ಹೀಗೊಂದು ಕನಸು …..

ಶೋಬನ್ ಸರ್ಕಾರ್ ಗೆ ಕನಸು ಬಿದ್ದ ಹಾಗೆ ನನಗೂ ನಿನ್ನೆ ರಾತ್ರಿ ಒಂದು ಕನಸು ಬಿತ್ತು. ಪರಪ್ಪನ ಅಗ್ರಹಾರ ಜೈಲಿನ ಕೆಳಗೆ 30 ಅಡಿ ಆಳದಲ್ಲಿ 5000 ಟನ್ ಚಿನ್ನ ಇದೆ ಅಂತ. ಈ ಬಗ್ಗೆ ತಲೆಕೆಡೆಸಿಕೊಳ್ಳಬೇಕಾದಾ ಸೈಕೊ ಜೈಶಂಕರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿದ್ದೆಯ ಮಂಪರಿನಲ್ಲಿದ್ದಾನೆ . ಈ ರಾಜ್ಯದಲ್ಲಿ ಚಿನ್ನ ತೆಗೆಯೋರು ಯಾರೂ ಇಲ್ವಾ…..

ಸಮೋಸದಲ್ಲಿ ಆಲೂ ಇನ್ನೂ ಇದೆ, ಆದ್ರೆ ಬಿಹಾರದಲ್ಲಿ ಈಗ ಲಾಲೂ ಇಲ್ಲ….

ಸಮೋಸದಲ್ಲಿ ಆಲೂ ಎಲ್ಲಿಯವರೆಗೂ ಇರುತ್ತದೊ ಅಲ್ಲಿಯವರೆಗೂ ಲಾಲೂ ಬಿಹಾರದಲ್ಲಿ ಇರುತ್ತಾರೆ. ಇದು ಲಾಲೂ ಪ್ರಸಾದ್ ಯಾದವ್ ಹಿಂದೊಮ್ಮೆ ಹೇಳಿದ ಮಾತು. ಈ ಮಾತು ನಿನ್ನೆ ಮೊನ್ನೆಯವರೆಗೂ ನಿಜವಾಗಿತ್ತೂ ಕೂಡ. ಆದ್ರೆ ಈಗ ಅದು ಕೇವಲ ಲಾಲೂ ಕಂಡಿದ್ದ ಅಲ್ಪಾವದಿ ಕನಸು ಅನ್ನೋದು ಸಾಭೀತಾಗಿದೆ. ಹಸುಗಳು ತಿನ್ನಬೇಕಾದ ಮೇವನ್ನ ಅಡ್ಡಡ್ಡ ತಿಂದು ಮುಗಿಸಿ ರಾಜಾರೋಷವಾಗಿ ಓಡಾಡಿಕೊಂಡಿದ್ದ ಲಾಲೂ ಈಗ ಕಂಬಿಯ ಹಿಂದೆ ಸರಿದಿದ್ದಾರೆ. 17 ವರ್ಷಗಳ ಹಿಂದೆ ಮಾಡಿದ್ದ ಮಣ್ಣು ತಿನ್ನುವ ಕೆಲಸಕ್ಕೆ ಈಗ ಉತ್ತರ ಸಿಕ್ಕಿದೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಅದನ್ನೂ ಅತಿಯಾಗಿ ತಿಂದರೆ ಕುಡಿಯಲೂ ನೀರು ಕೂಡ ಸಿಗುವುದಿಲ್ಲ. ಇದು ಲಾಲೂ ಗೆ ಈಗ ಬಂದಿರುವ ಸ್ಥಿತಿ. ಮೇವು ಹಗರಣದಲ್ಲಿ ಬಾಗಿಯಾಗಿ ಸರ್ಕಾರದ ಹಣ ತಿಂದ ತಪ್ಪಿಗೆ ಲಾಲೂ ಇನ್ನು ಐದು ವರ್ಷ ಜೈಲಿನಲ್ಲಿ ಕಳೆಯಬೇಕಿದೆ. ಇದ್ರಿಂದಾಗಿ ಲಾಲೂ ರಾಜಕೀಯ ಜೀವನವೂ ಬಹುತೇಕ ಮುಗಿದಂತಾಗಿದೆ. ಜನಪ್ರತಿನಿಧಿಗಳು ಎರಡು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೊಳಗಾದರೆ ಸಂಸದ ಸ್ಥಾನ ತಕ್ಷಣದಿಂದಲೇ ರದ್ದಾಗುತ್ತದೆ ಎಂಬ ಸುಪ್ರೀಂ ಕೋರ್ಟ್  ಇತ್ತೀಚೆಗೆ ತೀರ್ಪು ನೀಡಿತ್ತು. ಈ ತೀರ್ಪು ಲಾಲೂ ರಾಜಕೀಯ ಜೀವನಕ್ಕೆ ಮುಳುಗುನೀರು ತಂದಿದೆ. ಜೈಲಿನಿಂದ ಬಿಡುಗಡೆಯಾದ ಮೇಲೆ ಆರು ವರ್ಷಗಳ ನಂತ್ರ ಚುನಾವಣೆಗೆ ಸ್ಪರ್ಧಿಸಲು ಕಳಂಕಿತ ಜನಪ್ರತಿನಿಧಿಗಳಿಗೆ ಸುಪ್ರೀಂ ಕೋಟ್ರ್ ಅವಕಾಶ ನೀಡಿದೆ. ಲಾಲೂ ಗೆ ಈಗ ಐದು ವರ್ಷ ಜೈಲುವಾಸವಾದ್ರೆ ಇನ್ನಾರು ವರ್ಷ ವನವಾಸವಾಗಲಿದೆ. 

