ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ 100 ವರ್ಷ..!

ಜಲಿಯನ್ ವಾಲಾಬಾಗ್ ಹತ್ಯಾಕಾಂಡ

ಜಲಿಯನ್ ವಾಲಾಬಾಗ್ ಹತ್ಯಾಕಾಂಡ

ಅದು 100 ವರ್ಷಗಳ ಹಿಂದೆ ನಡೆದುಹೋದ ಭೀಕರ ಮಾರಣಹೋಮ. ಮನುಕುಲದ ಇತಿಹಾಸದ ಅತ್ಯಂತ ನಿರ್ಧಯ ಹತ್ಯಾಕಾಂಡ. ಅದೇ ಜಲಿಯನ್ ವಾಲಾಬಾಗ್ ಹತ್ಯಾಕಾಂಡ. ಇಂತಹ ಮತ್ತೊಂದು ನಿರ್ಧಯ ಮಾರಣಹೋಮ ದೇಶದ ಇತಿಹಾಸದಲ್ಲಿ ದಾಖಲಾಗಿಯೇ ಇಲ್ಲ… ನೂರು ವರ್ಷಗಳ ಹಿಂದೆ ನಡೆದು ಹೋದ ಆ ಹಳೇ ಗಾಯದ ಗುರುತು ಇನ್ನೂ ಮಾಸಿಲ್ಲ.. ಹತ್ಯಾಕಾಂಡದ ಬಗ್ಗೆ ಬ್ರಿಟನ್ ಪ್ರಧಾನಿ ತೆರೇಸಾ ಮೇ ಮೊನ್ನೆ ಮೊನ್ನೆಯಷ್ಟೇ ವಿಷಾಧ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ನೂರು ವರ್ಷಗಳ ನಂತರ ಇಂಗ್ಲೆಂಡ್ ಗೆ ಇದೊಂದು ನಾಚಿಗೆಗೇಡಿನ ಕೃತ್ಯ ಅಂತ ಅನ್ನಿಸಿದೆ..

        ಅದು ಸಿಖ್​ರ ನಾಡು ಪಂಜಾಬ್​ನ ಅಮೃತಸರದಲ್ಲಿ ನಡೆದು ಹೋದ ಭೀಕರ ಮಾರಣ ಹೋಮ. ಅದು 1919ರ ಏಪ್ರಿಲ್ 13 ನೇ ತಾರೀಖಿನ ಭಾನುವಾರ. ಅವತ್ತು ಸಿಖ್ಖರ ಪಾಲಿನ ಯುಗಾದಿ ಬೈಸಾಕಿ ಹಬ್ಬ. ಹೊಸ ವರ್ಷ ಆಚರಿಸಲು ಸಾವಿರಾರು ಜನ ಅಮೃತಸರದ ಜಲಿಯನ್ ವಾಲಾಬಾಗ್ ಉದ್ಯಾನವನದಲ್ಲಿ ಸೇರಿದ್ರು. ಆರರಿಂದ ಏಳು ಎಕರೆ ವಿಸ್ತೀರ್ಣದ ಪಾರ್ಕ್ ಅದು. ಎಲ್ಲರೂ ಬೈಸಾಕಿ ಹಬ್ಬದ ಸಂಭ್ರಮದಲ್ಲಿದ್ರು. ಇನ್ನೇನು ಸೂರ್ಯ ಮುಳುಗುವ ಸಮಯ. ಆಗ ಅಲ್ಲಿಗೆ ಬಂದಿದ್ದು ತೊಂಭತ್ತು ಸೈನಿಕರ ಬ್ರಿಟೀಷ್ ತುಕಡಿ. ಯಾರೂ ತಪ್ಪಿಸಿಕೊಳ್ಳಬಾರದೆಂದು ಉದ್ಯಾನವನಕ್ಕಿದ್ದ ಒಂದೇ ಒಂದು ಬಾಗಿಲನ್ನ ಮುಚ್ಚಲಾಯಿತು. ಬ್ರಿಟೀಷ್ ಸೈನಿಕ ತುಕಡಿ ಪೊಸೀಷನ್ ತೆಗೆದುಕೊಂಡು ತಮ್ಮ ಬಂದೂಕುಗಳಿಂದ ಗುಂಡುಗಳ ಮಳೆಗರೆದರು. ಅದು ಸುಮಾರು 10 ನಿಮಿಷಗಳ ಕಾಲ ನಡೆದ ಗುಂಡಿನ ಬೋರ್ಗರೆತ. ಹಬ್ಬದ ಸಂಭ್ರಮದಲ್ಲಿದ್ದ ಉದ್ಯಾನವನ ಅಕ್ಷರಶಃ ಸ್ಮಶಾನವಾಗಿತ್ತು. ಅವತ್ತು ಹಾಗೆ ಬ್ರಿಟೀಷರ ಗುಂಡಿಗೆ ಪ್ರಾಣ ತೆತ್ತವರ ಸಂಖ್ಯೆ 1200 ಕ್ಕೂ ಹೆಚ್ಚು. ಗುಂಡಿನ ಬೋರ್ಗರೆತದಿಂದ ತಪ್ಪಿಸಿಕೊಳ್ಳಲು ಉದ್ಯಾನದಲ್ಲಿದ್ದ ಭಾವಿಗೆ ಬಿದ್ದು ಪ್ರಾಣಬಿಟ್ಟವರ ಸಂಖ್ಯೆಯೇ 120 ಕ್ಕೂ ಹೆಚ್ಚು. ಎಳೆಯ ಕಂದಮ್ಮಗಳು, ಮಕ್ಕಳು, ಮಹಿಳೆಯರೂ, ವೃದ್ಧರೂ ಅನ್ನೋದನ್ನೂ ನೋಡದೇ ನಿರ್ಧಯವಾಗಿ ಮಾರಣಹೋಮ ನಡೆಸಲಾಗಿತ್ತು. ಇಂತದ್ದೊಂದು ಘೋರ ಹತ್ಯಾಕಾಂಡ ನಡೆಸಿದವನ ಹೆಸರು ಜನರಲ್ ಡಯರ್. ಬ್ರಿಟೀಷ್-ಇಂಡಿಯಾ ಸೇನೆಯ ಅಧಿಕಾರಿಯಾಗಿದ್ದ ಈತನನ್ನ ಇತಿಹಾಸ ರಕ್ತ ಪಿಪಾಸು ಅಂತಲೇ ಗುರುತಿಸುತ್ತೆ.

          ಇಂತದ್ದೊಂದು ಭೀಕರ ಹತ್ಯಾಕಾಂಡ ನಡೆಸಲಿಕ್ಕೆ ಅಲ್ಲಿ ಸೇರಿದ್ದ ಜನ ಮಾಡಿದ್ದ ತಪ್ಪಾದ್ರೂ ಏನು ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಬ್ರಿಟೀಷರ ವಿರುದ್ಧ ಭಾರತೀಯರು ದಂಗೆಯೇಳಬಹುದು ಅನ್ನೋ ಕಾರಣಕ್ಕೆ ಎಲ್ಲ ಸಭೆ ಸಮಾರಂಭಗಳನ್ನೂ ನಿಷೇಧಿಸಲಾಗಿತ್ತು. ಬ್ರಿಟೀಷ್ ಅಧಿಕಾರಿಗಳೂ ಹೇರಿದ್ದ ನಿಷೇಧಾಜ್ಞೆ ಉಲ್ಲಂಘಿಸಿ ಹಬ್ಬದ ಸಂಭ್ರಮಕ್ಕೆ ಸೇರಿದ್ದೇ ಆ ಜನ ಮಾಡಿದ್ದ ತಪ್ಪು. ಈ ಹತ್ಯಾಕಾಂಡದಲ್ಲಿ ಪ್ರಾಣ ತೆತ್ತವರ ಸಂಖ್ಯೆ 1200ಕ್ಕೂ ಹೆಚ್ಚು ಅನ್ನುತ್ತದೆ ಇತಿಹಾಸ. ಆದ್ರೆ ಅವತ್ತಿನ ಬ್ರಿಟೀಷ್ ಸರ್ಕಾರ ಸತ್ತವರ ಸಂಖ್ಯೆ ಕೇವಲ 379 ಅನ್ನೋ ಕಾಟಾಚಾರದ ಲೆಕ್ಕ ಕೊಟ್ಟಿತ್ತು.

ರಕ್ತಪಿಪಾಸು ಜನರಲ್ ಡಯರ್

ರಕ್ತಪಿಪಾಸು ಜನರಲ್ ಡಯರ್

        ಜನರಲ್ ಡಯರ್ ಮಾಡಿದ ಕೆಲಸಕ್ಕೆ ಬ್ರಿಟನ್ ನಲ್ಲಿ ಶ್ಲಾಘನೆಯೂ ವ್ಯಕ್ತವಾಗಿತ್ತು. ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮವನ್ನ ಜನರಲ್ ಡಯರ್ ಹತ್ತಿಕ್ಕಿದ ಅಂತ ಸಂಭ್ರಮಿಸಿದ್ದರು ಬ್ರಿಟಿಷರು. ಅವತ್ತು ಆತನಿಗೆ ಶಿಕ್ಷೆ ಕೊಡಿ ಅಂತ ಕೇಳುವ ಗಟ್ಟಿ ದ್ವನಿ ಗಾಂಧೀಜಿ, ನೆಹರೂ ಸೇರಿದಂತೆ ಯಾರಿಗೂ ಇರಲಿಲ್ಲ. ಅವತ್ತಿಗೆ ಜನರಲ್ ಡಯರ್ ಮತ್ತು ಬ್ರಿಟೀಷ್ ಆಡಳಿತದ ವಿರುದ್ಧ ಪಂಜಾಬ್ ಸೇರಿದಂತೆ ಇಡೀ ದೇಶದಲ್ಲಿ ಆಕ್ರೋಶದ ಜ್ವಾಲೆ ಕುದಿಯುತ್ತಿತ್ತು. ಆಕ್ರೋಶಕ್ಕೆ ಮಣಿದ ಬ್ರಿಟೀಷ್ ಸರ್ಕಾರ ಕಾಟಾಚಾರಕ್ಕೊಂದು ತನಿಖೆಯನ್ನೂ ಮಾಡಿ, ಡಯರ್ ನನ್ನ ಲಂಡನ್ ಗೆ ವಾಪಸ್ ಕರೆಸಿಕೊಂಡಿತ್ತು. 1200 ಕ್ಕೂ ಹೆಚ್ಚು ಜನರ ರಕ್ತ ಕುಡಿದವನು ಕೆಲ ವರ್ಷಗಳ ನಂತರ ಬ್ರಿಟನ್ ನಲ್ಲಿ ಪಾರ್ಶ್ವವಾಯು ರೋಗಕ್ಕೆ ತುತ್ತಾಗಿ ಮಲಗಿದ್ದಲ್ಲೇ ಸತ್ತ.

     ಹಬ್ಬದ ಸಂಭ್ರಮದಲ್ಲಿದ್ದವರನ್ನ ಮಾರಣ ಹೋಮ ಮಾಡಿದ್ದನ್ನ ಬಾಲಕ ಉದಮ್ ಸಿಂಗ್ ಕಣ್ಣಾರೆ ನೋಡಿದ್ದ. ಅವತ್ತು ತನ್ನವರನ್ನೆಲ್ಲಾ ಕಳೆದುಕೊಂಡು ಗುಂಡೇಟಿನಿಂದ ಗಾಯಗೊಂಡಿದ್ದ ಉದಮ್ ಸಿಂಗ್ ಹತ್ಯಾಕಾಂಡಕ್ಕೆ ಪ್ರತೀಕಾರದ ಪಣ ತೊಟ್ಟಿದ್ದ. ಜಲಿಯನ್ ವಾಲಾಬಾಗ್ ನಲ್ಲಿನ ಮಣ್ಣನ್ನ ಮನೆಗೆ ಕೊಂಡೊಯ್ದು, ತನ್ನ ಜೀವಿತಾವಧಿವರೆಗೆ ಜತೆಗೇ ಇಟ್ಟುಕೊಂಡಿದ್ದ ಉದಮ್ ಸಿಂಗ್. ಹತ್ಯಾಕಾಂಡ ನಡೆಸಿದವನು ಮಲಗಿದ್ದಲ್ಲೇ ಪ್ರಾಣ ಬಿಟ್ಟ ಅನ್ನೋದೇನೋ ನಿಜ. ಆದರೆ ಉದಮ್ ಸಿಂಗ್ ನ ಪ್ರತೀಕಾರದ ಜ್ವಾಲೆ ಮಾತ್ರ ಆರಿರಲಿಲ್ಲ. ಆದರೆ ಪ್ರತೀಕಾರ ಯಾರ ವಿರುದ್ಧ..? ಸಾಮೂಹಿಕವಾಗಿ ಮಾರಣ ಹೋಮ ನಡೆಸಿದವನು ಪ್ರಾಣ ಬಿಟ್ಟಾಗಿತ್ತು. ಗುಂಡಿನ ಮಳೆ ಸುರಿಸುವಂತೆ ಜನರಲ್ ಡಯರ್ ಗೆ ಆದೇಶ ಕೊಟ್ಟಿದ್ದನಲ್ಲ ಅವನ ವಿರುದ್ಧ. ಆತನ ಹೆಸರೇ ಮೈಕಲ್ ಓಡ್ವೈರ್. ಜಲಿಯನ್​ ವಾಲಾ ಬಾಗ್ ಹತ್ಯಾಕಾಂಡ ನಡೆದಾಗ ಪಂಜಾಬ್​ನ ಲೆಫ್ಟಿನೆಂಟ್ ಗೌವರ್ನರ್​ ಆಗಿದ್ದವನು ಈ ಮೈಕಲ್. ಹತ್ಯಾಕಾಂಡದ ನಂತರ ಮಾತನಾಡಿದ್ದ ಮೈಕಲ್ ಬ್ರಿಟೀಷ್ ಸೇನೆ ಮಾಡಿದ್ದು ಸರಿಯಾದ ಕ್ರಮ ಎಂದಿದ್ದ.

       

ಉದಮ್ ಸಿಂಗ್

ಪ್ರತೀಕಾರ ತೀರಿಸಿಕೊಂಡ ಉದಮ್ ಸಿಂಗ್

ಹೇಗಾದರೂ ಮಾಡಿ ಹತ್ಯಾಕಾಂಡ ನಡೆಸಲು ಕಾರಣನಾಗಿದ್ದ ಲೆಫ್ಟಿನೆಂಟ್ ಗೌವರ್ನರ್ ಮೈಕಲ್ ಓಡ್ವೈರ್ ನನ್ನ ಹತ್ಯೆ ಮಾಡೋದು ಉದಮ್ ಸಿಂಗ್ ನ ಗುರಿಯಾಗಿತ್ತು. 21 ವರ್ಷಗಳ ಹೋರಾಟದ ನಂತರ ಉದಮ್ ಸಿಂಗ್ ಮೈಕೆಲ್​ನನ್ನು ಕೊಂದು ಪ್ರತೀಕಾರ ತೀರಿಸಿಕೊಂಡಿದ್ದ. ಪ್ರತೀಕಾರದ ನಿರ್ಧಾರ ಮಾಡಿದ್ದ ಉದಮ್​ ಸಿಂಗ್ 1934 ರಲ್ಲಿ ಕಾಶ್ಮೀರ ಮೂಲಕ ಇಸ್ಲಾಮಾಬಾದ್, ಕಾಬೂಲ್ ದಾಟಿ ಜರ್ಮನಿ ಸೇರಿಕೊಂಡ. ಕೆಲಕಾಲ ಜರ್ಮನಿಯಲ್ಲಿದ್ದು ನಂತರ ಇಂಗ್ಲೆಂಡ್ ತಲುಪಿಕೊಂಡಿದ್ದ. ಅಲ್ಲೊಂದು ಬಾಡಿಗೆ ಮನೆ ಮಾಡಿಕೊಂಡು ಮೈಕಲ್ ಓಡ್ವೈರ್​ ನ ಹತ್ಯೆಗೆ ಸಂಚು ಮಾಡುತ್ತಲೇ ಇದ್ದ. ಅದು 1940 ಮಾರ್ಚ್ 13 ನೇ ತಾರೀಕಿನ ದಿನ. ಲಂಡನ್ ನ ಕ್ಯಾಕ್ ಸ್ಟನ್ ಹಾಲ್ ನಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಲೆಫ್ಟಿನೆಂಟ್ ಗೌವರ್ನರ್ ಮೈಕಲ್​ ಬಂದಿದ್ದ. ಆ ಕಾರ್ಯಕ್ರಮಕ್ಕೆ ಹೋಗಿದ್ದ ಉದಮ್​ ಸಿಂಗ್​ ಪಿಸ್ತೂಲ್​ನಿಂದ ಮೈಕೆಲ್​ನ ಎದೆಗೆ ಗುಂಡಿಕ್ಕಿ ಪ್ರತೀಕಾರ ಮುಗಿಸಿದ್ದ. ತನ್ನ ನೆಲದಲ್ಲಿ ಮಾರಣ ಹೋಮ ನಡೆಸಿದವನನ್ನ ಅವನದ್ದೇ ನೆಲಕ್ಕೆ ನುಗ್ಗಿ ಕೊಂದು ಹಾಕಿದ್ದ ಉದಮ್ ಸಿಂಗ್. ಅವತ್ತು ಜಲಿಯನ್ ವಾಲಾಬಾಗ್ ನಲ್ಲಿ ರಕ್ತ ಚೆಲ್ಲಿದ ಸಾವಿರಾರು ಜನರ ಆತ್ಮಗಳ ಆರ್ತನಾದಕ್ಕೆ ಅಂತ್ಯ ಸಿಕ್ಕಿತ್ತು.

ಲೆಫ್ಟಿನೆಂಟ್ ಗೌವರ್ನರ್ ಮೈಕಲ್

ಲೆಫ್ಟಿನೆಂಟ್ ಗೌವರ್ನರ್ ಮೈಕಲ್

       ಪ್ರತೀಕಾರದ ಜ್ವಾಲೆಯನ್ನ ತೀರಿಸಿಕೊಂಡ ಉದಮ್ ಸಿಂಗ್ ಲಂಡನ್ ಕೋರ್ಟ್​ನಲ್ಲಿ ನಿಂತು ಹೇಳಿದ್ದು ಮಾತ್ರ ಕೆಚ್ಚದೆಯ ಮಾತುಗಳನ್ನ. ನನ್ನ ಜನಗಳ ರಕ್ತ ಕುಡಿದವನನ್ನ ನಾನು ಕೊಂದು ಹಾಕಿದೆ. ನನಗೀಗ ಆನಂದವಾಗಿದೆ, ಇದು ತಾಯ್ನಾಡಿಗಾಗಿ ನಾನು ಮಾಡಿದ ಕರ್ತವ್ಯ. ಪ್ರಾಣ ತ್ಯಾಗ ಮಾಡುವುದಕ್ಕಿಂತಲೂ ಹೆಚ್ಚಿನ ಗೌರವ ಇನ್ನೇನಿದೆ ಎಂಬ ದಿಟ್ಟ ಮಾತುಗಳನ್ನಾಡಿದ್ದ. ಈ ಘಟನೆ ನಡೆದ ಮೂರು ತಿಂಗಳಲ್ಲೇ ಉದಮ್ ಸಿಂಗ್ ನನ್ನ ಲಂಡನ್ ನಲ್ಲಿ ನೇಣಿಗೇರಿಸಲಾಯಿತು.
    ಅವತ್ತು ಧೀರ ಉದಮ್ ಸಿಂಗ್ ತೋರಿದ ದೈರ್ಯ ಸಾಹಸ ನೂರಾರು ಸ್ವಾತಂತ್ರ ಹೋರಾಟಗಾರರಿಗೆ ಸ್ಪೂರ್ತಿಯಾಗಿತ್ತು. ಈ ಘಟನೆ ನಡೆದ ಏಳು ವರ್ಷಗಳ ನಂತರ ಸ್ವಾತಂತ್ರ್ಯ ಭಾರತದ ಉದಯವಾಗಿತ್ತು. ಇವತ್ತಿಗೂ ಅಮೃತಸರದಲ್ಲಿರುವ ಇವತ್ತಿಗೂ ಜಲಿಯನ್ ವಾಲಾಬಾಗ್ ನ ಗೋಡೆಗಳ ಮೇಲಿರೋ ಗುಂಡಿನ ದಾಳಿಯ ಗುರುತುಗಳು ಸಾವಿರಾರು ಜನರ ಆರ್ತನಾದದ ಕಥೆ ಹೇಳುತ್ವೆ.. ಈ ಏಪ್ರಿಲ್ 13ಕ್ಕೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು ನೂರು ವರ್ಷಗಳಾಗುತ್ತೆ. ಆ ಮಾರಣ ಹೋಮ ನಡೆದು ನೂರು ವರ್ಷಗಳಾದ್ರೂ ಅವತ್ತು ಆದ ಗಾಯ ಇನ್ನೂ ಮಾಸಿಲ್ಲ ಅನ್ನೋದು ಮಾತ್ರ ಸತ್ಯ.

Advertisements

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸೂಪರ್ ಪವರ್..! ಅಂತರಿಕ್ಷ ಯುದ್ಧಕ್ಕೆ ಸಿದ್ಧವಾಯ್ತು ದೇಶ..!

ಉಪಗ್ರಹ ನಿಗ್ರಹ ಕ್ಷಿಪಣಿ ಪ್ರಯೋಗ

ಉಪಗ್ರಹ ನಿಗ್ರಹ ಕ್ಷಿಪಣಿ ಪ್ರಯೋಗ

ಭಾರತ ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಸೂಪರ್ ಪವರ್… ಬಾಹ್ಯಾಕಾಶದಲ್ಲಿರುವ ಉಪಗ್ರಹವನ್ನ ಕ್ಷಿಪಣಿಯ ಮೂಲಕ ಹೊಡೆದುರುಳಿಸುವ ತಂತ್ರಜ್ಞಾನವನ್ನ ಭಾರತ ಅಭಿವೃದ್ಧಿ ಪಡಿಸಿದೆ. ಇದ್ದಕ್ಕಿದ್ದಂತೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಅಂತರಿಕ್ಷದಲ್ಲಿದ್ದ ಉಪಗ್ರಹ ಹೊಡೆದುರುಳಿಸಿದ್ದೇವೆ ಅಂತ ಘೋಷಿಸಿದ್ರು.. ಅಲ್ಲಿಗೆ ಭಾರತ ಈ ಸಾಧನೆ ಮಾಡಿದ ಜಗತ್ತಿನ ನಾಲ್ಕನೇ ರಾಷ್ಟ್ರ ಅನ್ನೋ ಖ್ಯಾತಿ ಮುಡಿಗೇರಿಸಿಕೊಂಡಿತು. ಈ ತಂತ್ರಜ್ಞಾನ ಹೊಂದಿರುವ ಅಮೆರಿಕಾ, ರಷ್ಯಾ, ಚೀನಾಗಳ ಸಾಲಿಗೆ ಈಗ ಭಾರತ ಸೇರಿದಂತಾಗಿದೆ. ಜಗತ್ತಿನ ಕೆಲವು ಪ್ರವಲ ದೇಶಗಳಾದ ಇಂಗ್ಲೆಂಡ್, ಜಪಾನ್, ಫ್ರಾನ್ಸ್, ಜರ್ಮನಿಯಂತಹ ರಾಷ್ಟ್ರಗಳು ಮಾಡದ ಸಾಧನೆಯನ್ನ ಭಾರತ ಮಾಡಿದೆ. . ಇಸ್ರೋ ಮತ್ತು ಡಿಆರ್​ಡಿಓ ಇಂತದ್ದೊಂದು ತಂತ್ರಜ್ಞಾನವನ್ನ ಅಭಿವೃದ್ಧಿಪಡಿಸಿವೆ.

ಉಪಗ್ರಹ ನಿಗ್ರಹ ಕ್ಷಿಪಣಿ ಪ್ರಯೋಗದ ತಂತ್ರಜ್ಞಾನದ ಬಗ್ಗೆ ತಿಳೀಬೇಕು ಅಂದ್ರೆ ಸ್ವಲ್ಪ ಇತಿಹಾಸದತ್ತ ನೋಡ್ಬೇಕು. ಅಮೇರಿಕಾ ಮತ್ತು ಸೋವಿಯತ್ ಒಕ್ಕೂಟಗಳ ಮಧ್ಯೆ ನಡೆಯುತ್ತಿದ್ದ ಶೀತಲ ಸಮರ ಖಂಡಾಂತರ ಕ್ಷಿಪಣಿಗಳ ಅಭಿವೃದ್ಧಿಗೆ ಕಾರಣವಾಗಿತ್ತು. ರಷ್ಯಾದ ಕ್ಷಿಪಣಿಗಳು ಆಕಾಶಮಾರ್ಗವಾಗಿ ಅಮೆರಿಕವನ್ನ ನುಗ್ಗಿಬಿಡಬಲ್ಲವು ಅನ್ನೋ ಆತಂಕ ಶುರುವಾಗಿದ್ದು ಈ ತಂತ್ರಜ್ಞಾನ. ಹಾಗೆ ಆಕಾಶ ಮಾರ್ಗವಾಗಿ ಬರುವ ಖಂಡಾಂತರ ಕ್ಷಿಪಣಿಗಳನ್ನು ಮಾರ್ಗಮಧ್ಯೆಯೇ ಹೊಡೆದುರುಳಿಸುವ ತಂತ್ರಜ್ಞಾನವನ್ನ ಅಮೆರಿಕ ಅಭಿವೃದ್ಧಿ ಪಡಿಸಿತು. ಈಗ ಜಗತ್ತಿನ ಹಲವು ದೇಶಗಳು ಕ್ಷಿಪಣಿ ಪ್ರತಿರೋಧಕ ವ್ಯವಸ್ಥೆಯನ್ನ ಹೊಂದಿವೆ. ಇದೇ ರೀತಿಯಲ್ಲೇ ಶತೃ ದೇಶದ ಉಪಗ್ರಹವೊಂದು ಅಂತರಿಕ್ಷಕ್ಕೆ ಹಾರಿ ಅಲ್ಲಿಂದಲೇ ನಮ್ಮ ದೇಶದ ಮೇಲೆ ಕಳ್ಳಗಣ್ಣಿಟ್ಟರೆ..? ಅಥವಾ ಶತೃ ರಾಷ್ಟ್ರದ ಮೇಲೆ ಯುದ್ಧಕ್ಕೆ ದಂಡೆತ್ತಿ ಹೋಗದೇ ನಿಂತ್ರಿಸಬೇಕಾದರೆ..? ಆ ದೇಶದ ಉಪಗ್ರಹವನ್ನ ಭೂಮಿಯಿಂದ ಕ್ಷಿಪಣಿ ಉಡಾಯಿಸಿ ಹೊಡೆದುರುಳಿಸುವ ತಂತ್ರಜ್ಞಾನವೇ ಉಪಗ್ರಹ ಪ್ರತಿರೋಧ ಕ್ಷಿಪಣಿ ಪ್ರಯೋಗದ ತಂತ್ರಜ್ಞಾನ. ಇದನ್ನ ಇಂಗ್ಲೀಷ್​ನಲ್ಲಿ ಎ-ಸ್ಯಾಟ್ ಅಂತ ಕರೀತಾರೆ. ಬಾಹ್ಯಾಕಾಶದಲ್ಲಿದ್ದ ನಮ್ಮದೇ ದೇಶದ ಲೈವ್ ಉಪಗ್ರಹವೊಂದನ್ನ ಕೇವಲ ಮೂರೇ ಮೂರು ನಿಮಿಷಗಳಲ್ಲಿ ಹೊಡೆದುರುಳಿಸಿ ಭಾರತ ಮಹತ್ ಸಾಧನೆ ಮಾಡಿದೆ.

ಈ ಸಾಧನೆಯಿಂದ ಭಾರತಕ್ಕೇನು ಲಾಭ ಅಂದ್ರೆ, ಪಾಕಿಸ್ತಾನ ಅಥವಾ ಚೀನಾದ ಉಪಗ್ರಹಗಳನ್ನ ಹೊಡೆದುರುಳಿಸುವಂತಹ ತಾಕತ್ತಿದೆ ಅಂತ ಅರ್ಥ. ಒಂದು ವೇಳೆ ಭಾರತ ಅಂತರಿಕ್ಷದಲ್ಲಿರುವ ಪಾಕಿಸ್ತಾನದ ಉಪಗ್ರಹಗಳನ್ನ ಕೆಲವೇ ಕ್ಷಣಗಳಲ್ಲಿ ಧ್ವಂಸ ಮಾಡಿಬಿಟ್ಟರೆ, ಪಾಕಿಸ್ತಾನ ಕೆಲವೇ ನಿಮಿಷಗಳಲ್ಲಿ ಭಾರತದ ಮುಂದೆ ನಡು ಬಗ್ಗಿಸಿ ನಿಂತುಬಿಡುತ್ತೆ. ಅಂತಹ ಸಾಮರ್ಥ್ಯ ನಮ್ಮ ದೇಶಕ್ಕೆ ಬಂದಿದೆ. ಆದರೆ ಭಾರತದ ಈ ಸಾಮರ್ಥ್ಯದಿಂದ ಹೆದರಬೇಕಾಗಿದ್ದು ಚೀನಾ ದೇಶವೇ ಹೊರತು ಪಾಕಿಸ್ತಾನ ಅಲ್ಲ.. ಯಾಕಂದ್ರೆ ಆ ದೇಶಕ್ಕೆ ಈ ಬಗ್ಗೆ ಕಿಂಚಿತ್ತೂ ಗೊತ್ತೇ ಇಲ್ಲ ಬಿಡಿ. ಭಾರತದ ವಿರುದ್ಧ ಸದಾ ಕಾಲು ಕೆರೆದು ನಿಲ್ಲುವ ಚೀನಾ ನಮ್ಮ ಉಪಗ್ರಹಗಳನ್ನು ನಿಷ್ಕ್ರಿಯ ಮಾಡಲು ಯತ್ನಿಸಿದರೆ, ತಿರುಗೇಟು ನೀಡೋ ಸಾಮರ್ಥ್ಯ ಭಾರತಕ್ಕಿದೆ. ಅಥವಾ ಭಾರತದ ಮೇಲೆ ಕಳ್ಳಗಣ್ಣು ಇಡಲು ತಮ್ಮ ಉಪಗ್ರಹವನ್ನ ಬಳಸಿಕೊಂಡ್ರೆ ಅವುಗಳನ್ನ ಹೊಡೆದುರುಳಿಸುವ ತಾಕತ್ತು ಭಾರತಕ್ಕಿದೆ. ಅದಕ್ಕೇ ಭಾರತ ಮಾಡಿದ ಈ ಸಾಧನೆಗೆ ಅಷ್ಟೊಂದು ಮಹತ್ವ ಬಂದಿದ್ದು.

ಅಮೆರಿಕಾ ಮತ್ತು ರಷ್ಯಾ ಮಧ್ಯದ ಶೀತಲ ಸಮರ ಅಂತರಿಕ್ಷದಲ್ಲಿನ ಉಪಗ್ರಹಗಳನ್ನ ಹೊಡೆದುರುಳಿಸುವ ತಂತ್ರಜ್ಞಾನ ಅಭಿವೃದ್ಧಿಗೆ ಕಾರಣವಾಯ್ತು. 1980ರಲ್ಲೇ ಅಮೆರಿಕಾ ರಷ್ಯಾದ ಉಪಗ್ರಹಗಳನ್ನು ಹೊಡೆಯುವ ಭಯ ಸೃಷ್ಟಿಸಲು ಈ ತಂತ್ರಜ್ಞಾನವನ್ನ ಅಭಿವೃದ್ಧಿ ಮಾಡಿತು. ಐದೇ ವರ್ಷಗಳಲ್ಲಿ ರಷ್ಯಾ ಕೂಡ ತಾನೇನು ಕಡಿಮೆ ಇಲ್ಲ ಅನ್ನೋದನ್ನ ತೋರಿಸಿತ್ತು. ಅಮೆರಿಕದ ಉಪಗ್ರಹಗಳನ್ನ ಹೊಡೆದುರುಳಿಸುವ ಸಾಮರ್ಥ್ಯವನ್ನ ರಷ್ಯಾ 1985ರಲ್ಲಿ ಗಳಿಸಿಕೊಳ್ತು. ಚೀನಾ 2007ರಲ್ಲಿ ಈ ಸಾಧನೆಯನ್ನ ಮಾಡಿದ ಮೂರನೇ ರಾಷ್ಟ್ರವಾಯಿತು. ಈಗ ಭಾರತದ ಸರದಿ. ಅಂದ ಹಾಗೆ ಇಸ್ರೋ ಮತ್ತು ಡಿಆರ್​ಡಿಓ 2012ರಲ್ಲೇ ಇಂತದ್ದೊಂದು ಪ್ರಯೋಗ ನಡೆಸಲು ಸಿದ್ಧವಿತ್ತು. ಆದ್ರೆ ಅವತ್ತಿನ ಯುಪಿಎ ಸರ್ಕಾರ ದೈರ್ಯ ತೋರಿಸಲಿಲ್ಲ. ಜಗತ್ತಿನ ಪ್ರಬಲ ರಾಷ್ಟ್ರಗಳ ವಿರೋಧ ಕಟ್ಟಿಕೊಳ್ಳಬೇಕಾದೀತು ಅನ್ನೋ ಆತಂಕ ಅಂದಿನ ಯುಪಿಎ ಸರ್ಕಾರಕ್ಕಿತ್ತು. ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಇಸ್ರೋ ಮತ್ತು ಡಿಆರ್​ಡಿಓ ಪ್ರಸ್ತಾಪಕ್ಕೆ ಓಕೆ ಅಂದಿತ್ತು. ಅದರ ಪರಿಣಾಮವೇ ಈಗ ಭಾರತ ಅಂತರಿಕ್ಷ ಕ್ಷೇತ್ರದಲ್ಲಿ ಸೂಪರ್ ಪವರ್ ಅನ್ನೋ ಹಿರಿಮೆಗೆ ಪಾತ್ರವಾಗಿದ್ದು.

ಸಾಮಾನ್ಯವಾಗಿ ಉಪಗ್ರಹಗಳು ಭೂಮಿಯಿಂದ 300 ರಿಂದ 600 ಕಿಲೋಮೀಟರ್ ಎತ್ತರದಲ್ಲಿ ಪ್ರದಕ್ಷಿಣೆ ಹಾಕುತ್ತವೆ. ಇವತ್ತಿನ ನಮ್ಮ ಜನಜೀವನವೆಲ್ಲವೂ ಅವಲಂಭಿತವಾಗಿರೋದು ಈ ಉಪಗ್ರಹಗಳ ಮೇಲೆಯೇ. ನಮ್ಮ ಮೊಬೈಲ್ ಫೋನ್‍ಗಳು, ಇಂಟರ್ ನೆಟ್, ಆರೋಗ್ಯ, ವಿಮಾನದಿಂದ ಹಿಡಿದು ಕ್ಯಾಬುಗಳ ವರೆಗಿನ ಎಲ್ಲ ಸಾರಿಗೆ ವ್ಯವಸ್ಥೆ, ಹವಾಮಾನ ಮುನ್ಸೂಚನೆ, ಸಾಫ್ಟ್ ವೇರ್, ಕೃಷಿ, ರಕ್ಷಣಾ ಕ್ಷೇತ್ರ ಹೀಗೆ ಎಲ್ಲವೂ ಸುಸೂತ್ರವಾಗಿ ನಡೆಯೋದು ಈ ಉಪಗ್ರಹಗಳಿಂದಲೇ. ಇವತ್ತು ಉಪಗ್ರಹಗಳಿಲ್ಲದೆ ಈ ಜಗತ್ತು ಒಂದಿಂಚೂ ಮುಂದೆ ಹೋಗಲು ಸಾಧ್ಯವೇ ಇಲ್ಲ. ಹೀಗಾಗಿ ಶತೃದೇಶವನ್ನ ಒಂದೇ ಒಂದು ಸಾವೂ ಇಲ್ಲದೇ, ಯುದ್ಧ ವಿಮಾನಗಳ ಅಬ್ಬರ, ಬಾಂಬ್ ದಾಳಿ, ಗುಂಡಿನ ಮೊರೆತ ಏನೇನೂ ಇಲ್ಲದೆ ತನ್ನೆದುರು ಮಂಡಿಯೂರಿಸಿಕೊಳ್ಳಬೇಕು ಅಂದ್ರೆ ಅದು ಅಂತರಿಕ್ಷ ಯುದ್ಧದಿಂದ ಮಾತ್ರ ಸಾಧ್ಯ. ಶತೃದೇಶದ ಉಪಗ್ರಹಗಳನ್ನೇ ಉಡಾಯಿಸಿಬಿಟ್ಟರೆ, ಆ ದೇಶ ಕ್ಷಣ ಮಾತ್ರದಲ್ಲಿ ಅಕ್ಷರಶಃ ಸ್ಥಬ್ಧವಾಗಿಬಿಡುತ್ತದೆ. ಯುದ್ಧ ಅಂದಾಕ್ಷಣ ಶತೃ ದೇಶದ ಮೇಲೆ ಬಾಂಬ್ ಹಾಕೋದು, ಸಾವಿರಾರು ಜನರ ಸಾವು, ಆಸ್ತಿ ಪಾಸ್ತಿ ನಷ್ಟ ಇದೆಲ್ಲವೂ ಹಳೇ ಮಾಡೆಲ್ಲು. ಅಂದರೆ ಮುಂದಿನ ದಿನಗಳಲ್ಲಿ ಯುದ್ಧ ಭೂಮಿ, ಆಕಾಶ, ಸಮುದ್ರದಲ್ಲಿ ನಡೆಯೋಲ್ಲ.. ಅಂತರಿಕ್ಷದಲ್ಲಿ ನಡೆಯುತ್ತೆ. ಈ ಅಂತರಿಕ್ಷ ಯುದ್ಧಕ್ಕೆ ಭಾರತ ಈಗಲೇ ಸಜ್ಜಾಗಿದೆ.

ಶಶಿವರ್ಣಂ!

ಶಬರಿಮಲೆಗೆ ಸ್ತ್ರೀ ಪ್ರವೇಶ, ಹಿಂದೂ ಧರ್ಮದ ವಿರುದ್ಧ ಷಡ್ಯಂತ್ರ ಅನ್ನುವವರು ಇಲ್ಲಿ ನೋಡಿ…

ಶಬರಿಮಲೆಯ ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರ ಪ್ರವೇಶದಿಂದ ಹಿಂದೂ ಧರ್ಮಕ್ಕೆ ಅಪಚಾರವಾಯ್ತು, ಅಯ್ಯಪ್ಪನ ಸನ್ನಿಧಿಯ ಪಾವಿತ್ರ್ಯತೆ ಹಾಳಾಯ್ತು, ಇದು ಹಿಂದೂ ಧರ್ಮದ ವಿರುದ್ಧದ ಷಡ್ಯಂತ್ರ ಎಂದೆಲ್ಲ ಕನವರಿಸುತ್ತಿರುವವರಲ್ಲಿ, ನೊಂದುಕೊಳ್ಳಿತ್ತಿರುವವರಿಗೆ ಒಂದು ಮನವಿ. ಅದೇ ದೇಗುಲದಲ್ಲಿ ಈಗಾಗಲೇ ಹಲವು ಮಹಿಳೆಯರು ಅಯ್ಯಪ್ಪನ ದರ್ಶನ ಪಡೆದವರಿದ್ದಾರೆ. ಸ್ವಾತಂತ್ರಾ ಪೂರ್ವದಲ್ಲಿ ಮತ್ತು ನಂತರದಲ್ಲಿ ಟ್ರವಾಂಕೂರು ರಾಜಮನೆತನದ ರಾಣಿಯರು ದೇವಸ್ಥಾನಕ್ಕೆ ಬಂದು ಹೋಗುತ್ತಿದ್ದ ಬಗ್ಗೆ ಇತಿಹಾಸದಲ್ಲಿ ಉಲ್ಲೇಖಗಳಿವೆ. 1986ರಲ್ಲಿ ಬಂದ ನಂಬಿನಾರ್ ಕೆಡುವತ್ತಿಲ್ಲೈ ಅನ್ನೋ ಸಿನಿಮಾದಲ್ಲಿ ನಾಯಕ ನಟಿ ಅಯ್ಯಪ್ಪನ ಸನ್ನಿಧಾನದಲ್ಲಿ ದೇವರ ದರ್ಶನ ಪಡೆದ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. 1820ರ ಕಾಲದ ಕೆಲವು ಬ್ರಿಟಿಷ್ ದಾಖಲೆಗಳಲ್ಲಿ ಈ ದೇವಸ್ಥಾನಕ್ಕೆ ಮಹಿಳೆಯರು ಬರುವುದಿಲ್ಲ ಎಂದು ಉಲ್ಲೇಖಿಸಲಾಗಿದೆ. ಹಾಗಂತ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧವಿದೆ ಅಂತೇನೂ ಅಲ್ಲಿ ಹೇಳಿಲ್ಲ. ರಸ್ತೆ ಸಂಪರ್ಕವಿಲ್ಲದ ಆ ದಟ್ಟ ಕಾಡಿನ ಮಧ್ಯೆ ಇರುವ ದೇವಸ್ಥಾನಕ್ಕೆ ಆ ಕಾಲದಲ್ಲಿ ಮಹಿಳೆಯರು ತಿಂಗಳುಗಟ್ಟಲೆ ನಡೆದು ಹೋಗಲು ಸಾಧ್ಯ ವಿಲ್ಲ ಅನ್ನೋ ಕಾರಣಕ್ಕೆ ಹೋಗುತ್ತಿರಲಿಲ್ಲವೇನೋ.. ಅಥವಾ ಕಾಡಿನ ಮಧ್ಯೆ ಹೋಗುವಾಗ ಮುಟ್ಟಾದರೆ ಕಷ್ಟ ಎಂಬ ಕಾರಣಕ್ಕೋ ಮಹಿಳೆಯರು ಹೋಗದಿರುವ ಸಾಧ್ಯತೆಗಳಿವೆ. ಅದೇ ಕಾರಣಕ್ಕೋ ಏನೋ ಋತು ಚಕ್ರದ ವಿಷಯ ಶಬರಿಮಲೆಯಲ್ಲಿ ಸಂಘರ್ಷ ಸೃಷ್ಟಿಗೆ ಕಾರಣವಾಗಿರಬಹುದು.

1970ರ ನಂತರ ಶಬರಿಮಲೆಗೆ ಉತ್ತಮವಾದ ರಸ್ತೆ ಸಂಪರ್ಕ ನಿರ್ಮಾಣವಾಯಿತು. ಆ ನಂತರ ಮಹಿಳೆಯರು ಬರಲಾರಂಭಿಸಿದಾಗ ಶುರುವಾಗಿದ್ದು ಇಷ್ಟೆಲ್ಲ ಹಗ್ಗ ಜಗ್ಗಾಟ. 1990ರಲ್ಲಿ ಟ್ರವಾಂಕೂರ್ ದೇವಸ್ವಂ ಮಂಡಳಿ ಮಾಜಿ ಕಮಿಷನರ್ ಆಗಿದ್ದ ಚಂದ್ರಿಕಾ ತಮ್ಮ ಮೊಮ್ಮಗುವಿಗೆ ಮೊದಲ ಅನ್ನದ ತುತ್ತು ತಿನ್ನಿಸುವ ಕಾರ್ಯಕ್ರಮ ಮಾಡಿದ್ದು ಅಲ್ಲೇ. ಈ ವೇಳೆ ಚಂದ್ರಿಕಾ ಅವರ ಮಗಳೂ ಕೂಡ ಅಯ್ಯಪ್ಪನ ಸನ್ನಿಧಾನದಲ್ಲೇ ಇದ್ರು. ಇದರ ಫೋಟೋ ಆಗಸ್ಟ್ 19, 1990 ರಲ್ಲಿ ಜನ್ಮಭೂಮಿ ಅನ್ನೋ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಫೋಟೋ ನೋಡಿದ ಮಹೇಂದ್ರನ್ ಅನ್ನೋ ಅಯ್ಯಪ್ಪನ ಭಕ್ತ ಕೇರಳ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದ. ಆಗ ಟ್ರವಾಂಕೂರ್ ದೇವಸ್ವಂ ಬೋರ್ಡ್ ಮತ್ತು ಅಯ್ಯಪ್ಪ ಸೇವಾ ಸಂಘಂ ಹೈಕೋರ್ಟ್ ಗೆ ಒಂದು ಅಫಿಡೆವಿಟ್ ಸಲ್ಲಿಸಿದ್ದವು. ಯುವತಿಯರು, ನವ ದಂಪತಿಗಳು ಸೇರಿದಂತೆ ಎಲ್ಲ ವಯಸ್ಸಿನ ಮಹಿಳೆಯರೂ ಅಯ್ಯಪ್ಪನ ದೇವಸ್ಥಾನಕ್ಕೆ ಬರುತ್ತಾರೆ ಅಂದಿತ್ತು ಆ ಅಫಿಡೆವಿಟ್. 1940ರಲ್ಲಿ ನನ್ನ ತಾಯಿಯ ಮಡಿಲಲ್ಲಿ ಮಲಗಿ ನನ್ನ ಮೊದಲ ತುತ್ತು ತಿನ್ನುವ ಕಾರ್ಯಕ್ರಮ ಅಯ್ಯಪ್ಪನ ಸನ್ನಿಧಿಯಲ್ಲಿ ನಡೆದಿತ್ತು ಅನ್ನೋದನ್ನ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲಹೆಗಾರರಾಗಿದ್ದ ಟಿಕೆಎಸ್ ನೈಯರ್ ಬಹಿರಂಗವಾಗಿ ಹೇಳಿಯೇ ಹಲವು ವರ್ಷಗಳಾಗಿವೆ. ಆದ್ರೆ 1991 ರಲ್ಲಿ ಬಂದ ಕೇರಳ ಹೈಕೋರ್ಟ್ ಆದೇಶ 10 ರಿಂದ 50 ವರ್ಷದ ಮಹಿಳೆಯರ ಪ್ರವೇಶ ನಿರ್ಬಂಧಕ್ಕೆ ಕಾನೂನಿನ ಮಾನ್ಯತೆ ನೀಡಿತ್ತು. ಅದಾದ ಮೇಲೆ ಅಷ್ಟಮಂಗಲ ಪ್ರಶ್ನೆ ಅನ್ನೋ ಪೂಜೆಯಲ್ಲಿ ಮಹಿಳಾ ಪ್ರವೇಶವಾಗಿದೆ ಅನ್ನೋ ಉತ್ತರ ಬಂದಿದ್ದು, ಆ ನಂತರ ನಟಿ ಜಯಮಾಲ ನಾನು ಅಯ್ಯಪ್ಪನ ದರ್ಶನ ಮಾಡಿದ್ದೆ ಅಂದಿದ್ದು ಎಲ್ಲವೂ ಆಗಿತ್ತು.

10 ರಿಂದ 50 ವರ್ಷದ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಅನ್ನೋದಕ್ಕೆ ಯಾವುದೇ ಐತಿಹಾಸಿಕ ಸಾಕ್ಷ್ಯಗಳಾಗಲೀ, ಶಾಸ್ತ್ರೀಯ ಉಲ್ಲೇಖಗಳಾಗಲೀ ಇಲ್ಲ. ಇದನ್ನ ಸಂಪ್ರದಾಯ ಅನ್ನೋಣ ಅಂದರೆ ನೂರಾರು ವರ್ಷ ಈ ರೀತಿಯ ಆಚರಣೆ ನಡೆದುಕೊಂಡು ಬಂದಿಲ್ಲ. ಈಗ ಪ್ರಶ್ನೆ ಇರೋದು ಅಯ್ಯಪ್ಪನ ದೇಗುಲಕ್ಕೆ ಮಹಿಳಾ ಪ್ರವೇಶ ಅಪಚಾರ, ಅಯ್ಯಪ್ಪನ ಪಾವಿತ್ರ್ಯತೆಗೆ ದಕ್ಕೆ, ಹಿಂದೂ ಧರ್ಮದ ವಿರುದ್ಧ ಷಡ್ಯಂತ್ರ, ಅಯ್ಯಪ್ಪನ ಭಕ್ತರ ಭಾವನೆಗಳಿಗೆ ದಕ್ಕೆ ಅನ್ನೂ ವಿಚಾರದಲ್ಲಿ. ತಮ್ಮ ಧರ್ಮ, ಸಂಸ್ಕೃತಿ, ಆಚರಣೆ ವಿರುದ್ಧ ಏನೋ ಮಸಲತ್ತು ನಡೆಯುತ್ತಿದೆ ಅಂದಾಗ ಅದನ್ನ ಪ್ರತಿಭಟಿಸೋದು ತಪ್ಪಲ್ಲ. ಧಾರ್ಮಿಕ ನಂಬಿಕೆಗಳಿಗೆ ಘಾಸಿಯಾದಾಗ ದನಿಯೆತ್ತುವುದು ಸಹಜ. ಆದ್ರೆ ನಿಜಕ್ಕೂ ಇಬ್ಬರ ಮಹಿಳೆಯರ ದೇವಸ್ಥಾನದಿಂದ ಹಿಂದೂ ಧರ್ಮಕ್ಕೆ ಅಪಚಾರವಾಯ್ತಾ..? ಹಿಂದೂ ಧರ್ಮವನ್ನ ಮುಗಿಸಿಬಿಡಲು ಮಾಡಿದ ಹುನ್ನಾರವಾ ಇದು ಅಂತ ನೋಡಿದ್ರೆ ಅದರ ಲವಲೇಶವೂ ಕಾಣೋದಿಲ್ಲ. ಯಾಕಂದ್ರೆ ಹಿಂದೂ ಧರ್ಮದ ಯಾವ ಶಾಸ್ತ್ರಗಳಲ್ಲೂ 10 ರಿಂದ 50 ವರ್ಷದ ಮಹಿಳೆಯರಿಗೆ ನಿರ್ಬಂಧ ವಿಧಿಸಬೇಕು ಎಂದಿಲ್ಲ. ಯಾವ ಧರ್ಮ ಗ್ರಂಥಗಳಲ್ಲೂ ಇದರ ಉಲ್ಲೇಖ ಇಲ್ಲ. ಟ್ರವಾಂಕೂರು ರಾಜಮನೆತನದ ದಾಖಲೆಗಳಲ್ಲೂ ಈ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಇನ್ನು ಇತಿಹಾಸದಲ್ಲಾದರೂ ಈ ಬಗ್ಗೆ ಸ್ಪಷ್ಟವಾಗಿ ದಾಖಲಾಗಿದೆಯಾ ಅಂದರೆ ಅದೂ ಇಲ್ಲ. ಹಾಗಾಗಿ ಮಹಿಳೆಯರಿಗೆ ನಿರ್ಬಂಧ ವಿಧಿಸುವ ಸಂಪ್ರದಾಯಕ್ಕೆ ಧರ್ಮದ ಬೆಂಬಲವೇ ಇಲ್ಲ ಅಂತಾಯ್ತು. ಇದನ್ನೆಲ್ಲ ನೋಡಿದ್ರೆ ಮಹಿಳೆಯರ ಪ್ರವೇಶದಿಂದ ಧರ್ಮಕ್ಕೆ ಅಪಚಾರ, ಪಾವಿತ್ರ್ಯತೆಗೆ ದಕ್ಕೆ ಎಂಬ ವಾದಗಳಲ್ಲಿ ಹುರುಳಿಲ್ಲ ಅನ್ನೋದು ಸ್ಪಷ್ಟವಾಗುತ್ತೆ.

ಇನ್ನು ಮಹಿಳೆಯರ ಪ್ರವೇಶಕ್ಕೆ ಒತ್ತಾಯಿಸುವ ಹೋರಾಟ ಹಿಂದೂ ಧರ್ಮದ ವಿರುದ್ಧದ ಷಡ್ಯಂತ್ರವಾ…? ಅಥವಾ ಹಿಂದೂ ಧರ್ಮವನ್ನು ಮುಗಿಸಿಬಿಡುವ ಮಸಲತ್ತಾ ಅಂತ ನೋಡಿದರೆ ಅದೂ ಅಲ್ಲ. ಯಾಕಂದ್ರೆ ಹಿಂದೂ ಧರ್ಮ ಇಂತಹ ನೂರಾರು ಆಚರಣೆ. ಮೂಢ ನಂಬಿಕೆ ಮತ್ತು ಕಂದಾಚಾರಗಳನ್ನು ಮೆಟ್ಟಿ ನಿಂತಿರೋದಕ್ಕೆ ಇವತ್ತು ಇಷ್ಟು ಗಟ್ಟಿಯಾಗಿ ನೆಲೆಯೂರಿರೋದು. ಹಿಂದೂ ಧರ್ಮ ಯಾವುದೇ ರಚಿತ ಪುಸ್ತಕದ (scripted) ಆಧಾರದ ಮೇಲೆ ನಿಂತಿಲ್ಲ. ಹಿಂದೂ ಧರ್ಮ ಅನ್ನೋದು ಜೀವನ ಕ್ರಮ, ನಂಬಿಕೆಯ ನೆಲೆಗಟ್ಟು. scripted ಧರ್ಮಗಳು ಕಣ್ಣು ಬಿಡುವ ಸಾವಿರಾರು ವರ್ಷಗಳ ಹಿಂದೆಯೇ ಬೇರೂರಿರುವಂತಹ ಧರ್ಮ. ಮಹಾ ಭಾರತ, ರಾಮಾಯಣ, ಭಗವದ್ಗೀತೆ, ವೇದಗಳು ಇವೆಯಾದರೂ ಅವು ಹಿಂದೂಗಳ ಪಾಲಿಗೆ ಬರೆದಿಟ್ಟ ಶಾಸನಗಳೇನೂ ಅಲ್ಲ. ಅಲ್ಲಿ ಬರೆದಿದ್ದನ್ನೇ ಪಾಲಿಸಬೇಕು ಅನ್ನುವ ಕಟ್ಟಳೆಗಳೇನು ಇಲ್ಲ. ಹಾಗಂತ ಧರ್ಮ ಗ್ರಂಥಗಳನ್ನ ಅಗೌರವ ತೋರಿಸಬೇಕು ಅಂತಲ್ಲ. ಈ ಕಾಲಘಟ್ಟಕ್ಕೆ ಯಾವುದು ಸರಿಯೋ, ಯಾವುದು ಧರ್ಮ ಸಮ್ಮತವೋ..? ಯಾವುದಕ್ಕೆ ಕಾನೂನಿನ ಸಮ್ಮತಿಯಿದೆಯೋ ಅದನ್ನ ಅನುಸರಿಸಿದರೆ ಸಾಕು. 300 ವರ್ಷಗಳ ಮುಸ್ಲಿಂ ದೊರೆಗಳ ಆಡಳಿತ, 200 ವರ್ಷಗಳ ಕ್ರಿಶ್ಚಿಯನ್ ಬ್ರಿಟಿಷ್ ಆಡಳಿತದ ಕಾಲದಲ್ಲೇ ಹಿಂದೂ ಧರ್ಮವನ್ನ ಮುಗಿಸಿಬಿಡಲು ಸಾಧ್ಯವಾಗಲಿಲ್ಲ. ತನ್ನನ್ನು ತಾನು ರಕ್ಷಿಸಿಕೊಳ್ಳುವ ತಾಕತ್ತು ಈ ಧರ್ಮಕ್ಕಿದೆ. ಹಾಗಂತ ಏನೇ ಆದರೂ ಧರ್ಮವೇ ಕಾಪಾಡಿಕೊಳ್ಳುತ್ತದೆ ಅಂತ ಕೈಕಟ್ಟಿ ಕೂರಬೇಕು ಅಂತೇನೂ ಅಲ್ಲ. ಅಂತಹ ಸಂದರ್ಭಗಳು ಬಂದಾಗ ಹಿಂದೂಗಳು ತಿರುಗಿಬಿದ್ದ ಘಟನೆಗಳು ಇತಿಹಾಸದಲ್ಲಿವೆ. ಇಬ್ಬರು ಹೆಣ್ಣು ಮಕ್ಕಳ ಅಯ್ಯಪ್ಪನ ದೇಗುಲ ಪ್ರವೇಶದಿಂದ ಹಿಂದೂ ಧರ್ಮದ ಅಸ್ಥಿತ್ವಕ್ಕೆ ಯಾವ ಅಪಾಯವೂ ಆಗೋದಿಲ್ಲ. ಹಾಗಾಗಿ ಇದನ್ನು ಧರ್ಮದ ವಿರುದ್ಧದ ಷಡ್ಯಂತ್ರ ಎಂದು ಭಾವಿಸಿ ಯಾರೂ ಮನಸ್ಸಿಗೆ ನೋವು ಮಾಡಿಕೊಳ್ಳಬೇಕಾಗಿಲ್ಲ. ಹಿಂದೂ ಧರ್ಮದಲ್ಲಾದ ನೂರಾರು ಸುಧಾರಣೆಗಳಲ್ಲಿ ಇದೂ ಒಂದಾಗಲಿದೆ ಅಷ್ಟೇ. ಇಲ್ಲವಾದ್ರೆ ಸತಿ ಸಹಗಮನ ಪದ್ದತಿ, ದಲಿತರಿಗೆ ದೇಗುಲ ಪ್ರವೇಶಕ್ಕೆ ನಿರ್ಬಂಧ, ದೇವದಾಸಿ ಪದ್ದತಿ ಸೇರಿದಂತೆ ಹಲವು ಕರ್ಮಟ ಪದ್ದತಿಗಳು ಇವತ್ತಿಗೂ ಇರುತ್ತಿದ್ದವು.

ಯಾವ ಧರ್ಮ ಬದಲಾವಣೆಗಳಿಗೆ ತೆರೆದುಕೊಳ್ಳದೇ ನಿಂತ ನೀರಾಗುತ್ತದೋ ಅಲ್ಲಿ ಮೂಲಭೂತವಾದ ಸೃಷ್ಟಿಯಾಗಯತ್ತೆ. ಕರ್ಮಟತನ ಉಲ್ಬಣವಾಗುತ್ತೆ. ಪ್ರತೀ ಬದಲಾವಣೆಗಳನ್ನೂ ವಿರೋಧಿಸುತ್ತಾ ಮೂಲಭೂತವಾದಿಗಳ ಮಾದರಿಯನ್ನು ಅನುಸರಿಸುವ ದರ್ದು ಈ ಧರ್ಮಕ್ಕೆ ಬೇಕಾಗಿಲ್ಲ. ಹಿಂದೂ ಧರ್ಮ ಸಾವಿರಾರು ವರ್ಷಗಳಿಂದ ನಿರಂತರವಾಗಿ ಕಾಲಕ್ಕನುಗುಣವಾಗಿ ಬದಲಾಗುತ್ತಲೇ ಇದೆ. ನಿರಂತರ ಬದಲಾವಣೆಗೆ ತೆರೆದುಕೊಂಡಿರುವುದರಿಂದಲೇ ಭಾರತದಲ್ಲಿ ಗಟ್ಟಿಯಾಗಿ ನೆಲೆಯೂರಿರೋದು. ಆತ್ಮ ವಿಮರ್ಷೆಗೆ ಒಳಗಾದರೆ ಮನುಷ್ಯ ಹೇಗೆ ಅಂತರ್ ಶುದ್ಧನಾಗುತ್ತಾನೋ ಹಾಗೆ ಒಂದು ಧರ್ಮವೂ ವಿಮರ್ಷೆಗೊಳಪಡುತ್ತಿದ್ದರೆ ಅದು ಶುದ್ಧವಾಗುತ್ತಲೇ ಇರುತ್ತದೆ. ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರ ಪ್ರವೇಶವನ್ನು ಹಿಂದೂಗಳು ಒಪ್ಪಿಕೊಂಡರೆ ಈ ಧರ್ಮ ನಿಂತ ನೀರಲ್ಲ ಅಂತ ಮತ್ತೊಮ್ಮೆ ಸಾರಿದಂತಾಗುತ್ತದೆ.

ಕೆಲವು ಬದಲಾವಣೆಗಳು ತನ್ನಿಂದ ತಾನೇ ಘಟಿಸುತ್ತಿರುತ್ತವೆ.. ಆದ್ರೆ ಕೆಲ ಬದಲಾವಣೆಗಳಿಗೆ ಹೋರಾಟ ಅಗತ್ಯ. ಹಾಗಂತ ಮಹಿಳಾ ಹಕ್ಕುಗಳ ಹೋರಾಟಕ್ಕೆ, ಚಳವಳಿಗೆ ಧಾರ್ಮಿಕ ಕ್ಷೇತ್ರಗಳು ವೇದಿಕೆಯಾಗಬಾರದು. ಎಲ್ಲ ಮಹಿಳೆಯರಿಗೂ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಿ ಸುಪ್ರೀಂ ಕೋರ್ಟ್ ನ ಆದೇಶ ಮಾಡಿರೋದೇ ಮಹಿಳಾ ಹೋರಾಟಕ್ಕೆ ಸಿಕ್ಕ ದೊಡ್ಡ ಜಯ. ತೀರ್ಪು ಬಂದ ನಂತರ ದೇಗುಲ ಪ್ರವೇಶಿಸಿ ಅದೇನನ್ನೋ ಸಾಧಿಸಿಬಿಡ್ತೀವಿ ಅಂತ ಹಠಕ್ಕೆ ಬಿದ್ದು ಅಯ್ಯಪ್ಪನ ಗುಡಿಗೆ ನುಗ್ಗಲೆತ್ನಿಸಿದರಲ್ಲ.. ಅದು ಅಕ್ಷಮ್ಯ. ಸುಪ್ರೀಂ ಕೋರ್ಟ್ ಅಯ್ಯಪ್ಪ ದೇವಸ್ಥಾನದ ಧಾರ್ಮಿಕ ವಿಧಿ ವಿಧಾನಗಳನ್ನೆಲ್ಲಾ ಮುರಿದು ದೇಗುಲ ಪ್ರವೇಶಿಸಿ ಅಂತೇನು ತೀರ್ಪು ಕೊಟ್ಟಿಲ್ಲವಲ್ಲ. ಅಲ್ಲಿನ ವ್ರತ ನಿಯಮಗಳ ಪ್ರಕಾರ ನಡೆದು ಅಯ್ಯಪ್ಪನ ದರ್ಶನ ಮಾಡಿದರೆ ಅದು ಸುಪ್ರೀಂ ಕೋರ್ಟ್ ತೀರ್ಪನ್ನ ಗೌರವಿಸಿದಂತಾಗುತ್ತದೆ. ಸುಪ್ರೀಂ ತೀರ್ಪಿನ ನಂತರ ಈಗಾಗಲೇ ಘಾಸಿಯಾಗಿರುವ ಭಾವನೆಗಳಿಗೆ ಬೆಂಕಿ ಹಚ್ಚಬಾರದು. ರೆಹನಾ ಫಾತಿಮಾ, ಮೇರಿ ಸ್ವೀಟಿ, ಕವಿತಾ ಜಕ್ಕಲ್ ಅಂತವರು ದೇವಸ್ಥಾನದೊಳಗೆ ನುಗ್ಗುವವರಂತೆ ಬಂದು ಸಾಧಿಸಿದ್ದೇನು..? ಮಹಿಳಾ ಸಮಾನತೆಯ ಹೋರಾಟದ ಹೆಸರಲ್ಲಿ ಹುಚ್ಚು ಪ್ರಚಾರದ ಹಿಂದೆ ಬಿದ್ದಿರುವ ಇಂತವರದ್ದು ಕಿಡಿಗೇಡಿತನವಷ್ಟೇ. ಈಗ ದೇವಸ್ಥಾನ ಪ್ರವೇಶಿಸಿರುವ ಬಿಂದು ಮತ್ತು ಕನಕ ದುರ್ಗಾಪ್ರಚಾರದ ಹಿಂದೆ ಬಿದ್ದು ದೇವರ ಪ್ರವೇಶ ಮಾಡಿದಂತೆ ಕಾಣುತ್ತಿಲ್ಲ. ದೇಗುಲ ಪ್ರವೇಶದ ವೇಳೆ ಸಾಮಾನ್ಯ ಭಕ್ತರ ಜತೆ ದೇವರ ದರ್ಶನ ಪಡೆದಿದ್ದಾರೆ. ಈ ಬೆಳವಣಿಗೆ ಹಲವು ಮಹಿಳಾ ಭಕ್ತರಿಗೆ ಸ್ಪೂರ್ತಿಯಾದರೆ ಅದೂ ಆಗಿಬಿಡಲಿ. ಸುಪ್ರೀಂ ಕೋರ್ಟ್ ಎಲ್ಲ ವಯಸ್ಸಿನ ಮಹಿಳೆಯರು ಹೋಗಲೇಬೇಕು ಅಂತೇನೂ ಹೇಳಿಲ್ಲ, Ready to Wait ಅನ್ನುವವರು ಅವರಿಚ್ಛೆಗನುಗುಣವಾಗಿ ನಡೆಯಲಿ.. ಹೋಗ ಬಯಸುವವರು ಹೋಗಲಿ ಅಷ್ಟೇ…

ಇಲ್ಲಿ ಕಮ್ಯುನಿಸ್ಟ್ ಆಡಳಿತ ಮತ್ತು ಬಿಜೆಪಿ ಮಧ್ಯದ ರಾಜಕೀಯ ಜಿದ್ದಾಜಿದ್ದಿಯಲ್ಲಿ ಧರ್ಮವನ್ನು ಎಳೆದು ತರಲಾಗಿದೆ ಅಷ್ಟೇ. ಭಾರತದಂತಹ ರಾಷ್ಟ್ರದಲ್ಲಿ ಜಾತಿ, ಧರ್ಮ ಇಲ್ಲದ ರಾಜಕಾರಣ ಊಹಿಸಲೂ ಸಾಧ್ಯವಿಲ್ಲ. ಈ ವಿಚಾರವಾಗಿ ಅಯ್ಯಪ್ಪ ಭಕ್ತರ ಮನವೊಲಿಸುವಂತಹ ಒಂದೇ ಒಂದು ಸಣ್ಣ ಪ್ರಯತ್ನವನ್ನೂ ಕೇರಳದ ಕಮ್ಯುನಿಸ್ಟ್ ಸರ್ಕಾರ ಮಾಡಲಿಲ್ಲ. ಕಮ್ಯುನಿಸ್ಟ್ ನೆಲೆ ಭದ್ರ ಮಾಡಿಕೊಳ್ಳೋದಷ್ಟೇ ಅವರ ಅಜೆಂಡಾ. ಬಿಜೆಪಿ ಈ ವಿಚಾರ ಮುಂದಿಟ್ಟುಕೊಂಡು ಹಿಂದೂಗಳ ಭಾವನೆಗಳನ್ನ ಮತಗಳನ್ನಾಗಿ ಪರಿವರ್ತಿಸಲು ಯತ್ನಿಸುತ್ತಿದೆಯಷ್ಟೇ. ಇದರಲ್ಲಿ ತನಗೂ ಲಾಭವಾಗಲಿ ಅಂತ ಕಾಂಗ್ರೆಸ್ ಕೇರಳದಲ್ಲಿ ಬಿಜೆಪಿಯ ನಿಲುವು ತೆಗೆದುಕೊಂಡಿದೆ..! ಅಯ್ಯಪ್ಪ ದೇವಸ್ಥಾನದ ವಿಷಯದಲ್ಲಿ ಕಾಂಗ್ರೆಸ್ ನ ರಾಷ್ಟ್ರಮಟ್ಟದ ನಿಲುವು ಸ್ತ್ರೀ ಪ್ರವೇಶದ ಪರವಾಗಿದ್ರೆ, ಕೇರಳದಲ್ಲಿ ಮಾತ್ರ ತದ್ವಿರುದ್ಧ. ಈ ರಾಜಕೀಯದ ಮಧ್ಯೆ ಸಿಲುಕಿ ಅಯ್ಯಪ್ಪನ ಸನ್ನಿಧಿಯ ಪಾವಿತ್ರ್ಯತೆ ಹಾಳಾಯಿತು, ಧರ್ಮಕ್ಕೆ ಅಪಚಾರವಾಯಿತು, ಹಿಂದೂ ಧರ್ಮ ಮುಗಿಸಿಬಿಡುವ ಮಸಲತ್ತು ಅಂತ ನೊಂದುಕೊಂಡರೆ ನೋವುಣ್ಣುವವರು ನಾವೇ.. ನಮ್ಮ ನೋವಿನಲ್ಲಿ ನಲಿಯುವವುವರಿದ್ದಾರೆ ಎಚ್ಚರಿಕೆ…

– ಶಶಿವರ್ಣಂ

#Shabarimala #RightToPray #WomenEntry #Ayyappa #Hindutva

ದೇಶದ ಮೊದಲ ಪ್ರಧಾನಿಯಾಗಬೇಕಿತ್ತು ಸರ್ದಾರ್ ಪಟೇಲ್..

ಈ ದೇಶವನ್ನು ಬಹುಕಾಲ ಆಳಿದ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಅನ್ನೋದಕ್ಕೆ ಕಿಂಚಿತ್ತು ಬೆಲೆ ಇದ್ದಿದ್ದರೆ ಈ ದೇಶದ ಮೊದಲ ಪ್ರಧಾನಿಯಾಗಬೇಕಿತ್ತು ಸರ್ದಾರ್ ವಲ್ಲಭ ಭಾಯ್ ಪಟೇಲ್. ಆಂತರಿಕ ಪ್ರಜಾಪ್ರಭುತ್ವ ಅನ್ನೋದಕ್ಕೆ ಅರ್ಥವೇ ಇಲ್ಲದಿದ್ದರಿಂದ ನೆಹರು ಮೊದಲ ಪ್ರಧಾನಿಯಾದರು. 1946ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆದಿತ್ತು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದವರೇ ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ದೇಶ ಮುನ್ನಡೆಸಬೇಕಿತ್ತು. ದೇಶದ 15 ಕಾಂಗ್ರೆಸ್ ಕಮಿಟಿ ಸದಸ್ಯರಲ್ಲಿ 12 ಮತಗಳು ಸರ್ದಾರ್ ಪಟೇಲ್ರಿಗೆ ಬಿದ್ದಿದ್ದವು. ಉಳಿದ ಮೂರು ಕಮಿಟಿ ಸದಸ್ಯರು ಯಾರನ್ನೂ ಬೆಂಬಲಿಸಲಿಲ್ಲ.. ನೆಹರು ಅವರ ಪರವಾಗಿ ಒಂದೇ ಒಂದು ಮತವೂ ಬೀಳಲಿಲ್ಲ. ಹೀನಾಯ ಸೋಲಿನಿಂದ ಕುದ್ದು ಹೋಗಿದ್ದ ನೆಹರು, ಗಾಂಧೀಜಿ ಅವರ ಬಳಿ ಕಾಂಗ್ರೆಸ್ ಅನ್ನು ಒಡೆಯುವ ಮಾತುಗಳನ್ನಾಡಿದ್ದರು.. ದೇಶ ಕಟ್ಟಬೇಕಾದ ಸಮಯದಲ್ಲಿ ಒಡಕಿನ ಮಾತು ಕೇಳಿದ ಗಾಂಧೀಜಿ, ಸರ್ದಾರ್ ಪಟೇಲರಿಗೆ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಮತ್ತು ಪ್ರಧಾನಿ ಪಟ್ಟದಿಂದ ಹಿಂದೆ ಸರಿಯುವಂತೆ ಸೂಚಿಸಿದರು ಅನ್ನುತ್ತದೆ ನೈಜ ಇತಿಹಾಸ.. ಗಾಂಧೀಜಿಯುವರ ಮೇಲೆ ಅಪಾರ ಗೌರವ ಹೊಂದಿದ್ದ ಸರ್ದಾರ್ ಪಟೇಲ್ ವಿರೋಧದ ಮಾತಾಡದೇ ಹಿಂದೆ ಸರಿದು ಎರಡನೇ ಸ್ಥಾನ ಒಪ್ಪಿಕೊಂಡಿದ್ದರು. ಆದ್ರೆ ಈ ಇತಿಹಾಸವನ್ನು ಸ್ವಾತಂತ್ರಾ ನಂತರದ ಪೀಳಿಗೆಗೆ ಹೇಳದೇ ಮೋಸ ಮಾಡಿದ್ದು ಯಾರು..? ದೇಶ ತುಂಡು ತುಂಡಾಗಲು ಬಿಡದೇ ಬಂಡೆಯಂತೆ ನಿಂತು ಒಗ್ಗೂಡಿಸಿದ ಸರ್ದಾರ್ ಪಟೇಲರಿಗೆ ನೆಹರು ಅವರಿಗೆ ಸಿಕ್ಕ ಪ್ರಾಶಸ್ತ್ಯವಾಗಲೀ, ಗೌರವವಾಗಲೀ ಸಿಗಲಿಲ್ಲ.. ಮೊದಲ ಪ್ರಧಾನಿಯಾದ ನೆಹರು ತಮಗೆ ತಾವೇ ಭಾರತ ರತ್ನ ಪ್ರಶಸ್ತಿ ಕೊಟ್ಟುಕೊಂಡರು.. ಆದ್ರೆ ದೇಶ ಕಟ್ಟಿದ ನೇತಾರನಿಗೆ 1991ರಲ್ಲಿ ಮರಣೋತ್ತರ ಭಾರತ ರತ್ನ ನೀಡಲಾಯಿತು.. ಈಗ ಸರ್ದಾರ್ ಪಟೇಲ್ರ ವ್ಯಕ್ತಿತ್ವದಷ್ಟೇ ಎತ್ತರದ ಪ್ರತಿಮೆ ನಿರ್ಮಿಸಿ ಗೌರವಿಸಲಾಗಿದೆ..

#StatueOfUnity #SardarVallabhbhaiPatel #RashrtriyaEktaDivas #RunForUnity #IronManOfIndia

ಜಲಿಯನ್ ವಾಲಾಬಾಗ್ ಹತ್ಯಾಕಾಂಡ : ಆ ಮಾರಣಹೋಮ ನಡೆದು ಇಂದಿಗೆ 99 ವರ್ಷ…!!!

1ಅದು 99 ವರ್ಷಗಳ ಹಿಂದೆ ನಡೆದುಹೋದ ಭೀಕರ ಮಾರಣಹೋಮ. ಮನುಕುಲದ ಇತಿಹಾಸದ ಅತ್ಯಂತ ನಿರ್ಧಯ ಹತ್ಯಾಕಾಂಡ. ಆ ಹತ್ಯಾಕಾಂಡದ ರೂವಾರಿ ನಿರ್ಧಯಿ ಪಶು ಜನರಲ್ ಡಯರ್. ಇಷ್ಟೊಂದು ದೊಡ್ಡ ಮಟ್ಟದ ನಿರ್ಧಯ ಹತ್ಯಾಕಾಂಡ ಭಾರತದ ಇತಿಹಾಸದಲ್ಲಿ ಬೇರೆ ಯಾವುದೂ ಇಲ್ಲ… ಅದೇ ಜಲಿಯನ್ ವಾಲಾಬಾಗ್ ಹತ್ಯಾಕಾಂಡ. ಆ ಹತ್ಯಾಕಾಂಡದಲ್ಲಿ ಅವತ್ತು ಪ್ರಾಣಬಿಟ್ಟಿದ್ದು 1200 ಕ್ಕೂ ಹೆಚ್ಚು ಅಮಾಯಕರು…ಇಂದಿಗೆ ಆ ಘಟನೆ ನಡೆದು 99 ವರ್ಷ. ಅದು ಅಮೃತಸರದ ಜಲಿಯನ್ ವಾಲಾಬಾಗ್ ಉದ್ಯಾನವನ. 1919 ರ ಏಪ್ರಿಲ್ 13 ರಂದು ಅವತ್ತು ಉಧ್ಯಾನದಲ್ಲಿ ಸಾವಿರಾರು ಮಂದಿ ಬೈಸಾಕಿ ಹಬ್ಬ ಆಚರಿಸಲು ಸೇರಿದ್ದರು. ಬೈಸಾಕಿ ಹಬ್ಬ ಸಿಕ್ಕರ ಸಂಭ್ರಮದ ದಿನಗಳಲ್ಲೊಂದು. ಹಬ್ಬಕ್ಕೆ ಅಂತ ಸೇರಿದ್ದ ಜನರಲ್ಲಿ ಬ್ರಿಟೀಷರ ವಿರುದ್ಧದ ಆಕ್ರೋಶ ಇತ್ತು. ಹಾಗಾಗಿಯೇ ಉದ್ಯಾನವನದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು ಸಾವಿರಾರು ಮಂದಿ. ಅವತ್ತು ಸಂಜೆ ಐದೂ ಹದಿನೈದರ ಸಮಯ. 90 ಸೈನಿಕರೊಂದಿಗೆ ಉದ್ಯಾನಕ್ಕೆ ರಕ್ತಪಿಪಾಸುವಂತೆ ಬಂದವನು ಜನರಲ್ ಡಯರ್. ಒಳಬಂದವನೇ ಒಂದಿನಿತೂ ಯೋಚಿಸದೇ ಸೈನಿಕರಿಗೆ ಗುಂಡಿನ ಮಳೆಗರೆಯುವಂತೆ ಆಜ್ಞೆಯಿತ್ತಿದ್ದ. ಸುಮಾರು 15 ನಿಮಿಷಗಳ ಕಾಲ ಗುಂಡಿನ ಬೋರ್ಗರೆತ. ಅಷ್ಟೇ ಉದ್ಯಾನದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದವರ ಉಸಿರನ್ನ ಅಷ್ಟು ಬರ್ಭರವಾಗಿ ನಿಲ್ಲಿಸಲಾಗಿತ್ತು.

ಅವತ್ತು ಗುಂಡಿನ ಬೋರ್ಗರೆತದಿಂದ ತಪ್ಪಿಸಿಕೊಳ್ಳಲೆಂದು ಉದ್ಯಾನದಲ್ಲಿದ್ದ ಭಾವಿಗೆ ಬಿದ್ದು ಪ್ರಾಣಬಿಟ್ಟವರ ಸಂಖ್ಯೆಯೇ 120 ಕ್ಕೂ ಹೆಚ್ಚು. ಅವತ್ತಿನ ಹತ್ಯಾಕಾಂಡದಲ್ಲಿ ಸತ್ತವರ ಸಂಖ್ಯೆ  379. ಇದು ಅಂದಿನ ಬ್ರಿಟಿಷ್ ಸರ್ಕಾರ ಕೊಟ್ಟ ಕಾಟಾಚಾರದ ಲೆಕ್ಕಾಚಾರ. ಅಸಲಿಗೆ ಅವತ್ತು ಬ್ರಿಟಿಷರ ಗುಂಡಿಗೆ ಬಲಿಯಾದವರ ಸಂಖ್ಯೆ 1200 ಕ್ಕೂ ಹೆಚ್ಚು ಅನ್ನುತ್ತದೆ ಇತಿಹಾಸ. ಮಕ್ಕಳೂ ಮಹಿಳೆಯರೂ ಅನ್ನೋದನ್ನೂ ನೋಡದೇ ನಿರ್ಧಯವಾಗಿ ಮಾರಣಹೋಮ ನಡೆಸಲಾಗಿತ್ತು. ಕಾನೂನು ಬಾಹಿರವಾಗಿ ಇಷ್ಟೊಂದು ದೊಡ್ಡ

ರಕ್ತಪಿಪಾಸು ಜನರಲ್ ಡಯರ್

ರಕ್ತಪಿಪಾಸು ಜನರಲ್ ಡಯರ್

ಸಂಖ್ಯೆಯಲ್ಲಿ ಜನ ಸೇರಿದ್ದು ಅಪರಾಧನ ಅದಕ್ಕಾಗಿಯೇ ಈ ಶಿಕ್ಷೆ ಅಂದಿತ್ತು ಅವತ್ತಿನ ಬ್ರಿಟಿಷ್ ಸರ್ಕಾರ. ಇಷ್ಟೊಂದು ಜನರನ್ನ ಹೀಗೆ ನಿಲ್ಲಿಸಿ ಗುಂಡು ಹೊಡೆಯುವುದು ಯಾವ ಕಾನೂನು ಅಂತ ಪ್ರಶ್ನಿಸುವ ಗುಂಡಿಗೆ ಯಾರಿಗೂ ಇರಲಿಲ್ಲ. ಕಾಟಾಚಾರಕ್ಕೊಂದು ತನಿಖಾ ಸಮಿತಿ ನೇಮಕ ಮಾಡಿ ಕೈತೊಳೆದುಕೊಂಡಿತ್ತು ಬ್ರಿಟಿಷ್ ಸರ್ಕಾರ. ಜನರಲ್ ಡಯರ್ ಮಾಡಿದ ಕೆಲಸಕ್ಕೆ ಬ್ರಿಟನ್ ನಲ್ಲಿ ಶ್ಲಾಘನೆಯೂ ವ್ಯಕ್ತವಾಗಿತ್ತು. ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮವನ್ನ ಜನರಲ್ ಡಯರ್ ಹತ್ತಿಕ್ಕಿದ ಅಂತ ಸಂಭ್ರಮಿಸಿದ್ದರು ಬ್ರಿಟಿಷರು. ಹಾಗೆ 1200 ಕ್ಕೂ ಹೆಚ್ಚು ಜನರ ರಕ್ತ ಕುಡಿದವನು ಕೆಲದಿನಗಳ ನಂತರ ಬ್ರಿಟನ್ ಗೆ ಹೋಗಿ ನೆಮ್ಮದಿಯಾಗಿಬಿಟ್ಟ. ಅವತ್ತು ಆತನಿಗೆ ಶಿಕ್ಷೆ ಕೊಡಿ ಅಂತ ಕೇಳುವ ಗಟ್ಟಿ ದ್ವನಿ ಗಾಂಧೀಜಿಗೂ ಇರಲಿಲ್ಲ, ನೆಹರೂ ಗೂ ಇರಲಿಲ್ಲ. ಅವತ್ತಿನ ಘಟನೆಯನ್ನ ಕೇಳಿ ಅಕ್ಷರಶಃ ಕುದ್ದು ಹೋದವನು ಬಾಲಕ ಉದಮ್ ಸಿಂಗ್. ಜಲಿಯನ್ ವಾಲಾಬಾಗ್ ನಲ್ಲಿನ ಮಣ್ಣನ್ನ ಮನೆಗೆ ಕೊಂಡೊಯ್ದು ತನ್ನ ಜೀವಿತಾವದಿಯವರೆಗೂ ಜೊತೆಯಲ್ಲಿಟ್ಟುಕೊಂಡಿದ್ದ, ಬ್ರಿಟೀಷರನ್ನ ಭಾರತದಿಂದ ಹೊರಗಟ್ಟಲೇ ಬೇಕು ಅಂತ ಪಣ ತೊಟ್ಟಿದ್ದ.

ಜಲಿಯನ್​ ವಾಲಾಬಾಗ್​ನಲ್ಲಿ ಮಾರಣಹೋಮ ನಡೆಸಿದ್ದ ಜನರಲ್​ ಡಯರ್​ನನ್ನ ಅವನು ಮಾಡಿದ ಪಾಪವೇ ಬಲಿತೆಗೆದುಕೊಂಡಿತ್ತು.  1200 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಎಂಟೇ ವರ್ಷಕ್ಕೆ ಜನರಲ್​ ಡಯರ್ ಪಾರ್ಶ್ವವಾಯು ರೋಗಕ್ಕೆ ತುತ್ತಾಗಿದ್ದ. ಅದಾದ ನಂತರ ಕೊನೆಯ ದಿನಗಳಲ್ಲಿ ಆತನಿಗೆ ಮಾತನಾಡಲೂ ಆಗುತ್ತಿರಲಿಲ್ಲ. ಮಾಡಿದ ಘೋರ ಅಪರಾಧಕ್ಕೆ ಶಿಕ್ಷೆ ಅನುಭವಿಸಿದವನಂತೆ ಜನರಲ್​ ಡಯರ್ 1927ರ ಒಂದು ದಿನ ಮಲಗಿದ್ದಲ್ಲೇ ಕಣ್ಣು ಮುಚ್ಚಿದ. ಅಲ್ಲಿಗೆ ಭಾರತದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ ಸೃಷ್ಟಿಗೆ ಕಾರಣವಾಗಿದ್ದವನ ಕತೆ ಅಂತ್ಯವಾಗಿತ್ತು.

ಹತ್ಯಾಕಾಂಡ ನಡೆಸಿದವನು ಮಲಗಿದ್ದಲ್ಲೇ ಪ್ರಾಣ ಬಿಟ್ಟ ಅನ್ನೋದೇನೋ ನಿಜ. ಆದರೆ ಪ್ರತೀಕಾರದ ಸೇಡಿನ ಜ್ವಾಲೆ ಮಾತ್ರ ಆರಿರಲಿಲ್ಲ. ಮಾರಣ ಹೋಮದ ಸೇಡಿನ ಜ್ಬಾಲೆ ದಹಿಸುತ್ತಿದ್ದದ್ದು ಅವನೊಬ್ಬನಲ್ಲಿ ಮಾತ್ರ. ಆತನ ಹೆಸರು ಉದಮ್ ಸಿಂಗ್. ಹತ್ಯಾಕಾಂಡವನ್ನ ಕಣ್ಣಾರೆ ನೋಡಿದ್ದ ಮತ್ತು ಬ್ರಿಟೀಷರ ಗುಂಡುಗಳಿಂದ ಗಾಯಗೊಂಡಿದ್ದ ಉದಮ್ ಸಿಂಗ್ ಹತ್ಯಾಕಾಂಡಕ್ಕೆ ಪ್ರತೀಕಾರ ಕೈಗೊಳ್ಳಲು ಪಣ ತೊಟ್ಟಿದ್ದ. ಪ್ರತೀಕಾರ ಯಾರ ವಿರುದ್ಧ..? ಸಾಮೂಹಿಕವಾಗಿ ಗುಂಡಿಟ್ಟಿದ್ದವನು ಆಗಲೇ ಪ್ರಾಣ ಬಿಟ್ಟಾಗಿತ್ತು. ಆದ್ರೆ ಜನರಲ್​ ಡಯರ್​ಗೆ ಹಾಗೆ ಜನರ ಮೇಲೆ ಗುಂಡಿನ ಮಳೆ ಸುರಿಸುವಂತೆ ಆದೇಶ ಕೊಟ್ಟಿದ್ದನಲ್ಲ ಅವನ ವಿರುದ್ಧ. ಆತನ ಹೆಸರು ಮೈಕಲ್. ಜಲಿಯನ್​ ವಾಲಾ ಬಾಗ್ ಹತ್ಯಾಕಾಂಡ ನಡೆದಾಗ ಪಂಜಾಬ್​ನ ಲೆಫ್ಟಿನೆಂಟ್ ಗೌವರ್ನರ್​ ಆಗಿದ್ದವನು ಈ ಮೈಕಲ್. ಮೈದಾನದಲ್ಲಿ ಸೇರಿದ್ದ ಜನರ ಮೇಲೆ ಸಾಮೂಹಿಕವಾಗಿ ಗುಂಡಿಕ್ಕಲು ಈತನ ಆದೇಶವೇ ಕಾರಣ ಅನ್ನೋದು ಬಹಿರಂಗವಾಗಲು ತುಂಬಾ ದಿನಗಳೇನು ಹಿಡಿಯಲಿಲ್ಲ. ಈ ಬಗ್ಗೆ ಮಾತನಾಡಿದ್ದ ಮೈಕಲ್ ಹತ್ಯಾಕಾಂಡ ನಡೆಸಿದ್ದು ಸರಿಯಾದ ಕ್ರಮವಾಗಿತ್ತು ಎಂದು ಸಮರ್ಥಿಸಿಕೊಂಡಿದ್ದ. ಜನರಲ್​ ಡಯರ್​ಗೆ ಹತ್ಯಾಕಾಂಡ ನಡೆಸುವಂತೆ ಲೆಫ್ಟಿನೆಂಟ್ ಗೌವರ್ನರ್​ ಆಗಿದ್ದ ಮೈಕಲ್​ ಸ್ವತಃ ಸೂಚನೆ ನೀಡಿದ್ದ ಅನ್ನೋದು ಆತನ ಈ ಹೇಳಿಕೆಯಿಂದ ಸ್ಪಷ್ಟವಾಗಿ ಹೋಗಿತ್ತು. ಅದಕ್ಕೇ ಹೇಳಿದ್ದು ಪ್ರತೀಕಾರದ ಜ್ವಾಲೆ ಆರಿರಲಿಲ್ಲ ಅಂತ.

ಲೆಫ್ಟಿನೆಂಟ್ ಗೌವರ್ನರ್ ಮೈಕಲ್

ಹೇಗಾದರೂ ಮಾಡಿ ಹತ್ಯಾಕಾಂಡ ನಡೆಸಲು ಕಾರಣನಾಗಿದ್ದ ಲೆಫ್ಟಿನೆಂಟ್ ಗೌವರ್ನರ್  ಮೈಕಲ್​ ನನ್ನ ಹತ್ಯೆ ಮಾಡೋದು ಉದಮ್ ಸಿಂಗ್ ನ ಗುರಿಯಾಗಿತ್ತು. ಆ ಗುರಿಯ ಸಾಕಾರಕ್ಕಾಗಿ ಉದಮ್ ಸಿಂಗ್ ಹೋರಾಟ ನಡೆಸಿದ್ದು ಬರೊಬ್ವರಿ ಇಪ್ಪತ್ತೊಂದು ವರ್ಷ. 1927 ರಲ್ಲಿ ಉದಮ್ ಸಿಂಗ್ ನನ್ನ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದ ಮೇಲೆ ಬ್ರಿಟೀಷ್ ಇಂಡಿಯಾ ಸರ್ಕಾರ ಬಂಧಿಸಿತ್ತು. ಬ್ರಿಟೀಷರ ಹಿಂಸಾತ್ಮಕ ಅಂತ್ಯಕ್ಕಾಗಿ ಹೋರಾಡುತ್ತಿದ್ದೇನೆ ಅಂತ ಕೋರ್ಟ್ ನಲ್ಲಿ ದಿಟ್ಟತನದಿಂದ ಹೇಳಿದ್ದ ಉದಮ್ ಸಿಂಗ್.

ಪ್ರತೀಕಾರ ತೀರಿಸಿಕೊಂಡ ಉದಮ್ ಸಿಂಗ್

ಪ್ರತೀಕಾರ ತೀರಿಸಿಕೊಂಡ ಉದಮ್ ಸಿಂಗ್

ಹಾಗೆ ಉದಮ್ ಸಿಂಗ್ ನನ್ನ ನಾಲ್ಕು ವರ್ಷಗಳ ಕಾಲ ಜೈಲುಕಂಬಿಯ ಹಿಂದೆ ತಳ್ಳಿತ್ತು ಬ್ರಿಟೀಷ್ ಸರ್ಕಾರ. ನಾಲ್ಕು ವರ್ಷಗಳ ಕಾಲ ಸೆರೆವಾಸ ಅನುಭವಿಸಿದ ಉದಮ್ ಸಿಂಗ್ ಗೆ ಬ್ರಿಟೀಷರ ಮೇಲಿನ ದ್ವೇಷದ ಜ್ವಾಲೆ ಇನ್ನಷ್ಟು ಹೆಚ್ಚಾಗಿತ್ತು. ಹತ್ಯಾಕಾಂಡಕ್ಕೆ ಕಾರಣವಾದವನ ರಕ್ತ ಹರಿಸಲೇಬೇಕು ಎಂದು ಉದಮ್​ ಸಿಂಗ್ ನಿರ್ಧರಿಸಿದ್ದ. ಹೇಗಾದರೂ ಮಾಡಿ ಇಂಗ್ಲೆಂಡ್ ತಲುಪಿಬಿಡುವ ನಿರ್ಧಾರ ಮಾಡಿಬಿಟ್ಟಿದ್ದ. 1934 ರಲ್ಲಿ ಕಾಶ್ಮೀರ ಮೂಲಕ ಇಸ್ಲಾಮಾಬಾದ್, ಕಾಬೂಲ್ ದಾಟಿ ಜರ್ಮನಿ ಸೇರಿಕೊಂಡ. ಕೆಲಕಾಲ ಜರ್ಮನಿಯಲ್ಲಿದ್ದ ಉದಮ್ ಸಿಂಗ್ ಆ ನಂತರ ಇಂಗ್ಲೆಂಡ್ ಮುಟ್ಟಿದ್ದ. ಲಂಡನ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಮೈಕೆಲ್ ನ ಹತ್ಯೆಗೆ ಸಂಚು ಮಾಡುತ್ತಲೇ ಇದ್ದ. ಆ ದಿನ ಬಂದೇ ಬಿಟ್ಟಿತ್ತು, ಅದು 1940 ಮಾರ್ಚ್ 13 ನೇ ತಾರೀಕಿನ ದಿನ. ಹತ್ಯಾಕಾಂಡಕ್ಕೆ  ಪ್ರತೀಕಾರ ತೆಗೆದುಕೊಳ್ಳುವ ಅವಕಾಶ ಉದಮ್ ಸಿಂಗ್ ಗೆ ಸಿಕ್ಕಿಬಿಟ್ಟಿತ್ತು. ಲಂಡನ್ ನ ಕ್ಯಾಕ್ ಸ್ಟನ್ ಹಾಲ್ ನಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಬಂದಿದ್ದ ಲೆಫ್ಟಿನೆಂಟ್ ಗೌವರ್ನರ್  ಮೈಕಲ್​ ಬಂದಿದ್ದ. ಇದೇ ಸರಿಯಾದ ಸಮಯ ಎಂದು ಉದಮ್​ ಸಿಂಗ್​ ಆ ಕಾರ್ಯಕ್ರಮಕ್ಕೆ ಹೋಗಿದ್ದ. ಅಷ್ಟೇ ಉದಮ್​ ಸಿಂಗ್​ ಕೈನಲ್ಲಿದ್ದ ಪಿಸ್ತುಲ್​ನಿಂದ ಎರಡು ಗುಂಡುಗಳು ಕ್ಷಣ ಮಾತ್ರದಲ್ಲಿ ಮೈಕಲ್​ ಎದೆ ಹೊಕ್ಕಿದ್ದವು. ಅಷ್ಟೇ ಕೆಳಗೆ ಬಿದ್ದವನು ಅಲ್ಲೇ ಪ್ರಾಣ ಬಿಟ್ಟ. ಹಾಗೆ ಗುಂಡಿಗೆ ಗುಂಡಿನಿಂದಲೇ ಉತ್ತರಿಸಿ ಪ್ರತೀಕಾರ ತೀರಿಸಿಕೊಂಡಿದ್ದ ಉದಮ್ ಸಿಂಗ್.

ಉದಮ್ ಸಿಂಗ್ ಮಾಡಿದ ಕೆಲಸವನ್ನ ಇಡೀ ದೇಶ ಪ್ರಶಂಸಿಸಿತ್ತು. ಆದರೇ ಆ ಇಬ್ಬರ ಹೊರತಾಗಿ. ಮಹಾತ್ಮ ಗಾಂಧಿ ಮತ್ತು ನೆಹರೂ ಈ ಪ್ರತೀಕಾರವನ್ನ ವಿವೇಚನಾ ರಹಿತ ಎಂದಿದ್ದರು. ಅವತ್ತು 1200 ಮಂದಿಯ ರಕ್ತ ನಿರ್ಧಯವಾಗಿ ಹರಿದಾಗ ವಿವೇಚನೆ ಎಲ್ಲಿತ್ತು ಎಂಬ ಬಗ್ಗೆ ಒಂದಿನಿತೂ ಯೋಚಿಸಿರಲಿಲ್ಲ ಈ ಇಬ್ಬರು ಮಹಾನ್ ನಾಯಕರು. ಸತ್ತವರ ಗೋರಿಯ ಮೇಲೆ ಇಂತದ್ದೊಂದು ಷರಾ ಬರೆದು ನಿರಮ್ಮಳವಾಗಿಬಿಟ್ಟರು. ಆದ್ರೆ ಉದಮ್ ಸಿಂಗ್ ಹೇಳಿದ್ದು ಮಾತ್ರ ಕೆಚ್ಚದೆಯ ಮಾತುಗಳನ್ನ. ” ನಾನು ಹೀಗೆ ಮಾಡಲು ಕಾರಣ ಆತನ ಮೇಲಿದ್ದ ದ್ವೇಷ. ಆತನ ಸಾವನ್ನ ಅವನೇ ಬರಮಾಡಿಕೊಂಡ. ನನ್ನ ಜನಗಳ ರಕ್ತಕುಡಿದವನನ್ನ ನಾನು ಅಳಿಸಿ ಹಾಕಿದೆ. ಇಪ್ಪತ್ತೊಂದು ವರ್ಷಗಳಿಂದ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ನನಗೀಗ ಆನಂದವಾಗಿದೆ, ನಾನು ಬ್ರಿಟೀಷರಿಂದ ಸಾಯುತ್ತಿರುವ ಭಾರತೀಯರನ್ನ ನೋಡಿದ್ದೇನೆ. ಇದು ನನ್ನ ಕರ್ತವ್ಯ ತಾಯ್ನಾಡಿಗಾಗಿ ನಾನು ಪ್ರಾಣ ತ್ಯಾಗ ಮಾಡುವುದಕ್ಕಿಂತಲೂ ಹೆಚ್ಚಿನ ಗೌರವ ಇನ್ನೇನಿದೆ.” ಹೀಗೆ ದಿಟ್ಟತನದ ಮಾತುಗಳನ್ನಾಡಿ ಪ್ರತೀಕಾರ ತೆಗೆದುಕೊಂಡವನನ್ನ ಮೂರು ತಿಂಗಳಲ್ಲೇ ಮೈಕಲ್​ ಹತ್ಯೆ ಆರೋಪದ ಮೇಲೆ ನೇಣಿಗೇರಿಸಲಾಯಿತು.

ಸ್ವಾತಂತ್ರಾ ನಂತರ ಅಂದಿನ ನಮ್ಮ ಪ್ರಧಾನಿ ನೆಹರು ಹೇಳಿದ್ದೇನು ಗೊತ್ತಾ… “ನಾವೆಲ್ಲರೂ ಸ್ವತಂತ್ರರಾಗಲು ಪ್ರಾಣ ಪಣಕ್ಕಿಟ್ಟ ಶಾಹಿದ್-ಇ-ಅಜೀಮ್ ಉದಮ್ ಸಿಂಗ್ ನನ್ನ ಗೌರವಾದರಗಳಿಂದ ನಮಿಸುವೆ.” ಮೈಕಲ್​ನನ್ನು ಹತ್ಯೆ ಮಾಡಿದಾಗ ಬ್ರಿಟೀಷರನ್ನು ಓಲೈಸಲು ವಿವೇಚನಾ ರಹಿತ ಅಂತ ಖಂಡಿಸಿದ್ದ ನೆಹರು ಸ್ವತಂತ್ರ್ಯ ಸಿಕ್ಕಮೇಲೆ ಉದಮ್ ಸಿಂಗ್ ಗೆ ನಮಿಸುವ ಮಾತುಗಳನ್ನಾಡಿದ್ದರು. ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ಸಮಾದಿಯ ಮೇಲೆ ನೆಹರು ಪ್ರಧಾನಿಯಾಗಿ ವಿರಾಜಮಾನರಾದರು. ಇದಾದ ಮೇಲೆ ಸ್ವತಃ ನೆಹರು, ಜಲಿಯನ್ ವಾಲಾಬಾಗ್ ನಲ್ಲಿ ಮಾರಣ ಹೋಮದ ನೆನಪಿಗೆ ನಿರ್ಮಿಸಲಾದ ಸ್ಮಾರಕವನ್ನು ಉದ್ಘಾಟಿಸಿದ್ರು. ಅವತ್ತು ಗುಂಡಿಗೆ ಎದೆಯೊಡ್ಡಿ ವೀರಮರಣವನ್ನಪ್ಪಿದವರ ಆತ್ಮಗಳು ನೆಹರು ಅವರನ್ನ ನೋಡಿ ಅದೆಷ್ಟು ಅಸಹ್ಯ ಪಟ್ಟುಕೊಂಡವೋ….

ಸಲ್ಮಾನ್ ಪರ ಕಣ್ಣೀರು ಸುರಿಸುವ ಗೋಸುಂಬೆಗಳೂ ಇದ್ದಾರೆ..!

9624338-3x2-700x467ದೊಡ್ಡ ಅಭಿಮಾನಿ ಬಳಗವನ್ನಿಟ್ಟುಕೊಂಡವನು ಕಂಠಪೂರ್ತಿ ಕುಡಿದು ಯಾರ ಮೇಲೆ ಬೇಕಾದರೂ ಕಾರು ಹತ್ತಿಸಬಹುದು. ಸಂರಕ್ಷಿತ ವನ್ಯಜೀವಿಗಳನ್ನು ಭೇಟೆಯಾಡಬಹುದು. ಅಂಥವನನ್ನು ಈ ದೇಶದ ಕಾನೂನು ಅಪರಾಧಿ ಎಂದು ಘೋಷಿಸಿ ಜೈಲಿಗೆ ತಳ್ಳಿದರೆ ಬಾಲಿವುಡ್ ಸ್ಟಾರ್ ಗಳು, ಆತನ ಅಂಧ ಅಭಿಮಾನಿಗಳು #WeLoveYouSalmanKhan , #SaveSalman ಎಂದು ಅಭಿಯಾನ ಮಾಡುತ್ತಿದ್ದಾರೆ. ನಾಚಿಕೆಯಾಗಬೇಕು ಇವರ ಹುಚ್ವು ಅಭಿಮಾನಕ್ಕೆ, ಲಜ್ಜೆಗೇಡಿತನಕ್ಕೆ..! ಬಾಲಿವುಡ್ ನಟನಾದ ಮಾತ್ರಕ್ಕೆ, ದೊಡ್ಡ ಅಭಿಮಾನಿ ಬಳಗ ಹೊಂದಿದ ಮಾತ್ರಕ್ಕೆ ಆತನನ್ನು ಈ ದೇಶದ ಕಾನೂನು ಕ್ಷಮಿಸಬೇಕಾ..? ಈ ದೇಶದಲ್ಲಿ ಶ್ರೀಮಂತರಿಗೊಂದು ಕಾನೂನು, ಬಡವರಿಗೊಂದು ಕಾನೂನಿದೆಯಾ..? ಕಾನೂನಿನ ಪ್ರಕಾರ ಅಪರಾಧಿ ಎಂದು ಘೋಷಿಸಲ್ಪಟ್ಟವನು ಯಾರೇ ಆದರೂ, ಎಂಥವನೇ ಆದರೂ ಆತನ ಬಗ್ಗೆ ಮೊಸಳೆ ಕಣ್ಣೀರು ಸುರಿಸಬೇಕಾ..? 20 ವರ್ಷಗಳ ನಂತರ ತೀರ್ಪು ಬಂದರೆ ಆರೋಪ ಹೊತ್ತವನ ಬೆಂಬಲಕ್ಕೆ ನಿಲ್ಲಬೇಕಾ..? ‘Justice is delayed is Justice denied ‘ ಅನ್ನೋ ಮಾತು ಸಲ್ಮಾನ್ ಖಾನ್ ನ ಹಿಟ್ ಅಂಡ್ ರನ್ ಕೇಸಿಗೆ, ಕೃಷ್ಣ ಮೃಗ ಭೇಟೆಯಾಡಿದ ಪ್ರಕರಣಕ್ಕೆ ಅನ್ವಯವಾಗುವುದಿಲ್ಲವಾ..? ಮುಂಬೈ ದಾಳಿ ಸಂಚಿನ ಕೇಸ್ ನಲ್ಲಿ ಸಂಜಯ್ ದತ್ ಗೆ ಶಿಕ್ಷೆ ಘೋಷಿಸಿದಾಗಲೂ ಇದೇ ರೀತಿಯ ನಾಚಿಕೆಗೇಡಿನ ಅಭಿಯಾನ ನಡೆದಿತ್ತು. ಇವತ್ತು ಸಲ್ಮಾನ್ ಪರ ಅಭಿಯಾನ ಮಾಡುತ್ತಿರುವವರು ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಲ್ಲಿ ಎಂದಾದರೂ ತುಟಿಬಿಚ್ಚಿದ್ದಾರಾ..? ಇದೆಲ್ಲದರ ಜೊತೆಗೆ ಸಲ್ಮಾನ್ ಖಾನ್ ಒಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಶಿಕ್ಷೆ ವಿಧಿಸಲಾಗುತ್ತಿದೆ ಅನ್ನೋ ಆ್ಯಂಗಲ್ ಅನ್ನೂ ಕೂಡ ಹುಡುಕಿಬಿಟ್ಟಿದ್ದಾರೆ… ಥೂ ಇವರ ಜನ್ಮಕ್ಕಿಷ್ಟು.. ಇಲ್ಲಿಗೂ ಜಾತಿ-ಧರ್ಮ ಎಳೆತಂದುಬಿಟ್ಟರು. ರಾಜಕಾರಣಿಗಳಿಗೆ ಶಿಕ್ಷೆ ವಿಧಿಸಿದಾಗಲೂ ಷಡ್ಯಂತ್ರ, ರಾಜಕೀಯ ಅಂತಲೇ ವಾದಿಸಲಾಗುತ್ತೆ. ಹಾಗಾದ್ರೆ ಈ ದೇಶದ ಕಾನೂನು ಬಡವರು, ದುರ್ಬಲರಿಗೆ ಮಾತ್ರ ಶಿಕ್ಷೆ ವಿಧಿಸಬೇಕಾ..? ಸಲ್ಮಾನ್ ಖಾನ್ ಗೆ ಇರುವ ಬದುಕುವ ಹಕ್ಕು ಕೃಷ್ಣ ಮೃಗಕ್ಕಿರಲಿಲ್ಲವಾ..? ಅವತ್ತು ಫುಟ್ ಪಾತ್ ನಲ್ಲಿ ಪ್ರಾಣ ಬಿಟ್ಟ ಬಡವನಿಗಿರಲಿಲ್ಲವಾ..? #SalmanConvicted #JailForSalman #SalmanIsGuilty

ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಪ್ರಗತಿಪರರ ಪೌರೋಹಿತ್ಯ ಯಾಕೆ..?

CM_PRAGATHI_02ರಾಜ್ಯ ವಿಧಾನಸಭಾ ಚುನಾವಣೆಗೆ ಮಹೂರ್ತ ಫಿಕ್ಸ್ ಆಗುತ್ತಿದ್ದಂತೆ ಈ ರಾಜ್ಯದ ಪ್ರಗತಿಪರರು, ಬುದ್ಧಿಜೀವಿಗಳು ಎನಿಸಿಕೊಂಡವರು ಈಗ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ರಾಜ್ಯದ ಮೂರೂ ರಾಜಕೀಯ ಪಕ್ಷಗಳು ಮೈತ್ರಿ ಬಗ್ಗೆ ಇನ್ನೂ ಚಕಾರವೆತ್ತದೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ಚಿತ್ತ ಹರಿಸಿವೆ. ಆದ್ರೆ ಪ್ರಗತಿಪರರು ಈಗಾಗಲೆ ಮೈತ್ರಿ ರಾಜಕಾರಣಕ್ಕೆ ಪೌರೋಹಿತ್ಯ ಆರಂಭಿಸಿದ್ದಾರೆ. ಬಿಜೆಪಿ ವಿರೋಧಿಗಳನ್ನೆಲ್ಲಾ ಒಟ್ಟುಗೂಡಿಸುವ ಕಾರ್ಯಕ್ಕೆ ಪ್ರಗತಿಪರರ ಗುಂಪು ಮುಂದಾಗಿದೆ. ರಾಜ್ಯದ ರಾಜಕೀಯ ಪಕ್ಷಗಳಿಗೇ ಇಲ್ಲದ ಉಸಾಬರಿಯನ್ನು ಈ ಪ್ರಗತಿಪರರು ದುಂಬಾಲು ಬಿದ್ದು ಮಾಡುತ್ತಿರುವುದೇಕೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪ್ರಗತಿಪರರ ನಿಯೋಗ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಮತ್ತು ಸಿಎಂ ಸಿದ್ದರಾಮಯ್ಯನವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಜೆಡಿಎಸ್ ಮತ್ತು ಕಾಂಗ್ರೆಸ್​ ಮೈತ್ರಿ ಮಾಡಿಕೊಳ್ಳುವಂತೆ ಪೌರೋಹಿತ್ಯ ನಡೆಸಿವೆ. ಕಾಂಗ್ರೆಸ್ ಮತ್ತು ಜೆಡಿಎಸ್​ ಎರಡೂ ಪಕ್ಷಗಳಿಗೂ ಮೈತ್ರಿ ಬಗ್ಗೆ ಯಾವುದೇ ಮನಸ್ಸಿಲ್ಲದಿದ್ದರೂ ಪ್ರಗತಿಪರರು/ಬುದ್ಧಿಜೀವಿಗಳು ಎಂದು ಹೇಳಿಕೊಳ್ಳುವವರ ಗುಂಪು ರಾಜಕೀಯ ಪಕ್ಷಗಳ ಮಧ್ಯೆ ಮೈತ್ರಿ ಕುದುರಿಸಲು ದಳ್ಳಾಳಿಗಳಂತೆ ಕೆಲಸ ಮಾಡುತ್ತಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಗೆ ಮಹೂರ್ತ ಫಿಕ್ಸ್ ಆಗುತ್ತಿದ್ದಂತೆ ಈ ರಾಜ್ಯದ ಪ್ರಗತಿಪರರು, ಬುದ್ಧಿಜೀವಿಗಳು ಎನಿಸಿಕೊಂಡವರು ಈಗ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ರಾಜ್ಯದ ಮೂರೂ ರಾಜಕೀಯ ಪಕ್ಷಗಳು ಮೈತ್ರಿ ಬಗ್ಗೆ ಇನ್ನೂ ಚಕಾರವೆತ್ತದೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ಚಿತ್ತ ಹರಿಸಿವೆ. ಆದ್ರೆ ಪ್ರಗತಿಪರರು ಈಗಾಗಲೆ ಮೈತ್ರಿ ರಾಜಕಾರಣಕ್ಕೆ ಪೌರೋಹಿತ್ಯ ಆರಂಭಿಸಿದ್ದಾರೆ. ಬಿಜೆಪಿ ವಿರೋಧಿಗಳನ್ನೆಲ್ಲಾ ಒಟ್ಟುಗೂಡಿಸುವ ಕಾರ್ಯಕ್ಕೆ ಪ್ರಗತಿಪರರ ಗುಂಪು ಮುಂದಾಗಿದೆ. ರಾಜ್ಯದ ರಾಜಕೀಯ ಪಕ್ಷಗಳಿಗೇ ಇಲ್ಲದ ಉಸಾಬರಿಯನ್ನು ಈ ಪ್ರಗತಿಪರರು ದುಂಬಾಲು ಬಿದ್ದು ಮಾಡುತ್ತಿರುವುದೇಕೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪ್ರಗತಿಪರರ ನಿಯೋಗ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಮತ್ತು ಸಿಎಂ ಸಿದ್ದರಾಮಯ್ಯನವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಜೆಡಿಎಸ್ ಮತ್ತು ಕಾಂಗ್ರೆಸ್​ ಮೈತ್ರಿ ಮಾಡಿಕೊಳ್ಳುವಂತೆ ಪೌರೋಹಿತ್ಯ ನಡೆಸಿವೆ. ಕಾಂಗ್ರೆಸ್ ಮತ್ತು ಜೆಡಿಎಸ್​ ಎರಡೂ ಪಕ್ಷಗಳಿಗೂ ಮೈತ್ರಿ ಬಗ್ಗೆ ಯಾವುದೇ ಮನಸ್ಸಿಲ್ಲದಿದ್ದರೂ ಪ್ರಗತಿಪರರು/ಬುದ್ಧಿಜೀವಿಗಳು ಎಂದು ಹೇಳಿಕೊಳ್ಳುವವರ ಗುಂಪು ರಾಜಕೀಯ ಪಕ್ಷಗಳ ಮಧ್ಯೆ ಮೈತ್ರಿ ಕುದುರಿಸಲು ದಳ್ಳಾಳಿಗಳಂತೆ ಕೆಲಸ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಮತ್ತು ಸಂವಿಧಾನ ರಕ್ಷಿಸಲು ಈ ಪ್ರಯತ್ನ ನಡೆಸಿರುವುದಾಗಿ ಪ್ರಗತಿಪರರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಎಚ್​ಡಿ ದೇವೇಗೌಡರ ಮನೆಯಲ್ಲಿ ನಡೆದ ಪೌರೋಹಿತ್ಯ ಸಭೆ ನಂತರ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡರು, ‘ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ದವಿದ್ದರೆ ಅವರೇ ಸೀಟು ಹಂಚಿಕೆಯನ್ನು ಘೋಷಣೆ ಮಾಡಲಿ’ ಎಂದು ವ್ಯಂಗ್ಯವಾಡಿದ್ದರು. ಇದನ್ನೇ ಆಸೆಗಣ್ಣಿನಿಂದ ನೋಡುತ್ತಿದ್ದ ಪ್ರಗತಿಪರರು ತಾವು ಬಂದ ಕೆಲಸ ಸಾಧಿಸಿಯೇಬಿಟ್ಟೆವು, ಕಾಂಗ್ರೆಸ್​ ಜೊತಿಗಿನ ಮೈತ್ರಿಗೆ ಗೌಡರು ಒಪ್ಪಿಯೇಬಿಟ್ಟರು ಎಂದು ಯುದ್ಧ ಗೆದ್ದ ಸಂತಸದಿಂದ ಅಲ್ಲಿಂದ ತೆರಳಿದರು. ಅಷ್ಟರಲ್ಲಾಗಲೇ ಕಾಂಗ್ರೆಸ್​ ಜೊತೆ ಮೈತ್ರಿಗೆ ದೊಡ್ಡ ಗೌಡರು ಸಿದ್ದ ಅನ್ನೋ ಸುದ್ದಿ ಸುದ್ದಿ ವಾಹಿನಿಗಳಲ್ಲಿ ರಾರಾಜಿಸುತ್ತಿತ್ತು. ತಕ್ಷಣ ಎಚ್ಚೆತ್ತ ದೊಡ್ಡಗೌಡರು ಪತ್ರಿಕಾಗೋಷ್ಠಿ ಕರೆದು ಮತ್ತೊಂದು ದಾಳ ಉರುಳಿಸಿಬಿಟ್ಟರು. ‘ಒಳ್ಳೆಯ ಸದುದ್ದೇಶದಿಂದ ಪ್ರಗತಿಪರರು ತಮ್ಮನ್ನು ಭೇಟಿಯಾಗಿದ್ದರು. ಮೈತ್ರಿ ಮಾಡಿಕೊಳ್ಳುವ ಉದ್ದೇಶ ಕಾಂಗ್ರೆಸ್​ಗೆ ಇದ್ದರೆ ಸೀಟು ಹಂಚಿಕೆಯನ್ನು ಬಹಿರಂಗವಾಗಿ ಘೋಷಿಸುವಂತೆ ಸಾಂಧರ್ಬಿಕವಾಗಿ ಹೇಳಿದ್ದೆ ಅಷ್ಟೇ. ವ್ಯಂಗ್ಯವಾಗಿ ಹೇಳಿದ್ದನ್ನೇ ಮೈತ್ರಿಗೆ ಸಿದ್ದ ಎಂದು ಬಿಂಬಿಸಲಾಗುತ್ತಿದೆ. ಈಗ ಮೈತ್ರಿ ಮಾಡಿಕೊಳ್ಳುವುದಕ್ಕೆ ಸಮಯ ಎಲ್ಲಿದೆ, ಮೈತ್ರಿಗೆ ನಾಯಕತ್ವ ವಹಿಸುವವರಾರು’ ಎಂದು ಹೇಳಿ ಕಾಂಗ್ರೆಸ್ ಜೊತೆಗಿನ ಮೈತ್ರಿ ಬಗ್ಗೆ ತಮಗೆ ಮನಸ್ಸಿಲ್ಲ ಎಂದುಬಿಟ್ಟರು. ಅಲ್ಲಿಗೆ ಯುದ್ಧ ಗೆದ್ದ ಸಂತಸದಲ್ಲಿದ್ದ ಪ್ರಗತಿಪರರ ಸಂಭ್ರಮವೂ ಮುಗಿದಿತ್ತು.

ರಾಜ್ಯದಲ್ಲಿ ಸಿದ್ದರಾಮಯ್ಯನವರನ್ನು ಮತ್ತೆ ಮುಖ್ಯಮಂತ್ರಿಯಾಗದಂತೆ ತಡೆಯಲು ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಮತ್ತು ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಹೋರಾಟಕ್ಕಿಳಿದಿದ್ದಾರೆ. ಈ ಮಧ್ಯೆ ಕಾಂಗ್ರೆಸ್​ ಜೊತೆ ಮೈತ್ರಿಗೆ ಬನ್ನಿ ಎಂದು ಆಹ್ವಾನಿಸಲು ಹೋದ ಪ್ರಗತಿಪರರನ್ನು ದೇವೇಗೌಡರು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಅನ್ನೋದು ಇಂಟರ್ನಲ್ ಮಾಹಿತಿ. ಕಾಂಗ್ರೆಸ್ ರೈತರು ಮತ್ತು ಅಲ್ಪಸಂಖ್ಯಾತರ ವಿಚಾರದಲ್ಲಿ ಹೇಗೆ ನಡೆದುಕೊಂಡಿದೆ ಅನ್ನೋದನ್ನ ಪ್ರಗತಿಪರರಿಗೆ ಮುಖಕ್ಕೆ ಹೊಡೆದಂತೆ ದೊಡ್ಡಗೌಡರು ಹೇಳಿ ಬಿಸಿ ಮುಟ್ಟಿಸಿದ್ದಾರೆ. ಆದರೂ ಬಿಜೆಪಿಯನ್ನು ಮಣಿಸಲು ತಾವು ಪ್ರಯತ್ನಿಸುವುದಾಗಿ ಹೇಳಿ ಮನೆಯವರೆಗೂ ಬಂದಿದ್ದವರನ್ನು ಸಾಗಹಾಕಿದ್ದಾರೆ..

ದೇವೇಗೌಡರ ಮನೆಯಲ್ಲಿ ನಡೆದ ಪೌರೋಹಿತ್ಯಕ್ಕೆ ಬೆಲೆ ಸಿಗಲಿಲ್ಲ ಅನ್ನೋದು ಗೊತ್ತಾಗುತ್ತಿದ್ದಂತೆ ಈ ಪ್ರಗತಿಪರರ ಗುಂಪು ಛಲಬಿಡದಂತೆ ತಮ್ಮ ಪ್ರಯತ್ನವನ್ನು ಮುಂದುವರಿಸಿ ಸಿಎಂ ಸಿದ್ದರಾಮಯ್ಯನವರನ್ನೂ ಭೇಟಿ ಮಾಡಿ ಜೆಡಿಎಸ್​ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಮನವೊಲಿಸುವ ಮಾತನ್ನಾಡಿದ್ದಾರೆ. ಈ ರಾಜ್ಯದಲ್ಲಿ ಪ್ರಗತಿಪರರು ಮತ್ತು ಬುದ್ಧಿಜೀವಿಗಳು ಕಾಂಗ್ರೆಸ್​ನ ಬಿ ಟೀಂ ನಂತೆಯೇ ಕೆಲಸ ಮಾಡುವುದರಿಂದ ಸಿಎಂ ಸಿದ್ದರಾಮಯ್ಯ ತಮ್ಮನ್ನು ಭೇಟಿ ಮಾಡಿದವರ ಜೊತೆ ಸಂತಸದಿಂದಲೇ ಮಾತನಾಡಿದ್ದಾರೆ. ಚುನಾವಣಾ ಪೂರ್ವವಾಗಿ ಜೆಡಿಎಸ್​ ಜೊತೆ ಮೈತ್ರಿ ಮಾಡಿಕೊಳ್ಳುವ ಅಗತ್ಯ ಕಾಂಗ್ರೆಸ್​ಗೆ ಇಲ್ಲ. ಕಾಂಗ್ರೆಸ್​ ಸ್ವಂತಬಲದಿಂದಲೇ ಅಧಿಕಾರ ಹಿಡಿಯಲಿದೆ. ಒಂದು ವೇಳೆ ಅತಂತ್ರದ ಪರಿಸ್ಥಿತಿ ಬಂದರೆ ನಿಮ್ಮ ಮನವಿಯನ್ನು ಪರಿಗಣಿಸಲಾಗುವುದು ಎಂದು ಹೇಳಿ ತಮ್ಮನ್ನು ಭೇಟಿ ಮಾಡಿದವರ ನಿರೀಕ್ಷೆ ಹುಸಿಯಾಗದಂತೆ ಮಾಡಿ ಕಳಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ‘ತಾನು ಬಿಜೆಪಿ ಪಕ್ಕ ನಿಂತು ಕೆಮ್ಮಿದರೆ ಸಾಕು ಕಾಂಗ್ರೆಸ್ ದೂಳಿಪಟವಾಗಿಬಿಡುತ್ತದೆ’ ಎಂದು ಎಚ್​ಡಿ ಕುಮಾರಸ್ವಾಮಿ ಹೇಳಿಕೆ ನೀಡುತ್ತಿದ್ದಂತೆ ಪ್ರಗತಿಪರರ ಪೌರೋಹಿತ್ಯ ಆರಂಭವಾಗಿದೆ. ಜೆಡಿಎಸ್ ಬಿಜೆಪಿಯತ್ತ ಸರಿಯುತ್ತಿರೋ ಸೂಚನೆ ಅರಿತು ಪ್ರಗತಿಪರರ ಗುಂಪು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ.

ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಮೋದಿ ವಿರೋಧಿ ಕಾರ್ಯತಂತ್ರವನ್ನೇ ಅನುಸರಿಸುತ್ತಿರುವ ಪ್ರಗತಿಪರರ ಗುಂಪು ಒಂದೇ ಒಂದು ದಿನವೂ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಮಾತನಾಡಿಯೇ ಇಲ್ಲ. ಮಾತನಾಡುವ ಸಂದರ್ಭಗಳು ಬಂದಾಗಲೂ ಈ ಗುಂಪು ಜಾಣ ಮೌನಕ್ಕೇ ಶರಣಾಗಿತ್ತು. ರಾಜ್ಯದಲ್ಲಿ ಸಾಲು ಸಾಲು ರೈತರು ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಾಗ ಯಾವ ಬುದ್ಧಿಜೀವಿ, ಪ್ರಗತಿಪರರೂ ಸರ್ಕಾರದ ವಿರುದ್ಧ ಮಾತನಾಡಲಿಲ್ಲ, ಸರ್ಕಾರವನ್ನು ಎಚ್ಚರಿಸಲೂ ಇಲ್ಲ. ಟಿಪ್ಪು ಜಯಂತಿ ವಿಚಾರವಾಗಿ ಆಕ್ರೋಶ ವ್ಯಕ್ತವಾದಾಗಲೂ ಈ ಸಮುದಾಯ ಸಿಎಂ ಸಿದ್ದರಾಮಯ್ಯನವರ ಬೆನ್ನಿಗೇ ನಿಂತಿತ್ತು. ಬೆಂಗಳೂರಿನಲ್ಲಿ ಆರೂವರೆ ಕಿಲೋಮೀಟರ್ ರಸ್ತೆಗೆ ಸ್ಟೀಲ್​ ಬ್ರಿಡ್ಜ್​ ನಿರ್ಮಿಸಲು ಸರ್ಕಾರ 1800 ಕೋಟಿ ಸುರಿಯಲು ಮುಂದಾದಾಗ ಬೆಂಗಳೂರಿಗೆ ಬೆಂಗಳೂರೇ ಬೀದಿಗೆ ಬಂದು ಸರ್ಕಾರದ ವಿರುದ್ಧ ನಿಂತಿತ್ತು. ಇಂತಹ ಸಂದರ್ಭದಲ್ಲಿಯೂ ಈ ಪ್ರಗತಿಪರರ ಗುಂಪು ಮಾತಾಡಲಿಲ್ಲ. ರೈತರ ಸಾವಿರಾರು ಎಕರೆ ಜಮೀನು ಕೊಳ್ಳೆ ಹೊಡೆದ ಆರೋಪ ಹೊತ್ತ ಅಶೋಕ್​ ಖೇಣಿಯನ್ನು ಸಿಎಂ ಸಿದ್ದರಾಮಯ್ಯನವರೇ ಅಪ್ಪಿಕೊಂಡು ಕಾಂಗ್ರೆಸ್​ಗೆ ಸೇರಿಸಿಕೊಂಡಾಗಲೂ ಇವರದ್ದು ಅದೇ ದಿವ್ಯ ಮೌನ. ಬಂಡವಾಳಶಾಹಿಗಳ ಬಗ್ಗೆ ಮಾತನಾಡುವ ಪ್ರಗತಿಪರರಿಗೆ ಅಶೋಕ್​ ಖೇಣಿ ಬಡವರ ಬಂಧುವಂತೆ ಕಾಣಿಸಿದರಾ..? ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆಯಾದಾಗ ಸಿಎಂ ಸಿದ್ದರಾಮಯ್ಯನವರ ಆಡಳಿತವನ್ನು ಪ್ರಶ್ನಿಸದೇ ತಮ್ಮ ಬಾಣವನ್ನು ಮೋದಿ ಕಡೆಗೆ ಹೂಡಿದ್ದು ಇದೇ ಪ್ರಗತಿಪರರು. ಗೌರಿ ಹಂತಕರನ್ನು ಆರು ತಿಂಗಳಾದರೂ ಬಂಧಿಸದ ಕಾಂಗ್ರೆಸ್​ ಸರ್ಕಾರದ ವಿರುದ್ಧ ಚಕಾರವನ್ನೂ ಎತ್ತುತ್ತಿಲ್ಲ. ರಾಜ್ಯಾದ್ಯಂತ ಕಾಂಗ್ರೆಸ್​ ಆಡಳಿತದ ಅವಧಿಯಲ್ಲಿ ರಾಜಕೀಯ ಹತ್ಯೆಗಳಾದಾಗ, ಲೋಕಾಯುಕ್ತರ ಕಚೇರಿಗೇ ನುಗ್ಗಿ ಲೋಕಾಯುಕ್ತರ ಹತ್ಯೆಗೆ ಯತ್ನಿಸಿದ ಘಟನೆ ನಡೆದಾಗ, ನಲಪಾಡ್ ಎಂಬ ಕಾಂಗ್ರೆಸ್​ನ ಪುಂಡ ಗೂಂಡಾಗಿರಿ ನಡೆಸಿದಾಗ, ಈ ಯಾವ ಸನ್ನಿವೇಶಗಳಲ್ಲೂ ಪ್ರಗತಿಪರ/ಬುದ್ಧಿಜೀವಿಗಳ ವಲಯ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಒಂದೇ ಒಂದು ಮಾತನ್ನೂ ಆಡಲಿಲ್ಲ. ಬಿಜೆಪಿ ಮತ್ತು ಮೋದಿ ವಿರುದ್ಧ ಕೆಂಡಕಾರುವವರು ಇಂತಹ ಯಾವುದಾದರೂ ಒಂದು ಸನ್ನಿವೇಶದಲ್ಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪ್ರಶ್ನಿಸಬಹುದಿತ್ತು ಅಲ್ಲವಾ..? ಇಂತವರು ಈಗ ಕಾಂಗ್ರೆಸ್ ಪರ ಬ್ಯಾಟಿಂಗ್​ಗೆ ಇಳಿದಿದ್ದಾರೆ. ಈ ಗುಂಪು ತಮ್ಮನ್ನು ತಾವು ಪ್ರಗತಿಪರರು, ಬುದ್ಧಿಜೀವಿಗಳು ಎಂದು ಕರೆದುಕೊಳ್ಳುವುದನ್ನು ಬಿಟ್ಟು ಕಾಂಗ್ರೆಸ್​ ವಕ್ತಾರರು, ಕಾರ್ಯಕರ್ತರು, ಅವಕಾಶವಾದಿಗಳು ಎಂದು ಕರೆದುಕೊಂಡರೆ ಅರ್ಥಪೂರ್ಣವಾಗಿರುತ್ತದೆ. ಆ ಮೂಲಕವಾದರೂ ತಮ್ಮ ಮುಖವಾಡವನ್ನು ಕಳಚಿಕೊಂಡು ಅಸಲೀ ಮುಖವನ್ನು ಪ್ರದರ್ಶಿಸಿದಂತಾಗುತ್ತದೆ. ಇವರಿಗೂ ಮೋದಿ ಭಕ್ತರಿಗೂ ಯಾವ ವ್ಯತ್ಯಾಸವಿದೆ ಹೇಳಿ..

ಬಿಜೆಪಿ ಅಧಿಕಾರದಲ್ಲಿದ್ದರೆ ಸಂವಿಧಾನಕ್ಕೆ ದಕ್ಕೆಯಾಗುತ್ತದೆ ಅನ್ನೋದು ಈ ಅವಕಾಶವಾದಿಗಳ ವಾದ. ಕೇಂದ್ರದಲ್ಲಿ ಮತ್ತು 22 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ಸಂವಿಧಾನಕ್ಕೆ ಯಾವ ಅಪಾಯವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಇದ್ದರೆ ಮಾತ್ರ ಸಂವಿಧಾನ ರಕ್ಷಣೆಯಾಗುತ್ತಾ..? ಇದೇ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯಿಂದಲೇ ಅಲ್ಲವಾ ಮೋದಿ ಪ್ರಧಾನಿಯಾಗಿರೋದು, ಬಿಜೆಪಿ 22 ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವುದು. ರಾಜಕೀಯ ಪಕ್ಷವಾಗಿ ಬಿಜೆಪಿಯನ್ನು ರಾಜಕೀಯವಾಗಿ ಎದುರಿಸುವುದನ್ನು ಬಿಟ್ಟು ಕಾಂಗ್ರೆಸ್ ಈ ಪ್ರಗತಿಪರರನ್ನು ಅಸ್ತ್ರದಂತೆ ಬಚ್ಚಿಟ್ಟುಕೊಂಡು ಚುನಾವಣೆ ಸಂದರ್ಭದಲ್ಲಿ ಹೊರಬಿಡುತ್ತದೆಯಾ..? ಸಂವಿಧಾನ ರಕ್ಷಣೆ ಮಾಡೋದಕ್ಕೆ ಪ್ರಗತಿಪರರೇನು ಗುತ್ತಿಗೆ ಪಡೆದುಕೊಂಡಿದ್ದಾರಾ…? ಈ ಹಿಂದೆ ಇದೇ ರೀತಿ ಅವಾರ್ಡ್​ ವಾಪ್ಸಿ ಅಭಿಯಾನ ಮಾಡಿ ನಗೆಪಾಟಲಿಗೀಡಾಗಿದ್ದ ಈ ಬುದ್ಧಿಜೀವಿಗಳ ವಲಯ ಈಗ ಸಂವಿಧಾನದ ರಕ್ಷಣೆಯ ಸೋಗಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕವನ್ನು ಜಯಿಸಿದರೆ ಮೋದಿ 2019ರಲ್ಲಿ ಮತ್ತೆ ಪ್ರಧಾನಿಯಾಗೋದಕ್ಕೆ ಹಾದಿ ಸುಗಮವಾಗುತ್ತದೆ. ಇದೇ ಕಾರಣದಿಂದಲೇ ಮತ್ತೆ ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಜಾತ್ಯಾತೀತ ಶಕ್ತಿಯ ಹೆಸರಿನಲ್ಲಿ ಎಲ್ಲ ಪ್ರಗತಿಪರರು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಹೊರಗುತ್ತಿಗೆ ಪಡೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಮೋದಿ ವಿರುದ್ಧವಾಗಿ ಪರ್ಯಾಯ ಶಕ್ತಿ ರೂಪಿಸಲು ಪ್ರಾದೇಶಿಕ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸುತ್ತಿವೆ. ಅದು ರಾಜಕೀಯ ಪಕ್ಷಗಳು ತಮ್ಮ ಅಸ್ಥಿತ್ವ ಸೃಷ್ಟಿಸಿಕೊಳ್ಳಲು ಮಾಡಲೇಬೇಕಾದ ಅನಿವಾರ್ಯ ಹೋರಾಟ. ಆದ್ರೆ ಈ ರಾಜ್ಯದ ಪ್ರಗತಿಪರರೇಕೆ ರಾಜಕೀಯ ಪಕ್ಷಗಳಂತೆ ವರ್ತಿಸುತ್ತಿವೆ. ಮೈತ್ರಿ ವಿಚಾರ ನಿರ್ಧರಿಸಬೇಕಾದವರು ರಾಜಕೀಯ ಪಕ್ಷಗಳು. ಅವರೇ ಸುಮ್ಮನಿರುವಾಗ ಇಲ್ಲದ ಉಸಾಬರಿ ಇವರಿಗೇಕೆ. ಈ ಪ್ರಗತಿಪರ, ಬುದ್ಧಿಜೀವಿಗಳ ಸಮುದಾಯ ಕಾಂಗ್ರೆಸ್​ ಪರ ಬ್ಯಾಟಿಂಗ್​ಗೆ ಇಳಿದಿರುವುದು ಯಾಕೆ..? ಒಂದು ರಾಜಕೀಯ ಪಕ್ಷವಾಗಿ ಬಿಜೆಪಿಯನ್ನು ವಿರೋಧಿಸಲು ಪ್ರಗತಿಪರರಿಗೆ ತಮ್ಮದೇ ಆದ ಕಾರಣಗಳಿರಬಹುದು. ಆದ್ರೆ ಕಾಂಗ್ರೆಸ್​ ಅನ್ನು ಮೋಹಿಸಲು ಇರುವ ಕಾರಣಗಳೇನು. ಬಿಜೆಪಿಯನ್ನು ವಿರೋಧಿಸಿ ಕಾಂಗ್ರೆಸ್​ ಅನ್ನು ಅಪ್ಪಿಕೊಳ್ಳುವುದು ಎಷ್ಟು ಸಮಂಜಸ.? ಕಾಂಗ್ರೆಸ್​ ಅಧಿಕಾರದಲ್ಲಿರುವಾಗ ಇದೇ ಬುದ್ಧಿಜೀವಿಗಳ ವಲಯ ಆಸ್ಥಾನ ಕಲಾವಿದರಂತೆ ಕಾಣಿಸಿಕೊಂಡು ಅನುಕೂಲಗಳನ್ನು ಆಸ್ವಾದಿಸಿಕೊಳ್ಳೋದು ಬಹಿರಂಗ ರಹಸ್ವವೇನಲ್ಲ. ಇಂತವರುಗಳನ್ನು ಮುಂದಿಟ್ಟುಕೊಂಡೇ ಕಾಂಗ್ರೆಸ್ ತಾನು ಜಾತ್ಯಾತೀತವಾದಿ ಅನ್ನೋ ಪೋಸ್​ ಕೊಡುತ್ತಿದೆ. ಈ ದೇಶದಲ್ಲಿ ಧರ್ಮದ ಹೆಸರಿನಲ್ಲಿ ಬಿಜೆಪಿ ರಾಜಕೀಯ ನಡೆಸಿದರೆ, ಜಾತಿಯ ಹೆಸರಿನಲ್ಲಿ ಕಾಂಗ್ರೆಸ್​ ರಾಜಕೀಯ ನಡೆಸುತ್ತದೆ. ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಷ್ಟೇ. ಜಾತ್ಯಾತೀತ ಎಂದು ಕರೆದುಕೊಳ್ಳುವ ಕಾಂಗ್ರೆಸ್​ಗೆ ಜಾತಿ ಬಿಟ್ಟರೆ ಬೇರೆ ರಾಜಕೀಯ ಪಟ್ಟುಗಳೇ ಇಲ್ಲ. ಇಂತಹ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಂದ ಅಂತರ ಕಾಪಾಡಿಕೊಂಡು ಜನರ ಪರವಾಗಿ ಕೆಲಸ ಮಾಡಬೇಕಾದ ಈ ಸ್ವಯಂಘೋಷಿತ ಪ್ರಗತಿಪರರು, ಬುದ್ಧಿಜೀವಿಗಳು ಕಾಂಗ್ರೆಸ್​ನ ಬಾಲಬುಡುಕರಂತೆ ವರ್ತಿಸುತ್ತಿರುವುದು ಮಾತ್ರ ನಾಚಿಕೆಗೇಡು. ಅಧಿಕೃತವಾಗಿ ಈ ಗುಂಪು ತಮ್ಮನ್ನು ತಾವು ಕಾಂಗ್ರೆಸ್ಸಿಗರು ಎಂದು ಒಪ್ಪಿಕೊಂಡು ಕಾಂಗ್ರೆಸ್​ನ ಪ್ರಗತಿಪರ/ಬುದ್ಧಿಜೀವಿಗಳ ಘಟಕ ಎಂದು ಘೋಷಿಸಿಕೊಳ್ಳುವುದು ಒಳಿತು..

%d bloggers like this: