ಪ್ರತಿಭಟನೆ ಮಾಡೋಕೆ ಎಲ್ಲರಿಗೂ ಹಕ್ಕಿದೆ… ಎಲ್ಲ ವಿಚಾರಗಳ ಬಗ್ಗೆಯೂ ಪ್ರತಿಭಟಿಸುವ ಅವಕಾಶ ಇದೆ.. ಈಗ ನೈತಿಕ ಪೊಲೀಸ್ ಗಿರಿಯನ್ನ ಪ್ರತಿಭಟಿಸೋಕೆ ಕಿಸ್ ಡೇ ಮಾಡುವ ಮೂಲಕ ಪ್ರತಿಭಟಿಸೋಕೆ ಒಂದು ಗುಂಪು ಸಿದ್ದತೆ ನಡೆಸ್ತಾಯಿದೆ.. ಕೇರಳದ ಕೊಚ್ಚಿಯಲ್ಲಿ ಕಿಸ್ಸಿಂಗ್ ಡೇ ಮಾಡಲು ಹೋಗಿ ಅವಾಂತರ ಸೃಷ್ಟಿಸಿದ್ದ ಅದೇ ಮನಸ್ಥಿತಿಯ ಗುಂಪು ಸಿಲಿಕಾನ್ ಸಿಟಿಯಲ್ಲೂ ಕಿಸ್ಸಿಂಗ್ ಡೇ ಮಾಡ್ತೀವಿ ಅಂತ ಓಡಾಡುತ್ತಿದ್ದಾರೆ… ಕಿಸ್ಸಿಂಗ್ ಡೇ ಮಾಡ್ತೀವಿ ಅಂತ ಹಾರಾಡುತ್ತಿರುವವರನ್ನ ಯಾಕೆ ಹೀಗೆ ಪ್ರತಿಭಟಿಸುತ್ತಿದ್ದೀರಾ ಅಂತ ಕೇಳಿದ್ರೆ ನೈತಿಕ ಪೊಲೀಸ್ ಗಿರಿ ಅಂತಾರೆ. ಇತ್ತೀಚೆಗೆ ನೈತಿಕ ಪೊಲೀಸ್ ಗಿರಿ ನಡೆದ ಘಟನೆಗಳಂತೂ ನಮ್ಮ ನಾಡಿನಲ್ಲಿ ನಡೆದಿಲ್ಲ. ಈ ಹಿಂದೆ ಹೋಮ್ ಸ್ಟೇ ನಲ್ಲಿ ದಾಳಿಗಳಾದಾಗ, ಯುವತಿಯರ ಮೇಲೆ ಹಲ್ಲೆಗಳಾದಾಗ ಎಲ್ಲರೂ ನೈತಿಕ ಪೊಲೀಸ್ ಗಿರಿಯನ್ನ ತಮ್ಮದೇ ಆದ ರೀತಿಯಲ್ಲಿ ಪ್ರತಿಭಟಿಸಿದ್ದಾರೆ. ಆ ಪ್ರತಿಭಟನೆಗಳಿಗೆ ಜನಬೆಂಬಲವೂ ವ್ಯಕ್ತವಾಗಿತ್ತು. ನೈತಿಕ ಪೊಲೀಸ್ ಗಿರಿಯನ್ನ ದೊಡ್ಡ ಮಟ್ಟದಲ್ಲಿ ಖಂಡಿಸಲಾಗಿತ್ತು. ಆ ಘಟನೆಗಳು ನಡೆದ ನಂತ್ರ ನೈತಿಕ ಪೊಲೀಸ್ ಗಿರಿಯ ಆಟಾಟೋಪವೇನೂ ನಡೆದಿಲ್ಲ. ಆದ್ರೆ ಕೆಲವು ವಿಕೃತ ಮನಸಿನ ಗುಂಪುಗಳಂತೂ ನೈತಿಕ ಪೊಲೀಸ್ ಗಿರಿಯನ್ನ ವಿರೋಧಿಸೋಕೆ ಕಿಸ್ಸಿಂಗ್ ಡೇ ಮಾಡುವ ಹುಚ್ಚಾಟಕ್ಕೆ ಮುಂದಾಗಿಬಿಟ್ಟಿದೆ. ಏನೇ ಒಂದು ವಿವಾದ ಸೃಷ್ಟಿ ಮಾಡಿ ಸುದ್ದಿಯಲ್ಲಿರಬೇಕು ಅನ್ನೋ ಉದ್ದೇಶ ಬಿಟ್ರೆ ಇಲ್ಲಿ ನೈತಿಕ ಪೊಲೀಸ್ ಗಿರಿಯನ್ನ ವಿರೋಧಿಸುವ ಪ್ರಮಾಣಿಕ ಉದ್ದೇಶವಂತೂ ಯಾರಿಗೂ ಇಲ್ಲ. ಇಲ್ಲಿ ಪ್ರಶ್ನೆ ಇರೋದು ನೈತಿಕ ಪೊಲೀಸ್ ಗಿರಿಯನ್ನ ವಿರೋಧಿಸೋಕೆ ಅನೈತಿಕತೆಗಿಳಿಯಬೇಕಾ ಅನ್ನೋದು. ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕಾಗಿರೋದನ್ನ ನಡುಬೀದಿಯಲ್ಲಿ ಮಾಡ್ತೀವಿ ಅನ್ನುವವರ ಹುಚ್ಚಾಟಕ್ಕೆ ಕೆಲವು ಸ್ವಯಂಘೋಷಿತ ಬುದ್ದಿ ಜೀವಿಗಳು ಜೈ ಜೈ ಅಂತಿದ್ದಾರೆ… ಇಷ್ಟೇ ಅಲ್ಲ ಕಿಸ್ ಡೇ ಮಾಡೋದು, ಅರೆ ಬಟ್ಟೆ ತೊಟ್ಟು ಆ ಕಿಸ್ ಡೇ ಯಲ್ಲಿ ಭಾಗವಹಿಸಿ ಸಿಕ್ಕಸಿಕ್ಕವರ ಬಾಯಿಗೆ ಮುತ್ತಿಡೋದು ಕೂಡ ಮಹಿಳಾ ಸಬಲೀಕರಣದ ಒಂದು ಭಾಗವಂತೆ.
ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ಶಾಲೆಗಳಲ್ಲಿ ಮಕ್ಕಳ ಮೇಲೆ ಅನಾಚಾರ ಅತ್ಯಾಚಾರಗಳು ನಡೆದು ಹೋದ್ವು. ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಅತ್ಯಾಚಾರ ನಡೆದ ಘಟನೆಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯ್ತು. ಬಾಯ್ತೆರೆದ ಚರಂಡಿಗೆ ಆಟವಾಡ್ತಿದ್ದ ಮಗು ಬಿದ್ದು ಉಸಿರು ಚೆಲ್ಲಿತ್ತು. ಅನ್ನದಾತರು ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಕ್ತಿಲ್ಲ ಅಂತ ಕಂಗಾಲಾದ್ರು. ಇವೆಲ್ಲವೂ ವ್ಯವಸ್ಥೆಯ ವಿರುದ್ಧ ನಾಗರೀಕ ಸಮಾಜ ಪ್ರತಿಭಟಿಸಲೇ ಬೇಕಾದ ವಿಷಯಗಳು. ಪ್ರತಿಭಟನೆಗಳೂ ವ್ಯಕ್ತವಾದ್ವು. ಆದ್ರೆ ಈ ಕಿಸ್ಸಿಂಗ್ ಡೇ ಮಾಡುವ ಜನ ಮಾತ್ರ ಎಲ್ಲೂ ಕಾಣಿಸಿಕೊಳ್ಳಲಿಲ್ಲ.. ಈಗ ಪ್ರತಿಭಟನೆ ಮಾಡಿ ಎಲ್ಲರ ಕಣ್ಣು ತೆರೆಸುತ್ತಾರಂತೆ. ರಾಜ್ಯದಲ್ಲಿ ಅದೆಷ್ಟೋ ಭಾಗಗಳಲ್ಲಿ ಹೆಣ್ಣುಮಕ್ಕಳು ಮುಟ್ಟಾದರೆ ಊರಿನಿಂದ ಹೊರಗೆ ಇಡುವ ಅನಿಷ್ಟ ಪದ್ದತಿ ಇದೆ. ಅಂತದ್ದನ್ನ ವಿರೋಧಿಸಿ ಇವ್ರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿ ಆರೀತಿಯ ಅನಿಷ್ಟ ಪದ್ದತಿಗೆ ಅಂತ್ಯ ಹಾಡಲಿ. ಪ್ರತಿಭಟನೆ, ಹೋರಾಟ ಮಾಡುವವರಿಗೆ ವಿಷಯಗಳು ತುಂಬಾ ಇವೆ. ಅದನ್ನ ಮಾಡೋದನ್ನ ಬಿಟ್ಟು ವಿಕೃತ ಹುಚ್ಚಾಟ ಮಾಡಿ ಪ್ರಚಾರ ಪಡೆದುಕೊಳ್ಳುವ ಈ ಸ್ವಯಂಘೋಷಿತ ಪ್ರಗತಿಪರರಿಗೆ ಏನ್ ಹೇಳುವುದು. ಹಾಗಂತ ನೈತಿಕ ಪೊಲೀಸ್ ಗಿರಿಯ ವಿರುದ್ಧ ಹೋರಾಡಬಾರದು ಅಂತಲ್ಲ. ಎಲ್ಲ ಹೋರಾಟಗಳಿಗೂ, ಪ್ರತಿಭಟನೆಗಳಿಗೂ ಒಂದು ಇತಿ ಮಿತಿ ಇದ್ದೇ ಇದೆ. ವಿಧಾನಸೌದಕ್ಕೆ ಮುತ್ತಿಗೆ ಹಾಕ್ತೀವಿ ಅಂತ ಅದನ್ನ ದ್ವಂಸ ಮಾಡಿಬಿಡ್ತೀವಿ ಅಂತ ಅಬ್ಬರಿಸಿಬಿಟ್ಟರೆ ಹೇಗೆ.
ಇಷ್ಟಕ್ಕೂ ಇವರು ಕಿಸ್ಸಿಂಗ್ ಡೇ ಮಾಡಿ ಸಮಾಜಕ್ಕೆ ಏನ್ ಮೆಸೇಜ್ ಕೊಡ್ತಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ನಡೆಯೋದನ್ನ ನಡುಬೀದಿಯಲ್ಲಿ ಮಕ್ಕಳು ಮಹಿಳೆಯರ ಮುಂದೆ ಅಸಹ್ಯ ಮಾಡಿ ಅದೇನು ಸಂದೇಶ ನೀಡಲು ಹೊರಟಿದ್ದಾರೋ..? ಯಾವುದೇ ಒಂದು ಪ್ರತಿಭಟನೆ ಮಾಡಿದ್ರೂ ಅದಕ್ಕೊಂದು ಉದ್ದೇಶ ಇರ್ಬೇಕು. ಈ ರೀತಿ ಕಿಸ್ಸಿಂಗ್ ಡೇ ಮಾಡಿ ಪ್ರತಿಭಟನೆ ಮಾಡ್ತೀವಿ ಅನ್ನೋರಿಗೆ ಆ ರೀತಿಯ ಯಾವ ಉದ್ದೇಶವೂ ಇದ್ದಂತಿಲ್ಲ. ನೈತಿಕ ಪೊಲೀಸ್ ಗಿರಿ ಸಮಾಜಕ್ಕೆ ಎಷ್ಟು ಅಪಾಯವೋ ಅದೇ ರೀತಿ ಈ ಕಿಸ್ಸಿಂಗ್ ಡೇ ಹುಚ್ಚಾಟವೂ ಅಷ್ಟೇ ಅಪಾಯ. ಈ ಕಿಸ್ಸಿಂಗ್ ಡೇ ಮಾಡಿ ಮಹಾನ್ ಪ್ರಗತಿಪರರ ರೀತಿ ಪೋಸ್ ಕೊಡುವ ಇದೇ ಮಂದಿ ನಾಳೆ ಏಯ್ಡ್ಸ್ ದಿನಾಚರಣೆ ದಿನ ಜಾಗೃತಿ ಮೂಡಿಸ್ತೀವಿ ಅಂತ ಬಾವುಟ ಹಿಡಿದುಕೊಂಡು ಬರ್ತಾರೆ. ಇವತ್ತು ನಡುಬೀದಿಯಲ್ಲಿ ಕಿಸ್ಸಿಂಗ್ ಡೇ ಮಾಡಿ ಪ್ರೊಟೆಸ್ಟ್ ಮಾಡ್ತೀವಿ ಅನ್ನೋರು ನಾಳೆ ಮತ್ತೊಂದನ್ನ ಮಾಡಿ ಪ್ರತಿಭಟಿಸ್ತೀವಿ ಅಂತಾರೆ. ಇವ್ರು ಕಿಸ್ಸಿಂಗ್ ಡೇ ಮಾಡ್ತೀವಿ ಅಂತ ತಕ್ಷಣ ತ್ರಿವಿಕ್ರಮನಂತೆ ಅದನ್ನ ವಿರೋಧಿಸೋಕೆ ಎದ್ದು ನಿಂತಿರೋದು ಹೋಮ್ ಸ್ಟೇ ವೀರಭಾಹು ಪ್ರಮೋದ್ ಮುತಾಲಿಕ್. ಅವ್ರು ಕಿಸ್ಸಿಂಗ್ ಡೇ ಮಾಡಿದ್ರೆ ನಾವು ಅದಕ್ಕೆ ಅಡ್ಡಿಪಡಿಸ್ತೀವಿ. ಕಾನೂನು ಸುವ್ಯವಸ್ಥೆಗೆ ದಕ್ಕೆ ಬಂದ್ರೆ ಅದಕ್ಕೆ ಶ್ರೀ ರಾಮಸೇನೆ ಹೊಣೆ ಅಲ್ಲ ಅಂತ ನಡುಬೀದಿಯಲ್ಲಿ ನಿಂತು ಪ್ರಮೋದ್ ಮುತಾಲಿಕ್ ಅಬ್ಬರಿಸ್ತಾಯಿದ್ದಾರೆ. ಕಿಸ್ಸಿಂಗ್ ಡೇ ಮಾಡೋರಿಗೂ ಬೇಕಾಗಿರೋದು ಕೂಡ ಇದೇ ವಿವಾದ ಸೃಷ್ಟಿಯಾಗ್ಬೇಕು ಅದಕ್ಕೆ ರಾಷ್ಟ್ರಮಟ್ಟದಲ್ಲಿ ಪ್ರಚಾರ ಸಿಗ್ಬೇಕು. ತಾವು ಮಹಾನ್ ಪ್ರಗತಿಪರರ ರೀತಿ ಪೋಸ್ ಕೊಡಬೇಕು ಅನ್ನೋದು. ಕಿಸ್ಸಿಂಗ್ ಡೇ ಗೆ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗ್ತಾಯಿದೆ. ಇದು ಕೇವಲ ಹಿಂದೂ ಪರ ಸಂಘಟನೆಗಳ ವಿರೋದ ಅನ್ನೋ ರೀತಿ ಸ್ವಯಂಘೋಷಿತ ಬುದ್ದಿಜೀವಿಗಳು ಉಯಿಲೆಬ್ಬಿಸ್ತಾಯಿದ್ದಾರೆ. ಒಂದು ಅಸಹ್ಯವನ್ನ ವಿರೋಧಿಸಲಿಕ್ಕೆ ಯಾರಾದರೇನು. ಕಿಸ್ಸಿಂಗ್ ಡೇ ಅನ್ನ ವಿರೋಧಿಸೋರು ಸಂಕುಚಿತ ಮನೋಬಾವದವರೂ ಅಲ್ಲ, ಕಿಸ್ಸಿಂಗ್ ಡೇ ಬೆಂಬಲಿಸೋರು ಮಹಾನ್ ಪ್ರಗತಿಪರರೂ ಅಲ್ಲ. ನಮ್ಮ ಸಂಸ್ಕೃತಿಗೆ ವಿರುದ್ಧವಾಗಿರೋದನ್ನ ಸಾರ್ವಜನಿಕವಾಗಿ ಮಾಡಿ ಇವ್ರು ಸಮಾಜಕ್ಕೆ ಅದೇನು ಸಂದೇಶ ಕೊಡೋಕೆ ಹೊರಟಿದ್ದಾರೆ ಅನ್ನೋದಕ್ಕೆ ಅವರ ಬಳಿ ಉತ್ತರವೇ ಇಲ್ಲ. ಕಿಸ್ಸಿಂಗ್ ಡೇ ಅನ್ನೋ ಹುಚ್ಚಾಟವನ್ನ ವಿರೋಧಿಸಲಿಕ್ಕೆ ಸಮಾನ್ಯ ಪ್ರಜ್ಞೆ ಇದ್ದರಷ್ಟೆ ಸಾಕು. ಇಂತಹ ಹುಚ್ಚಾಟವನ್ನ ವಿರೋಧಿಸೋದ್ರಲ್ಲಿ ಮಹಿಳೆಯರೇ ಹೆಚ್ಚಿದ್ದಾರೆ ಅನ್ನೋದು ಕೂಡ ಅಷ್ಟೇ ಸತ್ಯ. ಈ ಹುಚ್ಚಾಟವನ್ನ ವಿರೋಧಿಸುವವರೆಲ್ರೂ ಹಿಂದೂ ಪರ ಹೋರಾಟಗಾರರು, ಕೋಮುವಾದಿಗಳು ಅನ್ನುವಂತೆ ಬಿಂಬಿಸಲಾಗುತ್ತಿದೆ. ಈ ಕಿಸ್ಸಿಂಗ್ ಡೇ ಯಂತಾ ಅಸಹ್ಯವನ್ನ ವಿರೋಧಿಸಲಿಕ್ಕೆ ಯಾವುದೇ ಜಾತಿಯಾಗ್ಲೀ ಧರ್ಮವಾಗಲೀ ಬೇಕಾಗಿಲ್ಲ ಅನ್ನೋದು ಅಷ್ಟೇ ಸತ್ಯ… ಒಂದು ಸಾಮಾಜಿಕ ಅಸಹ್ಯವನ್ನ ದೈರ್ಯವಾಗಿ ವಿರೋಧಿಸುವ ಮನಸ್ಸು ಬೇಕಷ್ಟೇ. ಮಹಾನ್ ಪ್ರಗತಿಪರರ ರೀತಿ ಮಾತಾಡಿ ಕಿಸ್ಸಿಂಗ್ ಡೇ ಯನ್ನ ಬೆಂಬಲಿಸೋರ ಆತ್ಮಕ್ಕೆ ಶಾಂತಿ ಸಿಗಲಿ…!!!
Like this:
Like ಲೋಡ್ ಆಗುತ್ತಿದೆ...