ಅವಿಭಜಿತ ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲೂ ಪ್ರಸಾದ್ ಯಾದವ್ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು(ಸದ್ಬಳಕೆ ಯಾವತ್ತಾಗಿತ್ತು?) ಚಾಯ್ ಬಾಸಾ ಜಿಲ್ಲೆಯ ಕಜಾನೆಯಿಂದ 38 ಕೋಟಿ ಹಣವನ್ನ ಅಕ್ರಮವಾಗಿ ತಮ್ಮ ಪಟಾಲಂ ಜೊತೆ ಸೇರಿ ನುಂಗಿ ನೀರು ಕುಡಿದಿದ್ದರು. ಪ್ರಾಮಾಣಿಕ ಐಎಎಸ್ ಅಧಿಕಾರಿ ಅಮಿತ್ ಖರೆ ಈ ಹಗರಣವನ್ನ ಬಯಲಿಗೆಳೆದು ಇವತ್ತು ಲಾಲೂ ಕಂಬಿ ಏಣಿಸುವಂತೆ ಮಾಡಿದವರು. 1996 ರಲ್ಲಿ ಚಾಯ್ ಬಾಸಾ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪಶುಸಂಗೋಪನಾ ಇಲಾಖೆಯಲ್ಲಿ ಹಗರಣ ನಡೆಯುತ್ತಿರುವ ಅನುಮಾನ ಮೂಡಿತ್ತು. ಆ ಅನುಮಾನ ಆಧಾರದ ಮೇಲೆಯೇ ತನಿಖೆ ನಡೆಸಲು ಮುಂದಾಗಿದ್ದರು. ಆಗಲೇ ಗೊತ್ತಾಗಿದ್ದು ಜಂಗಲ್ ರಾಜ್ಯದ ದೊರೆಯಾಗಿದ್ದ ಲಾಲೂ ಹಸುಗಳು ತಿನ್ನುವ ಮೇವಿನ ಹಣವನ್ನೂ ಬಿಡದೆ ನುಂಗಿದ್ದಾರೆ ಅನ್ನುವುದು. ಚಾಯ್ ಬಾಸಾ ಜಿಲ್ಲೆಯ ಪಶುಸಂಗೋಪನಾ ಇಲಾಖೆಯ ಕಚೇರಿಗೆ ದಾಳಿ ಮಾಡಿದ ಅಮಿತ್ ಖರೆಯವರಿಗೆ ಭ್ರಷ್ಟಾಚಾರದ ವಿಶ್ವರೂಪವೇ ಪರಿಚಯವಾಗಿತ್ತು. ಅವತ್ತು ದಾಳಿ ಮಾಡಿ ದಾಖಲೆಗಳನ್ನ ಕಲೆಕ್ಟ್ ಮಾಡಿದ್ದ ಅಮಿತ್ ಖರೆ ಎಲ್ಲವನ್ನೂ ಕ್ಯಾಮೆರಾಲ್ಲಿ ಸೆರೆಹಿಡಿಸಿದ್ದರು. ಇಷ್ಟೆಲ್ಲಾ ಆದ ನಂತ್ರ ಪ್ರಕರಣವನ್ನ ಸಿಬಿಐ ಗೆ ವರ್ಗಾಯಿಸಲಾಯಿತು. ಲಾಲೂ ಅಂದ್ರೆ ಸುಮ್ನೇನಾ. ಸಿಬಿಐ ನ ಆಗಿನ ನಿರ್ಧೇಶಕ ಜೋಗಿಂದರ್ ಮತ್ತು ಅಂದಿನ ಡಿಐಜಿ ಯಾಗಿದ್ದ ರಂಜಿತ್ ಸಿನ್ಹಾ ಮೇಲೆ ಪ್ರಭಾವ ಬೀರಿ ಇಡೀ ಹಗರಣದಿಂದ ಪಾರಾಗಲು ಕಳ್ಳ ದಾರಿ ಹಿಡಿದಿದ್ದರು ಈ ಲಾಲೂ.

ಆದ್ರೆ ಸಿಬಿಐ ನಲ್ಲೂ ಒಬ್ಬ ಹೀರೊ ಇದ್ದರಲ್ಲ, ಅವರೇ ಉಪೇಂದ್ರನಾಥ ಬಿಸ್ವಾಸ್. ಮೇವು ಹಗರಣದ ತನಿಖೆಯ ಹೊಣೆ ಹೊತ್ತಿದ್ದ ಅಂದಿನ ಸಿಬಿಐ ಅಧಿಕಾರಿಯಾಗಿದ್ದ ಉಪೇಂದ್ರನಾಥ್ ಬಿಸ್ವಾಸ್ ಲಾಲೂ ವಿರುದ್ಧ ಬಲವಾದ ಸಾಕ್ಷಿಗಳನ್ನೇ ಕಲೆಹಾಕಿದ್ದರು. ಇಡೀ ಹಗರಣದ ಮೂಲ ಪುರುಷ ಲಾಲೂ ಅನ್ನೋದರ ಬಗ್ಗೆ ತನಿಖೆ ನಡೆಸಿ ಆ ತನಿಖಾ ವರದಿಯನ್ನ ಪಾಟ್ನಾ ಹೈಕೋರ್ಟ್ ಗೆ ಸಲ್ಲಿಸಿದ್ದರು. ವರದಿ ಸಲ್ಲಿಸುವುದಕ್ಕೂ ಮೊದಲೇ ಸಿಬಿಐ ನಲ್ಲಿ ಹೈಡ್ರಾಮ ನಡೆದುಹೋಗಿತ್ತು. ಉಪೇಂದ್ರನಾಥ್ ಬಿಸ್ವಾಸ್ ನೀಡಿದ್ದ ತನಿಖಾ ವರದಿಯನ್ನೇ ತಿರುಚಲಾಗಿತ್ತು. ಆ ಮಟ್ಟದ ಪವರ್ ಲಾಲೂ ಗೆ ಇತ್ತು. ಅಂದಿನ ಸಿಬಿಐ ಡಿಐಜಿ ರಂಜಿತ್ ಸಿನ್ಹಾ ಮತ್ತು ಅಂದಿನ ಸಿಬಿಐ ನಿರ್ಧೇಶಕ ಜೋಗಿಂದರ್ ಸಿಂಗ್ ಉಪೇಂದ್ರನಾಥ್ ಬಿಸ್ವಾಸ್ ನೀಡಿದ್ದ ವರದಿಯನ್ನ ತಿರುಚಿ, ಲಾಲೂ ಗೆ ಅನುಕೂಲವಾಗುವಂತೆ ವರದಿ ಸಿದ್ದಪಡಿಸಿ ಪಾಟ್ನಾ ಹೈ ಕೋರ್ಟ್ಗೆ ಸಲ್ಲಿಸಿದ್ದರು. ಇನ್ನೇನು ಲಾಲೂ ಈ ಪ್ರಕರಣದಲ್ಲಿ ನಿರ್ಧೂಷಿ ಯಾಗಬೇಕಿತ್ತು ಅಷ್ಟೇ. ಅಷ್ಟರಲ್ಲೇ ಸಿಡಿದೆದ್ದಿದ್ದರಲ್ಲ ಉಪೇಂದ್ರನಾಥ ಬಿಸ್ವಾಸ್. ತಾನು ನೀಡಿದ್ದ ತನಿಖಾ ವರದಿಯನ್ನ ತಿರುಚಲಾಗಿದೆ ಅಂತ ನ್ಯಾಯಾಧೀಶರಿಗೆ ಮನವರಿಕೆ ಮಾಡಿ ಮೂಲ ತನಿಖಾ ವರದಿಯನ್ನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸ್ವತಂ ಸಿಬಿಐ ನ ಧಣಿಗಳೇ ಲಾಲೂ ಪಾದಕ್ಕೆ ಶರಣಾಗಿಬಿಟ್ಟಿದ್ದರು. ಆ ಮೂಲಕ ಸಿಬಿಐ ನ ಮಯರ್ಾದೆ ದೇಶದ ಮುಂದೆ ಮೂರಾಬಟ್ಟೆಯಾಗಿಬಿಟ್ಟಿತ್ತು. ಹಾಗೆ ಸಿಬಿಐ ಅಧಿಕಾರಿಯಾಗಿದ್ದ ಉಪೇಂದ್ರನಾಥ ಬಿಸ್ವಾಸ್ ಅವ್ರ ಪ್ರಾಮಾಣಿಕತೆಯಿಂದಾಗಿ ಇವತ್ತು ಲಾಲೂ ಜೈಲಿನಲ್ಲಿ ತಿಗಣೆಗಳೊಂದಿಗೆ ಬೆಡ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ದುರಂತ ಅಂದ್ರೆ ಅವತ್ತು ಮೇವು ಹಗರಣದ ತನಿಖಾ ವರದಿಯನ್ನೇ ತಿರುಚಿದ್ದ ರಂಜಿತ್ ಸಿನ್ಹಾ ಇವತ್ತು ಸಿಬಿಐ ನ ಡೈರೆಕ್ಟರ್. ಅವ್ರನ್ನ ಆ ಜಾಗಕ್ಕೆ ತಂದು ಕೂರಿಸಿದ್ದು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ. ಭ್ರಷ್ಟಾಚಾರದ ಬ್ರಮ್ಹಾಂಡವನ್ನೇ ಹೊತ್ತು ಮೆರೆಯುತ್ತಿರುವ ಕೇಂದ್ರ ಸರ್ಕಾರಕ್ಕೆ ರಕ್ಷಕರು ಯಾರಾದ್ರೂ ಬೇಕಲ್ವ ಅದಕ್ಕಾಗಿಯೇ ಸಿಬಿಐ ಅನ್ನ ತನ್ನ ನಿಯಂತ್ರಣದಲ್ಲಿರಿಸಿಕೊಂಡು ಇಂತಹ ಮಾನಗೇಡಿ ಅಧಿಕಾರಿಗಳನ್ನ ಅದರ ಮುಖ್ಯಸ್ಥರನ್ನಾಗಿಸಿದೆ. ಏನೇ ಆದ್ರೂ ಕಾಲ ಲಾಲೂ ಪ್ರಸಾದ್ ಯಾದವ್ ಗೆ ಸರಿಯಾದ ಉತ್ತರವನ್ನೇ ನೀಡಿದೆ. ಈಗ ಲಾಲೂ ಬಿಹಾರವನ್ನ ಜಂಗಲ್ ರಾಜ್ಯವನ್ನಾಗಿ ಮಾಡಿದ ಅಪಕೀರ್ತಿಯನ್ನ ಹೊತ್ತು ಜೈಲಂತೂ ಸೇರಿದ್ದಾರೆ. ಹಾಗಂತ ಲಾಲೂ ಏನು ತಾವೊಬ್ಬರೇ ಜೈಲು ಸೇರಿಲ್ಲ ತಮ್ಮೊಂದಿಗೆ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಮತ್ತು ಇತರ 45 ಮಂದಿಯೊಂದಿಗೆ ಒಂದು ಟೀಂ ಅನ್ನೇ ಕರೆದೊಯ್ದಿದ್ದಾರೆ.

ಪ್ರಧಾನಿ ಮನಮೋಹನ್ ಸಿಂಗ್ ರಿಂದ ಕಳಪೆ ಆಢಳಿತ , ಬೆಂಗಳೂರಿನಲ್ಲಿ ಯುವಕ ನೇಣಿಗೆ ಶರಣು…!!!

ಪ್ರಧಾನಿ ಮನಮೋಹನ್ ಸಿಂಗ್ ಯಾರಿಗೆ ಎಷ್ಟು ಒಳ್ಳೆಯವರೋ ಗೊತ್ತಿಲ್ಲ. ಆದ್ರೆ ಬೆಂಗಳೂರಿನ ಯುವಕನೊಬ್ಬನ ಪಾಲಿಗೆ ಈ ದೇಶದ ಪ್ರಧಾನಿಯೇ ವಿಲನ್. ಹೌದು ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದಿಂದ ಬೇಸತ್ತ ಯುವಕನೊಬ್ಬ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ…

     ಬೆಂಗಳೂರಿನ ಪೊಲೀಸ್ರ ಕ್ರೈಂ ಲಿಸ್ಟ್ ಗೆ ಹೊಸ ರೀತಿಯ ಪ್ರಕರಣವೊಂದು ದಾಖಲಾಗಿದೆ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಿಂದ ಯಾರು ಬೇಸತ್ತಿದ್ದಾರೊ ಗೊತ್ತಿಲ್ಲ… ಆದ್ರೆ ಬೆಂಗಳೂರಿನ ಯುವಕನೊಬ್ಬನಿಗೆ ಕೇಂದ್ರ ಸರ್ಕಾರದ ಆಡಳಿತ ವೈಕರಿ ಯಾವ ಮಟ್ಟಿಗೆ ಬೇಸರ ಹುಟ್ಟಿಸಿದೆ ಅಂದ್ರೆ ಅದು ನೇಣಿಗೆ ಶರಣಾಗುವಷ್ಟರ ಮಟ್ಟಿಗೆ….ಈ ವಿಚಿತ್ರ ಘಟನೆ ನಡೆದಿರೋದು ಬೆಂಗಳೂರಿನ ಪೀಣ್ಯಾ ಠಾಣಾ ವ್ಯಾಪ್ತಿಯ ಟಿ.ದಾಸರಹಳ್ಳಿಯಲ್ಲಿ. 28 ವರ್ಷದ ಪದವೀಧರ ಸಂತೋಷ್ ನೇಣಿಗೆ ಶರಣಾದ ಯುವಕ. ಮೂಲತಃ ಸಕಲೇಶಪುರದವನಾದ ಈತ 10 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸ ಮಾಡ್ತಿದ್ದ. ಬಾಟಾ ಇಂಡಿಯಾ ಕಂಪನಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡ್ತಿದ್ದ. ನಿನ್ನೆ ಸಂತೋಷ್ ಮನೆಯಲ್ಲಿ ವೇಲ್ ನಿಂದ ನೇಣು ಭಿಗಿದುಕೊಂಡು ಸಾವನ್ನಪ್ಪಿದ್ದಾನೆ. ಸಾವಿಗೆ ಮುನ್ನ ಸಂತೋಷ್ ಮೂರು ಪುಟಗಳ ಡೆತ್ ನೋಟ್ ಬರೆದಿದ್ದಾನೆ.

     ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ಬೆಂಗಳೂರಿಗೆ ಬಂದೆ. ಆದ್ರೆ ಇಲ್ಲಿ ಬಂದ ಮೇಲೆ ಏನೂ ಸಾಧನೆ ಮಾಡಲು ಸಾಧ್ಯವಾಗಲೇ ಇಲ್ಲ. ದೇಶದಲ್ಲಿನ ಬಡವರಿಗೆರ ಸಹಾಯ ಮಾಡಬೇಕು ಅಂದುಕೊಂಡಿದ್ದೆ. ಆದ್ರೆ ಬರುವ 10 ಸಾವಿರ ಸಂಬಳದಲ್ಲಿ ಯಾರಿಗೂ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ. ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರಕಾರದ ಆಡಳಿತ ವೈಕರಿಯಿಂದಾಗಿ ಗಡಿಯಲ್ಲಿ ಅಮಾಯಕ ಸೈನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ದಿನಬೆಳಗಾದ್ರೆ ಪಾಕಿಸ್ತಾನದ ಉಗ್ರಗಾಮಿಗಳು ಈ ದೇಶದ ಸೈನಿಕರ ರಕ್ತ ಹೀರುತ್ತಿದ್ದರೂ ಈ ಸರಕಾರಕ್ಕೆ ಪಾಕಿಸ್ತಾನಕ್ಕೆ ಪ್ರತಿರೋಧ ತೋರುವ ದೈರ್ಯವಿಲ್ಲ. ಮುಂದಿನ ಜನ್ಮ ಅಂತೇನಾದ್ರೂ ಇದ್ರೆ ಇದೇ ದೇಶದಲ್ಲಿ ಸೈನಿಕನಾಗು ಹುಟ್ಟಿ ಭಾರತ ಮಾತೆಯ ಸೇವೆ ಮಾಡುತ್ತೇನೆ….

  ಇದು ಸಂತೋಷ್ ಬರೆದಿರುವ ಮೂರು ಪುಟಗಳ ಡೆತ್ ನೋಟ್ ನ ಸಾರಾಂಶ. ಇತ್ತೀಚೆಗೆ ಕಾಶ್ಮೀರದಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ಓದುತ್ತಿದ್ದ ಸಂತೋಷ್ ಗೆ ಈ ವಿಚಾರದಲ್ಲಿ ಸರ್ಕಾರ ಕೈಕಟ್ಟಿ ಕುಳಿತಿದೆ ಅನ್ನಿಸಿತ್ತು. ಇದ್ರಿಂದ ಬೇಸತ್ತಿದ್ದ ಸಂತೋಷ್ ನಿನ್ನೆ ಆತ್ಮಹತ್ಯೆ ಮಾಡಿಕೊಳ್ಳಲು  ನಿರ್ಧರಿಸಿ ವೇಲ್ ಗೆ ನೇಣು ಭಿಗಿದುಕೊಂಡು ಸಾವನ್ನಪ್ಪಿದ್ದಾನೆ.

ಅಂತೂ ಇಂತೂ ಪ್ರಧಾನಿ ಮನಮೋಹನ್ ಸಿಂಗ್ ಅವ್ರ ಆಡಳಿತ ವೈಕರಿ ಯುವಕನೊಬ್ಬನ ಸಾವಿಗೆ ಕಾರಣವಾಗಿದೆ. ರಾಜಕೀಯ ಪಕ್ಷಗಳು ದಿನ ಬೆಳಗಾದ್ರೆ ಕೇಂದ್ರ ಸರಕಾರದ ಆಡಳಿತದ ಬಗ್ಗೆ ಆರೋಪ-ಪ್ರತ್ಯಾರೋಪ ಮಾಡ್ತಾ ಕಾಲ ಕಳೆಯುತ್ತವೆ. ಆದ್ರೆ ಸಂತೋಷ್ ಪಾಲಿಗೆ ಮಾತ್ರ ಇದು ಗಂಭೀರ ವಿಷಯವಾಗಿ ಕಾಡಿದೆ.

 

%d bloggers like this: