ಡಬ್ಬಿಂಗ್ ಬೇಡವೇ ಬೇಡಾ ಅಂತ ಅಬ್ಬರಿಸುತ್ತಿರುವವರಿಗೆ ಸಮಸ್ಯೆ ಇರುವುದು ಅವರ ಅಸ್ಥಿತ್ವದ ಬಗ್ಗೆ ಮಾತ್ರ …..
ಜನವರಿ 26, 2014 ನಿಮ್ಮ ಟಿಪ್ಪಣಿ ಬರೆಯಿರಿ
ಕನ್ನಡ ಚಿತ್ರೋಧ್ಯಮಕ್ಕೆ ಡಬ್ಬಿಂಗ್ ಬೇಕಾ, ಬೇಡವಾ ಎಂಬ ಬಗ್ಗೆಯೇ ದೊಡ್ಡ ಚರ್ಚೆ ನಡೆಯುತ್ತಿದೆ. ಬೇಕು ಅನ್ನುವವರೂ ಹೋರಾಟ ಮಾಡ್ತೀವಿ ಅಂತಾರೆ. ಬೇಡ ಅನ್ನುವವರೂ ಕೂಡ ಹೋರಾಟ ಮಾಡ್ತೀವಿ ಅಂತಿದ್ದಾರೆ. ಇವ್ರು ಹೋರಾಟನಾದ್ರೂ ಮಾಡ್ಕೊಳ್ಳಿ, ಹಾರಾಟವಾದ್ರೂ ಮಾಡಿಕೊಳ್ಳಲಿ. ಆದ್ರೆ ನಿಜಕ್ಕೂ ಕನ್ನಡಕ್ಕೆ ಡಬ್ಬಿಂಗ್ ಬೇಕಾ,ಬೇಡವಾ ಅಂತ ನಿರ್ಧರಿಸಬೇಕಾದವರು ಈ ನಾಡಿನ ಜನ. ಈಗ ಡಬ್ಬಿಂಗ್ ಬೇಡ ಅಂತ ಅಬ್ಬರಿಸಿ ಬೊಬ್ಬಿರಿಯುತ್ತಿರುವವರು ಅದೇ ದೈರ್ಯದಿಂದ ಹೇಳಲಿ ನಾವು ರೀಮೇಕ್ ಮಾಡುವುದಿಲ್ಲ ಅಂತ. ಯಾವ ನಟನೂ, ನಿರ್ದೇಶಕನೂ ಈ ಮಾತನ್ನ ಹೇಳುವುದಿಲ್ಲ. ಪರಭಾಷಾ ಚಿತ್ರಗಳನ್ನ ಹೇಗಿದೆಯೊ ಹಾಗೆ ಭಟ್ಟಿ ಇಳಿಸಿ ಕನ್ನಡಿಗರ ಜೇಬಿಗೆ ಕತ್ತರಿ ಹಾಕುವುದರಲ್ಲೇ ಚಿತ್ರೋಧ್ಯಮದ ಬಹುತೇಕರು ಮಾಡ್ತಾಯಿದ್ದಾರೆ. ಯಾಕಂದ್ರೆ ಕಳೆದ ವರ್ಷ ಬಿಡುಗಡೆಯಾದ 127 ಚಿತ್ರಗಳಲ್ಲಿ 87 ಕ್ಕೂ ಅಧಿಕ ಚಿತ್ರಗಳು ರೀಮೇಕ್ ಚಿತ್ರಗಳು. ತೆಲುಗು,ತಮಿಳು,ಹಿಂದಿ ಚಿತ್ರಗಳನ್ನ ನಮ್ಮ ಜನ ಇಲ್ಲಿ ಬಿಡುಗಡೆಯಾದಾಗಲೇ ನೋಡುತ್ತಾರೆ. ಅದನ್ನ ಈ ಸೊ ಕಾಲ್ಡ್ ಚಿತ್ರೋಧ್ಯಮಿಗಳು ಯಥಾವತ್ ಒಂದು ಡೈಲಾಗ್ ಕೂಡ ಬದಲಾಯಿಸದೆ ಭಟ್ಟಿ ಇಳಿಸುತ್ತಾರೆ. ಹಾಗೆ ರೀಮೇಕ್ ಸಿನಿಮಾ ನೋಡುವ ಬದಲು ಅದೇ ಚಿತ್ರವನ್ನ ಡಬ್ಬಿಂಗ್ ನಂತ್ರ ನಮ್ಮ ಭಾಷೆಯಲ್ಲೇ ನೊಡಬಹುದಲ್ಲವಾ. ಇದ್ರಿಂದ ಕರ್ನಾಟಕ ದಲ್ಲಿ ಪರಬಾಷಾ ಚಿತ್ರಗಳ ಪ್ರಭಾವ ಸ್ವಲ್ಪವಾದ್ರೂ ಕಡಿಮೆಯಾಗಿ ಉತ್ತಮ ಚಿತ್ರಗಳನ್ನ ನಮ್ಮ ಭಾಷೆಯಲ್ಲಿಯೇ ನೋಡಬಹುದು. ಜೊತೆಗೆ ಕನ್ನಡದಲ್ಲಿ ಹೆಚ್ಚಾಗಿರುವ ಈ ರೀಮೇಕ್ ಹಆವಳಿಯೂ ತಪ್ಪುತ್ತದೆ. ಪರಭಆಷೆಯ ಚಿತ್ರ ನಮ್ಮ ನಆಡಿನಲ್ಲಿ ನಮ್ಮದೇ ಭಆಷೆಯಲ್ಲಿ ಬಿಡುಗಡೆಯಾದ್ರೆ ಈ ಚಿತ್ರೋಧ್ಯಮದ ಮಂದಿಗೆ ರೀಮೇಕ್ ಸಿನಿಮಆಗಳನ್ನ ಮಆಡಲು ಆಗುವುದಿಲ್ಲವಲ್ಲ. ಒಂದು ವೇಳೆ ಮಾಡಿದ್ರೂ ಒಂದು ಸಾರಿ ಕನ್ನಡದಲ್ಲಿಯೇ ನೋಡಿದ ಸಿನಿಮಆವನ್ನ ಮತ್ತೆ ಯಾರು ತಾನೇ ನೋಡ್ತಾರೆ. ಹಾಗೇನಾದ್ರೂ ಡಬ್ಬಿಂಗ್ ಗೆ ಅವಕಾಶ ಕೊಟ್ರೆ ಈ ರೀಮೇಕ್ ಸಿನಿಮಾ ಮಂದಿಯಿದ್ದಾರಲ್ಲ ಅವರಿಗೆ ಸಮಸ್ಯೆಯಾಗುತ್ತದೆಯೇ ವಿನಃ ಸ್ವಂತ ಚಿತ್ರ ಮಾಡುವವನಿಗೆ ಡಬ್ಬಿಂಗ್ ಸಮಸ್ಯೆಯೇ ಅಲ್ಲ. ಆದ್ರೆ ಈ ಮಾತನ್ನ ಕೆಲವರು ಒಪ್ಪುವುದಿಲ್ಲ. ಯಾಕಂದ್ರೆ ಅದು ಅವರ ಅಸ್ಥಿತ್ವದ ಪ್ರಶ್ನೆ. ಬೇರೇ ಬಾಷೆಯ ಚಿತ್ರಗಳನ್ನ ರೀಮೇಕ್ ಮಾಡುವಷ್ಟು ಸುಲಭವಾಗಿ ಸ್ವಮೇಕ್ ಚಿತ್ರ ಮಾಡಲಾಗದವರು ಮಾತ್ರ ಡಬ್ಬಿಂಗ್ ವಿರೋಧಿಸುತ್ತಿದ್ದಾರೆ. ಬೇರೇ ಭಾಷೆ ಚಿತ್ರ ಇಲ್ಲಿ ಕನ್ನಡದಲ್ಲಿ ಡಬ್ ಆದ್ರೆ ಕನ್ನಡಿಗರು ಉತ್ತಮ ಚಿತ್ರಗಳನ್ನ ನಮ್ಮ ಭಾಷೆಯಲ್ಲೇ ನೋಡಬಹುದು. ಹಾಗೇನಾದ್ರೂ ಡಬ್ಬಿಂಗ್ ಗೆ ಅವಕಾಶ ನೀಡಿದ್ರೆ ಬೇರೇ ಭಾಷೆ ಚಿತ್ರಗಳನ್ನ ರೀಮೇಕ್ ಮಾಡಲು ಆಗುವುದಿಲ್ಲವಲ್ಲ. ಹಾಗೊಮ್ಮೆ ಮಾಡಿದ್ರೂ ಈ ಮೊದಲೇ ನೋಡಿದ ಸಿನಿಮಾವನ್ನ ಯಾರು ತಾನೇ ನೋಡ್ತಾರೆ. ಹಾಗಾಗಿಯೇ ಇದು ಕೆಲವು ಭಟ್ಟಿ ಇಳಿಸುವವರ ಅಸ್ಥಿತ್ವದ ಪ್ರಶ್ನೆ ಅಂತ. ಇವತ್ತು ಡಬ್ಬಿಂಗ್ ಬೇಡವೇ ಬೇಡಾ ಅಂತ ಅಬ್ಬರಿಸುತ್ತಿರುವವರಿಗೆ ನಿಜಕ್ಕೂ ಸಮಸ್ಯೆ ಇರುವುದು ಅವರ ಅಸ್ಥಿತ್ವದ ಪ್ರಶ್ನೆಯಷ್ಟೇ… ಆದ್ರೆ ಅವರ ವರಸೆ ಇರೋದೇ ಬೇರೆ. ಡಬ್ಬಿಂಗ್ ಗೆ ಅವಕಾಶ ನೀಡಿದ್ರೆ ಕನ್ನಡ ಭಾಷೆ ಹಾಳಾಗಿ ಹೋಗುತ್ತೆ, ನಮ್ಮ ಸಂಸ್ಕೃತಿ ಹಾಳಾಗಿ ಹೋಗುತ್ತೆ ಅಂತ. ಹಾಗಾದ್ರೆ ಕನ್ನಡ ಸಿನಿಮಾಗಳಲ್ಲಿ ಬರೋದೆಲ್ಲ ನಮ್ಮ ಸಂಸ್ಕೃತಿಯ ಪ್ರತಿಬಿಂಬನಾ. ಹಾಗೆ ತಿಳಿದುಕೊಳ್ಳೋಕೆ ಕನ್ನಡ ಪ್ರೇಕ್ಷಕನೇನೂ ದಡ್ಡನಲ್ಲ. ಸಿನಿಮಾ ಮತ್ತು ನಿಜ ಜೀವನದ ನಡುವಿನ ವ್ಯತ್ಯಾಸ ಏನೂ ಅಂತ ಜನರಿಗೂ ಗೊತ್ತಿದೆ. ಇವರು ತೋರಿಸುವ ಮಚ್ಚು ಲಾಂಗು ಸಿನಿಮಾಗಳು, ಐಟಂ ಸಾಂಗ್ ಗಳು, ಹಸಿ ಹಸಿ ರೊಮ್ಯಾನ್ಸ್ ಸೀನ್ ಗಳು ಕನ್ನಡ ಸಂಸ್ಕೃತಿಯನ್ನ ಬಿಂಬಿಸುತ್ತವಾ? ನಿಜಕ್ಕೂ ಇಲ್ಲ.
ಇನ್ನು ಡಬ್ಬಿಂಗ್ ಮಾಡೋದ್ರಿಂದ ಕನ್ನಡ ಚಿತ್ರರಂಗ ನಾಶವಾಗುತ್ತೆ ಅನ್ನೋ ವಾದ ಮಾಡುವವರು ಒಂದು ವಿಷಯವನ್ನ ಅರ್ಥ ಮಾಡಿಕೊಳ್ಳಬೇಕು.ದೇಶದ ಎಲ್ಲ ಭಾಷೆಗಳಲ್ಲೂ ಡಬ್ಬಿಂಗ್ ಗೆ ಅವಕಾಶವಿದೆ. ಹಾಗಂತ ಪ್ರಾದೇಶಿಕ ಭಾಷೆಗಳ ಚಿತ್ರರಂಗಗಳೇನೂ ನಾಶವಾಗಿಲ್ಲ. ಬದಲಿಗೆ ಸೃಜನಶೀಲತೆ ಹೆಚ್ಚಾಗಿ ಜನರಿಗೆ ಹೊಸತನ್ನೇನಾದರೂ ಕೊಡುವ ಪ್ರಯತ್ನಗಳು ನಡೆಯುತ್ತಿವೆ. ಕನ್ನಡದಲ್ಲಿ ಡಬ್ಬಿಂಗ್ ಗೆ ಅವಕಾಶ ನೀಡಿದ್ರೆ ರೀಮೇಕ್ ಸಿನಿಮಾಗಳು ಕಡಿಮೆಯಾಗಿ ಹೊಸತನದ ಚಿತ್ರಗಳನ್ನ ನಿರ್ಮಿಸುವ ಕ್ರಿಯಾಶೀಲತೆಯೂ ಬೆಳೆಯುತ್ತೆ. ಡಬ್ಬಿಂಗ್ ವಿರೋಧಿಸೋದು ಮಾಹಿತಿ ಮತ್ತು ಮನರಂಜನೆಯ ಸ್ವಾತಂತ್ರ್ಯವನ್ನ ಹತ್ತಿಕ್ಕುವ ಪ್ರಯತ್ನವಷ್ಟೇ. ಯಾವುದನ್ನ ನೋಡಬೇಕು, ಯಾವುದನ್ನ ನೋಡಬಾರದು ಅನ್ನೊದನ್ನ ನಿರ್ಧರಿಸೋದು ಪ್ರೇಕ್ಷಕನೇ ಹೊರತು ಚಿತ್ರರಂಗದವರಲ್ಲ. ಇನ್ನು ಡಬ್ಬಿಂಗ್ ಗೆ ಅವಕಾಶ ಕೊಟ್ರೆ ಕನ್ನಡದ ಕಲಾವಿದರು,ಕಾರ್ಮಿಕರುರು ಬೀದಿಗೆ ಬೀಳುತ್ತಾರೆ ಅನ್ನೋದು ಡಬ್ಬಿಂಗ್ ವಿರೋಧಿಗಳ ವಾದ. ಹಾಗಾದ್ರೆ ಯಾವ ಕನ್ನಡ ಚಿತ್ರವನ್ನ ಸಂಪೂರ್ಣವಾಗಿ ಕನ್ನಡಿಗರೇ ನಿರ್ಮಿಸುತ್ತಿದ್ದಾರೆ. ಯಾವ ಚಿತ್ರದಲ್ಲಿ ನೋಡಿದ್ರೂ ಪರಭಾಷಾ ಹೀರೊಯಿನ್ ಗಳು, ಮ್ಯೂಸಿಕ್ ಡೈರೆಕ್ಟರ್ ಗಳು, ಗಾಯಕರು, ತಂತ್ರಜ್ಞರೇ ಇರ್ತಾರೆ. ಹಾಗೆ ಡಬ್ಬಿಂಗ್ ಅನ್ನ ವಿರೋಧಿಸುವವರನ್ನ ಕೇವಲ ಕನ್ನಡಿಗರೇ ಸೇರಿ ಚಿತ್ರಗಳನ್ನ ನಿರ್ಮಿಸಿ ಅಂತ ಕೇಳಿ ನೋಡಿದ್ರೆ ಆಕಾಶದಲ್ಲಿ ಕಾಗೆ ಹಾರ್ತಾಯಿದೆಯಾ ಅಂತ ನೋಡ್ತಾರೆಯೇ ವಿನಃ ಈ ಪ್ರಶ್ನೆಗೆ ಉತ್ತರಿಸೋಲ್ಲ. ಇಲ್ಲಿ ಸಿನಿಮಾಗಳನ್ನ ಮಾಡಲು ಪರಭಾಷಿಕರು ಬೇಕು ಆದ್ರೆ ಪರಭಾಷಾ ಸಿನಿಮಾಗಳು ಮಾತ್ರ ಡಬ್ಬಿಂಗ್ ಆಗಬಾರದು ಅಂದ್ರೆ ಯಾವ ನ್ಯಾಯ. ಕನ್ನಡದ ಚಿತ್ರಗಳನ್ನೂ ಕೂಡ ಡಬ್ಬಿಂಗ್ ಮಾಡಿ ಅಕ್ಕ ಪಕ್ಕದ ರಾಜ್ಯಗಳಲ್ಲಿ ಬಿಡುಗಡೆ ಮಾಡಿ ಕಾಸು ಮಾಡಿಕೊಳ್ಳುವವರಿಗೆ ಇಲ್ಲಿ ಡಬ್ಬಿಂಗ್ ಬೇಡಾ ಎನ್ನುವ ಮಡಿವಂತಿಕೆ ಯಾಕೆ. ಇಲ್ಲಿನ ಸಿನಿಮಾಗಳು ಬೇರೆ ಭಾಷೆಗಳಲ್ಲಿ ಡಬ್ ಆದ್ರೆ ಅಲ್ಲಿನ ಕಾರ್ಮಿಕರು ಕೆಲಸ ಕಳೆದುಕೊಳ್ಳುವುದಿಲ್ಲವಾ… ಹಾಗಂತ ಕನ್ನಡ ಚಿತ್ರರಂಗದಲ್ಲೇನೂ ಲಕ್ಷಾಂತರ ಮಂದಿ ಕೆಲಸ ಮಾಡುತ್ತಿಲ್ಲ. ಕೆಲವೇ ಸಾವಿರದಷ್ಟಿರುವ ಕಾರ್ಮಿಕರಿಗಾಗಿ ಕನ್ನಡಿಗರ ಆಯ್ಕೆ ಸ್ವಾತಂತ್ರ್ಯವನ್ನೇಕೆ ಕಿತ್ತುಕೊಳ್ಳಬೇಕು. ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ ರೈತರಿಗೆ, ಕೂಲಿ ಕಾರ್ಮಿಕರಿಗೆ, ಚಿಲ್ಲರೆ ಅಂಗಡಿಯವರಿಗೆ ಬಹು ರಾಷ್ಟ್ರೀಯ ಕಂಪನಿಗಳಿಂದ ತೊಂದರೆಗೊಳಗಾಗಿಲ್ಲವೇ.ಅದನ್ನ ನೋಡಿದ್ರೆ ಕೇವಲ ಸಾವಿರದಷ್ಟಿರುವ ಚಿತ್ರರಂಗದ ಕಾರ್ಮಿಕರು ಬೀದಿಗೆ ಬೀಳ್ತಾರೆ ಅಂತ ಹೋರಾಟ ಮಾಡ್ತೀವಿ ಅಂತ ಹಾರಾಡಿದ್ರೆ ಇವರಿಗೆ ಏನೆನ್ನಬೇಕು. ನಿಜಕ್ಕೂ ಕನ್ನಡಕ್ಕೆ, ಕನ್ನಡಿಗರಿಗೆ ಸಮಸ್ಯೆಯಾದಾಗ, ನೆಲ, ಜಲದ ವಿಷಯ ಬಂದಾಗ ಇಷ್ಟು ಉತ್ಸಾಹ ತೊರದ ಈ ಚಿತ್ರೋಧ್ಯಮದ ಮಂದಿ ಈಗ ಅವರ ಅಸ್ಥಿತ್ವದ ಪ್ರಶ್ನೆ ಬಂದಾಗ ನಾವು ಮತ್ತೊಂದು ಗೋಕಾಕ್ ಚಳುವಳಿ ಮಾಡಿಬಿಡ್ತೀವಿ ಅಂತ ಬಡಬಡಿಸುತ್ತಿದ್ದಾರೆ…
ಈಗ ತಮ್ಮ ಹೊಟ್ಟೆಪಾಡಿಗಾಗಿ ಈ ಸಿನಿಮಾ ಮಂದಿ ಕನ್ನಡ ನಾಶವಾಗಿಬಿಡುತ್ತೆ ಅಂತ ಭಾಷೆಯನ್ನ ಅಡವಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸ್ತಾಯಿದ್ದಾರೆ. ಅಸಲಿಗೆ ಈಗ ಬರುತ್ತಿರುವ ಸಿನಿಮಾಗಳಿಂದ ಕನ್ನಡವೇನೂ ಉದ್ಧಾರವಾಗುತ್ತಿಲ್ಲ. ಬದಲಿಗೆ ಕನ್ನಡ ಬೆಳೆಯುತ್ತಿರುವುದು ಸಾಹಿತಿಗಳಿಂದ, ಕನ್ನಡದಲ್ಲಿ ಆಗುತ್ತಿರುವ ಉತ್ತಮ ಸಾಹಿತ್ಯಿಕ ಪ್ರಯತ್ನಗಳಿಂದ. ಆ ರೀತಿಯ ಪ್ರಯತ್ನ ಕನ್ನಡ ಚಿತ್ರರಂಗದಲ್ಲೂ ಆಗಬೇಕಾದ್ರೆ ಇಲ್ಲಿ ಡಬ್ಬಿಂಗ್ ಗೆ ಅವಕಾಶ ನೀಡ್ಬೇಕು. ಆ ಮೂಲಕ ರೀಮೇಕ್ ಚಿತ್ರಗಳ ಹಾವಳಿ ಕಡಿಮೆಯಾಗಿ ಉತ್ತಮ ಕ್ರಿಯಾಶೀಲ ಚಿತ್ರಗಳು ಕನ್ನಡದಲ್ಲಿ ತಯಾರಾಗುವಂತಾಗಲಿ. ಜಗತ್ತಿನ ಅತ್ಯುತ್ತಮ ಕೃತಿಗಳು ಕನ್ನಡಕ್ಕೆ ಅನುವಾದವಾಗ್ತಾನೇ ಇವೆ. ಇದ್ರಿಂದ ಕನ್ನಡ ಸಾಹಿತ್ಯವೇನೂ ನಾಶವಾಗಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಈ ವಿಷಯವನ್ನ ಮೊದಲು ಈ ಡಬ್ಬಿಂಗ್ ವಿರೋಧಿಗಳು ಅರ್ಥ ಮಾಡಿಕೊಳ್ಳಲಿ… ಕನ್ನಡಕ್ಕೆ ಡಬ್ಬಿಂಗ್ ಬೇಡಾ ಅಂತ ಈ ಹಿಂದೆ ಹೊರಾಟ ನಡೆದಾಗ ಇದ್ದ ಪರಿಸ್ಥಿತಿ, ಈಗಿನ ಪರಿಸ್ಥಿತಿ ತೀರಾ ಭಿನ್ನ. ಆಗ ಕನ್ನಡದಲ್ಲಿ ಕೆಲವೇ ಕೆಲವು ಚಿತ್ರಗಳು ನಿರ್ಮಾಣವಾಗ್ತಾಯಿದ್ದವು, ಕಿರುತೆರೆ ಎಂಬ ಉಧ್ಯಮವೇ ಇರಲಿಲ್ಲ. ಆಗ ಡಬ್ಬಿಂಗ್ ಅಂದ್ರೆ ಕೇವಲ ಸಿನಿಮಾಕ್ಕೆ ಮಾತ್ರ ಅನ್ವಯವಾಗ್ತಾಯಿತ್ತು. ಆದ್ರೆ ಈಗಿನ ಸ್ಥಿತಿಯೇ ಬೇರೆ. ಈಗ ಕಿರುತೆರೆ ಉಧ್ಯಮ ಬೆಳ್ಳಿತೆರೆಯನ್ನ ಮೀರಿಸುವಂತೆ ಬೆಳೆದುನಿಂತಿದೆ. ಇಂಗ್ಲಿಷ್ ಮತ್ತು ಇತರ ಭಾಷೆಗಳಲ್ಲಿ ಬರುವ ಉತ್ತಮ ಮಾಹಿತಿ ಮತ್ತು ಚಿತ್ರಗಳನ್ನ ಕನ್ನಡದಲ್ಲಿ ಅಷ್ಟು ಹಣ ಖರ್ಚು ಮಾಡಿ ತಯಾರಿಸಲು ಸಾದ್ಯವಾಗದೇ ಇದ್ದಾಗ ಅದನ್ನ ಕನ್ನಡಿಗ ಪ್ರೇಕ್ಷಕ ಏನು ತಪ್ಪು ಮಾಡಿದ್ದಾನೆ ಅಂತ ಮಿಸ್ ಮಾಡಿಕೊಳ್ಳಬೇಕು. ನೋಡಲೇ ಬೇಕು ಅಂದ್ರೂ ಬೇರೇ ಬಾಷೆಯಲ್ಲಿ ಯಾಕೆ ನೊಡಬೇಕು. ನಮ್ಮ ಭಾಷೆಯಲ್ಲಿಯೇ ನೋಡಬಹುದಲ್ಲವಾ. ನ್ಯಾಷನಲ್ ಜೀಯಾಗ್ರಫಿ, ಡಿಸ್ಕವರಿಯಲ್ಲಿ ಬರುವ ಕಾರ್ಯಕ್ರಮಗಳು ನಮ್ಮ ಭಾಷೆಯಲ್ಲಿ ಬಂದರೆ ಅದ್ರಿಂದ ಕನ್ನಡ ಭಾಷೆಯೇ ತಾನೆ ಬೆಲೆಯುವುದು. ಎಲ್ಲದಕ್ಕೂ ಇಂಗ್ಲಿಷ್ ಅಥವಾ ಬೇರೆ ಭಾಷೆಯನ್ನೇ ಅವಲಂಬಿಸುತ್ತಾ ಹೋದ್ರೆ ಮಕ್ಕಳು ಕನ್ನಡ ಭಾಷೆ ಅಪ್ರಯೋಜಕ ಅಂತ ಭಾವಿಸಿ ಕನ್ನಡದ ಬಗ್ಗೆ ಕೀಳಿರೆಮೆ ಬೆಳೆಸಿಕೊಳ್ಳುತ್ತವೆ. ಅದರ ಪರಿಣಾಮ ಈಗಾಗಲೇ ಆಗುತ್ತಿದೆ. ಡಬ್ಬಿಂಗ್ ನಿಂದ ನಮ್ಮ ಕನ್ನಡದ ಮಕ್ಕಳು ಜಗತ್ತಿನ ಅತ್ಯುತ್ತಮ ಮಾಹಿತಿಗಳನ್ನ ನಮ್ಮದೇ ಬಾಷೆಯಲ್ಲಿ ತಿಳಿದುಕೊಳ್ಳಬಹುದಲ್ವಾ….
ಇನ್ನು ಕನ್ನಡಿಗ ಪ್ರೇಕ್ಷಕರಿಗೆ ಈ ಚಿತ್ರರಂಗದ ಮಂದಿ ಬಿಟ್ಟಿಯಾಗೇನೂ ಸಿನಿಮಾ ತೋರಿಸುವುದಿಲ್ಲವಲ್ಲ. ಹಣ ಕೊಟ್ಟು ನೋಡುವ ಪ್ರೇಕ್ಷಕ ಉತ್ತಮ ಚಿತ್ರಗಳು ಯಾವ ಬಾಷೆಯಲ್ಲಿ ಬಂದ್ರೂ ನೋಡಿಯೇ ನೋಡುತ್ತಾನೆ. ಅದು ಕನ್ನಡವಿರಲಿ ಬೇರೆ ಭಾಷೆಯಾಗಿರಲಿ. ಡಬ್ಬಿಂಗ್ ಮಾಡಿದ ಸಿನಿಮಾ ಚೆನ್ನಾಗಿಲ್ಲದಿದ್ರೆ ಪ್ರೇಕ್ಷಕನಿಗೆ ಅದನ್ನ ತಿರಸ್ಕರಿಸುವ ಹಕ್ಕು ಇದ್ದೇ ಇರುತ್ತದೆ. ನೂರು ರೀಮೇಕ್ ಚಿತ್ರಗಳು,ಪರಬಾಷಾ ಚಿತ್ರಗಳು ಬರುವುದರ ಬದಲು ಕೆಲವೇ ಉತ್ತಮ ಚಿತ್ರಗಳು ಬಂದರೂ ಸಾಕು ಚಿತ್ರೋಧ್ಯಮ ಬೆಳೆಯುತ್ತದೆ. ಡಬ್ಬಿಂಗ್ ನಿಂದಲಾದ್ರೂ ರೀಮೇಕ್ ಹಾವಳಿ ಕಡಿಮೆಯಾಗಿ ಉತ್ತಮ ಚಿತ್ರಗಳು,ಉತ್ತಮ ಪ್ರಯತ್ನಗಳು ಕನ್ನಡದಲ್ಲಿಯೂ ಆಗುವಂತಾಗಲಿ. ಡಬ್ಬಿಂಗ್ ಬೇಡಾ ಅಂತ ಅಬ್ಬರಿಸುವವರು ಮೊದಲು ರೀಮೇಕ್ ಕೂಡ ಬೇಡ ಅನ್ನುವ ದೈರ್ಯ ತೋರಿಸಲಿ. ಡಬ್ಬಿಂಗ್ ಬೇಕಾ, ಬೇಡವಾ ಅಂತ ನಿರ್ಧರಿಸಬೇಕಾದವರು ಜನರೇ ಹೊರತು ಚಿತ್ರರಂಗದ ಒಂದು ಗುಂಪಲ್ಲ… ಆಮೇಲೆ ಡಬ್ಬಿಂಗ್ ಬೇಡಾ ಎಂಬ ಬಗ್ಗೆ ಹೋರಾಟಾನಾದ್ರೂ ಮಾಡಿಕೊಳ್ಳಲಿ ಹಾರಾಟಾನಾದ್ರೂ ಮಾಡಿಕೊಳ್ಳಲಿ…