
ಇಂಡಿಯಾಸ್ ಡಾಟರ್
ನಿರ್ಭಯಾ ಮೇಲೆ ನಡೆದ ಹೀನ ಸಾಮೂಹಿಕ ಅತ್ಯಾಚಾರ ಘಟನೆಯನ್ನ ಕಣ್ಣಿಗೆ ಕಟ್ಟುವಂತೆ ಇಂಡಿಯಾಸ್ ಡಾಟರ್ ನಲ್ಲಿ ಕಟ್ಟಿಕೊಡಲಾಗಿದೆ… ಅತ್ಯಾಚಾರಿಯ ನಿರ್ಲಜ್ಜ ಸಮರ್ಥನೆಯನ್ನ ಡಾಕ್ಯುಮೆಂಟರಿಯಲ್ಲಿ ಬಳಿಸಿಕೊಳ್ಳಲಾಗಿದೆ ಅನ್ನೋದನ್ನ ಬಿಟ್ರೆ ನಿಜಕ್ಕೂ ಡಾಕ್ಯುಮೆಂಟರಿ ಇಡೀ ಘಟನೆಯ ಕರಾಳತೆಗೆ ಕನ್ನಡಿ ಹಿಡಿದಂತಿದೆ. ಒಬ್ಬ ಅತ್ಯಾಚಾರಿಯನ್ನ ಸಂದರ್ಶಿಸಲು ನಿರ್ಧೇಶಕಿ ಲೆಸ್ಲಿ ವುಡ್ವಿನ್ ತೆಗೆದುಕೊಂಡ ಶ್ರಮವನ್ನ ಘಟನೆಯ ಪ್ರತ್ಯಕ್ಷ ಸಾಕ್ಷಿ ನಿರ್ಭಯಾಳ ಸ್ನೇಹಿತ. ಇಡೀ ಡಾಕ್ಯುಮೆಂಟರಿಯಲ್ಲಿ ಆತನ ಬಗ್ಗೆ ಅಷ್ಟಾಗಿ ವಿವರವೇ ಇಲ್ಲ. ಘಟನೆಯ ಬಗ್ಗೆ ಆತನಿಂದ ಯಾವುದೇ ಮಾಹಿತಿ ಪಡೆದಿಲ್ಲ. ಅತ್ಯಾಚಾರಿಯೊಬ್ಬನ ಅಸಹ್ಯ ಸಮರ್ಥನೆಯ ಬದಲಿಗೆ ಘಟನೆಯ ಪ್ರತ್ಯಕ್ಷ ಸಾಕ್ಷಿಯ ಹೇಳಿಕೆಯನ್ನ ಬಳಸಬೇಕಿತ್ತು. ಆದ್ರೆ ಅದು ನಿರ್ಧೇಶಕಿಯಿಂದ ಸಾಧ್ಯವಾಗಿಲ್ಲ… ಆದ್ರೆ ಒಂದು ಗಂಟೆಯಿರುವ ಇಂಡಿಯಾಸ್ ಡಾಟರ್ ಡಾಕ್ಯುಮೆಂಟರಿ ಎರೆಡು ವರ್ಷದ ಹಿಂದೆ ನಡೆದುಹೋದ ಆ ಭೀಕರ ಅತ್ಯಾಚಾರದ ಕರಾಳ ದೃಶ್ಯಗಳನ್ನ ಕಣ್ಣಿಕೆ ಕಟ್ಟಿ ಕೊಡುತ್ತದೆ. ಡಾಕ್ಯುಮೆಂಟರಿಯಲ್ಲಿ ನಿರ್ಭಯಾಳ ಕನಸು, ಆ ಕನಸು ಹೆತ್ತವರ ಮುಂದೆಯೇ ಕಮರಿಹೋದ ರೀತಿ, ಆಕೆಯ ತಂದೆ ತಾಯಿಯ ಕಣ್ಣೀರು, ಒಂದಿನಿತೂ ಪಾಪ ಪ್ರಜ್ಞೆ ಇಲ್ಲದ ಅತ್ಯಾಚಾರಿಗಳು, ಅತ್ಯಾಚಾರಿಗಳ ಮನಸ್ಥಿತಿ, ಅತ್ಯಾಚಾರಿಗಳಿಗಿಂತಲೂ ನಿರ್ಲಜ್ಜತನದಿಂದ ಮಾತನಾಡುವ ಆರೋಪಿಗಳ ಪರ ವಕೀಲರು, ದೆಹಲಿಯಂತಹ ದೊಡ್ಡ ನಗರಗಳಲ್ಲಿನ ಸ್ಲಂ ನಲ್ಲಿರುವ ಬಡತನ, ಅಲ್ಲಿನ ವಾತಾವರಣ, ಅತ್ಯಾಚಾರಿಗಳ ಮನೆಯವರ ಅಸಹಾಯಕತೆ, ಮಕ್ಕಳೆಡೆಗಿನ ಅವರ ಸಮರ್ಥನೆ, ಇದ್ದ ಒಬ್ಬ ಮಗ ಜೈಲು ಪಾಲದ ಅನ್ನೋ ಅವರ ನೋವು, ನಿರ್ಭಯಾ ಅತ್ಯಾಚಾರವಾದ ನಂತ್ರ ನಡೆದ ದೊಡ್ಡ ಮಟ್ಟದ ಹೋರಾಟ, ಆ ನಂತರ ನ್ಯಾಯಾಲಯ ಆರೋಪಿಗಳಿಗೆ ದಂಡನೆ ನೀಡಿದ ವೇಗ ಎಲ್ಲವನ್ನೂ ಇಂಡಿಯಾಸ್ ಡಾಟರ್ ಡಾಕ್ಯುಮೆಂಟರಿ ಹೇಳಿಕೊಂಡು ಹೋಗುತ್ತೆ. ಕೇವಲ ನಿರ್ಭಯಾ ಅತ್ಯಾಚಾರ ಪ್ರಕರಣ ಮತ್ತು ಆ ನಂತರ ನಡೆದ ಹೋರಾಟ ಮಾತ್ರ ಟಿವಿಗಳಲ್ಲಿ ನೋಡಿದ್ದವರಿಗೆ ಇಡೀ ಘಟನೆಯ ಭೀಕರತೆ, ಅತ್ಯಾಚಾರಿಗಳ ನಿರ್ದಯತೆ ಎಲ್ಲವೂ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಇಡೀ ಡಾಕ್ಯುಮೆಂಟರಿಯನ್ನ ಒಂದೇ ಗುಕ್ಕಿನಲ್ಲಿ ನೋಡಿ ಮುಗಿಸಿದವರ ಕಣ್ಣಾಲಿಗಳು ನೀರು ಜಿನುಗುತ್ತವೆ. ಅಷ್ಟರ ಮಟ್ಟಿಗೆ ನಿರ್ಧೇಶಕಿ ಲೆಸ್ಲಿ ವುಡ್ವಿನ್ ಗೆದ್ದಿದ್ದಾರೆ.
ಆ ಊರಿನಲ್ಲಿ ಕಡುಬಡತನದಲ್ಲಿ ಆ ಮಗು ಹುಟ್ಟಿದಾಗ ಆ ಕುಟುಂಬ ಅದೆಷ್ಟು ಸಂಭ್ರಮ ಪಟ್ಟಿತ್ತು ಅಂದ್ರೆ ಊರವರಿಗೆಲ್ಲ ಸಿಹಿ ಹಂಚಿದ್ದರು. ಹೆಣ್ಣು ಮಗು ಹುಟ್ಟಿದ್ರೆ ಶಾಪ ಅನ್ನುವಂತಹ ಹಳ್ಳಿಯಲ್ಲಿ ನಿರ್ಭಯಾ ಹೆತ್ತವರನ್ನ ಹುಚ್ಚರಂತೆ ನೋಡಿದ್ದರು ಆ ಹಳ್ಳಿಯ ಜನ.ನಿರ್ಭಯಾ ಹೆತ್ತವರು ಬಡವರಾಗಿದ್ರೂ ಅವರ ಹೃದಯ ಶ್ರೀಮಂತಿಕೆಗೆ ಯಾರೂ ಸಾಟಿಯಿರಲಿಲ್ಲ.. ಡಾಕ್ಟರ್ ಆಗಬೇಕು ಅಂದುಕೊಂಡಿದ್ದ ಮಗಳ ಕನಸನ್ನ ಸಾಕಾರಗೊಳಿಸೋಕೆ ಆ ಕುಟುಂಬ ಊರಲ್ಲಿದ್ದ ಅಷ್ಟೂ ಆಸ್ತಿಯನ್ನೂ ಮಾರಿ ಆ ಹೆಣ್ಣುಮಗಳ ಓದಿಗಾಗಿ ಮೀಸಲಿಟ್ಟಿತ್ತು. ಆ ಕುಟುಂಬದ ಕಷ್ಟಗಳೆಲ್ಲವೂ ಮುಗಿದುಹೋಗೋಕೆ ಇನ್ನು ಕೇವಲ ಆರು ತಿಂಗಳುಗಳಷ್ಟೇ ಇದ್ವು… ಆರು ತಂಗಳು ಕಳೆದರೆ ತಮ್ಮ ಮಗಳು ಡಾಕ್ಟರ್ ಆಗಿ ಊರಿಗೆ ಬರ್ತಾಳೆ ಅನ್ನೋ ಕನಸು ಕಂಡಿದ್ದರು ಆ ತಂದೆ ತಾಯಿ. ಆದ್ರೆ ಆ ತಂದೆ ತಾಯಿಗಳ ಕಣ್ಣಲ್ಲೀಗ ಸಾಯುವವರೆಗೂ ಒರೆಸಲಾಗದ ಕಣ್ಣೀರೇ ಇದೆ. ತಮ್ಮ ಮಗಳಿಲ್ಲದೇ ಮತ್ತೆ ಬದುಕನ್ನ ಆರಂಭಿಸೋ ಉತ್ಸಾಹವೇ ಇಲ್ಲ ಆ ಅನಾಥ ತಂದೆ ತಾಯಿಗಳಿಗೆ.
ಅತ್ಯಾಚಾರ ಮಾಡಿದ ದುಷ್ಟರ ಕಣ್ಣಲ್ಲಿ ಒಂದಿಷ್ಟೂ ಪಾಪ ಪ್ರಜ್ಞೆ ಇಲ್ಲ ಅನ್ನೋದು ಡಾಕ್ಯುಮೆಂಟರಿಯನ್ನ ನೋಡಿದ್ರೆ ಗೊತ್ತಾಗುತ್ತೆ. ಅದ್ರಲ್ಲೂ ಮುಖೇಶ ಸಿಂಗ್ ತಾನೇನು ತಪ್ಪೇ ಮಾಡಿಲ್ಲ, ಅತ್ಯಾಚಾರದಂತಹ ಘಟನೆಗಳಲ್ಲಿ ಹುಡುಗಿಯರದ್ದೇ ಹೆಚ್ಚು ಜವಾಬ್ದಾರಿ ಇರುತ್ತೆ. ಆಕೆ ರಾತ್ರಿ ಒಂಬತ್ತು ಗಂಟೆ ಸಮಯದಲ್ಲಿ ತನ್ನ ಗೆಳೆಯನೊಂದಿಗೆ ಸಿನಿಮಾ ನೋಡಲು ಹೋಗಿದ್ದೇ ತಪ್ಪು, ಆಕೆ ಅತ್ಯಾಚಾರಕ್ಕೊಳಗಾಗಲು ಒಪ್ಪಿಕೊಳ್ಳಬೇಕಿತ್ತು, ಹೆಣ್ಣಯ ಮಕ್ಕಳು ಮನೆಗೆಲಸ ಮಾಡ್ಕೊಂಡಿರಬೇಕು ಅಂತ ಉಪದೇಶ ಮಾಡ್ತಾನೆ. ಇಷ್ಟಲ್ದ ತನಗೆ ಕೊಟ್ಟಿರೋ ಮರಣದಂಡನೆ ಶಿಕ್ಷೆಯಿಂದ ಮುಂದೆ ನಡೆಯೋ ಅತ್ಯಾಚಾರದಂತಹ ಘಟನೆಗಳಲ್ಲಿ ಅತ್ಯಾಚಾರಿಗಳು ಮಹಿಳೆಯರನ್ನ ಕೊಲ್ಲುತ್ತಾರೆ ಅಂತಾನೆ. ಈತನ ಮಾತುಗಳನ್ನ ಕೇಳಿದ್ರೆ ಅವನ ಹೀನ ಮನಸ್ಥಿತಿ, ನಿರ್ಧಯತೆ, ಮಾಡಿದ ತಪ್ಪಿನ ಬಗ್ಗೆ ಒಂದಿನಿತೂ ಇಲ್ಲದ ಪಶ್ಚಾತಾಪ ಡಾಕ್ಯುಮೆಂಟರಿ ನೋಡುತ್ತಿದ್ದವರಿಗೆ ಸಿಟ್ಟು ತರಿಸುತ್ತದೆ. ಅವತ್ತು ನಡುರಸ್ತೆಯಲ್ಲಿ ಸಿಕ್ಕವಳನ್ನ ಅಷ್ಟು ನಿರ್ಧಯವಾಗಿ ಅತ್ಯಾಚಾರ ಮಾಡಿದ ಕ್ರೂರ ಮನಸುಗಳ ದರ್ಶನವಾಗುತ್ತೆ. ಇದ್ರ ಜೊತೆಗೆ ಹಾಗೆ ಸಿಕ್ಕವಳನ್ನ ಅಷ್ಟು ಅದೆಷ್ಟು ಹಿಂಸಿಸಿ ಅತ್ಯಾಚಾರ ಮಾಡಿದ್ದಾರೆ ಅನ್ನೋದ್ರ ಭೀಕರತೆ ಕೂಡ ನಿಮಗೆ ಅರ್ಥವಾಗತ್ತೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಆಕೆಯೊಳಗೆ ರಾಡ್ ಹಾಕಿ ಆಕೆಯ ಕರುಳನ್ನ ಹೊರಗೆ ತೆಗೆಯುವಷ್ಟರ ಮಟ್ಟಿಗೆ. ಇಂತದ್ದೊಂದು ಭೀಕರ ಸಾಮೂಹಿಕ ಅತ್ಯಾಚಾರ ಇಲ್ಲಿಯವರೆಗೆ ನಡೆದಿರಲಿಲ್ಲ ಅನ್ನೋದೂ ಕೂಡ ಅರ್ಥವಾಗತ್ತೆ.
ಅತ್ಯಾಚಾರಿಗಳಿಗಿಂತಲೂ ನಿರ್ಲಜ್ಜತನದಿಂದ ಮಾತನಾಡಿರೋದು ಅವರ ಪರ ವಕೀಲರುಗಳು. ಮಹಿಳೆಯರು ಹೂ ಇದ್ದ ಹಾಗೆ, ಅವರನ್ನ ರಕ್ಷಣೆ ಮಾಡೋಕೆ ಒಬ್ಬ ಗಂಡು ಬೇಕೇ ಬೇಕು. ನೀವು ವಜ್ರವನ್ನ ರಸ್ತೆಯಲ್ಲಿಟ್ಟರೆ ಅದು ನಾಯಿ ಪಾಲಾಗುತ್ತೆ ಅಂತ ಮಾತಾಡುತ್ತಾನೆ ಅತ್ಯಾಚಾರಿಗಳ ಪರ ವಕೀಲ ಎಂ ಎಲ್ ಶರ್ಮ. ಇದಕ್ಕಿಂತಲೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾತಾಡಿರೋದು ಮತ್ತೊಬ್ವ ಲಾಯರ್ ಎಪಿ ಸಿಂಗ್. ತನ್ನ ಮಗಳೇನಾದರೂ ತಡರಾತ್ರಿ ಗೆಳೆಯನೊಂದಿಗೆ ಸಿನಿಮಾ ನೋಡಲು ಹೋದ್ರೆ ತಾನು ಎಲ್ಲರ ಮುಂದೆ ಬೆಂಕಿಯಿಟ್ಟು ಆಕೆಯನ್ನ ಸುಟ್ಟಾಕ್ತೀನಿ ಅಂತಾನೆ. ಇಂತಹ ಮರ್ಯಾದೆ ಬಿಟ್ಟ ಲಾಯರ್ ಗಳಿಂದ ನಮ್ಮ ಜನಕ್ಕೆ ಅದೇಗೆ ನ್ಯಾಯ ಸಿಗುತ್ತೋ ಆ ದೇವರೇ ಬಲ್ಲ. ಇಡೀ ಡಾಕ್ಯುಮೆಂಟರಿಯಲ್ಲಿ ಈ ಇಬ್ವರು ಲಾಯರ್ ಗಳ ಸಂಕುಚಿತ ಮನಸ್ಥಿತಿ, ನಿರ್ಲಜ್ಜತನ, ಗಂಡಿದ್ದರೆ ಮಾತ್ರ ಹೆಣ್ಣಿಗೆ ರಕ್ಷಣೆ ಅನ್ನೋ ವಾದದ ಹಿಂದೆನ ಇವರ ಕರಾಳ ಮುಖಗಳ ದರ್ಶನವಾಗುತ್ತೆ.
ಇಡೀ ಡಾಕ್ಯುಮೆಂಟರಿಯಲ್ಲಿ ಭಾರತೀಯ ಗಂಡಸರೆಲ್ಲ ಅತ್ಯಾಚಾರೀ ಮನಸ್ಥಿತಿಯವರು ಅಂತ ಎಲ್ಲೂ ಹೇಳಿಲ್ಲ. ಅತ್ಯಾಚಾರದಂತಹ ಘಟನೆಗಳು ಯಾಕೆ ನಡೆಯುತ್ತವೆ ಅನ್ನೊ ಪ್ರಶ್ನೆಗೆ ಹುಡುಕಾಟವಿದೆ. ಇದ್ರ ಜೊತೆಗೆ ನಿರ್ಭಯಾ ಅತ್ಯಾಚಾರ ಘಟನೆಯ ನಂತ್ರ ಇಡೀ ದೇಶ ಆಕೆಯ ಬೆನ್ನಿಗೆ ನಿಂತು ಹೋರಾಟ ಮಾಡಿದ್ದನ್ನ , ಪೊಲೀಸರ ಕ್ಷಿಪ್ರ ತನಿಖೆಯನ್ನ,ನ್ಯಾಯಾಲಯದ ತ್ವರಿತ ವಿಚಾರಣೆಯನ್ನ ಹೇಳುತ್ತೆ. ಅದೆಲ್ಲದಕ್ಕೂ ಆ ಒಂದು ಹೋರಾಟ ಬಲ ತಂದುಕೊಟ್ಟಿತ್ತು. ಬಹುಶಃ ಜಗತ್ತಿನ ಯಾವ ದೇಶದಲ್ಲೂ ಮಹಿಳೆಯೊಬ್ಬಳ ಮೇಲೆ ನಡೆದ ಅತ್ಯಾಚಾರವನ್ನ ಇಷ್ಟು ದೊಡ್ಡ ಮಟ್ಟದಲ್ಲಿ ಖಂಡಿಸಿರಲಿಲ್ಲ. ಅಂತಹ ಹೋರಾಟವನ್ನ ಭಾರತೀಯರು ಮಾಡಿದ್ದಾರೆ ಅನ್ನೋ ದನ್ನೂ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಆದ್ರೆ ಇಡೀ ಡಾಕ್ಯುಮೆಂಟರಿಯ ಒಂದೇ ಒಂದು ಕೊರತೆ ನಿರ್ಭಯಾ ಸ್ನೇಹಿಯನ ಅನುಪಸ್ಥಿತಿ. ಇಡೀ ಘಟನೆಯ ಪ್ರತ್ಯಕ್ಷ ಸಾಕ್ಷಿ ಆತ. ಆದ್ರೆ ಆತನ ಒಂದೇ ಒಂದು ಹೇಳಿಕೆ ಕೂಡ ಡಾಕ್ಯುಮೆಂಟರಿಯಲ್ಲಿಲ್ಲ. ಒಬ್ಬ ಅತ್ಯಾಚಾರಿಯ ಹೀನ ಸಮರ್ಥನೆಯನ್ನ ಹೇಳಲು ಹೊರಟವರು ನಿರ್ಭಯಾಳ ಗೆಳೆಯನನ್ನ ಮಾತಾಡಿಸಬೇಕಿತ್ತು.. ಹಾಗೆ ಆಗಿದ್ದಿದ್ರೆ ಇಡೀ ಡಾಕ್ಯುಮೆಂಟರಿಯ ತೂಕ ಇನ್ನಷ್ಟು ಹೆಚ್ಚಾಗ್ತಾಯಿತ್ತು. ಈ ಡಾಕ್ಯುಮೆಂಟರಿಯನ್ನ ನಿರ್ಭಂದ ಮಾಡುವಂತದ್ದು ಏನೂ ಇಲ್ಲ. ಆ ಒಂದು ಅತ್ಯಾಚಾರಿಯ ಸಮರ್ಥನೆಯನ್ನ ಬಿಟ್ಟು. ಅದನ್ನ ತೆಗೆದುಹಾಕಿ ಭಾರತೀಯರಿಗೆ ಇದನ್ನ ನೋಡುವ ಅವಕಾಶ ಸಿಗುವಂತೆ ಸರ್ಕಾರ ಮಾಡಬೇಕಿದೆ. ಹಾಗೆ ಮಾಡಿದ್ರೆ ಇಡೀ ಘಟನೆಯ ಭೀಕರತೆ ನಮ್ಮ ಜನರಿಗೆ ಅರ್ಥವಾಗುತ್ತೆ.
-ಶಶಿವರ್ಣಂ
Like this:
Like ಲೋಡ್ ಆಗುತ್ತಿದೆ...