾಟಗಳಿಗೆ ಜನರನ್ನ ಹುರಿದುಂಬಿಸುತ್ತಿದ್ದಾನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ- ಬಿಜೆಪಿ ಮೈತ್ರಿ ಸರ್ಕಾರ ಬಂದ ಮೇಲಂತೂ ಪಾಕ್ ಪರವಾದ ಹೋರಾಟಗಳು ಹೆಚ್ಚು ಹೆಚ್ಚು ನಡೆಯುವಂತೆ ನೋಡಿಕೊಳ್ಳುತ್ತಿದ್ದಾನೆ. ಆ ಮೂಲಕ ಕಾಶ್ಮೀರದಲ್ಲಿ ಅಸ್ಥಿರತೆ ಮೂಡಿಸುವ ಪಾಕಿಸ್ತಾನದ ಪ್ರಯತ್ನಕ್ಕೆ ಸಹಕಾರ ನೀಡುತ್ತಿದ್ದಾನೆ. ಪೀಪಲ್ ಡೆಮಾಕ್ರೆಟಿಕ್ ಪಾರ್ಟಿ ಈ ಪ್ರತ್ಯೇಕತಾವಾದಿಗಳ ಬಗ್ಗೆ ತಳೆದಿರುವ ಮೃದು ದೋರಣೆ ಪ್ರತ್ಯೇಕವಾದಿಗಳಿಗೆ ಅಲ್ಪಮಟ್ಟಿಗೆ ಬಲತಂದಿರುವುದು ಮಾತ್ರ ಸುಳ್ಳಲ್ಲ. ಸ್ವಾತಂತ್ರ್ಯಾ ನಂತರ ಬಹುಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಗೆ ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಾಗಲೇ ಇಲ್ಲ. ಅದು ಕಾಂಗ್ರೆಸ್ ಗೆ ಬೇಕಾಗಿಯೂ ಇರಲಿಲ್ಲ ಅನ್ನೋದು ಬೇರೆ ಮಾತು. ಇನ್ನು ದೇಶವನ್ನಾಳಿದ ಜನತಾ ಪರಿವಾರ, ಮತ್ತು ಅಟಲ್ ಸರ್ಕಾರಗಳೂ ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವ ಕೆಲ ಪ್ರಯತ್ನಗಳನ್ನ ಮಾಡಿದವಾದರೂ ಅವು ಯಶಸ್ವಿಯಾಗಲಿಲ್ಲ. ಬಹುಮತದ ಆಧಾರದ ಮೇಲೆ ಹೇಳುವುದಾದರೆ ಈಗ ಕೇಂದ್ರದಲ್ಲಿರೋದು ಬಲಿಷ್ಠ ಸರ್ಕಾರ. ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಒಂದು ದಿಟ್ಟ ನಿರ್ಧಾರ ತೆಗೆದುಕೊಂಡು ಪ್ರತ್ಯೇಕತಾವಾದಿಗಳ ಮನವೊಲಿಸಬೇಕಿದೆ. ಇನ್ನೂ ಕಟ್ಟಾ ಪಾಕಿಸ್ತಾನದ ಏಜೆಂಟ್ ಗಳಾದ ಸೈಯದ್ ಆಲಿ ಷಾ ಗಿಲಾನಿ ಮತ್ತು ಮಸರತ್ ಆಲಂ ಅಂತಹ ದ್ರೋಹಿಗಳಿಗೆ ತಕ್ಕ ಪಾಠ ಕಲಿಸಬೇಕಿದೆ. ಅಂತಹ ಒಂದು ಅವಕಾಶ ಮೋದಿ ಸರ್ಕಾರದ ಮುಂದಿದೆ. ಮೊದಲು ಗಿಲಾನಿಗೆ ಪಾಸ್ ಪೋರ್ಟ್ ನಿರಾಕರಿಸುವ ದಿಟ್ಟ ನಿರ್ಧಾರ ಕೈಗೊಳ್ಳುವುದು. ಆ ಮೂಲಕ ಕಟ್ಟಾ ಪ್ರತ್ಯೇಕವಾದಿಗಳಿಗೆ ಕಾನೂನಿನ ಅಡಿಯಲ್ಲಿ ದೇಶದ ವಿರುದ್ಧ ಯುದ್ಧ ಮಾಡಿದ ಆರೋಪ ಹೊರಿಸಿ ಸೆರೆಮನೆಗೆ ತಳ್ಳಬೇಕು. ಆ ನಂತರ ಕಾಶ್ಮೀರದ ಜನರ ಮನವೊಲಿಸಿ ಅವರನ್ನ ದೇಶದ ಅಭಿವೃದ್ಧಿಗೆ ಬಳಸಿಕೊಂಡು ಒಟ್ಟಿಗೆ ಮುನ್ನಡೆಯುವುದು. ಇದನ್ನ ಮೋದಿ ಸರ್ಕಾರ ಮಾಡಿದ್ದೇ ಆದರೆ ಈ ದೇಶದ ಜನರು ಈ ಸರ್ಕಾರವನ್ನ ಎಂದಿಗೂ ಮರೆಯುವುದಿಲ್ಲ. ಅಂತಹ ದಿಟ್ಟತನವನ್ನ ಅಚ್ಚೇ ದಿನ್ ಸರ್ಕಾರ ಪ್ರದರ್ಶಿಸುವ ಅಗತ್ಯತೆ ಇದೆ. ಹಾಗೊಂದು ವೇಳೆ ಇದು ಸಾಧ್ಯವಾಗಿದ್ದೇ ಆದರೆ ಅದು ಇತಿಹಾಸ ಸೃಷ್ಟಿ ಗೆ ಕಾರಣವಾಗಿತ್ತದೆ. ಇಲ್ಲವಾದರೆ ದೇಶವನ್ನಾಳಿದ ಕಾಂಗ್ರೆಸ್ ಗಿಂತ ಬಿಜೆಪಿ ಭಿನ್ನವಲ್ಲ ಅನ್ನೋದು ಸಾಭೀತಾಗುತ್ತದೆ…
-ಶಶಿವರ್ಣಂ

-ಶಶಿವರ್ಣಂ

ಭಾರತ ತನ್ನ ದೇಶವಲ್ಲ ಅಂದವನಿಗೆ ಈ ದೇಶದ ಪಾಸ್ ಪೋರ್ಟ್ ಯಾಕೆ ಬೇಕು..?

image

ಆತ ತನ್ನ ಜೀವನದುದ್ದಕ್ಕೂ ತಾನು ಭಾರತೀಯ ಎಂದು ಹೇಳಿಕೊಳ್ಳದ ಮನುಷ್ಯ, ದೇಶಕ್ಕೆ ನಿಷ್ಠೆ ತೋರದ ಮನುಷ್ಯ, ಕಾಶ್ಮೀರದಲ್ಲಿ ದೇಶದ್ರೋಹಿ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವ ವ್ಯಕ್ತಿ, ಕಾಶ್ಮೀರಿ ನಿರುದ್ಯೋಗಿ ಯುವಕರಿಗೆ ಆಮಿಷ ತೋರಿಸಿ ಪಾಕ್ ಪರವಾಗಿ ಹೋರಾಟ ನಡೆಸುವಂತೆ ಪ್ರೇರೇಪಿಸುತ್ತಿರುವ ಪ್ರತ್ಯೇಕತಾವಾದಿ. ತಾನು ಭಾರತೀಯನಲ್ಲ ಎಂದು ಜಗತ್ತಿಗೆ ಕೇಳುವಂತೆ ಬಹಿರಂಗವಾಗಿ ಹೇಳಿದವನು. ಆತನೇ ಸೈಯದ್ ಆಲಿ ಷಾ ಗಿಲಾನಿ. ಇವತ್ತು ಈ ದೇಶದ ಪಾಸ್ ಪೋರ್ಟ್ ಗಾಗಿ ಗಿಲಾನಿ ಅರ್ಜಿ ಸಲ್ಲಿಸಿದ್ದಾನೆ. ಎಲ್ಲ ಭಾರತೀಯರೂ ತಾನೊಬ್ಬ ಭಾರತೀಯ ಅಂತ ಹೇಳಿಕೊಳ್ಳೋಕೆ ಹೆಮ್ಮೆ ಪಡುತ್ತಾರೆ. ಆದ್ರೆ ಈ ದೇಶದ್ರೋಹಿ ಮಾತ್ರ ತಾನು ಭಾರತೀಯನಲ್ಲ ಅಂತ ಬಹಿರಂಗವಾಗಿ ಹೇಳಿಕೊಂಡು ಓಡಾಡುತ್ತಾನೆ. ಈ ಗಿಲಾನಿ ಎಂಬ ಪಾಕ್ ಏಜೆಂಟ್ ಇವತ್ತು ಇಂಡಿಯನ್ ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಿದ್ದಾನೆ. ಈ ದೇಶದ ಪಾಸ್ ಪೋರ್ಟ್ ಅನ್ನ ಭಾರತೀಯ ವ್ಯಕ್ತಿ ಮಾತ್ರ ಪಡೆಯಲು ಸಾಧ್ಯ. ಗಿಲಾನಿ ಭಾರತೀಯನಲ್ಲದ ಮೇಲೆ ಆತನಿಗೆ ಈ ನೆಲದ ಪಾಸ್ ಫೊರ್ಟ್ ಆದ್ರೂ ಯಾಕೆ ಬೇಕು. ಈ ಹಿಂದೆಯೂ ಕೂಡ ಈತ ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಿದ್ದ. ಮೂರು ಬಾರಿ ಪಾಸ್ ಪೋರ್ಟ್ ನೀಡಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ 2013 ರಲ್ಲಿ ಪಾಸ್ ಪೋರ್ಟ್ ತಿರಸ್ಕರಿಸಿತ್ತು. ಆದ್ರೆ ಈ ಬಾರಿ ಆತನಿಗೆ ಮಾನವೀಯ ನೆಲೆಯ ಆಧಾರದ ಮೇಲೆ ಪಾಸ್ ಪೋರ್ಟ್ ನೀಡಬೇಕು ಅನ್ನೋ ಹೇಳಿಕೆಗಳು ವಿವಾದ ಸೃಷ್ಟಿಸಿದೆ. ಜಮ್ಮು ಕಾಶ್ಮೀರದಲ್ಲಿ ಬಿಜೆಪಿಯೊಂದಿಗೆ ಅಧಿಕಾರ ಹಿಡಿದಿರುವ ಪಿಡಿಪಿ ಪ್ರತ್ಯೇಕವಾದಿಗಳ ಬಗ್ಗೆ ಮೃದು ದೋರಣೆ ತಳೆದಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಜಮ್ಮು ಕಾಶ್ಮೀರದಲ್ಲಿ ಅಧಿಕಾರ ಹಿಡಿಯಲೇಬೇಕು ಎಂಬ ಉದ್ದೇಶದಿಂದ ಪಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆದ್ರೆ ಈ ಮೈತ್ರಿ ಕಾಶ್ಮೀರದಲ್ಲಿ ನಡೆಯುತ್ತಿರುವ ದೇಶ ವಿರೋಧಿಗಳಿಗೆ ಬಲತಂದಿರುವುದಂತೂ ನಿಜ. ಇದಕ್ಕಡ ಉತ್ತಮ ಉದಾಹರಣೆ ಬಿಜೆಪಿ-ಪಿಡಿಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ಕೂಡಲೇ ಪ್ರತ್ಯೇಕವಾದಿ ದ್ರೋಹಿ ಮಸರತ್ ಆಲಂ ನನ್ನ ಸೆರೆವಾಸದಿಂದ ಬಿಡುಗಡೆ ಮಾಡಿದ್ದು. ಬಿಜೆಪಿಯ ವಿರೋಧದ ನಡುವೆಯೂ ಮಸರತ್ ಆಲಂನನ್ನ ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿತ್ತು ಪಿಡಿಪಿ. ಆತ ಜೈಲಿನಿಂದ ಹೊರಬಂದ ಕೂಡಲೇ ಕಾಶ್ಮೀರದಲ್ಲಿ ಮತ್ತೆ ದೇಶದ್ರೋಹಿ ಚಟುವಟಿಕೆಗಳು ಆರಂಭವಾಗಿದ್ದವು. ಕಾಶ್ಮೀರದ ಹಲವೆಡೆ ಗಿಲಾನಿಯೊಂದಿಗೆ ಬೀದಿಗಿಳಿದು ಪಾಕಿಸ್ತಾನಿ ದ್ವಜವನ್ನ ಬಹಿರಂಗವಾಗಿಯೇ ಹಾರಿಸಲಾಗಿತ್ತು. ಮತ್ತೆ ಕಾಶ್ಮೀರದಲ್ಲಿ ಬಿಕ್ಕಟ್ಟು ಸೃಷ್ಟಿಸಲು ಮುಂದಾಗಿದ್ದರು. ಇದಾದ ನಂತ್ರ ದೇಶಾಧ್ಯಂತ ವ್ಯಕ್ತವಾದ ತೀವ್ರ ವಿರೋಧದಿಂದ ಮಸರತ್ ಆಲಂನನ್ನ ಮತ್ತೆ ಬಂಧಿಸಲಾಗಿದೆ. ಇದರ ಜೊತೆ ಗಿಲಾನಿಯನ್ನೂ ಗೃಹಬಂಧನದಲ್ಲಿಡಲಾಗಿದೆ. ಈಗ ಗಿಲಾನಿ ಸೌದಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ನ ಮಗಳನ್ನ ನೋಡುವ ಉದ್ದೇಶದಿಂದ ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಿದ್ದಾನೆ. ಗಿಲಾನಿಗೆ ಮಾನವೀಯ ನೆಲೆಯ ಆಧಾರದ ಮೇಲೆ ಪಾಸ್ ಪೋರ್ಟ್ ನೀಡಬೇಕು ಅನ್ನೋದು ಪಿಡಿಪಿಯ ವಾದ. ಆದ್ರೆ ಆತನಿಗೆ ಪಾಸ್ ಪೋರ್ಟ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಇನ್ನೂ ಅಧಿಕೃತವಾಗಿ ಯಾವುದೇ ನಿಲುವು ಪ್ರಕಟಿಸಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಮೌನ ಮುಂದುವರೆಸಿದೆ. ತನ್ನ ದೇಶಕ್ಕೆ ನಿಷ್ಠೆ ತೋರದ ಮನುಷ್ಯನಿಗೆ ಮಾನವೀಯತೆಯ ನೆಲೆಯಲ್ಲಿ ಪಾಸ್ ಪೋರ್ಟ್ ನೀಡಬೇಕಾ ಅನ್ನೋದು ಈಗ ಎದ್ದಿರುವ ಪ್ರಶ್ನೆ. ಗಿಲಾನಿ ಭಾರತೀಯನಲ್ಲದ ಮೇಲೆ ಆತನಿಗೆ ಭಾರತದ ಪಾಸ್ ಪೋರ್ಟ್ ಆದರೂ ಯಾಕೆ ಬೇಕು. ಪಾಸ್ ಪೋರ್ಟ್ ನೀಡುವುದು ರಾಷ್ಟ್ರೀಯತೆಯ ಆಧಾರದ ಮೇಲೆ ಹೊರತು ಮಾನವೀಯತೆಯ ಆಧಾರದ ಮೇಲಲ್ಲ.  ಗಿಲಾನಿಗೆ ಪಾಸ್ ಪೋರ್ಟ್ ನಿರಾಕರಿಸುವ ದಿಟ್ಟತನವನ್ನ ಮೋದಿ ಸರ್ಕಾರ ಪ್ರದರ್ಶಿಸಬೇಕಿದೆ. ಈ ಮೂಲಕ ಕಾಶ್ಮೀರದಲ್ಲಿ ಬಿಕ್ಕಟ್ಟು ಸೃಷ್ಟಿಸಲು ಮುಂದಾಗುತ್ತಿರುವ ಈ ಪ್ರತ್ಯೇಕವಾದಿಗಳಿಗೆ ಒಂದು ಸ್ಪಷ್ಟ ಸಂದೇಶ ನೀಡಬೇಕಿದೆ. ಇಂತದ್ದೊಂದು ದಿಟ್ಟ ನಿರ್ಧಾರ ಕೈಗೊಳ್ಳುವ ದೈರ್ಯ ತೋರಿಸಿದರೆ ಅಚ್ಚೇ ದಿನ್ ಸರ್ಕಾರ್ ಘೋಷಣೆಗೊಂದು ಅರ್ಥ ಬರುತ್ತದೆ ಮತ್ತು ಕಾಂಗ್ರೆಸ್ ಗಿಂತ ಇದು ಭಿನ್ನ ಸರ್ಕಾರ ಎಂದು ತೋರಿಸಿದಂತಾಗುತ್ತದೆ. ಒಂದು ವೇಳೆ ರಾಜಕೀಯ ಕಾರಣಗಳಿಗಾಗಿ ಗಿಲಾನಿಗೆ ಪಾಸ್ ಪೋರ್ಟ್ ನೀಡಿದ್ದೇ ಆದರೆ ಅದು ಈ ದೇಶದ ಜನರಿಗೆ ಮಾಡಿದ ಅವಮಾನ….

-ಶಶಿವರ್ಣಂ

ಚೆಂದದ ಬದುಕು ಕಟ್ಟಿಕೊಳ್ಳೋಕೆ ಇದ್ದ ಯಾವ ದಾರಿಗಳೂ ಆತನಿಗೆ ಬೇಕಿರಲಿಲ್ಲ….

image

ಶರತ್ ಇನ್ನಿಲ್ಲ...

ಚೆಂದದ ಬದುಕು ಕಟ್ಟಿಕೊಳ್ಳಬೇಕಾದ ಸಮಯದಲ್ಲಿ ಬದುಕಿಗೆ ಬೆನ್ನು ತೋರಿಸಿ ಇದ್ದಕ್ಕಿದ್ದಂತೆ ಎದ್ದು ಹೋದವರು ಶರತ್ ಎಂ.ಡಿ. ಸಮಯದಲ್ಲಿ ನಾನು ಕೆಲಸ ಮಾಡುವಾಗ ನನ್ನ ಕೊಲೀಗ್ ಆಗಿದ್ದರು. ಕಿರಿಯರಿಗೆ ಹೇಳಿಕೊಡುವ ಉತ್ಸಾಹ, ಹಿರಿಯರಿಂದ ಕಲಿಯುವ ಸೌಜನ್ಯ ಎಲ್ಲವೂ ಇತ್ತು. ಒಬ್ಬ ಯಶಸ್ವೀ ಪತ್ರಕರ್ತನಾಗುವ ಎಲ್ಲ ಸಾಮರ್ಥ್ಯವೂ ಅವರಲ್ಲಿತ್ತು… ಎಲ್ಲವನ್ನೂ ತಮ್ಮ ಕೈಯಿಂದ ತಾವೇ ಹಾಳು ಮಾಡಿಕೊಂಡರು. ಅದ್ಬುತವಾದ ಪ್ರತಿಭೆಯಿತ್ತು, ಯಾವುದೇ ವಿಷಯವನ್ನಾಗಲೀ ಕ್ಷಣಮಾತ್ರದಲ್ಲಿ ಅರ್ಥಮಾಡಿಕೊಳ್ಳುವ, ಚರ್ಚಿಸುವ ತಾಕತ್ತಿತ್ತು… ಒಬ್ಬ ದಿಟ್ಟ ಪತ್ರಕರ್ತನಿಗಿರಬೇಕಾದ ಎಲ್ಲ ಲಕ್ಷಣಗಳೂ ಶರತ್ ರಲ್ಲಿತ್ತು… ಆದ್ರೆ ಕೆಟ್ಟ ಚಟಗಳೇ ಬದುಕಿನುದ್ದಕ್ಕೂ ಜೊತೆಯಾದರೇ ಬದುಕು ದುರ್ಬರವಾಗಲಿಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ. ಶರತ್ ವಿಷಯದಲ್ಲಿ ಆಗಿದ್ದೂ ಅದೇ.  ಅನಾರೋಗ್ಯದಿಂದ ಆಸ್ಪತ್ರೆಗೆ ಹೋಗಲೂ ಅವರ ಬಳಿ ಹಣವಿಲ್ಲದಂತಾಗಿದ್ದು , ಹಣಕ್ಕಾಗಿ ಗೆಳೆಯರೆದುರು ಗೋಗರೆದರೂ ಅವರು ನಂಬದಂತಾಗಿದ್ದು ತೆರೆಯ ಹಿಂದಿನ ಕಹಿ ಸತ್ಯ… ಅರಗಿಸಿಕೊಳ್ಳಲೂ ಆಗದಂತೆ ಬಾರದ ಲೋಕಕ್ಕೆ ಸರಿದುಹೋದ ಶರತ್ ಇನ್ನು ನೆನಪು ಮಾತ್ರ….

ಅರುಣಾ ಶಾನ್ ಭಾಗ್ : ತನ್ನದಲ್ಲದ ತಪ್ಪಿಗೆ ಆಕೆ ಅನುಭವಿಸಿದ್ದು 42 ವರ್ಷ ಶಿಕ್ಷೆ…!!!

image

ನತದೃಷ್ಟೆ ಅರುಣಾ...

ಒಂದು ನಾಯಿಗೆ ಹಾಕುವ ಚೈನ್, ಒಬ್ಬ ಮೃಗೀಯ ಮನುಷ್ಯ ಮತ್ತು ಆತನ ಕಾಮತೃಷೆ ಆಕೆಯನ್ನ 42 ವರ್ಷಗಳ ಕಾಲ ಜಗತ್ತಿನ ಪರಿವೇ ಇಲ್ಲದಂತೆ ನರಳುವಂತೆ ಮಾಡಿಬಿಟ್ಟಿತ್ತು. ಆಸ್ಪತ್ರೆಯಲ್ಲಿ ಮಗು ಹುಟ್ಟಿದರೆ ಎಲ್ಲರೂ ಸಂಭ್ರಮಿಸುತ್ತಾರೆ, ಆದ್ರೆ ಇವತ್ತು ಆಕೆಯ ಪ್ರಾಣ ಹೋದ ನಂತರ ಆ ಆಸ್ಪತ್ರೆಯಲ್ಲಿ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆಕೆ ಅರುಣಾ ಶಾನ್ ಭಾಗ್. 42 ವರ್ಷಗಳಿಂದ ಮುಂಬೈನ ಕಿಂಗ್ ಎಡ್ವರ್ಡ್‌ ಮೆಮೋರಿಯಲ್ ಆಸ್ಪತ್ರೆಯಲ್ಲಿ ಬದುಕಿದ್ದೂ ಸತ್ತಂತೆ ಜೀವಚ್ಚವವಾಗಿ ಹಾಸಿಗೆ ಹಿಡಿದಿದ್ದ ಅರುಣಾ ಇಂದು ಕೊನೆಗೂ ಸಾವಿನ ಮನೆ ಮುಟ್ಟಿದ್ದಾರೆ. ಉತ್ತರ ಕನ್ನಡದ ಹೊನ್ನಾವರದವರಾದ ಅರುಣಾ ಶಾನ್ ಬಾಗ್ 49 ವರ್ಷಗಳ ಹಿಂದೆ ಕನಸುಗಳ ಮೂಟೆ ಹೊತ್ತು ಮುಂಬೈ ಸೇರಿಕೊಂಡಿದ್ದಳು. ಮುಂಬೈನಲ್ಲೇ ನರ್ಸಿಂಗ್ ಮುಗಿಸಿದ ಅರುಣಾ ಅಲ್ಲಿನ ಕೆಇಎಮ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ಆದ್ರೆ ಅದೇ ಆಸ್ಪತ್ರೆಯ ವಾರ್ಡ್ ನಂಬರ್ 4 ಮುಂದಿನ 42 ವರ್ಷಗಳ ಕಾಲ ತನ್ನ ಮನೆಯಾಗುತ್ತೆ ಅಂತ ಆಕೆ ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಅದು  1973 ನೇ ಇಸವಿಯ ನವೆಂಬರ್ 27. ಆಸ್ಪತ್ರೆಯಲ್ಲಿ ಅಂದಿನ ತನ್ನ ಕೆಲಸ ಮುಗಿಸಿ ಮನೆಗೆ ಹೊರಡುತ್ತಿದ್ದವಳ ಮೇಲೆ ಮೃಗೀಯ ರೀತಿಯಲ್ಲಿ ಅಟ್ಟಹಾಸ ಮೆರೆದಿದ್ದ ಅದೇ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಸೋಹನ್ ಲಾಲ್. ಆಸ್ಪತ್ರೆಯಲ್ಲಿ ಒಂಟಿಯಾಗಿ ಸಿಕ್ಕವಳನ್ನ ನಾಯಿಗೆ ಹಾಕುವ ಚೈನ್ ನಿಂದ ಕುತ್ತಿಗೆಗೆ ಬಿಗಿದು ನಿರ್ಧಯವಾಗಿ ಅತ್ಯಾಚಾರವೆಸಗಿದ್ದ. ಚೈನ್ ಬಿಗಿದಿದ್ದ ತೀವ್ರತೆ ಎಷ್ಟಿತ್ತೆಂದರೆ ಆಕೆಯ ಮೆದುಳು ಅಕ್ಷರಶಃ ನಿಷ್ಕ್ರಿಯಗೊಂಡಿತ್ತು. ಆ ಹೀನ ಘಟನೆ ನಡೆದು ಹತ್ತು ಗಂಟೆಗಳವರೆಗೂ ಬದುಕಿನೊಂದಿಗೆ ಹೋರಾಟ ಮಾಡುತ್ತಲೇ ನರಳುತ್ತಿದ್ದರು ಅರುಣಾ ಶಾನ್ ಭಾಗ್. ಆ ನರಳಾಟ ಮುಂದಿನ 42 ವರ್ಷಗಳವರೆಗೂ ಮುಂದುವರೆದಿದ್ದು ಮಾತ್ರ ಘೋರ. ದೇಹದಲ್ಲಿ ಜೀವವಿರುವ ಪರಿಯೇ ಇಲ್ಲದೇ ಆಕೆ ಕೆಇಎಮ್ ಆಸ್ಪತ್ರೆಯಲ್ಲಿ 42 ವರ್ಷ ಜೀವಂತ ಶವವಾಗಿದ್ದರು ಅರುಣಾ. ಘಟನೆ ನಡೆದ ಆರಂಭದಲ್ಲಿ ಆಕೆಯೊಂದಿಗಿದ್ದ ಕುಟುಂಬದವರು ಕೆಲದಿನಗಳಲ್ಲೇ ಕಣ್ಮರೆಯಾಗಿದ್ದರು. ಅವತ್ತಿನ ಹೀನ ಕೃತ್ಯದ ನಂತರ ಆಕೆಯ ಮಿದುಳು ನಿಷ್ಕ್ರಿಯಗೊಂಡು ಕೋಮಾಗೆ ಜಾರಿದ್ದ ಅರುಣಾಳನ್ನ ಅಕ್ಷರಶಃ ಮಗುವಿನಂತೆ ನಾಲ್ಕು ದಶಕಗಳ ಕಾಲ ಪೊರೆದವರು ಕೆಇಎಮ್ ಆಸ್ಪತ್ರೆಯ ಸಿಬ್ಬಂದಿಗಳು. ಆಕೆಯನ್ನ ಬಸುಕಿಸಲು ಆಸ್ಪತ್ರೆಯ ವೈದ್ಯರು ಮತ್ತು ದಾದಿಯರು ಮಾಡಿದ್ದ ಪ್ರಯತ್ನ ಯಶಸ್ವಿಯಾಗಲೇ ಇಲ್ಲ. ತನ್ನ ಸುತ್ತ ಏನು ನಡೆಯುತ್ತಿದೆ ಎಂಬುದರ ಅರಿವೇ ಇಲ್ಲದೇ ಆಕೆ ನಲವತ್ತೆರೆಡು ವರ್ಷ ಬದುಕಲೂ ಆಗದೇ, ಸಾಯಲೂ ಆಗದೇ ಜೀವಂತ ಶವದಂತೆ ಒಡಲಲ್ಲಿ ಉಸಿರಿಟ್ಟುಕೊಂಡಿದ್ದಳು. ಅರುಣಾ ಶಾನ್ ಬಾಗ್ ರನ್ನ ಆಸ್ಪತ್ರೆಯ ದಾದಿಯರು ಮತ್ತು ವೈದ್ಯರು ನಿರಂತರ ನಾಲ್ಕು ದಶಕಗಳ ಕಾಲ ಪ್ರತೀ ಕ್ಷಣವೂ ಮಗುವಿನಂತೆ ಸಲುಹಿದರು. ಕೆಲವೊಮ್ಮೆ ಮಗುವಿನಂತೆಯೇ ಇರುತ್ತಿದ್ದ ಅರುಣಾ ಇದ್ದಕ್ಕಿದ್ದಂತೆ ಭಯಂಕರವಾಗಿ ಕಿರುಚಿಕೊಂಡುಬಿಡುತ್ತಿದ್ದರು. ಆಗಾಗ ನೋವಿನಿಂದ ಚೀರುತಿದ್ದರು. ಆಕೆಯ ಮುಟ್ಟಿನ ದಿನಗಳಲ್ಲಂತೂ ಆಕೆ ಸಹಿಸಲಸಾಧ್ಯ ನೋವಿನಿಂದ ನರಳಾಡುತ್ತಿದ್ದರು, ಕಿರುಚಾಡುತ್ತಿದ್ದರು. ಆಕೆಯ ಬಾಯಿ ಸ್ವಚ್ಚಗೊಳಿಸುವಾಗ, ಊಟ ತಿನ್ನಿಸುವಾಗ ದಾದಿಯರ ಬೆರಳು ಕಚ್ಚಿಬಿಡುತ್ತಿದ್ದರು ಅರುಣಾ. ಆಕೆಗೆ ತಾನೇನು ಮಾಡುತ್ತಿದ್ದೇನೆ ಎಂಬುದರ ಅರಿವೇ ಇರುತ್ತಿರಲಿಲ್ಲ. ಆಕೆಯ ಕಿರುಚಾಟ ಆಸ್ಪತ್ರೆಯ ಇತರ ರೋಗಿಗಳಿಗೆ ಕಿರಿಕಿರಿಯಾಗುತ್ತಿದ್ದದ್ದೂ ಹೌದು. ಈ ಸಮಯದಲ್ಲಿ ಆಕೆಯನ್ನ ಸಮಾಧಾನ ಪಡಿಸುವುದು ಅಲ್ಲಿನ ಸಿಬ್ವಂದಿಗಳ ಪಾಲಿಗೆ ಅದೆಷ್ಟು ಕಷ್ಟವಾದರೂ ಇಷ್ಪಪಟ್ಟು ಆಕೆಯನ್ನ ಮಗುವಿನ ರೀತಿ ಸಲುಹಿದ್ದು ಆಸ್ಪತ್ರೆಯ ಸಿಬ್ಬಂದಿಗಳ ಮಾನವೀಯತೆಗಿಡಿದ ಕನ್ನಡಿ. ಈ ನತದೃಷ್ಟೆಯ ಮೇಲೆ ಅಮಾನುಷವಾಗಿ ಅತ್ಯಾಚಾರ ಮಾಡಿದವನ ಮೇಲೆ ನಮ್ಮ ನೆಲದ ಕಾನೂನು ಹಾಕಿದ್ದು ಕೊಲೆ ಯತ್ನ ಮತ್ತು ರಾಬರಿ ಕೇಸ್ ಮಾತ್ರ. ಅದ್ಯಾಕೋ ಕಾನೂನಿನ ಕಣ್ಣಿಗೆ ಆಕೆಯ ಮೇಲೆ ನಡೆದ ಅತ್ಯಾಚಾರ ಕಾಣಲೇ ಇಲ್ಲವೇನೋ. ಅರುಣಾಳ ಮೇಲೆ ಅತ್ಯಾಚಾರವೆಸಗಿದವನು ಏಳು ವರ್ಷ ಜೈಲು ಶಿಕ್ಷೆ ಮುಗಿಸಿ ಹೊರಬಂದಿದ್ದ. ಆದ್ರೆ ಈಕೆ ತನ್ನದಲ್ಲದ ತಪ್ಪಿಗೆ ಅನುಭವಿಸಿದ್ದು ಮಾತ್ರ 42 ವರ್ಷದ ಶಿಕ್ಷೆ. ಈಕೆ ಇಂತ ದುರ್ಭರ ಸ್ಥಿತಿಗೆ ಬರಲು ಕಾರಣವಾದವನಿಗೆ ನ್ಯಾಯಾಲಯ ಏಳು ವರ್ಷಗಳ ಶಿಕ್ಷೆ ನೀಡಿತ್ತು. ಆದ್ರೆ ಅದೇ ನ್ಯಾಯಾಲಯ ಆಕೆ ನೆಮ್ಮದಿಯಿಂದ ಸಾಯಲು ಅನುಮತಿ ನೀಡಲಿಲ್ಲ. ಅರುಣಾ ಜೀವನದ ಹೀನ ಘಟನೆಯನ್ನ ಪುಸ್ತಕರೂಪದಲ್ಲಿ ಹಿಡಿದಿಟ್ಟ ಪತ್ರಕರ್ತೆ ಪಿಂಕಿ ವಿರಾನಿ ಅರುಣಾಗೆ ದಯಾಮರಣಕ್ಕೆ ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಸುಪ್ರೀಂ ಕೋರ್ಟ್ ಆಕೆಗೆ ಬಲಬಂತವಾಗಿ ನೀಡಲಾಗುತ್ತಿದ್ದ ಆಹಾರವನ್ನ ನಿಲ್ಲಿಸದಂತೆ ನಿರ್ದೇಶನ ನೀಡಿ ದಯಾಮರಣಕ್ಕೆ ಅನುಮತಿ ನೀಡಲಿಲ್ಲ. ಈ ಬಗ್ಗೆ ಅದೆಷ್ಟು ಪ್ರತಿಭಟನೆಗಳು ನಡೆದರೂ ಯಾವುದೇ ಪ್ರಯೋಜನವಾಗಲಿಲ್ಲ. ಇಂತದ್ದೊಂದು ನಿರ್ಧಯ ಅತ್ಯಾಚಾರಕ್ಕೊಳಗಾಗಿ 42 ವರ್ಷ ತನ್ನ ಸಾವಿಗಾಗಿ ಹೋರಾಟ ನಡೆಸಿದ ಅರುಣಾ ಶಾನ್ ಭಾಗ್ ಇನ್ನು ನೆನಪು ಮಾತ್ರ….

ಆಘಾತಕಾರಿಯಾದರೂ ಸತ್ಯ… ಭಾರತಕ್ಕಿರುವ ಯುದ್ಧ ಸಾಮರ್ಥ್ಯ ಕೇವಲ 20 ದಿನ ಮಾತ್ರ…!!!

image

ಜಗತ್ತಿನ ನಾಲ್ಕನೇ ದೊಡ್ಡ ರಕ್ಷಣಾ ಪಡೆ ಹೊಂದಿರುವ ಭಾರತ ಈಗ ಹೆಮ್ಮೆ ಪಡುವ ಸ್ಥಿತಿಯಲ್ಲಿಲ್ಲ. ಯಾಕಂದ್ರೆ ನಮ್ಮ ದೇಶದ ಯುದ್ಧ ಸಾಮರ್ಥ್ಯ ಕೇವಲ 20 ದಿನಗಳಷ್ಟೇ ಇದೆ ಮತ್ತು ಅದಕ್ಕಿಂತಲೂ ಕಡಿಮೆ ಇದೆ. ನಿಜಕ್ಕೂ ಇದು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮುಜುಗರಕ್ಕೀಡಾಗುವ ಸುದ್ದಿ. ವಿಶ್ವದ ದೊಡ್ಡ ಆರ್ಥಿಕತೆಯಾಗುವ ನಿಟ್ಟಿನಲ್ಲಿ ಮುನ್ನುಗ್ಗುತ್ತಿರುವ ಭಾರತಕ್ಕೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ತಾಕತ್ ಇಲ್ಲದಂತಾಗಿದೆ. ಈ ಮಾತನ್ನ ಬೇರೆ ಯಾರೋ ಹೇಳಿಲ್ಲ. ಸಿಎಜಿ ಭಾರತದ ಯುದ್ಧ ಸಾಮರ್ಥ್ಯದ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದೆ. ಸಿಎಜಿ ವರದಿಯ ಪ್ರಕಾರ ಈಗೇನಾದರೂ ಭಾರತದ ಮೇಲೆ ಯಾವುದೇ ರಾಷ್ಟ್ರ ದಾಳಿ ಮಾಡಿದರೆ ತನ್ನನ್ನ ತಾನು ರಕ್ಷಿಸಿಕೊಳ್ಳಲು ಮತ್ತೊಂದು ದೇಶದೆದುರು ಮಂಡಿಯೂರಿ ಕೂರಬೇಕಾದ ಸ್ಥಿತಿ ಇದೆ. ಇವತ್ತೇ ಯುದ್ಧ ಘೋಷಣೆಯಾದರೆ ಭಾರತ ಇನ್ನು ಇಪ್ಪತ್ತು ದಿನಗಳಷ್ಟೇ ಯುದ್ಧ ಮಾಡುವ ಸಾಮರ್ಥ್ಯ ಹೊಂದಿದೆ ಅಷ್ಟೇ. ಅದಾದ ಮೇಲೆ ಯುದ್ಧ ಮಾಡಲು ಭಾರತದ ರಕ್ಷಣಾ ಪಡೆಗಳ ಬಳಿ ಯಾವುದೇ ಯುದ್ಧ ಸಾಮಗ್ರಿಗಳಿರುವಿದಿಲ್ಲ. ಇಂತದ್ದೊಂದು ಭಯಾನಕ ಸತ್ಯವನ್ನ ಹೊರಹಾಕಿದೆ ಸಿಎಜಿ ವರದಿ. ಮಗ್ಗುಲ ಮುಳ್ಳಾಗಿರುವ ಪಾಕಿಸ್ತಾನ ಮತ್ತು ಪದೇ ಪದೇ ಕಾಲು ಕೆರೆದು ಜಗಳಕ್ಕಿಳಿಯುವ ಚೀನಾ ಎದುರು ಎದೆಯೊಡ್ಡಿ ನಿಲ್ಲುವ ಸಾಮರ್ಥ್ಯ ಭಾರತಕ್ಕಿಲ್ಲದಂತಾಗಿರೋದು ಮಾತ್ರ ಆಘಾತಕಾರಿ ವಿಚಾರ. ಮಿಲಿಟರಿ ನಿಯಮಗಳ ಪ್ರಕಾರ ಯಾವುದೇ ಒಂದು ರಾಷ್ಸ್ರ ಕನಿಷ್ಟಪಕ್ಷ 40 ದಿನ ನಿರಂತರವಾಗಿ ಯುದ್ಧ ಮಾಡುವ ಸಾಮರ್ಥ್ಯವಿರಬೇಕಯ. ಆದ್ರೆ ಭಾರತದ ಯುದ್ದ ಸಾಮರ್ಥ್ಯ ಕನಿಷ್ಠ ಮಟ್ಟಕ್ಕಿಂತಲೂ ಅರ್ಧದಷ್ಟಿದೆ. ಇದೆಲ್ಲಕ್ಕೂ ಕಾರಣ ಕೇಂದ್ರದಲ್ಲಿ ಆಡಳಿತ ನಡೆಸಿದ್ದ ಸರ್ಕಾರಗಳ ಆಮೆಗತಿಯ ಕಾರ್ಯನಿರ್ವಹಣೆ. ದೇಶದ ರಕ್ಷಣೆಯ ವಿಷಯದಲ್ಲೂ ಸರ್ಕಾರಗಳು ರಾಜಿ ಮಾಡಿಕೊಂಡರೆ ದೇಶವನ್ನ ರಕ್ಷಿಸುವ ಹೊಣೆಯಾದರೂ ಯಾರದ್ದು..?ಶೇಕಡಾ ಐವತ್ತರಷ್ಟು ಯುದ್ಧ ಸಾಮಗ್ರಿಗಳು ಹತ್ತು ದಿನದಷ್ಟು ಯುದ್ಧ ಮಾಡುವಷ್ಟೂ ಸಂಗ್ರಹ ನಮ್ಮ ರಕ್ಷಣಾಪಡೆಗಳಲ್ಲಿಲ್ಲ ಅನ್ನೋ ಸತ್ಯವನ್ನ ಸಿಎಜಿ ವರದಿ ಹೊರಹಾಕಿದೆ. ಈಗಾಗಲೇ ರಕ್ಷಣಾ ಪಡೆಗಳಲ್ಲಿ ಸಿಬ್ಬಂದಿ ಕೊರತೆ, ಭ್ರಷ್ಟಾಚಾರ, ಯುದ್ಧ ವಿಮಾನಗಳ ಕೊರತೆ, ತಂತ್ರಜ್ಞಾನದ ಕೊರತೆ,  ರಕ್ಷಣಾ ಒಪ್ಪಂದಗಳ ವಿಳಂಭದಂತಹ ಗಂಭೀರ ಸಮಸ್ಯೆಗಳಿವೆ. ಅದೆಲ್ಲದರ ಜೊತೆಗೆ ಕೇವಲ 20 ದಿನದ ಯುದ್ಧ ಸಾಮರ್ಥ್ಯದ ಸುದ್ದಿ ಆತಂಕ ಸೃಷ್ಟಿಸಿದೆ. ಸಿಎಜಿ ವರದಿಯ ಪ್ರಕಾರ ಭಾರತದ ಯುದ್ದ ಸಾಮರ್ಥ್ಯ 40 ದಿನಗಳ ಕನಿಷ್ಟ ಮಟ್ಟವನ್ನ ತಲುಪಲು ಇನ್ನೂ ನಾಲ್ಕು ವರ್ಷಗಳು ಬೇಕು.ಅದೂ ಈಗಿನ ಸರ್ಕಾರ ಎಚ್ಚೆತ್ತುಕೊಂಡು ರಕ್ಷಣಾ ಯೋಜನೆಗಳನ್ನ ತ್ವರಿತವಾಗಿ ಜಾರಿ ಮಾಡಿದರೆ ಮಾತ್ರ.  ಸುಮಾರು 16 ಸಾವಿರ ಕೋಟಿ ರೂ ಮೌಲ್ಯದ ರಕ್ಷಣಾ ಒಪ್ಪಂದಗಳು ಇನ್ನೂ ದೂಳು ತಿನ್ನುತ್ತಿವೆ. 55 ಸಾವಿರ ಕೋಟಿ ರೂ ಮೌಲ್ಯದ ತೇಜಸ್ ಯುದ್ಧ ವಿಮಾನ ತಯಾರಿ ಯೋಜನೆ 32 ವರ್ಷಗಳಾದರೂ ಯಶಸ್ವಿಯಾಗಿಲ್ಲ. ಈ ವರ್ಷದ ಅಂತ್ಯದ ವೇಳೆಗೆ ಮೊದಲ ತೇಜಸ್ ಯುದ್ಧ ವಿಮಾನ ಸೇನಾ ಕಾರ್ಯಾಚರಣೆಗೆ ಬಳಕೆಯಾಗುವ ಸಾಧ್ಯತೆ ಇದೆ. ಸ್ವದೇಶೀ ನಿರ್ಮಿತ ಎಂದು ಹೇಳಿಕೊಳ್ಲಾಗುವ ಈ ತೇಜಸ್ ಯುದ್ಧವಿಮಾನದ 35 ರಷ್ಟು ಮಾತ್ರ ದೇಶೀ ತಂತ್ರಜ್ಞಾನ ಹೊಂದಿದ್ದು ಉಳಿದೆಲ್ಲದಕ್ಕೂ ವಿದೇಶಗಳನ್ನ ಅವಲಂಬಿಸಬೇಕಾಗಿದೆ ಅನ್ನೋದನ್ನೂ ಕೂಡ ಸಿಎಜಿ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ವಾಯುಸೇನೆಗೆ 120 ಮತ್ತು ನೌಕಾಪಡೆಗಳಿಗೆ 50 ಯುದ್ಧ ವಿಮಾನ ಪೂರೈಸುವ ಈ ಯೋಜನೆ ಆರಂಭವಾಗಿದ್ದು 1983 ರಲ್ಲಿ. ಇನ್ನೂ ಈ ಯೋಜನೆ ಪೂರ್ಣವಾಗಿಲ್ಲ. ಈ 33 ವರ್ಷಗಳಲ್ಲಿ ಅದೆಷ್ಟು ಸರ್ಕಾರಗಳು ಬಂದು ಹೋದವೋ, ಆದ್ರೆ ಯಾವ ಸರ್ಕಾರವೂ ಕೂಡ ಈ ಯೋಜನೆಯನ್ನ ಯಶಸ್ವಿಗೊಳಿಸುವ ಕೆಲಸ ಮಾಡಲಿಲ್ಲ. 2022 ರ ವೇಳೆಗೆ 80 ತೇಜಸ್ ಯುದ್ಧ ವಿಮಾನಗಳ ಪೂರೈಕೆಯಾಗುವ ಸಾಧ್ಯತೆ ಇದೆ. ಇದು ಕೇವಲ ಸಾಧ್ಯತೆಯಷ್ಟೇ. ಇನ್ನೂ ಖಚಿತವಾಗಿಲ್ಲ. ಇದೊಂದು ಉದಾಹರಣೆ ಸಾಕು ನಮ್ಮ ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯ ವೃದ್ದಿ ಹೇಗಾಗುತ್ತಿದೆ ಅನ್ನೋದಕ್ಕೆ.. ಇತ್ತೀಚೆಗಷ್ಟೇ ಪ್ರಾನ್ಸ್ ಜೊತೆ ಅತ್ಯಾಧುನಿಕ 36 ರಾಫೆಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದವಾಗಿದೆ. ಇನ್ನೆರೆಡು ವರ್ಷಗಳಲ್ಲಿ 36 ಯುದ್ಧವಿಮಾನಗಳು ಭಾರತೀಯ ರಕ್ಷಣಾಪಡೆಗೆ ಸೇರಲಿವೆ ಅಂತ ಸರ್ಕಾರ ಹೇಳುತ್ತಿದೆ. ಆದ್ರೆ ನಿಜಕ್ಕೂ ಆ ವೇಗದಲ್ಲಿ ಈ ಯೋಜನೆ ಪಲಪ್ರದವಾಗತ್ತಾ ಅನ್ನೋದನ್ನ ಕಾಲ ನಿರ್ಧರಿಸಲಿದೆ.  ಯುದ್ದ ಸಾಮಗ್ರಿಗಳನ್ನ ಸ್ವಾವಲಂಬಿಯಾಗಿ ಉತ್ಪಾದಿಸುವ ಸಾಮರ್ಥ್ಯವಿಲ್ಲದ ಯಾವುದೇ ದೇಶ ಈ ಸ್ಥಿತಿಗೆ ಬರುತ್ತದೆ.ದೇಶೀ ತಂತ್ರಜ್ಞಾನದ ಅಲಭ್ಯತೆ, ವಿದೇಶೀ ಅವಲಂಬನೆಯಿಂದಾಗಿ ರಕ್ಷಣಾಪಡೆಗಳ ಸಾಮರ್ಥ್ಯ ಹೆಚ್ಚಳ ಸಾಧ್ಯವಾಗುತ್ತಿಲ್ಲ. ರಕ್ಷಣಾ ಸಂಶೋಧನೆಗಳಿಗೆ ದೇಶದಲ್ಲಿ ಅಷ್ಟಾಗಿ ಪ್ರೋತ್ಸಾಹ ಸಿಗದಿರುವುದು ಕೂಡ ಈ ಹಿನ್ನೆಡೆಗೆ ಕಾರಣ. ಇಷ್ಟಕ್ಕೆಲ್ಲ ಕಾರಣ ನಮ್ಮ ದೇಶದ ಚುರುಕಿಲ್ಲದ ಆಡಳಿತ ವ್ಯವಸ್ಥೆ. ದೇಶದ ರಕ್ಷಣಾ ವಿಷಯಗಳಲ್ಲೂ ಒಗ್ಗಟ್ಟಾಗಿರದ ರಾಜಕೀಯ ವ್ಯವಸ್ಥೆ. ಇದೆಲ್ಲವನ್ನೂ ಮೆಟ್ಟಿನಿಂತರೆ ಮಾತ್ರ ನಮ್ಮ ರಕ್ಷಣಾಪಡೆಗಳನ್ನ ವಿಶ್ವದ ಯಾವುದೇ ದೇಶವನ್ನ ಎಸುರಿಸಲು ಸಾಧ್ಯವಾಗುತ್ತದೆ….

ಸಲ್ಮಾನ್ ಖಾನ್ ಜೈಲು ಶಿಕ್ಷೆಗೆ ಗುರಿಯಾಗಲು ಕಾರಣವಾದ ಆ ಒಂದು ಸಾಕ್ಷಿ…!!!

image

ತನ್ನ ಕೊನೆಯ ದಿನಗಳಲ್ಲಿ ರವೀಂದ್ರ ಪಾಟೀಲ್ ಇದ್ದ ಸ್ಥಿತಿ..!!

ಒಂದೇ ಒಂದು ನಿರ್ಣಾಯಕ ಸಾಕ್ಷಿ ಇವತ್ತು ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ಕೇಸ್ ನಲ್ಲಿ ತಪ್ಪಿತಸ್ಥ ಎಂದು ಸಾಭೀತಾಗುವಂತೆ ಮಾಡಿದೆ. ಅದು ರವೀಂದ್ರ ಪಾಟೀಲ್ ಎಂಬ ಪೊಲೀಸ್ ಕಾನ್ಸ್ ಟೇಬಲ್ ಮ್ಯಾಜಿಸ್ಟ್ರೇಟ್ ಎದುರು ನೀಡಿದ್ದ ಹೇಳಿಕೆ. ಮ್ಯಾಜಿಸ್ಟ್ರೇಟ್ ಮುಂದೆ ಅಷ್ಟೇ ಅಲ್ಲ ತಾನು ಸಾಯುವ ಕೊನೆಯ ಕ್ಷಣದವರೆಗೂ ತನ್ನ ಹೇಳಿಕೆಗೆ ಬದ್ದನಾಗಿದ್ದ ಆ ಕಾನ್ಸ್ ಟೇಬಲ್ ರವೀಂದ್ರ ಪಾಟೀಲ್. ಆತ ಇಡೀ ಪ್ರಕರಣದ ಪ್ರತ್ಯಕ್ಷದರ್ಶಿ ಮತ್ತು ಇಡೀ ಪ್ರಕರಣದ ನಿರ್ಣಾಯಕ ಸಾಕ್ಷಿ. ಮುಂಬೈ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ರವೀಂದ್ರ ಪಾಟೀಲ್ 2002 ರಲ್ಲಿ ಸಲ್ಮಾನ್ ಖಾನ್ ಗೆ ಬಾಡಿಗಾರ್ಡ್ ಆಗಿ ಸೇವೆಗೆ ನಿಯೋಜನೆಯಾಗಿದ್ರು. ಭೂಗತ ದೊರೆಗಳಿಂದ ಜೀವಬೆದರಿಕೆ ಇದೆ ಅಂತ ಸಲ್ಮಾನ್ ಗೆ ಪೊಲೀಸ್ ಭದ್ರತೆ ನೀಡಲಾಗಿತ್ತು. 2002 ರ ಸೆಪ್ಟಂಬರ್ 28 ರಂದು ನಡೆದಿದ್ದ ಆ ಘಟನೆಯ ದೂರುದಾರ ಕೂಡ ಇದೇ ರವೀಂದ್ರ ಪಾಟೀಲ್. ಆ ರಾತ್ರಿ ಸಲ್ಮಾನ್ ಖಾನ್ ಕುಡಿದು ಕಾರ್ ಚಲಾಯಿಸಿ ಅಮೇರಿಕನ್ ಬೇಕರಿ ಮುಂದೆ ಮಲಗಿದ್ದವರ ಮೇಲೆ ಕಾರ್ ನುಗ್ಗಿಸಿದ್ದನ್ನ ರವೀಂದ್ರ ಪಾಟೀಲ್ ಕಣ್ಣಾರೆ ನೋಡಿದ್ದ. ಕುಡಿದ ಮತ್ತಿನಲ್ಲಿ ವಿಪರೀತ ವೇಗವಾಗಿ ಕಾರ್ ಓಡಿಸುತ್ತಿದ್ದ ಸಲ್ಮಾನ್ ಗೆ ನಿಧಾನವಾಗಿ ಹೋಗುವಂತೆ ಎಚ್ಚರಿಕೆಯನ್ನೂ ನೀಡಿದ್ದ. ಆದ್ರೆ ಸಲ್ಮಾನ್ ಖಾನ್ ಎಂಬ ಸೂಪರ್ ಸ್ಟಾರ್ ಒಬ್ಬ ಕಾನ್ಸ್ ಟೇಬಲ್ ಮಾತಿಗೆ ಬೆಲೆ ಕೊಡುತ್ತಾನಾ.. ಇಲ್ಲವೇ ಇಲ್ಲ… ನಡೆದೇ ಹೋಗಿತ್ತು ಆ ಭೀಕರ ಘಟನೆ. ಬೇಕರಿ ಮುಂದೆ ಮಲಗಿದ್ದ ಐವರ ಮೇಲೆ ಹರಿದಿತ್ತು ಸಲ್ಮಾನ್ ಖಾನ್ ನ ಲ್ಯಾಂಡ್ ಕ್ರೂಸರ್ ಕಾರು. ಘಟನೆಯಲ್ಲಿ ನೂರುಲ್ಲಾ ಷರೀಫ್ ಎಂಬಾತ ಸಾವನ್ನಪ್ಪಿದ್ರೆ ರವೀಂದ್ರ ಪಾಟೀಲ್ ಸೇರಿದಂತೆ ರಸ್ತೆ ಬದಿ ಮಲಗಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ರು. ಘಟನೆ ನಡೆದ ನಂತರ ಸಲ್ಮಾನ್ ಖಾನ್ ಅಲ್ಲಿಂದ ಪರಾರಿಯಾಗಿದ್ದ. ಪರಾರಿಯಾಗುವುದಕ್ಕೂ ಮೊದಲು ಅಲ್ಲಿದ್ದ ಜನರು ಸಲ್ಮಾನ್ ಖಾನ್ ನನ್ನ ಹಿಡಿದು ಮನಸೋ ಇಚ್ಚೆ ಥಳಿಸಿದ್ದರು ಎಂದು ಕೂಡ ಹೇಳಲಾಗುತ್ತದೆ. ಇಡೀ ಪ್ರಕರಣದ ಪ್ರತ್ಯಕ್ಷ ಸಾಕ್ಷಿಯಾಗಿದ್ದ ರವೀಂದ್ರ ಪಾಟೀಲ್ ತಾವೇ ಈ ಬಗ್ಗೆ ಪ್ರಕರಣ ದಾಖಲಿಸಿದ್ದರು. ಕುಡಿದಿದ್ದು, ಅಡ್ಡಾದಿಡ್ಡಿಯಾಗಿ ಕಾರ್ ಚಲಾಯಿಸಿದ್ದು ಮತ್ತು ಅಮೇರಿಕನ್ ಬೇಕರಿ ಮುಂದೆ ಮಲಗಿದ್ದವರ ಮೇಲೆ ಕಾರ್ ಚಲಾಯಿಸಿದ್ದನ್ನ ರವೀಂದ್ರ ಪಾಟೀಲ್ ತನ್ನ ದೂರಿನಲ್ಲಿ ದಾಖಲಿಸಿದ್ದರು. ಅದಾದ ನಂತ್ರ ಪ್ರಕರಣದ ವಿಚಾರಣೆ ವೇಳೆ ರವೀಂದ್ರ ಪಾಟೀಲ್ ಮ್ಯಾಜಿಸ್ಟ್ರೇಟ್ ಎದುರಿಗೆ ಇಡೀ ಪ್ರಕರಣ ನಡೆದ ರೀತಿಯ ಬಗ್ಗೆ ಹೇಳಿಕೆ ನೀಡಿದ್ದರು. ಆದ್ರೆ ರವೀಂದ್ರ ಪಾಟೀಲ್ ತನ್ನ ಉಸಿರಿರುವವರೆಗೂ ತನ್ನ ಹೇಳಿಕೆಯನ್ನ ಯಾವುದೇ ಕ್ಷಣದಲ್ಲಿಯೂ ಬದಲಿಲ್ಲ. ಆದ್ರೆ ಆತನ ಮೇಲೆ ಅದೆಂತ ಒತ್ತಡವಿತ್ತು ಗೊತ್ತಾ..? ತನ್ನದೇ ಇಲಾಖೆಯ ಪ್ರಭಾವಿ ಅಧಿಕಾರಿಗಳಿಂದ ಹಿಡಿದು ಭೂಗತ ದೊರೆಗಳವರೆಗೆ ಎಲ್ಲರೂ ಸಲ್ಮಾನ್ ವಿರುದ್ಧ ಸಾಕ್ಷಿ ನುಡಿಯದಂತೆ ಒತ್ತಡ ಏರಿದ್ದರು. ಆದ್ರೆ ರವೀಂದ್ರ ಪಾಟೀಲ್ ಮಾತ್ರ ಈ ಯಾವುದೇ ಒತ್ತಡಕ್ಕೂ ಮಣಿಯದೇ ಸತ್ಯಕ್ಕೇ ನಿಷ್ಠನಾಗಿದ್ದ. ರವೀಂದ್ರ ಪಾಟೀಲ್ ಮೇಲೆ ಅದೆಂತಹ ಒತ್ತಡವಿತ್ತು ಅಂದ್ರೆ ಆತ ಕೋರ್ಟ್ ಗೆ ಹಾಜರಾಗದಂತೆ ಬೆದರಿಕೆಯೊಡ್ಡಲಾಗಿತ್ತು. ಒಂದಷ್ಟು ದಿನ ರವೀಂದ್ರಪಾಟೀಲ್ ಎಲ್ಲಿದ್ದಾರೆ ಅನ್ನೋದೇ ಗೊತ್ತಿರಲಿಲ್ಲ. ಅಂದರೆ ಅಷ್ಟರ ಮಟ್ಟಿಗೆ ಆ ಕಾನ್ಸ್ ಟೇಬಲ್ ಮೇಲೆ ಒತ್ತಡ ಏರಲಾಗಿತ್ತು. ಕೋರ್ಟ್ ವಿಚಾರಣೆ ವೇಳೆ ಸಾಕ್ಷಿ ಹೇಳಲು ಬಾರದ ರವೀಂದ್ರ ಪಾಟೀಲ್ ರನ್ನ 2006 ರಲ್ಲಿ ಬಂಧಿಸಲಾಯಿತು. ಇದಾದ ಕೆಲವೇ ತಿಂಗಳುಗಲ್ಲಿ ಇದೇ ಕಾರಣದಿಂದ ರವೀದ್ರ ಪಾಟೀಲ್ ರನ್ನ ಮುಂಬೈ ಪೊಲೀಸ್ ಇಲಾಖೆ ಸೇವೆಯಿಂದ ಕಿತ್ತೊಗೆದಿತ್ತು. ಇಷ್ಟೆಲ್ಲ ಆದ್ರೂ ಕೂಡ, ಅದೆಷ್ಟು ಆಮಿಷ, ಒತ್ತಡ, ಬೆದರಿಕೆ ಬಂದರೂ ಕೂಡ ರವೀಂದ್ರ ಪಾಟೀಲ್ ಪ್ರತಿಕೂಲ ಸಾಕ್ಷಿ ನುಡಿಯೋಕೆ ಒಪ್ಪಿಕೊಳ್ಳಲೇ ಇಲ್ಲ. ರವೀಂದ್ರ ಪಾಟೀಲ್ ರ ಪ್ರಾಮಾಣಿಕತೆ, ಸತ್ಯದೆಡೆಗಿನ ನಿಷ್ಠೆ ಇಡೀ ಪ್ರಕರಣದಲ್ಲಿ ಸಲ್ಮಾನ್ ಗೆ ಮುಳುವಾಗಲು ಕಾರಣವಾಗಿದ್ದು. ಕಾರ್ ಓಡಿಸಿದ್ದು ಸಲ್ಮಾನ್ ಖಾನ್ ಅಲ್ಲ, ಬದಲಾಗಿ ತನ್ನ ಡ್ರೈವರ್ ಅಶೋಕ್ ಸಿಂಗ್ ಅನ್ನೋ ವಾದವನ್ನ ಎರೆಡು ತಿಂಗಳ ಹಿಂದೆಯಷ್ಟೇ ಸಲ್ಮಾನ್ ಖಾನ್ ವಕೀಲರು ಕೋರ್ಟ್ ಮುಂದೆ ವಾದ ಮಂಡಿಸಿದ್ದರು. ಆದ್ರೆ ಕೋರ್ಟ್ ಈ ವಾದವನ್ನ ಪರಿಗಣನೆಗೇ ತೆಗೆದುಕೊಳ್ಳಲಿಲ್ಲ. ಘಟನೆ ನಡೆದ 12 ವರ್ಷಗಳ ನಂತರ ಸುಳ್ಳು ಸಾಕ್ಷಿ ಸೃಷ್ಟಿ ಸಲು ಯತ್ನಿಸಿದ್ದ ಸಲ್ಮಾನ್ ಖಾನ್. ಆದ್ರೆ ನ್ಯಾಯಾಲಯ ಸಲ್ಮಾನ್ ಖಾನ್ ಪರ ವಕೀಲರ ವಾದವನ್ನ ಪರಿಗಣಿಸಲೇ ಇಲ್ಲ. ಯಾಕಂದ್ರೆ ಘಟನೆಯನ್ನ ಕಣ್ಣಾರೆ ಕಂಡಿದ್ದ ರವೀಂದ್ರ ಪಾಟೀಲ್ ಹೇಳಿಕೆ ಅಷ್ಟು ಪ್ರಾಮುಖ್ಯತೆ ಪಡೆದಿತ್ತು. ಇದ್ರ ಜೊತೆಗೆ ಸಲ್ಮಾನ್ ಖಾನ್ ಬಾರ್ ಒಂದ್ರಲ್ಲಿ ಕಂಠಪೂರ್ತಿ ಕುಡಿಧ್ದು, ತಾನೇ ಕಾರ್ ಚಲಾಯಿಸಿಕೊಂಡು ಬಂದಿದ್ದನ್ನ ನೋಡಿದವರೂ ಕೋರ್ಟ್ ನಲ್ಲಿ ಸಾಕ್ಷ್ಯ ನುಡಿದಿದ್ದರು. ಘಟನೆಯಲ್ಲಿ ಕಾಲು ಕಳೆದುಕೊಂಡಿದ್ದ ಅಬ್ದುಲ್ಲಾ ಎಂಬಾತ ಕೂಡ ಕಾರ್ ಚಲಾಯಿಸಿದ್ದು ಸಲ್ಮಾನ್ ಖಾನ್ ಅಂತಲೇ ಹೇಳಿದ್ದ. ಇಡೀ ಪ್ರಕರಣದಿಂದ ಪಾರಾಗಲು ಸಲ್ಮಾನ್ ಖಾನ್ ಹಲವು ದಾರಿಗಕಳನ್ನ ಹುಡುಕಿದ, ಸುಳ್ಳು ಸಾಕ್ಷಿಗಳನ್ನ ಸೃಷ್ಟಿ ಮಾಡಲು ಹೊರಟ. ಆದ್ರೆ ಅಂತಿಮವಾಗಿ ಕಾನೂನಿನ ಮುಂದೆ ಶರಣಾಗಿದ್ದಾನೆ. ಯವ ಕಾನೂನು ಆತನಿಗೆ ಐದು ವರ್ಷಗಳ ಶಿಕ್ಷೆ ನೀಡಿತೋ ಅದೇ ಕಾನೂನು ಆತನಿಗೆ ಜಾಮೀನನ್ನೂ ನೀಡಿದೆ. ತೀವ್ರ ಕ್ಷಯರೋಗದಿಂದ ಬಳಲುತ್ತಿದ್ದ ರವೀಂದ್ರ ಪಾಟೀಲ್ 2007 ರಲ್ಲಿ ಸಾವನ್ನಪ್ಪಿದ್ದರು. ಸಾಯುವ ಕೆಲವೇ ದಿನಗಳ ಮೊದಲೂ ಕೂಡ ರವೀಂದ್ರ ಪಾಟೀಲ್ ಕಾರ್ ಚಲಾಯಿಸಿದ್ದು ಸಲ್ಮಾನ್ ಖಾನ್ ಅಂತ ತನ್ನ ಸ್ನೇಹಿತನ ಬಳಿ ಹಲವು ಬಾರಿ ಹೇಳಿಕೊಂಡಿದ್ದರು. ರವೀಂದ್ರ ಪಾಟೀಲ್ ಸಲ್ಮಾನ್ ಖಾನ್ ಒಡ್ಡಿದ ಆಮಿಷಕ್ಕೆ ಬಲಿಯಾಗಿದ್ದಿದ್ರೆ ಇವತ್ತು ವೈಭವದಿಂದ ಬದುಕಬಹುದಿತ್ತೇನೋ. ಯಾಕಂದ್ರೆ ಕೊನೆ ಕೊನೆಯಲ್ಲಿ ಕ್ಷಯರೋಗದಿಂದ ಬಳಲುತ್ತಿದ್ದ ರವೀಂದ್ರ ಪಾಟೀಲ್ ಬಳಿ ಚಿಕಿತ್ಸೆಗೂ ಹಣವಿರಲಿಲ್ಲ. ಆದ್ರೆ ಹಣದ ಆಮಿಷಕ್ಕೆ ಬಲಿಯಾಗದ ರವೀಂದ್ರ ಪಾಟೀಲ್ ಇಂತದ್ದೊಂದು ಮಹತ್ವದ ತೀರ್ಪಿಗೆ ಕಾರಣರಾದ್ರು. ಹಣದ ಆಸೆಗೋ, ಬೆದರಿಕೆಗಳಿಗೋ,ಒತ್ತಡಕ್ಕೋ ಮಣಿದು ಸುಳ್ಳು ಸಾಕ್ಷಿ ಹೇಳುವ ಕಾಲದಲ್ಲಿ ಸತ್ಯನಿಷ್ಠೆ ಮರೆದವರು ರವೀಂದ್ರ ಪಾಟೀಲ್. ಅವರಿಗೊಂದು ಸಲಾಂ ಇರಲಿ….

ಸಲ್ಮಾನ್ ಖಾನ್ ಗೆ ಐದು ವರ್ಷ ಜೈಲು ಶಿಕ್ಷೆ…

image

ಹಿಟ್ ಅಂಡ್ ರನ್ ಕೇಸ್ ನಲ್ಲಿ ನಟ ಸಲ್ಮಾನ್ ಖಾನ್ ಗೆ ಐದು ವರ್ಷಗಳ ಶಿಕ್ಷೆ ಪ್ರಕಟಿಸಲಾಗಿದೆ. ಹದಿಮೂರು ವರ್ಷಗಳ ಪ್ರಕರಣ ಈಗ ಒಂದು ಹಂತಕ್ಕೆ ಬಂದಿದ್ದು ಸಲ್ಮಾನ್ ಗೆ ಐದು ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ತೀರ್ಪು ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಬಾಂಬೆ ಹೈಕೋರ್ಟ್ ಎರೆಡು ದಿನಗಳ ಮಟ್ಟಿಗೆ ಜಾಮೀನು ನೀಡಿದೆ. ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶ ಸಲ್ಮಾನ್ ಖಾನ್ ಗಿದೆ. ಈ ಪ್ರಕರಣದ ಅರ್ಜಿದಾರರೂ ಕೂಡ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ. ಸೆಷನ್ಸ್ ಕೋರ್ಟ್ ನೀಡಿರುವ ಶಿಕ್ಷೆಯ ಪ್ರಮಾಣ ಕಡಿಮೆ ಇದೆ. ಸಲ್ಮಾನ್ ಖಾನ್ ಮೇಲಿನ ಎಲ್ಲ ಆರೋಪಗಳೂ ಸಾಭೀತಾಗಿತ್ತು ಹೆಚ್ಚಿನ ಶಿಕ್ಷೆ ನೀಡಬೇಕು ಅಂತ ಪ್ರಾಸಿಕ್ಯೂಷನ್ ಕೂಡ ಹೈಕೋರ್ಟ್ ಮೊರೆ ಹೋಗುವ ಅವಕಾಶವಿದೆ. ಕಾರ್ ಚಲಾಯಿಸಿದ್ದು ಸಲ್ಮಾನ್ ಖಾನ್ ಅಲ್ಲ ಬದಲಾಗಿ ಆತನ ಕಾರ್ ಚಾಲಕ ಅಶೋಕ್ ಸಿಂಗ್ ಎಂಬ ಡಿಫೆನ್ಸ್ ಲಾಯರ್ ವಾದವನ್ನ ಸುಳ್ಳಿನ ಕಂತೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನ್ಯಾಯಾಲಯವನ್ನೇ ದಿಕ್ಕುತಪ್ಪಿಸಿ ಮಾಡಿದ ತಪ್ಪಿನಿಂದ ಪಾರಾಗಲು ಯತ್ನಿಸಿದ ಸಲ್ಮಾನ್ ಖಾನ್ ಕೊನೆಗೂ ಕಾನೂನಿನ ಎದುರು ಶರಣಾಗಿದ್ದಾರೆ. ಸಲ್ಮಾನ್ ಖಾನ್ ಆರೋಗ್ಯ ಸರಿ ಇಲ್ಲ, ಅವರು ಸಾಕಷ್ಟು ಸಮಾಜಸೇವೆ ಮಾಡಿದ್ದಾರೆ, ಇದನ್ನೆಲ್ಲ ಪರಿಗಣಿಸಿ ಶಿಕ್ಷೆ ಪ್ರಮಾಣ ಕಡಿಮೆ ಮಾಡುವಂತೆ ಸಲ್ಮಾನ್ ಪರ ವಕೀಲರು ಮಾಡಿದ ವಾದವನ್ನ ನ್ಯಾಯಾಲಯ ಪುರಸ್ಕರಿಸಲಿಲ್ಲ. ಹಣಬಲ, ಪ್ರಭಾವದ ಮುಂದೆ ಈ ತೀರ್ಪು ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆಯನ್ನ ಮತ್ತಷ್ಟು ಹೆಚ್ಚಿಸುವಂತಹ ತೀರ್ಪು ಅನ್ನೋದು ಕೂಡ ಅಷ್ಟೇ ಸತ್ಯ. ಆದ್ರೆ ಈ ತೀರ್ಪು ಬರಲು ತೆಗೆದುಕೊಂಡಿದ್ದು ಬರೊಬ್ಬರೀ ಹದಿಮೂರು ವರ್ಷ. 

13 ವರ್ಷಗಳ ಹಿಂದಿನ ಹಿಟ್ ಅಂಡ್ ರನ್ ಕೇಸ್-ಸಲ್ಮಾನ್ ಖಾನ್ ತಪ್ಪಿತಸ್ಥ

image

ಹದಿಮೂರು ವರ್ಷಗಳ ಕಾನೂನು ಹೋರಾಟದಲ್ಲಿ ಬ್ಯಾಡ್ ಬಾಯ್ ಸಲ್ಮಾನ್ ಕೊನೆಗೂ ಸೋತಿದ್ದಾರೆ. ಕಂಠಪೂರ್ತಿ ಕುಡಿದು ಪುಟ್ ಪಾತ್ ಮೇಲೆ ಮಲಗಿದ್ದವರ ಮೇಲೆ ಕಾರ್ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಅಂದು ನಡೆದ ಘಟನೆಯಲ್ಲಿ ಅಮೇರಿಕನ್ ಬೇಕರಿ ಮುಂದೆ ಮಲಗಿದ್ದ ನೂರುಲ್ಲಾ ಷರೀಫ್ ಸಾವನ್ನಪ್ಪಿದ್ದರು, ಇತರ ನಾಲ್ವರು ಗಾಯಗೊಂಡಿದ್ದರು. ಈಗಾಗಲೇ ನ್ಯಾಯಾಲಯ ಸಲ್ಮಾನ್ ತಪ್ಪಿತಸ್ಥ ಎಂದು ಪ್ರಕಟಿಸಿದ್ದು ಶಿಕ್ಷೆ ಪ್ರಮಾಣ ಇನ್ನಷ್ಟೇ ಪ್ರಕಟಿಸಬೇಕಿದೆ. ಗರಿಷ್ಠ 10 ವರ್ಷಗಳ ವರೆಗೆ ಸಲ್ಮಾನ್ ಖಾನ್ ಗೆ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. ಸಲ್ಮಾನ್ ಖಾನ್ ವಿರುದ್ಧ ಪ್ರಾಸಿಕ್ಯೂಷನ್ ಮಾಡಿದ್ದ ಎಲ್ಲಾ ಆರೋಪಗಳೂ ಕೂಡ ಸಾಭೀತಾಗಿವೆ. ಒಟ್ಟು 27 ಸಾಕ್ಷಿಗಳನ್ನ ಈ ಕೇಸ್ ನಲ್ಲಿ ವಿಚಾರಣೆಗೊಳಪಡಿಸಲಾಗಿತ್ತು. 13 ವರ್ಷಗಳ ನಂತರ ಕಾನೂನು ಹೋರಾಟದಲ್ಲಿ ಸಲ್ಮಾನ್ ಸೋತು ಜೈಲು ಸೇರುವಂತಾಗಿದೆ. ಕುಡಿದು ಕಾರ್ ಚಲಾಯಿಸಿದ ಆರೋಪ, ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಕಾರ್ ಚಲಾಯಿಸಿದ ಆರೋಪ, ಅಡ್ಡಾದಿಡ್ಡಿಯಾಗಿ ಕಾರ್ ಚಲಾಯಿಸಿದ ಆರೋಪ,  ಘಟನೆ ನಡೆದ ನಂತರ ಅಲ್ಲಿಂದ ಪರಾರಿಯಾದದ್ದು ಮತ್ತು ಪೊಲೀಸರಿಗೆ ಮಾಹಿತಿ ನೀಡದ ಆರೋಪಗಳೆಲ್ಲವೂ ನ್ಯಾಯಾಲಯದಲ್ಲಿ ಸಾಭೀತಾಗಿವೆ. ಇಡೀ ಘಟನೆಯ ಹೊಣೆಯನ್ನ ಸಲ್ಮಾನ್ ಕಾರ್ ಚಾಲಕ ಅಶೋಕ್ ಸಿಂಗ್ ತಲೆಗೆ ಕಟ್ಟಲು ಸಂಚು ನಡೆಸಲಾಗಿತ್ತು. ಆದ್ರೆ ಕಾರ್ ಚಾಲನೆ ಮಾಡಿದ್ದು ಸಲ್ಮಾನ್ ಖಾನ್ ಅನ್ನೋದು ತನಿಖೆ ವೇಳೆ ಬೆಳಕಿಗೆ ಬಂದಿತ್ತು, ಮತ್ತು ಅದು ನ್ಯಾಯಾಲಯದಲ್ಲಿ ಸಾಭೀತು ಕೂಡ ಆಗಿದೆ. ಮೂರು ವರ್ಷಗಳ ವರೆಗೆ ಶಿಕ್ಷೆ ಪ್ರಮಾಣ ಪ್ರಕಟವಾದರೆ ಇಂದೇ ಕೋರ್ಟ್ ನಲ್ಲಿ ಜಾಮೀನು ಪಡೆಯುವ ಅವಕಾಶ ಸಲ್ಮಾನ್ ಗಿದೆ. ಆದ್ರೆ ಮೂರು ವರ್ಷಗಳಿಗೂ ಹೆಚ್ಚಿನ ಪ್ರಮಾಣದ ಶಿಕ್ಷೆಯನ್ನ ನ್ಯಾಯಾಲಯ ವಿಧಿಸಿದ್ರೆ ಸಲ್ಮಾನ್ ಅರ್ಥರ್ ರೋಡ್ ಜೈಲು ಸೇರಬೇಕಾಗುತ್ತದೆ. ಆ ನಂತ್ರ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ ಜಾಮೀನು ಪಡೆಯುವ ಅವಕಾಶ ಸಲ್ಮಾನ್ ಖಾನ್ ಗಿದೆ. ಸಲ್ಮಾನ್ ಖಾನ್ ವಿರುದ್ದದ ಎಲ್ಲಾ ಏಳೂ ಆರೋಪಗಳೂ ಸಾಭೀತಾಗಿರುವುದರಿಂದ ಶಿಕ್ಷೆ ಪ್ರಮಾಣ ಮೂರು ವರ್ಷಗಳಿಗಿಂತಲೂ ಹೆಚ್ಚೇ ಇರುವ ಸಾಧ್ಯತೆಗಳಿವೆ. ಇಂದೇ ಶಿಕ್ಷೆ ಪ್ರಮಾಣ ಪ್ರಕಟವಾಗಲಿದ್ದು 13 ವರ್ಷಗಳ ಹಿಂದಿನ ಪ್ರಕರಣದಲ್ಲಿ ಸಲ್ಮಾನ್ ಖಾನ್ ಜೈಲುಪಾಲಾಗಲಿದ್ದಾರೆ.

%d bloggers like this: