ಕಸಬ್ ನನ್ನೇನೊ ಗಲ್ಲಿಗೆ ಹಾಕುತ್ತೇವೆ…. ಇವರನ್ನೇನು ಮಾಡಬೇಕು……

ಕರ್ನಾಟಕದಲ್ಲಿ ಒಂದು ಕಡೆ ಜನ್ರು ಬರದಿಂದ ಕಂಗೆಟ್ಟು ಕುಡಿಯಲು ನೀರೂ ಇಲ್ಲದೇ ಪರದಾಡ್ತಾಯಿದ್ದಾರೆ… ಬಡ ರೈತ ಮಳೆಗಾಗಿ ಆಕಾಶದತ್ತ ನೋಡ್ತಾ ನೋಡ್ತಾ ಆತ್ಮಹತ್ಯೆಯ ಕಡೆಗೆ ಮುಖ ಮಾಡ್ತಾಯಿದ್ದಾರೆ… ಇನ್ನು ಬೆಂಗಳೂರಂತೂ ಗಾರ್ಡನ್ ಸಿಟಿಯ ಬದಲು ಗಾರ್ಬೇಜ್ ಸಿಟಿಯಾಗ್ತಾಯಿದೆ. ಎಲ್ಲಿ ನೋಡಿದ್ರೂ ಕಸದ ರಾಶಿಯೇ ತಾಂಡವವಾಡ್ತಾಯಿದೆ. ಇನ್ನು ವಿಧ್ಯುತ್ ಕಥೆಯಂತೂ ಹೇಳತೀರದು. ಬೆಂಗಳೂರನ್ನ ಹೊರತುಪಡಿಸಿದರೆ ರಾಜ್ಯಾಧ್ಯಂತ ಕರೆಂಟು ಕಣ್ನಾಮುಚ್ಚಾಲೆಯಾಡ್ತಾಯಿದೆ…. ರಾಜ್ಯದಲ್ಲಿ ಇಷ್ಟೊಂದು ಸಮಸ್ಯೆಗಳಿದ್ರೂ ಜವಾಬ್ದಾರಿ ಹೊತ್ತಿರೊ ನಮ್ಮ ಸಚಿವರು, ಶಾಸಕರೂ ಮಾಡ್ತಾಯಿರೊದಾದ್ರೂ ಏನು….. ಮೋಜು, ಮಸ್ತಿ, ಬರ ಪ್ರವಾಸದ ನೆಪದಲ್ಲಿ ಭಲ ಪ್ರದರ್ಶನ..
ಇಲ್ಲಿ ಜನ್ರು ಸಮಸ್ಯೆಗಳಿಂದ ಸಾಯ್ತಾಯಿದ್ರೆ ನಮ್ಮ ಶಾಸಕ ಮಹಾಸಯರು ಅಧ್ಯಯನದ ನೆಪದಲ್ಲಿ ವಿದೇಶ ಪ್ರವಾಸದ ಮೊಜು ಅನುಭವಿಸ್ತಾಯಿದ್ದಾರೆ… ವಿದೇಶ ಪ್ರವಾಸಕ್ಕೆ ಹೊರಟ ಯಾವನೆ ಶಾಸಕನಿಗಾದ್ರೂ ನಿಜಕ್ಕೂ ಅದ್ಯಯನ ಮಾಡ್ಬೇಕು ಅನ್ಸಿದ್ರೆ ಅವ್ರು ಉತ್ತರ ಕರ್ನಾಟಕದಲ್ಲಿ ಬರದಿಂದ ಕಂಗೆಟ್ಟ ಜನ್ರ ಬಳಿ ಹೋಗ್ಬೇಕಿತ್ತು… ಆದ್ರೆ ಇವರಾರಿಗೂ ಜನರ ಕಷ್ಟ ಬೇಕಾಗಿಯೇ ಇಲ್ಲ. ಇವರಿಗೆ ಬೇಕಿರುವುದು ಮೋಜು, ಮಸ್ತಿ ಮತ್ತು ಸರ್ಕಾರದ ಖಜಾನೆ ಕಾಲಿ ಮಾಡುವ ಹಕೀಕತ್ತು ಅಷ್ಟೆ. ಇವ್ರು ಮೋಜು ಮಾಡಲು ಹೊರಟಿರೊದು ಜನರ ತೆರಿಗೆಯ ದುಡ್ಡಿನಿಂದ.. ಜಾಲಿ ಟೂರಿಗೆ ಹೊರಟಿರುವ ಯಾವನೇ ಶಾಸಕರ ಮುಖ ನೋಡಿದ್ರೂ ಅವ್ರು ಮಾಡಿ ಬರುವ ಅಧ್ಯಯನದ ಹೆಸರಿನ ಮೊಜು ಎಲ್ಲರಿಗೂ ಅರ್ಥವಾಗುತ್ತೆ. ಸಮಸ್ಯೆಗಳೇ ತುಂಬಿರುವಾಗ ಶಾಸಕರು ವಿದೇಶ ಪ್ರವಾಸಕ್ಕೆ ಹೋಗಬಾರದು ಅನ್ನೊ ಪ್ರಶ್ನೆ ಬಂದಾಗ ಈ ಹೊಣೆಗೇಡಿ ಶಾಸಕರು ಹೆಳಿದ್ದೇನು ಗೊತ್ತಾ…. ಅಜ್ಮಲ್ ಅಮೀರ್ ಕಸಬ್ ನ ರಕ್ಷಣೆಗಾಗಿ ಸರ್ಕಾರ 25 ಕೋಟಿ ಖರ್ಚು ಮಾಡ್ಬೇಕಾದ್ರೆ ನಾವು ಈ ದೇಶದ ಹೆಮ್ಮೆಯ ಪುತ್ರರು ನಾವು ಪ್ರವಾಸಕ್ಕೆ ಹೊಗೋದ್ರಲ್ಲಿ ತಪ್ಪೇನೂ ಇಲ್ಲ ಅಂದಿದ್ದು ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್. ಯಾವನೇ ಆದ್ರೂ ತಲೆಯಲ್ಲಿ ಕನಿಷ್ಟ ಬುದ್ದಿ ಇರುವವನಾದ್ರೂ ಈ ರೀತಿಯ ಮೂರ್ಖತನದ ಮಾತುಗಳನ್ನಾಡುವುದಿಲ್ಲ.  ಈ ಬಾರೀ ಮೀಸೆ ಹೊತ್ತಿರುವ ಬಿ.ಸಿ ಪಾಟೀಲ್ ಗೆ ಒಂದು ಪ್ರಶ್ನೆ ಕೇಳ್ಬೇಕು ಅನ್ನಿಸ್ತಿದೆ. ಕಸಬ್ ನ ರಕ್ಷಣೆಗೆ ಹಣ ಖರ್ಚು ಮಾಡುತ್ತಿದ್ದೇವೆ ನಿಜ. ಅವನನ್ನು ಮುಂದಿನ ದಿನಗಳಲ್ಲಿ ನೇಣಿಗೆ ಹಾಕುತ್ತೇವೆ… ಆದ್ರೆ ಈ ಪಾಟೀಲಪ್ಪನನ್ನೇನು ಮಾಡ್ಬೇಕು… ಉತ್ತರ ಅವ್ರೇ ಹೇಳ್ಬೇಕು… ಇಂತ ಲಜ್ಜೆಗೆಟ್ಟವರನ್ನ ವಿದಾನಸಭೆಗೆ ಆಯ್ಕೆ ಮಾಡಿದ ಮತದಾರನಿಗೆ ಈಗಲಾದ್ರೂ ಅರ್ಥವಾಗುತ್ತಾ…, ಅಥವಾ ದುಡ್ಡಿನ ಬಲದಲ್ಲಿ ಮತ್ತೆ ಗೆಲ್ಲಬಹುದು ಎಂಬ ಹುಂಬತನವಿರುವ ಇಂತಾ ಶಾಸಕರಿಗೆ ಮುಂದಿನ ಚುನಾವಣೆ ಪಾಠವಾಗುತ್ತಾ… ಕಾದು ನೋಡ್ಬೇಕು….
ಈಗಂತೂ ಯಾರ ಬಾಯಲ್ಲಿ ನೋಡಿದ್ರೂ ಬರ ಪ್ರವಾಸದ ಮಾತುಗಳೇ ಕೇಳಿ ಬರುತ್ತಿವೆ. ಆಡಳಿತ ಪಕ್ಷದವರಿಂದ ಹಿಡಿದು ವಿರೋದ ಪಕ್ಷದ ವರೆಗೂ ಎಲ್ಲರೂ ಬರ ಪ್ರವಾಸದ ಮಾತುಗಳನ್ನಾಡುತ್ತಿದ್ದಾರೆ… ದಿನದಿಂದ ದಿನಕ್ಕೆ ರಾಜ್ಯದಲ್ಲಿ ಬರದ ಛಾಯೆ ಮಗ್ಗುಲಿಗೆ ಸರಿಯುತ್ತಿದೆ. ಬರ ರೈತನ ಕುತ್ತಿಗೆಗೆ ಹಾರವಾಗುತ್ತಿದ್ದಾಗ ಎಲ್ಲರೂ ಇದ್ದದ್ದು ರೆಸಾರ್ಟ್ ಗಳು, ಹೊಟೆಲ್ಗಳಲ್ಲಿ ಮತ್ತು ಜಾತಿ ರಾಜಕಾರಣದ ಕೆಸರಿನಲ್ಲಿ… ರೈತ ಕಂಗೆಟ್ಟು ಕುತಿದ್ದಾಗ ಈಗ ಪ್ರವಾಸ ಮಾಡುತ್ತಿರುವ ಯಡಿಯೂರಪ್ಪ ಆಗಲೀ, ಸದಾನಂದ ಗೌಡರಿಗಾಗಲೀ , ಕಾಂಗ್ರೆಸ್ನ ಮುಖಂಡರಿಗಾಗಲೀ ಯಾರಿಗೂ ಬರದಿಂದ ನಲುಗಿರುವ ರೈತ ನೆನಪಾಗಲೇ ಇಲ್ಲ. ಆಗ ಆಡಳಿತ ಪಕ್ಷ ಬಿಜೆಪಿ ಶಾಸಕರು ಮತ್ತು ಸಚಿವರು ಭಿನ್ನಮತದ ಹಾಸಿಗೆಯಲ್ಲಿ ಹೊರಳಾಡುತ್ತಿದ್ದರು. ಯಡಿಯೂರಪ್ಪನವರಂತೂ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಏನೇನು ಮಾಡಬಾರದೊ ಎಲ್ಲವನ್ನೂ ಲಜ್ಜೆಯಿಲ್ಲದೇ ಮಾಡಿಬಿಟ್ಟರು. ಸದಾನಂದ ಗೌಡರಿಗೆ ಖುರ್ಚಿ ಕಾಯವ ಕಾಯಕದ ಹೊರತಾಗಿ ಮತ್ತೇನನ್ನೂ ಮಾಡಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಜವಾಬ್ದಾರಿಯಿಂದ ಸರ್ಕಾರವನ್ನು ಸರಿದಾರಿಗೆ ತರಲು ಯತ್ನಿಸಬೇಕಾದ ಪ್ರತಿಪಕ್ಷಗಳೂ ರೊಟ್ಟಿ ತಿನ್ನಲು ಹಸಿದ ನಾಯಿ ಕಾದಂತೆ ಸರ್ಕಾರ ಯಾವಾಗ ಬಿದ್ದು ಹೋಗುತ್ತೇ ಅಂತ ಕಾದಿದ್ದೇ ಆಯ್ತು. ಇಡೀ ರಾಜ್ಯದ ಮರ್ಯಾದೆ ಬೀದಿಯಲ್ಲಿ ಮೂರು ಕಾಸಿಗೆ ಹರಾಜಾಗಿ ಹೋಗಿತ್ತು. ಯಾರಿಗೂ ಬಡ ರೈತನ ಪರಿಸ್ಥಿತಿ ಅರ್ಥವಾಗಲೇ ಇಲ್ಲ. ಎಲ್ಲ ಶಾಸಕ ಸಚಿವರೂ ರೆಸಾರ್ಟ್, ಹೊಟೆಲ್ ಗಳಲ್ಲಿ ತಿಂದು ಕುಡಿದದ್ದೇ ಬಂತು. ಯಾರಿಗೂ ರೈತ ನೆನಪಾಗಲೇ ಇಲ್ಲ. ಈಗ ಇದ್ದಕ್ಕಿಂದಂತೆ ಎಲ್ಲರಿಗೂ ಬಡ ರೈತ ನೆನಪಾಗಿದ್ದಾನೆ. ಅದಕ್ಕೆ ಕಾರಣವೂ ಇದೆ. ಇನ್ನು ಆರೇಳು ತಿಂಗಳುಗಳಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆ. ಇದಕ್ಕಾಗಿಯೆ ಎಲ್ಲರೂ ದಂಡೆತ್ತಿದವರಂತೆ ಬರ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಆದ್ರೆ ಈಗ ಮಾಡುತ್ತಿರುವ ಪ್ರವಾಸವಾದ್ರೂ ರೈತನ ಮೇಲಿರುವ ಕಾಳಜಿಯಿಂದಲಾ ಅಂತ ನೊಡಿದರೆ ಅದರ ಒಂದು ಎಳೆಯೂ ಕಾಣುವುದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯನ್ನ ಹೇಗಾದ್ರೂ ಮಾಡಿ ಪಡೆಯಲೇ ಬೇಕು ಎಂಬ ಹಟಕ್ಕೆ ಬಿದ್ದಿರುವ ಯಡಿಯೂರಪ್ಪ ಜನ ಬೆಂಬಲ ಗಳಿಸಲು ಸರ್ಕಸ್ ಮಾಡ್ತಾಯಿದ್ದಾರೆ. ಇನ್ನು ಯಡಿಯೂರಪ್ಪನವರ ಆಸೆಗೆ ತಣ್ಣೀರೆರಚಲು ಸದಾನಂದ ಗೌಡ ಮತ್ತು ಈಶ್ವರಪ್ಪ ಒಂದೊಂದು ಕಡೆ ಪ್ರವಾಸ ಮಾಡ್ತಾಯಿದ್ದಾರೆ. ಬಿಜೆಪಿ ನಾಯಕರುಗಳ ಪ್ರವಾಸಸದಿಂದ ಕಂಗೆಟ್ಟ ಕಾಂಗ್ರೆಸ್ ನಾಯಕರೂ ಒಂದೊಂದು ಕಡೆ ಪ್ರವಾಸ ಮಾಡ್ತಾಯಿದ್ದಾರೆ. ಯಾರಲ್ಲಿಯತೂ ಕೂಡ ಬಡ ರೈತನ ಪರಿಸ್ಥಿತಿಯನ್ನ ಪ್ರಾಮಾಣಿಕವಾಗಿ ನೊಡುವ, ಅವನಿಗೆ ಸಾಂತ್ವಾನ ಹೇಳುವ, ದೈರ್ಯ ತುಂಬುವ ಮನಸ್ಸಿಲ್ಲ. ಎಲ್ಲರದ್ದೂ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳುವ ಮನಸ್ಥಿತಿಯಷ್ಟೇ. ಇವರುಗಳು ಮಾಡುತ್ತಿರುವ ಬರ ಪ್ರವಾಸವಾದ್ರು ಏನು ಗೊತ್ತಾ… ಹಿಂಡು ಹಿಂಡು ಪುಡಾರಿಗಳನ್ನ ಹಿಂದಿಕ್ಕಿಕೊಂಡು ಸಾಲು ಸಾಲು ಕಾರುಗಳಲ್ಲಿ ಮೆರವಣಿಗೆ ಹೊರಟವರಂತೆ ಹೊರಟಿದ್ದಾರಷ್ಟೇ. ಕಾರಿನಿಂದ ಕೆಳಗಿಳಿದು ಮಳೆಯೇ ಇಲ್ಲದ ನೆಲದ ಮೇಲೆ ಇವರುಗಳು ಕಾಲಿಟ್ಟರೆ ಅದೇ ಅದೃಷ್ಟ ಅನ್ನುವಂತಾಗಿದೆ. ಕಾಲಿಡದಿರುವುದೇ ವಾಸಿ ಅನ್ನಿಸಿತ್ತೆ. ಯಾಕಂದ್ರೆ ಇವರು ಕಾಲಿಟ್ಟ ಜಾಗದಲ್ಲಿ ಗರಿಕೆ ಹುಲ್ಲು ಬೆಳೆಯುತ್ತಾ ಅನ್ನೋ ಅನುಮಾನವೂ ಇದೆ. ಇಂತಹ ಲಜ್ಜೆಗೆಟ್ಟ ಶಾಸಕರು, ಸಚಿವರು, ರಾಜಕೀಯ ಮುಂಖಂಡರು ನಮ್ಮ ರಾಜ್ಯದಲ್ಲಿರುವುದಕ್ಕೆ ನಮಗೆ ನಾಚಿಕೆಯಾಗುತ್ತದೆ ಅಷ್ಟೆ.

%d bloggers like this: